ಎರಡನೆಯ ಪುಲಿಕೇಶಿಯ ದಿಗ್ವಿಜಯ

ಎರಡನೆಯ ಪುಲಿಕೇಶಿಯ ದಿಗ್ವಿಜಯ ( ಕ್ರಿ.ಶ ೬೧೦-೬೪೨)

 ಬಾದಾಮಿಯ ಚಾಲುಕ್ಯರ ೨ನೆಯ ಪುಲಿಕೇಶಿಯ ದಿಗ್ವಿಜಯದ ಶಾಸನವು ಐಹೊಳೆಯಲ್ಲಿರುವ ಮೇಗುಟ ದೇವಾಲಯದಲ್ಲಿದೆ. ಇದನ್ನು ಪುಲಿಕೇಶಿಯ ಸೇನಾ ಪತಿಯಾದ ರವಿಕೀರ್ತಿ ಎಂಬುವನು ಸ್ವತಃ ಬರೆದು ಕಲ್ಲಿನ ಮೇಲೆ ಕೆತ್ತಿ ಸಿದನು.

ಎರಡನೆಯ ಪುಲಿಕೇಶಿಯು ಚಿಕ್ಕಪ್ಪನಾದ ಮಂಗಳೀಶನನ್ನು ಯುದ್ಧದಲ್ಲಿ ಕೊಂದುದರಿಂದ ಬಾದಾಮಿಯನ್ನುಮುಸುಕಿದ ಶತ್ರುಗಳ ಕಗ್ಗತ್ತಲೆ ಎಂಬುದು ಅಡಗಿ, ಪುಲಿಕೇಶಿಯ ಥಳಥಳ ಹೊಳೆಯುವ ಕಿರಣಗಳಿಂದ ಅದು ಬೆಳಗಲಾರಂಭಿಸಿತು. ಮುಗಿಲಲ್ಲಿ ಓಡಾಡುವ ಮೋಡಗಳು ಹಾರಿಹೋದವು. ಕೋಲ್ಮಿಂಚುಗಳ ಸೆಳೆತವು ಕಾಣದಾಯಿತು. 

ಪುಲಿಕೇಶಿಯು ಚಿಕ್ಕನನೆಂಬುದನ್ನು ಅರಿತ ಆಪ್ಯಾಯಿಕ ನುತ್ತು ಗೋವಿಂದ ಎಂಬ  ಅರಸರು ಭೀಮಾ ನದಿಯ ಉತ್ತರಕ್ಕಿರುವ ಪುಲಿಕೇಶಿಯ ರಾಜ್ಯವನ್ನು ಗೆಲ್ಲಲೆಂದು ಬಂದರು. ಅವರಿಗೆ ಅವನು ಚೆನ್ನಾಗಿಯೇ ಕೈತೋರಿಸಿದನು. ತರುವಾಯ, ಪುಲಿಕೇಶಿಯು ಬನವಸೆಯನ್ನು(ಬನವಾಸಿ) ಮುತ್ತಿದನು. ಅದು ಆಗ ಐಶ್ವರ್ಯದಲ್ಲಿ  ದೇವಲೋಕವನ್ನು ಮೀರಿಸುವಂತಿತ್ತು. ಬನವಸೆಯ ಕೋಟಿಯ ಸುತ್ತಲೂ ಸೇನಾಸಮುದ್ರವು ಸುತ್ತುಗಟ್ಟಿ ನಿಂತಿರುವಾಗ ಅದು ನೀರೊಳಗೆ ನಿಂತ ಕೋಟೆಯಂತೆ ನೋಟಕರಿಗೆ ಕಾಣಿಸಿತು.

 ಗಂಗ ಮತ್ತು ಅಳುಪ ಅರಸರು ಪುಲಿಕೇಶಿಯಿಂದ ಜಯಿಸಲ್ಪಟ್ಟರೂ ಅವನ ಆಶ್ರಯದಲ್ಲಿದ್ದು ಮದವೇರಿದವರಾದರು. ಕೊಂಕಣದಲ್ಲಿ ಆಳುತ್ತಿದ್ದ ಮೌರ್ಯರನ್ನು ಅವನ ಸೈನಿಕರು ಮುಗ್ಗುಬಡಿದರು. ಪಶ್ಚಿಮ ಸಮುದ್ರ ದಂಡೆಗೆಲ್ಲ ಸಂಪತ್ತಿನ ತವರೂರಾಗಿ ಬೆಳಸುತ್ತಿರುವ ಪುರಿಯನ್ನು ಮದವೇರಿದ ಆನೆಗಳಂತಿರುವ ನೂರಾರು ಹಡಗುಗಳಿಂದ ಪುಲಿಕೇಶಿ ಮಹಾರಾಯರು ಮುತ್ತಿದಾಗ, ಮುಗಿಲನ್ನು ಕಾರ್ಮೋಡಗಳು ಕವಿದಿರುವಂತೆ ಕಾಣಿಸಿತು. ಅವನ ಪ್ರತಾಪಕ್ಕೆ ಹೆದರಿ, ಲಾಟ, ಮಾಳವ, ಗುರ್ಜರ ಅರಸರು ಅತ್ಯಂತ ವಿನಯದಿಂದ ಅವನಿಗೆ ಮೊರೆಹೊಕ್ಕರು. 

ಹೆರ್ಷ ಮಹಾರಾಯನು ಉತ್ತರದ ಚಕ್ರವರ್ತಿ; ಅವನ ಪಾದಗಳ ಮೇಲೆ ಹಲವು ಜನ ಸಾಮಂತ ರಾಜರ ತಲೆಗಳಲ್ಲಿ ಮಿಂಚುತ್ತಿದ್ದ ಕಿರೀಟಗಳು ಉರುಳಾಡುತ್ತಿದ್ದವು. ಅಂತವನು ಪುಲಿಕೇಶಿಯ ದಂಡಿನಲ್ಲಿಯ ಮದ್ದಾನೆಗಳ ಮುಂದೆ ಹೌಹಾರಿ ಓಡಿದನು.  ವಿಂಧ್ಯೆಯ ನೆರೆಯಲ್ಲಿ ಅವನು ಆಳುತ್ತಿರುವಾಗ ಅವನಲ್ಲಿದ್ದ ಆನೆಯ ದಳವು ವಿಂಧ್ಯ ಪರ್ವತದೊಡನೆ ಹೋರಾಡುವಂತೆ ತೋರಿತು. ಇಂದ್ರನಿಗೆ ಸರಿಯಾದ ತೇಜದಿಂದ ಕೂಡಿದವನಾಗಿ ಪುಲಿಕೇತಿಯು ಮೂರು ಮಹಾ-ರಾಷ್ಟ್ರ (ಅಂದರೆ ದೊಡ್ಡದೇಶ)ಗಳ ಅಧಿಪತಿಯಾಗಿದ್ದನು. ಅವನ ದಂಡಿನವರಿಗೆ ಕಲಿಂಗ, ಕೋಸಲ ಅರಸರು ಹೆದರಿದರು. ಗೆಲ್ಲಲು ಅಸಾಧ್ಯವಾದ ಪಿಠಾಪುರದ ಕೋಟೆಯು ಅವನಿಗೆ ಸಹಜವಾಗಿ ಕೈವಶವಾಯಿತು. ತನ್ನನ್ನು ಎದುರಿಸಿದ ಪಲ್ಲವರ ಸೈನ್ಯವನ್ನು ಅವನು ತನ್ನ ಲೆಕ್ಕವಿಲ್ಲದ ದಂಡಾಳುಗಳ ಕಾಲ್ಕುಳಿತದಿಂದ ಏಳುವ ಧೂಳಿಯಿಂದ ಮುಚ್ಚಿದನು. ಅವರು ಕಂಚಿಯ ಕೋಟೆಗಳ ಹಿಂದೆಯೇ ಅಡಗಿಹೋದರು. ಅವನು ಚೋಳರನ್ನು ಗೆಲಲ್ಲು ಹೋದಾಗ, ಆನೆಗಳಿಂದ ಸೋರುತ್ತಿರುವ ಮದದ ಪ್ರವಾಹದಿಂದ ಕಾವೇರಿಯ ನದಿಯು ಹರಿಗಡಿಯಿತು. ದಟ್ಟಾಗಿ ಹರಡಿದ ಮಂಜಿಗೆ ಸೂರ್ಯನಂತಿರುವ ಅವನ ತೇಜದಿಂದ ಚೋಳ, ಕೇರಳ, ಪಾಂಡ್ಯರಿಗೆ ಅತ್ಯಂತ ಆನಂದ ವಾದುದಲ್ಲದ, ವೈಭವವನ್ನು ಹೊಂದಿದರು. ಹೀಗೆಎಲ್ಲ ದಿಗ್ದೇಶಗಳಲ್ಲಿರುವ ಅರಸರನ್ನು ಗೆದ್ದು, ಸತ್ಯಾಶ್ರಯ ಪುಲಿಕೇಶಿಯು ತನ್ನ ರಾಜಧಾನಿಯಾದ ವಾತಾಪಿನಗರ ( ಬಾದಾಮಿ ) ವನ್ನು ಸೇರಿದನು.

Leave a Reply

Your email address will not be published. Required fields are marked *