ಅನ್ವೇಷಣೆ – ಜಿ.ಎಸ್. ಶಿವರುದ್ರಪ್ಪ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ ||
ಎಲ್ಲಿದೆ ನಂದನ? ಎಲ್ಲಿದೆ ಬಂಧನ?
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ ||
ಹತ್ತಿರವಿದ್ದೂ, ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ ||
ನಮ್ಮ ಬದುಕು ಸುಂದರವಾದುದು. ಸಂತೋಷವಾದುದು. ನಾವ್ಯಾರೂ ಇದನ್ನು ಗಮನಿಸುವುದೇ ಇಲ್ಲ. ಸುಖ ಸಂತೋಷಕ್ಕಾಗಿ, ಕಷ್ಟ ಪರಿಹಾರಕ್ಕಾಗಿ ಯಾರನ್ನೋ ಕೇಳುತ್ತೇವೆ. ದೇವರನ್ನು ಬೇಡುತ್ತೇವೆ.
ಏನನ್ನೋ ಕೊಟ್ಟು ಅಥವಾ ಬಲಿ ನೀಡಿ ಸುಖಕ್ಕಾಗಿ ಹುಡುಕಾಡುತ್ತೇವೆ. ಸುಖದ ಮೂಲ ಎಲ್ಲಿದೆ ಎಂಬುದನ್ನು ಚರ್ಚಿಸಿರಿ. ಬೆಲ್ಲದ ರುಚಿ ಹೇಗಿದೆ ? ಎಂದರೆ ಸಿಹಿ ಇದೆ. ಎನ್ನುತ್ತೀರಿ. ಅದು ಹೇಗೆ ಗೊತ್ತಾಯಿತು? ಎಂಬ ಪ್ರಶ್ನೆಗೆ ನಾನೇ ತಿಂದು, ರುಚಿ ಅನುಭವಿಸಿದೆ ಎಂದು ಹೇಳುವಿರಿ. ನಾನೇ ಬೆಲ್ಲ ತಿಂದಂತೆ. ರುಚಿ ಅನುಭವಿಸಿದಂತೆ.
ನಮ್ಮ ಕಷ್ಟ ಸುಖಗಳಿಗೆ ನಾವೇ ಜವಾಬ್ದಾರರು. ಅದರ ಮೂಲ ನಮ್ಮಲ್ಲಿದೆ. ಇದನ್ನು ನಾವೇ ಸರಿಮಾಡಿಕೊಳ್ಳಬೇಕು. ನಮಗೆಲ್ಲ ಅತಿ ಅಭಿಮಾನವಿದೆ, ಗರ್ವ ಇದೆ. ನಾನು ಹೇಳಿದ್ದು ಸರಿಯಿದೆ. ನಾನು ಮಾಡಿದ್ದು ಅತ್ಯುತ್ತಮ ಎಂಬ ಕಲ್ಪನೆ ಇದೆ. ಹೀಗಾಗಿ ಇನ್ನೊಬ್ಬರೊಡನೆ ಹಂಚಿಕೊಂಡು, ಹೊಂದಿಕೊಂಡು, ಬದುಕದೇ ಕಷ್ಟಪಡುತ್ತೇವೆ. ದುಃಖ ಅನುಭವಿಸುತ್ತೇವೆ.
ಆದುದರಿಂದ ಹೊಂದಿಕೊಂಡು ಹೋಗಬೇಕೆನ್ನುವುದೇ ಕವಿಯ ಆಶಯವಾಗಿದೆ.