ಅಭಿಜ್ಞಾನ ಶಾಕುಂತಲ – ಕಾಳಿದಾಸ
ಶಾಕುಂತಲೆಗೆ ದುಷ್ಯಂತನಲ್ಲಿದ್ದ ಅಪರಿಮಿತವಾದ ಅನುರಾಗವು ಸಖಿಯರಿಗೆ ಸಂಪೂರ್ಣವಾಗಿ ಮನವರಿಕೆಯಾಯಿತಾದರೂ, ದುಷ್ಯಂತನಿಗೆ ಶಾಕುಂತಲೆಯಲ್ಲಿ ಅಷ್ಟೇ ಅನುರಾಗವು ಇರುವುದೇ ಇಲ್ಲವೇ ಎಂಬ ಸಂಶಯವು ಅವರಿಗೆ ಸ್ವಲ್ಪ ಚಿಂತೆಯನ್ನುಂಟುಮಾಡಿತು. ಅವರು ಬಹಳ ಯೋಚಿಸಿ ನೋಡಿ, ಆ ದೊರೆ ಶಾಕುಂತಲೆಯ ವಿಚಾರವನ್ನು ತಿಳಿಯಲು ತೋರಿದ ಆಸಕ್ತಿ, ಅಂದಿನಿಂದ ನಿದ್ದೆಗೆಟ್ಟವನಂತೆ ಸವೆದು ಹೋಗಿದ್ದ ಅವನ ಸಿತಿ ಇವೇ ಮೊದಲಾದ ಸಂಗತಿಗಳನ್ನು ಮನಸ್ಸಿಗೆ ತಂದುಕೊಂಡು, ದಿಟವಾಗಿ ಅವನೂ ಅವಳಲ್ಲಿ ಅಷ್ಟೇ ಅನುರಕ್ತನಾಗಿರಬೇಕೆಂದು ನಿಶ್ಚಯಿಸಿಕೊಂಡರು. ಹೀಗೆ ಇತ್ಯರ್ಥ ಮಾಡಿಕೊಂಡಮೇಲೆ ಚತುರೆಯಾರಾದ ಸಖಿಯರು ಆ ರಾಜರ್ಷಿಗೆ ಒಲವಿನೋಲೆಯೊಂದನ್ನು ಶಾಕುಂತಲೆಯಿಂದ ಬರೆಯಿಸಿದರು.
ದೂರದಿಂದಲೇ ಈ ವಿದ್ಯಮಾನಗಳನ್ನು ನೋಡುತ್ತಿದ್ದ ದುಷ್ಯಂತನು ತನ್ನ ಪ್ರೀತಿಗೆ ಸಾರ್ಥಕತೆಯುಂಟಾಯಿತೆಂಬ ಹಿಗ್ಗಿನಿಂದ ಮುಂದೆ ಬಂದು, ಶಾಕುಂತಲೆಗೆ ಕಾಣಿಸಿಕೊಂಡನು. ಗೆಳತಿಯರಿಬ್ಬರೂ ಶಾಕುಂತಲೆಯ ಮನಃಸ್ಥಿತಿಯನ್ನು ಅವನಿಗೆ ತಿಳಿಸಿ ನಿರತಿಶಯವಾದ ಪ್ರೇಮದಿಂದ ಅವಳನ್ನು ಕಾಯ್ದುಕೊಳ್ಳಬೇಕೆಂದು ಅವನನ್ನು ಪ್ರಾರ್ಥಿಸಿದರು. ದುಷ್ಯಂತನು ತನಗೆ ಲೋಕದಲ್ಲಿ ಅತ್ಯಂತ ಪ್ರಿಯತಮರಾದವರು ಸಮದ್ರರಶನೆಯಾದಉರ್ವಿ, ಪ್ರಿಯತಮೆಯಾದ ಶಾಕುಂತಲೆ ಇವರಿಬ್ಬರೇ ಎಂದು ಭರವಸೆಕೊಟ್ಟನು. ಧರ್ಮಾತ್ಮನಾದ ದೊರೆಯು ಅಷ್ಟು ಮಾತ್ರ ಹೇಳಿದುದರಿಂದಲೆ ಗೆಳತಿಯರಿಗೆ ಸಮಾಧಾನವಾಗಿ ಅವರು ಶಾಕುಂತಲೆಯನ್ನು ಅವನಿಗೊಪ್ಪಿಸಿ ತೆರಳಿದರು.
ಇಷ್ಟಾದರೂ ಮುಗ್ಧೆಯಾದ ಶಾಕುಂತಲೆಯು ದೊರೆಗೆ ತನ್ನನ್ನು ಅರ್ಪಿಸಿಕೊಳ್ಳಲು ಹಿಂದುಮುಂದು ನೋಡುತ್ತಿದ್ದಳು. ಪರವಶೆಯಾದ ತಾನು ಹಿರಿಯರೊಬರನ್ನೂ ಕೇಳದೆ ಹೇಗೆ ತಾನೆ ದೊರೆಯನ್ನು ಸೇರುವುದು ಎಂದು ಅವಳ ಮನಸ್ಸು ಅಳುಕಿತು. ಆದರೆ ದುಷ್ಯಂತನು, ಹೆಲವು ಮಂದಿ ರಾಜಪುತ್ರಿಯರು ಗಾಂಧರ್ವರೀತಿಯಲ್ಲಿ ಪತಿಗಳನ್ನು ವರಿಸಿದ ನಿದರ್ಶನಗಳನ್ನು ಕೊಟ್ಟು ಒಡಂಬಡಿಸಿ, ಅವಳನ್ನು ವರಿಸಿದನು. ಆಶ್ರಮದಲ್ಲಿ ಕೆಲವು ದಿನಗಳು ಅವರ ದಾಂಪತ್ಯಜೀವನವು ಸವಿಯಾಗಿ ಕಳೆಯಿತು. ಆಮೇಲೆ ದುಷ್ಯಂತನು ರಾಜಧಾನಿಗೆ ಹಿಂತಿರುಗಬೇಕಾಯಿತು. ಅವನು ತನ್ನ ಮುದ್ರೆಯುಂಗುರವನ್ನು ಶಾಕುಂತಲೆಗೆ ಕೊಟ್ಟು, ತನ್ನ ಹೆಸರಿನ ಅಕ್ಷರಗಳನ್ನು ದಿನಕ್ಕೆ ಒಂದರಂತೆ ಓದಿ ಮುಗಿಸುವಷ್ಟರೊಳಗಾಗಿ ರಾಜಧಾನಿಗೆ ಅವಳನ್ನು ಕರೆಯಿಸಿಕೊಳ್ಳುವುದಾಗಿ ಮಾತುಕೊಟ್ಟು, ಅವಳನ್ನು ಸಂತಯಿಸಿ ಬೀಳ್ಳೊಂಡನು.
ದುಷ್ಯಂತನು ರಾಜಧಾನಿಗೆ ಹೊರಟುಹೋದುದು ಮೊದಲುಗೊಂಡು ಮುಗ್ದೆಯಾದ ಶಾಕುಂಶಲೆಯು ಅವನನ್ನೇ ಸ್ಮರಿಸುತ್ತ, ಎಲೆಮನೆಯಲ್ಲಿ ಅತ್ತಿತ್ತ ಕದಲದೆ ಪ್ರತಿಮೆಯಂತೆ ಒಂಟಿಯಾಗಿ ಕುಳಿತು ಸವಿಗನಸುಗಳನ್ನು ಕಾಣುತ್ತ ಕಾಲ ಕಳೆಯುತ್ತಿದ್ದಳು. ಅವಳ ಗೆಳತಿಯರಿಬ್ಬರಿಗೂ ಒಂದೆರಡು ಕಾರಣಗಳಿಂದ ಮನಸ್ಸು ನೆಮ್ಮದಿಯಾಗಿರಲಿಲ್ಲ. ದುಷ್ಯಂತನು ಅಂತಃಪುರವನ್ನು ಸೇರಿ, ಅಲ್ಲಿಯ ಆಕರ್ಷಣೆಗಳಿಗೆ ಒಳಗಾಗಿ ತಮ್ಮ ಗೆಳತಿಯನ್ನು ಮರೆತೇಬಿಟ್ಟನೇನೋ ಎಂಬ ಕಳವಳವು ಅವರನ್ನು ಇರಿಯುತ್ತಿದ್ದಿತು. ಶಾಕುಂತಲೆಗೂ ದುಷ್ಯಂತನಿಗೂ ಆದ ಗಾಂಧರ್ವ ವಿವಾಹವನ್ನು ಪೂಜ್ಯರಾದ ಕಣ್ವರು ಒಪ್ಪುವರೋ ಇಲ್ಲವೋ ಎಂಬುದು ಅವರ ಮನಸ್ಸಿನಲ್ಲಿ ಮೂಡಿದ್ದ ಕಳವಳಕ್ಕೆ ಇನ್ನೊಂದು ಕಾರಣ. ಗಂಭೀರಾಕಾರನಾಗಿ, ಅದಕ್ಕೆ ತಕ್ಕಂತೆ ಗುಣಾಢ್ಯನಾಗಿಯೂ ಧರ್ಮಿಷ್ಠ ನಾಗಿಯೂ ಇರುವ ದೊರೆಯು ಹಾಗೆಂದಿಗೂ ಮಾಡನೆಂದು ಅವರು ಸ್ವಲಮಟ್ಟಗೆ ಧೈರ್ಯ ತಂದುಕೊಂಡರು. ಅನುರೂಪನಾದ ವರನಿಗೆ ಶಾಕುಂತಲೆಯನ್ನು ಕೊಟ್ಟು ಮದುವೆಮಾಡಬೇಕೆಂದು ಪೂಜ್ಯ ಕಣ್ವರು ಸಂಕಲ್ಪಿಸಿದ್ದುದರಿಂದ ಅವರು ಈ ವಿವಾಹಕ್ಕೆ ಅಸಮ್ಮತಿಯನ್ನು ಸೂಚಿಸುವುದಿಲ್ಲವೆಂದು ಆ ಧೈರ್ಯವು ಬಲಗೊಂಡಿತು.
ಗೆಳತಿಯರಿಬ್ಬರೂ ಹೀಗೆ ಯೋಚಿಸುತ್ತ ಪೂಜೆಗೆ ಹೂಬಿಡಿಸಲು ತೋಟಕ್ಕೆ ಹೋದರು. ತಾಳ್ಮೈಗೆಟ್ಟು ಮುನಿಸಿನಿಂದ ನುಡಿದ ಮನುಷ್ಯ ವಾಣಿಯೊಂದು ಅವರಿಗೆ ಹೊರಗಿನಿಂದ ಕೇಳಿಸಿತು. ಅದು ದೂರ್ವಾಸ ಮಹರ್ಷಿಗಳ ಧ್ವನಿಯೆಂದು ಅರಿವಾಯಿತು. ದುರ್ವಾಸರು ಆಶ್ರಮಕ್ಕೆ ಅತಿಥಿಗಳಾಗಿ ಬಂದು ಶಾಕುಂತಲೆಯು ಆಶ್ರಮದಲ್ಲಿದ್ದೂ ತಮ್ಮನ್ನು ಸತ್ವರಿಸಲಿಲ್ಲವೆಂದು ರೇಗಿ, “ನೀನು ಯಾರಿಗಾಗಿ ಚಿಂತಿಸುತ್ತ ಮೈಮರೆತಿರುವೆಯೋ ಆ ಪುರುಷನು ನಿನ್ನನ್ನು ಮರೆತುಹೋಗಲಿ” ಎಂದು ಶಪಿಸಿ ಹೊರಟುಹೋಗುವುದರಲ್ಲಿದ್ದರು. ಅಷ್ಟರಲ್ಲಿ ಪ್ರಿಯಂವದೆಯು ಅವರ ಬಳಿಗೆ ಓಡಿ, ಕಾಲಿಗೆರಗಿ, ಶಾಕುಂತಲೆಯು ಆವರೆಗೂ ಯಾವ ಅಪರಾಧವನ್ನೂ ಮಾಡದವಳೆಂದೂ, ಮಗಳೆಂದು ಭಾವಿಸಿ ಅವಳ ಅಂದಿನ ಒಂದು ತಪ್ಪನ್ನು ಮನ್ನಿಸಿ ಅನುಗ್ರಹಿಸಬೇಕೆಂದೂ ಬೇಡಿದಳು. “ಕೊಟ್ಟ ಶಾಪವನ್ನು ಹಿಂತೆಗೆದುಕೊಳ್ಳಲಾಗದು. ಗುರುತಿನ ವಸ್ತುವನ್ನು ದುಷ್ಯಂತ ಕಂಡೊಡನೆ ಶಾಪವು ಕಳೆಯುವುದು?’ ಎಂದು ಹೇಳಿ ದುರ್ವಾಸರು ಮರಳಿದರು.