ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 21: ಕೆಳೆತನ
೨೧. ಕೆಳೆತನ
ಅರಮನೆಯ ಸುರಂಗಮಾರ್ಗದಿಂದ ರಾಜಧಾನಿಯನ್ನು ಬಿಟ್ಟು ಹೊರಟ ರಾಕ್ಷಸನು ಸರ್ವಾರ್ಥಸಿದ್ಧಿರಾಜನಿದ್ದ ತಪೋವನದಲ್ಲಿಯೇ ಇದ್ದನು. ತನ್ನ ಮುಂದಿನ ಕಾರ್ಯಕ್ರಮವನ್ನಿನ್ನೂ ಆತನು ನಿರ್ಧರಿಸಿರಲಿಲ್ಲ. ಅಷ್ಟರಲ್ಲೇ ರಾಜಧಾನಿಯ ಕಡೆಗೆ ಹೊರಟಿದ್ದ ಬೀಸಣಿಗೆಯವನಿಂದ ರಾಜನು ಸತ್ತ ಸುದ್ದಿ ರಾಕ್ಷಸನಿಗೆ ತಿಳಿಯಿತು. ಸ್ವಾಮಿಭಕ್ತನಾದ ಆತನಿಗೆ ಈ ಪೆಟ್ಟನ್ನು ಸಹಿಸಿಕೊಳ್ಳಲಾಗಲಿಲ್ಲ. ಒಡನೆಯೇ ಅವನ ಕಣ್ಣುಗಳು ಹನಿಗೂಡಿದುವು. ರಾಜನಿಗೆ ದತ್ತುಮಗನನ್ನು ತಂದು ನಂದರವಂಶವನ್ನು ಮುಂದುವರಿಸಬೇಕೆಂದಿದ್ದ ಅವನ ಆಶೆ ಬರಿದಾಯಿತು. ಬೆಂದಗಾಯಕ್ಕೆ ಸಾಸಿವೆಯನ್ನರೆದು ಬಳಿದಂತೆ, ವಿಷಕನ್ಯೆಯಿಂದ ಪರ್ವತರಾಜನ ಮರಣ, ಮಲಯೆಕೇತುವಿನ ಪಲಾಯನ ಇವು ಕ್ರಮವಾಗಿ ರಾಕ್ಷಸನಿಗೆ ತಿಳಿದುಬಂದುವು. ರಾಕ್ಷಸನು ತನ್ನ ಮನಸ್ಸಿನಲ್ಲೇ ‘ಅಯ್ಯೋ, ನಾನು ಮಾಡಿದ ದೊಡ್ಡ ಪ್ರಯತ್ನ ಫಲಿಸದಾಯಿತು. ಅರ್ಜುನನನ್ನು ಕೊಲ್ಲಲು ಕರ್ಣನು ಇಂದ್ರನಿಂದ ಪಡೆದ ಶಕ್ತಿಗೆ ಘಟೋತ್ಕಚನನ್ನು ಗುರಿಪಡಿಸಿ ಕೃಷ್ಣನು ತನ್ನ ಭಕ್ತನನ್ನು ಕಾಪಾಡಿದಂತೆ ವಿಷಕನ್ಯೆಯಿಂದ ಪರ್ವತರಾಜನನ್ನು ಕೊಲ್ಲಿಸಿ, ಚಾಣಕ್ಯನು ಚಂದ್ರಗುಪ್ತನನ್ನು ಕಾಪಾಡಿದನು. ನನ್ನ ಮಹಾಪ್ರಯತ್ನವೇ ಈ ರೀತಿಯಾದ ಮೇಲೆ ಸಣ್ಣ ಪ್ರಯತ್ನಗಳು ಚಂದ್ರಗುಪ್ತನನ್ನು ಏನು ಮಾಡುವುವು? ಆದರೆ ಈಗಲೂ ಇನ್ನೂ ಕಾಲ ಮಾರಿಲ್ಲ. ಚಂದ್ರಗುಪ್ತನ ಹೆಗೆಯಾದ ಮಲಯಕೇತುವನ್ನು ಸೇರಿ, ಅವನನ್ನು ಪ್ರೋತ್ಸಾಹಿಸಿ ಅವನ ಸೇನೆಯನ್ನು ಕರೆತಂದು ಪಾಟಲೀಪುರವನ್ನು ಮುತ್ತುವೆನು. ಚಾಣಕ್ಯ ಚಂದ್ರಗುಪ್ತರ ಗರ್ವವನ್ನು ಮುರಿದು ಪರಲೋಕದಲ್ಲಿರುವ ಪ್ರಭುಗಳಿಗೆ ಸಂತೋಷವನ್ನುಂಟುಮಾಡುನೆನು. ಹಾಗಲ್ಲದೆ ಚಂದ್ರಗುಪ್ತನ ಏಳಿಗೆಯನ್ನು ಕಂಡು ಸಹಿಸೆನು’ ಎಂದು ಚಿಂತಿಸಿ, ಆ ಚಾರನೊಡನೆ ಪರ್ವತರಾಜ್ಯದ ಕಡೆಗೆ ಹೊರಟನು. ಆ ರಾಜ್ಯದ ರಮಣೀಯತೆ ರಾಕ್ಷಸನ ಮನಸ್ಸನ್ನು ಸೆರೆಹಿಡಿಯಿತು.
ರಾಜಧಾನಿಯ ಉಪವನದಲ್ಲಿ ರಾಕ್ಷಸನು ಬಂದಿಳಿದಿರುವುದು ದೂತರಿಂದ ಭಾಗುರಾಯಣಯನಿಗೆ ತಿಳಿಯಿತು. ಅವನು ತನ್ನ ಮನಸ್ಸಿನಲ್ಲಿ ಈ ರೀತಿ ಚೆಂತಿಸಿದನು: ‘ಚಾಣಕ್ಯರ ಊಹೆ ನಿಜವಾಯಿತು. ರಾಕ್ಷಸನು ಈಗ ಮಲಯಕೇತುವನ್ನು ಆಶ್ರಯಿಸುವನು. ರಾಕ್ಷಸನಲ್ಲಿ ಇಲ್ಲದ ದೋಷವನ್ನು ಈಗಲೇ ಹೊರಿಸಕೂಡದು. ಹಾಗೆ ಮಾಡಿದರೆ ರಾಕ್ಷಸನು ಮತ್ತೊಬ್ಬ ರಾಜನನ್ನು ಆಶ್ರಯಿಸುವನು. ಇದರಿಂದ ರಾಜಕಾರ್ಯ ಕೆಡುವುದು. ಚಂದ್ರಗುಪ್ತನ ಮೇಲೆ ರಾಕ್ಷಸನು ರಾಜಕಾರ್ಯ ನಡೆಸಲಿ, ಸಮಯವರಿತು ಮಲಯಕೇತುವಿಗೆ ಬೋಧಿಸಿ ಬೆಕ್ಕನ್ನು ನಯದಿಂದ ಹತ್ತಿರಕ್ಕೆ ಕರೆದು ಆಮೇಲೆ ಬಿಸಿನೀರನ್ನೆರಚಿ ಅಟ್ಟುವಂತೆ, ರಾಕ್ಷಸನಲ್ಲಿ ರಾಜಕುಮಾರನಿಗೆ ಕೋಪ ಬರುವಂತೆ ಮಾಡಿ ಇಲ್ಲಿಂದ ಅಟ್ಟುವೆನು.’
ಭಾಗುರಾಯಣನು ಮಲಯಕೇತುವಿನ ಬಳಿಗೆ ಬರುವುದರೊಳಗಾಗಿ ರಾಕ್ಷಸನ ದೂತನು ರಾಜಕುಮಾರನ ಬಳಿಗೆ ಬಂದಿದ್ದನು, ರಾಕ್ಷಸನು ತನ್ನ ರಾಜಧಾನಿಗೆ ಬಂದಿರುವ ಸುದ್ದಿಯನ್ನು ಕೇಳಿ ಮಲಯಕೇತು ತನ್ನೊಳಗೆ ‘ನಂದರ ಮಂತ್ರಿಯಾದ ರಾಕ್ಷಸನು ಇಲ್ಲಿಗೆ ಬರಲು ಕಾರಣವೇನು? ಚಂದ್ರಗುಪ್ತನಿಗೆ ಹೆದರಿ ಬಂದಿರಬಹುದೇ? ಇಲ್ಲವೆ ಅವನಲ್ಲಿ ಹಗೆ ಸಾಧಿಸುವುದು ಅಮಾತ್ಯನ ಗುರಿಯೆ? ವಿಚಾರಿಸಿ ನೋಡಬೇಕು. ರಾಕ್ಷಸನು ಕಾರ್ಯದಕ್ಷ, ಸತ್ಯವಂತ, ಬುದ್ಧಿ ಶಾಲಿ ಮತ್ತು ಪ್ರಜಾರಂಜಕ. ಈತನನ್ನು ನಮ್ಮ ತಂದೆ ಬಹುವಾಗಿ ಕೊಂಡಾಡುತ್ತಿದ್ದ. ಚಂದ್ರಗುಪ್ತನ ಮೇಲೆ ಹೆಗೆ ತೀರಿಸಿಕೊಳ್ಳಲು ಬಂದಿದ್ದರೆ, ರಾಕ್ಷಸನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ನನ್ನ ಹಗೆಯನ್ನು ಸಾಧಿಸುವೆನು’?’ ಎಂದು ಯೋಚಿಸಿದನು. ಅಷ್ಟರಲ್ಲೇ ಭಾಗುರಾಯಣನು ರಾಜಕುಮಾರನ ಬಳಿಗೆ ಬರಲು, ಮಲಯಕೇತು ರಾಕ್ಷಸನ ವಿಷಯದಲ್ಲಿ ಅವನ ಅಭಿಪ್ರಾಯವನ್ನು ಕೇಳಿದನು. ಅದಕ್ಕೆ ಭಾಗುರಾಯಣನು “ರಾಕ್ಷಸನು ಬುದ್ಧಿವಂತ, ಒಳ್ಳೆಯ ಸೇನಾನಿ. ಅವನೇ ನಿನ್ನಬಳಿ ಬಂದಿರುವುದರಿಂದ ನಿನ್ನ ಕೆಲಸ ಕೈಗೂಡಿತು’ ಎಂದು ರಾಕ್ಷಸನನ್ನು ಹೊಗಳಿದನು. ರಾಕ್ಷಸನನ್ನು ಗೌರವದಿಂದ ಮಲಯಕೇತುವಿನ ಬಳಿಗೆ ಕರೆತರುವ ಕಾರ್ಯ ಭಾಗುರಾಯಣನ ಪಾಲಿಗೆ ಬಂತು.
ತನ್ನನ್ನು ಕರೆತರಲು ಭಾಗುರಾಯಣನು ಬಂದುದನ್ನು ಕಂಡು ಅಮಾತ್ಯನಿಗೆ ಸೋಜಿಗವಾಯಿತು. ಮಲಯಕೇತುವಿನಲ್ಲಿಗೆ ಸೇನಾಪತಿ ಬರಲು ಕಾರಣವೇನೆಂದು ರಾಕ್ಷಸನು ಕೇಳಲು ಭಾಗುರಾಯಣನು ಹೇಳಿದನು ‘ಅಮಾತ್ಯರೇ, ನಂದರು ಸತ್ತಮೇಲೆ ರಾಜಯೋಗ್ಯನಲ್ಲದ ಚಂದ್ರಗುಪ್ತನನ್ನು ಸೇವಿಸಲು ನನ್ನ ಮನಸ್ಸು ಒಡಂಬಡಲಿಲ್ಲ. ಪರ್ವತರಾಜನಲ್ಲಿಗೆ ಹೋಗಿ ಅವನನ್ನು ಸೇವಿಸಬೇಕೆಂಬ ಬಯಕೆಯಿಂದ ಚಂದ್ರಗುಪ್ತನಿಗೆ ಕಾಣಿಸಿಕೊಳ್ಳದೆ ಉದಾಸೀನದಿಂದಿದ್ದೆ. ಇಷ್ಟರಲ್ಲೇ ರಾಜಸಭೆಯಲ್ಲಿ ನನ್ನನ್ನು ಅವಮಾನಪಡಿಸಬೇಕೆಂದಿದ್ದ ಚಾಣಕ್ಯನ ಆಲೋಚನೆ ನನಗೆ ತಿಳಿದುಬಂತು. ಹೀಗಿರುವಾಗ ನನ್ನ ಸೇನೆಯನ್ನು ತೆಗೆದುಕೊಂಡು ಕಾಳಗಕ್ಕೆ ಸಿದ್ಧನಾಗಿ ಪರ್ವತರಾಜನ ಗೂಡಾರದ ಪಶ್ಚಿಮಕ್ಕೆ ಹೋಗಿ ನಿಂತುಕೊಳ್ಳಬೇಕೆಂದು ಪ್ರಭುಗಳ ಅಪ್ಸಣೆಯಾಯಿತು. ಮಗನೊಡನೆ ಪರ್ವತರಾಜನಿಗೆ ಚಾಣಕ್ಯನು ಏನೋ ದ್ರೋಹ ಬಗೆಯುತ್ತಿರುವನೆಂದು ನನಗೆ ಅರಿವಾಯಿತು. ರಾಜನ ಗೂಡಾರದ ಬಳಿಗೆ ಬರುವಷ್ಟರಲ್ಲಿಯೇ ವಿಷಕನ್ಯೆಯಿಂದ ಪರ್ವತರಾಜನು ಸತ್ತ ಸಮಾಚಾರ ನನಗೆ ತಿಳಿಯಿತು. ಈ ವೇಳೆಗೆ ಸರಿಯಾಗಿ ಚಂದ್ರಗುಪ್ತನ ಸೇನೆ ದೂರದಲ್ಲಿ ಬರುತ್ತಿದ್ದುದು ಕಂಡುಬಂತು. ಇದನ್ನರಿತ ನಾನು ರಾಜಕುಮಾರನನ್ನು ವೈರಿಗಳಿಗೆ ಸಿಕ್ಕದಂತೆ ಕರೆತರಲು ಆ ಉಪಕಾರಕ್ಕಾಗಿ ನನ್ನನ್ನು ಮಲಯಕೇತು, ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿದ್ದಾನೆ. ಈಗ ನೀವು ಬಂದುದರಿಂದ ಮಲಯಕೇತುವಿನ ಬಯಕೆ ಕೈಗೂಡಿತು. ತಾವು ರಾಜಸಭೆಗೆ ದಯವಿಟ್ಟು ಬರಬೇಕು. ಇದು ರಾಜಕುಮಾರನ ಕೋರಿಕೆ.’
ಭಾಗುರಾಯಣನ ಮಾತನ್ನು ಮನ್ನಿಸಿ ರಾಕ್ಷಸನು ರಾಜಸಭೆಗೆ ಬರಲು, ಮಲಯಕೇತು ಆತನನ್ನು ವಿಶ್ವಾಸದಿಂದ ಕಂಡು ನಮಸ್ಕರಿಸಿದನು. ತನ್ನನ್ನು ಹರಸಿದ ರಾಕ್ಷಸನನ್ನು ಕುರಿತು ಮಲಯಕೇತು ‘ಅಮಾತ್ಯರೇ, ನೀವು ನನ್ನಲ್ಲಿಗೆ ಬಂದುದರಿಂದ ನಾನು ಧನ್ಯನಾದೆ. ನನ್ನ ತಂದೆ ಸತ್ತ ಶೋಕ ಇಂದಿಗೆ ಕೊನೆಗಂಡಿತು. ನನ್ನನ್ನು ಮಮತೆಯಿಂದ ನಿಮ್ಮ ಮಗನಂತೆ ಕಂಡು ಸಹಾಯಮಾಡಬೇಕು. ಇನ್ನು ವಿಶ್ರಮಿಸಿ ಕೊಳ್ಳಿ ‘ ಎಂದು ನುಡಿದು ಅವನಿಗೆ ಉಚಿತವಾದೆಡೆಯಲ್ಲಿ ಬೀಡಾರ ಮಾಡಿಸಿದನು.
ಮಾರನೆಯದಿನ ರಾಕ್ಷಸನು ಮಲಯಕೇತುವನ್ನು ಏಕಾಂತದಲ್ಲಿ ಕಂಡನು. ಅಮಾತ್ಯನು ರಾಜಕುಮಾರನಿಗೆ ‘ಕುಮಾರ, ಚಾಣಕ್ಯನು ನಿಮ್ಮ ತಂದೆಯಿಂದ ಎಷ್ಟು ಉಪಕಾರ ಹೊಂದಿದನು! ಆದರೆ ಅದರ ಫಲ ಮಿತ್ರದ್ರೋಹ! ರಾಜಾಧಿರಾಜನಿಗೆ ಎಂಥ ಸಾವು ಬಂತು! ಇಷ್ಟೆಲ್ಲ ಕಪಟವನ್ನೇಕೆ ಆಚರಿಸಿದ ಚಾಣಕ್ಯ?— ಅರ್ಧರಾಜ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ. ಇದಕ್ಕಾಗಿ ನೀನು ಚಿಂತಿಸಬೇಡ. ನಂದರ ರಾಜ್ಯದಲ್ಲಿ ನನಗೆ ಪ್ರಜೆಗಳ ಬೆಂಬಲವಿದೆ. ನನ್ನ ಕಡೆಯವರು ಕಪಟದಿಂದ ಚಂದ್ರಗುಪ್ತನನ್ನು ಕೊಲ್ಲಲು ಸಮಯ ನೋಡುತ್ತಿದ್ದಾರೆ. ಈ ವೇಳೆಯಲ್ಲಿ ನೀನು ಸುಮ್ಮನಿರದೆ ಧೈರ್ಯಮಾಡಿ ಸೇನೆಯನ್ನು ಜೊತೆಗೊಳಿಸು. ನಿನ್ನ ಸಹಾಯದಿಂದ ಪಾಟಿಲೀಪುರವನ್ನು ಮುತ್ತಿ, ಹೇಗಾದರೂ ಚಂದ್ರಗುಪ್ತನನ್ನು ಸಂಹರಿಸಿ ನಿನ್ನನ್ನು ಆ ಸಿಂಹಾಸನದಲ್ಲಿ ಕುಳ್ಳಿರಿಸುವೆನು. ನನಗೆ ರಾಜ್ಯದ ಮೇಲೆ ಆಸೆಯಿಲ್ಲ. ಸ್ವಾಮಿಭಕ್ತಿಯನ್ನು ಮೆರೆಯುವುದೇ ನನ್ನ ಗುರಿ’ ಎಂದು ಅವನನ್ನು ಪ್ರೋತ್ಸಾಸಿದನು.
‘ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ, ಎಂಬ ನಾಣ್ಣುಡಿಯಂತೆ ಮಲಯಕೇತುವಿನ ಆಸೆಯನ್ನೇ ಅಮಾತ್ಯನು ನುಡಿದನು. ರಾಕ್ಷಸನು ಮನಸ್ಸು ಮಾಡಿದರೆ ಅವನ ಮುಂದೆ ಚಾಣಕ್ಯನ ತಂತ್ರ ಎಷ್ಟು ಮಾತ್ರ! ಮಲಯಕೇತುವಿಗೆ ರಾಕ್ಷಸನಲ್ಲಿ ನಂಬಿಕೆಯುಂಟಾಗಿ, ತನ್ನೆಲ್ಲ ಅಧಿಕಾರಿಗಳ ಎದುರಿಗೆ ಅವನಿಗೆ ಸರ್ವಾಧಿಕಾರವನ್ನು ಕೊಟ್ಟನು. ರಾಕ್ಷಸನು ಕಾಲಕಳೆಯದೆ ಮುಂದಿನ ಕಾರ್ಯಗಳಿಗೆ ಗಮನಕೊಟ್ಟನು.
ಮುಂದಿನ ಅಧ್ಯಾಯ: ೨೨. ಆಶ್ರಯ