ಅಭಿಜ್ಞಾನ ಶಾಕುಂತಲ – ಕಾಳಿದಾಸ
ಬಾಲಕನು ಆ ನವಿಲನ್ನು ಅಕ್ಕರೆಯಿಂದ ತೆಗೆದುಕೊಂಡು ಆಟವಾಡುತ್ತಿರಲು, ತಾಪಸಿಯರು ಅವನ ರಕ್ಷಾಮಣಿಯು ಎಲ್ಲಿಯೋ ಬಿದ್ದುಹೋಗಿರುವುದನ್ನು ಆಗ ನೋಡಿಕೊಂಡರು. ಅದು ಅಲ್ಲಿಯೇ ಬಿದ್ದಿದ್ದುದನ್ನು ನೋಡಿ ದುಷ್ಯಂತನು ಅದನ್ನು ಕೈಗೆ ತೆಗೆದುಕೊಳ್ಳಲು ಹೋದನು. ತಾಪಸಿಯರು, “ಮುಟ್ಟಬೇಡಿ, ಮುಟ್ಟಬೇಡಿ” ಎಂದು ಹೇಳುತ್ತಿದ್ದರೂ ಅರಸನು ಅದನ್ನು ತೆಗೆದುಕೊಂಡು, “ಏತಕ್ಕಾಗಿ ನನ್ನನ್ನು ತಡೆದಿರಿ” ಎಂದು ಕೇಳಿದನು. ತಾಪಸಿಯು “ಮಹಾರಾಜ, ಇದು ಅಪರಾಜಿತೆ ಎಂಬ ಮೂಲಿಕೆ. ಪೂಜ್ಯರಾದ ಮಾರೀಚ ಮಹರ್ಷಿಗಳು ಈ ಬಾಲಕನ ಜಾತಕರ್ಮ ಸಮಯದಲ್ಲಿ ಕಟ್ಟದುದು. ಇದು ಕೆಳಗೆಬಿದ್ದಾಗ _ ತಾಯಿತಂದೆಯರನ್ನುಳಿದು ಮತ್ತಾರೂ ಇದನ್ನು ತೊಡದಿರಲಿ ಎಂದವರು ಹೇಳಿದ್ದರು” ಎಂದಳು. “ಮತ್ತಾರಾದರೂ ಇದನ್ನು ಮುಟ್ಟದರೆ ಏನಾಗುವುದು?” ಎಂದು ಅರಸನು ಕೇಳಲು, ” ಸರ್ಪವಾಗಿ ಕಚ್ಚುವುದು” ಎಂದು ತಾಪಸಿಯು ಉತ್ತರಕೊಟ್ಟಳು.
ದುಷ್ಯಂತನಿಗೆ ಪರಮಾನಂದವಾಯಿತು. ಬಾಲಕನು ತನ್ನ ಮಗನೇ ಎಂಬ ಸಂಗತಿ ದೃಢವಾಯಿತು. ತನ್ನ ಮನೋರಥವು ಪೂರ್ಣವಾದುದಕ್ಕಾಗಿ ತನ್ನನ್ನು ತಾನೇ ಅಭಿನಂದಿಸಿಕೊಂಡು, ಬಾಲಕನನ್ನಪ್ಪಿ ಮುದ್ದಿಸಿದನು. ತಾಪಸಿಯರಿಬ್ಬರಿಗೂ ಏಕಕಾಲದಲ್ಲಿಯೇ ಸಂತೋಷಾಶ್ಚರ್ಯಗಳು ಸಮನಿಸಿದುವು. ಪ್ರಿಯಾವಿರಹದಿಂದ ಚಿರತಪಸ್ವಿನಿಯಾಗಿದ್ದ ಶಾಕುಂತಲೆಗೆ ತಿಳಿಸಲು ತ್ವರೆಗೊಂಡು ಅವರು ತೆರಳಿದರು.
ಇತ್ತ ಬಾಲಕನು, “ನನ್ನನ್ನು ಬಿಡು, ಅಮ್ಮನ ಬಳಿಗೆ ಹೋಗುವೆನು”? ಎಂದನು. ದುಷ್ಯಂತನು “ಪುತ್ತ ನಾವಿಬ್ಬರೂ ನಿನ್ನ ತಾಯಬಳಿಗೆ ಹೋಗೋಣ” ಎಂದು ಹೇಳಿದುದನ್ನು ಕೇಳಿ, ಆ ಬಾಲಕನು, “ನನ್ನ ತಂದೆ ದುಷ್ಯಂತ ಮಹಾರಾಜನು. ನೀನಲ್ಲ” ಎನ್ನಲು ಅರಸನಿಗೆ ಮತ್ತಷ್ಟು ನಂಬಿಕೆಯಾಯಿತು.
ಆ ಹೊತ್ತಿಗೆ ಶಾಕುಂತಲೆ ತಾಪಸಿಯರಿಂದ ನಡೆದ ವೃತ್ತಾಂತವನ್ನು ತಿಳಿದು ತನ್ನ ಭಾಗಧೇಯವು ಪೂರ್ಣಗೊಂಡಿತೆಂದು ಭಾವಿಸಿ ಅಲ್ಲಿಗೆ ಬಂದಳು. ವಿರಹ ದುಃಖದಿಂದ ಕಂದಿಹೋಗಿದ್ದರೂ, ಯಾವ ಅಲಂಕಾರಗಳೂ ಇಲ್ಲದಿದ್ದರೂ, ಧೂಳಡಸಿದ ಬಟ್ಟೆಯುಟ್ಟು ಏಕವೇಣೀ ಧರೆಯಾಗಿದ್ದರೂ ಅವಳ ಸೌಂದರ್ಯವು ಮಾಸಿರಲಿಲ್ಲ. ಅವಳು ದುಷ್ಯಂತನನ್ನು ನೋಡಿದೊಡನೆ ತನ್ನಂತೆಯೇ ಚಿರತಪಸ್ವಿಯಾಗಿ ಶೋಷಿಸಿಹೋಗಿದ್ದ ಅವನನ್ನು ಮೊದಮೊದಲು ಗುರುತಿಸದೆ ಬೇರಾವನೋ ಆಗಿರಬಹುದೆಂದು ಶಂಕಿಸಿದಳು. ಪರಕೀಯನಾದ ಅವನು ತನ್ನ ಮಗನನ್ನೂ ಪವಿತ್ರವಾದ ಅವನ ರಕ್ಷಾಮುಣಿಯನ್ನೂ ಮುಟ್ಟಿ ಅಪವಿತ್ರಗೊಳಿಸಿದನೆಂದು ಎಣಿಸಿದಳು. ಅಷ್ಟರಲ್ಲಿ ಸರ್ವದಮನನು, “ಅಮ್ಮಾ ಇವನಾರೋ ನನ್ನನ್ನು ಪುತ್ರ ಪುತ್ರ ಎಂದು ಕರೆಯುತ್ತಿರುವನು” ಎಂದನು. ಆಗ ದುಷ್ಯಂತನು ಆಕೆಯಲ್ಲಿ ತಾನು ಮಾಡಿದ್ದ ಮಹಾಪರಾಧಕ್ಕಾಗಿ ಮನ ಮರುಗಿ, ನಮ್ರ ನಮ್ರನಾಗಿ, ಅವಳ ಪಾದಗಳಿಗೆ ಮಣಿದು, ಮನ್ನಿಸ ಬೇಕೆಂದು ಪ್ರಾರ್ಥಿಸಿದನು.
ಶಾಕುಂತಲೆಗೆ ಆಗ ತನ್ನ ಪತಿಯ ಗುರುತಾಯಿತು. ತನಗಾಗಿ ಪರಿತಪಿಸಿ ಕಂದಿಹೋಗಿದ್ದ ಆತನ ಆಕೃತಿಯನ್ನು ನೋಡಿ ಅವಳ ಮನಸ್ಸು ಕರಗಿತು. ಆನಂದ ಬಾಷ್ಪಗಳು ಉಕ್ಕಿಬರುತ್ತಿರಲು, “ ಆರ್ಯಪುತ್ರ ಅಪರಾಧವೆಲ್ಲವೂ ನನ್ನ ದುರದೃಷ್ಟದ್ದು. ಹಿಂದಿನ ಜನ್ಮದಲ್ಲಿ ನಾನು ಮಾಡಿದ ಪಾಪವು ನನ್ನನ್ನು ಈ ಶಿಕ್ಷೆಗೆ ಗುರಿಮಾಡಿತು. ಹಾಗಿಲ್ಲದಿದ್ದರೆ ನಿನ್ನಂತಹ ಉದಾರಿಯು ಆ ವಿಧವಾದ ಕಾಠಿನ್ಯವನ್ನು ತೋರಿಸಲಾಗುತ್ತಿದ್ದಿತೆ?’ ಎಂದಳು. ದುಷ್ಯಂತನು ಆ ಮಾತನ್ನು ಕೇಳಿ ಯಾವುದೋ ಒಂದು ಭ್ರಾಂತಿಯು ತನ್ನನ್ನು ಆವರಿಸಿ ಬುದ್ಧಿಯು ಮಾರಿಹೋಗಿದ್ದುದನ್ನೂ, ಆಮೇಲೆ ನಡೆದ ವೃತ್ತಾಂತವನ್ನೂ ಅವಳಿಗೆ ತಿಳಿಸಿ, ಎಲ್ಲಕ್ಕೂ ಕಾರಣವಾದ ತನ್ನ ಮುದ್ರೆಯುಂಗುರವನ್ನು ಅವಳಿಗೆ ಕೊಡಹೋದನು. ಒಮ್ಮೆ ಒಳ್ಳೆಯ ಸಮಯದಲ್ಲಿ ಮೋಸಮಾಡಿ ಇಷ್ಟು ದುಃಖಗಳಿಗೆ ಕಾರಣವಾದ ಆ ಉಂಗುರವನ್ನು ಆಕೆಯು ಸ್ವೀಕರಿಸಲಿಲ್ಲ. ಆದರೆ ಪತಿ ಸಮಾಗಮದಿಂದ ಅವಳಿಗೆ ಆನಂದವಾಯಿತು.
ಅಂತು ಬಹುಕಾಲ ವಿರಹ ದುಃಖವನ್ನನುಭವಿಸಿದ್ದ ಆ ಸತಿಪತಿಗಳು ಒಟ್ಟಿಗೆ ಸೇರಿದರು. ಆ ಹೊತ್ತಿಗೆ ಮಾತಲಿಯು ಅಲ್ಲಿಗೆ ಬಂದು ಸತಿಪುತ್ರರೊಡಗೂಡಿದ ಅರಸನನ್ನು ಅಭಿನಂದಿಸಿ, ಅವರನ್ನು ಪೂಜ್ಯ ಮಾರೀಚರ ಬಳಿಗೆ ಕರೆದುಕೊಂಡು ಹೋದನು. ಮಹರ್ಷಿಗಳು ದುರ್ವಾಸ ಶಾಪವೃತ್ತಾಂತವನ್ನು ತಿಳಿಸಿ, ಅದರಿಂದ ಅಗಲಿಕೆಯುಂಟಾಯಿತೆಂದು ಹೇಳಿ ಮುಂದೆ ಎಲ್ಲ ಬಗೆಯಲ್ಲೂ ಅವರ ಶ್ರೇಯಸ್ಸನ್ನು ಕೋರಿ ಅವರ ಮಗನಾದ ಸರ್ವದಮನನು ಮುಂದೆ ಅಖಂಡ ಭೂಮಂಡಲವನ್ನು ಭರಣ ಮಾಡುವ ಚಕ್ರವರ್ತಿಯಾಗಿ ಭರತನೆಂದು ಹೆಸರು ಪಡೆಯುವನೆಂಬುದಾಗಿ ಹರಸಿ ಹಸ್ತಿನಾವತಿಗೆ ಬೀಳ್ಕೊಟ್ಟರು. ದುಷ್ಯಂತನು ಪತ್ನೀಪುತ್ರರೊಡನೆ ರಾಜಧಾನಿಯನ್ನು ಸೇರಿ ಬಹುಕಾಲ ಧರ್ಮದಿಂದ ಭೂಮಂಡಲವನ್ನಾಳುತ್ತಿದ್ದನು.
ಪ್ರವರ್ತತಾಂ ಪ್ರಕೃತಿ ಹಿತಾಯ ಪಾರ್ಥಿವಃ
ಸರಸ್ವತೀ ಶ್ರುತಿ ಮಹಿತಾ ಮಹೀಯಸಾಂ |
ಮಮಾಪಿಚ ಕ್ಷಪಯತು ನೀಲಲೋಹಿತಃ
ಪುನರ್ಭವಂ ಪರಿಗತ ಶಕ್ತಿರಾತ್ಮಭೂಃ ॥
