ದಶಾವತಾರ – ವಿಷ್ಣುವಿನ ಹತ್ತು ಅವತಾರಗಳ ಕಥೆ

ದಶಾವತಾರಗಳು
ದಶಾವತಾರಗಳು

ದಶಾವತಾರಗಳು- ಅವತಾರ ಎಂದರೆ ಇಳಿದುಬರುವುದು ಎಂದರ್ಥ. ಇದು ಭಗವಂತ ಜೀವಕೋಟಿಯ ಉದ್ಧಾರಕ್ಕೆ ಕೈಕೊಳ್ಳುವ ಒಂದು ಕ್ರಿಯೆ. ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಸುಜನರನ್ನು ಎತ್ತಿಹಿಡಿದು ದುರ್ಜನರನ್ನು ದಮನಗೊಳಿಸುವುದರ ಮೂಲಕ ಧರ್ಮಸಂಸ್ಥಾಪನೆಗೆ ಪರಮಾತ್ಮ ಯಾವುದೋ ಒಂದು ರೂಪದಲ್ಲಿ ಧರೆಗೆ ಇಳಿದುಬರುತ್ತಾನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರ ಎನ್ನುವುದರ ಉದ್ದೇಶವನ್ನು ಸೂಚಿಸುತ್ತದೆ. ಈ ಅವತಾರಗಳ ಸಂಖ್ಯೆಯ ವಿಚಾರದಲ್ಲಿ ಒಮ್ಮತವಿಲ್ಲ. ಅಲ್ಲದೆ ಅವತಾರಗಳು ವಿಷ್ಣುವಿಗೇ ಮೀಸಲಾದವಲ್ಲ. ಶಿವನೂ ಅವತಾರ ಮಾಡಿದ್ದಾನೆ ಎಂಬುದನ್ನೂ ಮರೆಯುವಂತಿಲ್ಲ. ಮಹೇಶ್ವರ ಇಪ್ಪತ್ತೆಂಟು ಅವತಾರಗಳನ್ನು ಎತ್ತಿದ್ದಾನೆ ಎಂದು ವಾಯುಪುರಾಣ ಹೇಳುತ್ತದೆ.

ಹಿಂದೂ ಸಂಪ್ರದಾಯ ವಿಷ್ಣುವಿನ ಅವತಾರಗಳ ಸಂಖ್ಯೆ ಹತ್ತು ಎಂದು ನಂಬಿದೆ. ಹಿಂದೆ ಸಹಸ್ರಾರು ಆಗಿದ್ದವೆಂದೂ ಭವಿಷ್ಯದಲ್ಲಿ ಅನೇಕ ಸಹಸ್ರ ಅವತಾರಗಳು ಆಗುತ್ತವೆ ಎಂದೂ ಹರಿವಂಶದಲ್ಲಿ ಹೇಳಿದೆ. ಪೂರ್ವಮೀಮಾಂಸಾಚಾರ್ಯರಾದ ಕುಮಾರಿಲಭಟ್ಟರು ದಶಾವತಾರಗಳಲ್ಲೊಂದಾದ ಬುದ್ಧಾವತಾರವನ್ನು ವಿಷ್ಣುವಿನದೆಂಬುದನ್ನು ಒಪ್ಪುವುದಿಲ್ಲ. ವಿಷ್ಣುವಿನ ಪ್ರಸಿದ್ಧ ದಶಾವತಾರಗಳೆಂದರೆ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ.

1. ಮತ್ಸ್ಯಾವತಾರ

ಮತ್ಸ್ಯಾವತಾರ
ಮತ್ಸ್ಯಾವತಾರ

ಮತ್ಸ್ಯಾವತಾರ ವಿಷ್ಣುವಿನ ಹತ್ತು ಅವತಾರಗಳಲ್ಲಿ ಮೊದಲನೆಯದು. ಶತಪಥ ಬ್ರಾಹ್ಮಣದಲ್ಲಿ ಇದರ ಸೂಚನೆ ಸಿಗುತ್ತದೆ. ಪುರಾಣಗಳಲ್ಲಿ ಈ ಅವತಾರ ಕುರಿತಂತೆ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಪ್ರಳಯದಲ್ಲಿ ಸಿಕ್ಕಿಬಿದ್ದ ವೈವಸ್ವತ ಮನುವನ್ನು ಉದ್ಧರಿಸುವುದೇ ಈ ಅವತಾರದ ಉದ್ದೇಶ. ಪ್ರಪಂಚವೆಲ್ಲ ನೀರು ತುಂಬಿ ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿರಲು ಮನು ವೇದಗಳನ್ನೂ ಪ್ರಾಣಿಗಳನ್ನೂ ಸಸ್ಯಗಳ ಬೀಜಗಳನ್ನೂ ಶೇಖರಿಸಿ ಅವನ್ನು ಕಾಪಾಡಬೇಕೆಂಬ ಉದ್ದೇಶದಿಂದ ಹಡಗಿನಲ್ಲಿ ರಕ್ಷಿಸಿಟ್ಟ. ವಿಷ್ಣು ಮೀನಿನ ರೂಪದಲ್ಲಿ ಬಂದು ಹಡಗನ್ನು ತನ್ನ ಕೋರೆಹಲ್ಲಿಗೆ ಕಟ್ಟುವಂತೆ ಮನುವಿಗೆ ಹೇಳಲು ಮನು ಹಾಗೇಯೇ ಮಾಡಿದ ಪ್ರವಾಹಕ್ಕೆ ನುಚ್ಚು ನೂರಾಗುವಂತಿದ್ದ ಹಡಗಿಗೆ ರಕ್ಷಣೆ ಸಿಕ್ಕಿತು. ಆದರೆ ಹಯಗ್ರೀವನೆಂಬ ರಾಕ್ಷಸ ಬಂದು ಮನುವಿಗೆ ತಿಳಿಯದಂತೆ ವೇದಗಳನ್ನು ಅಪಹರಿಸಿ ಸಮುದ್ರತಳಕ್ಕೆ ಕೊಂಡೊಯ್ದ. ಮನು ವಿಷ್ಣುವಿಗೆ ಮೊರೆಯಿಡಲು ಮೀನಿನ ರೂಪದಲ್ಲಿದ್ದ ವಿಷ್ಣು ಹಯಗ್ರೀವನನ್ನು ಕೊಂದು ವೇದಗಳನ್ನು ತಂದು ಮನುವಿಗೆ ನೀಡಿದ.

2. ಕೂರ್ಮಾವತಾರ

ಕೂರ್ಮಾವತಾರ
ಕೂರ್ಮಾವತಾರ

ಕೂರ್ಮಾವತಾರ ಮಹಾವಿಷ್ಣುವಿನ ದಶಾವತಾರಗಳಲ್ಲಿ ಎರಡನೆಯದು. ಅಷ್ಟದಶಾಪುರಾಣಗಳಲ್ಲಿ 15ನೆಯದಾದ ಕೂರ್ಮಪುರಾಣ ಈ ಅವತಾರವನ್ನು ವರ್ಣಿಸುತ್ತದೆ. ಈಗ ನಡೆಯುತ್ತಿರುವ ಶ್ವೇತವರಾಹ ಕಲ್ಪದ ಚಾಕ್ಷುಷ ಮನ್ವಂತರದಲ್ಲಿ ಇದು ನಡೆಯಿತು.

ದೇವಾಸುರರಲ್ಲಿ ದೇವತೆಗಳ ಬಲ ದಿನೇದಿನೇ ಕ್ಷಯಿಸುತ್ತ ಬಂದು ಅಸುರರ ಪ್ರಾಬಲ್ಯ ಹೆಚ್ಚಿದುದರಿಂದ ಮಧಾಂಧರಾದ ರಾಕ್ಷಸರು ದೇವತೆಗಳಿಗೆ ಹೆಚ್ಚಿನ ಕಿರುಕುಳ ಕೊಟ್ಟರು. ಇದನ್ನು ಸಹಿಸಲಾರದ ಇಂದ್ರಾದಿ ದೇವತೆಗಳು ಬ್ರಹ್ಮಪುರಸ್ಸರರಾಗಿ ವಿಷ್ಣುವಿನ ಮೊರೆಹೊಕ್ಕರು. ಅವರ ಮೊರೆಯನ್ನು ಕೇಳಿ ಕನಿಕರಗೊಂಡ ವಿಷ್ಣು ಅವರಿಗೆ ಸಮುದ್ರಮಥನ ಮಾಡಿ ಅಮೃತವನ್ನು ಪಡೆದು ಅಜರರು ಅಮರರೂ ಆಗುವ ಉಪಾಯವನ್ನು ಉಪದೇಶಿಸಿದ.

ವಾಸುಕಿಯನ್ನು ಹಗ್ಗವನ್ನಾಗಿಯೂ ಮಂದರ ಪರ್ವತವನ್ನು ಕಡೆಗೋಲನ್ನಾಗಿಯೂ ಮಾಡಿಕೊಂಡು ಕ್ಷೀರಸಮುದ್ರವನ್ನು ಕಡೆದರೆ ಅಮೃತ ದೊರೆಯುವುದು, ಅದನ್ನು ಪಾನಮಾಡಿದರೆ ತಾವೆಲ್ಲರೂ ಅಮರರಾಗಿ ಸುಖಸಂತೋಷಗಳಿಂದ ಅನಂತಕಾಲದವರೆಗೂ ಇರಬಹುದು ಎಂದು ದೇವತೆಗಳು ರಾಕ್ಷಸರ ಮನಸ್ಸನ್ನು ಉಪಾಯದಿಂದ ಒಲಿಸಿದರು.

ಅನಂತರ ದೇವಾಸುರರೆಲ್ಲರೂ ಕಲೆತು ಕ್ಷೀರಸಮುದ್ರವನ್ನು ಮಥನಮಾಡಲು ಉಪಕ್ರಮಿಸಿದರು. ಆದರೆ ಕಡೆಗೋಲಾಗಿದ್ದ ಆ ಮಹಾಪರ್ವತ ಸಮುದ್ರತಳಕ್ಕಿಳಿದುಬಿಟ್ಟಿತು. ದಿಕ್ಕುತೋಚದ ದೇವತೆಗಳು ಮತ್ತೆ ಮಹಾವಿಷ್ಣುವಿಗೆ ಶರಣುಹೋಗಲು ಆತ ತನ್ನೊಂದು ಅಂಶದಿಂದ ಕೂರ್ಮರೂಪವನ್ನು ತಾಳಿ ತನ್ನ ಬೆನ್ನಿನ ಮೇಲೆ ಪರ್ವತವನ್ನು ಎತ್ತಿ ನಿಲ್ಲಿಸಿಕೊಂಡು ದೇವಾಸುರರು ಸಮುದ್ರಮಥನ ಮಾಡಲು ಅವಕಾಶ ಕಲ್ಪಿಸಿದ.

ಕೂರ್ಮಾವತಾರದಲ್ಲಿ ಮಹಾವಿಷ್ಣು ಇಂದ್ರದ್ಯುಮ್ನನ ಪ್ರಸಂಗದ ಮೂಲಕ ಋಷಿಗಳಿಗೆ ಚತುರ್ವಿಧ ಪುರುಷಾರ್ಥಗಳ ಮಹಾತ್ವವನ್ನು ವರ್ಣಿಸಿ ಉಪದೇಶಿಸಿದ್ದಾನೆ.

3. ವರಾಹ ಅವತಾರ

ವರಾಹ ಅವತಾರ
ವರಾಹ ಅವತಾರ

ವರಾಹ ವಿಷ್ಣುವಿನ ದಶಾವತಾರಗಳಲ್ಲಿ ಮೂರನೆಯದು. ವಿಷ್ಣುವಿನ ದ್ವಾರಪಾಲಕರಾದ ಜಯವಿಜಯರು ದೇವರ್ಷಿಗಳ ಶಾಪದಿಂದ ಮೂರು ಯುಗಗಳಲ್ಲಿ ರಾಕ್ಷಸರಾಗಿ ಜನ್ಮವೆತ್ತುತ್ತಾರೆ. ಕೃತಯುಗದಲ್ಲಿ ಹಿರಣ್ಯಾಕ್ಷ ಹುಟ್ಟಿದ. ಇವನನ್ನು ಸಂಹರಿಸುವುದೇ ವರಾಹಾವತಾರದ ಉದ್ದೇಶ. ಹಿರಣ್ಯಾಕ್ಷ ಭೂಮಿಯನ್ನು ಚಾಪೆಯಂತೆ ಸುತ್ತಿ ಸಮುದ್ರದಡಿಯಲ್ಲಿಯ ತನ್ನ ನಿವಾಸಕ್ಕೆ ತೆಗೆದುಕೊಂಡು ಹೋಗಿ ಬಚ್ಚಿಟ್ಟನಂತೆ. ಆಗ ವಿಷ್ಣು ಹಂದಿ ರೂಪ ತಾಳಿ ಅವನೊಡನೆ ಯುದ್ಧಮಾಡಿ ತನ್ನ ಕೋರೆಗಳಿಂದ ಭೂಮಿಯನ್ನು ಮೇಲೆ ತಂದು ಯಥಾಸ್ಥಾನದಲ್ಲಿ ಅದನ್ನು ಪ್ರತಿಷ್ಠಾಪಿಸಿದ.

4. ನರಸಿಂಹಾವತಾರ

ನರಸಿಂಹಾವತಾರ
ನರಸಿಂಹಾವತಾರ

ನರಸಿಂಹಾವತಾರ ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೆಯದು. ಸಿಂಹದಂತೆ ಮುಖವಿದ್ದು ಮಿಕ್ಕ ಅಂಗಗಳೆಲ್ಲ ಮನುಷ್ಯನ ಹಾಗೆ ಇದ್ದುದರಿಂದ ಈ ಹೆಸರು ಬಂದಿತು. ವಿಷ್ಣುವಿನ ದ್ವಾರಪಾಲಕರಾದ ಜಯವಿಜಯರು ಶಾಪಗ್ರಸ್ತರಾಗಿ ದಿತಿಯಲ್ಲಿ ಹಿರಣ್ಯಾಕ್ಷ ಹಿರಣ್ಯಕಶಿಪುವಾಗಿ ಹುಟ್ಟಿದರು. ಇವರು ದೇವತೆಗಳ ಪರಮಶತ್ರುಗಳಾಗಿ ಲೋಕಕಂಟಕರಾಗಿದ್ದರು. ಭೂದೇವಿಯನ್ನು ಹಿಂಸಿಸಲು ಹೋದ ಹಿರಣ್ಯಾಕ್ಷನನ್ನು ಹರಿ ವರಾಹಾವತಾರಿಯಾಗಿ ಸಂಹರಿಸಿದ. ತಮ್ಮನ ಮರಣದಿಂದ ಹರಿದ್ವೇಷಿಯಾದ ಹಿರಣ್ಯಕಶಿಪು ದೇವತೆಗಳನ್ನೂ ಬ್ರಾಹ್ಮಣರನ್ನೂ ಹಿಂಸಿಸತೊಡಗಿದ. ಈತ ಬ್ರಹ್ಮನನ್ನು ಕುರಿತು ಅಖಂಡ ತಪಸ್ಸನ್ನಾಚರಿಸಿ ಸೃಷ್ಟಿಯೊಳಗಿರುವ ಮನುಷ್ಯ, ಮೃಗ, ದೇವ, ದಾನವರಾರಿಂದಲೂ ಭೂಮಿಯ ಮೇಲಾಗಲಿ ಅಂತರಿಕ್ಷದಲ್ಲಾಗಲಿ ಯಾರಿಂದಲೂ ಯಾವ ಆಯುಧದಿಂದಲೂ ತನಗೆ ಸಾವು ಬಾರದೆಂದು ವರವನ್ನು ಪಡೆದ.

ವರ ಪಡೆದ ಈತ ಮೂರು ಲೋಕಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡ. ಇಂದ್ರನನ್ನು ಸೋಲಿಸಿ ಸ್ವರ್ಗವನ್ನೇ ರಾಜಧಾನಿಯನ್ನಾಗಿಸಿಕೊಂಡ. ದೇವತೆಗಳೆಲ್ಲ ತನ್ನನ್ನು ಆರಾಧಿಸುವಂತೆ ಆಜ್ಞಾಪಿಸಿದ. ದಿಕ್ಕುಗೆಟ್ಟ ಇಂದ್ರಾದಿ ದೇವತೆಗಳು ಮಹಾವಿಷ್ಣುವಿನ ಮೊರೆಹೊಕ್ಕರು. ವಿಷ್ಣು ಅಭಯ ಪ್ರಧಾನ ಮಾಡಿ ಅವರೆಲ್ಲರನ್ನೂ ಕಳುಹಿಸಿದ.

ಇತ್ತ ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದ ಬಾಲ್ಯದಿಂದಲೇ ಹರಿಭಕ್ತನಾಗಿದ್ದ. ಗುರುವಿಗೂ ತಂದೆಗೂ ಹರಿಭಕ್ತಿಯನ್ನು ಬೋಧಿಸಹೊರಟ ಮಗನನ್ನು ಕಂಡು ಕುಪಿತನಾದ ತಂದೆ ಆತನನ್ನು ಕೊಲ್ಲಲು ಶೂಲಗಳಿಂದ ತಿವಿಸಿದ. ಆನೆಗಳಿಂದ ತುಳಿಸಿದ. ಹಾವುಗಳಿಂದ ಕಡಿಸಿದ. ಪರ್ವತದಿಂದ ನೂಕಿಸಿದ. ವಿಷ ಕುಡಿಸಿದ. ಸಮುದ್ರದಲ್ಲಿ ಹಾಕಿಸಿದ. ಬೆಂಕಿಯಲ್ಲಿ ಬೀಳಿಸಿದ. ಗುಂಡಿಯಲ್ಲಿ ಹುಗಿಸಿದ. ಹರಿಭಕ್ತನಾದ ಪ್ರಹ್ಲಾದನನ್ನು ಕೊಲ್ಲಿಸಹೋದ ಮಾರ್ಗಗಳೊಂದೂ ಸಫಲವಾಗಲಿಲ್ಲ.

ಸರ್ವಾಂತರ್ಯಾಮಿಯಾದ ಹರಿಯನ್ನು ಮಗ ತನ್ನೆದುರಿಗೇ ಸ್ತುತಿಸಿದಾಗ ಸಿಟ್ಟಿಗೆದ್ದ ಹಿರಣ್ಯಕಶಿಪು ಹರಿಯನ್ನು ತನ್ನೆದುರಿನಲ್ಲಿರುವ ಕಂಬದಲ್ಲಿ ತೋರಿಸುವಂತೆ ಹೇಳಿ ಕತ್ತಿಯನ್ನು ಹಿರಿದು ಮಗನ ತಲೆಯನ್ನು ಕಡಿಯಲು ಹೋದಾಗ ಭಯಂಕರ ಶಬ್ದವಾಗಿ ಕಂಬ ಇಬ್ಭಾಗವಾಗಿ ನರಸಿಂಹ ಪ್ರತ್ಯಕ್ಷನಾದ. ಕಾದಲು ಹೋದ ಹಿರಣ್ಯಕಶಿಪುವನ್ನು ಹಿಡಿದು ಹೊಸ್ತಿಲ ಮೇಲೆ ಕುಳಿತು ತೊಡೆಯ ಮೇಲೇರಿಸಿಕೊಂಡು ಹರಿತವಾದ ಉಗುರುಗಳಿಂದ ಹೊಟ್ಟೆಯನ್ನು ಬಗೆದು ಅವನ ಕರುಳನ್ನು ಕುತ್ತಿಗೆಗೆ ಮಾಲೆಯಾಗಿ ಹಾಕಿಕೊಂಡ. ಇದರಿಂದ ಸಂತುಷ್ಟರಾದ ದೇವತೆಗಳು ನರಹರಿಯನ್ನು ಸ್ತುತಿಸಿದರು. ತನ್ನನ್ನು ಪ್ರಾರ್ಥಿಸಿದ ಪ್ರಹ್ಲಾದನನ್ನು ಹರಸಿ ಹರಿ ಅಂತರ್ಧಾನನಾದ.

ಲಕ್ಷ್ಮೀನರಸಿಂಹ, ಯೋಗಾನರಸಿಂಹ, ಭೋಗಾನರಸಿಂಹ ಎಂಬ ಹೆಸರಿನಿಂದ ನರಹರಿಯನ್ನು ಇಂದಿಗೂ ಜನ ಪೂಜಿಸುತ್ತಾರೆ.

5. ವಾಮನವತಾರ

ವಾಮನವತಾರ
ವಾಮನವತಾರ

ವಾಮನ ವಿಷ್ಣುವಿನ ದಶಾವತಾರಗಳಲ್ಲಿ ಐದನೆಯದು. ಇದು ತ್ರೇತಾಯುಗದ ಅವತಾರ ಎನ್ನಲಾಗಿದೆ. ಬಲಿ ಎಂಬ ದೈತ್ಯ ಚಕ್ರವರ್ತಿ ತನ್ನ ಶೌರ್ಯ, ಪರಾಕ್ರಮಗಳಿಂದ ಮೂರು ಲೋಕಗಳನ್ನೂ ಗೆದ್ದು ದೇವತೆಗಳಿಗೆ ಎಲ್ಲಿಯೂ ಸ್ಥಳವಿಲ್ಲದಂತೆ ಮಾಡಿದ. ಆಗ ವಿಷ್ಣು ಅದಿತಿ ಮತ್ತು ಕಶ್ಯಪರ ಮಗನಾಗಿ ಹುಟ್ಟಿ ವಾಮನನೆಂಬ ಹೆಸರಿನಿಂದ ಬೆಳೆದು ಬಲಿಯ ಬಳಿಗೆ ಬಂದ. ತನ್ನ ಬಳಿಗೆ ಬಂದ ಬಾಲಬ್ರಹ್ಮಚಾರಿ ವಾಮನನನ್ನು ಕಂಡು ಬಲಿ ಆತನಿಗೆ ಏನು ಬೇಕೆಂದು ಕೇಳಿದ. ಆ ಬಾಲಕ ತನಗೆ ಮೂರು ಹೆಜ್ಜೆ ಭೂಮಿ ದಾನವಾಗಿ ಕೊಟ್ಟರೆ ಸಾಕೆಂದ. ಅದಕ್ಕೆ ಬಲಿ ಒಪ್ಪಿದ. ವಾಮನ ತನ್ನ ಒಂದು ಹೆಜ್ಜೆಯಿಂದ ಭೂಮಿಯನ್ನೂ ಎರಡನೆಯ ಹೆಜ್ಜೆಯಿಂದ ದಿಗಂತವನ್ನೂ ಅಳೆದು ಮೂರನೆಯ ಹೆಜ್ಜೆ ಇಡಲು ಸ್ಥಳ ಕಾಣದೆ ಮೂರನೆಯ ಹೆಜ್ಜೆ ಎಲ್ಲಿ ಇಡಲಿ ಎಂದು ಬಲಿಯನ್ನು ಕೇಳಿದ. ವಾಮನನ ಮಹಾಶಕ್ತಿಯನ್ನು ಅರಿತ ಬಲಿ ಮೂರನೆಯ ಹೆಜ್ಜೆಯನ್ನು ತನ್ನ ತಲೆಯ ಮೇಲೆ ಇಡಬೇಕೆಂದು ಕೇಳಿಕೊಂಡ. ಆಗ ವಿಷ್ಣುರೂಪಿ ವಾಮನ ಬಲಿಯನ್ನು ಪಾತಾಳಕ್ಕೆ ತುಳಿದು ಆತ ಅಲ್ಲಿಯೇ ಇರುವಂತೆ ಮಾಡಿದ. ಇದರ ನೆನಪಿಗಾಗಿ ಬಲಿಪಾಡ್ಯಮಿ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ.

6. ಪರಶುರಾಮ ಅವತಾರ

ಪರಶುರಾಮ ಅವತಾರ
ಪರಶುರಾಮ ಅವತಾರ

ಪರಶುರಾಮ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಹತ್ತೊಂಬತ್ತನೆಯ ತ್ರೇತಾಯುಗದಲ್ಲಿ ಭೃಗುವಂಶದ ಜಮದಗ್ನಿ ರೇಣುಕೆಯರ ಮಗ ವಿಷ್ಣುವಿನ ಆರನೆಯ ಅವತಾರ, ದಶಾವತಾರಗಳಲ್ಲೊಂದು.

ಅತ್ಯಂತ ಬಲಿಷ್ಠನೂ ವಿನಯಶಾಲಿಯೂ ಆಗಿದ್ದ ಈತ ಉದ್ಭತರಾದ ಕ್ಷತ್ರಿಯರನೆಲ್ಲ ನಾಶಮಾಡುವ ಉದ್ದೇಶದಿಂದ ಹುಟ್ಟಿದವನಾದರೂ ತಂದೆಗೆ ಅತ್ಯಂತ ವಿಧೇಯನಾಗಿದ್ದ. ಇವನಿಗೆ ರಮಣ್ವಂತ, ಸುಷೇಣ ವಸು, ವಿಶ್ವಾವಸು ಎಂಬುದಾಗಿ ನಾಲ್ಕು ಜನ ಸಹೋದರರಿದ್ದರು.

ಪ್ರಸೇನಜಿತನ ಮಗಳಾದ ತಾಯಿ ರೇಣುಕ ಒಂದು ದಿನ ಸ್ನಾನಕ್ಕೆ ಹೋದಾಗ ಚಿತ್ರರಥನೆಂಬ ಗಂಧರ್ವನನ್ನು ನೋಡಿ ವ್ಯಾಮೋಹಗೊಂಡು ತಡವಾಗಿ ಆಶ್ರಮಕ್ಕೆ ಬಂದಳು. ಇದನ್ನು ಕಂಡ ತಂದೆ ಜಮದಗ್ನಿ ಅವಳ ಕತ್ತನ್ನು ಕತ್ತರಿಸಲು ಮಕ್ಕಳಿಗೆ ಆಜ್ಞಾಪಿಸಿದ. ನಾಲ್ವರು ಮಕ್ಕಳು ನಿರಾಕರಿಸಿದಾಗ ಪರಶುರಾಮ ತಂದೆಯ ಅಜ್ಞೆಯನ್ನು ನೆರವೇರಿಸಿದ. ತಂದೆ ಆ ನಾಲ್ವರಿಗೆ ಶಾಪವಿತ್ತು ಪರಶುರಾಮನಿಗೆ ವರ ಬೇಡುವಂತೆ ಕೇಳಿದ. ಕೂಡಲೆ ಈತ ತನ್ನ ತಾಯಿ ರೇಣುಕೆ ಬದುಕುವಂತೆಯೂ ಆಕೆಗೆ ಈ ಘಟನೆ ನೆನಪಿನಲ್ಲಿ ಉಳಿಯದಂತೆಯೂ ತನ್ನ ನಾಲ್ವರು ಅಣ್ಣಂದಿರು ಮೊದಲಿನ ಸ್ಥಿತಿಯನ್ನೇ ಪಡೆಯುವಂತೆಯೂ ಆಗಲೆಂದು ಕೇಳಿಕೊಂಡ. ಕೋಪವನ್ನು ಬಿಡಬೇಕೆಂದು ತಂದೆಯನ್ನು ಬೇಡಿಕೊಂಡ ತಂದೆ ಹಾಗೆಯೇ ಅನುಗ್ರಹಿಸಿದ.

ಕಾರ್ತವೀರ್ಯಾರ್ಜುನ ಇವರ ಆಶ್ರಮಕ್ಕೆ ಬಂದು ಅತಿಥಿಸತ್ಕಾರ ಪಡೆದು ಅಲ್ಲಿದ್ದ ಕಪಿಲೆಯನ್ನು ತನಗೆ ಕೊಡಬೇಕೆಂದು ಬೇಡಿದ. ಕೊಡಲು ಒಪ್ಪಲಿಲ್ಲವಾಗಿ ಯುದ್ಧ ಮಾಡಿ ಜಮದಗ್ನಿಯನ್ನು ಕೊಂದ. ಈ ವಿಷಯ ತಿಳಿದ ಪರುಶರಾಮ ಕೋಪಾವಿಷ್ಟನಾಗಿ ಕೂಡಲೆ ಮಾಹೀಷ್ಮತೀ ನಗರಕ್ಕೆ ಹೋಗಿ ಕಾರ್ತವೀರ್ಯಾರ್ಜುನನ ಸಾವಿರ ತೋಳುಗಳನ್ನು ಕತ್ತರಿಸಿ ಹಾಕಿದ. ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ಕೊಂದು ಅವರ ರಕ್ತದಿಂದ ಪಿತೃತರ್ಪಣ ಕೊಟ್ಟ.

ವಿವಾಹ ಮಾಡಿಕೊಂಡು ಹಿಂದಿರುಗುತ್ತಿದ್ದ ಶ್ರೀರಾಮನೊಡನೆ ಸೆಣಸಿ ಸೋತು ತನ್ನಲ್ಲಿದ್ದ ವೈಷ್ಣವ ಧನುಸ್ಸನ್ನು ಆತನಿಗೆ ಕೊಟ್ಟ. ಪಾಂಡವರೊಡನೆ ಕಾಳಗಕ್ಕೆ ಇಳಿಯದೆ ಸಂಧಿ ಮಾಡಿಕೊಳ್ಳಲು ದುರ್ಯೋಧನನಿಗೆ ಭೋದಿಸಿದ. ಅಂಬೆ ಪ್ರಕರಣದಲ್ಲಿ ಭೀಷ್ಮನೊಂದಿಗೆ ಘೋರ ಕಾಳಗ ಮಾಡಿದ. ಬ್ರಾಹ್ಮಣನ ವೇಷದಲ್ಲಿ ಬಂದು ಶಸ್ತ್ರಭ್ಯಾಸ ಮಾಡಿದ ಕರ್ಣನ ಮೋಸ ಗೊತ್ತಾದಾಗ ತಾನು ಕೊಟ್ಟ ಅಸ್ತ್ರಗಳು ಯುದ್ಧದಲ್ಲಿ ಫಲಿಸದಂತೆ ಶಾಪ ಕೊಟ್ಟ. ಈತ ದ್ರೋಣಗುರು.

ಕೊನೆಯಲ್ಲಿ ಅಶ್ವಮೇಧಯಾಗಮಾಡಿ ಭೂಮಿಯನ್ನೆಲ್ಲ ಗೆದ್ದು ಕಶ್ಯಪನಿಗೆ ದಾನ ಮಾಡಿದ. ತಂದೆಯ ಸಾವಿನಿಂದ ಅತ್ಯಂತ ದುಃಖಿತನಾದ ಈತ ಶಿವನನ್ನು ಸ್ತುತಿಸಿದ. ತಾನು ಮಾಡಿದ ಪಾಪಗಳು ಪರಿಹಾರವಾಗಿರುವುದಾಗಿಯೂ ತನಗೆ ಸಾವಿಲ್ಲವೆಂತಲೂ ಶಿವನಿಂದ ಅನುಗ್ರಹ ಪಡೆದ. ತಪಸ್ಸು ಮಾಡುತ್ತ ಈತ ಈಗಲೂ ಮಹೇಂದ್ರ ಪರ್ತತದಲ್ಲಿ ಇದ್ದಾನೆಂದು ನಂಬಿಕೆ.

ಈತನೇ ಎಂಟನೆಯ ಸಾವರ್ಣಿ ಮನ್ವಂತರದಲ್ಲಿ ಸಪ್ತಋಷಿಗಳಲ್ಲಿ ಒಬ್ಬನಾಗುತ್ತಾನೆ.

7. ರಾಮನ ಅವತಾರ

ರಾಮನ ಅವತಾರ
ರಾಮನ ಅವತಾರ

ರಾಮ ಭಾರತದ ರಾಷ್ಟೀಯ ಮಹಾಕಾವ್ಯಗಳಲ್ಲಿ ಒಂದಾದ ವಾಲ್ಮೀಕಿ ರಾಮಾಯಣದ ನಾಯಕಪಾತ್ರ ಪುರಾಣ ಪ್ರಕಾರ ವಿಷ್ಣುವಿನ ದಶಾವತಾರಗಳಲ್ಲಿ ಒಂದು, ಏಳನೆಯ ಅವತಾರ.

ವಿಷ್ಣುವಿನ ದಶಾವತಾರಗಳಲ್ಲಿ ರಾಮಾವತಾರವೇ ಶ್ರೇಷ್ಠವೆಂಬ ಭಾವನೆಯಿದೆ. ರಾಮಾಯಣದ ಕಥೆಯಂತೆ ರಾಮ ದಶರಥನ ಹಿರಿಯ ಮಗ. ಇವನ ತಾಯಿ ಕೌಸಲ್ಯೆ. ಭರತ, ಲಕ್ಷ್ಮಣ, ಶತ್ರುಘ್ನ ಇವನ ಸಹೋದರರು. ಚೈತ್ರಶುಕ್ಲ ನವಮಿ ಪುನರ್ವಸು ನಕ್ಷತ್ರದಲ್ಲಿ ರಾಮ ಜನಿಸಿದ. ಇವನ ಕುಲಗುರು ವಶಿಷ್ಠ. ವಿದ್ಯಾಗುರು ವಿಶ್ವಾಮಿತ್ರ. ಬಾಲ್ಯದಲ್ಲಿಯೇ ರಾಮ ಸುಬಾಹು ತಾಟಕಿಯರನ್ನು ಕೊಂದ. ಸೀತಾಪರಿಣಯದಿಂದ ಹಿಂದಿರುಗುವಾಗ ಪರುಶರಾಮನ ಗರ್ವಭಂಗ ಮಾಡಿದ.

ಅಯೋಧ್ಯೆಯಲ್ಲಿ ರಾಮನಿಗೆ ದಶರಥ ಪಟ್ಟಾಭಿಷೇಕ ಮಾಡಲು ಹವಣಿಸಿದಾಗ ಕೈಕೇಯಿಯ ದಾಸಿಯಾದ ಮಂಥರೆ ಅದಕ್ಕೆ ವಿಘ್ನ ತಂದೊಡ್ಡಿ ರಾಮನ ಹದಿನಾಲ್ಕು ವರ್ಷಗಳ ವನವಾಸಕ್ಕೆ ಕಾರಣಳಾದಳು. ರಾಮ ಸೀತಾಲಕ್ಷ್ಮಣರೊಡನೆ ವನವಾಸಕ್ಕೆ ಹೋದ. ಅರಣದ್ಯದಲ್ಲಿ ರಾವಣ ಸೀತಾಪಹರಣವನ್ನು ಮಾಡಲು ಸುಗ್ರೀವ, ಹನುವಂತ ಮುಂತಾದ ವಾನರರ ಸ್ನೇಹದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ, ಆ ಮೂಲಕ ಲಂಕೆಗೆ ಹೋಗಿ ರಾವಣ ಮತ್ತು ಅವನ ಸಂಬಂಧಿಕರನ್ನು ನಾಶಮಾಡಿ ರಾವಣನ ತಮ್ಮನಾದ ವಿಭೀಷಣನಿಗೆ ಪಟ್ಟಕಟ್ಟಿ. ಸೀತೆಯನ್ನು ಕೂಡಿಕೊಂಡು ಲಕ್ಷ್ಮಣನೊಡನೆ ಅಯೋಧ್ಯೆಗೆ ಮರಳಿಬಂದ, ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾದ.

ವಾಲ್ಮೀಕಿಯ ಪ್ರಕಾರ ರಾಮ ಆದರ್ಶನಾಯಕ. ಸತ್ಯವಂತ, ಸದಾಚಾರಿ, ಸುಶೀಲ, ಪರಾಕ್ರಮಿ, ಗಂಡಸರನ್ನೂ ಮೋಹಗೊಳಿಸುವ ರೂಪುಳ್ಳವನು. ಏಕಪತ್ನೀವ್ರತಸ್ಥ. ಪಿತೃವಾಕ್ಯ ಪರಿಪಾಲಕ. ಆದರ್ಶ ಸಹೋದರತ್ವಕ್ಕೆ ರಾಮಲಕ್ಷ್ಮಣರು ಸಂಕೇತ, ರಾಮ ಮಾನವತೆಯ ಎಲ್ಲ ಆದರ್ಶಗಳ ಸಾಕಾರ ರೂಪ. ಭಾರತೀಯ ಸಂಸ್ಕøತಿಯ ಪ್ರತೀಕವಾಗಿ ರಾಮನೂ ರಾಮಾಯಣವೂ ಜನಮನದಲ್ಲಿ ಇಂದಿಗೂ ಉಳಿದು ಬಂದಿದೆ. ರಾಮನಿಗೆ ಚಂಪಕ ಪುಷ್ಪ, ತುಳಸೀದಳ ಜಾಜಿಕುಸುಮ, ಕಮಲ, ಪಾರಿಜಾತಾದಿ ಪುಷ್ಪಗಳು ಅತ್ಯಂತ ಪ್ರಿಯವಾದವುಗಳು. ಸೀತೆಯನ್ನು ಕಾಡಿಗೆ ಅಟ್ಟಿದ್ದು, ವಾಲಿಯನ್ನು ಮರೆಯಿಂದ ಕೊಂದದ್ದು, ಶೂದ್ರ ತಪಸ್ವಿ ಶಂಬೂಕನನ್ನು ವಧಿಸಿದ್ದು- ಈ ಕಲವು ಘಟನೆಗಳು ರಾಮನ ಬದುಕಿನ ದೃಷ್ಟಿಯಿಂದ ಅತ್ಯಂತ ಮಹತ್ತ್ವದವುಗಳಾಗಿವೆ. 

8. ಕೃಷ್ಣಾವತಾರ

ಕೃಷ್ಣಾವತಾರ
ಕೃಷ್ಣಾವತಾರ

ಎಂಟನೆಯ ಅವತಾರವೇ ಕೃಷ್ಣಾವತಾರ. ನಾರಾಯಣ ವಿಷ್ಣು; ವಾಸುದೇವ; ಮಹಾಭಾರತದ ದಿವ್ಯಪುರುಷ; ಭಾಗವತ ಪುರಾಣದ ದೇವರು; ಭಗವದ್ಗೀತೆಯ ಗುರು; ಭಾಗವತ ಧರ್ಮದ ಅಧಿದೈವ;

ಅಸುರ ಸದೃಶರಾದ ಮದಿಷ್ಟ ಅರಸರನ್ನೆಲ್ಲಾ ತನ್ನವರೆನ್ನದೆ ಅನ್ಯರೆನ್ನದೆ ಕೊಂದು ಸಾಮಾನ್ಯ ಜನಕ್ಕೆ ಕ್ಷೇಮವನ್ನು ತಂದ ದೈತ್ಯಾಂತಕ; ಸಾಧುಸಂತರ ಮನಸ್ಸನ್ನು ಸೂರೆಗೊಂಡು; ಇಂದಿಗೂ ಸೂರೆಗೊಳ್ಳುತ್ತಿರುವ ಪ್ರೇಮಮೂರ್ತಿ. ಇಂದಿಗೂ ಜನ ಅಕ್ಕರೆಯಿಂದ ನೆನೆದು ಪೂಜಿಸಿ ಸುಖ ಕಾಣುತ್ತಿರುವ ಅವತಾರ ಪುರುಷ.

ಮಂತ್ರದಂತಿರುವ ಶ್ರೀಕೃಷ್ಣನೆಂಬ ಹೆಸರನ್ನು ಹಿಂಜಿ ಎಳೆಎಳೆಯಾಗಿ ಬಿಡಿಸಿ ಇದು ಸಂಕೇತಿಸುವ ಪರಮಸತ್ವದ ಐತಿಹಾಸಿಕಾಂಶವೆಷ್ಟು ಆಧ್ಯಾತ್ಮಿಕಾಂಶವೆಷ್ಟು ಎಂಬುದನ್ನು ಬಿಡಿಸಿ ಸುಲಭವಾಗಿ ಹೇಳಲಾಗುವುದಿಲ್ಲ. ಕೃಷ್ಣನದು ತುಂಬಾ ಹಳೆಗಾಲಕ್ಕೆ ಸೇರಿದ ಹೆಸರು. ಮಹಾಭಾರತದ ಯುದ್ಧದ ಕಾಲ ಕ್ರಿ.ಪು. 3,000 ವರ್ಷಗಳಿಂದ 1400 ವರ್ಷಗಳವರೆಗೂ ವಿದ್ವಾಂಸರ ಜಿಜ್ಞಾಸೆಯಲ್ಲಿ ಅಂದೋಲಿತವಾಗುತ್ತಿದೆ. ಶ್ರೀಕೃಷ್ಣನ ಜೀವಿತ ಕಾಲ ಇದರೊಂದಿಗೆ ಸಮ್ಮಿಳಿತವಾಗಿದೆ. ಹೀಗೆ ಸುಮಾರು ಕನಿಷ್ಠ ಪಕ್ಷ ಮೂರು ಸಾವಿರದ ಐದುನೂರು ವರ್ಷಗಳ ಹಿಂದೆ ಬದುಕಿದ್ದನೆಂದು ಊಹಿಸಬಹುದಾದ ಈ ಮಹಾಪುರುಷನನ್ನು ನಮ್ಮ ಭಾವನಾ ದೃಷ್ಟಿಗೆ ಲೌಕಿಕ ಬುದ್ಧಿಯನ್ನು ಅಳವಡಿಸಿ, ನೋಡಿದರೆ ಶ್ರೀಕೃಷ್ಣನೆಂಬ ಒಬ್ಬ ಐತಿಹಾಸಿಕ ಪುರುಷ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾನೆ. ಜೊತೆಗೆ ಈತ ದೈವ ಪಟ್ಟಕ್ಕೆ ಏರಿರುವುದು ಗೋಚರಿಸುತ್ತಿರುತ್ತದೆ. ಮಹಾಭಾರತ ಪುರಾಣಗಳಲ್ಲದೆ ವೇದದಲ್ಲೂ ಬೌದ್ಧ, ಜೈನ, ಸಾಹಿತ್ಯಗಳಲ್ಲೂ ಕೃಷ್ಣನ ಹೆಸರು ಪರಮಪೂಜ್ಯ ಸ್ಥಾನದಲ್ಲಿ ಕಾಣಸಿಕ್ಕುತ್ತದೆ.

ಋಗ್ವೇದ ಮತ್ತು ಕೌಶೀತಕಿ ಬ್ರಾಹ್ಮಣಗಳಲ್ಲಿ ಕೃಷ್ಣ ಆಂಗೀರಸನೆಂಬ ಮಂತ್ರ ದೃಷ್ಟಾರನ ಉಲ್ಲೇಖವಿದೆ. ಐತರೇಯ ಅರಣ್ಯಕದಲ್ಲಿ ಕೃಷ್ಣ ಹಾರೀತನೆಂಬ ಆಚಾರ್ಯನ ಹೆಸರು ಕಂಡುಬರುತ್ತದೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಕೃಷ್ಣನ ಹೆಸರು ದೇವಕೀ ಪುತ್ರನೆಂಬ ವಿಶೇಷಣದೊಂದಿಗೆ ಗೋಚರಿಸುತ್ತದೆ. ಮಹಾಭಾರತದಲ್ಲಾಗಲೀ, ಪುರಾಣದಲ್ಲಾಗಲೀ, ಕೃಷ್ಣ ಆಂಗೀರಸ, ಕೃಷ್ಣ ಹಾರೀತರ ಹೆಸರುಗಳು ಬಾರವು. ದೇವಕೀ ಪುತ್ರನಾದ ಕೃಷ್ಣನೇನೋ ಈ ಇತಿಹಾಸ ಪುರಾಣಗಳಲ್ಲಿ ಗೋಚರಿಸುತ್ತಾನೆ. ಆದರೆ ಉಪನಿಷತ್ತಿನ ಕೃಷ್ಣ ಘೋರ ಆಂಗೀರಸನ ಶಿಷ್ಯ. ಇತಿಹಾಸ ಪುರಾಣಗಳಲ್ಲಿ ಕೃಷ್ಣ ಸಾಂದೀಪಿನಿ ಗರ್ಗರ ಶಿಷ್ಯ. ಭಗವದ್ಗೀತೆಯ ಉಪದೇಶಕ್ಕೂ ಛಾಂದೋಗ್ಯದ ಉಪದೇಶಕ್ಕೂ ಕೆಲವು ಸಾಮ್ಯಗಳಿವೆ ಎಂಬ ಕಾರಣದಿಂದ ಆ ದೇವಕೀ ಪುತ್ರ ಕೃಷ್ಣನೇ ಭಗವದ್ಗೀತೆಯ ಕೃಷ್ಣನೆಂದು ಕೆಲವರು ಊಹಿಸಲು ಅವಕಾಶವಿದೆ. ಆದರೆ ಗೀತೆಯಲ್ಲಿ ಎಲ್ಲೂ ಘೋರ ಆಂಗೀರಸನ ಮಾತು ಬರುವುದಿಲ್ಲ. ತನ್ನ ಗುರುವಿನ ಉಪದೇಶವನ್ನೇ ಕೃಷ್ಣ ಪ್ರಸರಿಸುತ್ತಿರುವಾಗ ಆ ಗುರುವನ್ನು ಸ್ಮರಿಸದೇ ಇರುವುದು ಸೋಜಿಗವೇ ಸರಿ. ಅಲ್ಲದೇ ಗೀತೆಯಲ್ಲಿ ಎಲ್ಲಾ ಉಪನಿಷತ್ತುಗಳ ಸಾರವು ಕಂಡುಬರುತ್ತದೆ. ಆದುದರಿಂದ ಇವರಿಬ್ಬರು ಒಂದೇ ಎನ್ನುವ ವಿಷಯದಲ್ಲಿ ತಕ್ಕಷ್ಟು ಸಾಕ್ಷ್ಯ ಒದಗಿಲ್ಲ ಎನ್ನಬೇಕು. ಆದರೆ ತೈತ್ತರೀಯ ಅರಣ್ಯಕದಲ್ಲಿ ವಾಸುದೇವನೆಂಬ ಹೆಸರು ನಾರಾಯಣ ಮತ್ತು ವಿಷ್ಣುಗಳ ಹೆಸರುಗಳೊಂದಿಗೆ ಮಿಳಿತವಾಗಿದೆ. ಭಗವದ್ಗೀತೆ, ಘಟಜಾತಕ, ಜೈನರ ಉತ್ತರಾಧ್ಯಯನ ಸೂತ್ರ-ಇವೆಲ್ಲವೂ ವಾಸುದೇವ ವೃಷ್ಣಿ ಕುಲಸಂಭೂತನಾದ ಕೃಷ್ಣನೆಂದು ಹೇಳುತ್ತವೆ. ಮಹಾಭಾರತವೂ ಇದನ್ನೇ ಘೋಷಿಸುತ್ತದೆ. ಆದುದರಿಂದ ನಿಗಮದಲ್ಲೂ ಸ್ತುತ್ಯವಾದ ದೈವ ಶ್ರೀಕೃಷ್ಣನೆಂದು ಹೇಳಬಹುದು.

ಬ್ರಹ್ಮ, ವಿಷ್ಣು, ಭಾಗವತ, ಬ್ರಹ್ಮವೈವತ್ರ್ತ, ಪುರಾಣಗಳಲ್ಲೂ ಗೋಪ ಹರಿವಂಶವೆಂಬ ಮಹಾಭಾರತದ ಪರಿಶಿಷ್ಟ ಕಾವ್ಯದಲ್ಲೂ ಗೋಚರಿಸುವ ಕೃಷ್ಣ ಹಾಗೂ ಮಹಾಭಾರತದ ಪಾಂಡವಸಖ ಕೃಷ್ಣ ಇವರ ವಿಷಯದಲ್ಲೂ ಜಿಜ್ಞಾಸೆ ಏಳದಿಲ್ಲ. ಮಹಾಭಾರತದಲ್ಲಿ ಕೃಷ್ಣನ ಪೂರ್ವ ಚರಿತ್ರೆಯ ವರ್ಣನೆ ಇಲ್ಲ. ಮೇಲೆ ಹೇಳಿದ ಪುರಾಣಗಳು, ಭಾಗವತದಲ್ಲಿ ಅಷ್ಟಿಷ್ಟು ಹೊರತು, ಕೃಷ್ಣನ ಮಹಾಭಾರತ ಪ್ರಸಂಗಗಳ ವಿಷಯದಲ್ಲಿ ಮೌನ ವಹಿಸುತ್ತವೆ. ಭಗವದ್ಗೀತೆಯಲ್ಲಿ ಬಹು ಉದಾತ್ತವಾದ ಮೌಲಿಕ ತತ್ವಗಳನ್ನು ಉಪದೇಶಿಸಿದ ಯೋಗೀಶ್ವರ ಭಗವಾನ್ ಕೃಷ್ಣ ಮತ್ತು ಪಾಂಡವ ಪಕ್ಷಪಾತಿಯೂ ದ್ವಾರಕಾಪತಿಯೂ ಕಪಟ ನಾಟಕ ಸೂತ್ರಧಾರಿಯೂ ಆದ ಕೃಷ್ಣ , ಅಲ್ಲದೆ ಭಾಗವತದ ಗೋಪೀವಲ್ಲಭ ಕೃಷ್ಣ ಇವರೆಲ್ಲ ಒಂದೇ ವ್ಯಕ್ತಿ ಎಂದು ಒಪ್ಪುವುದಕ್ಕೆ ಕೆಲವರು ಜಿಜ್ಞಾಸುಗಳು ಕ್ಲೇಶಪಟ್ಟಿದ್ದಾರೆ. ಆದರೆ ಮಹಾಭಾರತಕ್ಕೆ ಕೃಷ್ಣನ ಪೂರ್ವಚರಿತ್ರೆಯ ಪರಿಚಯವಿಲ್ಲದೆಯೇ ಇಲ್ಲ. ಅದರ ಅತ್ಯಂತ ಪ್ರಾಚೀನ ಭಾಗದಲ್ಲೂ ಸಹ ಕೃಷ್ಣನ ಬಾಲಚರಿತೆಯ ಉಲ್ಲೇಖವಿದೆ. ಗೋಕುಲದಿಂದ ಬಂದು ಸಭಾಭವನದಲ್ಲಿ ಕಂಸನನ್ನು ಕೊಂದ ಕೃಷ್ಣನೇ ಪಾಂಡವಮಿತ್ರನಾಗಿ ಅವರಿಂದ ಜರಾಸಂಧನನ್ನು ಕೊಲ್ಲಿಸಿದ ಎಂಬ ಮಾತು ಬರುತ್ತದೆ. ಅಲ್ಲದೆ ರಾಜಸೂಯಗದಲ್ಲಿ ಕೃಷ್ಣನಿಗೆ ಅಗ್ರಪೂಜೆಯನ್ನು ಕೊಡಬೇಕೆಂಬ ಸೂಚನೆ ಹೊರಟ ಸಂದರ್ಭದಲ್ಲಿ ಅದನ್ನು ಪ್ರತಿಭಟಿಸಿ ನಿಂತ ಶಿಶುಪಾಲ ಕೃಷ್ಣನ ಬಾಲವೃತ್ತಾಂತಗಳನ್ನು ಪುರಾಣಗಳಲ್ಲಿ ಹೇಳಿರುವ ಪ್ರಕಾರವೇ ಎತ್ತಿಕೊಂಡು ಆಡುತ್ತಾನೆ. ಅಪ್ರಸಕ್ತವಾದುದರಿಂದ ಕೃಷ್ಣನ ಪೂರ್ವವೃತ್ತಾಂತ ಮಹಾಭಾರತದಲ್ಲಿ ಬಂದಿಲ್ಲವಷ್ಟೇ. ಅಲ್ಲದೇ ಮಹಾಭಾರತದ ಕೃಷ್ಣ ಚರಿತೆಯನ್ನು ಕೈಬಿಟ್ಟು ಆತನ ಮಿಕ್ಕ ಚರಿತೆಯನ್ನು ವಿವರಿಸುವುದಕ್ಕಾಗಿಯೇ ಹರಿವಂಶ ಎಂಬ ಪರಿಶಿಷ್ಟ ಭಾಗ ನಿರ್ಮಿತವಾಗಿ ಆ ಕೊರತೆಯನ್ನು ಪೂರೈಸಿದೆ. ಪುರಾಣಗಳೂ ಸಹ ಇದೇ ಮಾರ್ಗವನ್ನು ಹಿಡಿದಿವೆ. ಆದುದರಿಂದ ಅಲ್ಲಿನ ಕೃಷ್ಣನೇ ಇಲ್ಲಿನ ಕೃಷ್ಣ ಎಂಬುದರಲ್ಲಿ ಸಂದೇಹ ಪಡುವುದು ಯುಕ್ತ ಎನಿಸುವುದಿಲ್ಲ. ಹಾಗೆಯೇ ಸೂಕ್ಷವಾಗಿ ವಿಮರ್ಶೆ ಮಾಡಿ ನೋಡಿದರೆ ಭಗವದ್ಗೀತೆಯ ಉದಾತ್ತ ಕೃಷ್ಣ ತನ್ನ ಉದಾತ್ತತೆಯನ್ನು ಮಿಕ್ಕ ಪ್ರಸಂಗಗಳಲ್ಲಿ ಕಳೆದುಕೊಂಡಂತೆ ಕಾಣುವುದಿಲ್ಲ. ಆತನ ಯಾವ ಕಾರ್ಯಗಳು ಭಗವದ್ಗೀತೆಯಲ್ಲಿನ ಈ ಶ್ಲೋಕಕ್ಕೆ ಅಳವಡದೇ ಇಲ್ಲ. ಯಸ್ಯ ನಾಹಂ ಕೃತೋಭಾವೋ ಬುದ್ಧರ್ಯಸ್ಯ ನಾಲಿಪ್ಯತೇ, ಹತ್ವಾಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ.’ ಆತ ಯಾವ ಸಮಯದಲ್ಲೂ ನಿರಹಂಕಾರವೂ ಸ್ವಾರ್ಥದೂರವೂ ಅನಾಸಕ್ತವೂ ಲೋಕಕ್ಷೇಮಕರವೂ ಧರ್ಮನಿಷ್ಠವೂ ಆದ ಕರ್ಮದಲ್ಲಿ ಆಸಕ್ತ, ಫಲವಿರಕ್ತ, ಆತನ ಕಾರ್ಯಗಳೆಲ್ಲವೂ ಪರಮತತ್ತ್ವವಿದ ಯೋಗೀಶ್ವರನ ಕಾರ್ಯವೇ ಹೊರತು ಅಜ್ಞಾನಿಯೂ ಅಹಂಕಾರಿಯೂ ಅರಿಷಡ್ವರ್ಗಭೂಯಿಷ್ಠನೂ ಆದ ಸ್ವಾರ್ಥಿಯದಲ್ಲ. ಆದುದರಿಂದ ಭಗವದ್ಗೀತೆಯ ಕೃಷ್ಣನೂ ಪುರಾಣೇತಿಹಾಸಗಳು ವರ್ಣಿಸಿರುವ ಕೃಷ್ಣನೂ ಬೇರೆಬೇರೆ ಎಂದು ಹೇಳುವುದು ಉಚಿತವಲ್ಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಶ್ರೀಕೃಷ್ಣಚರಿತ್ರೆಯಲ್ಲಿನ ಮುಖ್ಯ ಪ್ರಸಂಗಗಳನ್ನು ಈ ರೀತಿಯಾಗಿ ಸಂಗ್ರಹಿಸಬಹುದು.

ಕೃಷ್ಣ ಚಂದ್ರವಂಶದ ಯಾದವ ಕ್ಷತ್ರಿಯ ಪಂಗಡಕ್ಕೆ ಸೇರಿದವನೆಂದೂ ಮನುವಿನಿಂದ 24ನೆಯ ತಲೆಯವನೆಂದೂ ಪುರಾಣಗಳಿಂದ ತಿಳಿದುಬರುತ್ತದೆ. ಯಾದವರು ಸೂರ್ಯವಂಶದವರೆಂದೂ ಪುರಾಣಗಳಿಂದ ತಿಳಿದುಬರುತ್ತದೆ. ಯಾದವರು ಸೂರ್ಯವಂಶದವರೆಂದೂ ಹರಿವಂಶ ಹೇಳುತ್ತದೆ ಎಂದರೆ ಶ್ರೀಕೃಷ್ಣ ಈ ಎರಡು ಪ್ರಸಿದ್ಧ ವಂಶಗಳಿಗೂ ಸೇರಿದವನೆಂದ ಹಾಗಾಯಿತು. ಭಾಗವತ ಪುರಾಣದ ಪ್ರಕಾರ ಶ್ರೀಕೃಷ್ಣ ಸುಮಾರು 5,000 ವರ್ಷಗಳ ಕೆಳಗೆ ಹುಟ್ಟಿದನೆಂದೂ 125 ವರ್ಷಗಳ ಕಾಲ ಜೀವಿಸಿದ್ದನೆಂದೂ ತಿಳಿದುಬರುತ್ತದೆ. ಮಹಾಭಾರತದ ಪ್ರಕಾರ ಶ್ರೀಕೃಷ್ಣ ಅರ್ಜುನನಿಗಿಂತ ಮೂರು ತಿಂಗಳು ದೊಡ್ಡವ. ಅರ್ಜುನ ಯುಧಿಷ್ಠಿರನಿಗಿಂತ ಎರಡು ವರ್ಷ, ಭೀಮನಿಗಿಂತ ಒಂದು ವರ್ಷ ಚಿಕ್ಕವ. ಧರ್ಮರಾಜ 108 ವರ್ಷ ಬದುಕಿದ್ದ. ಆದುದರಿಂದ ಕೃಷ್ಣನ ಜೀವಿತಕಾಲ 105-6ಕ್ಕೆ ಇಳಿಯುತ್ತದೆ.

ಶ್ರೀಕೃಷ್ಣ ಯಾದವರ ವಸುದೇವ ಮತ್ತು ಮಧುರೆಯ ಅರಸನಾದ ಉಗ್ರಸೇನನ ತಮ್ಮ ದೇವಕನ ಮಗಳು ದೇವಕಿಯರ ಮಗ; ಮಧುರಾ ನಗರದ ಸೆರೆಮನೆಯಲ್ಲಿ ಅವರ ಎಂಟನೆಯ ಮಗನಾಗಿ ಜನಿಸಿದ. ಕಾವಲಿನವರ ಸಹಕಾರದಿಂದ ವಸುದೇವ ಶಿಶುವನ್ನು ಸೆರೆಮನೆಯಿಂದ ಕೊಂಡೊಯ್ದು ತನ್ನ ಸ್ನೇಹಿತ ನಂದಗೋಪನ ಹೆಂಡತಿ ಯಶೋದೆಯ ಮಗ್ಗುಲಲ್ಲಿ ಮಲಗಿಸಿ ಬಂದ. ಹೀಗೆ ಕಂಸನಿಗೆ ತಿಳಿಯದೆ ಕೃಷ್ಣ ಗೋಕುಲದಲ್ಲಿ ಬೆಳೆಯುವಂತಾಯಿತು. ಅಲ್ಲಿಯೇ ವಸುದೇವನ ಮತ್ತೊಬ್ಬಳು ಹೆಂಡತಿಯಾದ ರೋಹಿಣಿ ಬಲರಾಮನೆಂಬ ಶಿಶುವನ್ನು ಹೆತ್ತಿದ್ದಳು. ಈ ಇಬ್ಬರು ಅಣ್ಣ ತಮ್ಮಂದಿರೂ ಬಹಳ ಅನ್ಯೋನ್ಯವಾಗಿದ್ದುಕೊಂಡು ಮಹಾಕಾರ್ಯಗಳನ್ನೆಸಗುತ್ತ ದೇವಾಂಶಸಂಭೂತರೆನಿಸಿ ಕಡೆಯವರೆಗೂ ಬಾಳಿದರು.

ಕ್ಷತ್ರಿಯರಿಗೆ ದುರ್ಲಭವಾದ ಸಾಮಾನ್ಯ ಸರಳಜೀವಿಗಳ ಸಂಪರ್ಕ ಹೀಗೆ ಶ್ರೀಕೃಷ್ಣನಿಗೆ ದೊರೆತದ್ದು ಆತನಿಗೂ ಭಾರತದ ಜನಕ್ಕೂ ಒಂದು ಮಹಾಭಾಗ್ಯ ಎನ್ನಬೇಕು. ಅವರ ಉದಾರಪ್ರೇಮದಿಂದ ಆತನ ತೇಜಸ್ಸು ಇನ್ನಿಲ್ಲದಂತೆ ವರ್ಧಿಸಿತು. ಭಾರತದ ತಾಯಿತಂದೆಗಳು ತಮ್ಮ ಮಕ್ಕಳನ್ನು ದೇವರೆಂದೇ ಭಾವಿಸಿ ಹಾಡುಹಸೆಗಳಲ್ಲಿ ಸಂತೋಷಗೊಳ್ಳವಂತಾದುದು ಗೋಕುಲದಲ್ಲಿ ಗೋಪಿಯರಿಂದ ಪರಿಭಾವಿತನಾದ ಈ ಕೃಷ್ಣನಿಂದ. ಮಗುವಾಗಿ ಕೃಷ್ಣ ಅನೇಕ ಗಂಡಾಂತರಗಳಿಗೆ ಈಡಾಗಿ ಪಾರಾದ. ಪೂತನಿ ಎಂಬ ರಕ್ಕಸಿ ಮೊಲೆಯೂಡ ಬಂದಳು. ಕೃಷ್ಣ ಆಕೆಯ ಅಸುವನ್ನೇ ಹೀರಿ ಬಿಟ್ಟ. ಮಗುವಿನ ಕಾಲೊದೆತಕ್ಕೆ ಬಂಡಿ ಅದರ ಮೇಲೆ ಉರುಳಿತು. ಮಗು ಯಾವ ಗಾಸಿಯನ್ನೂ ಹೊಂದದೆ ಬದುಕಿತು. ಸುಂಟರಗಾಳಿ ಅದನ್ನು ಮೇಲಕ್ಕೆ ಹಾರಿಸಿಕೊಂಡು ಹೋಗಿ ಕೆಡವಿತು. ಮಗು ಸಾಯದೆ ಉಳಿಯಿತು. ಈ ತುಂಟ ಮಗುವಿನ ಕಾಟ ತಾಳಲಾರದೆ ಯಶೋದೆ ಅದನ್ನು ಹಗ್ಗದಿಂದ ಒರಳಿಗೆ ಬಿಗಿದಳು. ಆ ಒರಳನ್ನೇ ಅದು ಎಳೆದುಕೊಂಡು ಹೋಗಿ ಅವಳಿಜವಳಿಯಾಗಿ ಬೆಳೆದಿದ್ದ ಅರ್ಜುನ ವೃಕ್ಷಗಳ ನಡುವೆ ತೂರಿ ತಾಟಿಸಲು ಆ ಮರಗಳೇ ಬಿದ್ದುಹೋದವು. ಅವುಗಳ ನಡುವೆ ಮಗು ನಗುತ್ತ ಕುಳಿತಿತ್ತು. ಈ ಮರಗಳು ಬಿದ್ದದ್ದು ಊರಿನವರಿಗೆ ಅಪಶಕುನ ಎನಿಸಿತು. ಜೊತೆಗೆ ತೋಳಗಳು ಹೆಚ್ಚಿ ಕಿರುಕುಳ ಕೊಟ್ಟವು. ನಂದಗೋಪಾದಿಗಳು ಗೋಕುಲವನ್ನು ಬಿಟ್ಟು ಬೃಂದಾವನಕ್ಕೆ ತೆರಳಿದರು.

ಶ್ರೀಕೃಷ್ಣ ಬಹು ಮನೋಹರಮೂರ್ತಿ. ಆತನ ಮೈಬಣ್ಣ ಅಸಾಧಾರಣವಾದ ಶ್ಯಾಮವರ್ಣ. ಆತ ಬಹು ಸುಂದರ, ದೃಢಗಾತ್ರ, ತೇಜಸ್ವಿ, ಮಹಾಬಲಶಾಲಿ, ಏತಕ್ಕೂ ಅಂಜದ ದಿಟ್ಟ, ಉಪಾಯಕುಶಲಿ, ವನಮಾಲಿಯೂ ಪೀತಾಂಬರಧಾರಿಯೂ ಬರ್ಹಿಪಿಂಛಾವ ತುಸನೂ ಆದ ಆತನನ್ನು ಕಂಡರೆ ಮರುಳುಗೊಳ್ಳದವರೇ ಇಲ್ಲ. ಜೊತೆಗೆ ಕೊಳಲು ಬಾರಿಸುವುದರಲ್ಲಿ ಅದ್ವಿತೀಯ ಪರಿಣತಿಯನ್ನು ಹೊಂದಿ ತಾನಿಚ್ಚಿಸಿದ ರಾಗಭಾವಗಳನ್ನು ಕೇಳುವವರ ಹೃದಯದಲ್ಲಿ ಆತ ಉಕ್ಕಿಸುತ್ತಿದ್ದ. ಬಂದ ಕೇಡುಗಳನ್ನು ಧೃತಿಗೆಡದೆ ಎದುರಿಸಿ ಗೆಲ್ಲುವುದರಲ್ಲೂ ತನ್ನ ಸುತ್ತ ಮಮತೆ ಹರ್ಷಗಳನ್ನು ಹರಡುವುದರಲ್ಲೂ ಆತನಿಗೆಣೆಯನ್ನೇ ಕಾಣೆವು. ಬೃಂದಾವನದಲ್ಲಿ ರಾಮಕೃಷ್ಣರು ಅನೇಕ ದುಷ್ಟರನ್ನು ನಾಶಪಡಿಸಿ ಗೋಪರಿಗೆ ಆ ಜಾಗವನ್ನು ಸುರಕ್ಷಿತವಾಗಿ ಮಾಡಿದರು. ಆ ಪ್ರಸಂಗಗಳಲ್ಲಿ ಮುಖ್ಯವಾದವು-ಬಕ, ವೃಷ, ಧೇನುಕಾದಿಗಳ ವಧೆ; ಕಾಳೀಯನಾಗನ ದಮನ, ಇಂದ್ರನ ದರ್ಪವನ್ನು ಗೋವರ್ಧನೋದ್ಧರಣದಲ್ಲಿ ಮುರಿದುದು; ವೇಣುಗಾನ; ರಾಸಲೀಲೆ ಬಲರಾಮನಿಂದ ಪ್ರಲಂಬಾಸುರ ವಧೆ, ಕೃಷ್ಣನಿಂದ ವೃಷಭಾಸುರ, ಕೇಶಿಗಳ ವಧೆ-ಇವು. ಕಾಳೀಯ ದಮನದಲ್ಲಿ ನಾಗಕುಲದ ಕಾಳೀಯನೆಂಬವನನ್ನು ಪರಿವಾರ ಸಮೇತ ಆ ನೆಲದಿಂದ ಹೊರಗೆ ಅಟ್ಟಿದ್ದ ಐತಿಹಾಸಿಕ ಪ್ರಸಂಗವೊಂದನ್ನು ವಿದ್ವಾಂಸರು ಊಹಿಸುತ್ತಾರೆ. ಗೋವರ್ಧನೋದ್ಧರಣದಲ್ಲಿ ಶ್ರೀಕೃಷ್ಣ ಪರಂಪರೆಯಾಗಿ ಬಂದ ಇಂದ್ರಮುಖದ ಆಚರಣೆಯನ್ನು ಬಿಟ್ಟು ತಮ್ಮ ವೃತ್ತಿಗೆ ಆಧಾರಗಳಾದ ಗೋವುಗಳನ್ನೂ ಗೋವರ್ಧನ ಪರ್ವತವನ್ನೂ ಪೂಜಿಸುವಂತೆ ಸ್ವಜನರನ್ನು ಪ್ರೇರಿಸಿ, ಆ ಮೂಲಕ ಇಂದ್ರನನ್ನು ಕೆರಳಿಸಿ, ಆತ, ತಂದ ಪ್ರಳಯಕಾಲದ ಮಳೆಯನ್ನು ಗೋವರ್ಧನಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿ ತಡೆದು ಗೋಪರನ್ನೂ ಗೋವುಗಳನ್ನೂ ಕಾಪಾಡಿದ ಗಿರಿಧರ ಎನಿಸಿದ, ಆಧ್ಯಾತ್ಮಿಕ ಭಾವನೆಗಳು ವಿಚಾರ-ವಿಮರ್ಶೆಗಳನ್ನು ಅವಲಂಬಿಸಬೇಕೇ ಹೊರತು ಕೇವಲ ಕುರುಡು ಸಂಪ್ರದಾಯವನ್ನಲ್ಲ ಎಂಬುದನ್ನು ಕೃಷ್ಣ ಬಲು ದಿಟ್ಟತನದಿಂದ ಆದರೆ ಕುಶಲ ತರ್ಕದ ದಾರಿಹಿಡಿದು ಹಿರಿಯರಿಗೆ ತಿಳಿಯಹೇಳಿದಂತಿದೆ. ಭಗವದ್ಗೀತೆಯಲ್ಲಿ ಈ ತತ್ತ್ವ ಪರಿಪೂರ್ಣತೆಯನ್ನು ಪಡೆಯುತ್ತದೆ. ರಾಸಲೀಲೆಯಲ್ಲಿ ಮುರಲೀಧರ ಕೃಷ್ಣನೊಂದಿಗೆ ಯಮುನಾತೀರದಲ್ಲಿ ಗೋಪಸ್ತ್ರೀಯರು ಹಾಡುಕುಣಿತಗಳಲ್ಲಿ ಮೈಮರೆಯುತ್ತಿದ್ದ ಪ್ರಸಂಗ ವರ್ಣಿತವಾಗಿದೆ. ಹೀಗೆ ಕನ್ಯೆಯರೊಂದಿಗೂ ಗೃಹಿಣಿಯರೊಂದಿಗೂ ಬೆರೆಯುತ್ತಿದ್ದ ಕೃಷ್ಣನನ್ನು ಸ್ವೈರಿಯೆಂದೂ ಕಾಮುಕನೆಂದೂ ನಿಂದಿಸುವುದುಂಟು. ಆದರೆ ಯಾವ ಭಾಗವತ ರಾಸಲೀಲೆಯನ್ನು ವರ್ಣಿಸುತ್ತದೋ ಅದೇ ಭಾಗವತ ಕೃಷ್ಣ ವೃಂದಾವನದಲ್ಲಿದ್ದುದು ಕೇವಲ 11 ವರ್ಷಗಳು ಮಾತ್ರ ಎನ್ನುತ್ತದೆ. ಆತ ಬೃಂದಾವನವನ್ನು ತೊರೆದಾಗ ಇನ್ನೂ ಕಿಶೋರ. ಗೊಲ್ಲರ ನಡುವೆ ಆತ ಸೊಂಪಾಗಿ ಬೆಳೆದು ತರುಣನಂತೆ ಕಂಡಿರಬಹುದು. ಗೋಪಸ್ತ್ರೀಯರಿಗೆ ಆತನ ರೂಪವನ್ನು ಕಂಡು ಕಾಮವೂ ಹುಟ್ಟಿರಬಹುದು. ಆದರೆ ಆತನ ಪ್ರೀತಿ, ವರ್ತನೆ ಬೇರೆ ತರದ್ದು. ತನ್ನ ರೂಪವಾಕ್ಕøತಿಗಳಿಂದ ಎಲ್ಲರ ಮನಸ್ಸನ್ನೂ ಅಪಹರಿಸಿದ ಜಾಯಮಾನ ಆತನದು. ಆತನನ್ನು ಕಾಮಿಸುವುದು ಕಾಮವಲ್ಲ. ಮೊದಲು ಆ ರೂಪದಲ್ಲಿ ತೋರಿದರೂ ಅದು ಪ್ರೇಮವಾಗಿ ಪರಿಣಾಮ ಹೊಂದುತ್ತಿತ್ತು. ಪ್ರೌಢ, ಸಂಗೀತವನ್ನು ಆಲಿಸುತ್ತಿರುವಾಗ ಅನೇಕ ರಾಗಗಳ ಉದ್ಬೋಧನವಾಗುತ್ತದೆ. ಆದರೆ ಅವೆಲ್ಲ ತೇಜೋಜ್ಜ್ವಲವಾದ ದಿವ್ಯ ಶಾಂತಿಯಲ್ಲಿ ಮುಗಿಯುತ್ತವೆ. ಕೃಷ್ಣನ ಮೋಹಗಾನದಿಂದಲೂ ದರ್ಶನ ಸ್ಪರ್ಶಾದಿಗಳಿಂದಲೂ ಗೋಪಿಯರು ಅನೇಕ ರಾಗಗಳಿಗೆ ಪಕ್ಕಾಗಿ ಅವುಗಳ ಸಹಾಯದಿಂದ ತಮ್ಮ ಬಾಳುವೆಯ ಅತ್ಯಂತ ಉನ್ನತ ಸ್ತರಕ್ಕೇರಿ ಅಲ್ಲಿ ತಮ್ಮ ಜೀವ ತೇಜೋಜ್ಜ್ವಲವೂ ಸಕಲ ಕಾಮ ಸಂತೃಪ್ತವೂ ಶಾಂತವೂ ಆಗುವ ಸ್ಥಿತಿಯನ್ನು ಮುಟ್ಟುತ್ತಿದ್ದರು ಎಂದು ಹೇಳಬೇಕು. ಭಾಗವತವನ್ನು ಆಲಿಸಿದ ಪರೀಕ್ಷಿತ್ ರಾಜನೇ ಈ ನೀತಿಯ ಪ್ರಶ್ನೆಯನ್ನು ಶುಕನಿಗೆ ಹಾಕಿ ಸದುತ್ತರ ಪಡೆಯುತ್ತಾನೆ. ಕೃಷ್ಣನ ಮಾತೂ ಈ ವಿಷಯದಲ್ಲಿನ ನಮ್ಮ ಸಂದೇಹವನ್ನು ನಿವಾರಿಸುತ್ತದೆ. ಆತನೆನ್ನುತ್ತಾನೆ; ‘ನನ್ನಲ್ಲಿ ಮನಸ್ಸನ್ನು ನೆಟ್ಟವರ ಕಾಮ ಕಾಮವಾಗಿ ಪರಿಣಮಿಸದು; ಹೊಟ್ಟು ಬಿಡಿಸಿದ ಅಥವಾ ಬೇಯಿಸಿದ ಧಾನ್ಯದಿಂದ ಪೈರು ಹುಟ್ಟದು (ಭಾಗವತ). ರಾಸಲೀಲೆಯೊಂದಿಗೆ ಗೋಪೀವಸ್ತ್ರಾಪಹರಣದ ಪ್ರಸಂಗವನ್ನೂ ಉಲ್ಲೇಖಿಸಬಹುದು. ಕೃಷ್ಣನೇ ತಮಗೆ ಗಂಡನಾಗಬೇಕೆಂದು ಕೋರಿ ಗೋಪಕನ್ಯೆಯರು ಕಾಳಿಂದೀನದಿಯಲ್ಲಿ ಬೆಳಗಿನ ಜಾವದಲ್ಲಿ ಮಿಂದು ಕಾತ್ಯಾಯಿನಿ ಪೂಜೆಯ ವೃತವನ್ನು ಕೈಗೊಳ್ಳುತ್ತಾರೆ. ಒಂದು ದಿನ ಕೃಷ್ಣ ಅವರು ನೀರನಲ್ಲಿ ಜಲಕ್ರೀಡೆಯಾಡುತ್ತಿದ್ದಾಗ ಅವರ ಸೀರೆಗಳನ್ನೆಲ್ಲ ಎತ್ತಿಕೊಂಡು ಹತ್ತಿರದ ಮರವನ್ನೇರಿ ಕುಳಿತುಕೊಳ್ಳುತ್ತಾನೆ. ಅವರು ಹೊರಗೆ ಬಂದು ಲಜ್ಜೆಯನ್ನೆಲ್ಲ ತೊರೆದು ಎರಡೂ ಕೈಗಳನ್ನು ಎತ್ತಿ ಬೇಡಿದ ಹೊರತು ಕೃಷ್ಣ ಅವರಿಗೆ ಅವರ ದುಕೂಲಗಳನ್ನು ಕೊಡುವುದಿಲ್ಲ. ಲಜ್ಜೆ ಕಾಮಸೂಚಕ. ಕೃಷ್ಣ ಅವರಿಂದ ಬಯಸಿದುದು ಕಾಮವನ್ನಲ್ಲ, ನಿಷ್ಕಲಷವೂ ಪ್ರಕಾಂತಿಕವೂ ಆದ ಪ್ರೇಮವನ್ನು ಇದೇ ಜಾಗದಲ್ಲಿ ಋಷಿಪತ್ನಿಯರು ಕೃಷ್ಣನಿಗೂ ಅವನ ಸ್ನೇಹಿತರಿಗೂ ತಮ್ಮ ಕರ್ಮನಿಷ್ಠರಾದ ಋಷಿಪತಿಗಳ ಇಷ್ಟವನ್ನು ಮೀರಿ ಉಣಬಡಿಸಿದುದನ್ನೂ ನೆನೆಯಬಹುದು. ಅವರ ಈ ಅತಿವರ್ತನೆಗೆ ಸಮಾಧಾನವನ್ನು ಅವರೇ ಹೇಳುತ್ತಾರೆ: ಯಾರ ಸಂಪರ್ಕದಿಂದ ಪ್ರಾಣ, ಬುದ್ಧಿ, ಮನಸ್ಸು, ಆತ್ಮ, ದಾರಾಪತ್ಯ, ಧನಾದಿಗಳು ಪ್ರಿಯವಾಗಿ ಆಗುತ್ತವೋ ಆತನಿಗಿಂತ ಮತ್ತಾರೂ ಪ್ರಿಯರು (ಭಾಗವತ). ಹೀಗೆ ಕೃಷ್ಣನಿಂದ ಪ್ರೇಮದ ಪರಾಕಾಷ್ಠೆಯನ್ನು ಮುಟ್ಟಿ ಸಂತುಷ್ಟರಾದವರು ಗೋಪಸ್ತ್ರೀಯರು ಮಾತ್ರವಲ್ಲ. ಆತ ಮುಂದೆ ವರಿಸಿದ ಅಷ್ಟಮಹಿಷಿಯರು ಮತ್ತು ಹದಿನಾರು ಸಹಸ್ರ ರಾಜಕುಮಾರಿಯರೂ. ಪ್ರೇಮ ನಿಧಿಯೇ ಕೃಷ್ಣರೂಪವನ್ನು ತಾಳಿ ಬಂದಿದೆ. ಆದ್ದರಿಂದ ಪತಿ-ಪುತ್ರಾದಿ ಪ್ರೇಮದ ಕಾಲುವೆಗಳು ಹೊರಟು ಜೀವಜೀವಗಳನ್ನು ತಣಿಸುತ್ತಿವೆ-ಎಂಬುದು ಇಲ್ಲಿನ ಮಥಿತಾರ್ಥ. ಇದರ ಜೊತೆಗೆ ರಾಧೆಯ ವೃತ್ತಾಂತ ಬ್ರಹಂವೈವರ್ತದಲ್ಲಿ ಮಾತ್ರ ಗೋಚರಿಸುತ್ತದೆ. ರಾಧಾಕೃಷ್ಣರ ಪ್ರೇಮಸಂಕೇತವನ್ನು ಕುರಿತೇ ಈ ಪುರಾಣ ಪ್ರವೃತ್ತವಾಗಿದೆ ಎನ್ನಬೇಕು. ಈ ಪ್ರಣಯ ಒಂದು ಆಧ್ಯಾತ್ಮಿಕ ಪಂಥವಾಗಿ ಪರಿಣಮಿಸಿ ವಲ್ಲಭ, ಚೈತನ್ಯ ಮೊದಲಾದ ಮಹಾತೇಜಸ್ವೀ ಭಕ್ತರ ಮನಸ್ಸನ್ನು ಸೂರೆಗೊಂಡಿದೆ. ಇಲ್ಲೂ ಕಾಮವಲ್ಲ, ಪ್ರೇಮವೇ ಪ್ರಧಾನಾಂಶ. ಬೃಂದಾವನದಲ್ಲಿ ಕೃಷ್ಣ ಹೆಚ್ಚು ಕಾಲವಿರಲಿಲ್ಲ. ಮಧುರೆಯಲ್ಲಿ ಕೃಷ್ಣನಿಂದ ಕುವಲಯಾಪೀಡವೆಂಬ ಆನೆ ಮತ್ತು ಮುಷ್ಟಿಕ ಚಾಣೂರಾದಿ ಜಟ್ಟಿಗಳ ವಧೆ, ಕೊನೆಗೆ ಕಂಸನನಾಶ-ಇವು ಜರುಗಿ ಉಗ್ರಸೇನನಿಗೆ ಮರಳಿ ಸಿಂಹಾಸನ ದೊರೆಯುತ್ತದೆ (ನೋಡಿ- ಕಂಸ-1). ಮುಂದೆ ಈ ಬಾಲಕರಿಗೆ ಉಪನಯನವಾಗಿ ಕಾಶಿಯ ಹತ್ತಿರದ ಆವಂತೀಪುರದಲ್ಲಿದ್ದ ಸಾಂದೀಪಿನಿ ಎಂಬಾತನಲ್ಲಿ ಗುರುಕುಲವಾಸ ಒದಗುತ್ತದೆ. ಅಲ್ಲಿ ಕೇವಲ ಅರವತ್ತು ನಾಲ್ಕು ದಿನಗಳಲ್ಲಿ ವೇದವೇದಾಂಗಗಳೊಡನೆ ಲೇಖನ, ಗಣಿತ, ವೈದ್ಯ ವಿದ್ಯೆಗಳನ್ನು ಹನ್ನೆರಡು ದಿನಗಳಲ್ಲಿ ಗಜವಿದ್ಯೆ, ಅಶ್ವವಿದ್ಯೆಗಳನ್ನು 50 ದಿನಗಳಲ್ಲಿ ಧನುರ್ವಿದ್ಯೆ ಮತ್ತು ದಶಶಾಖೆಗಳೊಡನೆ ಯುದ್ದ ವಿದ್ಯೆಗಳನ್ನು ಕಲಿತರೆಂದು ಮಹಾಭಾರತ ಹೇಳುತ್ತದೆ. ಕೃಷ್ಣನಿಗೆ ಸುಧಾಮನ (ನೋಡಿ- ಕುಚೇಲ) ಸ್ನೇಹವಾದುದು ಅಲ್ಲಿಯೇ. ಮುಂದೆ ಈತ ತನ್ನ ಬಡತನವನ್ನು ಕೃಷ್ಣಪ್ರಸಾದದಿಂದ ನೀಗಿಕೊಂಡ ಕಥೆ ಬಹು ಮನೋಹರವಾಗಿದೆ. ಈ ನಡುವೆ ಕಂಸನ ಮಾವ ಜರಾಸಂಧ ಮಧುರೆಯ ಮೇಲೆ ದಂಡೆತ್ತಿ ಬರಲು ಯಾದವರು ರಾಮಕೃಷ್ಣರನ್ನು ಗುರುಕುಲದಿಂದ ಕರೆಸಿಕೊಳ್ಳುತ್ತಾರೆ. ಮಗಧರಾಜನಾದ ಜರಾಸಂಧನೊಡನೆ ಕೃಷ್ಣ ಹದಿನೇಳು ಸಲ ಯುದ್ಧ ಮಾಡಿ ಆತನನ್ನು ಸೋಲಿಸಿ ಮರಳಿಸುತ್ತಾನೆ. ಹದಿನೆಂಟನೇ ಸಲ ಆತ ಕಾಲಯವನನೆಂಬ ಪ್ರಬಲ ರಾಜನೊಡನೆ ಸ್ನೇಹ ಮಾಡಿಕೊಂಡು ಕೃಷ್ಣನ ಮೇಲೆ ಇಬ್ಬರೊಂದಾಗಿ ಕವಿದು ಬರಲು, ಕೃಷ್ಣ ಉಪಾಯದಿಂದ ಮುಚುಕುಂದನ ಮೂಲಕ ಕಾಲಯವನನ್ನು ಸಂಹರಿಸಿ ಜರಾಸಂಧನೊಡನೆ ತತ್‍ಕ್ಷಣದಲ್ಲಿ ಯುದ್ಧ ಮಾಡಿದರೆ ಜಯ ಲಭಿಸದೆಂದು ಪಶ್ಚಿಮ ಸಮುದ್ರ ತೀರದಲ್ಲಿರುವ ದ್ವಾರಕೆಗೆ ತನ್ನವರೊಂದಿಗೆ ವಲಸೆ ಹೋಗುತ್ತಾನೆ. ಆತನಿಂದ ದ್ವಾರಕೆ ಭವ್ಯನಗರವಾಗಿ ರೂಪುಗೊಳ್ಳುತ್ತದೆ. ಅಲ್ಲಿರುವಾಗ ವಿದರ್ಭ ದೇಶದ ಭೀಷ್ಮಕನ ಮಗಳು ರುಕ್ಮಿಣಿ ತನಗೆ ತನ್ನ ಅಣ್ಣ ಗೊತ್ತು ಮಾಡಿದ್ದ ಛೇದಿಯ ಅರಸ ಶಿಶುಪಾಲನೊಂದಿಗೆ ಮದುವೆಯಾಗಲು ಒಪ್ಪದೇ ತಾನೊಲಿದ ಕೃಷ್ಣನಿಗೆ ಬ್ರಾಹ್ಮಣನೊಬ್ಬನ ಮೂಲಕ ವರ್ತಮಾನ ಕಳುಹಿಸುತ್ತಾಳೆ. ಕೃಷ್ಣ ಬಲರಾಮನೊಂದಿಗೆ ಬಂದು ಗೌರಿಯ ಪೂಜೆಯನ್ನು ಮುಗಿಸಿಕೊಂಡು ಹೊರಗೆ ಬರುತ್ತಿದ್ದ ವಧುವನ್ನು ಎಲ್ಲರ ಕಣ್ಣೆದುರಿಗೆ ಅಪಹರಿಸಿಕೊಂಡು ಮದುವೆಯಾಗುತ್ತಾನೆ.

ಬೃಂದಾವನವನ್ನು ಬಿಟ್ಟ ಮೇಲೆ ಗೋಪ ಗೋಪಿಯರನ್ನು ಕೃಷ್ಣ ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಂಡಂತೆ ಕಾಣಲಿಲ್ಲ. ತಾನೆಯೇ ಅವರನ್ನು ಪುನ: ಕಂಡದ್ದು ಗೋಚರಿಸುವುದಿಲ್ಲ. ಉದ್ದವನ ಮೂಲಕ ನಂದಗೋಪಾದಿಗಳಿಗೆ ತನ್ನ ಪ್ರೇಮ ವಿಶ್ವಾಸಗಳನ್ನು ನೆನೆಕೆಗಳನ್ನು ಕಳುಹಿಸಿ ಅವರನ್ನು ಸಮಾಧಾನಗೊಳಿಸಿದನಷ್ಟೇ. ಬಲರಾಮನನ್ನು ಅವರಲ್ಲಿಗೆ ಹೋಗಿ ಒಂದೆರಡು ತಿಂಗಳು ಇದ್ದು ಬರುವಂತೆ ಪ್ರೇರಿಸುತ್ತಾನೆಯೇ ಹೊರತು ತಾನೇ ಹೋಗ. ನಡುವೆ ಸೂಯೋಪರಾಗದ ಸಮಯದಲ್ಲಿ ಭಾರತೀಯರೆಲ್ಲರೂ ಪೀಡಾ ಪರಿಹಾರಕ್ಕಾಗಿ ಸಮಂತ ಪಂಚಕದಲ್ಲಿ ನೆರೆಯುವಾಗ ನಂದಗೋಪ ಯಶೋದಾದಿಗಳು ಅಲ್ಲಿಗೆ ಬಂದು ಯಾದವರೊಡನೆ ಸಂಗಮಿಸುತ್ತಾರೆ. ಕೃಷ್ಣ ಅವರನ್ನು ತುಂಬಾ ಮಮತೆಯಿಂದ ಕಂಡು ಮಾತಾಡಿಸಿದನೆಂದು ಭಾಗವತ ಹೇಳುತ್ತದೆ. ಕೃಷ್ಣನಿಗೆ ಬಿಡುವಿಲ್ಲದ ಕೆಲಸವಿದ್ದುದರಿಂದ ತನ್ನ ಬಾಲ್ಯದ ಜೊತೆಗಾರರನ್ನು ಸಾಕು ತಾಯಿ ತಂದೆಗಳನ್ನು ನೆನೆದು ಕೊರಗುವಷ್ಟು ಅವಕಾಶವಿರಲಿಲ್ಲವೆನ್ನಬೇಕು. ಮಹಾಕಾರ್ಯಗಳನ್ನು ಎಸಗಲು ಬಂದ ಮಹಾಪುರುಷರಿಗೆ ನಿರ್ವಿಕಾರ ಬುದ್ದಿ ಸಹಜ. ಹೀಗೆಯೇ ಸಮಂತ ಪಂಚಕದಲ್ಲಿ ಕುಂತಿ ಅಣ್ಣ ವಸುದೇವನನ್ನು ಕುರಿತು “ಕಷ್ಟ ದೆಸೆಯಲ್ಲಿರುವ ನೆಂಟರನ್ನು ಎಲ್ಲರೂ ಕೈಬಿಡುತ್ತಾರೆ. ನೀವು ನನ್ನ ವಿಚಾರವನ್ನೇ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ ಅಣ್ಣಯ್ಯ” ಎಂದಾಗ ವಸುದೇವ “ನಮಗೂ ಕಷ್ಟಗಳಿಲ್ಲದಿಲ್ಲ. ತಂಗಿ, ಶತ್ರುಗಳ ದೆಸೆಯಿಂದ ಯಾದವರೆಲ್ಲ ಚಲ್ಲಾಪಿಲ್ಲಿಯಾಗಿ ಚದುರಿ ಹೋದೆವು; ನೆಲೆ ಕಾಣುವುದೇ ಕಷ್ಟವಾಯಿತು ಎನ್ನುತ್ತಾನೆ”. ಈ ಯಾದವರನ್ನೆಲ್ಲ ಅವರ ಕಷ್ಟಗಳಿಂದ ತಪ್ಪಿಸಿ ಒಂದು ನೆಲೆಗೆ ಕೂಡಿಸಿ ಒಂದು ಭವ್ಯವಾದ ನಗರದಲ್ಲಿ ನೆಲೆಸುವಂತೆ ಮಾಡಿದವ ಕೃಷ್ಣ. ಈ ಮಹತ್ಕಾರ್ಯದಲ್ಲಿ ಮಗ್ನನಾದ ಆತ ತನ್ನ ಸಾಕು ನೆಲವನ್ನು ಮನಸ್ಸಿಗೆ ಅಷ್ಟಾಗಿ ಹಚ್ಚಿಕೊಳ್ಳದಿದ್ದುದು ಸಹಜವೇ ಎನಿಸುತ್ತದೆ. ಕೃಷ್ಣ ದ್ವಾರಕೆಯಲ್ಲಿ ರುಕ್ಮಣಿಯ ಜೊತೆಗೆ ಸತ್ಯಭಾಮೆ, ಜಾಂಬವತಿ, ಕಾಲಿಂದಿ, ಮಿತ್ರವಿಂದೇ, ಸತ್ಯೇ, ಭದ್ರೇ, ಲಕ್ಷ್ಮಣೀ ಎಂಬ ಏಳು ಜನ ರಾಜಕನ್ಯೆಯರನ್ನು ವೀರಶುಲ್ಕವಾಗಿಯೇ ಜಯಿಸಿ ಮದುವೆಯಾಗುತ್ತಾನೆ. ಮುರನರಕಾದಿಗಳನ್ನು ಕೊಂದು ನರಕನ ಸೆರೆಯಲ್ಲಿದ್ದ ಹದಿನಾರು ಸಾವಿರ ರಾಜಕನ್ಯೆಯರನ್ನು ಅವರ ಇಷ್ಟದಂತೆ ಮದುವೆಯಾಗುತ್ತಾನೆ. ಇವರೆಲ್ಲ ಕೃಷ್ಣನ ಸಾನಿಧ್ಯ, ಕೈಂಕಂiÀರ್iಗಳಿಗೆ ಆಸೆ ಪಟ್ಟು ಕೃತಾರ್ಥರಾದವರು. ಕಾಮಿಗಳನ್ನು ಪ್ರೇಮಿಗಳನ್ನಾಗಿ ಮಾಡುವ ದೈವೀ ಸಂಪತ್ತು ಕೃಷ್ಣನದು.

ಮಹಾಭಾರತದಲ್ಲಿ ಕೃಷ್ಣ ದ್ರೌಪದಿಯ ಸ್ವಯಂವರದಲ್ಲಿ ಮೊದಲು ಕಾಣಿಸಿಕೊಳ್ಳುತ್ತಾನೆ. ಇಂದ್ರಪ್ರಸ್ಥದಲ್ಲಿ ದ್ರೌಪದಿಯೊಡನೆ ಪಾಂಡವರು ನೆಲಸಲು ಸಹಾಯಕನಾಗುತ್ತಾನೆ. ಅರ್ಜುನನಿಂದ ಖಾಂಡವವನವನ್ನು ಸುಡಿಸುತ್ತಾನೆ. ಆಗ ಮಯನೆಂಬ ದಾನವಶಿಲ್ಪಿಯನ್ನು ಕಾಪಿಟ್ಟು ಆತನಿಂದ ದಿವ್ಯವಾದ ಸಭೆಯೊಂದನ್ನು ಪಾಂಡವರಿಗಾಗಿ ಕಟ್ಟಿಸಿಕೊಡುತ್ತಾನೆ. ತೀರ್ಥಯಾತ್ರೆಯನ್ನು ಮಾಡುತ್ತ ಪ್ರಭಾಸಕ್ಕೆ ಬಂದ ಅರ್ಜುನನ್ನು ಕಂಡು ದ್ವಾರಕೆಗೆ ಬರಮಾಡಿಕೊಂಡು, ತನ್ನ ಅಣ್ಣ ಬಲರಾಮ ದುರ್ಯೋಧನನಿಗೆ ಕೊಡಬೇಕಾಗಿದ್ದ ತಂಗಿ ಸುಭದ್ರೆಯನ್ನು ಅಪಹರಿಸಿಕೊಂಡು ಹೋಗುವಂತೆ ಅರ್ಜುನನನ್ನು ಪ್ರೇರಿಸುತ್ತಾನೆ. ಇವರು ಹೀಗೆ ಮದುವೆಯಾಗಿ ಹುಟ್ಟಿದ ಮಗ ಅಭಿಮನ್ಯು. ಈತನಿಂದಲೇ ಪಾಂಡವರ ಖ್ಯಾತಿ ಮುಂದೆ ಬೆಳೆಯುವಂತಾದುದು. ಕೃಷ್ಣ ಧರ್ಮರಾಯನನ್ನು ರಾಜಸೂಯ ಯಾಗವನ್ನು ನಡೆಸುವಂತೆ ಪ್ರೇರಿಸಿ ಅದು ನಿರ್ವಿಘ್ನವಾಗಿ ನಡೆಯಲು ಭೀಮನಿಂದ ಜರಾಸಂಧನನ್ನು ಉಪಾಯವಾಗಿ ಕೊಲ್ಲಿಸುತ್ತಾನೆ. ರಾಜಸೂಯಯಾಗದಲ್ಲಿ ಆ ಕಾಲದ ಪ್ರಮುಖ ರಾಜರೆಲ್ಲರೆದುರು ಭೀಷ್ಮ ಕೃಷ್ಣನೇ ಅಗ್ರಪೂಜೆಗೆ ಅರ್ಹನೆಂದು ಉದ್ಘೋಷಿಸಲು ರುಕ್ಮಣೀ ವಂಚಿತನಾದ ಚೇದಿರಾಜ ಶಿಶುಪಾಲ ಪ್ರತಿಭಟಿಸಿ ಕೃಷ್ಣನನ್ನು ನಿಂದಿಸಿ ಅವನ ಚಕ್ರಕ್ಕೆ ಬಲಿಯಾಗುತ್ತಾನೆ. ರಾಜಸೂಯ ಯಾಗ ನಿರ್ವಿಘ್ನವಾಗಿ ನಡೆಯುತ್ತದೆ. ಅಗ್ರಪೂಜೆಯಿಂದ ಗರ್ವಿತನಾಗದೆ ಕೃಷ್ಣ ಸಹಜವಿನಯದಿಂದಲೇ ಅತಿಥಿಗಳನ್ನು ಆದರಿಸುತ್ತಾನೆ. ಮಯನಿರ್ಮಿತ ಸಭೆಯಲ್ಲಿ ದುರ್ಯೋಧನನ ನೀರಿರುವೆಡೆಯನ್ನು ನೆಲವೆಂದೂ ನೆಲವಿರುವೆಡೆಯನ್ನು ನೀರೆಂದೂ ಭ್ರಮಿಸಿ ಎಲ್ಲರ ನಗೆಗೀಡಾಗುತ್ತಾನೆ. ಇದು ಧರ್ಮರಾಯ ಜೂಜಾಟದಲ್ಲಿ ಸೋತು ತನ್ನ ಸರ್ವಸ್ವವನ್ನೂ ಕೌರವರಿಗೆ ಕಳೆದುಕೊಳ್ಳುವುದರಲ್ಲಿ ಮುಗಿಯುತ್ತದೆ. ಸೋತ ಪಾಂಡವರೆದುರು ದುಶ್ಯಾಸನ ದಾಸಿಯೆಂದು ದ್ರೌಪದಿಯ ಸೀರೆಯನ್ನೆಳೆದು ಮಾನ ತೆಗೆಯಲು ಹವಣಿಸುತ್ತಾನೆ. ಆಗ ಆಕೆ ಶ್ರೀಕೃಷ್ಣನನ್ನು ನೆನೆದು ಅಕ್ಷಯ ವಸ್ರ್ರಳಾಗುತ್ತಾಳೆ. ಈ ಪ್ರಸಂಗ ಮೂಲ ಭಾರತದಲ್ಲಿಲ್ಲವೆಂದು ವಿದ್ವಾಂಸರು ತೀರ್ಮಾನಿಸಿದ್ದರೂ ದ್ರೌಪದಿಯ “ಗೋವಿಂದ ಪುಂಡರೀಕಾಕ್ಷ ರಕ್ಷಮಾಂ ಶರಣಾಗತಾಂ ಎಂಬ ಮಾತು ಭಾರತೀಯರ ನಿತ್ಯ ಪ್ರಾರ್ಥನೆಯಲ್ಲಿ ಇಂದಿಗೂ ಅನುರಣಿತವಾಗುತ್ತಿದೆ. ಪಾಂಡವರು ಅರಣ್ಯಕ್ಕೆ ತೆರಳಿದಾಗ ಕೃಷ್ಣ ಅವರಲ್ಲಿಗೆ ಆಗಾಗ ಬಂದು ಸಂತೈಸುತ್ತಾನೆ. ದ್ರೌಪದಿಗೆ ದುರ್ವಾಸ ಮುನಿಯ ಆತಿಥ್ಯವನ್ನು ನಡೆಸಲು ಅಕ್ಷಯ ಪಾತ್ರೆ ದೊರೆತುದು ಇಂಥ ಒಂದು ಪ್ರಸಂಗದಲ್ಲಿ. ಅಜ್ಞಾತವಾಸದಲ್ಲಿದ್ದಾಗ ಗೋಗ್ರಹಣ ಮತ್ತು ಯುದ್ಧ ಮುಗಿದು ಅರ್ಜುನನ ಅಭಿಮನ್ಯುವಿಗೆ ವಿರಾಟನ ಮಗಳು ಉತ್ತರೆಯನ್ನು ತಂದುಕೊಂಡಾಗ ಕೃಷ್ಣ ಬಂದು ವಧೂವರರನ್ನು ಹರಸಿ ಹೋಗುತ್ತಾನೆ. ನ್ಯಾಯವಾಗಿ ಪಾಂಡವರಿಗೆ ಸಲ್ಲಬೇಕಾದ ರಾಜ್ಯದ ಪಾಲನ್ನು ಕೊಡದೆ, ದುರ್ಯೋಧನ ನಿರಾಕರಿಸಿ, ಉಭಯರೂ ಕಾಳಗಕ್ಕೆ ನಿಂತಾಗ ಕೃಷ್ಣ ರಾಯಭಾರಿಯಾಗಿ ಸಂಧಿ ಮಾಡಿಸಲು ಸಕಲ ಯತ್ನ ಮಾಡಿದ. ಅದು ಕೈಗೂಡದಿರಲು ಅವರವರ ಕೋರಿಕೆಯಂತೆ ಕೌರವನಿಗೆ ತನ್ನ ಸಕಲ ಸೈನ್ಯವನ್ನೂ ಅರ್ಜುನನಿಗೆ ನಿರಾಯುಧನಾಗಿ ಯುದ್ಧ ಮಾಡದ ತನ್ನನ್ನೂ ಕೊಟ್ಟುಕೊಂಡ. ಹೀಗೆ ಅರ್ಜುನನಿಗೆ ಸಾರಥಿಯಾಗಿ ಕೃಷ್ಣ ನಿಲ್ಲದಿದ್ದರೆ ಪಾಂಡವರು ಜಯ ಕಾಣುತ್ತಿರಲಿಲ್ಲ. ಕೌರವರು ಹತರಾಗುತ್ತಿರಲಿಲ್ಲ. ಯುದ್ಧದ ಪ್ರಾರಂಭದ ದಿನದಲ್ಲೇ ಅರ್ಜುನ ಸ್ವಜನವಧೆಗೆ ಅಂಜಿ ಶೋಕಾವಿಷ್ಟನಾಗಿ ಕರ್ತವ್ಯ ಮೂಢನಾಗಿರುವಾಗ ಗೀತೋಪದೇಶದಿಂದ ಆತನ ಮೋಹವನ್ನು ಹೋಗಲಾಡಿಸಿ ತಿಳಿಮೆಯನ್ನು ತರುತ್ತಾನೆ. ಪಾರ್ಥಸಾರಥಿ, ಗೀತಾಚಾರ್ಯ, ಕೃಷ್ಣ. ಕರ್ಣನಿಗೆ ತಾನು ಕುಂತಿಯ ಮಗನೆಂಬ ಅರಿವನ್ನು ಕೊಟ್ಟು ಪಾಂಡವರ ಕಡೆಗೆ ಸೆಳೆಯಲು ಪ್ರಯತ್ನಿಸಿ ವಿಫಲನಾಗಿ ಕುಂತಿಯ ಮೂಲಕ ಅರ್ಜುನ ಹೊರತು ಮಿಕ್ಕವರನ್ನು ಕೊಲ್ಲುವುದಿಲ್ಲವೆಂಬ ವರವನ್ನು ಕರ್ಣನಿಂದ ದೊರಕಿಸಿಕೊಳ್ಳುತ್ತಾನೆ. ಭೀಷ್ಮನ ಕೈಮೇಲಾಗಿ ಪಾಂಡವರಿಗೆ ಸೋಲು ಎನ್ನಿಸಿದಾಗ ತಾನೇ ತನ್ನ ಪ್ರತಿಜ್ಞೆಯನ್ನು ಮರೆತು ಭೀಷ್ಮನ ಮೇಲೆ ಕೈಯೆತ್ತಲು ಹಿಂಜರಿಯುವುದಿಲ್ಲ. ಆ ದೃಶ್ಯವನ್ನು ಭೀಷ್ಮ ತನ್ನ ಅಂತ್ಯಕಾಲದಲ್ಲಿ ಬಹು ಮಮತೆಯಿಂದ ನೆನೆಯುತ್ತಾನೆ. ಭಗದತ್ತ ತನ್ನ ಅಜೇಯನಾದ ಶಕ್ತ್ಯಾಯುಧವನ್ನು ಅರ್ಜುನನ ಮೇಲೆ ಪ್ರಯೋಗಿಸಿದಾಗ ಅದನ್ನು ಕೃಷ್ಣ ತಾನೇ ಧರಿಸಿ ಪಾರ್ಥನನ್ನು ಕಾಪಾಡುತ್ತಾನೆ. ಜಯದ್ರಥ, ದ್ರೋಣ, ಕರ್ಣ, ದುರ್ಯೋಧನ-ಇವರ ಸಂಹಾರದಲ್ಲಿ ವಿಷಮ ಸಂದರ್ಭವೊದಗಿದಾಗಲೆಲ್ಲ ತಕ್ಕ ಉಪಾಯಗಳನ್ನು ಸೂಚಿಸಿ ಪಾಂಡವರನ್ನು ಗೆಲ್ಲಿಸುತ್ತಾನೆ. ಈ ಉಪಾಯಗಳ ನೀತಿಯನ್ನು ಕುರಿತು ಕೃಷ್ಣನನ್ನು ದೂರುವುದುಂಟು. ಆದರೆ ಕೌರವರು ಗೆದ್ದು ಪಾಂಡವರು ಸೋಲುವ ಹಾಗಾದರೆ ಆಗ ಅಧರ್ಮಗಳೇ ಗೆದ್ದು ಸತ್ಯವಂತರು ಸೋಲುವುದಾಗುತ್ತಿತ್ತು; ಧರ್ಮವನ್ನು ದೃಢವಾಗಿ ನೆಲೆಗೊಳಿಸುವುದಕ್ಕೆ ಅವತರಿಸಿದ ಕೃಷ್ಣನ ಜನ್ಮವೇ ವಿಫಲವಾಗುತ್ತಿತ್ತು. ಭೂಭಾರವಿಳಿಯುತ್ತಿರಲಿಲ್ಲ. ಏರಿನಲ್ಲಿ ನೇರಹಾದಿ ಲೇಸೆನಿಸದು; ಕೊಂಕು ಕೊಂಕಾಗಿ ಹೋಗುವುದರಿಂದ ಸುಲಭವಾಗಿ ಕೊನೆಮುಟ್ಟಬಹುದು. ಮಹಾಭಾರತದ ಯುದ್ಧದಲ್ಲಿ ಕೃಷ್ಣನ ನಡವಳಿಕೆಗಳೂ ಇಂಥವು. ಯುದ್ಧದ ಕೊನೆಯಲ್ಲಿ ಕೃಷ್ಣ ಧರ್ಮರಾಯನನ್ನು ಕರೆತಂದು ಧೃತರಾಷ್ಟ್ರನ ಕಾಲಿಗೆರಗಿಸಿ ಸಾಂತ್ವ ವಚನಗಳನ್ನಾಡುತ್ತಾನೆ. ವ್ಯಾಸನೊಂದಿಗೆ ತಾನೂ ಸೇರಿ ಗಾಂಧಾರಿ ಮೊದಲಾದ ಸ್ತ್ರೀಯರನ್ನೂ ಸಂತೈಸುತ್ತಾನೆ. ಅಂಬುಗಳ ಮೇಲೆ ಮಲಗಿದ್ದ ಭೀಷ್ಮನ ಕೈಯಲ್ಲಿ ಸಕಲ ನೀತಿಗಳನ್ನೂ ಕೇಳಿ ತಿಳಿದುಕೊಳ್ಳಲು ಧರ್ಮರಾಯನನ್ನು ಕಳಿಸುತ್ತಾನೆ. ಸಾಯುವ ವೇಳೆಗೆ ಭೀಷ್ಮನ ಬಳಿಗೆ ಹೋಗಿ ಆತನಿಗೆ ಬಹು ಹರ್ಷವನ್ನು ತರುತ್ತಾನೆ. ಕೃಷ್ಣನ ಅನುಜ್ಞೆಯನ್ನು ಪಡೆದೇ ಭೀಷ್ಮ ದಿವಂಗತನಾಗುವುದು. ಅಂತ್ಯಕಾಲದಲ್ಲಿ ಶ್ರೀಕೃಷ್ಣನನ್ನು ಕುರಿತು ಭೀಷ್ಮನ ಸ್ತೋತ್ರ ಬಹು ರಮಣೀಯವಾಗಿದೆ. ಬಂಧುಗಳ ಮರಣದಿಂದಲೂ ಯುದ್ಧದ ಪಾಪಭೀತಿಯಿಂದಲೂ ಕಂಗೆಟ್ಟು ಕುಸಿದು ಕುಳಿತ ಯುಧಿಷ್ಠಿರ ವ್ಯಾಸನ ಪ್ರೇರಣೆಯಿಂದ ಪ್ರಾಯಶ್ಚಿತ್ತ ರೂಪವಾದ ಅಶ್ವಮೇಧಯಾಗಕ್ಕೆ ತೊಡಗಲು ಶ್ರೀಕೃಷ್ಣ ಅದರಲ್ಲಿ ಸಂತೋಷದಿಂದ ಪಾಲುಗೊಳ್ಳುತ್ತಾನೆ. ಅಶ್ವತ್ಥಾಮನ ನಾರಾಯಣಾಸ್ತ್ರದ ವಿಪತ್ತಿನಿಂದ ಉತ್ತರೆಯ ಗರ್ಭವನ್ನು ಕಾಪಾಡಿ ಪಾಂಡವರ ಸಂತತಿ ಕೊನೆಗೊಳ್ಳದಂತೆ ಮಾಡುತ್ತಾನೆ. ಪಾಂಡವರೊಡನೆ ಕೆಲಕಾಲ ಸುಖವಾಗಿದ್ದು ದ್ವಾರಕೆಗೆ ಮರಳುತ್ತಾನೆ.

ರಾಮಕೃಷ್ಣ ಬಾಹುಪಾಲಿತವಾದ ದ್ವಾರಕೆ ನಿಷ್ಕಂಟಕವಾಗಿ ಸುಖ ಸಮೃದ್ಧಿಗಳಿಂದ ತುಳುಕಾಡುತ್ತಿತ್ತು. ಕೃಷ್ಣ ಅದನ್ನು ಬಿಟ್ಟು ಹೊರಟು ದೂರದಲ್ಲಿದ್ದಾಗಲೆಲ್ಲ ಅದಕ್ಕೆ ವಿಪತ್ತು ಕಾದಿರುತ್ತಿತ್ತು. ರಾಜಸೂಯಕ್ಕೆ ಆತ ಬಂದಾಗ ರುಕ್ಮಿಣಿಯ ಅಣ್ಣ ರುಕ್ಮಿಯ ಸ್ನೇಹಿತ ಸಾಲ್ವನೆಂಬ ಪ್ರಬಲನಾದ ಅರಸ ಸೌಭವೆಂಬ ಆಕಾಶಪುರಿಯಲ್ಲಿ ಕುಳಿತು ದ್ವಾರಕೆಯ ಮೇಲೆ ದಾಳಿಯಿಟ್ಟು ವಸುದೇವ ಪ್ರದ್ಯುಮ್ನಾದಿಗಳನ್ನು ಘಾತಿಸಿದ. ಆಗ ಕೃಷ್ಣನೇ ಇಂದ್ರಪ್ರಸ್ಥದಿಂದ ಹೊರಟು ಬಂದು ಆತನನ್ನೂ ಆತನಿಗೆ ಶಿವನ ಪ್ರಸಾದದಿಂದ ಮಯನ ಮೂಲಕ ಪ್ರಾಪ್ತವಾದ ಆಕಾಶಪುರಿಯನ್ನೂ ನಾಶಪಡಿಸಬೇಕಾಯಿತು. ಮತ್ತೊಮ್ಮೆ ಹಸ್ತಿನಾವತಿಯಲ್ಲಿ ಹೀಗೆಯೇ ಪ್ರವಾಸವಿದ್ದಾಗ ಶ್ಯಮಂತಕ ಮಣಿಯ ನಿಮಿತ್ತವಾಗಿ ದ್ವಾರಕೆಯಲ್ಲಿ ಸತ್ಯಭಾಮೆಯ ತಂದೆ ಸತ್ರಾಜಿತುವಿನ ಕೊಲೆ ನಡೆಯಿತು. ಅಳುತ್ತ ಬಂದ ಸತ್ಯಭಾಮೆಯ ಸಂಗಡ ಹೊರಟು ದುಷ್ಟರನ್ನು ಶಿಕ್ಷಿಸಬೇಕಾಯಿತು, ಶ್ರೀಕೃಷ್ಣ. ತಾನೇ ಅವತಾರಪುರುಷ ವಾಸುದೇವನೆಂದು ಕೃಷ್ಣನೊಡನೆ ಸ್ಫರ್ಧಿಸಹೊರಟ ಪೌಂಡ್ರಕನನ್ನೂ ಆತನ ಮಿತ್ರ ಕಾಶೀರಾಜನನ್ನೂ ಕೃಷ್ಣ ಸಂಹರಿಸಿದ. ಬಲರಾಮನಿಂದ ದಂತವಕ್ರವಿಡೂರಥರು ಮಡಿದರು. ಭಾರತಯುದ್ಧದಲ್ಲಿ ಅನೇಕ ಬಲಿಷ್ಠರೂ ಮದಾಂಧರೂ ಆದ ಕ್ಷತ್ರಿಯರ ನಾಶವಾಗಿ ಭೂಭಾರವಿಳಿದು ಶ್ರೀಕೃಷ್ಣನ ಅವತಾರದ ಕೆಲಸ ಮುಕ್ಕಾಲು ಪಾಲು ಕೊನೆಗೊಂಡಿತು. ತನ್ನ ಮಗ ಪ್ರದ್ಯುಮ್ಮನಿಗೆ ರುಕ್ಮಿಯ ಮಗಳನ್ನೇ ತಂದುಕೊಂಡು ಮದುವೆ ಮಾಡಿದ್ದರಿಂದ ಆ ಮನಸ್ತಾಪವೂ ಶಾಂತವಾಗಿ ರುಕ್ಮಣಿ ಸಂತುಷ್ಟಳಾಗಿದ್ದಳು. ಇಂದ್ರನೊಡನೆ ಹೋರಾಡಿ ಪಾರಿಜಾತವೃಕ್ಷವನ್ನು ತಂದು ಸತ್ಯಭಾಮೆಗೆ ಕೊಟ್ಟದ್ದರಿಂದ ಆಕೆ ಪ್ರಸನ್ನóಳಾಗಿದ್ದಳು. ತನ್ನ ಮಡದಿಯರಲ್ಲಿ ಯಾವಳೂ ತನ್ನ ವಿರಹವನ್ನು ಅನುಭವಿಸದಂತೆ ಕೊರೆಯಾಗದ ತನ್ನ ಮಮತೆಯನ್ನು ತನ್ನ ಯೋಗೈಶ್ವರ್ಯದಿಂದ ತೋರುತ್ತ ಕೃಷ್ಣ ಸುಖವಾಗಿ ದ್ವಾರಕೆಯಲ್ಲಿ ಇದ್ದ. ಕಾಲಕ್ರಮದಲ್ಲಿ ಪ್ರದ್ಯುಮ್ಮನ ಮಗ ಅನಿರುದ್ಧ ತನ್ನಲ್ಲಿ ಅನುರಕ್ತಳಾದ ಬಾಣಾಸುರನ ಮಗಳು ಉಷೆಯನ್ನು ವರಿಸಿದ. ಬಾಣಾಸುರನನ್ನು ಸ್ವಲ್ಪ ಕಷ್ಟದಿಂದಲೇ ಜಯಿಸಿ ಕೃಷ್ಣ ಉಷಾಪರಿಣಯವನ್ನು ಸಾಧಿಸಬೇಕಾಯಿತು. ಹೀಗೆ ಶ್ರೀಕೃಷ್ಣ ತನ್ನ ಅಪಾರ ಸಂಸಾರವನ್ನು ಯಾರಿಗೂ ಕೊರಗು ತಟ್ಟದಂತೆ ಒಂದು ನೆಲೆಗೆ ಮುಟ್ಟಿಸಿದ. ಶತ್ರುಬಾಧೆಯಿಂದ ಪಾರಾದ ದ್ವಾರಕೆ ತನ್ನ ಈ ನೆಮ್ಮದಿಯ ದೆಸೆಯಿಂದಲೇ ದುರ್ವಿನೀತರೂ ವಿಷಯಾಸಕ್ತರೂ ಆದ ಸ್ವಜನರಿಂದಲೇ ಬಾಧೆಗೀಡಾಯಿತು. ಸಾಮಾನ್ಯ ಜನ ಸಂತೋಷದಿಂದಿದ್ದರೂ ಕೃಷ್ಣ ನೆಮ್ಮದಿಯಿಂದ ಇದ್ದನೆಂದು ಹೇಳುವಂತಿರಲಿಲ್ಲ. ಕೃಷ್ಣನು ದ್ವಾರಕ ದಿಂದ ಹೊರಟಾಗ ಅವನಿಗೆ 45 ವರ್ಷಗಳಾಗಿದ್ದವು. ಶಾಂತಿಪರ್ವದ 81ನೆಯ ಅಧ್ಯಾಯದಲ್ಲಿ ಆತ ನಾರದರೊಡನೆ ತನ್ನ ಸು:ಖದು:ಖಗಳನ್ನು ತೋಡಿಕೊಂಡ ಪ್ರಕರಣ ಸ್ವಾರಸ್ಯವಾಗಿದೆ. ತನ್ನನ್ನು ಕಾಣಲು ಬಂದ ನಾರದನಿಗೆ ಕೃಷ್ಣ ಹೇಳುತ್ತಾನೆ: ‘ನಾನು ಒಡೆಯ ಎನ್ನಿಸಿಕೊಂಡು ಈ ನನ್ನವರಿಗೆ ಆಳಾಗಿ ದುಡಿಯುತ್ತಿದ್ದೇನೆ. ನನ್ನ ಬೋಗ ಯಾವುದು ಗೊತ್ತೆ, ಅವರ ಬೈಗುಳವನ್ನು ತಿನ್ನುವುದು, ಇಲ್ಲ ಅಹವಾಲುಗಳನ್ನು ಕೇಳುವುದು. ಅವರ ಕಠಿಣ ಮಾತುಗಳು ನನ್ನ ಎದೆಯನ್ನು ಕೊರೆದು ಕಿಡಿಕಾರಿಸುತ್ತಿತ್ತು. ಅಣ್ಣ ಬಲರಾಮನಿಗೆ ತನ್ನ ತೋಳಬಲ ಮತ್ತು ಮದ್ಯಗಳನ್ನು ಬಿಟ್ಟರೆ ಮಾತೇ ಇಲ್ಲ. ತಮ್ಮನಾದ ಗದ ಒಬ್ಬ ಶಿಸ್ತುಗಾರ ಪುಟ್ಟಸ್ವಾಮಿ, ಆತನ ಸೂಕ್ಷ್ಮ ನಸನಸೆ ಹೇಳತೀರದು. ನನ್ನ ಮಗ ಪ್ರದ್ಯುಮ್ನನಿಗೆ ತನ್ನ ಮುಖ ನೋಡಿಕೊಂಡಷ್ಟೂ ತೃಪ್ತಿಯೇ ಇಲ್ಲ. ನನ್ನ ಪಾಡನ್ನು ಕೇಳುವವರೇ ಇಲ್ಲ. ಅಹುಕನೂ ಅಕ್ರೂರನೂ ಯಾವಾಗಲೂ ಜಗಳವಾಡುತ್ತಲೇ ಇರುತ್ತಾರೆ. ಅಣ್ಣ ತಮ್ಮಂದಿರಿಬ್ಬರೂ ಜೂಜಾಡುತ್ತಿರುವಾಗ ಒಬ್ಬ ಗೆಲ್ಲಲೆಂದೂ ಮತ್ತೊಬ್ಬ ಸೋಲದಿರಲೆಂದೂ ಹರಸಿಕೊಳ್ಳುವ ತಾಯಿಯ ಸ್ಥಿತಿ ನನಗೆ ಬಂದಿದೆ. ಅವರಿಲ್ಲದೆ ನಾನು ಬದುಕಲಾರೆ; ಅವರಿದ್ದರೆ ಬದುಕೇ ಭಾರ. ಏನು ಮಾಡಲಯ್ಯ?’ ಕೃಷ್ಣನ ಈ ಮಾತಿಗೆ ನಾರದನ ಉತ್ತರ ಹೀಗಿದೆ: ‘ನಿನ್ನ ಪಾಡು ಹೊರಗಿನಿಂದ ಬಂದದ್ದಲ್ಲ; ನೀನೇ ಬರೆಸಿಕೊಂಡದ್ದು. ಮುದಿಯ ಉಗ್ರಸೇನನಿಗೆ ಪಟ್ಟಗಟ್ಟುವುದಕ್ಕೆ ಬದಲು ನೀನೇ ಏಕೆ ಸಿಂಹಾಸನವೇರಬಾರದಾಗಿತ್ತು? ಏಕೆ ಹಾಗೆ ಹೊರಗೆ ನಿಂತೆ? ಈಗ ತಾಳಿಕೊಳ್ಳುವುದು ಒಂದೇ ಉಪಾಯ. ಬೈಗುಳಕ್ಕೆ ಮಿದುಮಾತು, ಕದಿಯ ಬಂದವನಿಗೆ ಕೊಟ್ಟು ಕಳುಹಿಸುವುದು-ನಂಟರ ಹತ್ತಿರ ನಡೆದುಕೊಳ್ಳಬೇಕಾದ ಉಪಾಯ ಇದು. ಔದಾರ್ಯವಿಲ್ಲದೆ, ಸಂತತವಾದ ಸ್ವಾರ್ಥ ತ್ಯಾಗವಿಲ್ಲದೆ, ತಾಳ್ಮೆಯ ಧೀಮಂತಿಕೆ ಇಲ್ಲದೆ, ಆಪ್ತ ಸಹಾಯವಿಲ್ಲದೆ, ಇರುವವ ಇಂಥ ದೊಡ್ಡ ಕುಲವನ್ನೂ ನೀನು ಕೈಗೊಂಡಿರುವ ಮಹತ್ಕಾರ್ಯಗಳನ್ನೂ ನಿರ್ವಹಿಸುವುದು ಕಷ್ಟ.. ಭೇದದಿಂದ ಸಂಘ ಒಡೆದು ಹೋಗುತ್ತದೆ. ನೀನು ಸಂಘದ ತಲೆಯವ. ಇದು ಒಡೆದು ಹೋಗದಂತೆ ನಡದುಕೊ. ಅಷ್ಟಕ್ಕೂ ನಿನಗೆ ಬುದ್ದಿ ಹೇಳತಕ್ಕವನು ನಾನೇ! ನೀನು ನಗುತ್ತಿದ್ದೀಯೇ. ಇದೆಲ್ಲ ನಿನಗೆ ಗೊತ್ತಿಲ್ಲದೆ ಇಲ್ಲ, ಶಿಷ್ಯನಿಂದಲೇ ಗುರು ಉಪದೇಶ ಪಡೆಯುವ ಹವಣು, ಇದು.’ ಇದರಿಂದ ಯಾದವರೂ ಸಹ ಎಂಥ ಗುಣಲಕ್ಷಣದವರು ಎಂಬುದು ಗೊತ್ತಾಗುತ್ತದೆ. ಕೃಷ್ಣನ ತಾಳ್ಮೆ ಕೂಡ ಇವರ ವಿಷಯದಲ್ಲಿ ಕೊನೆಮುಟ್ಟಿತು. ದ್ವಾರಕೆಯಲ್ಲಿ ಮಹೋತ್ಪಾತ ತೋರಿದಾಗ ಪೀಡಾ ಪರಿಹಾರಾರ್ಥವಾಗಿ ಪ್ರಭಾಸ ಕ್ಷೇತ್ರಕ್ಕೆ ಯಾದವ ಪ್ರಮುಖರೆಲ್ಲ ಹೊರಡುತ್ತಾರೆ. ಅಲ್ಲಿ ಅನ್ನಪಾನಾದಿಗಳಲ್ಲಿ ಮಗ್ನರಾಗಿ ಮತ್ತಿನಿಂದ ಮತಿಗೆಟ್ಟು ಒಬ್ಬರಿಗೊಬ್ಬರು ಹೊಡೆದಾಡಿ ಮಡಿಯುತ್ತಾರೆ; ಕೃಷ್ಣನ ಮೇಲೂ ಅಂದು ಕೈಯೆತ್ತಲು ಹಿಂಜರಿಯುವುದಿಲ್ಲ. ಆತನೂ ಕುಪಿತನಾಗಿ ಕೈಗೆ ಸಿಕ್ಕಿದವರನ್ನು ಹೊಡೆದು ಕೊಲ್ಲುತ್ತಾನೆ. ಬಲರಾಮನೂ ಈ ಹತ್ಯೆಯಲ್ಲಿ ಪಾಲುಗೊಳ್ಳುತ್ತಾನೆ. ಕೊನೆಗೆ ಉಳಿದವರು ಬಲರಾಮ, ಕೃಷ್ಣ, ಆತನ ಸಾರಥಿ ದಾರುಕ. ಬಲರಾಮ ಸಮುದ್ರವನ್ನು ಹೊಗುತ್ತಾನೆ. ಕೃಷ್ಣ ಕಾಡಿನೊಳಕ್ಕೆ ಹೋಗಿ ಅಲ್ಲಿ ಯೋಗದಲ್ಲಿ ಮಲಗುತ್ತಾನೆ. ಆತನ ಕಾಲವನ್ನು ಮೃಗವೆಂದು ಭಾವಿಸಿ ಜರನೆಂಬ ಬೇಡ ಅಂಬಿನಿಂದ ಹೊಡೆಯುತ್ತಾನೆ. ಕೃಷ್ಣ ದಾರುಕನೊಂದಿಗೆ ಅರ್ಜುನನನ್ನು ಬರಮಾಡಿಕೊಂಡು, ವಜ್ರನೆಂಬ ಯದುಬಾಲಕನೊಡನೆ ಎಲ್ಲರೂ ದ್ವಾರಕೆಯನ್ನು ಬಿಟ್ಟು ಹೊರಡುವಂತೆ ಹೇಳಿಕಳಿಸಿ, ತಾನು ಯೋಗದಿಂದ ಪ್ರೇಯಸೀ ಸರ್ವನೇತ್ರಾಣಾಂ ಎಂದು ಭಾಗವತಕಾರರು ವರ್ಣಿಸುವ ತನ್ನ ಕಳೇಬರವನ್ನು ತ್ಯಜಿಸುತ್ತಾನೆ.

ಇದು ಐತಿಹಾಸಿಕವೆಂದು ಹೇಳಬಹುದಾದ ಶ್ರೀಕೃಷ್ಣ ಚರಿತೆ. ಆದರೆ ಮಹಾಪ್ರಾಜ್ಞನಾದ ಭೀಷ್ಮನಿಂದ ಪೂಜಿತನಾದ ಶ್ರೀಕೃಷ್ಣನನ್ನು ಬರಿ ಐತಿಹಾಸಿಕ ಮಹಾಪುರುಷನನ್ನಾಗಿ ಭಾವಿಸಿದರೆ ನಮಗೆ ನಾವೇ ಅಪಚಾರಮಾಡಿಕೊಂಡಂತಾಗುತ್ತದೆ. ತನ್ನ ಕಾಲದಲ್ಲೇ ಆತ ದೇವರೆಂದು ಪರಿಗಣಿತನಾಗಿದ್ದನೆಂಬ ಅಂಶ ಆತನಿಗೆ ರಾಜಸೂಯಯಾಗದಲ್ಲಿ ಸಂದ ಅಗ್ರಪೂಜೆಯಿಂದ ವಿದಿತವಾಗುತ್ತದೆ. ಈ ದಿವ್ಯ ಪುರುಷನೊಡನೆ ಆ ಕಾಲದ ಎಲ್ಲ ಜನರೂ ಒಂದಿಲ್ಲೊಂದು ತೆರದಲ್ಲಿ ಸಂಬಂಧವನ್ನು ಕಲ್ಪಿಸಿಕೊಂಡಿದ್ದರು. ‘ಗೋಪಿಗಳು ಕಾಮದಿಂದ, ಕಂಸ ಭಯದಿಂದ, ಶಿಶುಪಾಲ ಮೊದಲಾದವರು ದ್ವೇಷದಿಂದ, ವೃಷ್ಣಿಗಳು ಬಾಂಧವ್ಯದಿಂದ, ಪಾಂಡವರು ಸಖ್ಯದಿಂದ, ಮಿಕ್ಕ ಸಾಧುಸಂತರಾದಿಯಾಗಿ ಸಮಸ್ತರೂ ಭಕ್ತಿಯಿಂದ ಭಗವಾನ್ ಶ್ರೀಕೃಷ್ಣನಿಗೆ ಸಂಬಂಧರಾಗಿದ್ದರು-ಎನ್ನುತ್ತದೆ ಭಾಗವತ; ‘ಸಕಲ ಸುಂದರ ಸನ್ನಿವೇಶವಾದ ತನುವನ್ನು ತಳೆದು, ಸುಮಂಗಲ ಕಾರ್ಯಗಳನ್ನು ಭೂಮಿಯಲ್ಲಿ ನಡೆಸಿ, ತನ್ನಿಷ್ಟಾರ್ಥವನ್ನು ಪೂರೈಸಿಕೊಂಡು, ತಾನಲ್ಲದೆ ಇತರರನ್ನೂ ನಿಮಿತ್ತವಾಗಿ ಮಾಡಿಕೊಂಡು, ರಾಜರನ್ನೆಲ್ಲ ಧ್ವಂಸಮಾಡಿ ಭೂಭಾರವನ್ನಿಳಿಸಿದನು, ಸ್ವಾಮಿ-ಎಂದೂ ಕೊಂಡಾಡುತ್ತದೆ.

ಇಂಥ ರೂಪಶಾಲಿಯೂ ಸಂಯಮಿಶ್ರೇಷ್ಠನೂ ತತ್ತ್ವಜಿಜ್ಜಾಸುವೂ ಜಗನ್ಮಂಗಲವಿದನೂ ಜಗತ್ ಕಲ್ಯಾಣಕಾರನೂ ಆದ ಶ್ರೀಕೃಷ್ಣಸ್ವಾಮಿಯ ಪೂಜೆ ಬಹುಕಾಲದ ಹಿಂದೆಯೇ ಭಾರತದಲ್ಲಿ ಪ್ರವೃತ್ತವಾಯಿತು. ಕ್ರಿ.ಪೂ.400 ವೇಳೆಗೆಯೇ ಮಥುರಾ ನಗರದಲ್ಲಿ ಪಾಂಡವಸಖ ಕೃಷ್ಣ ಪೂಜೆಗೊಳ್ಳುತ್ತಿದ್ದನೆಂದು ಮೆಗಾಸ್ತನೀಸನಿಂದ ತಿಳಿದು ಬರುತ್ತದೆ. ಕ್ರಿಸ್ತಪೂರ್ವ 6ನೆಯ ಶತಮಾನದಿಂದ ಕೃಷ್ಣನಿಗೆ ಗುಡಿಗಳಾಗಿದ್ದವೆಂದು ಶಾಸನಗಳು ಗರುಡಗಂಬಾದಿ ಶಿಲ್ಪಗಳು ಘೋಷಿಸುತ್ತವೆ. ಕೃಷ್ಣ ಬಲರಾಮರು ದೇವತ್ತ್ವಕ್ಕೇರಿದ ಕ್ಷತ್ರಿಯ ವೀರರೆಂದು ಪಾಣಿನಿ ತನ್ನ ಸೂತ್ರಗಳ ಉದಾಹರಣೆಗಳಲ್ಲಿ ಭಾವಿಸಿದ್ದಾನೆ. ಪತಂಜಲಿಯ ಕಾಲಕ್ಕೆ ಇವರು ದೇವರೆಂಬ ವಿಷಯ ಸ್ಥಿರಪಟ್ಟು ಹೋಗಿತ್ತು. ಈಗಲೂ ಶ್ರೀಕೃಷ್ಣನನ್ನು ದೇವರ ಪೂರ್ಣ ಅವತಾರವೆಂದೇ ಭಾರತೀಯರು ನಂಬುತ್ತಾರೆ. ಕೃಷ್ಣನನ್ನು ಹಾಡಿ ಹೊಗಳದ ಸಾಧುಸಂತರಿಲ್ಲ. ಕವಿಗಳು ಎಲ್ಲ ಕಾಲದಲ್ಲೂ ಆತನ ವಿಷಯಕವಾದ ಕತೆಗಳನ್ನು ಕವಿತೆಗಳನ್ನೂ ರಚಿಸಿದ್ದಾರೆ. ರಚಿಸುತ್ತಲೂ ಇದ್ದಾರೆ. ಗಾನ ನೃತ್ಯಗಳಲ್ಲೂ ಕೃಷ್ಣನನ್ನು ಕೊಂಡಾಡದ ಕಲೆಗಾರರಿಲ್ಲ. ಕನ್ನಡನಾಡಿನ ದಾಸರು ಆತನ ನೆನಪನ್ನು ಮನೆಮನೆಗಳಿಗೆ ಕೊಂಡೊಯ್ದು ಭವತಾಪವನ್ನು ಹಿಂಗಿಸಿದ್ದಾರೆ. ಪ್ರೇಮವನ್ನೂ ಸಂತೋಷವನ್ನೂ ಬೆಳೆಸಿದ್ದಾರೆ. ಕೃಷ್ಣನ ನೇರವಾದ ಉಪದೇಶ ಮಹಾಭಾರತದಲ್ಲಿನ ಭಗವದ್ಗೀತೆಯ ಮತ್ತು ಅನುಗೀತೆಗಳಲ್ಲೂ ಭಾಗವತದ ಉದ್ಧವ ಕೃಷ್ಣಸಂವಾದದಲ್ಲೂ ದೊರೆಯುತ್ತದೆ. ಮತ ಪ್ರವರ್ತಕರಾದ ಆಚಾರ್ಯರೆಲ್ಲರೂ ಭಗವದ್ಗೀತೆಯ ಮೇಲೆ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಈಗಲೂ ಇದು ವಿದ್ವಾಂಸರಿಂದಲೂ ಜಿಜ್ಞಾಸುಗಳಿಂದಲೂ ವ್ಯಾಖ್ಯಾನವಾಗುತ್ತಲೇ ಇದೆ. ಭಗವದ್ಗೀತೆ (ನೋಡಿ- ಭಗವದ್ಗೀತೆ) ಶ್ರೀಕೃಷ್ಣ ಸ್ವಾನುಭವದಿಂದ ಹೇಳಿದ ಮಾತುಗಳಾಗಿವೆ. ಭಾರತಕ್ಕೆ ಆತ ಕೊಟ್ಟ ಕೊಡುಗೆ ಎಂದರೆ ಇಲ್ಲ ಮತಗಳನ್ನೂ ಗೌರವದಿಂದ ಕಾಣಬೇಕೆಂಬ ಮನೋವೃತ್ತಿ, ಸ್ವಾರ್ಥದೂರವೂ ಜ್ಞಾನಭಕ್ತಿಯುತವೂ ಶುದ್ಧಾಂತ:ಕರಣ ಪ್ರವೃತ್ತವೂ ಫಲಾಸಕ್ತಿರಹಿತವೂ ಆದ ಪ್ರಾಪ್ತ ಕರ್ತವ್ಯ ನಿರ್ವಹಣೆಯ ಬುದ್ಧಿ. ಅಲ್ಲದೆ ಅಂತಃಕರಣಕ್ಕೆ ಒಗ್ಗದೆ ಸುವಿಚಾರಕ್ಕೆ ಸಗ್ಗದೆ ಇರುವ, ಆದರೆ ಕಾಮಾತ್ಮರೂ ಅಲ್ಪಸುಖಾಪೇಕ್ಷಿಗಳೂ ಆದ ಸ್ವಾರ್ಥಿಗಳಿಗೆ ಮಾತ್ರ ಇಷ್ಟವಾಗುವ ಕುರುಡು ನಂಬಿಕೆ ಮತ್ತು ಆಚರಣೆಗಳ ತಿರಸ್ಕಾರ. ಅಧ್ಯಾತ್ಮ ಸಂಪನ್ನರಾದ ಜ್ಞಾನಿಗಳ ಮಾತಿಗೆ ಪುರಸ್ಕಾರ. ಸುವಿಚಾರಿತವೂ ಆಚರಣೀಯವೂ ಆದ ಆತ್ಮವೃದ್ಧಿಕರ ಉಪದೇಶವನ್ನು ಕೃಷ್ಣ ಸ್ವಾನುಭಾವದಿಂದ ನಿರೂಪಿಸಿರುವುದರಿಂದ ಭಗವದ್ಗೀತೆ ಎಂಥ ಸೂಕ್ಷ್ಮ, ತೀಕ್ಷ್ಣಮತಿಗೂ ಹಿಡಿಸುತ್ತದೆ. ಆತನ ಸ್ಮರಣೆಯಿಂದ ನಮಗೆ ಲಭಿಸುವುದು ಸೈರಣೆಯ ಹಾಗೂ ಪ್ರೇಮಲ ಕೋಮಲ ಸಂತುಷ್ಟಿಯ ಮನೋಭಾವ. ಆತನ ಉಪದೇಶ ಮಾಮನುಸ್ಮರ ಯುದ್ಧ್ಯ ಚ-ಪರಮಾತ್ಮನನ್ನು ಸಂತತವಾಗಿ ಸ್ಮರಣೆಯಲ್ಲಿಟ್ಟುಕೊಂಡು ವಿಗಜ್ವರನಾಗಿ ಮಾಡಬೇಕಾದುದನ್ನು ಅಳುಕದೆ ಮಾಡುತ್ತ ಈ ಬಾಳಿನಲ್ಲಿ ಏಗು-ಎಂಬುದು.

9. ಬುದ್ಧ ಅವತಾರ

ಬುದ್ಧ  ಅವತಾರ
ಬುದ್ಧ ಅವತಾರ

ವಿಷ್ಣುವಿನ ದಶಾವತಾರದಲ್ಲಿ ಬುದ್ಧನನ್ನು ಒಂಬತ್ತನೆಯ ಅವತಾರವೆಂದು ಪರಿಗಣಿಸಲಾಗಿದೆ.

ಬುದ್ಧ ಕ್ರಿ.ಪೂ.ಸು. 6ನೆಯ ಶತಮಾನ. ಬೌದ್ಧಧರ್ಮ ಸ್ಥಾಪಕ. ಬುದ್ಧ ಎಂಬ ಪದ ವ್ಯಕ್ತಿ ನಿರ್ದೇಶಕವಲ್ಲ. ಬುದ್ಧನೆಂದು ಪ್ರಸಿದ್ಧನಾಗಿರುವ ಈ ವ್ಯಕ್ತಿಗಿಂತ ತುಂಬ ಹಿಂದಿನಿಂದಲೂ ಈ ಪದದ ಬಳಕೆಯಿತ್ತು. ಬುದ್ಧ ಎಂದರೆ ತಿಳಿದವ, ಜ್ಞಾನಿ, ನಿದ್ದೆಯಿಂದ ಎಚ್ಚೆತ್ತವ ಎಂದರ್ಥ. ಬುದ್ಧ ಎಂಬುದು ಒಂದು ಸ್ಥಿತಿಯನ್ನು ಸೂಚಿಸುವ ಪದ, ಆಧ್ಯಾತ್ಮಿಕ ಜಾಗೃತಿ ಪಡೆದವನ ಸ್ಥಿತಿ ಇದರ ಲಕ್ಷ್ಯ.

ಆದರೆ ಇಲ್ಲಿ ಬೌದ್ಧರೆಂಬ ಜನರ ಆದಿಗುರು ಎನಿಸಿದ, ಸಂಪ್ರದಾಯ ಪ್ರವರ್ತಕನಾದ ವ್ಯಕ್ತಿಗೆ ಬುದ್ಧನೆಂಬ ಹೆಸರು ಸಾಮಾನ್ಯವಾಗಿ ರೂಢವಾಗಿದೆ. ಹಿಮಾಲಯದ ಪರಿಸರದಲ್ಲಿದ್ದ ಕೋಸಲ ರಾಜ್ಯಕ್ಕೆ ಸೇರಿದ ಶಾಕ್ಯ ಜನಪದದಲ್ಲಿ ರಾಜಕುಮಾರನಾಗಿ ಕ್ರಿ.ಪೂ.ಸು. ಆರನೆಯ ಶತಮಾನದ ಮಧ್ಯದಲ್ಲಿ ಹುಟ್ಟಿದ ಈ ವ್ಯಕ್ತಿ ತನ್ನ ಪ್ರಯತ್ನದಿಂದ, ತಪಸ್ಸಿನಿಂದ ದೇಶದಲ್ಲಿ ದೊಡ್ಡದೊಂದು ವಿಚಾರಕ್ರಾಂತಿಯನ್ನೇ ಉಂಟು ಮಾಡಿದ. ಈ ಕ್ರ್ರಾಂತಿ ಕಾಲಕ್ರಮದಲ್ಲಿ ಪ್ರಪಂಚಾದ್ಯಂತ ಧ್ವನಿತಗೊಂಡಿತು. ಈತನ ಮೊದಲ ಶಿಷ್ಯರು ಈತನನ್ನು ಬುದ್ಧನೆಂದು ಗೌರವದಿಂದ ಕರೆದರು. ಆ ಹೆಸರೇ ಇಂದಿಗೂ ಉಳಿದಿದೆ, ಜಗತ್ತಿನಲ್ಲೆಲ್ಲ ಪ್ರಸಿದ್ಧವಾಗಿದೆ. ಆದರೆ ಬೌದ್ಧರ ಪ್ರಕ್ರಿಯೆಯಲ್ಲಿ ಹಲವಾರು ಬುದ್ಧರ ಪ್ರಸ್ತಾಪವಿದೆ. ಯೇ ಚ ಬುದ್ಧಾ ಅತೀತಾ ಚ, ಯೇ ದ, ಬುದ್ಧಾ ಅನಾಗತಾ, ಪ್ರತ್ಯುತ್ಪನ್ನಾ ಚ ಯೇ ಬುದ್ಧಾ ಅಹಂ ವಂದಾಮಿ ಸಬ್ಬದಾ ಎಂದು ಎಂದು ನಿತ್ಯವೂ ಬೌದ್ಧರು ಹೇಳುವ ಪ್ರಾರ್ಥನೆ ಅತೀತರಾದ, ಅನಾಗತರಾದ, ಪ್ರತ್ಯುತ್ಪನ್ನರಾದ ಎಲ್ಲ ಬುದ್ಧರಿಗೂ ಸಲ್ಲುತ್ತದೆ. ಈಚಿನ ಮಾನುಷೀ ಬುದ್ಧನೂ ಸೇರಿ ಒಟ್ಟು ಇಪ್ಪತ್ತನಾಲ್ಕು ಬುದ್ಧರೆಂದು ವ್ಯವಹಾರವಿದೆ. ಈ ಕಲ್ಪಾಂತರದಲ್ಲೇ ಕಕುಸಂಧ ಕನಕ್ಬಮುನಿ (ಪಾಳಿಯಲ್ಲಿ ಕೋಣಾಗಮನ) ಕಸ್ಸಪ ಮತ್ತು ಗೌತಮರೆಂಬ ನಾಲ್ಕು ಬುದ್ಧರಿದ್ದರೆಂಬ ಕಲ್ಪನೆಯಿದೆ. ಗೌತಮಬುದ್ಧನನ್ನುಳಿದು ಇತರರು ಚಾರಿತ್ರಿಕ ವ್ಯಕ್ತಿಗಳೇ ಎಂಬುದು ಸ್ಪಷ್ಟವಾಗುವುದಿಲ್ಲ. ಕೋಣಾಗಮನ ಬುದ್ಧನ ಸ್ತೂಪವನ್ನು ಅಶೋಕ ಚಕ್ರವರ್ತಿ ಸಂದರ್ಶಿಸಿದ್ದನೆಂದು ಸ್ತಂಭಶಾಸನವೊಂದರಿಂದ ತಿಳಿದು ಬರುತ್ತದೆ. ಆದರೆ ಹೆಚ್ಚು ವಿವರಗಳು ಉಪಲಬ್ಧವಿಲ್ಲ.

ಈ ಬುದ್ಧನೇನೋ ನಿಸ್ಸಂದೇಹವಾಗಿ ಐತಿಹಾಸಿಕ ವ್ಯಕ್ತಿ. ಇದನ್ನು ಶಂಕಿಸಿರುವ ಪಾಶ್ಚಾತ್ಯ ಪಂಡಿತರೂ ಇದ್ದಾರೆ. ಎಮಿಲ್ ಸೆನಾರ್ಟ್ ಎಂಬ ಫ್ರೆಂಚ್ ವಿದ್ವಾಂಸ ಬುದ್ಧನೆಂಬ ವ್ಯಕ್ತಿ ನಿಜವಾಗಿ ಇರಲೇ ಇಲ್ಲವೆಂದೂ ಬುದ್ಧನ ಕಲ್ಪನೆ ಸೂರ್ಯನ ಸಾಂಕೇತಿಕ ಕಥೆಗೆ ಸಂಬಂಧಪಟ್ಟದ್ದೆಂದು ವಾದಿಸುತ್ತಾರೆ. ಆದಿತ್ಯ ಗೋತ್ರದ ಗೌತಮ (ಗೋ-ತಮ ಎಂದರೆ ಕತ್ತಲೆಯನ್ನು ಸೀಳುವವನು, ಸೂರ್ಯ) ಮಾಯಾ ದೇವಿಯ (ರಾತ್ರಿ) ಗರ್ಭದಿಂದ ಹೊರಬಂದೊಡನೆ ತಾಯಿ ತೀರಿಕೊಳ್ಳುವುದೂ ಕಾರ್ಮೋಡಗಳು ಮರೆಯಾಗುವಂತೆ) ಮಾರನನ್ನು (ಗುಡುಗು ಮಿಂಚುಗಳನ್ನು) ಗೆಲ್ಲುವುದೂ ಧರ್ಮಚಕ್ರ (ಹಗಲು ಉರುಳುವುದನ್ನು) ಪ್ರವರ್ತನ ಮಾಡುವುದೂ ಬರಿಯ ಸಾಂಕೇತಿಕ ಕಥನವೆಂದು ಇವರ ವಾದ. ಆದರೆ ಈ ವಾದದಲ್ಲಿ ಹುರುಳಿಲ್ಲ. ಇಂಥ ವಾದವನ್ನು ಯಾರಿಗೆ ಬೇಕಾದರೂ ಅನ್ವಯಿಸಿ ಅಸ್ತಿತ್ವ ನಿರಸನ ಮಾಡಬಹುದು. ಬುದ್ಧ ನಿಜವಾಗಿ ಇದ್ದನೆಂಬುದಕ್ಕೆ ಹಲವಾರು ಐತಿಹಾಸಿಕ ಆಧಾರಗಳುಂಟು.

ಬುದ್ಧನ ಜನ್ಮಸ್ಥಳ ಈಗ ನೇಪಾಳತರಾಯ್ ಎನಿಸಿಕೊಳ್ಳುವ ಪ್ರದೇಶ. ಉತ್ತರ ಪ್ರದೇಶದ ಮೇಲ್ಭಾಗದ ಅಂಚಿನಲ್ಲಿ ದಕ್ಷಿಣ ನೇಪಾಳಕ್ಕೆ ಸೇರಿದಂತಿರುವ ಈ ಸ್ಥಳ ಎರಡು ಸಾವಿರದ ಆರುನೂರು ವರ್ಷಗಳ ಹಿಂದೆ ಕೋಸಲ ರಾಜ್ಯಕ್ಕೆ ಸೇರಿತ್ತು. ಇಲ್ಲಿದ್ದ ಶಾಕ್ಯ ಕ್ಷತ್ರಿಯರಿಗೆ ಕಪಿಲವಸ್ತು ರಾಜಧಾನಿಯಾಗಿತ್ತು. ಇವರ ಜಾನಪದಕ್ಕೆ ಶುದ್ಧೋದನ ರಾಜ, ಇಕ್ಷ್ವಾಕು ವಂಶಕ್ಕೆ ಸೇರಿದ ಈ ರಾಜನದು ಆದಿತ್ಯ ಕುಲ, ಗೌತಮ ಗೋತ್ರ. ಶುದ್ಧೋದನನ ಹೆಂಡತಿ ಮಾಯಾದೇವಿ ದೇವದಹದ ಸುಪ್ರಬುದ್ಧನ ಮಗಳು. ಈಕೆ ಗರ್ಭತಳೆದು ಕಪಿಲವಸ್ತುವಿನಿಂದ ತನ್ನ ತೌರೂರಾದ ದೇವದಹಕ್ಕೆ ಹೊರಟಿದ್ದಾಗ ದಾರಿ ಮಧ್ಯ ಲುಂಬಿಣಿ ಎಂಬ ಉಪವನದಲ್ಲಿ ವಿಶ್ರಮಿಸಿ ಕೊಳ್ಳುತ್ತಿದ್ದಳಂತೆ. ಆಗ ಪ್ರಸವ ವೇದನೆ ಆರಂಭವಾಗಿ ಆಕೆ ಎದ್ದು ಅಶೋಕ ವೃಕ್ಷದ ರೆಂಬೆಯೊಂದನ್ನು ಹಿಡಿದು ನಿಂತಿದ್ದಾಗ ಗಂಡುಮಗುವೊಂದು ಜನಿಸಿತಂತೆ. ಆ ಮಗುವೇ ಮುಂದೆ ಬುದ್ಧನೆಂದು ಪ್ರಸಿದ್ಧನಾದುದು.

ಬುದ್ಧನ ಜನ್ಮ ಒದಗಿದ ಈ ಸ್ಥಳವನ್ನು ಪ್ರಾಕ್ತನಶಾಸ್ತ್ರಜ್ಞರು ಈಗ ನೇಪಾಳತರಾಯದ ರುಮಿನದೆಯ್ ಎಂದು ನಿರ್ದೇಶನ ಮಾಡಿದ್ದಾರೆ. ಇಲ್ಲಿ ಅಶೋಕನ ಸ್ತಂಭಶಾಸನ ದೊರೆತಿದೆ. ಇದರಲ್ಲಿ `ಹಿದ ಬುಧೇ ಜಾತೇ ಶಕ್ಯ ಮುನೀತಿ’ (ಇಲ್ಲಿ ಶಾಕ್ಯಮುನಿ ಬುದ್ಧ ಹುಟ್ಟಿದ) ಎಂಬ ಮಾತಿದೆ. ಅಂತೂ ಮಗು ಹುಟ್ಟದೊಡನೆ ಮಾಯಾದೇವಿ ತೀರಿಕೊಂಡಳು. ಮುಂದೆ ಮಗುವನ್ನು ಮಲತಾಯಿ ಮಹಾಪ್ರಜಾ ಪತಿ ಗೌತಮಿ ಸಾಕಿ ಬೆಳೆಸಿದಳು. ಈಕೆಯೂ ಮುಂದೆ ಬುದ್ಧನ ಸಂಘ ಸೇರಿದಳು. ಹುಟ್ಟಿದ ಮಗುವನ್ನು ಲಕ್ಷಣಜ್ಞರು ಪರಿಶೀಲಿಸಿದಾಗ ಮೂವತ್ತೆರಡು ಮಹಾ ವ್ಯಂಜನಗಳೂ ನೂರಾರು ಉಪವ್ಯಂಜನಗಳೂ ಇದ್ದವಂತೆ. ಅಸಿತ ಎಂಬ ಋಷಿ ಈ ಮಗುವನ್ನು ನೋಡಿ ಈತ ಮುಂದೆ ಚಕ್ರವರ್ತಿಯಾಗುತ್ತಾನೆ ಇಲ್ಲವೆ ಪರಿವ್ರಾಜಕನಾಗುತ್ತಾನೆ ಎಂದು ಭವಿಷ್ಯ ನುಡಿದನಂತೆ. ಸುತ್ತನಿಪಾತದಲ್ಲಿ “ವತ್ಥುಗಾಥಾ” ಎಂಬ ಪರಿಚ್ಛೇದ ಆತ ಈ ದಿವ್ಯ ಮಗುವನ್ನು ಸಂದರ್ಶಿಸಿದ ಸಂದರ್ಭವನ್ನು ರಸವತ್ತಾಗಿ ಬಣ್ಣಿಸುತ್ತದೆ. ಮಗುವಿಗೆ ಸಿದ್ಧಾರ್ಥ ಎಂದು ಹೆಸರಿಟ್ಟರು. ಗೌತಮ ವಂಶದ ಹೆಸರು; ಶಾಕ್ಯಪುತ್ರ ಎಂಬುದು ಕುಲನಾಮ.

ಎಳೆಯ ವಯಸ್ಸಿನಲ್ಲೇ ಬುದ್ಧನ ಅಲೌಕಿಕ ಪ್ರಸಕ್ತಿ ವ್ಯಕ್ತವಾಗಿತ್ತು. ಹುಡುಗನಾಗಿದ್ದ ಗೌತಮ ಒಮ್ಮೆ ಉತ್ಸವ ಸಂದರ್ಭದಲ್ಲಿ ಜಂಬೂವೃಕ್ಷದ ಅಡಿಯಲ್ಲಿ ಕುಳಿಸಿದ್ದವ ಹಾಗೆಯೇ ಸಮಾಧಿವಶನಾದ. ಇದನ್ನು ಕಂಡು ಕಾತರನಾದ ತಂದೆ ಮಗನಿಗೆ ಮದುವೆ ಮಾಡಿದರೆ ಸರಿ ಹೋದೀತೆಂದು ಬಗೆದು ಯಶೋಧರೆಯೆಂಬ ಸುಂದರಿಯನ್ನು ತಂದು ಮದುವೆ ಮಾಡಿದ. ಆಕೆಗೆ ಭದ್ದಾ ಕಚ್ಚಾನಾ, ಗೋಪಾ, ಬಿಂಬಾ, ಸುಭದ್ದಿಕಾ, ಯಶೋದಾ ಎಂದು ಮುಂತಾದ ಹೆಸರುಗಳಿದ್ದಿತೆಂದು ತಿಳಿದುಬರುತ್ತದೆ. ಆದರೆ ತ್ರಿಪಿಟಕ ಗ್ರಂಥಗಳಲ್ಲಿ ಬುದ್ಧನಿಗೆ ಮದುವೆಯಾಗಿದ್ದ ಉಲ್ಲೇಖವಿಲ್ಲ. ಬುದ್ಧನ ಬಾಳ ಕಥೆಗೆ ಮುಖ್ಯ ಆಕರಗಳಾದ ಜಾತಕ, ಮಹಾವಗ್ಗ ಇವು ಈಚಿನ ಕೃತಿಗಳು. ಅಶ್ವಘೋಷನ ಬುದ್ಧಚರಿತ ಮತ್ತು ಮಹಾಯಾನದವರ ಲಲಿತವಿಸ್ತರ ಎರಡೂ ಕಾವ್ಯಗಳಾದುದರಿಂದ ಇವುಗಳಲ್ಲಿ ಐತಿಹಾಸಿಕ ಸತ್ಯವನ್ನು ಅರಸಲು ಸಾಧ್ಯವಿಲ್ಲ.

ಸಿದ್ಧಾರ್ಥನಿಗೆ ಮದುವೆಯಾದಾಗ ಹದಿನಾರು ವರ್ಷಗಳೆಂದೂ ಮದುವೆಯಾದ ಹನ್ನೆರಡು ವರ್ಷಾನಂತರ ರಾಹುಲನೆಂಬ ಗಂಡುಮಗು ಹುಟ್ಟಿತೆಂದೂ ಕಥೆ ಹೇಳುತ್ತದೆ. ಈ ಕಾಲದಲ್ಲಿ ಕ್ರಮೇಣ ಸಿದ್ಧಾರ್ಥನಿಗೆ ವಿರಕ್ತಿ ಬೆಳೆಯುತ್ತಿದ್ದಿತು; ಜಗತ್ತಿನ ದುಃಖ ಹೃದಯವನ್ನು ಹಿಂಡುತ್ತಿದ್ದಿತು. ರಾಹುಲ ಹುಟ್ಟಿದ ಸುದ್ದಿ ಬಂದಾಗ ಸಿದ್ಧಾರ್ಥ ಅಯ್ಯೋ, ಇದೊಂದು ಬಂಧನ (ರಾಹುಲಂ) ಎಂದು ಬಿಸುಸುಯ್ದನಂತೆ. ಒಮ್ಮೆ ಈತ ರಥಾರೂಢನಾಗಿ ನಗರ ಪ್ರದಕ್ಷಿಣೆ ಹೋದಾಗ ಒಬ್ಬ ರೋಗಿ, ಒಬ್ಬ ವೃದ್ಧ, ಒಂದು ಹೆಣ ಇವನ್ನು ನೋಡಿ ಜೀವನದಲ್ಲಿ ತುಂಬಾ ಜುಗುಪ್ಸೆಪಟ್ಟ. ಇವನ್ನು ಬೌದ್ಧ ಪ್ರಕ್ರಿಯೆಯಲ್ಲಿ ತ್ರಿಲಕ್ಷಣಗಳೆಂದು ವ್ಯವಹರಿಸುತ್ತಾರೆ. ಅಂದೇ ರಾತ್ರಿ ಎಲ್ಲರೂ ಮಲಗಿದ್ದಾಗ ಸಿದ್ಧಾರ್ಥ ತನ್ನ ನೆಚ್ಚಿನ ಬಂಟ ಚೆನ್ನನೊಂದಿಗೆ ತನ್ನ ಕುದುರೆಯಾದ ಕಂಧಕವನ್ನೇರಿ ಮನೆ ಬಿಟ್ಟು ಹೊರಟುಹೋದ. ಇದು ಕಥೆ. ಆದರೆ ಮಜ್ಝಿಮ ನಿಕಾಯದಲ್ಲಿ ಬುದ್ಧ ಒಮ್ಮೆ ತಂದೆತಾಯಿಗಳು ಆಳುತ್ತಿದ್ದಾಗ, ತಾನು ಕೇಶ-ಶ್ಮಶ್ರುಗಳನ್ನು ತೆಗೆಸಿ ಕಾಷಾಯ ವಸ್ತ್ರಗಳನ್ನು ಧರಿಸಿ ಮನೆ ಬಿಟ್ಟು ಹೊರಟು ಮನೆಯಿಲ್ಲದವನಾದೆ. (ಮಾತಾಪಿತುಣ್ಣಂ ಅಸ್ಸುಮುಖಾನಂ ರುದನ್ತಾನಂ ಕೇ ನಮಸ್ಸುಂ ಓಹಾರೆತ್ವಾ ಕಾಸಾಯಾನಿ ವತ್ಥಾನಿ ಅಚ್ಛಾದೇತ್ವಾ ಅಗಾರಸ್ಮಾ ಅನಗಾಯಿಂ ಪಬ್ಬಜಿ) ಎಂದು ಹೇಳುವ ಸಂದರ್ಭವಿದೆ. ಪ್ರಚಲಿತ ಕಥೆಯಲ್ಲಿ ಎಷ್ಟು ಕಲ್ಪನೆಗಳು ಸೇರಿವೆಯೆಂದು ಈ ಪ್ರಸ್ತಾಪದಿಂದ ಸ್ಪಷ್ಟವಾಗುತ್ತದೆ.

ಸಿದ್ಧಾರ್ಥ ಮನೆಬಿಟ್ಟು ಕಪಿಲ ವಸ್ತುವಿನ ಗಡಿಯನ್ನು ರಾತ್ರಿಯೇ ದಾಟಿ ಅನೋಮಾ ನದಿಯನ್ನು ದಾಟಿ ಹನ್ನೆರಡು ಯೋಜನ ದೂರದಲ್ಲಿ ವಿವಿಕ್ತವಾದ ಮಾವಿನ ತೋಪೊಂದರಲ್ಲಿ ಏಳು ದಿನ ಕಳೆದ. ಅನಂತರ ಗಂಗಾ ನದಿ ದಾಟಿ ಗಿರಿವ್ರಾಜಕ್ಕೆ ಬಂದ. ಅಲ್ಲಿ ಮಗಧದ ರಾಜ ಈ ತರುಣ ಪರಿವ್ರಾಜಕನನ್ನು ಕಂಡು ಮರಳಿ ಲೌಕಿಕ ಪ್ರಪಂಚಕ್ಕೆ ಆಹ್ವಾನಿಸಲು ಶಾಕ್ಯಪುತ್ರ ನೇಕ್ಖಮ್ಮ್ಮಂ ದಟ್ಟು. ಖೇಮತೋಪಧಾನಾಯ ಗಮಿಸ್ಸಾಮಿ ಎಂದು ಹೇಳಿ ನಿರಾಕರಿಸಿದನಂತೆ. ಅವನಿಗೆ ಬೇಕಾಗಿದ್ದುದು ಪರಮಾಭಿಸಂಬೋಧಿ. ಆಗ ಬಿಂಬಸಾರ ನೀನು ಬುದ್ಧನಾಗುವಿ (ಬುದ್ಧೋ ಭವಿಸ್ಸಸಿ) ಎಂದು ನುಡಿದನಂತೆ. ಅಲ್ಲಿಂದ ಹೊರಟು ರಾಜ ಗೃಹದ ಬಳಿ ಗೃಧ್ರಕೂಟದಲ್ಲಿ ತಪಶ್ಚಯೇ ಮಾಡುತ್ತ ನಿಂತ. ಅಲ್ಲಿಯ ಜನ ಇವನನ್ನು ಮಹಾಶ್ರಮಣ ನೆಂದರು. ಮನಸ್ಸಿಗೆ ಸಮಾಧಾನವಾಗದೆ ಆರಾಢಕಾಲಾಮ, ರುದ್ರಕ ರಾಮಪುತ್ರ ಎಂಬಿಬ್ಬ ಪ್ರಖ್ಯಾತ ತಾಪಸಿಗಳ ಬಳಿ ಕೆಲಕಾಲ ಶಿಷ್ಯವೃತ್ತಿ ಮಾಡಿದ. ಅವರ ಸಮಾಪತ್ತಿಗಳನ್ನೆಲ್ಲ ಮಾಡಿದರೂ ಬೋಧಿ ದೊರೆಯಲಿಲ್ಲವಾಗಿ ಇದು ದಾರಿಯಲ್ಲೆಂದು ಬಗೆದು ಅವರನ್ನು ಬಿಟ್ಟು ಉರುವಿಲ್ವದ ಕಾಡಿನಲ್ಲಿ ಕಠೋರ ತಪಶ್ಚರ್ಯೆ ನಡೆಸಿದ. ಇಲ್ಲಿ ನೇರಂಜರಾ ನದಿಯ ದಂಡೆಯ ಮೇಲೆ ಐದು ಬ್ರಾಹ್ಮಣ ತಪಸ್ವಿಗಳು ಇವನನ್ನು ಸೇರಿದರು. ಕೌಂಡಿಣ್ಯ, ಅಶ್ವಜಿತ್, ವಾಷ್ಪ ಮಹಾನಾಮ, ಭದ್ರಕ-ಈ ಐವರು ಬುದ್ಧನಿಗೆ ತುಂಬ ಉಪಕಾರ ಮಾಡಿದರು. ಶಾಕ್ಯವಂಶದ ಈ ಶ್ರಮಣ ಬುದ್ಧನಾಗುವನೆಂಬ ವಿಶ್ವಾಸ ಅವರಿಗಿದ್ದಿತು. ಆದರೆ ಕಠೋರವಾದ ತಪಶ್ಚರ್ಯೆಯಿಂದ ಆಧ್ಯಾತ್ಮಿಕ ಸಂಪತ್ತು ಲಭಿಸದೆಂದು ಶಾಕ್ಯಪುತ್ರ ಶ್ರಮಣನಿಗೇ ಅನಿಸಿತು. ಗಾಳಿಯಲ್ಲಿ ಗಂಟು ಹಾಕುವಂತೆ (ಆಕಾಸೇ ಗಂಠಿಕರಣ ಕಾಲೋವಿಯ) ಯತ್ನವೆಲ್ಲ ನಿರರ್ಥಕವೆಂದೆನಿಸಿತು. ಇಷ್ಟು ದುಷ್ಕರವಾದದ್ದು ಬೋಧಿಗೆ ದಾರಿಯಾಗದೆಂದು (ಅಯಂ ದುಕ್ಖರಕಾರಿಕಾ ನಾಮ ಬೋಧಾಯ ಮಗ್ಗೋ ನಾ ಹೋರೇತಿ) ನಿಶ್ಚಯಿಸಿ ತಪಶ್ಚರ್ಯೆಯ ಬಿಗಿಯನ್ನು ಸಡಲಿಸಿದ. ಇವನೊಂದಿಗಿದ್ದ ಐವರು ಭಿಕ್ಷುಗಳಿಗೆ (ಪಂಚವಗ್ಗೀಯಾ ಭಿಕ್ಖೂ) ಇದು ಸರಿದೋರಲಿಲ್ಲ. ಶ್ರಮಣಗೋತಮ ಪ್ರಧಾನ ವಿಭ್ರಾಂತನಾಗಿ ಭೋಗಕ್ಕಿಳಿದನೆಂದು ಅವರು ಬಗೆದು ಅವನನ್ನು ಬಿಟ್ಟು ವಾರಾಣಸಿಗೆ ತೆರಳಿದರು.

ಗೋತಮ ತಪಶ್ಚರ್ಯೆ ಬಿಡಲಿಲ್ಲ. ಶ್ಮಶಾನಕ್ಕೆ ಹೋಗಿ ಅಲ್ಲಿ ಹೆಣದ ಅವಶೇಷಗಳ ಪಕ್ಕದಲ್ಲಿ ಕುಳಿತ. ಜನ ಈತನನ್ನು ಪಿಶಾಚಿಯೆಂದು ಬಗೆದು ಕಲ್ಲು ಎಸೆದರು. ಮುಂದೆ ಈತ ಸೇನಾನಿಯ ಗ್ರಾಮಕ್ಕೆ ಹೋಗಿ ಅಲ್ಲಿ ನ್ಯಗ್ರೋಧ ಮರದಡಿಯಲ್ಲಿ ಕುಳಿತು ಧ್ಯಾನಾರೂಢನಾದ. ಆ ಊರಿನ ಹೆಗ್ಗಡೆ ಸೇನನೆಂಬವನ ಮಗಳು ಸುಜಾತಾ (ನಂದಬಾಲಾ ಅವಳ ಇನ್ನೊಂದು ಹೆಸರು) ಈ ಶ್ರಮಣನಿಗೆ ಪಾಯಸ ಒಪ್ಪಿಸಿದಳಂತೆ. ಆ ದಿನ ಶ್ರಮಣಗೋತಮ ಏಕಾಂಗಿಯಾಗಿ ಸಾಲುಮರಗಳ ತೋಪಿನಲ್ಲಿ ಕಾಲ ಕಳೆದ. ಸಂಜೆ ಮೂಡಿದಾಗ ಅರಳೀಮರದ ಬಳಿ ಹೋಗಿ ಅದರ ನೆರಳಿನಲ್ಲಿ ಪೂರ್ವಕ್ಕೆ ಮುಖ ಮಾಡಿ ಕುಳಿತ. ಅದೇ ಈಗ ಬೋಧಿವೃಕ್ಷವೆಂದು ಪ್ರಖ್ಯಾತವಾಗಿರುವ ಮರ. ಕೂಡುವಾಗ ಶ್ರಮಣ ನನ್ನ ಮೈಮೂಳೆಗಳು ಮುರಿಯಲಿ, ನನ್ನ ರಕ್ತ ಒಣಗಿ ಹೋಗಲಿ ಆದರೂ ನನ್ನ ಮನೋರಥದ ಪೂರೈಕೆಯಾಗದೆ ಇಲ್ಲಿಂದ ಎಳೆನು ಎಂದು ದೃಢ ಸಂಕಲ್ಪ ಮಾಡಿದ.

ಬೌದ್ಧರ ಗ್ರಂಥಗಳಲ್ಲಿ ಗೋತಮನಿಗೆ ಪದೇ ಪದೇ ಒದಗುತ್ತಿದ್ದ ಲೌಕಿಕ ಪ್ರವೃತ್ತಿಗಳನ್ನು, ಆಕರ್ಷಣೆಗಳನ್ನು ಮನೋದೌರ್ಬಲ್ಯಗಳನ್ನು ಮಾರನೆಂದು ವ್ಯವಹರಿಸಿದ್ದಾರೆ. ಮಾರ ಮೂರು ಬಾರಿ ಬಂದು ಶ್ರಮಣನನ್ನು ದಾರಿತಪ್ಪಿಸಿ ಮತ್ತೆ ಪ್ರಾಪಂಚಿಕ ಭೋಗಕ್ಕೆಳೆಯಲು ಪ್ರಯತ್ನಿಸಿದನೆಂದು ನಿರೂಪಣೆಯಿದೆ. ಬೋಧಿವೃಕ್ಷದ ಅಡಿಯಲ್ಲಿ ಕಡೆಯ ಬಾರಿಗೆ ಪ್ರಯತ್ನ ಮಾಡಿ ವಿಫಲನಾಗಿ ಓಡಿ ಹೋದನಂತೆ. ಅವನ ಸೇನೆಯೂ ಚೆಲ್ಲಾಪಿಲ್ಲಿಯಾಗಿ ಚದರಿತಂತೆ; ಅವನ ಧ್ವಜ ಮುರಿದು ಬಿದ್ದತಂತೆ. ಇದನ್ನು ಅಜಂತಾ ಗುಹೆಗಳ ಭಿತ್ತಿಚಿತ್ರಗಳಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಮಾರ ಓಡಿಹೋಗುವಾಗ ಏಳು ವರ್ಷ ಎಡೆಬಿಡದೆ ಈ ಶ್ರಮಣನನ್ನು ಹಿಂಬಾಲಿಸಿದೆ; ದುರ್ಬಲವಾದ ಚಿತ್ತವೃತ್ತಿ ಒದಗೀತೆಂದೂ ನಾನು ಒಳಗೆ ಇಳಿಯಬಹುದೆಂದೂ ನಿರೀಕ್ಷಿಸಿದೆ. ಆದರೆ ಅದಕ್ಕೆ ಅವಕಾಶವೇ ಆಗಲಿಲ್ಲ. ಎಂದೂ ಅವನು ಜಾಗೃತನಾಗಿದ್ದ (ಸತ್ತವಸ್ಸಾನಿ ಭಗವಂತಂ ಅನುಬಂಧಿ ಪದಾಪದಂ, ಓತಾರಂ ನಾಧಿಗಚ್ಛಿಸ್ಸಂ ಸಂಬುದ್ಧಸ್ಯ ಸತೀ ಮತೋ) ಎಂದು ಹೇಳಿದನಂತೆ. ಇಷ್ಟು ಸ್ಮøತಿವಂತನಾಗಿ ಸ್ಥಿತಪ್ರಜ್ಞನಾಗಿ ಮಾಡಿದ ಈತನ ಧ್ಯಾನ ಕಡೆಗೂ ಫಲಿಸಿತು. ಮುಂಜಾನೆ ಹರಿಯುವಲ್ಲಿ ಸಂಬೋಧಿ ಪ್ರಾಪ್ತವಾಗಿ ಶ್ರಮಣ ಗೋತಮ ಬುದ್ಧನೆನಿಸಿದ. ಮಾರನನ್ನೂ ಅವನ ಪ್ರಲೋಧನೆಗಳನ್ನೂ ಗೆದ್ದು ಜಿನನಾಗಿದ್ದ. ಆಗ ಈತನಿಗೆ ಮೂವತ್ತೈದು ವರ್ಷ ಪ್ರಾಯ.

ಸಂಬೋಧಿ ಲಕ್ಷಣವನ್ನು ಸ್ಪಷ್ಟವಾಗಿ ಹೇಳಲಾಗದಿದ್ದರೂ ಅದನ್ನು ವಿಮುಕ್ತಿ ಸುಖವೆಂದು ಮಾತ್ರ ನಿರೂಪಿಸಿದ್ದಾರೆ. ಅದು ‘ಬ್ರಹ್ಮಚರಿಯ ಪರಯೋಸಾನ ಉಪಶಮ.’ ಅಭಿಜ್ಞೆ, ಸಂಬೋಧಿ, ನಿರ್ವಾಣ, ಚೇತೋವಿಮುಕ್ತಿ. ಪುನರ್ಭವ ಉಂಟು ಮಾಡುವ ತೃಷ್ಣೆಯ ಮರವನ್ನು ಆಮೂಲಾಗ್ರವಾಗಿ ಕಡಿದುರುಳಿಸಿ ಸಂಸಾರದ ಸ್ರೋತ ತಡೆಗಟ್ಟಿ ಇಂಗಿಸಿ, ದುಃಖದ ಅಂತ್ಯ ಗೋತಮ ಕಂಡ. ಈ ವಿಮುಕ್ತಿ ಸುಖ ಅನುಭವಿಸುತ್ತ ಬುದ್ಧ ಬೋಧಿವೃಕ್ಷದ ಅಡಿಯಲ್ಲೇ ಏಳು ದಿನ ತಾನು ಕಂಡ ಸಂಬೋಧಿಯ ಅರ್ಥವನ್ನು ವಿಚಾರ ಮಾಡುತ್ತ ಕಳೆದ. ಮೂರನೆಯ ವಾರವನ್ನು ಬೋಧಿವೃಕ್ಷ ಮತ್ತು ನ್ಯಗ್ರೋಧ ವೃಕ್ಷಗಳ ನಡುವೆ ಓಡಾಡುತ್ತ ಕಳೆದ. ನಾಲ್ಕನೆಯ ವಾರ ಅಭಿಧಮ್ಮನ ಆಳವಾದ ಚಿಂತನೆಗಳಲ್ಲಿ ಕಳೆಯಿತು. ಹೀಗೆ ನಲವತ್ತೊಂಬತ್ತು ದಿನಗಳ ಕಾಲ ಬುದ್ಧ ನಿದ್ರಾಹಾರ ಬಿಟ್ಟು ಸ್ಥಿತಪ್ರಜ್ಞನಾಗಿ ಜಾಗೃತನಾಗಿ ದರ್ಶನ ಸಮೀಕ್ಷೆ ಮಾಡಿದ.

ತಾನು ಕಂಡ ಸಂಬೋಧಿಯನ್ನು ಲೋಕಕ್ಕೆ ತಿಳಿಸುವುದೇ ಬಿಡುವುದೇ ಎಂದು ಬುದ್ಧನಿಗೆ ಸಂದೇಹವಾಯಿತು. ತಾನು ಇದನ್ನು ಕಾಣಲು ಪಟ್ಟ ಕಷ್ಟ ಜನರು ಪಡುವುದಿಲ್ಲ, ಸುಖಾರಾಮರಾದವರು ಸಾಮಾನ್ಯ ಜನ. ತನ್ನ ಸಂಬೋಧಿ ಅವರಿಗೆ ಅರ್ಥವಾಗದು ಎಂದು ಶಂಕಿಸಿದ. ಆಗ ಬ್ರಹ್ಮಾಸಹಂಪತಿ ಬಂದು ಭಗವಂತನಾದ ಬುದ್ಧನ ಧರ್ಮವನ್ನು ಜಗತ್ತಿಗೆ ಹೇಳಬೇಕು (ದೇಸೇತು ಭಗವಾ ಧಮ್ಮಂ); ಎಲ್ಲರ ಕಣ್ಣೂ ಕುರುಡಾಗಿಲ್ಲ; ಕಣ್ಣಿಗೆ ಮಣ್ಣು ಮುಸುಕಿ ಕಾಣದವರರಿದ್ದಾರೆ; ಅಂಥವರಿಗೆ ನಿನ್ನ ದೇಶನದಿಂದ ಪ್ರಯೋಜನವಾದೀತು ಎಂದು ಆಗ್ರಹಪಡಿಸಿದ. ಆಗಲೆಂದು ಒಪ್ಪಿದ ಬುದ್ಧನಿಗೆ ಯಾರಿಗೆ ಮೊದಲು ಹೇಳಬೇಕು ಎಂಬುದು ತಿಳಿಯದಾಯಿತು. ತನಗೆ ಆಚಾರ್ಯರಾಗಿದ್ದ ಆರಾಢಕಾಲಾಮ ಮತ್ತು ರುದ್ರಕ ರಾಮಪುತ್ರ ಇವರಿಗೆ ಹೇಳಿದರೆ ಒಳಿತೆಂದು ಯೋಚಿಸುತ್ತಿರುವಲ್ಲಿ ಅವರು ಆಗಲೇ ತೀರಿಕೊಂಡಿದ್ದಾರೆಂದು ತಿಳಿದು ಬಂದಿತು. ಅನಂತರ ತನಗೆ ಉರುವಿಲ್ವದಲ್ಲಿ ತುಂಬ ನೆರವಾಗಿದ್ದ (ಬಹೂಪಕರಾ) ಐವರು ತಪಸ್ವಿಗಳಿಗೆ ತನ್ನ ಬೋಧಿಯ ವಿಚಾರ ತಿಳಿಸುತ್ತೇನೆಂದು ಮನಸ್ಸು ಮಾಡಿದ. ಅವರು ಆ ಕಾಲದಲ್ಲಿ ವಾರಾಣಸಿಯ ಉಪವನವಾದ ಮೃಗದಾವ (ಮಿಗದಾಯ) ಎಂಬಲ್ಲಿ ಇರುತ್ತಿದ್ದರೆಂದು ತಿಳಿದು ಗಯೆಯಿಂದ ಬುದ್ಧ ಅಲ್ಲಿಗೆ ತೆರಳಿದ್ದ.

ವಾರಾಣಸಿಯ ಋಷಿಪತ್ತನ (ಇಸಿಪತನ) ಎಂಬಲ್ಲಿ ಆ ಐವರು ಭಿಕ್ಷುಗಳನ್ನು ಕಂಡು ಅವರಿಗೆ ತನ್ನ ಸಂಬೋಧಿಯ ಅನುಭವ ನಿರೂಪಿಸಿದ. ತನಗೆ ಅಮೃತ ಅಧಿಗತವಾದುದನ್ನು ತಿಳಿಸಿದ. ಮೊದಲು ಸಂದೇಹಪಟ್ಟರೂ ಆ ಐವರು ಈತನ ಪ್ರವಚನವನ್ನು ಕುತೂಹಲದಿಂದ ಆಲಿಸಿದರು. ಮೊತ್ತ ಮೊದಲ ಪ್ರವಚನ ಧರ್ಮಚಕ್ರ ಪ್ರವರ್ತನ ಸೂತ್ರ (ಧಮ್ಮಚಕ್ಕಪ್ಪವತ್ತನಸುತ್ತ) ಎಂದು ಪ್ರಸಿದ್ಧವಾಯಿತು. ಬುದ್ಧನ ಧರ್ಮದ ಗಾಲಿ ಉರುಳಲಾರಂಭಿಸಿದುದು ಇಲ್ಲಿಂದ; ಧರ್ಮಸಾಮ್ರಾಜ್ಯ ಪ್ರತಿಷ್ಠಿತವಾದದ್ದು. ಈ ಸಂದರ್ಭದಲ್ಲಿ. ಈ ಸನ್ನಿವೇಶವನ್ನು ಬೌದ್ಧಶಿಲ್ಪದಲ್ಲಿ ದ್ವಾದಶಾಕಾರದ ಚಕ್ರ, ಎರಡೂ ಕಡೆ ಜಿಂಕೆಗಳು ಹೀಗೆ ಚಿತ್ರಿಸಿದ್ದಾರೆ, ಈ ಸೂತ್ರದಿಂದಲೇ ಬುದ್ಧನ ಉಪದೇಶ ಮಾಲೆ ಆರಂಭವಾಯಿತು. ಆ ಐವರು ಭಿಕ್ಷುಗಳು ಈತನ ಉಪದೇಶ ಸರಿಯೆಂದು ಒಪ್ಪಿಕೊಂಡು ಶಿಷ್ಯರಾದರು. ಸಂಬೋಧಿಯ ಆರ್ಥವನ್ನು ಅವರಲ್ಲಿ ಒಬ್ಬನಾದ ಕೌಂಡಿಣ್ಯ ಒಡನೆಯೇ ಗ್ರಹಿಸಿದನಾಗಿ ಅವನಿಗೆ ಆಜ್ಞಾತ ಕೌಂಡಿಣ್ಯ ಎಂಬ ಉಪನಾಮ ಒದಗಿ ಬಂದಿತು. ಆಗ ಜಗತ್ತಿನಲ್ಲಿ ಬುದ್ಧನೂ ಸೇರಿ ಆರು ಅರ್ಹತರಿದ್ದರು. ಮೊತ್ತಮೊದಲ ಈ ಪ್ರವಚನ ನಡೆದ ಸ್ಥಳ ಈಗ ಸಾರನಾಥ್ ಎನಿಸಿಕೊಳ್ಳುತ್ತದೆ. ಇಲ್ಲಿ ಚಕ್ರವರ್ತಿ ಅಶೋಕ ಈ ಸಂದರ್ಭದ ನೆನಪಿಗೆ ಸ್ತೂಪದ (ಧಾಮೋಕ್ ಸ್ತೂಪ) ಅವಶೇಷಗಳು ಇಂದಿಗೂ ಇವೆ.

ಬುದ್ಧ ಐವರು ಭಿಕ್ಷುಗಳೊಂದಿಗೆ ವಾರಾಣಸಿಯಲ್ಲೇ ಬೀಡು ಬಿಟ್ಟಿದ್ದಾಗ ಯಶನೆಂಬ ಧನಿಕ ಯುವಕ ದುಃಖಾರ್ತನಾಗಿ ಬುದ್ಧನ ಬಳಿ ಬಂದು ಇವನ ಉಪದೇಶ ಆಲಿಸಿ ಸಂಘ ಸೇರಿದ. ಯಶನನ್ನು ಅರಸುತ್ತ ಬಂದ ಅವನ ತಂದೆ ಉಪಾಸಕನಾಗಿ ನಿಂತ. ಯಶನ ನಾಲ್ವರು ಮಂದಿ ಮಿತ್ರರು ಪೂರ್ಣ, ವಿಮಲ, ಗವಾಂಪತಿ ಮತ್ತು ಸುಬಾಹು ಎಂಬವರು ಭಿಕ್ಷುಗಳಾಗಿ ಸಂಘ ಸೇರಿದರು. ಹೀಗೆ ವಾರಾಣಸಿಯ ಐವತ್ತು ಮಂದಿ ಶ್ರೀಮಂತ ತರುಣರು ಬುದ್ಧನ ಅನುಯಾಯಿಗಳಾದರು. ಈ ತೆರನಾಗಿ ಬುದ್ಧನ ನಲವತ್ತೈದು ವರ್ಷಗಳ ಪರಿವ್ರಾಜಕ ಜೀವನ ಆರಂಭವಾಯಿತು. ದುಃಖ ದೌರ್ಮನಸ್ಯಗಳ ಅಸ್ತಂಗಮಕ್ಕಾಗಿ ಶುದ್ಧವಾದ, ಪರಿಪೂರ್ಣವಾದ ಬ್ರಹ್ಮಚರ್ಯ ನಡೆಸುವುದೇ ಬುದ್ಧನ ಕರೆಯಾಗಿತ್ತು. ಈತನ ಪ್ರತಿಭೆ ಆ ಕಾಲಕ್ಕೆ ದೊಡ್ಡ ಜಟಿಲ ತಪಸ್ವಿಗಳೆಂದು ಪ್ರಸಿದ್ಧರಾಗಿದ್ದ ಉರುವೇಲ ಕಾಶ್ಯಪ, ಗಯಾಕಾಶ್ಯಪ, ನದೀಕಾಶ್ಯಪ ಎಂಬ ಮೂವರು ಸಹೋದರರ ಆಸಕ್ತಿ ಸೆಳೆಯಿತು. ಅವರು ಶಿಷ್ಯರಾದೊಡನೆ ಅವರ ಅಪಾರ ಭಕ್ತಸಮುದಾಯೆಲ್ಲ ಬುದ್ಧನ ಶಿಷ್ಯತ್ವ ಪಡೆಯಿತು. ಮಗಧದ ಅರಸನಾದ ಬಿಂಬಸಾರನ ಆಹ್ವಾನ ಮನ್ನಿಸಿ ಬುದ್ಧ ತನ್ನ ಸಂಘದೊಂದಿಗೆ ರಾಜಗೃಹಕ್ಕೆ ತೆರಳಿ ಅಲ್ಲಿ ರಾಜನಿಗೆ ಬ್ರಹ್ಮಚರ್ಯದ ಉಪದೇಶ ನೀಡಿದ. ಯಾವ ಪಾಪವನ್ನೂ ಮಾಡದಿರುವುದು, ಕುಶಲವಾದುದನ್ನು ಆಚರಿಸುವುದು, ಮನಸ್ಸನ್ನು ತೊಳೆದಿಡುವುದು, (ಸಬ್ಬಪಾಪಸ್ಸ ಅಕರಣಂ, ಸುಸಲಸ್ಸ ಉಪಸಂಪದಾ, ಸಚಿತ್ತ ಪರಯೋದಪನಂ, ಏತಂ, ಬುದ್ಧಾನ ಸಾಸನಂ) – ಇದು ಬುದ್ಧನ ಉಪದೇಶದ ಸಾರ. ರಾಜಗೃಹದಲ್ಲಿ ಬುದ್ಧ ತಂಗಿದ್ದಾಗ ಶಾರಿಪುತ್ರ, ಮೌದ್ಗಲ್ಯಾಯನ ಎಂಬಿಬ್ಬ ಪ್ರತಿಭಾವಂತ ಬ್ರಾಹ್ಮಣರು ಭಿಕ್ಷುಗಳಾಗಿ ಸೇರಿದರು. ಇವರಿಂದ ಬುದ್ಧನ ಧರ್ಮ ವಿಶೇಷವಾಗಿ ದೃಢವಾಯಿತು; ಇವರನ್ನು ಬುದ್ಧನೇ ಧರ್ಮಸೇನಾಪತಿಗಳು ಎಂದು ಗೌರವಿಸಿದ. ಸುದತ್ತ (ಅನಾಥಪಿಂಡಿಕ) ಎಂಬ ಶ್ರೇಷ್ಠಿ ಬುದ್ಧನ ವ್ಯಕ್ತಿತ್ವಕ್ಕೆ ಮಾರುಹೋಗಿ ಉಪಾಸಕನಾದ. ಬುದ್ಧನ ಬಾಳಿನಲ್ಲಿ ಮತ್ತೆ ಮತ್ತೆ ದಾನಿಯಾಗಿ ಧರ್ಮದ ಪ್ರಸಾರಕ್ಕೆ ಆಸರೆಯಾಗಿ ಬರುವ ವ್ಯಕ್ತಿಯೀತ. ಈತ ಬುದ್ಧನನ್ನು ಶ್ರಾವಸ್ತಿ ನಾವತ್ಥಿಗೆ ಆಹ್ವಾನಿಸಿ ಅಲ್ಲಿ ಜೇತುಕುಮಾರನಿಂದ ಕೊಂಡ ಭವ್ಯ ಆರಾಮವನ್ನು ಬುದ್ಧನ ಸಂಘಕ್ಕೆ ದಾನ ಮಾಡಿದ. ಜೇತಕುಮಾರ ರಾಜಪ್ರಸೇನಜಿತನ ಮಗ, ಅವನೂ ಬುದ್ಧನನ್ನು ಸನ್ಮಾನಿಸುತ್ತಿದ್ದವ. ಈ ಜೇತವನಾರಾಮದಲ್ಲೇ (ಅಥವಾ ಅನಾಥಪಿಂಡಿಕಸ್ಸ ಆರಾಮ) ಪಾಳಿ ತ್ರಿಪಿಟಕದಲ್ಲಿಯ ನೂರಾರು ಸೂತ್ರಗಳು ರೂಪ ತಳೆದುವು. ಶ್ರಾವಸ್ತಿಯಲ್ಲೇ ವಿಶಾಖೆ ಎಂಬಾಕೆ ಪೂರ್ವಾರಾಮ (ಪುಬ್ಬಾರಾಮ) ಎಂಬ ಮತ್ತೊಂದು ಆರಾಮನನ್ನು ದಾನ ಮಾಡಿದಳು. ಕೋಸಲದ ಅರಸ ಪ್ರಸೇನಜಿತನ ಮಂತ್ರಿ ಮೃಗಧರನ ಸೊಸೆಯಾದ ಈಕೆಯನ್ನು ತಾಯಿ ಎಂದು ಕರೆಯುತ್ತಿದ್ದನಂತೆ. ಹೀಗಾಗಿ ಈಕೆಗೆ ಮಿಗಾರಮಾತಾ ಎಂಬ ಹೆಸರು ಇದ್ದಿತು. ಅನಂತರ ಬುದ್ಧ ತನ್ನ ಊರಾದ ಕಪಿಲ ವಸ್ತುವಿಗೆ ಬಂದು ಶುದ್ಧೋದನನನ್ನು ಸಂದರ್ಶಿಸಿದ. ತಂದೆಯನ್ನು ಅಗಲಿ ಏಳು ವರ್ಷಗಳಾಗಿದ್ದುವು; ಈಗ ಶುದ್ಧೋದನನೂ ಬುದ್ಧನ ಉಪದೇಶ ಕೇಳಿ ಉಪಾಸಕನಾದ. ಅಷ್ಟೇ ಅಲ್ಲ ಮಗನ ಸಂಘಕ್ಕೆಂದು ಸೊಗಸಾದ ನ್ಯಗ್ರೋಧಮರಗಳ ಆರಾಮ ದಾನ ಮಾಡಿದ ಕೂಡ. ಕಪಿಲವಸ್ತುವಿಗೆ ಬುದ್ಧ ಬಂದಾಗಲೇ ಈತನ ಹಲವಾರು ತರುಣ ಬಂಧುಗಳು ಸಂಘ ಸೇರಿದರು. ಅನಿರುದ್ಧ, ದೇವದತ್ತ, ಭದ್ರಕ (ಭದ್ದಿಯ), ರೇವತ, ಆನಂದ ಇವರು ಪ್ರಮುಖರು. ಶಾಕ್ಯರಿಗೆ ಕ್ಷೌರಿಕನಾಗಿದ್ದ ಉಪಾಲಿಯೂ ಭಿಕ್ಷುವಾದ. ಬುದ್ಧನ ಪೂರ್ವಾಶ್ರಮದ ಮಗನಾದ ರಾಹುಲನೂ ತಂದೆಯ ಪರಿವ್ರಾಜ್ಯ ಸಂಪತ್ತಿಗೆ ಉತ್ತರಾಧಿಕಾರಿಯಾಗಬೇಕೆಂದು ಬಯಸಿ ಭಿಕ್ಷುವಾದ. ಮುಂದೆ ಶುದ್ಧೋದನ ತೀರಿಕೊಂಡಾಗ ಅವನ ಹೆಂಡತಿಯಾದ ಮಹಾಪ್ರಜಾಪತೀ ಗೋತಮಿ (ಬುದ್ಧನ ಸಾಕುತಾಯಿ) ತನ್ನ ಪರಿವಾರದೊಂದಿಗೆ ಬುದ್ಧನ ಸಂಘ ಸೇರಿದಳು. ಹೀಗಾಗಿ ಭಿಕ್ಷುಸಂಘವಲ್ಲದೆ ಭಿಕ್ಷುಣೀ ಸಂಘವೂ ರೂಪಗೊಂಡಿತು.

ಮಗಧದ ರಾಜ ಬಿಂಬಸಾರ, ಅವನ ರಾಣಿ ಕ್ಷೇಮ, ಮಗ ಅಜಾತಶತ್ರು ಎಲ್ಲರೂ ಉಪಾಸಕರಾಗಿ ನಿಂತರು. ಅಜಾತಶತ್ರು ಮೊದಲು ಸಂಘ ಒಡೆದ ದೇವದತ್ತನಿಗೆ ನೆರವಾಗಿ ಬುದ್ಧನಿಗೆ ವಿರುದ್ಧನಾಗಿದ್ದು, ಅನಂತರ ಬುದ್ಧನ ಮಾಹಾತ್ಮ್ಯ ಅರಿತು ಅವನ ಶಿಷ್ಯನಾದವ. ಕೋಸಲದ ರಾಜ ಪ್ರಸೇನಜಿತ (ಪಸೇನದಿ) ವತ್ಸರಾಜನಾದ ಉದಯನ (ಉದೇನ) ಆವಂತಿಯ ರಾಜ ಪ್ರದ್ಯೋತ (ಪಜ್ಜೋತ) ಶುಂಶೂಮಾರಗಿರಿಯ ಭರ್ಗಪ್ರಾಂತ್ಯದ ಒಡೆಯ ಭರ್ಗ ಇವರುಗಳೂ ಬುದ್ಧನ ಉಪಾಸಕರಾದರು. ಉದಯನ ಕೌಶಾಂಬಿಯಲ್ಲಿ ಫೋಷಿತರಾಮವೆಂಬ ಉದ್ಯಾನವನ್ನು ಸಂಘಕ್ಕೆ ದಾನ ಮಾಡಿದ. ಬಿಂಬಸಾರನ ವೈದ್ಯನಾದ ಜೀವಕನೂ ಬುದ್ಧನ ಉಪಾಸಕನಾದ. ಆ ಕಾಲಕ್ಕೆ ತುಂಬ ಪ್ರಖ್ಯಾತನಾಗಿದ್ದ ವೈದ್ಯನೀತ, ಮಕ್ಕಳ ಕಾಯಿಲೆಗೆ ಇವರು ಎತ್ತಿದ ಕೈ ಆಗಿದ್ದುದರಿಂದ ಈತನನ್ನು ಕೋಮಾರ ಭಚ್ಜ ಅಜೀವಕನೆನ್ನುತ್ತಿದ್ದರು.

ಹೀಗೆ ರಾಜರು, ಶ್ರೀಮಂತರು ಮಾತ್ರವಲ್ಲದೆ ಸಾಮಾನ್ಯ ಜನರೂ ನಿಕೃಷ್ಟವಾದದ್ದೆಂದು ಬಗೆದ ವೃತ್ತಿಗಳಲ್ಲಿದ್ದವರೂ ಸಂಘ ಸೇರಿದರು. ಉಪಾಸಕರಾಗಿ ನಿಂತರು. ಈ ಶಿಷ್ಯರಲ್ಲಿ ಒಬ್ಬನಾದ ಉಪಾಲಿ ಕ್ಷೌರಿಕ. ಆಳವಿಯಲ್ಲಿ ಬುದ್ಧನಿಂದ ಸನ್ಮಾನಿತನಾಗಿ ಸುನೀತ ಜಾಡಮಾಲಿ. ಅಂಗುಳಿಮಾಲ ಕಾಡಿನಲ್ಲಿ ವಾಸಿಸುತ್ತಿದ್ದ ದರೋಡಕಾರನು. ಶಿಷ್ಯೆಯರಲ್ಲಿ ಪ್ರಸಿದ್ಧಳಾದ ಆಮ್ರಪಾಲ್ಲಿ (ಅಂಬಪಾಲಿ) ಮೊದಲಿಗೆ ವೇಶ್ಯೆ. ಸುಪ್ರಬುದ್ಧನೆಂಬ ಇನ್ನೊಬ್ಬ ಉಪಾಸಕ ತೊನ್ನು ಬಂದ ಎಲ್ಲರಿಂದಲೂ ತಿರಸ್ಕøತನಾಗಿದ್ದವ. ವೈದಿಕ ಧರ್ಮದಲ್ಲೇ ಅನುರಕ್ತಿಯಿದ್ದ ಬ್ರಾಹ್ಮಣರೂ ಬುದ್ಧನ ಧರ್ಮಪ್ರಸಾರ ಕಾಯದಲ್ಲಿ ನೆರವಾದರು. ಅಗ್ನಿ ಹೋತ್ರಿಗಳಾದ ಉರುವಿಲ್ವಕಾಶ್ಯಪ, ನದೀ ಕಾಶ್ಯಪ, ಗಯಾಕಾಶ್ಯಪ, ಶಾರಿಪುತ್ರ, ಮೌದ್ಗಲ್ಯಾಯನ (ಮೊಗ್ಗಲ್ಲಾನ) ಕೌಂಡಿನ್ಯ ಮತು ಅವನ ನಾಲ್ವರು ಸಹಚರರು, ಮಹಾಕಾತ್ಯಾಯನ, ಪೋಕ್ಖರಸಾದಿ, ಸೋಣದಂಡ, ಮಾಲುಂಕ್ಯಪುತ್ರ, ಸುಂದರಿಕ ಭಾರದ್ವಾಜ, ಕೃಷಿ ಭಾರದ್ವಾಜ ಮುಂತಾದವರೆಲ್ಲ ಬ್ರಾಹ್ಮಣರು, ಬುದ್ಧನ ಹಿರಿಮೆಯನ್ನು ಪ್ರಕಟ ಮಾಡಿದವರಲ್ಲಿ ಕೌಂಡಿಣ್ಯ, ಶಾರಿಪುತ್ರ, ಮೌದ್ಗಲ್ಯಾಯನ ಇವರುಗಳು ಪ್ರಮುಖರು. ಬುದ್ಧನ ತತ್ತ್ವಕ್ಕೆ ಅಭಿಧರ್ಮದ ಮೆರುಗನ್ನು ಕೊಟ್ಟವ ಶಾರಿಪುತ್ರ ಎಂದು ಹೇಳುತ್ತಾರೆ. ಶಾರಿಪುತ್ರ ಮೌದ್ಗಲ್ಯಾಯನ ಇವರು ಈಗಿನ ಬಿಹಾರ್ ರಾಜ್ಯದ ನಾಲಂದದಲ್ಲಿ ಇರುತ್ತಿದ್ದರು. ಇವರು ಬುದ್ಧ ಬದುಕಿದ್ದಾಗಲೇ ತೀರಿಕೊಂಡರು. ಇವರ ಅವಶೇಷಗಳ ಮೇಲೆ ಕಟ್ಟಿದ ಸ್ತೂಪವೇ ಇಂದು ಪ್ರಸಿದ್ಧವಾಗಿರುವ ಸಾಂಚೀಸ್ತೂಪ. ಇದು ಭೂಪಾಲದ ಬಳಿಯಿರುವ ಗುಡ್ಡದ ಮೇಲೆ ರಮ್ಯ ಶಿಲ್ಪಗಳನ್ನು ಮೂಡಿಸಿ ಮಾಡಿದ ಮಂದಿರ. ಪ್ರಾಚೀನ ವಾಗಿದ್ದ ಸಣ್ಣ ಸ್ತೂಪವನ್ನು ಅಶೋಕ ಹಿಗ್ಗಿಸಿದ. ಬುದ್ಧ ತೀರಿಕೊಂಡ ಅನಂತರ ರಾಜಗೃಹದಲ್ಲಿ ನಡೆದ ಸಂಗೀತಿಯಲ್ಲಿ ಪ್ರಮುಖ ಪಾತ್ರ ವಹಿಸಿ ಬುದ್ಧ ವಚನವನ್ನೆಲ್ಲ ತ್ರಿಪಿಟಕಗಳಲ್ಲಿ ಮೂಡಿಸಿದವನೇ ಮಹಾ ಕಾತ್ಯಾಯನ. ಹೀಗೆ ಬುದ್ಧನ ಧರ್ಮಪುನರುಜ್ಜೀವನ ಕಾರ್ಯದಲ್ಲಿ ಇಡೀ ನಾಡೇ ನೆರವಾಯಿತು.

ರಾಜರು ತಮ್ಮ ರಾಜಕಾರ್ಯದಲ್ಲೂ ಬುದ್ಧನ ಆಣತಿ ಮನ್ನಿಸುತ್ತಿದ್ದರು. ಶಾಕ್ಯರಿಗೂ ಕೋಲಿಯರಿಗೂ ಒಮ್ಮೆ ಸಮರವೊದಗುವ ಪ್ರಸಂಗ ಎದ್ದಾಗ ಬುದ್ಧನೇ ಮಧ್ಯಸ್ಥಿಕೆ ಮಾಡಿ ಎರಡೂ ಪಕ್ಷದವರನ್ನೂ ಕಂಡು, ಈ ವಿಪತ್ತನ್ನು ತಪ್ಪಿಸಿದ. ಮಗಧದ ಅಜಾತಶತ್ರು ಮತ್ತು ಕೋಸಲದ ಪ್ರಸೇನಜಿತರಿಬ್ಬರೂ ತಮಗೆ ಸಂದೇಹ ಬಂದಾಗಲೆಲ್ಲ ಬುದ್ಧನ ಬಳಿ ಓಡುತ್ತಿದ್ದರು. ಸೇನಾಧಿಕಾರಿಗಳು ಮತ್ತು ದಳ ಪತಿಗಳು ಸದ್ವರ್ತನೆಯ ಬಗ್ಗೆ ಬುದ್ಧನ ಉಪದೇಶ ಗ್ರಹಿಸುತ್ತಿದ್ದರು.

ಈತ ಕಪಿಲ ವಸ್ತುವಿಗೆ ಬಂದಿದ್ದಾಗ ಈತನನ್ನು ಸೇರಿದ ಬಂಧುಗಳಲ್ಲಿ ದೇವದತ್ತನೂ ಒಬ್ಬ. ಈ ತರುಣನು ಬುದ್ಧನ ಪೂರ್ವಾಶ್ರಮದ ಪತ್ನಿ ಯಶೋಧರೆಯ ಅಣ್ಣನೆಂದೂ ಸುಪ್ರಬುದ್ಧರಾಜನ ಮಗನೆಂದೂ ಹೇಳಿತ್ತಾರೆ. ಭಿಕ್ಷುವಾಗಿ ಸಂಘ ಸೇರಿದರೂ ದೇವದತ್ತನಿಗೆ ಧರ್ಮದಲ್ಲಿ ನಿಜವಾದ ಶ್ರದ್ಧೆ ಮೂಡಿರಲಿಲ್ಲ. ಬುದ್ಧನ ಪ್ರಖ್ಯಾತಿ ಕಂಡು ಕರುಬುತ್ತಿದ್ದ. ಬುದ್ಧನಿಗೆ ವಯಸ್ಸಾಗಿ ವೃದ್ಧಾಪ್ಯ ಮೂಡಿದಾಗ ಅವನು ನಾಯಕತ್ವದಿಂದ ವಿರಮಿಸಬೇಕೆಂದೂ ತನ್ನನ್ನು ಸಂಘಾಧಿಪತಿಯಾಗಿ ನಿಯಮಿಸಬೇಕೆಂದೂ ಸಲಹೆ ಮಾಡಿದ. ಬುದ್ಧ ಅದಕ್ಕೆ ಸಮ್ಮತಿಸದಿರಲು ವೈರವನ್ನು ಸಾಧಿಸಿ ಸಂಘದಿಂದ ದೂರವಾಗಿ ಹಲವಾರು ಬಗೆಗಳಲ್ಲಿ ಬುದ್ಧನಿಗೆ ಅಹಿತವನ್ನೆಣಿಸಿದ. ದಶಬಲನೆಂಬ ಮಾಂತ್ರಿಕನನ್ನು ಹಿಡಿದು ಅವನ ಮೂಲಕ ಮಗಧದ ರಾಜ ಅಜಾತ ಶತ್ರುವಿನ ಸ್ನೇಹ ಸಂಪಾದಿಸಿ ಅವನ ಬಲದಿಂದ ಒಮ್ಮೆ ಬುದ್ಧನನ್ನು ಕೊಲೆ ಮಾಡಲೆತ್ನಿಸಿದ. ಬುದ್ಧ ಒಂದು ಬಾರಿ ಅಡವಿಯಲ್ಲಿದ್ದಾಗ ದೊಡ್ಡದೊಂದು ಬಂಡೆಯನ್ನು ಅವನ ಮೇಲೆ ಉರುಳಿಸಲು ವ್ಯವಸ್ಥೆ ಮಾಡಿದ; ಊರಿನಲ್ಲಿದ್ದಾಗ ಮಾಲಾಗಿರಿಯೆಂಬ ಮದದಾನೆ ಅವನ ಮೇಲೆ ನುಗ್ಗುವಂತೆ ಮಾಡಿದ. ಆದರೆ ಈ ಪ್ರಯತ್ನಗಳೆಲ್ಲ ವಿಫಲವಾದುವು. ಅಜಾತಶತ್ರು ತನ್ನ ತಪ್ಪು ತಿಳಿದುಕೊಂಡು ದೇವದತ್ತನ ಸಂಗದಿಂದ ದೂರವಾಗಿ ಬುದ್ಧನ ಉಪಾಸಕನಾದ. ಇತಿವುತ್ತಕದಲ್ಲಿ ದೇವದತ್ತನ ಪ್ರಸಂಗ ಕುರಿತು ಸಮುದ್ರಕ್ಕೆ ಒಂದು ಬಿಂದಿಗೆ ವಿಷಹಾಕಿದಂತೆ ದೇವದತ್ತನ ಯತ್ನ ನಿಷ್ಫಲವಾಯಿತೆಂದು ಬಣ್ಣಿಸಲಾಗಿದೆ. ಬುದ್ಧನಿದ್ದಾಗಲೇ ದೇವದತ್ತ ತೀರಿಕೊಂಡ. ಬುದ್ಧನ ಸಂಘದಲ್ಲಿ ಒಡಕುಂಟುಮಾಡಲು ಇದೊಂದೇ ಯತ್ನವಾದದ್ದು.

ಬುದ್ಧನಿಗೆ ಐವತ್ತಾರು ವರ್ಷ ವಯಸ್ಸಾದಾಗ ದೇಹದಲ್ಲಿ ದೌರ್ಬಲ್ಯದ ಚಿಹ್ನೆಗಳು ಕಾಣಿಸಿಕೊಂಡುವು. ಸತತವಾದ ತಿರುಗಾಟದಿಂದ ತನ್ನ ಕೆಲಸಗಳನ್ನು ತಾನೇ ತೀರಿಸಿಕೊಳ್ಳಲು ತೊಂದರೆಯಾಯಿತು. ಆಗ ಅವನ ಪರಿಚಾರಿಕೆಗೆ ಆನಂದನೆಂಬ ಜ್ಞಾತಿ ಶಿಷ್ಯ ನಿಯಮಿತನಾದ. ಬುದ್ಧ ಹೋದಲ್ಲೆಲ್ಲ ಅವನ ಜೊತೆಗಿದ್ದು ಅವನ ದಿನದಿನದ ಅಗತ್ಯಗಳನ್ನು ನೋಡಿಕೊಂಡು ಅವನ ಸೇವೆ ಮಾತಿ ಕೃತಾರ್ಥನಾದ.

ಬುದ್ಧ ಎಪ್ಪತ್ತೊಂಬತ್ತು ವರ್ಷಗಳು ದಾಟಿದ ಸಮಯದಲ್ಲಿ ವೈಶಾಲಿಯಿಂದ ವಜ್ಜಿ ರಾಜ್ಯದಲ್ಲಿದ್ದ ಬೆಲುವಗ್ರಾಮಕ್ಕೆ ಆನಂದನೊಡಗೂಡಿ ಹೊರಟ. ಆಗ ವಜ್ಜಿ ರಾಜ್ಯದ ಹಲವೆಡೆ ಕ್ಷಾಮವಿತ್ತು. ಈ ಕಾರಣದಿಂದ ತನ್ನ ಅಮಿತವಾದ ಪರಿವಾರವನ್ನು ವೈಶಾಲಿಯಲ್ಲೇ ಬಿಟ್ಟು ಆನಂದನನ್ನು ಮಾತ್ರ ಅಲ್ಲಿಗೆ ಕರೆದೊಯ್ದಿದ್ದ. ಅಲ್ಲಿ ಬುದ್ಧನಿಗೆ ಅಸ್ವಾಸ್ಥ್ಯ ತಲೆದೋರಿತು. ಕಡೆಗಾಲ ಸಮೀಪಿಸುತ್ತಿರುವಂತೆ ತೋರಿತು. ಆದರೆ ಆರೋಗ್ಯ ಸ್ವಲ್ಪ ಸುಧಾರಿಸಿದೊಡನೆ ಅಲ್ಲಿಂದ ಪಾವಾನಗರಿಗೆ ಹೊರಟ. ಆ ನಗರದಲ್ಲಿ ಚುಂದ ಎಂಬ ಕಮ್ಮಾರ ಬುದ್ಧನನ್ನು ತನ್ನ ಮನೆಗೆ ಭಿಕ್ಷೆಗೆ ಕರೆದು ಸೂಕರಮದ್ದವವೆಂಬ ತಿನಿಸು ಕೊಟ್ಟ. ಇದನ್ನು ತಿಂದ ಒಡನೆ ಬುದ್ಧನಿಗೆ ಉದರಶೂಲೆ, ಆಮಶಂಕೆ ತಳೆಯಿಟ್ಟುವು. ಆದರೆ ಬುದ್ಧ ಆನಂದನ ಜೊತೆಯಲ್ಲಿ ಅಲ್ಲಿಂದ ಹೊರಟು ಆಮ್ರಗ್ರಾಮ, ಜಂಬುಗ್ರಾಮ, ಭಂಡಗ್ರಾಮ, ಹಸ್ತಿ ಗ್ರಾಮ, ಭೋಗನಗರಗಳನ್ನು ದಾಟಿ ಮಲ್ಲರ ರಾಜ್ಯಕ್ಕೆ ಬಂದ. ಅದರ ಉಪವರ್ತನದಲ್ಲಿಯ ಕುಶೀನಗರಕ್ಕೆ ಹೋಗಲು ಹಿರಣ್ಯವತೀ ನದಿ ದಾಟಿ ಸಾಲುಮರಗಳ ತೋಪಿಗೆ ಬಂದ. ಆ ವೇಳೆಗೆ ಬುದ್ಧನಿಗೆ ಅತಿಯಾದ ಭಾದೆಯಿಂದ ಆಯಾಸವಾಗಿತ್ತು. ಎರಡು ಮರಗಳ ನಡುವೆ ಹಾಸಿಗೆ ಹರಡುವಂತೆ ಆನಂದನಿಗೆ ಹೇಳಿ ಹಾಸಿಗೆ ಸಿದ್ಧವಾದಾಗ ಬಲಪಾಶ್ರ್ವದಲ್ಲಿ ಬಲತೋಳಿನ ಮೇಲೆ ತಲೆ ಇಟ್ಟು ಮಲಗಿದ. ಬುದ್ಧನಿಗೆ ಸಾವು ಸನ್ನಿಹಿತವಾಯಿತೆಂದು ಅರಿತು ಆನಂದ ಹತ್ತಿರದ ವಿಹಾರವೊಂದರ ಬಾಗಿಲಿಗೆ ಮೈ ಆನಿಸಿ ಅಳುತ್ತಿದ್ದ. ಅದನ್ನು ತಿಳಿದು ಬುದ್ಧ ಅವನನ್ನು ಕರೆದು ಸಂತೈಸಿದ. ಜಗತ್ತು ಕತ್ತಲೆಯಲ್ಲಿದ್ದಾಗ ತಥಾಗತ ಜ್ಞಾನದ ದೀವಿಗೆ ಹೊತ್ತಿಸಿದ. ಅದು ಲೋಕದಲ್ಲಿ ಬೆಳಗುವ ಮೊದಲೇ ದೀಪ ನಂದಿಹೋಗುವುದಲ್ಲ. ನಾನಿನ್ನೂ ಕಲಿಯುವುದರಲ್ಲೇ ಇದ್ದೇನೆ; ಗುರಿ ತುಂಬ ದೂರವೇ ಇದೆ. ಅಷ್ಟರೊಳಗೆ ನನ್ನ ಮೇಲೆ ಕರುಣೆ ತೋರಿದ ತಥಾಗತ ತೀರಿಕೊಳ್ಳುತ್ತಿದ್ದಾನೆ ಎಂದು ಆನಂದನಿಗೆ ದುಃಖ. ಆಗ ಬುದ್ಧ ಆನಂದನನ್ನು ಕುರಿತು ನೀನು ನನ್ನನ್ನು ಬಹು ವಿಧದಿಂದ ಉಪಚರಿಸಿದ್ದೀಯೇ, ಅಳಬೇಡ. ಯಾರಾದರೂ ಒಂದಿಲ್ಲ ಒಂದು ದಿನ ಸಾಯಲೇ ಬೇಕಲ್ಲವೆ? ಹುಟ್ಟಿದವರು ಯಾರಾದರೂ ಶಾಶ್ವತವಾಗಿ ಇರುತ್ತಾರೆಯೆ? ನೀನು ಸ್ಥೈರ್ಯದಿಂದ ಪ್ರಯತ್ನಪಟ್ಟು ನಿನ್ನ ಮುಕ್ತಿ ಸಾಧಿಸಿಕೋ ಎಂದು ಹೇಳಿದ. ಸ್ವಲ್ಪ ಹೊತ್ತಾದ ಅನಂತರ ಸುಭದ್ರನೆಂಬ ವೃದ್ಧ ಪರಿವ್ರಾಜಕ ಬುದ್ಧನ ಬಳಿ ಧರ್ಮಜಿಜ್ಞಾಸೆ ಮಾಡಲು ಬಂದ. ಬುದ್ಧನಿಗೆ ಆಯಾಸವಾಗಿದೆ ಎಂದು ಹೇಳಿ ಆನಂದ ಆವನನ್ನು ತಡೆದಾಗ, ಬುದ್ಧ ತಡೆಯಬೇಡ ಆನಂದ, ಬರಲಿ ಬಿಡು ಎಂದು ಕರೆದ. ಸುಭದ್ರ ಸ್ವಲ್ಪ ಹೊತ್ತು ಧರ್ಮಸಂವಾದ ಮಾಡಿ ಹೊರಟ. ಚುಂದ ಕೊಟ್ಟ ಭಿಕ್ಷೆ ಬುದ್ಧನಿಗೆ ಕಡೆಯ ಭಿಕ್ಷೆ; ಸುಭದ್ರನಿಗೆ ಮಾಡಿದ ಉಪದೇಶ ಅವನ ಕಡೆಯ ಉಪದೇಶ. ಅದಾದ ಮೇಲೆ ಹತ್ತಿರದಲ್ಲಿದ್ದ ಭಿಕ್ಷುಗಳನ್ನೆಲ್ಲ ಕರೆದು ಭಿಕ್ಷುಗಳೇ, ನಿಮಗೆ (ಕಡೆಯ ಬಾರಿ) ಹೇಳುತ್ತಿದ್ದೇನೆ. ಇರುವವೆಲ್ಲ ಒಡೆಯುವವೇ; ಅಲಸಿಕೆಯಿಲ್ಲದೆ ನಿಮ್ಮ ಮುಕ್ತಿ ಸಾಧಿಸಿಕೊಳ್ಳಿ ಎಂದು ಹೇಳಿದ. ಈ ಅಂತಿಮ ಬುದ್ಧವಚನವನ್ನು ಬೌದ್ಧರು ಭಕ್ತಿಯಿಂದ ಉಳಿಸಿಕೊಂಡಿದ್ದಾರೆ. ಹೀಗೆ ಹೇಳಿದ ಬಳಿಕ ಬುದ್ಧ ಸ್ಥತ ಪ್ರಜ್ಞನಾಗಿ ಧ್ಯಾನ ಸಮಾಧಿಯಲ್ಲಿ ಮುಳಿಗಿ ತೀರಿಕೊಂಡ. ಬುದ್ಧನ ಮರಣವನ್ನು ಮಹಾಪರಿನಿರ್ವಾಣ ಎಂದು ನಿರ್ದೇಶಿಸಿದ್ದಾರೆ. ಆತನ ಕಡೆಯ ದಿನಗಳನ್ನು ವಿವರವಾಗಿ ನಿರೂಪಿಸುವ ದೊಡ್ಡ ಸೂತ್ರ ಮಹಾಪರಿನಿರ್ವಾಣ ಸುತ್ರಾಂತ (ಮಹಾಪರಿನಿಬ್ಬಾನಸುತ್ತಂತ) ತ್ರಿಪಿಟಕದ ದೀರ್ಘನಿಕಾಯದಲ್ಲಿ ಅಡಕವಾಗಿದೆ. ಬುದ್ಧನ ಪರಿನಿರ್ವಾಣವಾದದ್ದು ವೈಶಾಖ ಪೂರ್ಣಿಮೆಯಂದು. ಬೌದ್ಧರಿಗೆ ವೈಶಾಖಮಾಸದ ಹುಣ್ಣಿಮೆ ತುಂಬ ಪವಿತ್ರ. ಏಕೆಂದರೆ ಈ ದಿನದಲ್ಲೇ ಬುದ್ಧನ ಜನ್ಮ, ಸಂಬೋಧಿ ಪ್ರಾಪ್ತಿ ಮತ್ತು ಪರಿನಿರ್ವಾಣ ಈ ಮೂರು ಘಟನೆಗಳು ಜರುಗಿದ್ದು. ಬುದ್ಧ ತೀರಿಕೊಂಡಾಗ ಅವನಿಗೆ ಎಂಬತ್ತು ವರ್ಷ; ಈ ವರ್ಷ ಕ್ರಿಸ್ತ ಪೂರ್ವ 543 ಎಂದೂ 490 ಎಂದೂ 486 ಎಂದೂ 483 ಎಂದೂ ಪಂಡಿತರು ವಿಧವಿಧವಾಗಿ ಊಹೆ ಮಾಡಿದ್ದಾರೆ; ಇವಕ್ಕೆ ಸರಿಯಾಗಿ ಬುದ್ಧನ ಜನ್ಮದ ವರ್ಷ ಕ್ರಿ.ಪೂ. 623, ಅಥವಾ 570 ಅಥವಾ 566 ಅಥವಾ 563 ಆಗುತ್ತದೆ.

ಬುದ್ಧ ತೀರಿಕೊಂಡದ್ದು ಮಲ್ಲರ ರಾಜ್ಯದಲ್ಲಿ. ಆದ್ದರಿಂದ ಮಲ್ಲ ನಾಯಕರೇ ಅವನ ಅಂತ್ಯ ಕ್ರಿಯೆಯ ವ್ಯವಸ್ಥೆ ಮಾಡಿದರು. ಅವರು ತುಂಬ ವೈಭವದಿಂದ ತುಂಬ ಆದರದಿಂದ ಬುದ್ಧಚಿತೆಯನ್ನು ಸಿದ್ಧಮಾಡಿ ಅಗ್ನಿಸ್ಪರ್ಶ ಮಾಡಲು ಎಷ್ಟು ಯತ್ನಿಸಿದರೂ ಆಗಲಿಲ್ಲವಂತೆ. ಅಷ್ಟರಲ್ಲಿ ಬುದ್ಧನನ್ನು ಕಾಣಲು ದೂರ ದೇಶದಿಂದ ಅವನ ಶಿಷ್ಯ ಕಾಶ್ಯಪ ಹಾಗೂ ಅವನ ಐನೂರು ಮಂದಿ ಸಹಚರರು ಬಂದರು. ಕಾಶ್ಯಪ ಬುದ್ಧನ ಕಳೇಬರದ ಬಳಿ ಬಂದು ಪಾದಗಳನ್ನು ಮುಟ್ಟಿ ನಮಸ್ಕರಿಸಿದ. ಒಡನೆಯೇ ಚಿತೆಗೆ ಬೆಂಕಿ ಇದ್ದಕ್ಕಿದಂತೆ ಹತ್ತಿಕೊಂಡಿತು. ಚಿತೆಯಿಂದ ಅವಶೇಷಗಳನ್ನು ಕುಶೀನಗರದ ಮಲ್ಲರು ಸಂಚಯನ ಮಾಡಿ ತಾವೇ ಅದರ ಮೇಲೆ ಸ್ತೂಪ ಕಟ್ಟಿಸುವ ಸಂಕಲ್ಪ ಮಾಡಿದರು. ಆದರೆ ಅಲ್ಲಿ ನೆರೆದಿದ್ದ ಇತರರು ತಮಗೂ ಅವಶೇಷದಲ್ಲಿ ಪಾಲು ಬೇಕೆಂದು ಬಲವಂತ ಮಾಡಿದರು. ಮಲ್ಲರು ಒಪ್ಪಲಿಲ್ಲ. ದೊಡ್ಡ ಕಲಹ ಏಳುವುದರಲ್ಲದ್ದಿತು. ಆಗ ದ್ರೋಣನೆಂಬ ಬ್ರಾಹ್ಮಣ ಮುಂದೆ ಬಂದು ಬುದ್ಧ ಶಾಂತಿಮೂರ್ತಿ; ಅವನ ಅವಶೇಷಕ್ಕಾಗಿ ಕಲಹ ಸಲ್ಲದು ಎಂದು ಹೇಳಿ ಬೇಡಿದ ಎಲ್ಲರಿಗೂ ಭಾಗ ಮಾಡಿ ಕೊಡುವುದು ಯುಕ್ತವೆಂದು ಸಲಹೆ ಮಾಡಿದ. ಮಲ್ಲರು ಇದಕ್ಕೊಪ್ಪಿ ತಾವು ಸಂಚಯನ ಮಾಡಿದ್ದ ಅವಶೇಷವನ್ನೆಲ್ಲ ಅವನ ಕೈಗಿತ್ತು ಅವನಿಗೇ ಹಂಚುವ ಹೊಣೆವಹಿಸಿದರು. ದ್ರೋಣ ಅದನ್ನು ಎಂಟು ಭಾಗ ಮಾಡಿ ತಲಾ ಒಂದನ್ನು ಮಗಧದ ರಾಜ ಅಜಾತಶುತ್ರುವಿಗೆ, ವೈಶಾಲಿಯ ಲಿಚ್ಛವಿಗಳಿಗೆ, ಕಪಿಲ ವಸ್ತುವಿನ ಶಾಕ್ಯರಿಗೆ ಅಲ್ಲಕಪ್ಪದ ಬುಲಿಜನರಿಗೆ ರಾಮಗ್ರಾಮದ ಕೋಲಿಯರಿಗೆ ವೇಠದ್ವೀಪದ ಬ್ರಾಹ್ಮಣನಿಗೆ ಪಾವಾನಗರದ ಮಲ್ಲರಿಗೆ ಮತ್ತು ಕುಶೀ ನಗರದ ಮಲ್ಲರಿಗೆ ಹಂಚಿದ. ಸಮರ್ಪಕವಾಗಿ ವಿತರಣೆ ಮಾಡಿದುದಕ್ಕಾಗಿ ಅವಶೇಷವಿದ್ದ ಗಡಿಗೆಯನ್ನು (ಕುಂಭ) ದ್ರೋಣನಿಗೆ ಕೊಟ್ಟರು. ವಿಭಾಗವೆಲ್ಲ ಮುಗಿದ ಮೇಲೆ ಪಿಪ್ಪಿಲಿ ವನದ ಮೌರ್ಯರು ಬಂದು ತಮಗೊಂದು ಭಾಗ ಬೇಕೆಂದು ಬೇಡಿದರು. ಆ ಹೊತ್ತಿಗೆ ಚಿತಾಗ್ನಿಯಲ್ಲಿ ಕೆಲವು ಕೆಂಡಗಳು ಉಳಿದಿದ್ದುವು. ಅವನ್ನೆಲ್ಲ ಆಯ್ದು ಅವರ ಪಾಲಿಗೆ ಕೊಟ್ಟರು. ಹೀಗೆ ಅವಶೇಷದಲ್ಲಿ ಹತ್ತು ಭಾಗವಾಗಿ ಒಂದೊಂದು ಭಾಗದ ಮೇಲೂ ಒಂದೊಂದು ಸ್ತೂಪ ನಿರ್ಮಾಣವಾಯಿತು. ಈ ಹತ್ತು ಸ್ತೂಪಗಳೆ ಮೊದಲಿಗೆ ಬೌದ್ಧ ಶ್ರದ್ಧಾಳುಗಳ ಯಾತ್ರಾಸ್ಥಾನಗಳಾಗಿ ಪರಿಣಮಿಸಿದವು. ಮೌರ್ಯರಾಜನಾದ ಅಶೋಕ ಈ ಸ್ತೂಪಗಳನ್ನೆಲ್ಲ ಸಂದರ್ಶಿಸಿ ಸ್ತಂಭ ಶಾಸನಗಳನ್ನು ನೆಡಿಸಿದನೆಂಬ ನಂಬಿಕೆಯಿದೆ.

ಐತಿಹಾಸಿಕ ವ್ಯಕ್ತಿಯಾದ ಬುದ್ಧ ಸಾಮಾನ್ಯ ವ್ಯಕ್ತಿಯಂತೆ ಹುಟ್ಟಿ ಬೆಳೆದು ತನ್ನ ಪ್ರತಿಭೆಯಿಂದಲೂ, ಪ್ರಯತ್ನದಿಂದಲೂ ಲೋಕೋತ್ತರ ಸಂಬೋಧಿ ಪಡೆದು ಬುದ್ಧನಾದ ಎಂದು ಹಳೆಯ ಥೇರವಾದದವರ ಕಲ್ಪನೆ. ಅವರ ದೃಷ್ಟಿಯಲ್ಲಿ ಬುದ್ಧ ಗುರು (ಸತ್ಥಾ, ಶಾಸ್ತ್ರ) ವಷ್ಟೆ. ಅವನನ್ನು ಪೂಜಿಸುವಾಗ ಅವರ ಶ್ರದ್ಧೆ ತಮ್ಮ ಧರ್ಮದ ಪ್ರವರ್ತಕ ಪುರುಷನೆಂಬುದು ಮಾತ್ರ. ಇದರಲ್ಲಿ ದೈವತ್ವದ ಕಲ್ಪನೆಯಿಲ್ಲ. ಬುದ್ಧ ಬೋಧಿವೃಕ್ಷದ ಅಡಿಯಲ್ಲಿ ಸಂಬೋಧಿ ಪಡೆದಾಗಲೇ ನಿರ್ಮಾಣ ಸಿದ್ಧಿಸಿತು, ಮುಕ್ತನಾದ. ಆ ಸಮಯದಲ್ಲಿ ಬುದ್ಧನೇ ಎಳೆದ ಉದ್ಗಾರ ಕಾಮಾಸವ, ಭವಾಸವ, ದೃಷ್ಟ್ಯಾಸವ, ಅವಿದ್ಯಾಸವಗಳಿಂದ ಮುಕ್ತನಾದೆ, ಜ್ಞಾನ ಒದಗಿತು (ಜಾಣಂ ಲಿಹೋಸಿ), ಜನ್ಮ ಮುಗಿಯಿತು (ಖೀಣಾ ಮೇ ಜಾತಿ) ಬ್ರಹ್ಮಚರ್ಯ ಕಳೆದದ್ದಾಯಿತು. (ಪುಸಿತಂ ಬ್ರಹ್ಮಚರಿಯಂ) ಮಾಡಬೇಕಾದದ್ದು ಮಾಡಿಯಾಯಿತು. (ಕತಂ ಕರಣೀಯಂ) ಇನ್ನೇನೂ ಉಳಿದಿಲ್ಲ (ನಾಪರಂ ಇತ್ಥತ್ಥಾಯ) ಎಂದು. ಸಂಸಾರದ ಸಂಕೋಲೆ ಕಳಚಿ ಬಿದ್ದರೂ ಆಯುಷ್ಯ ಮುಗಿಯಲಿಲ್ಲವಷ್ಟೆ. ಆದ್ದರಿಂದ ಸಂಪೂರ್ಣ ಮುಕ್ತಿ ಸಿದ್ಧವಾಗಲಿಲ್ಲ. ಆಯುಷ್ಯ ಸವೆದು ಶರೀರ ಪಾತವಾದಾಗ ಬುದ್ಧ ಸಂಪೂರ್ಣವಾಗಿ ಮುಕ್ತನಾದ. ಸಂಬೋಧಿಕಾಲದಲ್ಲಿ ಪಡೆದ ನಿರ್ವಾಣ ಸೋಪಾಧಿಕ ನಿರ್ಮಾಣ; ವೇದಾಂತಿಗಳ ಜೀವನ್ಮುಕ್ತಿಯಂತೆ. ಕುಶೀನಗರದಲ್ಲಿ ತೀರಿಕೊಂಡಾಗ ಪಡೆದ ನಿರ್ವಾಣ, ವೇದಾಂತಿಗಳ ನರುಪಾಧಿಕ ವಿದೇಹ ಮುಕ್ತಿಯಂತೆ. ಪರಿನಿರ್ವಾಣವಾದ ಅನಂತರವೂ ಬುದ್ಧನಿದ್ಧಾನೆಂದು ಥೇರವಾದಿಗಳು (ಪ್ರಾಚೀನರಾದ ಸ್ಥವಿರವಾದಿಗಳು) ನಂಬುವುದಿಲ್ಲ. ಮಜ್ಞಿಮನಿ ಕಾಯದಲ್ಲಿ ಗೋಪಕ ಮೊಗ್ಗಲ್ಲಾನ ಸುತ್ತವೆಂಬ ಪ್ರಕರಣದಲ್ಲಿ ಬುದ್ಧ ತೀರಿಕೊಂಡ ಬಳಿಕ ವರ್ಷಾಕರನೆಂಬ ಬ್ರಾಹ್ಮಣ ಆನಂದನೊಂದಿಗೆ ಮಾಡಿದ ಸಂವಾದ ಇದಕ್ಕೆ ಪುಷ್ಟಿ ಕೊಡುತ್ತದೆ. ವರ್ಷಾಕರ ಗೋತಮ ‘ತನ್ನ ಸಂಘವನ್ನು ನಿರ್ವಹಿಸಲು ಯಾರನ್ನಾದರೂ ನಿಯಮಿಸಿ ತೀರಿಕೊಂಡನೆ ?’ ಎಂದು ಕೇಳಿದ. ಆನಂದ ಇಲ್ಲವೆಂದ. ಮತ್ತೆ ವರ್ಷಾಕರ ಹಾಗಿದ್ದರೆ ಬುದ್ಧ ತೀರಿಕೊಂಡ ಬಳಿಕ ನೀವೂ ಯಾರನ್ನಾದರೂ ನಿಯಮಿಸಿದ್ದೀರಾ ? ಎಂದು ಕೇಳಿದ. ಆನಂದ ಅದಕ್ಕೂ ಇಲ್ಲವೆಂದ. ‘ಹಾಗಿದ್ದರೆ ಸಂಘ ಒಡೆಯದೆ ಇರುವುದು ಹೇಗೆ ?’ ಎಂಬ ವರ್ಷಾಕರನ ಪ್ರಶ್ನೆಗೆ ಉತ್ತರವಾಗಿ ಆನಂದ ‘ಸಂಘಕ್ಕೆ ಇಂಥ ವ್ಯಕ್ತಿಯ ಅಗತ್ಯವಿಲ್ಲ. ಬುದ್ಧ ಹೇಳಿದ ಧರ್ಮವೇ ನಮಗೆ ಶರಣ’ ಎಂದು ಹೇಳಿದ. ಎಂದರೆ ಬುದ್ಧನ ಅನಂತರ ಬೌದ್ಧರಿಗೆ ಸ್ಪೂರ್ತಿದಾಯಕವಾದುದು, ಮಾರ್ಗದರ್ಶಕವಾದುದು ಧರ್ಮವಷ್ಟೆ. ಈ ಧರ್ಮದ ನೆರಳಿನಲ್ಲಿ ನಡೆಯುವ ಸಂಘ ಧರ್ಮದ ಶರೀರವಿದ್ದಂತೆ. ಸಂಘಕ್ಕೆ ಧರ್ಮವೇ ಆತ್ಮ. ಇದಕ್ಕೆ ನಿಮಿತ್ತಕಾರಣನಾದವ ಬುದ್ಧ. ಮಿಳಿಂದ ಪ್ರಶ್ನೆಯಲ್ಲಿಯೂ ಇದೇ ಕಲ್ಪನೆ ಕಾಣಬರುತ್ತದೆ. ತ್ರಿಪಿಟಕದಲ್ಲಿಯೇ ಯಾರು ಧರ್ಮವನ್ನು ಕಾಣುತ್ತಾರೋ ಅವರು ನನ್ನನ್ನು ಕಾಣುತ್ತಾರೆ; ಯಾರು ನನ್ನನ್ನು ಕಾಣವರೊ ಅವರು ಧರ್ಮವನ್ನು ಕಾಣುವರು (ಯೋ ಧಮ್ಮಂ ಪಸ್ಸತಿ ಸ ಮಂಪಸ್ಸತಿ; ಯೋ ಮಂ ಪಸ್ಸತಿ, ಸ ಧಮ್ಮಂ ಪಸ್ಸತಿ) ಎಂದು ಬುದ್ಧನೇ ಹೇಳಿದಂತೆ ಪ್ರಸ್ತಾಪಿದೆ. ಬೌದ್ಧರು ಹೀಗೆ ಬುದ್ಧ, ಧರ್ಮ, ಸಂಘಗಳಿಗೆ ತಾದಾತ್ಮ್ಯ ಹೇಳುತ್ತಾರೆ. ಈ ದೃಷ್ಟಿಯಿಂದಲೇ ಒಂದೇ ತತ್ತ್ವವನ್ನು ತ್ರಿಪಿಟೀಕರಣ ಮಾಡಿ

ಬುದ್ಧಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ

ಎಂದು ಹೇಳಿಕೊಳ್ಳುತ್ತಾರೆ. ಈ ಶರಣಗಮನದಲ್ಲಿ ನಾಲ್ಕು ದೃಷ್ಟಿಗಳು: ಅರಿವಿನಿಂದ ಆತ್ಮನಿವೇದನ ಮಾಡಿಕೊಳ್ಳುವ ದೃಷ್ಟಿ (ಅತ್ತಸನ್ನಿಯ್ಯಾತನ); ತತ್ತ್ವಗಳಲ್ಲಿ ಮನಸ್ಸು ನಿಲ್ಲಿಸುವ ದೃಷ್ಟಿ (ತಪ್ಪರಾಯನ); ಶಿಷ್ಯನಂತೆ ಭಾವಶುದ್ಧಿ ಮಾಡಿಕೊಳ್ಳುವದೃಷ್ಟಿ (ನಿಸ್ಸಭಾವೂಪಗಮನ); ಮತ್ತು ಅಗ್ರಮರ್ಯಾದೆಗೆ ಯೋಗ್ಯವಾದ ವಸ್ತುಗಳಿಗೆ (ಅಗ್ಗದಕ್ಖಿಣೇಯ್ಯ) ನಮಸ್ಕರಿಸುವ ದೃಷ್ಟಿ (ಪಣಿಪಾತ) ಇವುಗಳಲ್ಲಿ ಮೊದಲ ಮೂರು ಥೇರವಾದದವರಿಗೆ ಮುಖ್ಯ, ನಾಲ್ಕನೆಯದು ಗೌಣ.

ಆದರೆ ಮುಂದೆ ಬಂದ ಮಹಾಸಾಂಘಿಕರಿಗೆ ಮಹಾಯಾನದವರಿಗೆ ಬುದ್ಧ ಬರಿಯ ಮನುಷ್ಯ ಗುರುವಲ್ಲ; ದೇವರು. ಅವನ ಶೀಲ ಪ್ರಜ್ಞೆ ಮುಖ್ಯವಲ್ಲ; ಕಾರುಣ್ಯ ಮುಖ್ಯ. ಕಪಿಲವಸ್ತುವಿನಲ್ಲಿ ಶುದ್ಧೋದನನ ಮಗನಾಗಿ ಅವನು ಅವತರಿಸಿದನಷ್ಟೇ. ಅದಕ್ಕೆ ಮೊದಲೂ ಅವನ ಕುಷಿತ ಸ್ವರ್ಗದಲ್ಲಿದ್ದ ಬೋಧಿ ಸತ್ತ್ವನೋ, ಅವನ ಮಹಾಭಿನಿಷ್ಕ್ರಮಣ ಸಂಬೋಧಿ, ನಿರ್ವಾಣಗಳೆಲ್ಲ ಲೋಕಸಂಗ್ರಹಕ್ಕಾಗಿ, ವಾಸ್ತವವಾಗಿ ಅವನ ಆಗಮನವೂ ಇಲ್ಲ. ಗಮನವೂ ಇಲ್ಲ; ಅವನು ತಥಾಗತ. ಪಾರಮಾರ್ಥಿಕವಾದ ಧರ್ಮಕಾಯ ಸಾಮಾನ್ಯ ಜನರ ಸಂವೃತಿ ಸ್ಥಿತಿಗೆ ಅನುವಾಗಿ ಜಾತಕಾಯವನ್ನು ಧರಿಸಿ ಬರುವುದೆಂದೂ ಶಾಕ್ಯಮುನಿ ಪರಮ ತತ್ತ್ವಗಳಾದ ಕರುಣೆ, ಬಲಗಳ ವ್ಯಾವಹಾರಿಕ ಮೂರ್ತಿಯೆಂದೂ ನಾಗಾರ್ಜುನನ ಅಭಿಪ್ರಾಯ. ಬುದ್ಧ ಅವತರಿಸಲು ಆಕರವಾಗಿ ಧರ್ಮವಿದೆ; ಇದನ್ನು ಶೂನ್ಯತಾ, ಧರ್ಮ ಕಾಯ, ತಥಥಾ ಧರ್ಮತಾ ಎಂದು ಮುಂತಾಗಿ ಕರೆದಿದ್ದಾರೆ. ನಮ್ಮ ಕಾಲದಲ್ಲಿ ಅವತರಿಸಿದ ಬುದ್ಧ ಅಸಂಖ್ಯೇಯ ಬುದ್ಧರಲ್ಲಿ ಒಬ್ಬನಷ್ಟೆ. ಮಹಾಯಾನದ ಮಹಾವಸ್ತುವೆಂಬ ಗ್ರಂಥ ಎಂಟು ಸಾವಿರ ಮಂದಿ ದೀಪಂಕರ ಬುದ್ಧರನ್ನೂ ಮೂವತ್ತು ಕೋಟಿ ಶಾಕ್ಯಮುನಿಗಳನ್ನೂ ಹೇಳುತ್ತದೆ. ಎಂದರೆ ಐತಿಹಾಸಿಕ ಬುದ್ಧನ ಗಣನೆ ಅವರಲ್ಲಿ ಅಷ್ಟಾಗಿ ಇಲ್ಲ.

ಮಹಾಯಾನ ಪಂಥದಲ್ಲಿ ಆದಿಬುದ್ಧ ಅಥವಾ ಪರಮಾದಿಬುದ್ಧನ ಕಲ್ಪನೆಯಿದೆ. ಈ ಬುದ್ಧನಿಗೆ ಉತ್ಪತ್ತಿ ನಿನಾಶಗಳಿಲ್ಲ; ಸ್ವಯಂಭು. ನೇಪಾಳದ ಖಾಟಮಂಡುವಿನಲ್ಲಿರುವ ಸ್ವಯಂಭುವಿನ ದೇವಾಲಯ ಈ ಆದಿಬುದ್ಧನದು. ಶೂನ್ಯತೆಯ ಮಡಿಲಿಂದ ಎದ್ದ ಈ ಆದಿಬುದ್ಧನಿಂದ ಐವರು ಧ್ಯಾನಿಬುದ್ಧರು ರೂಪ ತಳೆಯುವರು; ವೈರೋಚನ, ಅಕ್ಷೋಭ್ಯ, ರತ್ನಸಂಭವ, ಅಮಿತಾಭ ಮತ್ತು ಅಮೋಘಸಿದ್ಧ ಇವರೇ ಈ ಐವರು. ಆದಿ ಬುದ್ಧನದು ಪರಮಾರ್ಥ ಸ್ಥಿತಿಯಾದರೆ ಧ್ಯಾನಿ ಬುದ್ಧರು ಪ್ರವೃತ್ತಿಯಲ್ಲಿರುವವರು ಎಂದರೆ ವ್ಯವಹಾರ ಪ್ರಪಂಚದಲ್ಲಿ ನಿಂತವರು. ಇವರಿಗಾಗಿ ಚೈತ್ಯ ಮಂದಿರಗಳನ್ನು ನಿರ್ಮಿಸಿ ಇವರ ಅನುಗ್ರಹ ಪಡೆಯಲು ಪೂಜೆ ಪುರಸ್ಕಾರ ಸಲ್ಲಿಸುವ ಸಂಪ್ರದಾಯವುಂಟು. ಇವರಿಂದ ಐವರು ಧ್ಯಾನಿಬೋಧಿಸತ್ವರು ಅವತರಿಸುತ್ತಾರೆ. ವೈರೋಚನನಿಂದ ಸಮಂತ ಭದ್ರ, ಅಕ್ಷೋಭ್ಯನಿಂದ ವಜ್ರಪಾಣಿ, ರತ್ನಸಂಭವನಿಂದ ರತ್ನ ಸಂಭವನಿಂದ ರತ್ನಪಾಣಿ, ಅಮಿತಾಭನಿಂದ ಪದ್ಮಪಾಣಿ (ಅವಲೋಕಿತೇಶ್ವರ) ಮತ್ತು ಅಮೋಘಸಿದ್ಧನಿಂದ ವಿಶ್ವಪಾಣಿ-ಹೀಗೆ ಬೋಧಿಸತ್ವರು ಕಾಣಿಸಿಕೊಳ್ಳುತ್ತಾರೆ. ಇವರಿಂದ ಈ ಭೌತಿಕ ಪ್ರಪಂಚವೆಲ್ಲ ನಿರ್ಮಿತವಾಗಿದೆ. ಇವರುಗಳಿಗೆ ಸರಿಯಾಗಿ ಐವರು ಮಾನುಷೀಬುದ್ಧರು ಮನುಷ್ಯ ಲೋಕದಲ್ಲಿ ಅವತರಿಸುತ್ತಾರೆ. ಇವರು ಧ್ಯಾನಿಬುದ್ಧರ ಪ್ರತಿಬಿಂಬಗಳು. ಇದಕ್ಕೆ ನಿರ್ಮಾಣಕಾಯವೆಂದು ವ್ಯವಹಾರ. ಈ ಮಾನುಷೀ ಬುದ್ಧರಲ್ಲಿ ಶಾಕ್ಯಮುನಿಯೊಬ್ಬ. ಈ ಐವರು ಧ್ಯಾನಿಬುದ್ಧರನ್ನು ಮಂಡಲಗಳಲ್ಲಿ ವ್ಯವಸ್ಥೆ ಮಾಡಿ ವಜ್ರಯಾನದವರು ಅರ್ಚಿಸುತ್ತಾರೆ. ಈ ಮಾನುಷೀ ಬುದ್ಧರಲ್ಲದೆ ಮಹಾಯಾನ ಪಂಥರಲ್ಲಿ ಮೈತ್ರೇಯನೆಂಬ ಅಗಾಮೀಬುದ್ಧನೂ ಭೈಷಜ್ಯಗುರುವೆಂಬ ಮತ್ತೊಬ್ಬ ಬುದ್ಧನೂ ಪೂಜೆಗೊಳ್ಳುತ್ತಾರೆ. ಮೈತ್ರೇಯ ಈಗ ತುಷಿತಸ್ವರ್ಗದಲ್ಲಿರುವ ಬೋಧಿಸತ್ವ. ಬೋಧಿ ಸತ್ವರ ಕಲ್ಪನೆ ಮಹಾಯಾನಕ್ಕೆ ವಿಶಿಷ್ಟವಾದುದು. ಬುದ್ಧನಾಗುವ ಮುಂಚೆ ತ್ಯಾಗ, ಕ್ಷಾಂತಿ ಮುಂತಾದ ಪಾರಮಿತಗಳನ್ನು ಅಭ್ಯಾಸ ಮಾಡಿ ಬುದ್ಧನ ಸಿದ್ಧಿಗೆ ಸಾಧನೆ ಮಾಡುತ್ತಿರುವ ಉದ್ಯಮಿಯೇ ಬೋಧಿಸತ್ವ (ಬೋಧಿಯೇ ಸತ್ವವಾಗಿ ಉಳ್ಳವ). ಬೋಧಿಯ ಯೋಗ್ಯತೆ ಒದಗಿದರೂ ಪ್ರಾಣಿಗಳ ಮೇಲೆ ಅನುಕಂಪದಿಂದ ನಿರ್ವಾಣದ ಯೋಚನೆ ಬದಿಗಿಟ್ಟು ಜೀವಿಗಳ ಹಿತದೃಷ್ಟಿಯಿಂದ ಅವರ ನಡುವೆ ಮತ್ತೆ ಮತ್ತೆ ದೇಹಧಾರಣೆ ಮಾಡುವ, ಅವರ ಕಾರ್ಯಗಳಲ್ಲಿ ನೆರವಾಗವ ಬೋಧಿಸತ್ವನಿಗೆ ಹಲವು ಪ್ರಕಾರಗಳುಂಟು. ಶಾಕ್ಯಮುನಿ ಬುದ್ಧನೇ ಸಂಬೋಧಿ ಒದಗುವ ಪೂರ್ವದಲ್ಲಿ ಸಾವಿರಾರು ಜನ್ಮ ಎತ್ತಿ ಒಂದೊಂದು ಪಾರಮಿತ ಅಭ್ಯಾಸ ಮಾಡಿ ಲೋಕಸಂಗ್ರಹ ಮಾಡಿದ ಕಥೆಗಳು ಜಾತಕದ ವಸ್ತು. ಈ ಬೋಧಿಸತ್ವರಲ್ಲಿ ಅವಲೋಕಿನ, ಮಂಜುಶ್ರೀ ಪ್ರಮುಖರು. ಮಹಾ ಕರುಣೆಯೇ ಮೈವೆತ್ತು ಬಂದ ಅವಲೋಕಿತೇಶ್ವರ ಚೀನಾ-ಜಪಾನ್ ದೇಶದ ಬೌದ್ಧ ಧರ್ಮದಲ್ಲಿ ಪ್ರಭಾವಶಾಲಿಯಾದ ದೇವತೆ, ಪ್ರಜ್ಞೆ ಮೂರ್ತಿಮಂತವಾಗಿ ಬರುವುದು ಮಂಜುಶ್ರೀಯಲ್ಲಿ. ಅಮಿತಾಭ ಬೋಧಿಸತ್ತ್ವ ಸುಖಾವತೀವ್ಯೂಹವೆಂಬ ಸ್ವರ್ಗದಲ್ಲಿದ್ದಾನೆಂದೂ ಮನುಷ್ಯರು ಅವನ ಅನುಕಂಪದಿಂದ ಈ ಸ್ವರ್ಗಕ್ಕೆ ತೆರಳಬಹುದೆಂದೂ ಮಹಾಯಾನದವರ ನಂಬಿಕೆ. (ನಮೋಮಿತಭಾಯ ಜಿನಾಯ ತೇ ಮುನೆ, ಸುಖಾವತೀಂ ಯಾಮಿ ಚ ತೇನು ಕಂಪಯಾ) ಎಂದರೆ ಶಾಕ್ಯಮುನಿ ಬುದ್ಧನನ್ನೇ ಭಾವಗಳಿಂದ, ಕಲ್ಪನೆಗಳಿಂದ ಹಿಗ್ಗಿಸಿ ಮಾಡಿದವು ಈ ಮೂರ್ತಿಗಳು.

ಬುದ್ಧನ ಪ್ರಭಾವ ಭಾರತೀಯ ಇತಿಹಾಸದಲ್ಲಿ ಒಂದು ಪರ್ವ ಕಾಲ. ಭಾರತೀಯ ದರ್ಶನ ದಾರಿ ಬದಲಾಯಿತು; ವೈಧಿಕಯುಗದಿಂದ ಒಂದು ಸ್ಪಷ್ಟವಾದ ಪ್ರಗತಿ ಕಾಣಬಂದಿತು. ಜನಜೀವನದಲ್ಲಿ ಬುದ್ಧನ ವ್ಯಕ್ತಿತ್ವ ಧ್ವನಿತವಾಯಿತು. ಭಿಕ್ಷುಗಳ ಮಹಾಸಂಘವೊಂದು ರೂಪು ತಳೆದು ನಾಡಿನಾದ್ಯಂತ ಬೌದ್ಧಧರ್ಮ ಪ್ರಸಾರ ಮಾಡಿತು. ಶಿಲ್ಪದಲ್ಲಿ, ಸಾಹಿತ್ಯದಲ್ಲಿ, ಚಿತ್ರಕಲೆಯಲ್ಲಿ ಬುದ್ಧನ ಸ್ಪೂರ್ತಿ ಮೂಡಿಬಂದಿತು. ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲಿ ಕೂಡ ಬುದ್ಧನ ವ್ಯಕ್ತಿತ್ವ ವಿಶೇಷವಾದ ಪ್ರಭಾವ ಬೀರಿತು. ಇಡೀ ಏಷ್ಯಾಖಂಡದಲ್ಲೇ ಬೌದ್ಧಧರ್ಮ ಹರಡಿದುದರ ಮುಖ್ಯ ಕಾರಣ ಬುದ್ಧನ ದಿವ್ಯ ವ್ಯಕ್ತಿತ್ವ. ಬುದ್ಧನ ಸಂದೇಶ ಕಾಲಕ್ರಮದಲ್ಲಿ ಸಿಂಹಳ, ಬರ್ಮಾ, ಕೊರಿಯ, ಚೀನ, ಜಪಾನ್, ಟಿಬೆಟ್, ನೇಪಾಳ, ಇಂಡೋಚೀನ ಮುಂತಾದ ಹಲವು ರಾಷ್ಟ್ರಗಳಲ್ಲಿ ಹರಡಿತು. ಭಾರತದಲ್ಲಿ ಇವರ ಪ್ರಭಾವದಿಂದ ವೇದಾಂತ ದರ್ಶನದ ಹೊಸ ಯುಗ ಆರಂಭವಾಯಿತು. ವಿಷ್ಣುವಿನ ದಶಾವತಾರದಲ್ಲಿ ಬುದ್ಧನನ್ನು ಒಂದು ಅವತಾರವೆಂದು ಅಂಗೀಕರಿಸಿಕೊಂಡರು. ಜಗತ್ತಿನ ಸಂಸ್ಕøತಿಗೆ ಬುದ್ಧ ಭಾರತದೇಶದ ಉಜ್ಜ್ವಲ ಕಾಣಿಕೆಯೆಂದರೆ ಉತ್ಪ್ರೇಕ್ಷೆಯಲ್ಲ. 

10. ಕಲ್ಕಿ ಅವತಾರ

ಕಲ್ಕಿ ಅವತಾರ
ಕಲ್ಕಿ ಅವತಾರ

ದಶಾವತಾರಗಳು- ಅವತಾರ ಎಂದರೆ ಇಳಿದುಬರುವುದು ಎಂದರ್ಥ. ಇದು ಭಗವಂತ ಜೀವಕೋಟಿಯ ಉದ್ಧಾರಕ್ಕೆ ಕೈಕೊಳ್ಳುವ ಒಂದು ಕ್ರಿಯೆ. ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಸುಜನರನ್ನು ಎತ್ತಿಹಿಡಿದು ದುರ್ಜನರನ್ನು ದಮನಗೊಳಿಸುವುದರ ಮೂಲಕ ಧರ್ಮಸಂಸ್ಥಾಪನೆಗೆ ಪರಮಾತ್ಮ ಯಾವುದೋ ಒಂದು ರೂಪದಲ್ಲಿ ಧರೆಗೆ ಇಳಿದುಬರುತ್ತಾನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರ ಎನ್ನುವುದರ ಉದ್ದೇಶವನ್ನು ಸೂಚಿಸುತ್ತದೆ. ಈ ಅವತಾರಗಳ ಸಂಖ್ಯೆಯ ವಿಚಾರದಲ್ಲಿ ಒಮ್ಮತವಿಲ್ಲ. ಅಲ್ಲದೆ ಅವತಾರಗಳು ವಿಷ್ಣುವಿಗೇ ಮೀಸಲಾದವಲ್ಲ. ಶಿವನೂ ಅವತಾರ ಮಾಡಿದ್ದಾನೆ ಎಂಬುದನ್ನೂ ಮರೆಯುವಂತಿಲ್ಲ. ಮಹೇಶ್ವರ ಇಪ್ಪತ್ತೆಂಟು ಅವತಾರಗಳನ್ನು ಎತ್ತಿದ್ದಾನೆ ಎಂದು ವಾಯುಪುರಾಣ ಹೇಳುತ್ತದೆ.


ದಶಾವತಾರಗಳು
ದಶಾವತಾರಗಳು

ಹಿಂದೂ ಸಂಪ್ರದಾಯ ವಿಷ್ಣುವಿನ ಅವತಾರಗಳ ಸಂಖ್ಯೆ ಹತ್ತು ಎಂದು ನಂಬಿದೆ. ಹಿಂದೆ ಸಹಸ್ರಾರು ಆಗಿದ್ದವೆಂದೂ ಭವಿಷ್ಯದಲ್ಲಿ ಅನೇಕ ಸಹಸ್ರ ಅವತಾರಗಳು ಆಗುತ್ತವೆ ಎಂದೂ ಹರಿವಂಶದಲ್ಲಿ ಹೇಳಿದೆ. ಪೂರ್ವಮೀಮಾಂಸಾಚಾರ್ಯರಾದ ಕುಮಾರಿಲಭಟ್ಟರು ದಶಾವತಾರಗಳಲ್ಲೊಂದಾದ ಬುದ್ಧಾವತಾರವನ್ನು ವಿಷ್ಣುವಿನದೆಂಬುದನ್ನು ಒಪ್ಪುವುದಿಲ್ಲ. ವಿಷ್ಣುವಿನ ಪ್ರಸಿದ್ಧ ದಶಾವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ-ಇವುಗಳ ವಿವರಗಳು ಆಯಾ ಶೀರ್ಷಿಕೆಗಳಡಿ ಬಂದಿವೆ.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಸಂಗ್ರಹದಿಂದ 

1 Response

  1. ಹನುಮಂತ says:

    ವಾಸ್ತವದಲ್ಲಿ ಭಾರತದಲ್ಲಿ ವಾಸಿಸುತ್ತಿರುವ ಎಲ್ಲಾ ವಿದೇಶಿಗರು, ಭಾರತೀಯ ಪುರಾತನ ಸಂಸ್ಕೃತಿಯ ಯಾವುದಕ್ಕೂ ಧಕ್ಕೆ ಉಂಟು ಮಾಡದೇ ಜೀವನ ನಡೆಸಿಕೊಂಡು ಹೋಗುವುದಕ್ಕೆ ರಾಜಕೀಯ ಪಕ್ಷಗಳು ಜಾಗೃತಿ ವಹಿಸಬೇಕು. ಈ ದಿಕ್ಕಿನಲ್ಲಿ ಎಲ್ಲಾ ಸಾಹಿತಿಗಳು ಎಚ್ಚರಿಕೆಯಿಂದ ಬರೆಯುವ ಸಾಹಿತ್ಯಗಳಿರಬೇಕು. ಜೊತೆಗೆ ಎಲ್ಲಾ ರಾಜಕೀಯ ಪಕ್ಷಗಳು ಭಾರತೀಯ ಪುರಾತನ ಸಂಸ್ಕೃತಿಯ ಸ್ಥಳಗಳನ್ನು ಕಾಪಾಡಬೇಕು. ಜನಸಾಮಾನ್ಯರು ಅರಿತು ಆದರ್ಶವಾಗಿ ಬಾಳಬೇಕು. ಬಿದರಗೂಡು ಮಂಚನಾಯಕ ಹನುಮಂತ, ಸಂಸ್ಥಾಪಕರು: ಶಿಕ್ಷಣ ಸದ್ಬಳಕೆ ಫೌಂಡೇಶನ್, ನಂಜನಗೂಡು. ಮೊಬೈಲ್ ಮೊಬೈಲ್: ೯೫೩೮೭೭೧೪೪೨.

Leave a Reply

Your email address will not be published. Required fields are marked *