ಬಿದಿಗೆ ಚಂದ್ರ ಬಂದ ನೋಡು – ದ. ರಾ. ಬೇಂದ್ರೆ ಯವರ ಕವನ

ಬಿದಿಗೆ ಚಂದ್ರ ಬಂದ ನೋಡು
ದೀಪ ಹಚ್ಚಿದಂತೆ ಜೋಡು
ಯಾರ ಮನೆಯು ಅಲ್ಲಿ ಇಹುದೊ
ಯಾರು ಬಲ್ಲರು?
ನೋಡಲೇನು, ಒಬ್ಬರೇನು
ಹೇಳಲೊಲ್ಲರು
ಅಗೋ ಚವತಿ ಚಂದ್ರ ನೋಡು
ಮೂಡಿದಂತೆ ಎರಡು ಕೋಡು
ಮೃಗವು ಎಲ್ಲಿ ಇಹುದೊ ಏನೊ
ನಾನು ಕಾಣೆನು
ಇಂಥ ಚಿತ್ರ ಬರೆದನಿಲ್ಲಿ
ಯಾವ ಜಾಣನು?
ಅಷ್ಟಮಿ ಚಂದಿರನು ಬಂದ
ಅರ್ಧ ಬಿಟ್ಟು ಅರ್ಧ ತಿಂದ
ಉಂಡಿ ಚೆಲ್ಲಿ ಕೊಟ್ಟನಿಲ್ಲಿ
ಹುಡುಗನಾವನು?
ಕಾಣೆ ಅತ್ತ ಇತ್ತ ಎತ್ತು ಅವನ
ಠಾವನು
ಬಂದನು ಹುಣ್ಣಿಮೆಯ ಚಂದ್ರ
ಬೆಳದಿಂಗಳು ನಿಬಿಡ ಸಾಂದ್ರ
ಅಲ್ಲ ಅಲ್ಲ ಮುಗಿಲು ತುಂಬ
ಇಹುದು ಮಜ್ಜಿಗೆ
ಬೆಣೆಮುದ್ದೆ ಮೇಲೆಯೊಂದು
ಹೇಳು ಅಜ್ಜಿಗೆ
ದ. ರಾ. ಬೇಂದ್ರೆ ಯವರ ‘ಜೀವಲಹರಿ’ ಕವನ ಸಂಕಲನದಿಂದ ‘ಬಿದಿಗೆ ಚಂದ ಬಂದ ನೋಡು’ ಪದ್ಯವನ್ನು ಆಯ್ದುಕೊಳ್ಳಲಾಗಿದೆ.
- ಬಿದಿಗೆ– ಅಮವಾಸ್ಯೆಯ ಅನಂತರದ ಎರಡನೆಯ ದಿನ.
- ಚವತಿ– ಅಮವಾಸ್ಯೆಯ ಅನಂತರದ ನಾಲ್ಕನೆಯ ದಿನ.
- ಅಷ್ಟಮಿ– ಅಮವಾಸ್ಯೆ ಅನಂತರದ ಎಂಟನೆಯ ದಿನ.
- ಹುಣ್ಣಿಮೆ– ಪೂರ್ಣಚಂದ್ರ ಕಾಣುವ ದಿನವನ್ನು ಹುಣ್ಣಿಮೆ ಎನ್ನುವರು.