ತುತ್ತೂರಿ – ಜಿ.ಪಿ. ರಾಜರತ್ನಂ ರವರ ಪದ್ಯ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪ ಮಗರಿಸ ಊದಿದನು
ತನಗೇ ತುತ್ತೂರಿ ಇದೆಯೆಂದ
ಬೇರಾರಿಗು ಅದು ಇಲ್ಲೆಂದ
ಕಸ್ತೂರಿ ನಡೆದನು ಬೀದಿಯಲಿ
ಜಂಭದ ಕೋಳಿಯ ರೀತಿಯಲಿ
ತುತ್ತೂರಿಯೂದುತ ಕೊಳದ ಬಳಿ
ನಡೆದನು ಕಸ್ತೂರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು
ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಬಣ್ಣದ ತುತ್ತೂರಿ ಬೋಳಾಯ್ತು
ಬಣ್ಣದ ತುತ್ತೂರಿ ಹಾಳಾಯ್ತು
ಜಂಭದ ಕೋಳಿಗೆ ಗೋಳಾಯ್ತು