ಅಭಿಜ್ಞಾನ ಶಾಕುಂತಲ – ಕಾಳಿದಾಸ
ಆಗ ಅವನನ್ನು ಸಮಾಧಾನಪಡಿಸಲು ಮಾಢವ್ಯನೂ ಬಳಿಯಲ್ಲಿರಲಿಲ್ಲ. ಚಿತ್ರವನ್ನು ಹಸನುಮಾಡಲು ವರ್ಣಕುಂಚಗಳನ್ನು ತರಬೇಕೆಂದು ಅರಸನು ಆಜ್ಞೆ ಮಾಡಲು ಚತುರಿಕೆಯು ಅವುಗಳನ್ನು ತರುತ್ತಿ ದಳು. ಆಗ ಮಡದಿಯಾದ ವಸುಮತಿಯು ಆ ವೃತ್ತಾ೦ತವನ್ನು ತಿಳಿದು ಅವುಗಳನ್ನು ತಾನೇ ತೆಗೆದುಕೊಂಡು ಅರಸನ ಬಳಿಗೆ ಬರುವುದರಲ್ಲಿದ್ದ ಳು. ಅರಸನು ಶಾಕುಂತಲೆಯ ಚಿತ್ರದರ್ಶನದಿಂದ ವಸುಮತಿಯು ನೊಂದುಕೊಂಡಾಳೆಂದು ಭಾವಿಸಿ ಅದನ್ನು ಮಾಢವ್ಯನ ಕೈಯಲ್ಲಿ ಕೊಟ್ಟು ಕಳುಹಿಸಿಬಿಟ್ಟಿದ್ದನು. ಅವನು ಮೇಘ ಪ್ರತಿಚ್ಛಂದವೆಂಬ ವಿಹಾರ ಭವನದಲ್ಲಿ ದೊರೆಗಾಗಿ ಕಾದಿದ್ದನು.
ಆಗ ಇಂದ್ರ ಸಾರಥಿಯಾದ ಮಾತಲಿಯು ತನ್ನ ಪ್ರಭುವಿನ ಅಪ್ಪಣೆಯಂತೆ ದುಷ್ಯಂತನನ್ನು ಸ್ವರ್ಗಲೋಕಕ್ಕೆ ಕರೆದೊಯ್ಯಲು ಅಲ್ಲಿಗೆ ಬಂದನು. ಕಾಲನೇಮಿಯೇ ಮೊದಲಾದ ದಾನವರೆಲ್ಲರೂ ಅಮರಾವತಿ ಯನ್ನು ಮುತ್ತಿ ದೇವೇಂದ್ರನಿಗೆ ಅಜೇಯರಾಗಿ ಕಾಳಗಮಾಡುತ್ತಿರಲು ಅವರನ್ನು ಜಯಿಸಲು ದುಷ್ಯಂತ ಸಹಾಯವು ಬೇಕಾಯಿತು. ಮಾತಲಿಯು ಕೇವಲ ದಿನಾವಸ್ಥೆಯಲ್ಲಿದ್ದ ದುಷ್ಯಂತನನ್ನು ಹುರಿಗೊಳಿಸಿ, ಆಮೇಲೆ ಇಂದ್ರ ಸಂದೇಶವನ್ನು ಅವನಿಗೆ ತಿಳಿಸಬಯಸಿ, ಪ್ರಾಸಾದದಲ್ಲಿದ್ದ ಮಾಢವ್ಯನ ಕುತ್ತಿಗೆಯನ್ನು ಅವುಕಿ ನೋಯಿಸಿದನು. ಮಾಢವ್ಯನು ರಕ್ಪಣೆಗಾಗಿ ತನ್ನ ಮಿತ್ರನನ್ನು ಕೂಗಿಕೊಳ್ಳಲು, ದುಷ್ಯಂತನು ಮೂರ್ಛೆ ತಿಳಿದೆದ್ದು, ಬಿಲ್ಲಿನಲ್ಲಿ ಬಾಣವನ್ನು ಹೂಡಿ ಪ್ರಯೋಗಿಸುವುದರಲ್ಲಿರಲು, ಮಾತಲಿಯು ಅವನಿಗೆ ಕಾಣಿಸಿಕೊಂಡನು; ಇಂದ್ರ ಸಂದೇಶವನ್ನು ಅರಸನಿಗೆ ಅರಿಕೆಮಾಡಿ, ಅಮರಾವತಿಗೆ ದಯಮಾಡಿಸಬೇಕೆಂದು ಪ್ರಾರ್ಥಿಸಿದನು. ಆ ಪ್ರಾರ್ಥನೆಯಂತೆ, ದುಷ್ಯಂತನು ತಾನು ಹಿಂತಿರುಗಿ ಬರುವವರೆಗೂ ರಾಜ್ಯಭಾರವನ್ನು ನಿರ್ವಹಿಸುವುದೆಂದು ಮಂತ್ರಿಯಾದ ಪಿಶುನನಿಗೆ ಹೇಳಿ ಕಳುಹಿಸಿ, ರಥದಲ್ಲಿ ಕುಳಿತು ಮಾತಲಿಯೊಡನೆ ಅಮರಾವತಿಗೆ ಹೊರಟನು.
ಅರಸನ ಧನುಷ್ಟಂಕಾರ ಮಾತ್ರದಿಂದಲೇ ಅಮರಾವತಿಯನ್ನು ಮುತ್ತಿದ್ದ ಕಾಲನೇಮಿಯೇ ಮೊದಲಾದ ರಾಕ್ಷಸರೆಲ್ಲರೂ ಬಹು ಭೀತರಾಗಿ ಪಲಾಯನವಾದರು. ವಿಜಯವು ದೇವತೆಗಳ ಕೈಸೇರಿತು. ಮಹೇಂದ್ರನಿಗೆ ಪರಮಾನಂದವಾಯಿತು. ತನ್ನ ವಿಜಯಕ್ಕೆ ಕಾರಣನಾದ ದುಷ್ಯಂತನನ್ನು ಸನ್ಮಾನಿಸಿದನು; ತನ್ನ ಮಗನಾದ ಜಯಂತನು ಅಸೂಯೆಪಡುತ್ತಿದ್ದರೂ ದುಷ್ಯಂತನನ್ನು ತನ್ನ ಸಿಂಹಾಸನದಲ್ಲಿ ತನ್ನೊಡನೆ ಸಮಸಮವಾಗಿ. ಕುಳ್ಳಿರಿಸಿಕೊಂಡು, ಅವನ ಕೊರಳನ್ನು ಮಂದಾರಪುಷ್ಟ ಮಾಲಿಕೆಯಿಂದ ಅಲಂಕರಿಸಿದನು. ಸ್ವರ್ಗಾಂಗನೆಯರೆಲ್ಲರೂ ಕಲ್ಪವೃಕ್ಷದ ಎಲೆಗಳಲ್ಲಿ ಆತನ ವಿಜಯ ಗೀತಗಳನ್ನು ಬರೆದರು. ಮಧುರವಾಗಿ ಆ ಗೀತಗಳನ್ನು ಹಾಡಿ, ನರ್ತಿಸಿದರು.
ಇದಾದ ಬಳಿಕ ದುಷ್ಯಂತನು ಮಹೇಂದ್ರನ ಅಪ್ಪಣೆಯನ್ನು ಪಡೆದು ಅವನ ರಥದಲ್ಲಿಯೇ ಕುಳಿತು ಮಾತಲಿಯ ಸಾರಥ್ಯದಲ್ಲಿ ಭೂಲೋಕಕ್ಕೆ ಹೊರಟನು. ಮಾರ್ಗದಲ್ಲಿ ಮಾತಲಿಯು ಅಲ್ಲಲ್ಲಿನ ಊರ್ಧ್ವ ಲೋಕಗಳ ವಿಶೇಷವನ್ನು ವರ್ಣಿಸುತ್ತ, ಪೂರ್ವದಿಂದ ಪಶ್ಚಿಮದವರೆಗೂ ಹರಡಿ, ಸ್ಪರ್ಣಲಿಪ್ತವಾದಂತೆ ಫಳ ಫಳನೆ ಹೊಳೆಯುತ್ತಿದ್ದ ಹೇಮಕೂಟ ಪರ್ವತವನ್ನು ದೊರೆಗೆ ತೋರಿಸಿ, ಮಾರೀಚ ಮಹರ್ಷಿಗಳು ಅದಿತಿದೇವಿಯೊಡನೆ ಅಲ್ಲಿ ತಪಸ್ಸು ಮಾಡುತ್ತಿರುವರೆಂದೂ ಅದು ತಪಸ್ವಿಗಳಿಗೆ ಸಿಸಿದ್ಧಿ ಕ್ಷೇತ್ರವೆಂದೂ ಹೇಳಿದನು. ಅರಸನು ಮಹರ್ಷಿಗಳ ದರ್ಶನಭಾಗ್ಯವನ್ನು ಪಡೆಯಬೇಕೆಂದು ಬಯಸಲು, ಮಾತಲಿಯು ರಥವನ್ನು ಆ ಕಡೆ ತರುಬಿದನು. ಇಬ್ಬರೂ ರಥದಿಂದಿಳಿದಮೇಲೆ, ಮಾತಲಿಯು ದೊರೆಯನ್ನು ಅಶೋಕ ವೃಕ್ಚದ ನೆಳಲಲ್ಲಿ ಕುಳ್ಳಿರಿಸಿ ಮಾರೀಚರಿಗೆ ಸುದ್ದಿಯನ್ನು ತಿಳಿಸಲು ಹೋದನು.
ದುಷ್ಯಂತನು ಆ ಮರದಡಿಯಲ್ಲಿ ಕುಳಿತಿದ್ದಂತೆಯೆ, ಅವನಿಗೆ ಬಲ ಭುಜವದುರಿ ಶುಭಶಕುನವಾಯಿತು.”ಪ್ರೇಯಸಿಯನ್ನು ಕಾಣುವ ಆಸೆ ನನಗಿಲ್ಲವಾಯಿತು. ಅವಳು ಹಿಂತಿರುಗುವಂತಿಲ್ಲ. ಎಲೆ ಭುಜವೆ, ನಿಷ್ಪ್ರಯೋಜನವಾಗಿ ಅದುರುವೆಯೇತಕ್ಕೆ?” ಎಂದು ಅವನು ಬಿಸುಸುಯ್ದನು. ಆ ಹೊತ್ತಿಗೆ ಸುಂದರಾಕೃತಿಯ ಬಾಲಕನೊಬ್ಬನು ತಾಯಮೊಲೆ ಸವಿಯುತ್ತಿದ್ದ ಸಿಂಹದ ಮರಿಯೊಂದನ್ನು ಹಿಡಿದೆಳೆದು ಅದನ್ನು ಆಡಿಸುತ್ತ ಆ ಕಡೆಗೆ ಬಂದನು. ಅವನನನ್ನು ತಡೆಯಲು ತಾಸಸಿಯರಿಬ್ಬರು, “ವತ್ಸ! ತುಂಟತನ ಮಾಡಬಾರದು” ಎಂದು ಹೇಳುತ್ತ ಅವನನ್ನು ಹಿಂಬಾಲಿಸಿ ಬಂದರು. ಅದನ್ನು ಕೇಳಿ, ಅವಿನಯಕ್ಕೆಡೆಯಿಲ್ಲದ ಈ ತಪೋವನದಲ್ಲಿ ಬೇಡವೆಂದು ನಿಷೇಧಿಸುತ್ತಿರುವುದಾರನ್ನು? ಎಂದುಕೊಂಡು ಸಿಂಹದ ಮರಿಯನ್ನು ಎಳೆದು ತರುತ್ತಿದ್ದ ಬಾಲಕನನ್ನು ನೋಡಿ, ಅವನ ಅದಟಗೆ ದೊರೆಯು ಅಚ್ಚರಿಗೊಳ್ಳುತ್ತಿ ದ್ದನು. “ಮರಿಯೆ, ಬಾಯಿ ತೆರೆ. ಹಲ್ಲುಗಳನ್ನು ಎಣಿಸುವೆನು?’ ಎಂದು ನುಡಿಯುತ್ತಿದ್ದ ಅವನ ಮಾತುಗಳನ್ನು ಕೇಳಿಯಂತೂ ದುಷ್ಯಂತನಿಗೆ ಇನ್ನೂ ಆಶ್ಚರ್ಯವಾಯಿತು. ತುಂಟ! ಎಳ ಮರಿಗಳನ್ನು ಮೊದಲಾಗಿ ಪ್ರಾಣಿಗಳನ್ನು ಪೀಡಿಸುವೆಯಾ? ಬೇಡ ಬೇಡ?” ಎಂದು ತಾಪಸಿಯರು ತಡೆಯುತ್ತಿದ್ದರೂ ಆ ಬಾಲಕನು ಸಿಂಹದಮರಿಯನ್ನು ಬಿಡದೆ. ಮತ್ತಷ್ಟು ಉತ್ಸಾಹದಿಂದ ಮೆರೆಯುತ್ತಿದ್ದನು. ಬಾಲಕನನ್ನು ನೋಡುತ್ತ ನೋಡುತ್ತ ದುಷ್ಯಂತನಿಗೆ ಅವನ ವಿಷಯದಲ್ಲಿ ನಿರ್ವ್ಯಾಜವಾದ ಪುತ್ರಸ್ನೇಹವು ಮೂಡಿದುದನ್ನು ಕಂಡು, ” ನನಗೆ ಮಕ್ಕಳಿಲ್ಲದುದರಿಂದಲೇ ಹೀಗಾಗಿರಬಹುದು ” ಎಂದು ತನ್ನನ್ನು ತಾನು ಸಂತಯಿಸಿಕೊಂಡನು. ಮುಂದೆ ತಾಪಸಿಯರಿಗೂ ಆ ಬಾಲಕನಿಗೂ ನಡೆದ ಸಂಭಾಷಣೆಯನ್ನು ಕೇಳಿಯಂತೂ ದುಷ್ಯಂತನಿಗೆ ಅವನಲ್ಲಿ ಉಂಟಾಗಿದ್ದ ಭಾವವು ಬಲಿಯಲು ಕಾರಣವಾಯಿತು.