ಅಭಿಜ್ಞಾನ ಶಾಕುಂತಲ – ಕಾಳಿದಾಸ

ಕತೆ: ಅಭಿಜ್ಞಾನ ಶಾಕುಂತಲ – ಕಾಳಿದಾಸ
ಮೂಲ ಪುಸ್ತಕ : ಸಂಸ್ಕೃತ ನಾಟಕ ಕಥೆಗಳು
ಲೇಖಕರು: ಎಮ್. ಎನ್. ಶ್ರೀನಿವಾಸ ಅಯ್ಯಂಗಾರ್
ಪಾವನವಾದ ಗಂಗಾನದಿಯ ತೀರದಲ್ಲಿ ಹಸ್ತಿನಾವತೀಪಟ್ಟಣ; ಪುರುವಂಶದ ದುಷ್ಯಂತ ಮಹಾರಾಜನ ರಾಜಧಾನಿ ಅದು. ಅವನ ರಾಜ್ಯವು ಚತುಸ್ಸಮುದ್ರಮುದ್ರಿತವಾದ ಅಖಂಡಭೂಮಂಡಲವನ್ನು ಒಳಗೊಂಡಿದ್ದಿತು. ಒಂದು ದಿನ ಅವನು ಉಚಿತ ಪರಿವಾರದೊಡನೆ ಬೇಟೆಯಾಡುವುದಕ್ಕಾಗಿ ಅಡವಿಗೆ ಬಂದನು. ರಥವೇರಿ ಬೇಟೆಯಲ್ಲಿ ತೊಡಗಿದ್ದ ಅವನ ದೃಷ್ಟಿಗೆ ಜಿಂಕೆಯೊಂದು ಕಾಣಿಸಿಕೊಂಡಿತು. ಅದೇ ಬೇಟೆಯ ಗುರಿಯಾಯಿತು. ಸಾರಥಿಯು ರಥವನ್ನು ಆ ಕಡೆಗೆ ಓಡಿಸಿದನು. ವೇಗವಾಗಿ ಅಟ್ಟಿಬರುತ್ತಿದ್ದ ರಥವನ್ನು ಕಂಡು ಜಿಂಕೆಯು ಪ್ರಾಣಭಯದಿಂದ ತತ್ತಳಿಸುತ್ತ, ಕೊರಳು ಕೊಂಕಿಸಿ, ಬೆದರು ಕಂಗಳಿಂದ ಅಡಿಗಡಿಗೂ ಹಿಂದಿರುಗಿ ನೋಡುತ್ತ, ಬಾಣ ಬಿದ್ದೀತೆಂದು ಬೆದರಿ, ಮೈಯ್ಯ ಹಿಂಭಾಗವನ್ನೆಲ್ಲ ಮುಂದಡಗಿಸಿಕೂಂಡು ದೊಡ್ಡ ದೊಡ್ಡ ದಾಟುಗಳಿಟ್ಟು, ಬಳಲಿ ಬಾಯಿಬಿಟ್ಟು, ಅರ್ಧ ಅಗಿದ ದರ್ಭೆಯ ಹುಲ್ಲನ್ನು ದಾರಿಯುದ್ದಕ್ಕೂ ಕಾರುತ್ತ ಓಡತೊಡಗಿತು. ಹಳ್ಳತಿಟ್ಟುಗಳಿಲ್ಲದ ಸಮಭೂಮಿಯಲ್ಲಿ ಸರಿಯಾದ ಅನುವು ದೊರಕಲು ದುಷ್ಯಂತನು ಬಾಣ ಪ್ರಯೋಗ ಮಾಡುವಷ್ಟರಲ್ಲಿಯೇ ಬಾಣಕ್ಕೂ ಜಿಂಕೆಗೂ ನಡುವೆ ಮೂವರು ತಾಪಸರು ಅಡ್ಡಬಂದರು, ಅವರಲ್ಲಿ ಒಬ್ಬನಾದ ವೈಖಾನಸನು, “ಅರಸನೇ, ಇದು ಆಶ್ರಮದ ಜಿಂಕೆ, ಕೊಲ್ಲಬೇಡ. ಅಂಬನ್ನಿಳಿಸು ಪುರುವಂಶದವನಾದ ನಿನ್ನ ಶಸ್ತ್ರವಿರುವುದು ನೊಂದವರನ್ನು ಕಾಯುವುದಕ್ಕಲ್ಲದೆ ಕೊಲ್ಲುವುದಕ್ಕಲ್ಲ” ಎಂದನು.
ದುಷ್ಯಂತನು ಮರು ಮಾತನ್ನಾಡದೆ ಅಂಬನ್ನು ಇಳುಹಿದನು. ತಾಪಸರಿಗೆ ಸಂತೋಷವಾಯಿತು; “ಕುಲೋನ್ನತಿಗೆ ತಕ್ಕಂತೆ ದೊಡ್ಡತನವನ್ನು ಮೆರೆದೆ. ನಿನ್ನಂತೆಯೇ ಗುಣಾಢ್ಯನಾಗಿ, ಚಕ್ರವರ್ತಿಯೆನಿಸುವ ಪುತ್ರನನ್ನು ಪಡೆ” ಎಂದು ಅರಸನನ್ನು ಹರಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ವೈಖಾನಸನು, ತಾನು ಮಿತ್ರರೊಂದಿಗೆ ಸಮಿತ್ತು ತರಲು ಹೋಗುತ್ತಿರುವುದಾಗಿಯೂ ಅವಕಾಶವಿದ್ದಲ್ಲಿ ಕುಲಪತಿಗಳಾದ ಕಣ್ವರ ಆಶ್ರಮಕ್ಕೆ ಬಿಜಮಾಡಿ, ಆತಿಥ್ಯವನ್ನು ಸ್ವೀಕರಿಸಬೇಕೆಂಬುದಾಗಿಯೂ ದುಷ್ಯಂತನಿಗೆ ಅರಿಕೆಮಾಡಿದನು. ಕಣ್ವರು ಸೋಮತೀರ್ಥಕ್ಕೆ ಹೋಗಿರುವುದೂ, ಅವರ ಮಗಳಾದ ಶಾಕುಂತಲೆಯು ಅವರ ಅಪ್ಪಣೆಯಂತೆ ಅತಿಥಿಗಳನ್ನು ಆದರಿಸಲು ಆಶ್ರಮದಲ್ಲಿಯೇ ಇರುವುದೂ ಅರಸನಿಗೆ ಗೊತ್ತಾಯಿತು. “ಅಕೆಯೇ ನನ್ನ ಭಕ್ತಿಯನ್ನು ಮಹರ್ಷಿಗಳಿಗೆ ಒಪ್ಪಿಸುವಳು” ಎಂದು ಯೋಚಿಸಿ ಅರಸನು ಆಶ್ರಮದ ಕಡೆಗೆ ತೆರಳಿದನು.
ಮಾಲಿನೀ ನದಿಯ ತೀರದಲ್ಲಿ ಕಣ್ವರ ಆಶ್ರಮ; ಆ ಪುಣ್ಯಾಶ್ರಮವನ್ನು ನೋಡಿ ಪುನೀತನಾಗಬಯಸಿ ಅರಸನು ರಥದಲ್ಲಿ ಕುಳಿತು ಸ್ವಲ್ಪ ದೂರವೇ ಹೋದನು. ಆಶ್ರಮವನ್ನು ಕಾಣುತ್ತಲೆ ರಥದಿಂದಿಳಿದು, ವಿನೀತವೇಷದಿಂದ ಹೋಗಬೇಕೆಂದುಕೊಂಡು ಬಿಲ್ಲು ಬಾಣಗಳನ್ನೂ ಭೂಷಣಗಳನ್ನೂ ಸಾರಥಿಯ ವಶದಲ್ಲಿ ಬಿಟ್ಟು ತಾನು ಪೂಜ್ಯರನ್ನು ಸಂದರ್ಶಿಸಿ ಬರುವಷ್ಟರಲ್ಲಿ ಕುದುರೆಗಳನ್ನು ಸಂತಯಿಸಬೇಕೆಂದು ಅವನಿಗೆ ಆಜ್ಞಾಪಿಸಿ ಮುಂದಕ್ಕೆ ಹೊರಟನು.
ಆಶ್ರಮ ದ್ವಾರವನ್ನು ಸಮೀಪಿಸುತ್ತಲೆ ಅವನ ಬಲಭುಜವು ಅದುರಿ ಶುಭ ಶಕುನವಾಯಿತು. “ಏನಿದು, ಶಾಂತವಾದ ಆಶ್ರಮ ಪ್ರದೇಶ! ಭುಜವದುರಿ ಒಳ್ಳೆಯ ಶಕುನ ವಾಗುತ್ತಿದೆ. ಫಲವೇನಿದ್ದೀತು? ಅಥವಾ ಫಲವು ದೊರಕುವುದಿದ್ದರೆ ಎಲ್ಲೆಡೆಗಳಲ್ಲಿಯೂ ಕಾರಣಗಳು ತಾವಾಗಿಯೇ ಹುಟ್ಟಕೊಳ್ಳುತ್ತವೆ” ಎಂದುಕೊಂಡು ಅವನು ಆಶ್ಚರ್ಯಪಡುತ್ತಿದ್ದನು.
ಅಷ್ಟರಲ್ಲಿಯೇ ಆಶ್ರಮದ ಬಲಗಡೆಯ ವೃಕ್ಷವಾಟಿಕೆಯಿಂದ ಮಧುರವಾದ ಧ್ವನಿಗಳು ಕೇಳಬಂದುವು. ಏನಿರಬಹುದೆಂದು ದುಷ್ಯಂತನು ಆಲಿಸಿ ಆಕಡೆ ನೋಡಿದನು. ತಾಪಸ ಕನ್ಯೆಯರು ಗಡಿಗೆಗಳಲ್ಲಿ ನೀರು ಹೊತ್ತು ಎಳೆಯ ಸಸಿಗಳಿಗೆ ನೀರೆರೆಯುತ್ತಿದ್ದರು. ಅವರ ಸೊಬಗಿನ ನೋಟಕ್ಕೆ ಬೆರಗಾದ ಅರಸನು, “ರಾಣಿವಾಸಗಳಲ್ಲಿಯೂ ಇಂತಹ ಚೆಲುವೆಯರು ವಿರಳ. ಇವರ ಚೆಲುವನ್ನು ನೋಡಿದರೆ ವನಲತೆಗಳೇ ಉದ್ಯಾನಲತೆಗಳನ್ನು ಮೀರಿಸಿರುವಂತೆ ತೋರುತ್ತದೆ” ಎಂದು ಮತ್ತಷ್ಟು ವಿಸ್ಮಿತನಾಗಿ, ಬಳಿಯಲ್ಲಿದ್ದ ಮರದ ನೆಳಲಲ್ಲಿ ಕುಳಿತು, ಅವರ ಬರವನ್ನೇ ನಿರೀಕ್ಷಿಸುತ್ತಿದ್ದನು.
ಆಗ ಶಾಕುಂತಲೆಯು ಗೆಳತಿಯರಾದ ಅನಸೂಯೆ ಪ್ರಿಯಂವದೆಯರೊಡನೆ ಸಸಿಗಳಿಗೆ ನೀರೆರೆಯುತ್ತ ಅತ್ತ ಸುಳಿದಳು. ಕಣ್ವರಿಗೆ ಆಶ್ರಮದ ಗಿಡಮರಗಳಲ್ಲಿ ಎಣೆಯಿಲ್ಲದಷ್ಟು ವಾತ್ಸಲ್ಯ; ಅದು ಮಗಳಾದ ಶಾಕುಂತಲೆಯಲ್ಲಿ ಇದ್ದ ಮಮತೆಗೂ ಹೆಚ್ಚಿನದು. ಆದ್ದರಿಂದಲೇ ಅವರು ಮುದ್ದು ಮಗಳಾದ ಶಾಕುಂತಲೆಯನ್ನು ಆ ಗಿಡಮರಗಳ ಆರೈಕೆಗೆ ನೇಮಿಸಿದ್ದರು. ಆದರೆ ಅವಳು ಮಾತ್ರ ತಂದೆಯ ಅಪ್ಪಣೆ ಪಾಲಿಸುವುದಕ್ಕೆಂತ ಹೆಚ್ಚಾಗಿ ಆ ಗಿಡಮರಗಳಲ್ಲಿ ತನಗಿರುವ ಸೋದರ ಸ್ನೇಹದಿಂದ ಹೆಚ್ಚು ಶ್ರದ್ಧೆ ವಹಿಸಿ ಅವುಗಳನ್ನು ಬೆಳೆಸುವಳು. ಅಂಥ ರೂಸವತಿಯಾದ ಬಾಲೆಯು ಗಡಿಗೆ ಹೊತ್ತು, ಗಿಡಗಳಿಗೆ ನೀರೆರೆಯುವುದನ್ನು ಕಂಡು ಅರಸನಿಗೆ ಸಹ್ಯವಾಗಲಿಲ್ಲ. ಅಂಥ ಕುಸುಮ ಕೋಮಲೆಯನ್ನು ಕಠಿಣವಾದ ಆ ಕೆಲಸಕ್ಕೆ ನಿಯೋಜಿಸಿದ ಕಣ್ವರು ಉಚಿತಜ್ಞರಲ್ಲವೆಂದು ಅವನಿಗೆ ತೋರಿತು. “ಅವ್ಯಾಜಮನೋಹರಳಾದ ಈಕೆಯನ್ನು ತಪಸ್ಸಿಗೆ ಯೋಗ್ಯವಾದ ವೃತ್ತಿಯಲ್ಲಿ ತೊಡಗಿಸಿರುವುದನ್ನು ನೋಡಿದರೆ ಖುಷಿಯು ಕನ್ನ್ಟೈದಿಲೆಯ ಎಲೆಯಂಚಿನಿಂದ ಸಮಿಲ್ಲತೆಯನ್ನು ಕುಯ್ಯಲು ಯತ್ನಿಸಿದಂತೆ ತೋರುತ್ತದೆ?” ಎಂದು ಅವನು ಆಕ್ಷೇಪಿಸಿದನು. ಆದರೆ ಶಾಕುಂತಲೆಯು ನಾರುಡೆಯುಟ್ಟರುವುದನ್ನು ಕಂಡು ಯುವತಿಯಾದ ಆಕೆಯ ರೂಪಕ್ಕೆ ಅದೇ ಒಪ್ಪುವ ಅಲಂಕಾರ ಎಂದುಕೊಂಡು, ಅವಳ ಸಹಜಸುಂದರ ರೂಸಿನಿಂದ ವಿಸ್ಮಿತನಾಗಿ ಅದರ ಪರಿಭಾವನೆಯಲ್ಲಿಯೇ ಮೈಮರೆತಿದ್ದನು.
ಇಷ್ಟರಲ್ಲಿ ಶಾಕುಂತಲೆಯು ತಾನೇ ಸಸಿನೆಟ್ಟು ಬೆಳೆಸಿದ ವನಜ್ಯೋತ್ಸ್ನೆ ಎಂಬ ಲತೆಯ ಸೊಬಗನ್ನು ಕಂಡು ಆನಂದಿಸುತ್ತಿರಲು, ಸಖಿಯಾದ ಪ್ರಿಯಂವದೆಯು ಅಣಕದ ಮಾತುಗಳಿಂದ ಅನಸೂಯೆಯ ಕಡೆ ತಿರುಗಿ, “ಶಾಕುಂತಲೆಯು ಈ ವನಜ್ಯೋತ್ಸ್ನೆಯನ್ನೇ ಎವೆಯಿಕ್ಕದೆ ನೋಡುತ್ತಿರುವುದೇಕೆ, ಬಲ್ಲೆಯಾ?” ಎಂದು ಕೇಳಿದಳು. ಅರ್ಥವಾಗದವಳಂತೆ ಅನಸೂಯೆಯು, “ನನಗೆ ತೋರಲಿಲ್ಲ, ನೀನೇ ಹೇಳು”, ಎನ್ನಲು ಅವಳು, “ಈ ಲತೆಯು ತನಗೆ ಸದೃಶವಾದ ವೃಕ್ಷವನ್ನಾಶ್ರಯಿಸಿದಂತೆ, ತಾನೂ ಅನುರೂಪನಾದ ವರನನ್ನು ಹೊಂದಿಯೇನೇ ಎಂದು” ಎಂದಳು. ಆ ಮಾತನ್ನು ಕೇಳಿ ಮರೆಯಲ್ಲಿದ್ದ ದುಷ್ಯಂತನು, “ಕುಲಪತಿಗಳಾದ ಕಣ್ವರಿಗೆ ಈಕೆ ಕ್ಷತ್ರಿಯ ಭಾರ್ಯೆಯಲ್ಲಿ ಜನಿಸಿದವಳಾಗಿರಬೇಕು. ಇಲ್ಲವಾದರೆ ಸುಸಂಸ್ಕೃತವಾದ ನನ್ನ ಮನಸ್ಸು ಈಕೆಯನ್ನೆಳಸುತ್ತಿರಲಿಲ್ಲ. ಸತ್ತುರುಷರಾದವರಿಗೆ ಸಂದೇಹಕ್ಕೆಡೆಯಾದ ವಸ್ತುಗಳಲ್ಲಿ ಅಂತಃಕರಣ ಪ್ರವೃತ್ತಿಯೇ ಪ್ರಮಾಣ?” ಎಂದುಕೊಂಡರೂ ನಿಜವನ್ನು ತಿಳಿಯಲು ಸಮಯವನ್ನು ನಿರೀಕ್ಷಿಸುತ್ತಿದ್ದನು.
ಅಷ್ಟರಲ್ಲಿಯೇ, ದುಂಬಿಯೊಂದು ಶಾಕುಂತಲೆಯ ಮುಖಕ್ಕೆರಗಲು ಅವಳು ಚಕಿತಳಾಗಿ, “ಗೆಳತಿಯರೇ, ರಕ್ಷಿಸಿರಿ.. ಈ ಮಧುಕರವು ನನ್ನನ್ನು ಪೀಡಿಸುತ್ತಿದೆ” ಎಂದು ಕೂಗಿದಳು. ಗೆಳತಿಯರಿಬ್ಬರೂ ಪರಿಹಾಸದಿಂದ, “ಎಲ್ಲೌ ರಕ್ಷಿಸಲು ನಾವಾರು? ದುಷ್ಯಂತನಲ್ಲಿ ಮೊರೆಯಿಟ್ಟುಕೊ.ರಾಜನಲ್ಲವೇ ತಪೋವನಗಳನ್ನು ರಕ್ಟಿಸುವಾತನು?” ಎಂದರು. ಈ ಮಾತನ್ನು ಕೇಳಿ ದುಷ್ಯಂತನಿಗೆ ಅವಕಾಶ ದೊರಕಿದಂತಾಗಲು ತ್ವರೆಯಿಂದ ಬಳಿಸಾರಿ. “ಪೌರವನು ವಸುಮತಿಯನ್ನು ಆಳುತ್ತಿರುವಾಗ ತಾಪಸ ಕನ್ನಿಕೆಯರಲ್ಲಿ ಅವಿನಯವನ್ನು ಆಚರಿಸುವವರಾರು?” ಎಂದನು. ಗಂಭೀರಾಕೃತಿಯವನಾದ ಅರಸನನ್ನು ನೋಡಿ, ಎಲ್ಲರಿಗೂ ಆಶ್ಚರ್ಯವಾಯಿತು. ಏನೂ ಮಾಡುವುದಕ್ಕೂ ತೋರದ ದಿಗ್ಭ್ರಾಂತರಾಗಿ ನಿಂತರು. ಅವರಲ್ಲಿ ಅನಸೂಯೆ, ಸ್ವಲ್ಪ ಧೈರ್ಯ ತಂದುಕೊಂಡು “ಆರ್ಯ, ಪ್ರಮಾದವೇನೂ ನಡೆದಿಲ್ಲ. ಈ ನಮ್ಮ ಸಖಿಯು ಮಾತ್ರ ದುಂಬಿಯ ಹಾವಳಿಯಿಂದ ಸ್ವಲ್ಪ ಕಾತರೆಯಾದಳು”’ ಎಂದಳು. “ತಪಸ್ಸು ವರ್ಧಿಸುತ್ತಿರುವುದೇ?”’ ಎಂದು ಅರಸನು ಶಾಕುಂತಲೆಯನ್ನು ಕೇಳಿದನು. ಅದಕ್ಕವಳು ಯಾವ ಉತ್ತರವನ್ನೂ ಹೇಳದೆ ಸುಮ್ಮನಿರಲು, ಅನಸೂಯೆಯು, “ಶ್ರೇಷ್ಠನಾದ ಅತಿಥಿಯು ದೊರಕಿದುದರಿಂದ ಈಕೆಯ ತಪಸ್ಸು ಇದೀಗ ವರ್ಧಿಸಿತು” ಎಂದು ಹೇಳಿ, “ಶಾಕುಂತಲೆ, ಪರ್ಣಶಾಲೆಗೆ ಹೋಗಿ, ಫಲ ಸಹಿತ ಅರ್ಘ್ಯವನ್ನು ತೆಗೆದುಕೊಂಡು ಬಾ. ಗಡಿಗೆಯಲ್ಲಿರುವುದೇ ಪಾದೋದಕಕ್ಕೆ ಸಾಕು”’ ಎಂದಳು. ಅರಸನು “ಇರಲಿರಲಿ, ನಿಮ್ಮ ಸವಿನುಡಿಗಳಿಂದಲೇ ಸತ್ಕೃತನಾಗಿದ್ದೇನೆ?’ ಎನ್ನಲು, ಪ್ರಿಯಂವದೆಯು ತಣ್ಣೆಳಲ ಮರದೆಡೆಯಲ್ಲಿ ಕುಳಿತು ವಿಶ್ರಮಿಸಿಕೊಳ್ಳ ಬೇಕೆಂದು ಅವನನ್ನು ಪ್ರಾರ್ಥಿಸಿದಳು. ಅರಸನು “ನೀವೂ ಗಿಡಗಳಿಗೆ ನೀರೆರೆದು ಆಯಾಸಗೊಂಡಿರುವಿರಿ. ಕುಳಿತುಕೊಳ್ಳಿರಿ” ಎಂದು ಹೇಳಿ, ತಾನೂ ಅಲ್ಲಿಯೇ ಅವರೊಡನೆ ಕುಳಿತನು.
ಈ ವೇಳೆಗಾಗಲೆ, ಸುಂದರಾಕಾರನಾದ ದುಷ್ಯಂತನ ಪ್ರಥಮ ಸಂದರ್ಶನಮಾತ್ರದಿಂದ ಶಾಕುಂತಲೆಯಲ್ಲಿ ಪ್ರೇಮವು ಮೊಳೆತಿದ್ದಿತು. ಅವಳು “ಇದೇನು! ಈತನನ್ನು ಕಂಡೊಡನೆ ನನ್ನ ಮನಸ್ಸು ತಪೋವನಕ್ಕೆ ವಿರುದ್ಧವಾದ ಕಾಮವಿಕಾರಕ್ಕೆ ಒಳಗಾಗಿದೆ?” ಎಂದುಕೊಂಡಳು. ಎಲ್ಲರೂ ಕುಳಿತಾದಮೇಲೆ, ಅರಸನ ಸರಿಚಯಮಾಡಿಕೊಳ್ಳುವಂತೆ ಪ್ರಿಯಂವದೆ ಪ್ರೇರಿಸಲು, ಅನಸೂಯೆಯು “ಆರ್ಯ, ತಮ್ಮ ಸವಿನುಡಿಗಳಿಂದ ಹುಟ್ಟಿದ ವಿಶ್ವಾಸವು ತಮ್ಮನ್ನು ಒಂದೆರೆಡು ಮಾತನ್ನು ಕೇಳಬೇಕೆನಿಸಿದೆ. ಆರ್ಯನು ಯಾವ ರಾಜರ್ಷಿ ವಂಶವನ್ನು ಅಲಂಕರಿಸಿರುವುದು? ಯಾವ ನಾಡಿನ ಜನ ತಮ್ಮ ಅಗಲಿಕೆಯಿಂದ ಹಂಬಲಿಸುತ್ತಿರುವರು? ಸುಕುಮಾರರಾದ ತಾವು ಹೀಗೆ ತಪೋವನಕ್ಕೆ ಬಿಜಮಾಡಲು ನಿಮಿತ್ತವೇನು?” ಎಂದು ಕೇಳಿದಳು. ಅನಸೂಯೆಯು ಹೀಗೆ ಅರಸನನ್ನು ಪ್ರಶ್ನಿಸಲು, ತಾನು ಕೋರಿದುದನ್ನೇ ಅವಳು ಕೇಳಿದಳೆಂದು ಶಾಕುಂತಲೆಗೆ ಬಹಳ ಸಂತೋಷವಾಯಿತು.
ದುಷ್ಯಂತನಿಗೆ ತನ್ನ ನಿಷಯವನ್ನು ತಾಪಸ ಕನ್ನಿಕೆಯರಿಗೆ ತಿಳಿಸುವುದು ಹೇಗೆಂದು ಯೋಚನೆಗಿಟ್ಟುಕೊಂಡಿತು. ತನ್ನ ಪರಿಚಯವನ್ನು ಮರೆಮಾಚಿಕೊಳ್ಳಲೂ ಅವನಿಗೆ ಮನಸ್ಸು ಬರಲಿಲ್ಲ. ಸ್ವಲ್ಪ ಯೋಚಿಸಿ, ಕಡೆಗೆ ಚಮತ್ಕಾರವಾಗಿ, “ಪೂಜ್ಯಳೇ, ಪುರುವಂಶದರಸು ಧರ್ಮಾಧಿಕಾರದಲ್ಲಿ ನಿಯೋಜಿಸಿರುವವನೇ ನಾನು. ಆಶ್ರಮವಾಸಿಗಳ ತಪಸ್ಸು ನಿರ್ವಿಘ್ನವಾಗಿ ನಡೆಯುವುದೇ ಎಂದು ಅರಿಯಲೋಸುಗ ಈ ಧರ್ಮಾರಣ್ಯಕ್ಕೆ ಬಂದೆನು” ಎಂದನು. ಅರಸನ ನುಡಿಗಳನ್ನು ಕೇಳಿ ಶಾಕುಂತಲೆಗೆ ಒಳಗೊಳಗೇ ಆನಂದವಾಯಿತು. ಮೊದಲೇ ಅವಳಲ್ಲಿ ಮೂಡಿದ್ದ ದುಷ್ಯಂತ ವಿಷಯಕವಾದ ಪ್ರೇಮವು ಮತ್ತಷ್ಟು ಬಲಿಯಿತು. ಸಖಿಯರಿಬ್ಬರೂ ಅವಳ ಭಾವವನ್ನರಿತು ಉತ್ಸುಕರಾಗಿ, “ಶಾಕುಂತಲೆ, ಈಗ ತಂದೆಯವರು ಇಲ್ಲಿ ಇದ್ದಿದ್ದರೆ? ಎಂದರು. ಶಾಕುಂತಲೆ, “ಆಗ ಏನಾಗುತ್ತಿದ್ದಿತೊ??” ಎಂದಳು. “ಅವರ ಜೀವನ ಸರ್ವಸ್ವವಾದ ನಿನ್ನನ್ನೇ ಈ ಅತಿಥಿಗಿತ್ತು ಕೃತಾರ್ಥನನ್ನಾಗಿ ಮಾಡುತ್ತಿದ್ದರು.” ಸಖಿಯರ ಈ ಮಾತನ್ನು ಕೇಳಿ ಶಾಕುಂತಲೆ ಹುಸಿ ಮುನಿಸಿನಿಂದ, “ನೀವು ಹೊರಟು ಹೋಗಿ. ಏನೋ ಮನಸ್ಸಿನಲ್ಲಿಟ್ಟುಕೂಂಡು ಮಾತನಾಡುತ್ತಿದ್ದೀರಿ. ನಿಮ್ಮ ಮಾತು ನನಗೆ ಬೇಕಿಲ್ಲ?” ಎಂದಳು.
ಬಳಿಕ ದುಷ್ಯಂತನು, ಶಾಕುಂತಲೆಯು ವಿಶ್ವಾಮಿತ್ರ ಮೇನಕೆಯರ ಮಗಳೆಂದೂ, ಕಣ್ಣರು ಅವಳ ಸಾಕುತಂದೆಯೆಂದೂ ಅನುರೂಪನಾದ ವರನಿಗೆ ಅವಳನ್ನು ಕೊಟ್ಟು ಮದುವೆ ಮಾಡಬೇಕೆಂಬುದು ಕಣ್ವರ ಸಂಕಲ್ಪವೆಂದೂ ಅವಳ ಗೆಳತಿಯರಿಂದ ಅರಿತುಕೊಂಡನು.
ಈ ವಿಷಯವನ್ನರಿತ ಕೂಡಲೆ ದುಷ್ಯಂತನ ಸಂತೋಷಕ್ಕೆ ಪಾರವಿಲ್ಲವಾಯಿತು. ತನ್ನ ಬಯಕೆ ಕಷ್ಟಸಾಧ್ಯವಾದುದಲ್ಲವೆಂದು ಅವನಿಗೆ ಆಗ ಗೊತ್ತಾಯಿತು. ಸಂದೇಹವು ಕಳೆಯಿತು. ಯಾವುದನ್ನು ಅಗ್ನಿಯೆಂದು ಶಂಕಿಸಿದ್ದನೋ ಅದೇ ಈಗ ಸ್ವರ್ಶಯೋಗ್ಯವಾದ ರತ್ನವೆಂದು ತಿಳಿದನು. ಇತ್ತ ಅರಸನ ಮತ್ತು ತನ್ನ ಸಖಿಯರ ಸಂವಾದವನ್ನು ಕೇಳುತ್ತಿದ್ದ ಶಾಕುಂತಲೆಗೂ ಹರ್ಷವಾಯಿತು. ಆದರೂ ಅವಳುಕಪಟಕೋಪವನ್ನು ನಟಸಿ, “ಅನಸೂಯೆ, ನಾನು ಹೋಗುತ್ತೇನೆ. ಅಸಂಬದ್ಧವಾಗಿ ಹರಟುತ್ತಿರುವ ಈ ಪ್ರಿಯಂವದೆಯ ವಿಚಾರವನ್ನು ಆರ್ಯೆ ಗೌತನಿಗೆ ತಿಳಿಸುತ್ತೇನೆ? ಎಂದು ಹೊರಡಲು, ಅನಸೂಯೆಯು, *”ಗೆಳತಿ, ಅತಿಥಿಗಳನ್ನು ಸತ್ಕರಿಸದೆ ಸ್ವೇಚ್ಛೆಯಾಗಿ ಹೊರಟುಹೋಗುವುದು ಆಶ್ರಮದವರಿಗೆ ತಕ್ಟುದಲ್ಲ” ಎಂದಳು. ಶಾಕುಂತಲೆಯು ಯಾವ ಉತ್ತರವನ್ನೂ ಕೊಡದೆ ಮುಂದುವರಿದಳು. ಆಗ ಪ್ರಿಯಂವದೆಯು ಅವಳನ್ನು ತಡೆದು, “ಎಲೌ, ನೀನು ಇನ್ನೂ ಎರಡು ಪಾತಿಗಳಿಗೆ ನೀರೆರೆಯಬೇಕಾಗಿದೆ. ಅದನ್ನು ಮುಗಿಸಿ ಬೇಕಾದರೆ ಹೋಗಬಹುದು’? ಎಂದು ನಿಲ್ಲಿಸಿದಳು. ಶಾಕುಂತಲೆಯು ಮತ್ತೆ ಗಿಡಗಳಿಗೆ ನೀರೆರೆದು ಆಯಾಸಗೊಳ್ಳುವುದು ದುಷ್ಯಂತನಿಗೆ ಸಹ್ಯವಾಗಲಿಲ್ಲ. “ಭದ್ರೆ, ನಿಮ್ಮ ಗೆಳತಿಯು ಈಗಾಗಲೇ ಬಳಲಿದ್ದಾಳೆ. ಆದುದರಿಂದ ಆಕೆಯ ಸಾಲವನ್ನು ನಾನು ತೀರಿಸುವೆನು” ಎಂದು ಹೇಳಿ, ಗೆಳತಿಯರ ಕಾಟದಿಂದ ಶಾಕುಂತಲೆಯು ಪಾರಾಗಲೆಂಬ ಉದ್ದೇಶದಿಂದ ಅರಸನು ತನ್ನ ಬೆರಳ ಉಂಗುರವನ್ನು ತೆಗೆದುಕೊಟ್ಟನು. ಸಖಿಯರಿಬ್ಬರೂ ಉಂಗುರದಮೇಲೆ ಕೆತ್ತಿದ್ದ ಅಕ್ಬರಗಳನ್ನು ಓದಿ, ಈತನೇ ದುಷ್ಯಂತನೆಂದು ಅರಿತು ಒಬ್ಬರನ್ನೊಬ್ಬರು ನೋಡಿಕೊಂಡರು. , ಆಗ ಪ್ರಿಯಂವದೆಯು, “ಶಾಕುಂತಲೆ, ಆರ್ಯರನಿಂದ ಅಥವಾ ಮಹಾರಾಜನಿಂದ ನೀನು ಬಿಡುಗಡೆಯಾದೆ. ಇನ್ನು ಹೊರಡಬಹುದು? ಎಂದಳು. ಶಾಕುಂತಲೆಯು ಹೂರಡುವುದಕ್ಕೂ ಇಷ್ಟ ಸಡದೆ, ಇರುವುದಕ್ಕೂ ಆಗದೆ “ಹೋಗೆನ್ನುವುದಕ್ಕೂ ಇರೆನ್ನುವುದಕ್ಕೂ ನೀನಾರೊ” ಎನ್ನುತ್ತ ಅಲ್ಲಿಯೇ ನಿಂತಳು. ಅರಸನು ಆಗಿನ ಅವಳ ನಿಲುವು, ನೋಟ, ಹಾವ ಭಾವ ವಿಲಾಸಗಳ ವೈಖರಿಯನ್ನು ನೋಡಿ ಮುಗ್ಧನಾಗಿ, ಅವಳು ತನ್ನಲ್ಲಿ ಅನುರಾಗವನ್ನು ಸೂಚಿಸುತ್ತಿರುವಳೆಂದು ಯೋಚಿಸುತ್ತಿರುವಂತೆಯೇ ಕಾಡಾನೆಯೊಂದು ತಪೋವನಕ್ಕೆ ನುಗಿ ಬರುತ್ತಿದ್ದುದರಿಂದ ಸೈನಿಕರ ಕೋಲಾಹಲ ಕೇಳಿಸಿತು. ಅವರೆಲ್ಲರೂ ಮೃಗಯಾವಿಹಾರಿಯಾದ ದುಷ್ಯಂತ ರಾಜನನ್ನು ಅರಸುತ್ತಿದ್ದರು. ದುಷ್ಯಂತನು ತನ್ನ ಆನಂದಕ್ಕೆ ಎಡರುಬಂದುದಕ್ಕಾಗಿ ಚಿಂತಿಸಿ, ಗತ್ಯಂತರವಿಲ್ಲದೆ, “ಸೈನಿಕರು ನನ್ನನ್ನು ಹುಡುಕುತ್ತಿದ್ದಾರೆ, ನಾನು ಹೋಗಿಬರುವೆನು” ಎಂದು ಹೇಳಿ ಮುನಿ ಕನ್ನಿಕೆಯರಿಂದ ಬೀಳ್ಕೊಂಡು, ಶಾಕುಂತಲೆಯಲ್ಲಿ ನೆಟ್ಟುಹೋಗಿದ್ದ ತನ್ನ ಮನಸ್ಸನ್ಸು ಕಷ್ಟದಿಂದ ಹಿಂತಿರುಗಿಸಿಕೊಂಡು ಹೊರಟನು. ಆಗೆ ಅವನ ಶರೀರವು ಮುಂದುಮುಂದಕ್ಕೆ ಹೋಗುತ್ತಿದ್ದರೂ ಅವನ ಮನಸ್ಸುಮಾತ್ರ ಪ್ರಿಯತಮೆಯಾದ ಶಾಕುಂತಲೆಯನ್ನು ಅನುಸರಿಸಿ ಹಿಂದು ಹಿಂದಕ್ಕೆ ಓಡುತ್ತಿದ್ದಿತು. ಶಾಕುಂತಲೆಯೂ ಅರಸನನ್ನೇ ನೆಟ್ಟನೆ ನೋಡುತ್ತ ಸಖಿಯರೊಡನೆ ಹಿಂತಿರುಗಿದಳು.
ಇತ್ತ ಬೇಟೆಗೆ ಅರಸನ ಜೊತೆಯಲ್ಲಿ ಬಂದಿದ್ದ ಅವನ ಗೆಳೆಯನಾದ ಮಾಢವ್ಯನು ಯಾವಾಗ ಪಟ್ಟಣಕ್ಕೆ ಹಂತಿರುಗುವುದೋ ಎಂದು ಚಿಂತಿಸಿದನು; ಅವನನ್ನು ಕಂಡು ಹೇಗಾದರೂ ಮಾಡಿ ಪಟ್ಟಣ ಪ್ರಯಾಣಕ್ಕೆ ಅವನನ್ನು ಒಡಂಬಡಿಸಬೇಕೆಂದು ಅವನನ್ನೇ ಹುಡುಕುತಿದ್ದನು. ಬಿಸಿಲು ಗಾಳಿಗಳೆನ್ನದೆ “ಇದೋ ಹುಲ್ಲೆ ಅದೋ ಹುಲಿ! ಇದೊ ಇದೋ ಹಂದಿ” ಎಂದು ಕೂಗಿಟ್ಟು ಕಾಡಿನಲ್ಲೆಲ್ಲ ಅಲೆಯುತ್ತಿದ್ದ ಬೇಡರ ಸಹವಾಸವು ಮಾಢವ್ಯನಿಗೆ ಸಾಕುಸಾಕಾಗಿಹೋಗಿದ್ದಿತು. ತಿನ್ನಬಾರದ್ದನ್ನೆಲ್ಲ ತಿಂದು, ಎಲೆಗಳುದುರಿ ಕೊಳೆತು ನಾರುತ್ತಿದ್ದ ನೀರನ್ನು ಕುಡಿದು ಅವನಿಗೆ ಅಸಹ್ಯವಾಗಿ ಹೋಗಿದ್ದಿತು. ಅಲೆದಲೆದು ಕೈಕಾಲು ಸೋತು, ನೋವು ಹತ್ತಿ ಅವನಿಗೆ ಇರುಳೆಲ್ಲ ನಿದ್ರೆಯೇ ಬರುತ್ತಿರಲಿಲ್ಲ; ಅಷ್ಟಿಷ್ಟು ನಿದ್ರೆ ಬಂದರೂ ಮಂಗಳವಾದ್ಯಗಳಿಗೆ ಪ್ರತಿಯಾಗಿ ಹಕ್ಕಿಬಿಕ್ಕರು ಕೂಗಿ ಬೇಟೆ ನಾಯಿಗಳು ಬಗುಳಿ ಅವನಿಗೆ ಎಚ್ಚರವಾಗಿಬಿಡುತ್ತಿದ್ದಿತು. ಅರಸನ ಸಹವಾಸವನ್ನು ಏಕಾದರೂ ಮಾಡಿದೆನೋ ಎನ್ನುವವರೆಗೂ ಅವನಿಗೆ ಬೇಸರವಾಗಿ ಹೋಗಿದ್ದಿತು. ಇಷ್ಟಾದರೂ ಅರಸನು ಪಟ್ಟಣಕ್ಕೆ ಹೋಗುವ ಸಮಾಚಾರವನ್ನೇ ಎತ್ತಿರಲಿಲ್ಲ. ಇದರಮೇಲಾಗಿ, ತಾಪಸಕನ್ನಿಕೆಯಾದ ಶಾಕುಂತಲೆಯು ಅರಸನ ದೃಷ್ಟಿಪಥಕ್ಕೆ ಬಿದ್ದುದಂತೂ ಅವನಿಗೆ ಕುರುವಿನ ಮೇಲೆ ಬೊಕ್ಕೆಯೆದ್ದಂತಾಗಿದ್ದಿತು. ಅಷ್ಟುಹೊತ್ತಿಗೆ ಅರಸನು ಅಲ್ಲಿಗೆ ಬಂದು, ತನ್ನ ಗೆಳೆಯನ ಆ ಸ್ಥಿತಿಗೆ ಕಾರಣವೇನೆಂದು ವಿಚಾರಿಸಿದನು. ಮಾಢವ್ಯನು, ಜೊಂಡು ಬಾಗಲು ಪ್ರವಾಹವೇ ಕಾರಣವಾದಂತೆ ತನ್ನ ಸ್ಥಿತಿ ಹಾಗಾಗಿರುವುದಕ್ಕೆ ಅರಸನೇ ಕಾರಣವೆಂದು ಹೇಳಿ, ಒಂದು ಹಗಲಾದರೂ ತನ್ನ ವಿಶ್ರಾಂತಿಗೆ ಭಂಗ ತರಕೂಡದೆಂದು ಪ್ರಾರ್ಥಿಸಿಕೊಂಡನು. ದುಷ್ಯಂತನು ಗೆಳೆಯನನ್ನು ಸಂತೋಷಪಡಿಸುವುದು ಕರ್ತವ್ಯವೆಂದು ನಿಶ್ಚಯಿಸಿ, ಬೇಟೆಯ ಪರಿವಾರವನ್ನೆಲ್ಲ ಹಿಂತಿರುಗಿಸಿದನು. ಹಿಂದಿನ ದಿನ ತಾಪಸ ಕನ್ನಿಕೆಯರು ವನಮೃಗಗಳ ಕಾಟದಿಂದ ಭೀತರಾಗಿದ್ದುದನ್ನು ಸ್ಮರಿಸಿಕೊಂಡು, ಅವನು ತಪೋವನಕ್ಕೆ ಯಾವ ತೊಂದರೆಯೂ ಇಲ್ಲದಿರಲೆಂದೇ ಪರಿವಾರದವರನ್ನು ಕಳುಹಿಸಿದುದು. ಇಷ್ಟಾದರೂ ಮಾಢವ್ಯನಿಗೆ ನಿಶ್ಚಿಂತೆಯಾಗಿ ಕಾಲ ಕಳೆಯಲಾಗಲಿಲ್ಲ. ದುಷ್ಯಂತನು ಆಶ್ರಮ ಲಲಾಮಭೂತಳಾದ ಶಾಕುಂತಲೆಯ ಅನುಸಮ ಸೌಂದರ್ಯವನ್ನು ವರ್ಣಿಸತೊಡಗಿದನು. ಮಾಢವ್ಯನಿಗಂತೂ ಅವನ ವರ್ಣನೆಯು ತೀರವಿಚಿತ್ರವಾಗಿ ತೋರಿ, ಖಂಡ ಖರ್ಜೂರವನ್ನು ತಿಂದವನು ಹುಣಿಸೆಹಣ್ಣನ್ನು ಬಯಸುವಂತೆ ಅರಸನ ಅಭಿರುಚಿಯು ಮಾರ್ಪಟ್ಟಿತೆಂದು ಹಾಸ್ಯ ಮಾಡಿದನು. ಅದರಿಂದ ದುಷ್ಯಂತನ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಅವನು, “ಮಾಢವ್ಯ ಸೃಷ್ಟಿಕರ್ತನಾದ ಬ್ರಹ್ಮನು ಜಗತ್ತಿನ ಸುಂದರ ಸ್ತ್ರೀಯರನ್ನೆಲ್ಲ ಮೀರಿರುವ ಸ್ತ್ರೀರತ್ನವೊಂದನ್ನು ನಿರ್ಮಿಸಬಯಸಿ, ಎಲ್ಲ ಬಗೆಯ ಸುಂದರಪದಾರ್ಥಗಳಲ್ಲಿಯ ಸೌಂದರ್ಯ ಭಾಗಗಳನ್ನು ಸಂಗ್ರಹಿಸಿ ಚಿತ್ರದಲ್ಲಿ ಚಿತ್ರಿಸಿ, ಜೀವಕಳೆಯನ್ನು ತುಂಬಲು ರೂಪಗೊಂಡವಳೇ ಶಾಕುಂತಲೆ” ಎಂದು ಹೇಳಿದನು. ಮಾಢವ್ಯನು ಈ ಮಾತುಗಳನ್ನು ಕೇಳಿ, ತನ್ನ ಗೆಳೆಯನು ಶಾಕುಂತಲೆಗೆ ಸಂಪೂರ್ಣವಾಗಿ ಮನಸೋತಿರುವನೆಂದು ನಿರ್ಧರಿಸಿದನು. ದುಷ್ಯಂತನು ಆಕೆಯನ್ನು ನೋಡುವ ಬಯಕೆಯಿಂದ ಮತ್ತೊಮ್ಮೆ ಆಶ್ರಮಕ್ಕೆ ಹೋಗಬೇಕೆಂದು ಬಯಸಿದರೂ ಗತ್ಯಂತರವಿಲ್ಲದೆ, ಅಲ್ಲಿಗೆ ಹೋಗಲು ಯಾವುದಾದರೂ ನೆವ ಸಿಕ್ಕೀತೇ ಎಂದು ಯೋಚಿಸುತ್ತಿದ್ದನು. ಆ ಹೊತ್ತಿಗೆ ಸರಿಯಾಗಿ ದೌವಾರಿಕನು ಕಣ್ವಾಶ್ರಮದಿಂದ ಮುನಿಗಳು ಬಂದಿರುವುದಾಗಿ ತಿಳಿಸಿದನು. ಅರಸನು ಅವರನ್ನು ಗೌರವದಿಂದ ಬರಮಾಡಿಕೊಂಡನು. ತಪಸ್ವಿಗಳು, ತಮ್ಮ ಕುಲಪತಿಗಳಾದ ಕಣ್ವರು ಆಶ್ರಮದಲ್ಲಿ ಇಲ್ಲದ ಸುಳಿವನ್ನರಿತು ರಾಕ್ಷಸರು ಯಜ್ಞಕ್ಕೆ ಅಡ್ಡಿ ಮಾಡುತ್ತಿರುವರೆಂದು ಹೇಳಿ, ಕೆಲವುದಿನ ಅರಸನು ಆಶ್ರಮದಲ್ಲಿಯೇ ಇದ್ದು ಆ ತೊಂದರೆಯನ್ನು ನಿವಾರಿಸಬೇಕೆಂದೂ ಪ್ರಾರ್ಥಿಸಿದರು. ಈ ಆಹ್ವಾನವನ್ನು ಕೇಳಿ ಅರಸನಿಗೆ ಅತ್ಯಾನಂದವಾಯಿತು. ಶಾಕುಂತಲೆಯನ್ನು ಮತ್ತೆ ಕಾಣುವೆನೆಂಬ ಉತ್ಸಾಹವು ಮೂಡಿತು. ಕೂಡಲೆ ಹೊರಟುಬರುವುದಾಗಿ ಮಾತು ಕೊಟ್ಟನು. ತಪಸ್ವಿಗಳು ಅವನನ್ನು ಹರಸಿ ಬೀಳ್ಕೊಂಡರು.