ಪಂಚತಂತ್ರ ಕತೆಗಳು ಭಾಗ-2, ಮಿತ್ರಭೇದತಂತ್ರ – ಸಿಂಹ ಹಾಗೂ ಎತ್ತಿನ ಕತೆ

ಮಿತ್ರಭೇದತಂತ್ರ - ಸಿಂಹ ಹಾಗೂ ಎತ್ತಿನ ಕತೆ
ಮಿತ್ರಭೇದತಂತ್ರ – ಸಿಂಹ ಹಾಗೂ ಎತ್ತಿನ ಕತೆ
Adam Jones from Kelowna, BC, Canada / CC BY-SA

ಮಿತ್ರಭೇದತಂತ್ರ – ಸಿಂಹ ಹಾಗೂ ಎತ್ತಿನ ಕತೆ

“ಒಂದು ಕಾಡಿನಲ್ಲಿ ಒಂದು ಸಿಂಹವೂ ಹಾಗು ಒಂದು ವೃಷಭ ಅಂದರೆ ಎತ್ತು, ಬಹಳ ಸ್ನೇಹದಿಂದ ಇದ್ದವು. ಒಂದು ಚತುರ ನರಿಯು ಚಾಡಿ ಹೇಳಿ ಆ ಮಿತ್ರರ ನಡುವೆ ವಿರೋಧ ಹುಟ್ಟಿಸಿ, ಒಂದು ದಿನ ಸಿಂಹದ ಕೈಯಿಂದ ಆ ಎತ್ತನ್ನು ಕೊಲ್ಲಿಸಿಬಿಟ್ಟಿತು.”

ಎಂದು ವಿಷ್ಣುಶರ್ಮನು ತನ್ನ ಮೊದಲ ತಂತ್ರದ ಕತೆಯನ್ನು ರಾಜಕುಮಾರರಿಗೆ ಹೇಳಿದನು. 

ಅವರಿಗೆ ಏನೊಂದೂ ಅರ್ಥವಾಗಲಿಲ್ಲ. ಸಿಂಹಕ್ಕೂ ಎತ್ತಿಗೂ ಹೇಗೆ ಸ್ನೇಹವಾಯಿತು? ನರಿ ಯಾಕೆ ಅದನ್ನು ಮುರಿಯಿತು? ದಯವಿಟ್ಟು ನಮಗೆ ವಿವರವಾಗಿ ತಿಳಿಸಿಕೊಡಿ ಎಂದು ಅವರು ತಮ್ಮ ಗುರು  ವಿಷ್ಣುಶರ್ಮನನ್ನು ಕೇಳಿಕೊಂಡರು.

ಗುರುವು ಮುಂದೆ ಹೀಗೆ ಹೇಳಿದನು.

ದಕ್ಷಿಣದೇಶದಲ್ಲಿ ಮಹಿಳಾಪುರವೆಂಬ ಒಂದು ಪಟ್ಟಣ ಇದೆ.  ಆ ಪಟ್ಟಣದಲ್ಲಿ ವರ್ಧಮಾನನೆಂಬ ಒಬ್ಬ ಶ್ರೀಮಂತ ವ್ಯಾಪಾರಿ  ಇದ್ದನು. ಸಂಪತ್ತನ್ನು ಕುಳಿತು ತಿಂದರೆ ಅದು ಕರಗಿ ಹೋಗುತ್ತದೆ. ಅದರಿಂದ ಅದನ್ನು ಸಂಪಾದನೆ ಮಾಡುತ್ತಲೇ ಇರಬೇಕು, ಹಾಗು ಹಾಗೆ ಗಳಿಸಿದ್ದನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂಬುದು ಅವನ ನಂಬಿಕೆ ಆಗಿತ್ತು. 

ಹೀಗೆ ಒಂದು ದಿನ ಅವನು ಇನ್ನಷ್ಟು ವ್ಯಾಪಾರ ಮಾಡಿ ಮತ್ತಷ್ಟು ಸಂಪತ್ತು ಗಳಿಸಬೇಕು ಎಂದು ಯೋಚಿಸಿದನು. ನಂತರ ತನ್ನಲ್ಲಿದ್ದ ಎಲ್ಲ ವಜ್ರವೈಡೂರ್ಯಗಳು, ಹವಳ ಪಚ್ಛೆಗಳು , ಬೆಳ್ಳಿ ಚಿನ್ನ ರೇಷ್ಮೆ ವಸ್ತ್ರಗಳು ಮುಂತಾದ ಸಂಪತ್ತನ್ನು ಒಂದು ಎತ್ತಿನ ಬಂಡಿಗೆ ಏರಿಸಿದನು. ಆ ಗಾಡಿಗೆ ಸಂಜೀವಕ, ನಂದಕಗಳೆಂಬ ಎರಡು ಎತ್ತುಗಳನ್ನುಕಟ್ಟಿಸಿ, ಸಾಗಿಸಿಕೊಂಡು ಪರಿವಾರ ಸಮೇತ ಪರದೇಶಕ್ಕೆ ವ್ಯಾಪಾರ ಮಾಡಲು ಹೊರಟನು. ಬಂಡಿಯು ಬಹಳ ಭಾರವಾಗಿತ್ತು, ಕಾಡಿನ ದಾರಿಯು ಹಳ್ಳದಿಣ್ಣೆಗಳಿಂದ ತುಂಬಿತ್ತು. ಹಾಗೆಯೆ ಹೋಗುತ್ತಿರುವಾಗ ಸಂಜೀವಕನೆಂಬ ಎತ್ತು ಆಯ ತಪ್ಪಿ ಬಿದ್ದುಬಿಟ್ಟಿತು, ನೋಡಿದರೆ ಅದರ  ಮೊಣಕಾಲು ಮುರಿದುಹೋಗಿ ಬಿಟ್ಟಿತ್ತು.  

ವ್ಯಾಪಾರಿಯು ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಆಲೋಚಿಸಿ ನಂತರ ಸಂಜೀವಕ ಎತ್ತಿನ ಕಾಲಿಗೆ ಕಟ್ಟು ಕಟ್ಟಿಸಿ ಅದನ್ನು ಕಾಯಲು ಕೆಲ ಜನರನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗಿ ಹೋದನು.

ಅವರು ಹೋದ ಸ್ವಲ್ಪ  ಹೊತ್ತಿನಲ್ಲಿಯೇ ಎತ್ತಿಗೆ ಕಾವಲಿದ್ದವರು, ನಾವು ಈ ಭಯಂಕರ ಕಾಡಿನಲ್ಲಿದ್ದು ಸಾಯಬೇಕೆ? ಎಂದು ಯೋಚಿಸಿ ಎತ್ತನ್ನು  ಅಲ್ಲಿಯೇ ಬಿಟ್ಟು ವ್ಯಾಪಾರಿಯ  ಬಳಿಗೆ ಓಡಿಹೋದರು. ಯಾಕೆ ಬಂದಿರಿ ಎಂದು ಕೇಳಲಾಗಿ, 

‘ ಒಂದು ಭಯಂಕರ ಹುಲಿಯ ಎಲ್ಲಿಂದಲೋ ತಟ್ಟನೆ ಬಂದು ಎತ್ತನ್ನು ಕೊಂದು ಎಳೆದುಕೊಂಡು ಹೋಯಿತು, ನಾವು ಹೇಗೋ ತಪ್ಪಿಸಿಕೊಂಡು ಬಂದೆವು’ ಎಂದು ಹೇಳಿದರು.

ಅತ್ತ ಕಾಡಿನಲ್ಲಿ ಸಂಜೀವಕ ಎತ್ತಿನ ಆಯಸ್ಸು ಗಟ್ಟಿಯಾಗಿತ್ತು. ಅದರ ಕಾಲು ದಿನೇ ದಿನೇ ಹುಷಾರಾಗಿ ಮೆಲ್ಲಗೆ ಎದ್ದು ತಿರುಗಾಡುತ್ತ, ಎಳೇ ಗರಿಕೆ ಹುಲ್ಲು ಮೇಯುತ್ತಾ ಕೊಬ್ಬಿ ಬಲಶಾಲಿಯಾಯಿತು. ಹಾಗೆಯೆ ಒಮ್ಮೆ ಓಡಾಡುತ್ತ ಹೊಟ್ಟೆ ತುಂಬಾ ಮೆದ್ದು ಜೋರಾಗಿ ಗುಟುರು ಹಾಕಿತು.

ಅದೇ ಕಾಡಿನಲ್ಲಿ ಪಿಂಗಳಕನೆಂಬ ಸಿಂಹವು ಅಲ್ಲಿನ ರಾಜನಾಗಿ ಮೆರೆಯುತಿತ್ತು. ಅಲ್ಲಿದ್ದ ಹುಲಿಗಳು, ಕಾಡಂದಿಗಳು, ಕರಡಿಗಳು, ಕಾಡುಕೋಣಗಳು, ಆನೆಗಳು, ಖಡ್ಗಮೃಗಗಳು, ಸಾರಂಗಗಳು, ಜಿಂಕೆಗಳು ಮುಂತಾದ ಸಕಲ ಮೃಗಗಳನ್ನು ರಕ್ಷಿಸುತ್ತಾ ತಪ್ಪು ಮಾಡಿದಾಗ ಶಿಕ್ಷಿಸುತ್ತ ಕಾಡಿನ ರಾಜ್ಯವನ್ನು ವೈಭವದಿಂದ ಆಳುತಿತ್ತು. 

ಆ ದಿನ ಆ ಸಿಂಹವು ಬಾಯಾರಿಕೆಯಾಗಿ ನೀರನ್ನು ಕುಡಿಯಲು  ಯಮುನಾ ನದಿಯ ತೀರದಲ್ಲಿ ಇಳಿಯುತ್ತಿರುವಾಗ, ಪ್ರಳಯಕಾಲದ ಮೇಘದಿಂದ ಹುಟ್ಟಿದ ಗುಡುಗಿನಂತೆ ಜೋರಾದ ಸಂಜೀವಕ ಎತ್ತಿನ ಗುಟರೆಯು ಕೇಳಿಸಿತು. ಅದನ್ನು ಕೇಳಿದ ಪಿಂಗಳಕ ಸಿಂಹವು ದಿಗಿಲುಪಟ್ಟು, ಇದು ಏನು ಶಬ್ಧ, ಯಾರು ಇರಬಹುದು ಅಲ್ಲಿ ಎಂದು ಆಲೋಚಿಸುತ್ತಾ ನೀರನ್ನು ಕುಡಿಯಲು ಹೋಗದೆ ಅಲ್ಲಿಯೇ ನಿಂತುಬಿಟ್ಟಿತು.

ಆ ಪಿಂಗಳಕ ಸಿಂಹರಾಜನಿಗೆ ಕರಟಕ ದಮನಕ ಎಂಬ ಎರಡು ನರಿಗಳು ಮಂತ್ರಿಗಳಾಗಿದ್ದರು. ಸಿಂಹರಾಜನು  ಒಂದು ಗೂಳಿಯ ಗುಟರೆಗೆ ಹೆದರಿದ್ದನ್ನು ಕೇಳಿದ ದಮನಕ ನರಿಯು ಕರಟಕನನ್ನು ನೋಡಿ,

‘ಎಲೈ ಕರಟಕನೇ, ಅಷ್ಟು ದೊಡ್ಡವನಾದ ನಮ್ಮ ಅರಸನು ಒಂದು ಸಣ್ಣ ಶಬ್ಧ ಕೇಳಿ ಹೊಳೆಗೆ ನೀರು ಕುಡಿಯ ಹೋಗಲಿಕ್ಕೆ ಹೆದರಿದನು. ಆತನ ಮಂತ್ರಿಗಳಾಗಿ  ನಾನು ಉಪೇಕ್ಷೆ ಮಾಡುವುದು ಯುಕ್ತವಲ್ಲ. ಆತನ ಬಳಿ ಹೋಗಿ ಹೀಗೆ ಅಂಜಲು ಕಾರಣವೇನೆಂದು ವಿಚಾರಿಸಿ ಆತನ ಭಯವನ್ನು ತೀರಿಸೋಣವೇ?’ ಎಂದು ಕೇಳಲು, ಕರಟಕ ನರಿಯು 

‘ಎಲೈ ಹುಚ್ಚನೇ, ದಾರೀಲಿ ಹೋಗುವ ಜಗಳವನ್ನು  ಮೈಮೇಲೆ ತಂದುಕೊಂಡ ಹಾಗೆ ನಮಗೆ ಯಾಕೆ ಬೇಕು? ದೇವರು ಕೊಟ್ಟಷ್ಟು ತಿಂದು ಉಂಡು ಸುಖವಾಗಿರೋಣ. ಸುಮ್ಮನೆ ಅಧಿಕಪ್ರಸಂಗಕ್ಕೆ ಹೋದರೆ ‘ಮೇಕು ಕಿತ್ತ ಕೋತಿಯ ಹಾಗೆ ನಮಗೇ ತೊಂದರೆಯಾಗುವುದು’, ಅಂತಾ ಹೇಳಿತು.

‘ಮೇಕು ಕಿತ್ತ ಕೋತಿಯೇ?’ , ಏನು ಹಾಗೆಂದರೆ ಎಂದು ದಮನಕನು ಕೇಳಲು ಕರಟಕನು ಆ ಕೋತಿಯ ಕತೆಯನ್ನು ಹೀಗೆ ಹೇಳಿದನು.

ಮುಂದಿನ ಭಾಗದಲ್ಲಿ ಮೇಕು ಕಿತ್ತ ಕೋತಿಯ ಕತೆ

You may also like...

Leave a Reply

Your email address will not be published. Required fields are marked *