ಈ ಮಣ್ಣು ನಮ್ಮದು – ಆರ್. ಎನ್. ಜಯಗೋಪಾಲ್ ರವರ ಹಾಡು

ಈ ಮಣ್ಣು ನಮ್ಮದು
ಈ ಗಾಳಿ ನಮ್ಮದು
ಕಲಕಲನೆ ಹರಿಯುತಿಹ ನೀರು ನಮ್ಮದು
ಕಣಕಣದಲು ಭಾರತೀಯ ರಕ್ತ ನಮ್ಮದು || ಪ ||
ನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನ
ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ
ಈ ದೇಶದ ಜನರೆಲ್ಲರೂ ಸೋದರ ಸಮಾನ
ಈ ನಾಡಿನ ಹೃದಯವದು ದೈವ ಸನ್ನಿಧಾನ || 1 ||
ಅಜಂತ ಎಲ್ಲೋರ ಹಳೇಬೀಡು ಬೇಲೂರು
ಶಿಲೆಗಳಿವು ಕಲೆಯ ಆಗರ
ಹಿಂದೂ, ಬೌದ್ಧ, ಜೈನ, ಕ್ರೈಸ್ತ, ಮುಸಲ್ಮಾನ
ಧರ್ಮಗಳ ಮಹಾಸಾಗರ || 2 ||
ತಂಗಾಳಿಗೆ ತಲೆದೂಗುವ ಪೈರಿನ ಹಾಡು
ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು
ವಿಜ್ಞಾನವು ಅಜ್ಞಾನವ ಗೆಲ್ಲುವ ಹಾಡು
ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು || 3 ||