ಅಭಿಜ್ಞಾನ ಶಾಕುಂತಲ – ಕಾಳಿದಾಸ

ಆ ಸಮಯಕ್ಕೆ ಸರಿಯಾಗಿ ರಾಜಧಾನಿಯಿಂದ ಕರಭಕನೆಂಬ ಓಲೆಕಾರನು ಬಂದು, ಅರಸನನ್ನು ಕಂಡು, ರಾಜಮಾತೆಯು ಉಪವಾಸ ವ್ರತವನ್ನು ಸಾಂಗಗೊಳಿಸಿ, ಪಾರಣೆ ಮಾಡಲು ಉದ್ದೇಶಿಸಿರುವುದರಿಂದ, ಪಟ್ಟಣಕ್ಕೆ ಬಿಜಮಾಡಬೇಕೆಂದು ಆಕೆ ಹೇಳಿಕಳುಹಿಸಿರುವುದಾಗಿ ಅರಿಕೆ ಮಾಡಿದನು. ಅರಸನಿಗೆ ಏನು ಮಾಡುವುದಕ್ಕೂ ತೋರಲಿಲ್ಲ. ಒಂದು ಕಡೆ ತಪಸ್ವಿಗಳ ಕಾರ್ಯ. ಒಂದು ಕಡೆ ಗುರುಜನರ ಆಜ್ಞೆ. ಯಾವುದನ್ನೂ ಮೀರುವಂತಿಲ್ಲ. ಕಡೆಗೆ ಅವನು ಮಾಢವ್ಯನಲ್ಲಿ ತನ್ನ ತಾಯಿಗಿರುವ ಪುತ್ರವಾತ್ಸಲ್ಯವನ್ನು ಪುರಸ್ಕರಿಸಿಕೊಂಡು ಉಪಾಯವಾಗಿ ಅವನನ್ನು ರಾಜಧಾನಿಗೆ ಕಳುಹಿಸಬಯಸಿ ಅದಕ್ಕೆ ಅವನನ್ನು ಒಪ್ಪಿಸಿದನು. ಮಾಢವ್ಯನಿಗೆ ಬೇಕಾಗಿದ್ದುದೂ ಅದೇ. ಪಟ್ಟಣಕ್ಕೆ ಹಿಂತಿರುಗುವೆನಲ್ಲ ಎಂದು ಅವನಿಗೆ ಸಂತೋಷವಾಯಿತು. ಅತಿ ಚಸಲನಾದ ಮಾಢವ್ಯನು ಶಾಕುಂತಲಾ ವೃತ್ತಾಂತವನ್ನು ಅಂತಃಪುರದಲ್ಲಿ ತಿಳಿಸಿಯಾನೆಂದು ದುಷ್ಯಂತನು ಹೆದರಿ, “ಮಿತ್ರ, ಶಾಕುಂತಲೆಯ ವಿಷಯವಾಗಿ ನಾನಾಡಿದ ವಿಷಯವನ್ನೆಲ್ಲ ನಿಜವೆಂದು ನೆಚ್ಚಬೇಡ. ಅವು ಕೇವಲ ಪರಿಹಾಸಕ್ಕಾಗಿ ಆಡಿದವು?” ಎಂದು ಹೇಳಿದನು. ಮಾಢವ್ಯನು “ಅಷ್ಟಲ್ಲದೆ ಮತ್ತೇನು”? ಎಂದುಕೊಂಡು ಪಟ್ಟಣಕ್ಕೆ ಹೊರಟುಹೋದನು.

ಮುನಿಗಳ ಪ್ರಾರ್ಥನೆಯನ್ನು ಮನ್ನಿಸಿ ದುಷ್ಯಂತನು ಕಣ್ವಾಶ್ರಮಕ್ಕೆ ಬಂದು ಧನುಷ್ಟಂಕಾರ ಮಾತ್ರದಿಂದಲೇ ವಿಘ್ನಗಳೆಲ್ಲವನ್ನೂ ದೂರಮಾಡಿದನು. ಆ ಪಾರ್ಥಿವನ ಮಹಾಸ್ರಭಾವದಿಂದ ಇಷ್ಟಿಯು ಸಾಂಗವಾಗಿ ನೆರವೇರಿತು. ಎಲ್ಲವೂ ಮುಗಿದಮೇಲೆ ದುಷ್ಯಂತನು ಶಾಕುಂತಲೆಯಲ್ಲಿ ಸೇರಿಹೋಗಿದ್ದ ತನ್ನ ಮನಸ್ಸನ್ನು ಹಿಂತಿರುಗಿಸಿಕೊಳ್ಳಲಾರದೆ, ಅವಳ ಅನುಪಮ ಸೌಂದರ್ಯವನ್ನೆ ಕಣ್ಣಿಗೆ ಕಟ್ಟಿದಂತೆ ಕಂಡು, ವಿರಹವೇದನೆಗೆ ಒಳಗಾದನು. ಶಾಕುಂತಲೆಯನ್ನು ಕಂಡೇ ಕಾಣಬೇಕೆಂಬ ಬಯಕೆ ಪ್ರಬಲವಾಗಿ, ಉಪಾಯಾಂತರವನ್ನು ಕಾಣದೆ, ಹೇಗಾದರೂ ಅವಳ ಸಂದರ್ಶನಭಾಗ್ಯವು ತನಗೆ ಲಭಿಸೀತೆಂದು ಅವಳು ಸಂಚರಿಸುತ್ತಿದ್ದ ಎಡೆಗಳಲ್ಲೆಲ್ಲ ತಿರುಗಾಡಲು ಮೊದಲುಮಾಡಿದನು. ಕಡೆಗೆ, ಚಿರಪರಿಚಿತವಾದ ಅವಳ ಹೆಜ್ಜೆ ಗುರುತು ಒಂದೆಡೆ ಕಾಣಿಸಲು, ಅದನ್ನೇ ಅನುಸರಿಸಿ ಮುಂದುವರಿದು ಒಂದು ಬಳ್ಳಿ ಮನೆಯ ಬಳಿಗೆ ಬಂದನು. ಅಲ್ಲಿನ ನೋಟ ಅವನ ಕಣ್ಣುಗಳಿಗೆ ಹಬ್ಬವಾಯಿತು. ವಿರಹ ಕಾತರೆಯಾದ ಶಾಕುಂತಲೆಯು ಹೂ ಹಾಸಿದ ಬಂಡೆಯಮೇಲೆ ಮಲಗಿ, ವಿರಹವೇದನೆಯನ್ನು ಸಹಿಸಲಾರದೆ ಬಿಸುಸುಯ್ದು ಬೇಗುದಿ ಪಡುತ್ತಿದ್ದಳು. ಅನಸೂಯೆ, ಪ್ರಿಯಂವದೆಯರು ತಾವರೆಯೆಲೆಯಿಂದ ಅವಳಿಗೆ ಗಾಳಿ ಹಾಕುತ್ತ ಅವಳನ್ನು ಸಂತಯಿಸುತ್ತಿದ್ದರು.

ಪ್ರಿಯಂವದೆ, ಅನಸೂಯೆಯರಿಬ್ಬರೂ ಆಶ್ರಮವಾಸಿಗಳಾಗಿದ್ದುದರಿಂದ ಮದನಾವಸ್ಥೆಯ ಕುರುಹುಗಳನ್ನು ತಾವು ಕೇಳಿದ್ದಂತೆಯೇ ಶಾಕುಂತಲೆಯಲ್ಲಿಯೂ ಕಂಡು, ಅದು ಹೌದೇ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲು “ಶಾಕುಂತಲೆ, ಹೀಗೇಕೆ ಸಂತಪಿಸಿ ಸವೆಯುತ್ತಿರುವೆ? ನಿನ್ನ ಈ ಮನೋನಿಕಾರಕ್ಕೆ ನಿಜವಾದ ಕಾರಣವನ್ನು ತಿಳಿದ ಹೊರತು ಏನು ಮಾಡುವುದಕ್ಕೂ ನಮಗೆ ತೋರದಾಗಿದೆ?’ ಎಂದು ಅವಳನ್ನು ಕೇಳಿದರು. ಶಾಕುಂತಲೆಯು ನಾಚಿ, ಏನೂ ಹೇಳದೆ ಕೆಲಕಾಲ ಸುಮ್ಮನಿದ್ದು ಗೆಳತಿಯರು ಬಹಳವಾಗಿ ಕೇಳಿಕೊಂಡಮೇಲೆ ಬಹು ಸಂಕೋಚದಿಂದ್ಕ ದೊರೆಯ ಸಂದರ್ಶನ ಮೊದಲುಗೊಂಡು ತನ್ನ ಮನಸ್ಸು ಅವನಲ್ಲಿ ನೆಟ್ಟು ಹೋಗಿರುವುದೆಂದು ಹೇಳಿಬಿಟ್ಟಳು; ಮರೆಯಲ್ಲಿ ನಿಂತಿದ್ದ ದುಷ್ಯಂತನಿಗೆ ಈ ಮಾತನ್ನು ಕೇಳಿ ಆನಂದವಾಯಿತು.

ಶಾಕುಂತಲೆಯು ಪುರುವಂಶಕ್ಕೆ ರತ್ನಪ್ರಾಯನಾದ ದುಷ್ಯಂತನಿಗೆ ತನ್ನ ಮನಸ್ಸನ್ನು ಸೂರೆಗೊಟ್ಟುದು ಗೆಳತಿಯರಿಬ್ಬರಿಗೂ ಆನಂದವನ್ನುಂಟುಮಾಡಿತು. ಹೀಗಾದುದಕ್ಕೆ ಅವರಿಗೆ ಯಾವ ಆಶ್ಚರ್ಯವೂ ಆಗಲಿಲ್ಲ. ಮಹಾನದಿಯು ಕಡಲನ್ನೇ ಸೇರುವುದೂ, ಮಾಧವೀಲತೆಯು ಇಮ್ಮಾನಿನ ಮರಕ್ಕೇ ಹಬ್ಬುವುದೂ ಲೋಕದಲ್ಲಿ ಸಹಜವೇ ಎಂದು ಅವರು ತೃಪ್ತಿಪಟ್ಟು ಕೊಂಡರು.

Leave a Reply

Your email address will not be published. Required fields are marked *