ಅಭಿಜ್ಞಾನ ಶಾಕುಂತಲ – ಕಾಳಿದಾಸ

ದೊರೆಯ ಪ್ರಣಯವೃತ್ತಾಂತವೆಲ್ಲವೂ ಅವನ ನರ್ಮಸಚಿವನಾದ ಮಾಢವ್ಯನಿಗೆ ಗೊತ್ತಿದ್ದಿತು. ತನಗೆ ಅದನ್ನು ನೆನಪುಮಾಡಿಕೊಡದಿದ್ದುದಕ್ಕಾಗಿ ಅರಸನು ಅವನನ್ನು ಆಕ್ಟೇಪಿಸಿದನು. ಆದರೇನು? ಮಾಢವ್ಯನು “ಮಿತ್ರ, ನಾನು ಆ ವೃತ್ತಾಂತವನ್ನು ಮರೆತೇನೆ? ಎಲ್ಲವೂ ನನಗೆ ಗೊತ್ತಿದೆ. ಆದರೆ, ನೀನು “ಇದೆಲ್ಲಾ ಯಥಾರ್ಥವಲ್ಲ. ಪರಿಹಾಸಕ್ಕೆ ಆಡಿದ್ದು” ಎಂದು ಹೇಳಿದ್ದೆ. ಮಣ್ಣುಮುದ್ದೆಯ ಬುದ್ಧಿಯವನಾದ ನಾನು ಅದನ್ನು ನಂಬಿ ಸುಮ್ಮನಾದೆ. ಅಥವಾ ಭವಿತವ್ಯತೆ ಹೀಗಿದ್ದಿತು. ಮಾಡುವುದೇನು? ‘” ಎಂದುಬಿಟ್ಟನು. ದುಷ್ಯಂತನಿಗೆ ತಾನು ಮಾಡಿದ ಅಪರಾಧವು ಸಂಪೂರ್ಣವಾಗಿ ಮನವರಿಕೆಯಾಯಿತು. ವಿರಹವು ಮಿತಿಮಾರಿ, “ಮಿತ್ರ, ನನ್ನನ್ನು ರಕ್ಷಿಸು” ಎಂದು ಹೇಳಿ ಮೂರ್ಛೆಹೋಗುವುದರಲ್ಲಿದ್ದನು. ಮೇಧಾವಿಯಾದ ಮಾಢವ್ಯನು “ಅಯ್ಯಾ ಇದೇನು? ಇದು ನಿನಗೆ ಯುಕ್ತವಲ್ಲ. ಸತ್ಪುರುಷರು ಶೋಕಕ್ಕೆ ಅಧೀನರಾಗುತ್ತಾರೆಯೆ ? ಬೆಟ್ಟಗಳು ಬಿರುಗಾಳಿಗೆ ಚಲಿಸುತ್ತವೆಯೆ?’ ಎಂದು ಮೊದಲಾಗಿ ಸಂತಯಿಸಿದನು.

ಮಾಢವ್ಯನು ಏನು ಹೇಳಿದರೂ ದುಷ್ಯಂತನಿಗೆ ಸಮಾಧಾನವಾಗಲಿಲ್ಲ. ತಾನು ಶಾಕುಂತಲೆಯನ್ನು ನಿರಾಕರಿಸಿದ ಕಾಲದಲ್ಲಿನ ಅವಳ ದೀನಾವಸ್ಥೆಯ ಚಿತ್ರವು ಅವನ ಮನಸ್ಸಿನಲ್ಲಿ ಸುಳಿಯಿತು. ತಿರಸ್ಕೃತೆಯಾಗಿ ಅವಳು ಹಿಂಬಾಲಿಸುತ್ತಿರಲು ಕಣ್ವ ಶಿಷ್ಯರು ನಿಲ್ಲೆಂದು ಗದರಿದಾಗ ದುಃಖಭರವನ್ನು ತಡೆಯಲಾರದೆ ಕಂಬನಿದುಂಬಿ ತನ್ನನ್ಮೂಮ್ಮೆ ನೆಟ್ಟನೆ ನೋಡಿದ ನೋಟವು ಅವನನ್ನು ನಂಜು ಸೋಕಿದ ಶಲ್ಯದಂತೆ ಸುಡುತ್ತಿದ್ದಿತು. ಮಾಢವ್ಯನು ಪತಿಪರಾಯಣೆಯಾದ ಶಾಕುಂತಲೆಯ ಮೇನಕೆಯ ಮಗಳೆಂದೂ, ಅವಳನ್ನು ಮೇನಕೆಯೇ ಕರೆದೊಯ್ದಿರಬೇಕೆಂದೂ ದುಷ್ಯಂತನಿಂದ ತಿಳಿದು, “ಅಯ್ಯಾ, ಮಿತ್ರ, ಹಾಗಾದರೆ ನೀನು ಆಕೆಯನ್ನು ಜಾಗ್ರತೆಯಾಗಿಯೇ ನೋಡುವೆ. ಏಕೆನ್ಸುವೆಯೊ? ಪತಿಗಾಗಿ ಹಂಬಲಿಸಿ ಪರಿತಪಿಸುತ್ತಿರುವ ಶಾಕುಂತಲೆಯಂತಹ ಹೆಣ್ಣು ಮಕ್ಕಳನ್ನು ತಾಯಿತಂದೆಗಳು ನೋಡಿಕೊಂಡು ಸುಮ್ಮನಿರುವರೆ?” ಎಂದು ಸಮಾಧಾನಸಡಿಸಿದನು. ದುಷ್ಯಂತನು ಇನ್ನೂ ಸಂದೇಹಿಸುತ್ತಿರಲು, ಮಾಢವ್ಯನು, ” ಕೈಬಿಟ್ಟು ಹೋಗಿದ್ದ ವಸ್ತುವು ಮತ್ತೆ ದೊರೆಯುತ್ತದೆಯೆಂಬುದಕ್ಕೆ ಉಂಗುರವೇ ತಕ್ಕ ನಿದರ್ಶನವಲ್ಲವೆ?” ಎಂದು ಹೇಳಿ ಸಂತಯಿಸಲು ಪ್ರಯತ್ನಿಸಿದನು. ಆದರೂ ವಂಶಾಂಕುರವಿಲ್ಲದ ದುಃಖವೂ ಅವನನ್ನು ಮುತ್ತಿ ಗರ್ಭವತಿಯಾದ ಶಾಕುಂತಲೆಯನ್ನು ತೊರೆದುದಕ್ಕಾಗಿ ಅವನಲ್ಲಿ ಉಂಟಾದ ಪಶ್ಚಾತ್ತಾಪವು ಮೇರೆಮಾರಿತು.

ಈವರೆಗೆ ನಡೆದುದೆಲ್ಲವನ್ನೂ ಅಪ್ಸರೆಯಾದ ಸಾನುಮತಿಯು ಅದೃಶ್ಯಳಾಗಿ ನೋಡುತ್ತಿದ್ದಳು. ಅವಳು ಮೇನಕೆಯ ಗೆಳತಿ. ಮೇನಕೆಯು ತನ್ನ ಮಗಳ ವಿಷಯದಲ್ಲಿ ರಾಜನ ಮನೋವೃತ್ತಿಯನ್ನು ತಿಳಿದುಬರಲು ಅವಳನ್ನು ಕಳುಹಿಸಿದ್ದಳು. ದುಷ್ಯಂತನು ಶಾಕುಂತಲೆಯನ್ನು ಸ್ಮರಿಸಿ ವಿಲಪಿಸುತ್ತಿರುವುದು, ತಾನು ಮಾಡಿದ ತಿರಸ್ಕಾರಕ್ಕಾಗಿ ಬಹುವಾಗಿ ಪಶ್ಚಾತ್ತಾಪ ಪಡುತ್ತಿರುವುದು, ಅವಳ ಪುನರ್ದರ್ಶನಕ್ಕಾಗಿ ಆತುರನಾಗಿರುವುದು ಸಾನುಮತಿಗೆ ತಿಳಿದಮೇಲೆ ಅವಳ ಸಂತೋಷಕ್ಕೆ ಪಾರವಿಲ್ಲವಾಯಿತು. ಎಲ್ಲ ವಿಚಾರಗಳನ್ನೂ ಶಾಕುಂತಲೆಗೆ ತಿಳಿಸಿ ಅವಳನ್ನು ಸಂತಯಿಸಬಯಸಿ ಹೊರಟುಹೋದಳು.

ಪಶ್ಚಾತ್ತಾಪ ಪೀಡಿತನಾಗಿದ್ದ ದುಷ್ಯಂತನಿಗೆ ಹೃದಯವನ್ನು ಮತ್ತಷ್ಟು ಕಲಕುವಂತಹ ಇನ್ನೂಂದು ಸನ್ನಿವೇಶವು ಪ್ರಾಪ್ತವಾಯಿತು. ಮಂತ್ರಿಯಾದ ಪಿಶುನನು ಧನಮಿತ್ರನೆಂಬ ವರ್ತಕನು ಸಮುದ್ರದಲ್ಲಿ ಓಡೆಯೊಡೆದು ಮಡಿದನೆಂದೂ, ಆತನಿಗೆ ಸಂತಾನವಿಲ್ಲದಿದ್ದುದರಿಂದ ಅವನ ಆಸ್ತಿಯೆಲ್ಲ ರಾಜನಿಗೆ ಸೇರತಕ್ಕುದೆಂದೂ ಒಂದು ವ್ಯವಹಾರವನ್ನು ತೀರ್ಪಿಗಾಗಿ ಪತ್ರಮುಖೇನ ಅರಸನ ಬಳಿಗೆ ಕಳುಹಿಸಿದನು. ಅದನ್ನು ನೋಡಿ ಅರಸನು, ಸಂತಾನಹೀನತೆಯು ಎಷ್ಟು ದುಃಖಕರ ಎಂದುಕೊಂಡು ಧನಮಿತ್ರನ ಒಬ್ಬ ಹೆಂಡತಿ ಗರ್ಭವತಿಯಾಗಿರುವ ವಿಚಾರವನ್ನು ತಿಳಿದು, ತಂದೆಯ ಸೊತ್ತು ಮಕ್ಕಳಿಗೇ ಸೇರತಕ್ಕುದು; ಮುಂದೆ ಹುಟ್ಟುವ ಧನಮಿತ್ರಪುತ್ರನಿಗೆ ಅದು ಸೇರಬೇಕು ಎಂದು ತೀರ್ಪಿತ್ತು ಕಳುಹಿಸಿದನು. ಪಾಪಿಗಳನ್ನುಳಿದು ಯಾರು ಯಾರು ಪ್ರಿಯಬಂಧುಗಳಿಂದ ಅಗಲುವರೋ ಅವರೆಲ್ಲರಿಗೂ ದುಷ್ಯಂತನೇ ಬಂಧುವಾಗಿ ನಡೆಯುವನೆಂದು ಪಟ್ಟಣದಲ್ಲೆಲ್ಲ ಸಾರುವಂತೆ ಆಜ್ಞೆ ಮಾಡಿದನು.

ಸಂತತಿ ವಿಚ್ಛೇದದಿಂದ ಆಸರೆಯಿಲ್ಲದಾಗುವ ಕುಲಗಳಿಗೆ ಮೂಲ ಪುರುಷನು ಮಡಿದರೆ, ಅವನ ಸಂಪತ್ತೆಲವೂ ಆ ಗತಿಗಿಳಿಯುವುದಲ್ಲವನೆ? ನಾನಾದಮೇಲೆ ಪುರುವಂಶದ ಸಂಪತ್ತಿಗೂ ಇದೇ ಗತಿಯೇ ಎಂದು ಅವನ ಮನಸ್ಸು ದುಃಖದ ಕಡಲಿನಲ್ಲಿ ಮುಳುಗಿತು. ಗರ್ಭವತಿಯಾಗಿದ್ದ ಶಾಕುಂತಲೆಯನ್ನು ಮತ್ತೆ ಮತ್ತೆ ನೆನೆದು ತಪಿಸಿಹೋದನು.

Leave a Reply

Your email address will not be published. Required fields are marked *