ಅಭಿಜ್ಞಾನ ಶಾಕುಂತಲ – ಕಾಳಿದಾಸ
ಗೆಳತಿಯರಿಗೆ ಸಮಾಧಾನವಾಯಿತು. ದುಷ್ಯಂತನು ರಾಜಧಾನಿಗೆ ಹಿಂತಿರುಗುವಂದು ಒಲವಿನ ಕುರುಹಾಗಿ ಶಾಕುಂತಲೆಗೆ ತನ್ನ ನಾಮಾಕ್ಷರಗಳು ಕೆತ್ತಿದ್ದ ಉಂಗುರವನ್ನು ಕೊಟ್ಟಿದ್ದನು. ಗುರುತಿಗಾಗಿ ಅದನ್ನು ತೋರಿದರೆ ಸಾಕೆಂದು ಅವರು ಎಣಿಸಿದರು. ಋಷಿ ಶಾಪದ ಹೆದರಿಕೆ ಅವರನ್ನು ಅಷ್ಟಾಗಿ ಯೋಚನೆಗೀಡುಮಾಡಲಿಲ್ಲ. ಈ ಸಂಗತಿಯನ್ನು ಅವರು ತಮ್ಮ ಗೆಳತಿಗೆ ತಿಳಿಸುವ ಧ್ರೈರ್ಯಮಾಡಲಿಬ್ಲ. ಕುಸುಮ ಕೋಮಲೆಯಾದ ಅವಳು ಅದನ್ನು ಕೇಳಿದರೆ ಸಂಕಟಪಡುವಳೆಂದು ಅವರಿಗೆ ಗೊತ್ತು ಎಳಸಾದ ಮಾಧವೀಲತೆಗೆ ಬಿಸಿನೀರೆರೆವುದುಂಟೆ?
ದಿನಗಳು, ವಾರಗಳು, ತಿಂಗಳುಗಳು ಉರುಳಿಹೋದುವು. ದುಷ್ಯಂತನು ತನ್ನ ಮಡದಿಯನ್ನು ಕರೆಯಿಸಿಕೊಳ್ಳಲಿಲ್ಲ. ದುರ್ವಾಸರ ಶಾಪವು ಸಂಪೂರ್ಣ ಫಲಕಾರಿಯಾಯಿತು. ದೊರೆಯು ಅವಳನ್ನು ದಿಟವಾಗಿಯೂ ಮರೆತೇಹೋದನು. ಅನಸೂಯೆ ಪ್ರಿಯಂವದೆಯರಿಗೆ ದಿಕ್ಕುಕಾಣದೆ ಹೋಯಿತು. ಯಾವ ಕೆಲಸಮಾಡಲೂ ಅವರಿಗೆ ಕೈಕಾಲೇ ಆಡದಂತಾಯಿತು. ಇದರಮೇಲೆ ಶಾಕುಂತಲೆಯು ಕೆಲವು ದಿನಗಳಲ್ಲಿ ತಾಯಿಯಾಗುವ ಸಂಭವ ಬೇರೆ. ಕಣ್ವರು ಆಗತಾನೆ ಸೋಮತೀರ್ಥದಿಂದ ಆಶ್ರಮಕ್ಕೆ ಹಿಂತಿರುಗಿ ಬಂದಿದ್ದಾರೆ. ಅವರಿಗೆ ಇವೆಲ್ಲ ತಿಳಿದರೆ ಅವಳ ಗೆತಿಯೇನಾಗುವುದೊ? ಅಂತೂ, ಈ ಬಗೆಯ ಸಂಶಯಗಳಿಂದ ಗೆಳತಿಯರಿಬ್ಬರ ನಿರ್ಮಲ ಹೃದಯಗಳೂ ಕಲಕಿಹೋದುವು.
ಆದರೆ ಈ ಸಂಶಯಗಳಾವುವೂ ಬಹಳ ಹೊತ್ತು ಅವರನ್ನು ಕಾಡಲಿಲ್ಲ. ಕುಲಪತಿಗಳಾದ ಕಣ್ವರು ಅಗ್ನ್ಯಾಗಾರದಲ್ಲಿ “ಶಾಕುಂತಲೆಯು ದುಷ್ಯಂತನನ್ನು ವರಿಸಿ ಚಕ್ರೇಶ್ವರನಾಗುವ ಪುತ್ರರತ್ನವನ್ನು ಗರ್ಭದಲ್ಲಿ ಧರಿಸಿರುವಳು” ಎಂಬ ಅಶರೀರವಾಕ್ಕನ್ನು ಕೇಳಿದರು. ಅವರ ಸಂತೋಷಕ್ಕೆ ಪಾರವಿಲ್ಲವಾಯಿತು. ನಾಚಿ, ತಲೆತಗ್ಗಿಸಿ ನಿಂತಿರುವ ಶಾಕುಂತಲೆಯನ್ನು ಅಪ್ಪಿಕೊಂಡು, ಅನುರೂಪನಾದ ವರನನ್ನು ವರಿಸಿದ್ದಕ್ಕಾಗಿ ಅವರು ಅವಳನ್ನು ಅಭಿನಂದಿಸಿದರು. ಸಚ್ಛಿಷ್ಯನಿಗೆ ವಿದ್ಯಾದಾನ ಮಾಡಿದಷ್ಟು ತೃಪ್ತಿ, ಆನಂದ ಅವರಿಗುಂಟಾದುವು. ಪರಿಣೀತೆಯಾಗಿರುವ ಅವಳನ್ನು ಅಂದೇ ಪತಿಗೃಹಕ್ಕೆ ಕಳುಹಿಸುವ ಏರ್ಪಾಟನ್ನು ಮಾಡಬೇಕೆಂದು ಅವರು ಸಂಕಲ್ಪಿಸಿದರು. ಗೆಳತಿಯರು ಶಾಕುಂತಲೆಯ ಅಗಲಿಕೆಯನ್ನು ಸಹಿಸಲಾರದೆ ಸಂತಪಿಸಿದರೂ ಪತಿವಿರಹತಪ್ತೆಯಾಗಿದ್ದ ಅವಳಿಗೆ ಸುಖವನ್ನೇ ಬಯಸಿ, ಅವಳಿಗೆ ಮಂಗಳ ಸ್ನಾನಮಾಡಿಸಿ, ವನಸುಮಗಳನ್ನು ಮುಡಿಸಿ, ಪ್ರಯಾಣಕ್ಕೆ ಸಿದ್ಧಗೊಳಿಸಿದರು. ಎಲ್ಲ ಅಶುಭಗಳನ್ನೂ ದೂರಮಾಡುವ ಕೇಸರ ಕುಸುಮಗಳನ್ನು ಕಷ್ಟಪಟ್ಟು, ಬಿಡಿಸಿ ತಂದು, ಮಾಲೆ ಕಟ್ಟಿ ಅವಳ ತುರುಬನ್ನು ಶೃಂಗರಿಸಿದರು. ಗೆಳತಿಯರು ಮಾಡುವ ಅಲಂಕಾರ ಮುಂದೆ ಅಪರೂಪವಾಗುವುದೆಂದೂ, ಅವರನ್ನು ಅಗಲಿಹೋಗಬೇಕೆಂದೂ ಶಾಕುಂತಲೆಗೆ ದುಃಖವುಕ್ಕಿ ಬಂದಿತು. ಸಂತೋಷ ಸಮಯದಲ್ಲಿ ಕಣ್ಣೀರಿಡುವುದು ಸರಿಯಲ್ಲವೆಂದು ಗೆಳತಿಯರು ಅವಳನ್ನು ಬಗೆಬಗೆಯಾಗಿ ಸಂತಯಿಸಿದರು. ಅಷ್ಟರಲ್ಲಿ ಕಣ್ವರ ಪ್ರಭಾವದಿಂದ ವನದೇವತೆಗಳಿತ್ತ ಆಭರಣಗಳಿಂದ ಅಲಂಕರಿಸಿಕೊಳ್ಳಬೇಕೆಂದು ಶಿಷ್ಯರು ಅವನ್ನು ತಂದು ಶಾಕುಂತಲೆಗೆ ಅರ್ಪಿಸಿದರು. ಗೆಳತಿಯರು ಅವನ್ನು ಶಾಕುಂತಲೆಗೆ ತೊಡಿಸಿ, ಪತಿಗೃಹದಲ್ಲಿ “ರಾಜಲಕ್ಷ್ಮಿಯನ್ನು ಸ್ಥಿರವಾಗಿ ಅನುಭವಿಸುವೆ” ಎಂಬುದಕ್ಕೆ ಇದು ನಿದರ್ಶನ ಎಂದು ತಮ್ಮ ಸಂತೋಷವನ್ನು ಸೂಚಿಸಿದರು. ಆಶ್ರಮದ ತಾಸಸಿಯರೆಲ್ಲರೂ ನಿಷ್ಕಲ್ಮಶ ಹೃದಯದಿಂದ ಅವಳನ್ನು ಹರಸಿದರು.
ಕುಲಪತಿಗಳಾದ ಕಣ್ವರು ಸ್ನಾನಾಹ್ನಿಕಗಳನ್ನು ಮುಗಿಸಿ, ಆಶ್ರಮಕ್ಕೆ ಬಂದು,”ಶಾಕುಂತಲೆಯು ಇಂದು ಪತಿಗೃಹಕ್ಕೆಹೊರಟುಹೋಗುವಳು, ಇದರಿಂದ ನನ್ನ ಮನಸ್ಸು ಚಿಂತೆಗೆ ಈಡಾಗಿದೆ. ಯಾವಾಗಲೂ ಅಡವಿಯಲ್ಲಿ ತಪಸ್ಸುಮಾಡಿಕೊಂಡು, ಯಾವ ಸಹವಾಸವನ್ನೂ ದೂರ ಮಾಡಿರುವ ನನ್ನಂತಹವನಿಗೆ ಸಾಕಿ ಬೆಳಸಿದ ಒಲವು ಇಂತಹ ದುಃಖವನ್ನು ಉಂಟುಮಾಡಿದರೆ, ಹೊತ್ತು ಹೆತ್ತು ಸಾಕಿ ಸಲಹಿದ ತಾಯಿತಂದೆಗಳಿಗೆ ಮಗಳ ಅಗಲಿಕೆ ಇನ್ನೆಷ್ಟು ದುಃಖವನ್ನುಂಟುಮಾಡುವುದೊ” ಎಂದು ಯೋಚಿಸುತ್ತಿದ್ದರು. ಅದೇ ಸಮಯದಲ್ಲಿ ಸರ್ವಾಲಂಕೃತೆಯಾಗಿದ್ದ ಶಾಕುಂತಲೆಯು ಅವರ ಬಳಿಗೈದಿ ನಮಸ್ಕರಿಸಿದಳು. ಕಣ್ವರು “ಮಗಳೇ, ಯಯಾತಿಗೆ ಶರ್ಮಿಷ್ಠೆ ಬಹುಮತಿಯಾಗಿ ಚಕ್ರವರ್ತಿಯಾದ ಪುರುವನ್ನು ಪುತ್ರನನ್ನಾಗಿ ಪಡೆದಂತೆ, ನೀನು ನಿನ್ನ ಭರ್ತನಿಗೆ ಅಚ್ಚುಮೆಚ್ಚಾಗಿದ್ದು ಚಕ್ರವರ್ತಿಯಾಗುವ ಮಗನನ್ನು ಪಡೆ” ಎಂದು ಆಶೀರ್ವದಿಸಿದರು. ಅವಳಿಗೆ ಅದು ಆಶೀರ್ವಾದಕ್ಕಿಂತಲೂ ವರವೇ ಆಗಿ ಪರಿಣಮಿಸಿತೆಂದು ಗೌತಮಿ ಮೊದಲಾಗಿ ಎಲ್ಲರೂ ಆನಂದಪಟ್ಟರು.
ಶಾಕುಂತಲೆಯೊಡನೆ ಅಗ್ನಿವೇದಿಗೆ ಪ್ರದಕ್ಷಿಣೆ ಮಾಡಿದ ತರುವಾಯ ಕುಲಪತಿಗಳು ಆಶ್ರಮದಿಂದ ಹೊರಬಂದು ಶಾಕುಂತಲೆಯ ಹೊಯ್ನೀರಿನಿಂದ ಬೆಳೆದ ತರುಲತೆಗಳನ್ನೂ ಆಶ್ರಮ ವೃಕ್ಷಗಳನ್ನೂ ಕಂಡು, ಅವುಗಳನ್ನು ಶುರಿತು “ಯಾರು ನಿಮಗೆ ನೀರೆರೆವವರೆಗೂ ಜಲಪಾನ ಮಾಡುತ್ತಿರಲಿಲ್ಲವೊ, ಅಲಂಕಾರಪ್ರಿಯೆಯಾದರೂ ನಿಮ್ಮಲ್ಲಿನ ನೇಹದಿಂದ ಚಿಗುರು ಬಿಡಿಸುತ್ತಿರಲಿಲ್ಲವೊ, ನಿಮ್ಮ ಕುಸುಮಪ್ರಸೂತಿಸಮಯವೇ ಯಾರಿಗೆ ಉತ್ಸವನಾಗುತ್ತಿದ್ದಿತೋ ಆ ನಿಮ್ಮ ಶಾಕುಂತಲೆ ಈಗ ಪತಿ ಗೃಹಕ್ಕೆ ಹೋಗುತ್ತಿರುವಳು. ನೀವೆಲ್ಲರೂ ಬೀಳ್ಕೊಡಿರಿ” ಎಂದು ಹೇಳಿ, ಅದಕ್ಕೆ ಪಡಿನುಡಿಯೋ ಎಂಬಂತೆ ಕೋಕಿಲ ಧ್ವನಿ ಕೇಳಬರಲು, ಶುಭ ಸೂಚನೆಯಾಯಿತೆಂದು ಸಂತೋಷಸಡುತ್ತಿದ್ದರು.
