ಕಾಳಿದಾಸ – ಕುವೆಂಪು ಅವರ ಬರಹ
ಸಂಸ್ಕೃತ ಸಾಹಿತ್ಯದಲ್ಲಿ ಮಹೋನ್ನತಿನೆತ್ತು ವಿಶೇಷ ಕಾಂತಿಯಿಂದ ಕಂಗೊಸುವ ಅಮರ ಕವಿಗಳೆಂದರೆ ವಾಲ್ಮೀಕಿ, ವ್ಯಾಸ ಮತ್ತು ಕಾಳಿದಾಸ. ಪೂರ್ಣವೂ ಸ್ವರಸವೂ ಆದ ಭಾರತೀಯ ಸಂಸ್ಕೃತಿಯ ಪ್ರಾಚೀನ ಪ್ರತಿನಿಧಿಗಳಿವರು. ಮರ್ತ್ಯಕ್ಕೆ ಅಮರ್ತ್ಯವನ್ನು ಪಡೆದು ಅದನ್ನು ಜೀವಂತ ಕಾವ್ಯ ‘ವನ್ನಾಗಿ ಕಡೆದಿದ್ದಾನೆ, ಕವಿಋಷಿ ವಾಲ್ಮೀಕಿ. ಋಷಿಕವಿಯಾದ ವ್ಯಾಸ ತನ್ನ ಮಹಾಕಾವ್ಯದಲ್ಲಿ ಮರ್ತ್ಯ ಅಮರ್ತ್ಯಗಳೆರಡನ್ನೂ ಸಮ್ಮಿಲನಗೊಳಿಸಿದ್ದಾನೆ. ಮರ್ತ್ಯದಲ್ಲಿ ಅಮರ್ತ್ಯವನ್ನು ಸವಿದ ಪ್ರೆತಿಭೆ ಕಾಳಿದಾಸನದು.
ಸಾಕಾದಷ್ಟು ಸಾಧನ ಸಾಮಗ್ರಿಗಳಿಲ್ಲದೆ ಅನೇಕ ವೇಳೆ ಪ್ರಾಚೀಕ ಭಾರತೀಯ ಕವಿಗಳ ಜೀವನ, ಕಾಲ ಮೊದಲಾದ ವಿಷಯಗಳನ್ನು ನಿಷ್ಕರ್ಷಿಸುವುದು ಜಟಿಲವಾಗಿದೆ. ಕಾಳಿದಾಸನ ಜೀವನ ಕಾಲಗಳ ವಿಷಯ ವಾಗಿಯೂ ಜಿಜ್ಞಾಸೆ ನಡೆದಿದೆ, ನಡೆಯುತ್ತಿದೆ. ಕೆಲವರು ವಿದ್ವಾಂಸರು ಅವನು ಜನ್ಮದಿಂದ ಬ್ರಾಹ್ಮಣನಾಗಿದ್ದು ಅನಾಥನಾದುದರಿಂದ ಗೊಲ್ಲರೊಡನೆ ಬೆಳೆದು ಬಂದನೆಂದೂ ಮತ್ತೆ ಕೆಲವರು ಅವನು ಹುಟ್ಟಿನಿಂದಲೆ ಕುರುಬನೆಂದೂ ಅಭಿಪ್ರಾಯಪಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಆಧಾರಗಳು ಖಚಿತವಾಗಿ ಜೊರೆಯುವವರೆಗೆ ಸ್ವಾರ್ಥಮೂಲವಾದ ಅಭಿಸಂಧಿಯಿಂದ ಹೀಗೆಯೆ ಇರಬೇಕೆಂದು ನಿರ್ಣಯಿಸುವುದು ಉಚಿತವಾಗಿ ತೋರುವುದಿಲ್ಲ.
ಒನ್ಮೊಮ್ಮೆ ಜನಜನಿತವಾದ ಕಥೆಯಲ್ಲಿ ಹೆಚ್ಚು ಸತ್ಯಾಂಶ ಪ್ರಕಟವಾಗುವುದುಂಟು. ಕುರುಬನಾದ ಮಾತ್ರಕ್ಕೆ ಕಾಳಿದಾಸ ಪ್ರತಿಭಾಶಾಲಿಯಾದ ಮಹಾಕವಿಯಾಗಲಾರನೆಂದು ಹೇಳಲಾದೀತೆ? ಭಗವಂತನ ಶಕ್ತಿ ಎಲ್ಲಿ ಬೇಕಾದರೂ ಯಾವ ರೂಪದಲ್ಲಿಯಾದರೂ ಮೈದೋರಬಹುದು. ಅಲ್ಲದೆ ಕವಿ ಕವಿಯಾಗಿರುವುದು ಅವನ ಜಾತಿಯಿಂದಲ್ಲ. ಅದನ್ನು ಕಟ್ಟಿಕೊಂಡೇನಾಗಬೇಕು ಸಹೃದಯರಿಗೆ?
ಭೋಗಪ್ರಧಾನವಾದ ಶ್ರೀಮಂತ ಕಾಲದಲ್ಲಿ ಬದುಕಿ ಬಾಳಿದನು ಕವಿ ಕಾಳಿದಾಸ.
ಋತುಸೆಂಹಾರ, ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ, ಕುಮಾರಸಂಭವ, ಶಾಕುಂತಲ, ಮೇಘದೂತ, ರಘುವಂಶ ಇವೇ ನಮಗಿ ದೊರಕಿರುವ ಅವನ ಕೃತಿಗಳು.
ಕವಿಯ ಪ್ರತಿಭೆ ಉನ್ಮಿಲನವಾಗುತ್ತಿರುವಾಗಲೆ ಮೂಡಿ ಬಂದ ಮೊದಲ ಕೃತಿ ಖುತುಸಂಹಾರ. ಪ್ರಕೃತಿಯ ಬಹುಮುಖ ಸೌಂದರ್ಯ ವಿಲಾಸಗಳು ಮಾನವೀಯತೆಯಿಂದ ಸ್ಪಂದಿಸುವ ಚಿತ್ರಮಯ ಲೋಕವನ್ನು ಖುತುಸಂಹಾರದಲ್ಲಿ ಚೆತ್ರಿಸಿದ್ದಾನೆ ಕನಿ. ಈ ಕೃತಿಯಲ್ಲಿ ಕೆಲವು ಕಡೆ ಭಾವ ರಸತ್ವಕ್ಕೇರದಿರುವುದರಿಂದ ರಸಾನುಭನಕ್ಕೆ ಬದಲಾಗಿ ಭಾವೋದ್ರೇಕವಾಗುವುದುಂಟು. ಆದರೂ ಈ ಪ್ರಥಮ ಕೃತಿಯಲ್ಲಿ ಕವಿಯ ರಚನಾ ಕೌಶಲ್ಯನನ್ನೂ ಸುಮನೋಹರ ಕಲ್ಪನಾ ಮಾಧುರ್ಯವನ್ನೂ ನಾದಮಯ ಸುಲಲಿತ ಶೈಲಿಯನ್ನೂ ಕಾಣುತ್ತೇವೆ.
ಮಾಲವಿಕಾಗ್ನಿಮಿತ್ರ. ವಿಕ್ರಮೋರ್ವಶೀಯಗಳಲ್ಲಿ ಪ್ರಯೋಗಗಳನ್ನು ನಡೆಸಿ ಪುಷ್ಟಿಗೊಂಡಕವಿಪ್ರತಿಭೆ ಶಾಕುಂತಲದಲ್ಲಿ ಮುಗಿಲು ಮುಟ್ಟಿದೆ.
“ಶಾಕುಂತಲ‘ ಭಾರತೀಯರನ್ನು ಮಾತ್ರವಲ್ಲಡಿ ಜಗತ್ತಿನ ಸಾಹಿತ್ಯಾರಾಧಕರನ್ನೂ ರಸಾವೇಶಗೊಳಿಸಿದೆ. ಮೇಘದೂತದಂತಹ ರಮಣೀಯ ಕಾವ್ಯದಲ್ಲಿ ಅತಿ ನೂತನವಾದ ವಸ್ತುವನ್ನು ಅಳವಡಿಸಿಕೊಂಡು ಶೃಂಗಾರ ಗೋಪುರವನ್ನೆ ಬೆಳ್ಮುಗಿಲ ಬಾನಿನಲ್ಲಿ ತೇಲಿಬಿಟ್ಟಿದ್ದಾನೆ ಕನಿ.
ಕುಮಾರಸಂಭವ ಕಾವ್ಯದಲ್ಲಿಯೂ ರಘುವಂಶ ಮಹಾಕಾವ್ಯದಲ್ಲಿಯೂ ಕವಿಯ ಕಾವ್ಯಯೋಗ ಆತ್ಮಸಾಧನೆಯಾಗಿಯೂ ಪರಿಣಮಿಸಿರುವುದನ್ನು ಕಾಣಬಹುದು.
ಸುಮಧುರ ಕಾವ್ಯಮಧುವಿನಿಂದ ಸಹೃದಯರನ್ನು ರಸತೃಪ್ತಿಪಡಿಸುವ ವಿಶೇಷ ಶಕ್ತಿ ಕಾಳಿದಾಸನದು. ಅವನ ಕಾವ್ಯಗಳ ಕಲ್ಪನಾ ವಿಲಾಸಕ್ಕೂ ನಾದ ಮಾಧುರ್ಯಕ್ಕೂ ಮೋಹಿತರಾಗದವರು ಅಪೂರ್ವ. ತನ್ನ ಹಿತಮಿತ ವಚನಗಳಿಂದಲೂ ಸುಂದರ ಉಪಮೆಗಳಿಂದಲೂ ಲೋಕಸ್ರಿಯನಾಗಿದ್ದಾನೆ, ಕವಿಕುಲ ಗುರುವಾಗಿದ್ದಾನೆ.
ಇಂತಹೆ ಕವಿ ಭಾರತೀಯ ಸಂಸ್ಕೃತಿ ಇರುವವರೆಗೆ, ಭಾರತೀಯ ಜನರಿರುವವರೆಗೆ, ಅಷ್ಟೇ ಏಕೆ, ಜಗತ್ತಿನ ಸಾಹಿತ್ಯ ಸಂಸ್ಕೃಕಿಗಳಿರುವವರೆಗೆ, ಚಿರನೂತನವಾಗಿ ಬಾಳುವುದರಲ್ಲಿ ಸಂಶಯವಿಲ್ಲ.
ಕೆ. ವಿ. ಪುಟ್ಟಪ್ಪ (ಕುವೆಂಪು),
೨೪-೭-೧೯೫೪
ಎಂ. ಲಕ್ಷ್ಮೀನರಸಿಂಹಯ್ಯ ರವರ ‘ಕಾಳಿದಾಸ’ ಪುಸ್ತಕದಿಂದ