ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 26: ಕಪಟಕಲಹ

೨೬. ಕಪಟಕಲಹ

ಚಾಣಕ್ಯನ ಅಪ್ಪಣೆಯಂತೆ ಚಂದ್ರಗುಪ್ತನು ರಾಜಕಾರ್ಯಗಳನ್ನು ತಾನೇ ನೋಡಿಕೊಳ್ಳುತ್ತಿರಲು ಮಳೆಗಾಲ ಕಳೆದು ಶರತ್ಕಾಲ ಸಾರಿಬಂತು. ತಿಳಿನೀಲಿಯಾಕಾಶದಲ್ಲಿ ಸಣ್ಣಸಣ್ಣ ಮರಳುಗುಪ್ಪೆಗಳಂತೆ ಮೋಡಗಳು ತೇಲಾಡಲಾರಂಭಿಸಿದುವು. ಬಿರಿದ ಜಾಜಿಯಲ್ಲಿ ದುಂಬಿಯ ಮೊರೆತ ಕೇಳಿ ಬರತೊಡಗಿತು. ಗಂಗಾನದಿಯ ಮೇಲೆ ಬೀಸಿ ಬರುತ್ತಿದ್ದ ತಂಗಾಳಿ ಹೂವಿನ ಕಂಪನ್ನು ಹೊತ್ತು ತಂದು ಜನರಿಗೆ ಆನಂದವನ್ನುಂಟುಮಾಡಲಾರಂಭಿಸಿತು. ಶರತ್ಕಾಲದ ಈ ರಾತ್ರಿಗಳಲ್ಲಂತೂ ಬೆಳುದಿಂಗಳ ಮಳೆಯೇ ಸುರಿದು ಭೂಮಿ ಆಕಾಶಗಳನ್ನೊಂದುಮಾಡಿ ನಗರಕ್ಕೆ ವಿಶೇಷವಾದ ಸೊಗಸನ್ನುಂಟುಮಾಡುತ್ತಿತ್ತು. ಲೋಕಕ್ಕೆ ಕಣ್ಣು ಬಂದಂತೆ ಬಂದ ಶರತ್ಕಾಲವನ್ನು ನೋಡಿ ಚಂದ್ರಗುಪ್ತನು ‘ಈ ಶರತ್ಕಾಲ ಜನರಿಗೆ ಸಂತೋಷಕರವಾದ ಸಮಯ. ಅದರಲ್ಲೂ ಈ ರಾತ್ರಿಗಳಲ್ಲಿ ಕೌಮುದೀಮಹೋತ್ಸವ ಬಲು ಸೊಗಸು. ನಾನು ರಾಜನಾದ ಮೇಲೆ ಈ ನಗರದಲ್ಲಿ ವಿಶೇಷ ಮಹೋತ್ಸವಗಳು ಎಂದೂ ನಡೆದಿಲ್ಲ. ಈ ಹುಣ್ಣಿಮೆ ನಾನು ಹುಟ್ಟಿದ ದಿನನಾದುದರಿಂದ ಅಂದು ಕೌಮುದೀ ಮಹೋತ್ಸವವನ್ನು ಆಚರಿಸಿದರೆ, ನಂದರು ಮಡಿದ ದುಃಖ ಜನರಿಗೆ ಸ್ವಲ್ಪ ಕಡಿಮೆಯಾಗಿ ಅದರಿಂದ ಅವರಿಗೆ ಆನಂದನವುಂಬಾಗಬಹುದು, ಆದ್ದರಿಂದ ಇಂದಿನಿಂದ ಮೊದಲ್‌ ಗೊಂಡು ಇನ್ನು ಹದಿನೈದು ದಿನ ರಾಜಧಾನಿಯಲ್ಲಿ ಉತ್ಸವಮಾಡಿಸುವೆನು’ ಎಂದು ನಿರ್ಧರಿಸಿಕೊಂಡು ಹತ್ತಿರದಲ್ಲಿದ್ದ ದೂತನನ್ನುನೋಡಿ “ಈದಿನ ಮೊದಲ್ಗೊಂಡು ಇನ್ನು ಹದಿನೈದು ದಿನಗಳು ನಗರದಲ್ಲಿ ಕೌಮುದೀಮಹೋತ್ಸವ ನಡೆಯಲಿ. ಈ ಉತ್ಸವಕ್ಕಾಗಿ ನಮ್ಮ ಪಟ್ಟಣ ಸಿಂಗಾರವಾಗಲಿ. ನಮ್ಮ ಪ್ರಜೆಗಳು ಉಟ್ಟು ತೊಟ್ಟು ಈ ಉತ್ಸವದಲ್ಲಿ ಭಾಗವಹಿಸಿ ನಲಿಯಲಿ. ಈ ಹುಣ್ಣಿಮೆಯ ಸಂಜೆ ಅಲಂಕೃತವಾದ ಸುಗಾಂಗವೆಂಬ ನಮ್ಮ ಅರಮನೆಯ ಪ್ರಾಸಾದದಲ್ಲಿ ನಾವು ಈ ಉತ್ಸವದಲ್ಲಿ ಭಾಗವಹಿಸುತ್ತೇವೆ. ಆದ್ದರಿಂದ ಪ್ರತಿಯೊಂದು ಏರ್ಪಾಟೂ ಎಚ್ಚರಿಕೆಯಿಂದ ನಡೆಯತಕ್ಕದ್ದು ‘ ಎಂದು ಅಪ್ಪಣೆ ಮಾಡಿದನು.

ಅರಸಾಳುಗಳು ರಾಜನ ಅಪ್ಪಣೆಯನ್ನು ನಗರದಲ್ಲಿ ಸಾರುತ್ತ ಬಂದರು. ಈ ಉತ್ಸವದ ಸಮಾಚಾರವನ್ನು ಕೇಳಿದ ಚಾಣಕ್ಯನು ಕ್ಷಣ ಮಾತ್ರ ಯೋಚಿಸಿ ತನ್ನ ಶಿಷ್ಯನಿಗೆ ‘ಶೀಘ್ರಕಾರಿ, ಈಗ ಈ ಉತ್ಸವವನ್ನು ಮಾಡ ಕೆಲಸವಿಲ್ಲ. ನಿಲ್ಲಿಸತಕ್ಕುದೆಂದು ಸಾರುವ ಭಟರಿಗೆ ನಾವು ಹೇಳಿದುದಾಗಿ ತಿಳಿಸಿ ಬಾ’ ಎಂದು ಹೇಳಿಕಳುಹಿಸಿದನು. ಚಾಣಕ್ಯನ ಅಪ್ಪಣೆಯನ್ನು ಮೀರಿ ಬದುಕುವುದುಂಟೆ? ಆರ್ಯನ ಅಪ್ಪಣೆಯನ್ನು ಮೀರಿದರೆ ಅಪರಾಧಕ್ಕೆ ಪಾತ್ರರಾಗಬಹುದೆಂದು ಹೆದರಿ ಸಾರುವುದನ್ನು ನಿಲ್ಲಿಸಿ ರಾಜಭಟರು ಹೊರಟುಹೋದರು. ಇದನ್ನು ನೋಡಿ ಚಾಣಕ್ಯ ಚಂದ್ರಗುಪ್ತರಿಗೆ ಮನಸ್ತಾಪವುಂಟಾಗಿದೆಯೆಂದು ಪಟ್ಟಣಿಗರು ಗುಟ್ಟಾಗಿ ಆಡಿಕೊಳ್ಳತೊಡಗಿದರು.

ಹುಣ್ಣಿಮೆಯ ಸಂಜೆ ಸಮೀಪಿಸಿತು. ಹಾಲು ಚೆಲ್ಲಿದಂತಿದ್ದ ಆ ಬೆಳುದಿಂಗಳ ರಾತ್ರಿಯಲ್ಲಿ, ಹುಳಿಯಲ್ಲಿ ತೊಳೆದ ಬಾಳ ಬಣ್ಣವನ್ನು ಹೋಲುತ್ತಿದ್ದ ಆಕಾಶವೆಂಬ ಮಡಕೆಯಲ್ಲಿಟ್ಟ ಹೊಸ ಬೆಣ್ಣೆಯ ಮುದ್ದೆಯಂತೆ ಚಂದ್ರನು ಕಾಣಿಸಿಕೊಂಡನು. ಆ ಸಮಯದಲ್ಲಿ ಚಂದ್ರಗುಪ್ತನು ತನ್ನ ಅಪ್ಪಣೆಯಂತೆ ಅಲಂಕೃತವಾದ ನಗರದ ಚೆಲುವನ್ನು ನೋಡಬಯಸಿ, ಸುಗಾಂಗವೆಂಬ ಪ್ರಾಸಾದಕ್ಕೆ ಮಿತಪರಿವಾರದೊಡನೆ ಬಂದು ರಾಜಾಸನದಲ್ಲಿ ಕುಳಿತನು. ನಾಲ್ಕು ದಿಕ್ಕುಗಳನ್ನೂ ನೋಡಲಾಗಿ ಪಟ್ಟಣದ ಬೀದಿಗಳು ಅಲಂಕೃತವಾಗದೆ ಹಾಳುಬಡಿಯುತ್ತಿರಲು ಸಮೀಪದಲ್ಲಿದ್ದ ಅವಸರದವನನ್ನು ನೋಡಿ–

ಚಂದ್ರಗುಪ್ತ– ಎಲೈ ವೈತಾಳಿಕನೆ, ಈ ಪಟ್ಟಣದಲ್ಲಿ ಕೌಮುದೀ ಮಹೋತ್ಸವವನ್ನು ನಡೆಸಬೇಕೆಂದು ನಾವು ಅಪ್ಪಣೆಮಾಡಿರಲಿಲ್ಲವೆ? ನಮ್ಮ ಅಪ್ಪಣೆಯಂತೆ ಒಂದೂ ನಡೆದಂತೆ ಕಾಣುವುದಿಲ್ಲ. ಬೀದಿಗಳನ್ನು ಸಿಂಗರಿಸಿ ಹೊವೆರಚಿಲ್ಲ. ಹೊಸ ತೋರಣಗಳನ್ನು ಕಟ್ಟಿಲ್ಲ. ಗಂಡು ಹೆಣ್ಣುಗಳು ನಾಚಿಕೆಯುಳಿದು ಬೀದಿಯಲ್ಲಿ ಸರಸವಾಡುತ್ತಿಲ್ಲ. ಒಟ್ಟಿನಲ್ಲಿ ಕೌಮುದೀಮಹೋತ್ಸವದ ಚೆನ್ಹೆಯೇ ಕಂಡು ಬರುವುದಿಲ್ಲ! ಈ ಪುರ ಜನರು ನಮ್ಮ ಅಪ್ಪಣೆಯಂತೆ ನಡೆದುಕೊಳ್ಳುವುದಿಲ್ಲವೇ?

ಕುಮುದುಕ– ಮಹಾಸ್ವಾಮಿಯವರ ಅಪ್ಪಣೆಯನ್ನು ಮೀರಿ ನಡೆಯುವುದಕ್ಕೆ ಮತ್ತೊಬ್ಬನಿಗೆ ಈ ಲೋಕದಲ್ಲಿ ಧೈರ್ಯವುಂಟೇ? ಆದರೆ ಈ ವಿಷಯವನ್ನು ತಮ್ಮಲ್ಲಿ ಬಿನ್ನೈಸಲು ಬಲು ಭಯವಾಗುತ್ತದೆ.

ಚಂದ್ರಗುಪ್ತ (ಆ ವಾಕ್ಯದ ಭಾವವನ್ನು ಗ್ರಹಿಸಿ) ಹಾಗಾದರೆ ಈ ಉತ್ಸವವನ್ನು ಮಾಡಕೆಲಸವಿಲ್ಲವೆಂದು ಆರ್ಯಚಾಣಕ್ಯರು ಅಪ್ಪಣೆ ಮಾಡಿದರೋ?

ಕುಮುದಕ– ಮಹಾಸ್ವಾಮಿಯವರ ಊಹೆ ಸತ್ಯ.

ಚಂದ್ರಗುಪ್ತ (ಮನಸ್ಸಿನಲ್ಲಿ) ಚಾಣಕ್ಯರು ಕೌಮುದೀಮಹೋತ್ಸವವನ್ನು ನಿಲ್ಲಿಸಲು ಕಾರಣವೇನು? ಅವರ ಅಪ್ಪಣೆಯಂತೆಯೇ ನಾನು ರಾಜಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದೇನೆ, ಎಲ್ಲ ಆಶೆಗಳನ್ನೂ ತ್ಯಾಗಮಾಡಿ, ಮಾಡುವ ತಪಸ್ಸನ್ನೂ ನಿಲ್ಲಿಸಿ ನಾನು ಮಾಡುವ ರಾಜ್ಯ ವಿಚಾರವನ್ನು ನೋಡಿ ತಾವು ಕೈಕೊಂಡ ಕಾರ್ಯ ಸಫಲವಾಯಿತೆಂದು ಸಂತೋಷಪಡುವ ಅಭಿಜ್ಞರಾದ ಆರ್ಯರಿಗೆ ನನ್ನಲ್ಲಿ ಎಂದಿಗೂ ಅಸೂಯೆ ಉಂಟಾಗಿರಲಾರದು. ನನ್ನ ಆಜ್ಞೆಯನ್ನು ಭಂಗಪಡಿಸಿದುದರಿಂದ ತಮಗೂ ನನಗೂ ಮನಸ್ತಾಪವುಂಟಾಗಿದೆಯೆಂಬ ವಾರ್ತೆ ಲೋಕದಲ್ಲಿ ಹರಡಿ ಅದು ಹಗೆಗಳಿಗೆ ತಿಳಿದು ರಾಕ್ಷಸನು ಮಲಯಕೇತುವನ್ನು ಕಟ್ಟಿಕೊಂಡು ದಂಡೆತ್ತಿ ಬರುವಂತಾಗಲಿ. ಹಾಗೆ ಬಂದರೆ ಶತ್ರುವನ್ನು ನಿಗ್ರಹಿಸುವ ಯೋಚನೆಯಿಂದ ಹೀಗೆ ಮಾಡಿರುವರೆಂದರೆ ಸೋತುಹೋದ ಶತ್ರುವನ್ನು ತನ್ನ ಮೇಲೆ ದಂಡೆತ್ತಿ ಬರುವಂತೆ ಮಾಡಿಕೊಳ್ಳುವ ಪುರುಷನು ಅಪ್ರಬುದ್ಧ. ಈ ಅಭಿಪ್ರಾಯ ಚಾಣಕ್ಯರ ಮನೋಗತವಲ್ಲ. ನನ್ನಿಂದ ತಿಳಿಯದೆ ಅಪರಾಧವೇನಾದರೂ ಉಂಟಾಗಿದ್ದ ಪಕ್ಷದಲ್ಲಿ ಗುಟ್ಟಾಗಿ ನನಗೆ ಬುದ್ದಿಗಲಿಸುತ್ತಿದ್ದರಲ್ಲದೆ ಹೀಗೆ ಎಲ್ಲ ರಿಗೂ ತಿಳಿಯುವಂತೆ ನನ್ನ ಅಪ್ಪಣೆಯನ್ನು ಮುರಿಯುತ್ತಿರಲಿಲ್ಲ. ಆದರೂ ಆರ್ಯರ ಮನೋಭಿಪ್ರಾಯವನ್ನು ಈ ರೀತಿ ಗ್ರಹಿಸಬಹುದೇ? ಸುಲಭವಾಗಿ ಜಯಿಸಲಸಾಧ್ಯರಾದ ನಂದರನ್ನು ಅಲ್ಪ ಪ್ರಯತ್ನದಿಂದಲೇ ನಿಗ್ರಹಿಸಿದ ಚಾಣಕ್ಯರು ನನ್ನ ಹಗೆಗಳಾದ ಮಲಯಕೇತು ರಾಕ್ಷಸರನ್ನು ಜಯಿಸಬಯಸಿ, ನನಗೂ ತಮಗೂ ವಿರೋಧವುಂಟಾಗಿದೆಯೆಂಬ ವಾರ್ತೆಯನ್ನು ಹಗೆಗಳಲ್ಲಿ ಹರಡಿ, ಬಳಿಕ ಉಪಾಯವಾಗಿ ಶತ್ರುವನ್ನು ಗೆಲ್ಲುವ ಉದ್ದೇಶದಿಂದ ಉತ್ಸವವನ್ನು ನಿಲ್ಲಿಸಿರಬಹುದು. ಚಾಣಕ್ಯರು ಕೈಕೊಳ್ಳುವ ಕಾರ್ಯವೆಲ್ಲ ನನ್ನ ಉಪಯೋಗಕ್ಕಾಗಿ, ಕಲ್ಯಾಣಕ್ಕಾಗಿ. ಅವರ ಇಷ್ಟದಂತೆ ನಡೆದುಕೊಳ್ಳುವುದೇ ನನಗೆ ಶ್ರೇಯಸ್ಕರ. ಆದರೂ ಈ ನಿಷಯವನ್ನು ಅವರ ಬಾಯಿಂದಲೇ ತಿಳಿದುಕೊಳ್ಳುವೆನು. (ಕುಮುದಕನನ್ನು ನೋಡಿ) ಕುಮುದಕ, ಆರ್ಯ ಚಾಣಕ್ಯರನ್ನು ನಾನು ನೋಡಬೇಕು. ಪೂಜ್ಯರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ ಕಾರ್ಯಗೌರವ ವಿಲ್ಲದಿದ್ದರೆ ಅವರನ್ನು ಇಲ್ಲಿಗೆ ಕರೆತರುವವನಾಗು.

ಚಂದ್ರಗುಪ್ತನ ಅಪ್ಪಣೆಯಂತೆ ಕುಮುದಕನು ಚಾಣಕ್ಯನ ಆಶ್ರಮಕ್ಕೆ ಬಂದನು. ಆಶ್ರಮದ ಹಳೆಯ ಗೋಡೆ ಆಗಲೇ ಬಿರುಕುಬಿಟ್ಟು ಕುಸಿಯುತ್ತಿತ್ತು. ಸಮಿತ್ತನ್ನು ಹೇರಿ ಚಾವಣಿ ಬಗ್ಗಿಹೋಗಿತ್ತು. ಆಶ್ರಮದಲ್ಲಿ ಒಂದು ಕಡೆ ದರ್ಭೆಯ ಹೊರೆ; ಮತ್ತೊಂದು ಕಡೆ ಬೆರಣಿಯ ರಾಸಿ. ರಾಜಸಚಿವನ ಭವನವೇ ಇದು ಎನಿಸಿತು ಕುಮುದಕನಿಗೆ. ಪರ್ಣಶಾಲೆಯಲ್ಲಿ ಪ್ರಜ್ವಲಿಸುವ ಅಗ್ನಿಯಂತೆ ಕುಶಾಸನದಲ್ಲಿ ಕುಳಿತು ಶಿಷ್ಯರಿಗೆ ಧರ್ಮೋಪದೇಶ ಮಾಡುತ್ತಿದ್ದ ಚಾಣಕ್ಯನನ್ನು ಕಂಡು, ಕುಮುದಕನು ಕೈಮುಗಿದು ” ಪೂಜ್ಯರೇ, ಚಂದ್ರಗುಪ್ತ ಸಾರ್ವಭೌಮರು ತಮಗೆ ತಲೆಬಾಗಿ ನಮಸ್ಕರಿಸಿ, ಆರ್ಯರಿಗೆ ಬೇರಾವ ಕಾರ್ಯಗೌರವವಿರದಿದ್ದರೆ ರಾಜಸಭೆಗೆ ದಯಮಾಡಿಸಬೇಕೆಂದು ಕೇಳಿಕೊಳ್ಳುತ್ತಾರೆ.” ಎಂದು ಬಿನ್ನೈಸಿದನು.

ಚಾಣಕ್ಯ– ಆತನು ಮಾಡಿದ ನಮಸ್ಕಾರ ಈಶ್ವರನಿಗೆ ಅರ್ಪಿತವಾಗಲಿ. ಎಲೈ ವೈತಾಳಿಕನೆ, ವೃಷಲನು ನನ್ನನ್ನು ನೋಡಬಯಸುವನೇ? ಹಾಗಾದರೆ ನಾನು ಕೌಮುದೀಮಹೋತ್ಸವವನ್ನು ನಿಲ್ಲಿಸಿದುದು ಅರಸನ ಕಿವಿಗೆ ಬೀಳಲಿಲ್ಲವಷ್ಟೆ ?

ಕುಮುದಕ– ಪೂಜ್ಯರೇ, ಅದನ್ನು ಅವರಿಗೆ ಯಾರೂ ಅರಿಕೆ ಮಾಡಲಿಲ್ಲ. ಸುಗಾಂಗ ಪ್ರಾಸಾದಕ್ಕೆ ಪ್ರಭುಗಳು ತಾನೇ ದಯಮಾಡಿಸಿ, ಉತ್ಸವರಹಿತವಾದ ನಗರವನ್ನು ನೋಡಿ, ತಮ್ಮ ಅಪ್ಪಣೆ ನಡೆಯದುದನ್ನು ತಾವೇ ತಿಳಿದುಕೊಂಡಂತೆ ತೋರುತ್ತದೆ.

ಚಾಣಕ್ಯ– ಆಮೇಲೆ ನೀವೆಲ್ಲರೂ ಪ್ರೋತ್ಸಾಹಿಸಿ ಅರಸನಿಗೆ ನನ್ನ ಮೇಲೆ ಕೋಪಕೆರಳುವಂತೆ ಮಾಡಿರಬೇಕು. ರಾಜಪರಿವಾರಕ್ಕೆ ನನ್ನ ಮೇಲೆಷ್ಟು ದ್ವೇಷ! ಇರಲಿ. ನಾನೇ ಹೋಗಿ ಈ ವಿಷಯವನ್ನು ವಿಚಾರಿಸುವೆನು.

ಚಾಣಕ್ಯನು ಪೀಠದಿಂದೆದ್ದು ಕುಮುದಕನೊಡನೆ ಸುಗಾಂಗ ಪ್ರಾಸಾದಕ್ಕೆ ಹೊರಟುಬಂದನು. ಸಾಮಂತರಾಜರಿಂದ ಸೇವೆಯನ್ನು ಕೈಕೊಳ್ಳುತ್ತ ಸಿಂಹಾಸನದಲ್ಲಿ ಮಂಡಿಸಿದ್ದ ಚಂದ್ರಗುಪ್ತನನ್ನು ದೂರದಿಂದಲೇ ನೋಡಿ ತಾನು ಕೈಕೊಂಡ ಕೆಲಸ ಸಫಲವಾಯಿತೆಂದು ಚಾಣಕ್ಯನಿಗೆ ಆನಂದವಾಯಿತು, ಗುರುಗಳನ್ನು ಕಾಣುತ್ತಲೇ ಚಂದ್ರಗುಪ್ತನು ಸಿಂಹಾಸನದಿಂದೆದ್ದು ಚಾಣಕ್ಯನಿಗೆ ನಮಸ್ಕರಿಸಿದನು.

ಚಾಣಕ್ಕ– ವತ್ಸ, ಏಳು. ಸಾಮಂತರಾಜರು ಎಲ್ಲ ಕಾಲದಲ್ಲಿಯೂ ನಿನ್ನನ್ನು ಇದೇ ರೀತಿ ಸೇವಿಸುತ್ತಿರಲಿ.

ಚಂದ್ರಗುಪ್ತ– ಪೂಜ್ಯರ ಆಶೀರ್ವಾದವನ್ನು ತಲೆಬಾಗಿ ಸ್ವೀಕರಿಸುವೆನು. ಆರ್ಯರು ಪೀಠವನ್ನಲಂಕರಿಸಬೇಕು.

ಚಾಣಕ್ಯ (ಪೀಠದಲ್ಲಿ ಕುಳಿತುಕೊಂಡು)– ಕುಮಾರ, ಈಗ ನಮ್ಮನ್ನು ಕರೆಸಿಕೊಳ್ಳಲು ಕಾರಣವೇನು?

ಚಂದ್ರಗುಪ್ತ–ಆರ್ಯರ ದರ್ಶನದಿಂದ ಧನ್ಯನಾಗುವುದಕ್ಕೆ.

ಚಾಣಕ್ಯ– ಅತಿವಿನಯ ಹಾಗಿರಲಿ. ಪ್ರಭುವಾದವನು ಕಾರಣವಿಲ್ಲದೆ ಅಧಿಕಾರಿಗಳನ್ನು ಕರೆಸುವುದುಂಟೇ?

ಚಂದ್ರಗುಪ್ತ– ಹಾಗಿದ್ದರೆ ವಿಷಯವನ್ನು ತಮ್ಮಲ್ಲಿ ಬಿನ್ನೈಸಿ ಕೊಳ್ಳುತ್ತೇನೆ. ಯಾವ ಪ್ರಯೋಜನಕ್ಕಾಗಿ ಆರ್ಯರು ಕೌಮುದೀ ಮಹೋತ್ಸವವನ್ನು ನಿಲ್ಲಿಸಿದಿರಿ?

ಚಾಣಕ್ಯ– ಹಾಗಾದರೆ ಮುಖ್ಯವಾಗಿ ದೋಷವನ್ನು ಬೆದಕಲು ತಾನೆ ನಮ್ಮನ್ನು ಕರೆಸಿದ್ದು?

ಚಂದ್ರಗುಪ್ತ– ಪೂಜ್ಯರೇ ಅದಕ್ಕಲ್ಲ. ಗುರುಗಳಲ್ಲಿ ಅರಿಕೆಮಾಡಿಕೊಳ್ಳುವುದಕ್ಕೆ.

ಚಾಣಕ್ಯ– ಕನಸಿನಲ್ಲಿಯೂ ಪ್ರಯೋಜನವಿಲ್ಲದ ಕಾರ್ಯವನ್ನು ಚಾಣಕ್ಯನು ಮಾಡನೆಂಬ ಅರ್ಥ ನಿನಗೆ ತಿಳಿದೇ ಇರುವುದಷ್ಟೆ.

ಚಂದ್ರಗುಪ್ತ ಆದ್ದರಿಂದಲೇ ಆ ಪ್ರಯೋಜನವನ್ನು ಕೇಳಬೇಕೆಂಬ ಕುತೂಹಲ ನನ್ನನ್ನು ಈಗ ಮಾತನಾಡಿಸುತ್ತಿದೆ.

ಚಾಣಕ್ಯ– ಹಾಗಾದರೆ ಹೇಳುವೆನು ಕೇಳು, ಅರ್ಥಶಾಸ್ತ್ರಕಾರರು ಪ್ರಭುಸಿದ್ಧಿಯನ್ನು ರಾಜಾಯತ್ತ, ಸಚಿವಾಯತ್ತ, ಉಭಯಾಯತ್ತ ಎಂದು ಮೂರು ತೆರನಾಗಿ ವಿಂಗಡಿಸುತ್ತಾರೆ. ಸಚಿವಾಯತ್ತ ಸಿದ್ದಿಯುಳ್ಳ ನಿನಗೆ ಈ ವಿಚಾರದಿಂದ ಏನು ಪ್ರಯೋಜನ? ಏನಿದ್ದರೂ ಅದನ್ನು ನಾವು ವಿಚಾರಿಸಿಕೊಳ್ಳುತ್ತೇವೆ.

ಚಾಣಕ್ಯನ ಮಾತನ್ನು ಕೇಳಿ ಚಂದ್ರಗುಪ್ತನು ಕೋಪದಿಂದ ಮುಖವನ್ನು ತಿರುಗಿಸಿಕೊಂಡನು. ಆಗ ಇದೇ ಸಮಯವೆಂದು ತಿಳಿದು ರಾಕ್ಷಸನಿಂದ ನಿಯಮಿತರಾದ ಸ್ತುತಿಪಾಠಕರು ಮುಂದೆ ಬಂದು ಚಂದ್ರಗುಪ್ತನನ್ನು ಹೀಗೆ ಹೊಗಳಿದರು–

ವಿಜಯ– (ಗಟ್ಟಿಯಾಗಿ ವಾಚಿಸುವನು)

ಆಕಾಶದೊಳಗೆಲ್ಲ ಕಾಶಕುಸುಮದ ಬಿಳುಪು…
ಹರನ ದೇಹದ ಭಸ್ಮಲೇಪದಂತೆ,
ಮುಗಿಲ ಪಟಲಕೆ ಚಂದ್ರಕಿರಣಜಾಲದ ಹೆಣಿಗೆ–
ಹರನ ಕರಿಚರ್ಮದಾವರಣದಂತೆ,
ಬಿಳಿಯ ನೈದಿಲ ಸಾಲು- -ರುಂಡಮಾಲಿಕೆಯಂತೆ,
ಆರಸಂಚೆ_ಅವನಟ್ಟಿ ಹಾಸದಂತೆ ;
ಇಂತಪೂರ್ವದ ಹರನ ತನುವಿನೊಲು ಶರೆದವಿದು
ತೊಲಗಿಸಲಿ ನಿಮ್ಮೆಲ್ಲ ಖೇದಗಳನು !

ಕಲಶಕ– (ಗಟ್ಟಿಯಾಗಿ ವಾಚಿಸುವನು)

ಸತ್ತ ದುತ್ಕರ್ಷವನು ಶೇಖರಿಸಿ ವಿಧಿಯೊಂದು
ನಿಧಿಯನೆಸೆಗಿರುವಂತೆ ಕಂಗೊಳಿಸುತ
ಆತ್ಮತೇಜಶ್ಯಿಕೆಯ ಬೇಗೆ ಮದಧಾರೆಯನು
ಹೀರುತಿರೆ ಸಲಗಗಳನೊಕ್ಕಲಿಕ್ಕಿ
ಗವ೯ದಲಿ ಗಾಡಿಯಲಿ ನಡೆವ ಮೃಗಪತಿ ತನ್ನ
ದಂಷ್ಟ್ರಾಭಿಘಾತವನು ಸೈರಿಸುವುದೆ !
ಅರಸ, ಸಹಿಸುವುದುಂಟೆ ಆಜ್ಞಾ ವಿಘಾತವನು
ನಿನ್ನ ಮಹಿಮೆಯ ಸಾರ್ವಭೌಮನೃಪರು !
ಉಡಿಗೆ ತೊಡಿಗೆಯನುಟ್ಟು ತೊಟ್ಟು ಮೆರೆವಷ್ಟರೊಳೆ
ಒಡೆಯನೆನಿಸನು ಒಡೆಯನು;
ತಡೆಯದೊಲು ಹೆರರು ತನ್ನಾಜ್ಞೆಯನು ನಿನ್ನಂತೆ
ನಡೆಸುವನೆ ಒಡೆಯನಹನು !

ಚಾಣಕ್ಯ (ಮನಸ್ಸಿನಲ್ಲಿ)-ಮೊದಲನೆಯವನು ದೇವತಾಸ್ತುತಿಯ ನೆವದಿಂದ ಈಗ ಬಂದಿರುವ ಶರತ್ಕಾಲವನ್ನು ವರ್ಣಿಸಿದನು. ಎರಡನೆಯವನು ಹೇಳಿದ ಪದ್ಯದ ಭಾವವೇನು? (ಯೋಚಿಸಿ) ಆಹಾ, ಇದು ರಾಕ್ಷಸನ ಪ್ರಯೋಗ! ರಾಕ್ಷಸ, ನಾನು ಎಚ್ಚೆತ್ತೇ ಇದ್ದೇನೆ.

ಚಂದ್ರಗುಪ್ತ– ಕುಮುದಕ, ಬುದ್ಧಿವಂತರಾದ ಈ ಸ್ತುತಿಪಾಠಕರಿಗೆ ಸಾವಿರ ಸಾವಿರ ದೀನಾರಗಳನ್ನು ಬೊಕ್ಕಸದಿಂದ ಕೊಡಿಸು.

ಚಾಣಕ್ಯ (ಹುಬ್ಬನ್ನು ಗಂಟಿಕ್ಸಿ) ಕುಮುದಕ, ನಿಲ್ಲು. ಈ ವಂದಿಗಳಿಗೆ ಇಷ್ಟೊಂದು ಹಣವನ್ನು ಕೊಡಕೆಲಸವಿಲ್ಲ.

ಚಂದ್ರಗುಪ್ತ– ಆರ್ಯರು ನನ್ನ ಯಾವ ಮಾತುಗಳನ್ನೂ ಹೀಗೆ ಸಾಗಿಸಲೀಯದೆ ಅಡ್ಡಿಪಡಿಸುತ್ತಿದ್ದರೆ, ಈ ದೊರೆತನವನ್ನು ಸೆರೆಮನೆಯ ವಾಸವೆಂದೆಣಿಸುತ್ತೇನೆ.

ಚಾಣಕ್ಯ– ಎಲಾ ವೃಷಲ, ಈ ರಾಜ್ಯವನ್ನು ನಿನ್ನ ತೋಳ್‌ಬಲದಿಂದ ನೀನು ಗಳಿಸಲಿಲ್ಲವಾದ ಕಾರಣ ಈ ಅವಮಾನವನ್ನು ಸಹಿಸಲೇಬೇಕು. ಇಲ್ಲವಾದರೆ ಇನ್ನು ಮುಂದೆ ನೀನೇ ಅಧಿಕಾರವನ್ನು ವಹಿಸಿಕೊ.

ಚಂದ್ರಗುಪ್ತ– ಪೂಜ್ಯರೇ, ಹಾಗೇ ಆಗಲಿ. ಇಂದಿನಿಂದ ನನ್ನ ಕೆಲಸವನ್ನು ನಾನೇ ನೋಡಿಕೊಳ್ಳುತ್ತೇನೆ. ಆದರೆ ಒಂದು ಮಾತು. ಕೌಮುದೀಮಹೋತ್ಸವವನ್ನು ನಿಲ್ಲಿಸಿದುದಕ್ಕೆ ಪ್ರಯೋಜನವನ್ನು ಆರ್ಯರು ಅಪ್ಪಣೆ ಕೊಡಿಸಬೇಕು.

ಚಾಣಕ್ಯ– ಎಲಾ ವೃಷಲ, ನಿನ್ನ ಆಜ್ಞೆ ಸಾಗದಂತೆ ಮಾಡುವುದೇ ಉತ್ಸವವನ್ನು ನಿಲ್ಲಿಸಿದುದಕ್ಕೆ ಪ್ರಥಮ ಪ್ರಯೋಜನ. ಈ ಲೋಕದ ರಾಜರೆಲ್ಲ ಹೂಮಾಲೆಯಂತೆ ನಿನ್ನ ಆಜ್ಞೆಯನ್ನು ತಲೆಯಲ್ಲಿಟ್ಟು ನಡೆಯುತ್ತಾರೆ. ಆದರೆ ಆ ಆಜ್ಞೆ ಮಾತ್ರ ನನ್ನಲ್ಲಿ ಸಾಗದಿರುವುದರಿಂದ ಈ ನಿನ್ನ ಪ್ರಭುತ್ವ ವಿನಯದಿಂದಲಂಕೃತವಾಗಿ ನಿನಗೆ ಕೀರ್ತಿಯನ್ನುಂಟುಮಾಡುತ್ತಿದೆ. ಎರಡನೆಯದಾಗಿ ಮಲಯಕೇತುವಿನ ಬಳಿ ಇರುವ ಭದ್ರಭಟಾದಿಗಳ ಈ ಮೂದಲಿಕೆಯ ಪತ್ರವನ್ನು ನೀನೇ ನೋಡು. ವಿಷಯ ಸ್ಪಷ್ಟವಾಗುತ್ತದೆ (ಪತ್ರವನ್ನು ಕೊಡುವನು.)

ಚಂದ್ರಗುಪ್ತ (ಪತ್ರವನ್ನು ಮನಸ್ಸಿನಲ್ಲೇ ಓದಿಕೊಳ್ಳುವನು

ಶ್ರೀಮತ್‌ ಚಂದ್ರಗುಪ್ತ ಮಹಾರಾಜರವರ ಸನ್ನಿಧಿಯಲ್ಲಿ ಭದ್ರಭಟಾದಿ ಸೇನಾನಾಯಕರು ವಿಜ್ಞಾಪಿಸಿಕೊಳ್ಳುವುದೇನೆಂದರೆ- ನಾವೆಲ್ಲರೂ ಕೋಪಿಸಿಕೊಂಡು ಹೋದವರಂತೆ ಈ ನಗರದಿಂದ ಹೊರಟು ಬೇರೊಂದು ದೇಶದಲ್ಲಿ ನಿಮ್ಮ ಕಾರ್ಯದಲ್ಲಿ ಎಚ್ಚರಿಕೆಯಿಂದಿರುವೆವು.

(ಪ್ರಕಾಶನಾಗಿ) ಆರ್ಯರೇ, ಈ ಸೇನಾಪತಿಗಳ ಅಸಮಾಧಾನಕ್ಕೆ ಏನು ಕಾರಣ?

ಚಾಣಕ್ಯ– ಚಂದ್ರಗುಪ್ತ, ಹೇಳುವೆನು ಕೇಳು. ಗಜಾಧ್ಯಕ್ಷನಾದ ಭದ್ರಭಟ, ಅಶ್ವಾಧ್ಯಕ್ಷನಾದ ಪುರುಷದತ್ತ ಇವರಿಬ್ಬರೂ ಸ್ರ್ರೀಮದ್ಯ ಲೋಲರು. ಇವರು ತಮ್ಮ ಕೆಲಸವನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲವಾದ ಕಾರಣ ತಮ್ಮ ಅಧಿಕಾರವನ್ನು ಕಳೆದುಕೊಂಡರು. ಡಿಂಗಿರಾತ ಬಲಗುಪ್ತರಿಗೆ ತುಂಬ ಆಸೆ. ಆದ್ದರಿಂದ ಹೆಚ್ಚು ಸಂಬಳಕ್ಕಾಗಿ ಅವರು ಮಲಯಕೇತುವನ್ನು ಆಶ್ರಯಿಸಿದರು. ಭಾಗುರಾಯಣನು ಮಲಯಕೇತುವಿಗೆ ‘ಚಾಣಕ್ಯನು ನಿನ್ನ ತಂದೆಯನ್ನು ಕೊಲ್ಲಿಸಿದರು ‘ ಎಂದು ಸುಳ್ಳು ಹೇಳಿ ಅವನ ಪ್ರೀತಿಗೆ ಪಾತ್ರನಾಗಿದ್ದಾನೆ. ಆಡಿದ ಮಾತು ಕೂಡಿ ಬಂದರೆ ಮನುಷ್ಯನು ಇದ್ದಂತೆಯೇ ಇರುವನೇ? ಇನ್ನುಳಿದ ಸೇನಾಪತಿಗಳ ದಾಯಾದಿಗಳಿಗೆ ನೀನು ಗೌರವವನ್ನು ತೋರಿದುದರಿಂದ ಅವರಿಗೆ ನಿನ್ನಲ್ಲಿ ಅಸೂಯೆ. ಆದ್ದರಿಂದ ಇವರೆಲ್ಲ ಮಲಯಕೇತುವಿನಲ್ಲಿಗೆ ಹೋಗಿ ಆಶ್ರಯಸಂಪಾದಿಸಿದ್ದಾರೆ.

ಚಂದ್ರಗುಪ್ತ– ಈ ಅಂಶಗಳನ್ನು ತಿಳಿದಿದ್ದರೂ, ಆರ್ಯರು ಇವುಗಳಿಗೆ ಪ್ರತೀಕಾರವನ್ನೇಕೆ ಕೈಗೊಳ್ಳಲಿಲ್ಲ? ನಿಮ್ಮಲ್ಲಿ ಶಕ್ತಿ ಇರಲಿಲ್ಲವೋ ಇಲ್ಲವೆ ಪ್ರಯೋಜನಕ್ಕಾಗಿಯೋ?

ಚಾಣಕ್ಯ– ಚಂದ್ರಗುಪ್ತ, ನಮ್ಮಲ್ಲಿ ಸಾಮರ್ಥ್ಯವಿಲ್ಲವೆಂದರೇನು? ಆದರೆ ಈ ವಿಷಯದಲ್ಲಿ ಪ್ರತೀಕಾರ ಸಾಧ್ಯವಾಗಲಿಲ್ಲ. ಅಲ್ಲದೆ ಇದರಿಂದ ಪ್ರಯೋಜನವೂ ಉಂಟು, ಅಧಿಕಾರವನ್ನು ಕಳೆದುಕೊಂಡ ಭದ್ರಭಟಾದಿಗಳಿಗೆ ತಿರುಗಿ ಅಧಿಕಾರ ಕೊಡುವುದುಂಟೇ? ಹಾಗೆ ಮಾಡಿದರೆ ನಮ್ಮ ಆನೆ ಮತ್ತು ಕುದುರೆಯ ಬಲ ಹಾಳಾಗುತ್ತದೆ. ಡಿಂಗಿರಾತಾದಿಗಳಿಗೆ ನಾಡಿನ ಒಡೆತನವನ್ನೇ ಕೊಟ್ಟರೂ ತೃಪ್ತಿ ಆಗದು. ಭಾಗುರಾಯಣನಿಗೆ ಬೇಕಾದದ್ದು ಮಲಯಕೇತುವಿನ ಅನುಗ್ರಹ. ತಮ್ಮ ದಾಯಾದಿಗಳ ವಿಷಯದಲ್ಲಿ ವಿಷಕಾರುತ್ತಿರುವ ವಿಜಯವರ್ಮಾದಿಗಳಿಗೆ ಯಾವ ಅನುಗ್ರಹದಿಂದ ತಾನೆ ನಮ್ಮಲ್ಲಿ ಒಲವು ಉಂಟಾದೀತು? ಇವರನ್ನು ದಂಡಿಸಿದ್ದರೆ ಪ್ರಜೆಗಳಿಗೆ ನಮ್ಮಲ್ಲಿ ಅಪನಂಬಿಕೆ ಹುಟ್ಟುತ್ತಿತ್ತು. ಇವರೆಲ್ಲ ರಾಕ್ಷಸನೊಡಗೂಡಿ ನಮ್ಮ ಮೇಲೆ ದಂಡೆತ್ತಿ ಬರುತ್ತಿದ್ದಾರೆ. ಈಗ ಕೋಟೆ ಕೊತ್ತಲುಗಳನ್ನು ಭದ್ರ ಪಡಿಸಬೇಕು. ಆದ್ದರಿಂದ ಇದು ಉತ್ಸವದ ಕಾಲವಲ್ಲವೆಂದು ತಿಳಿದು ಕೌಮುದೀಮಹೋತ್ಸವವನ್ನು ನಿಲ್ಲಿಸಿತು.

ಚಂದ್ರಗುಪ್ತ — ಈ ಎಲ್ಲ ಅನರ್ಥಕ್ಟೂ ಮೂಲಕಾರಣನಾದ ಮಲಯಕೇತು ಇಲ್ಲಿಂದ ತಪ್ಪಿಸಿಕೊಂಡು ಹೋಗದಂತೆ ನಿಗ್ರಹಿಸದೆ ಏಕೆ ಉಪೇಕ್ಷಿಸಿದಿರಿ?

ಚಾಣಕ್ಕ– ಮಲಯಕೇತುವನ್ನು ನಾವು ನಿಗ್ರಹಿಸಿದ್ದರೆ ಪರ್ವತರಾಜನನ್ನು ನಾವೇ ಕೊಲ್ಲಿಸಿದೆವೆಂಬ ಅಪವಾದ ನಮ್ಮ ತಲೆಗಟ್ಟುತ್ತಿತ್ತು. ಮಲಯಕೇತುವಿಗೆ ಅರ್ಧರಾಜ್ಯವನ್ನು ಕೊಟ್ಟಿದ್ದರೆ ಅನಾಯಾಸವಾಗಿ ಬಂದ ಭಾಗ್ಯಲಕ್ಷ್ಮಿಯನ್ನು ನಾವೇ ನೂಕಿದಂತಾಗುತ್ತಿತ್ತು. ಈ ಕಾರಣದಿಂದ ಓಡಿಹೋಗುತ್ತಿದ್ದ ಮಲಯಕೇತುವನ್ನು ಉಪೇಕ್ಷಿಸಿಬಿಟ್ಟೆವು.

ಚಂದ್ರಗುಪ್ತ– ಈ ವಿಷಯ ಹೀಗಾಯಿತು. ರಾಕ್ಷಸನು ಈ ನಗರದಲ್ಲೆ ಇದ್ದಾಗ ಪೂಜ್ಯರು ಅವನನ್ನು ಉಪೇಕ್ಷಿಸುದುದೇಕೆ?

ಚಾಣಕ್ಯ– ರಾಕ್ಷಸನು ಬುದ್ಧಿವಂತ, ಸ್ವಾಮಿಭಕ್ತ. ಮೇಲಾಗಿ ಆತನಿಗೆ ಇಲ್ಲಿ ಜನ ಧನ ಸಹಾಯವುಂಟು. ಇದರೊಡನೆ ಆತನು ಪ್ರಯತ್ನಮಾಡಿದ್ದರೆ ಈ ನಗರದಲ್ಲಿ ದೊಡ್ಡ ದಂಗೆಯನ್ನೇ ಎಬ್ಬಿಸಬಹುದಾಗಿತ್ತು. ಆದ್ದರಿಂದ ದೂರದಲ್ಲಿ ಆತನಿದ್ದರೆ ಉಪಾಯದಿಂದ ಅವನನ್ನು ಸಂಗ್ರಹಿಸಬಹುದೆಂದು ದೂರ ಮಾಡಿದೆವು.

ಚಂದ್ರಗುಪ್ತ– ಪೂಜ್ಯರೇ, ಬಲವನ್ನು ಪ್ರಯೋಗಿಸಿಯಾದರೂ ಆತನನ್ನು ಹಿಡಿಯಬಹುದಾಗಿತ್ತಲ್ಲವೇ?

ಚಾಣಕ್ಯ– ಎಲಾ ವೃಷಲ, ಬಲವನ್ನು ಪ್ರಯೋಗಿಸಿ ಆತನನ್ನು ಹಿಡಿದಿದ್ದರೆ ಶೂರನಾದ ಆತನಿಂದ ನಮ್ಮ ಸೇನೆ ನಷ್ಟವಾಗುತ್ತಿತ್ತು. ಇಲ್ಲದಿದ್ದರೆ ಆತನಾದರೂ ಮಾನರಕ್ಷಣೆಗಾಗಿ ಪ್ರಾಣಬಿಡುತ್ತಿದ್ದನು. ಈ ಎರಡರಲ್ಲಿ ಯಾವುದಾದರೊಂದು ನಡೆದಿದ್ದರೂ ನಮಗೆ ಆ ತೆರನಾದ ಮನುಷ್ಯನು ಮತ್ತೆಲ್ಲಿ ದೊರೆತಾನು? ಕಾಡಾನೆಯನ್ನು ಹಿಡಿಯುವಂತೆ ಉಪಾಯದಿಂದಲೇ ಅವನನ್ನು ದಾರಿಗೆ ತರಬೇಕು.

ಚಂದ್ರಗುಪ್ತ– ಪೊಜ್ಯರೇ, ನೀವು ಲಕ್ಷವಿಧವಾಗಿ ಹೇಳಿದರೂ, ಅಮಾತ್ಯನೇ ರಾಕ್ಷಸನೇ ಬಹು ಬುದ್ಧಿ ಶಾಲಿ.

ಚಾಣಕ್ಯ– (ಕೋಪದಿಂದ) ಚಂದ್ರಗುಪ್ತ, ನೀನಲ್ಲವೆಂದು ನಿನ್ನ ಮಾತಿನ ಅರ್ಥ ತಾನೆ? ಬುದ್ಧಿವಂತನಾದ ಅವನು ಮಾಡಿದುದೇನು?

ಚಂದ್ರಗುಪ್ತ– ಆರ್ಯರು ಲಾಲಿಸಬೇಕು. ಈ ನಗರ ನಮ್ಮ ವಶವಾದ ಮೇಲೂ ಆತನು ತನ್ನ ಇಷ್ಟ ಬಂದಷ್ಟು ದಿನ ಇಲ್ಲಿದ್ದನು. ನಮ್ಮ ಮಿತ್ರನಾದ ಪರ್ವತರಾಜನನ್ನು ಕೊಲ್ಲಿಸಿದನು. ಅವನ ನೀತಿಯಿಂದ ನಮಗೆ ದಿಕ್ಕೇ ತೋರದಂತಾಗಿದೆ. ಗುಣಕ್ಕೆ ಮಾತ್ಸರ್ಯವುಂಟೇ? ಆತನು ಕಾರ್ಯದಕ್ಷ.

ಚಾಣಕ್ಯ– ಎಲಾ ವೃಷಲ, ನಂದರಾಜ್ಯದಲ್ಲಿ ನಿನ್ನನ್ನು ನಾನು ಸ್ಥಾಪಿಸದಂತೆ, ಮಲಯಕೇತುವನ್ನು ನಿನ್ನ ರಾಜ್ಯದಲ್ಲಿ ಸ್ಥಾಪಿಸಿದನೇ ಅವನು?

ಚಂದ್ರಗುಪ್ತ– ನನಗೆ ರಾಜ್ಯವನ್ನುಂಟುವಾಡಿದವರು ಬೇರೆ, ತಾವಲ್ಲ.

ಚಾಣಕ್ಯ– ಎಲಾ ಚಂದ್ರಗುಪ್ತ, ರಾಕ್ಷಸನ ಎದುರಿನಲ್ಲೇ ನಂದರನ್ನು ಕೊಲ್ಲಿಸಿ ನನ್ನ ಜುಟ್ಟನ್ನು ಕಟ್ಟಲಿಲ್ಲವೇ ನಾನು? ಇದನ್ನು ಮಾಡಿದವರಾರು?

ಚಂದ್ರಗುಪ್ತ– ಈ ಕಾರ್ಯ ನಡೆದದ್ದು, ನಂದಕುಲವೈರಿಯಾದ ದೈವದಿಂದ.

ಚಾಣಕ್ಯ– ಮೂಢರು ದೈವವನ್ನು ನಂಬುವರು.

ಚಂದ್ರಗುಪ್ತ– ವಿದ್ವಾಂಸರು ಆತ್ಮಸ್ತುತಿಯನ್ನು ಮಾಡಿಕೊಳ್ಳರು.

ಚಾಣಕ್ಯ– ಎಲಾ ವೃಷಲ, ಸೇವಕರಂತೆ ನಮ್ಮನ್ನು ನುಡಿಸುತ್ತಿರುವೆ. ಕಟ್ಟಿದ ಜುಟ್ಟನ್ನು ಬಿಚ್ಚಲು ಈ ನನ್ನ ಕೈ ಮತ್ತೆ ತವಕಪಡುತ್ತಿದೆ.ದೈವಬಲಹೀನನಾದ ನೀನು ಮತ್ತೊಮ್ಮೆ ಪ್ರತಿಜ್ಞೆ ಮಾಡಲು ನನ್ನ ನ್ನು ಪ್ರೇರಿಸುತ್ತಿ ರುವೆ.

ಚಂದ್ರಗುಪ್ತ– (ತನ್ನಲ್ಲಿ) ಆರ್ಯರಿಗೆ ನಿಜವಾಗಿಯೂ ನನ್ನಲ್ಲಿ ಕೋಪವುಂಟಾಗಿರುವುದೇ?

ಚಾಣಕ್ಯ–(ಕೋಪವನ್ನು ಇಳಿಸಿ) ಚಂದ್ರಗುಪ್ತ, ಮಾತಿಗೆ ಮಾತು ಬೆಳೆಸುವುದರಿಂದ ಏನು ಪ್ರಯೋಜನ? ನಮಗಿಂತಲೂ ರಾಕ್ಷಸನೇ ಬುದ್ದಿವಂತನೆಂದು ನೀನು ತಿಳಿದ ಬಳಿಕ ಈ ಸಚಿವ ಶಸ್ತ್ರವನ್ನು ಅವನಿಗೇ ಕೊಟ್ಟು, ಅವನಿಂದಲೇ ರಾಜಕಾರ್ಯವನ್ನು ನಿರ್ವಾಹಮಾಡಿಕೊಳ್ಳುವವನಾಗು.

ಹೀಗೆಂದು ಸಚಿವಶಸ್ತ್ರವನ್ನು ನೆಲದ ಮೇಲೆಸೆದು ಚಾಣಕ್ಯನು ರಾಜಸಭೆಯಿಂದ ಹೊರಟುಹೋದನು. ಆಗ ಚಂದ್ರಗುಪ್ತನು ‘ಕುಮುದಕ ಇಂದಿನಿಂದ ಚಾಣಕ್ಯನನ್ನು ಮಂತ್ರಿಸದವಿಯಿಂದ ತೆಗೆದುಹಾಕಿದೆ. ಅಧಿಕಾರಿಗಳು ಚಾಣಕ್ಯನನ್ನು ಕಾಣಿಸಿಕೊಳ್ಳಬೇಕಾಗಿಲ್ಲವೆಂದು ರಾಜವೀಧಿಗಳಲ್ಲಿ ಸಾರಿಸು’ ಎಂದು ಅಪ್ಪಣೆಮಾಡಿದನು. ಇದನ್ನು ಕೇಳಿ ಕುಮುದಕನಿಗೆ ಸೋಜಿಗ. ಆರ್ಯ ಚಾಣಕ್ಯರು ಚಾಣಕ್ಯನಾಗಿ, ಅಧಿಕಾರ ಅವನ ಕೈಬಿಟ್ಟಿತೆಂದು. ಹೀಗೆ ಚಿಂತಿಸುತ್ತಿರುವ ಕುಮುದಕನ ಯೋಚನೆಗೆ ಕಾರಣವನ್ನು ಕೇಳಲು ಅದಕ್ಕೆ ಕುಮುದಕನು ‘ಸ್ವಾಮಿ, ನನ್ನ ಚಿಂತೆಗೆ ಕಾರಣವೇನೂ ಇಲ್ಲ. ನಮ್ಮ ಪುಣ್ಯದಿಂದ ಇಂದು ನಿಜವಾಗಿಯೂ ತಾವು ಮಹಾರಾಜರಾದಿರಿ.’ ಎಂದು ಉತ್ತರಕೊಟ್ಟನು. ಆ ಮಾತನ್ನು ಕೇಳಿ ಚಂದ್ರಗುಪ್ತನು ತನ್ನಲ್ಲಿಯೇ ‘ ಇವರೆಲ್ಲ ಹೀಗೆಯೇ ತಿಳಿದುಕೊಳ್ಳಲಿ. ಈ ಕಲಹದ ಮೂಲಕವೇ ಆರ್ಯರ ಬಯಕೆ ಕೈಗೂಡಲಿ.’ ಎಂದು ಸುಮ್ಮನಿದ್ದನು. ಚಂದ್ರಗುಪ್ತನು ಚಾಣಕ್ಯನೊಡನೆ ಮಾತಿಗೆ ಮಾತು ಬೆಳೆಸಿದ್ದು ಚಾಣಕ್ಯನ ಇಷ್ಟದಂತೆ, ರಾಜಕಾರ್ಯಸಾಧನೆಗಾಗಿ. ಹೀಗಿರುವಲ್ಲಿ ಇನ್ನು ನಿಜವಾಗಿಯೂ ಗುರುನಿಂದೆ ಮಾಡಿದವನ ಮನಸ್ಸು ಹೇಗಿರಬೇಡ? ಈ ಯೋಚನೆಯೇ ಅರಸನ ಮನಸ್ಸನ್ನು ತುಂಬಿರಲು ವಿಶ್ರಾಂತಿಗಾಗಿ ಚಂದ್ರಗುಪ್ತನು ವೈತಾಳಿಕನೊಡನೆ ಅಂತಃಪುರದ ಕಡೆಗೆ ನಡೆದನು.


ಮುಂದಿನ ಅಧ್ಯಾಯ: ೨೭. ವಿಷ ಬೀಜ


Leave a Reply

Your email address will not be published. Required fields are marked *