ಅಭಿಜ್ಞಾನ ಶಾಕುಂತಲ – ಕಾಳಿದಾಸ
“ಪ್ರಯಾಣ ಹೊರಬರುವ ಮಾರ್ಗದಲ್ಲಿ ಕಮಲಸರಸ್ಸುಗಳು ಕಣ್ಗಿಂಪಾಗಿ, ಛಾಯಾದ್ರುಮಗಳು ಬಿಸಿಲು ತಾಕದಂತೆ ಶಾಖೆಗಳನ್ನು ಹರಡಿ, ಕಮಲಧೂಳಿಯುದುರಿ ಅಡಿಯಿಡಲು ನೆಲವು ಮೆತ್ತಗಿದ್ದು, ಮಲಯಮಾರುತ ಬೀಸಿ ಮಂಗಳಕರವಾಗಿರುತ್ತದೆ” ಎಂದು ಬಾನ್‌ದನಿ ಕೇಳಬರಲು, ಬಳಿಯಲ್ಲಿದ್ದ ಗೌತಮಿಯು, “ಮಗು, ತಪೋವನ ದೇವತೆಗಳು ನಿನ್ನ ಮೇಲಣ ಪ್ರೇಮದಿಂದ, ಪ್ರಯಾಣಕ್ಕೆ ಅಪ್ಪಣೆಕೊಟ್ಟಿ ರುವರು, ಅವರಿಗೆ ನಮಸ್ಕರಿಸು” ಎಂದಳು. ಶಾಕುಂತಲೆಯು ಭಕ್ತಿಯಿಂದ ನಮಸ್ಕರಿಸಿ ನಿಂತಳು.
ಪತಿದರ್ಶನದಲ್ಲಿ ಉತ್ಸುಕಳಾಗಿದ್ದರೂ ಆಶ್ರಮಪದವನ್ನು ತೊರೆದು ಹೋಗುವುದು ಶಾಕುಂತಲೆಗೆ ಬಹು ಕಷ್ಟವಾಯಿತು. ಅವಳ ಮನಸ್ಸು ತಪಿಸಿಹೋಗಿದ್ದಿತು. ಅಂತೆಯೇ ತಪೋನವನಕ್ಕೆ ತಪೋವನವೇ ಅವಳೊಡನೆ ಮರುಗುತ್ತಿದ್ದಿತು. ಆಶ್ರಮದ ಜಿಂಕೆಗಳು ಮೇವುಳಿದು, ನವಿಲುಗಳು ಕುಣಿತವುಳಿದು ಚಲಿಸದೆ ನೆಟ್ಟ ಕಂಗಳಿಂದ ಅವಳನ್ನೇ ನೋಡುತ್ತ ನಿಂತುವು. ವೃಕ್ಷಗಳು ಕಂಬನಿಗರೆವಂತೆ ಹಣ್ಣೆಲೆಗಳನ್ನು ಉದುರಿಸಿದುವು. ಶಾಕುಂತಲೆಯು ಮನಸ್ಸಿಲ್ಲದ ಮನಸ್ಸಿನಿಂದ ಹೆಜ್ಜೆಯಿಡುತ್ತ, ವನಜ್ಯೋತ್ಸ್ನೆಯೆಂದು ಹೆಸರಿಟ್ಟು ಬೆಳಸಿದ್ದ ತನ್ನ ಮುದ್ದು ಮಲ್ಲಿಗೆಯ ಬಳಿಸಾರಿ, “ವನಜ್ಯೋತ್ಸ್ನೆ, ಇಮ್ಮಾವನ್ನು ನೆಮ್ಮಿರುವ ನಿನ್ನ ಬಳ್ಳಿತೋಳುಗಳಿಂದ ನನ್ನನ್ನೊಮ್ಮೆ ಅಪ್ಪಿಕೊ. ಇದುಮೊದಲು ನಿನ್ನನ್ನು ಬಿಟ್ಟು ದೂರ ದೇಶಕ್ಕೆ ಹೋಗುತ್ತಿರುವ ನನ್ನನ್ನು ಬೀಳ್ಕೂಡು”? ಎಂದು ಹೇಳಿ ಕಂಬನಿದುಂಬಿ ದಳು. ತಂದೆ ಕಣ್ವರು, “ವತ್ಸೆ, ದುಃಖಿಸಬೇಡ. ಈ ವನಜ್ಯೋತ್ಸ್ನೆಯನ್ನೂ ನಿನ್ನನ್ನೂ ಸಮಸಮವಾಗಿ ಪ್ರೀತಿಸುತ್ತಿದ್ದೆ. ಮೊದಲೆ ನಾನು ಸಂಕಲ್ಪಿಸಿದ್ದಂತೆ ನೀನು ಅನುರೂಪನಾದ ಭರ್ತನನ್ನು ಸೇರಿದೆ. ಇದು ಇಮ್ಮಾವನ್ನು ನೆಮ್ಮಿತು. ನನಗಿನ್ನು ಚಿಂತೆಯಿಲ್ಲ. ಪ್ರಯಾಣಕ್ಕೆ ಸಿದ್ಧಳಾಗು” ಎಂದರು. ಅದನ್ನು ಕೇಳುತ್ತಲೆ ಶಾಕುಂತಲೆಯು ತನ್ನ ಗೆಳತಿಯರಿಬ್ಬರನ್ನೂ ನೋಡಿ, “ಇದೋ ಈ ವನಜ್ಯೋತ್ಸ್ನೆಯನ್ನು ನಿಮ್ಮಿಬ್ಬರಿಗೂ ಒಪ್ಪಿಸಿರುವೆನು” ಎಂದಳು. ಅವರು, “ಗೆಳತಿ, ನಮ್ಮನ್ನು ಯಾರಿಗೆ ಒಪ್ಪಿಸಿದೆ?” ಎಂದು ಹೇಳಿ, ಉಕ್ಕಿಬರುವ ದುಃಖದಿಂದ ಕಂಬನಿಗರೆದರು. ಆಗ ಕಣ್ವರು, “ಅನಸೂಯೆ, ಅಳಬೇಡ. ಪ್ರಿಯಂವದೆ, ಪ್ರಯಾಣ ಸಮಯದಲ್ಲಿ ನಿಮ್ಮ ಗೆಳತಿಗೆ ಧೈರ್ಯ ಹೇಳಬೇಕಾದ ನೀವೇ ಅಳಬಹುದೆ?” ಎಂದು ಸಂತಯಿಸಿದರು.
ಎಲ್ಲರೂ ಸ್ವಲ್ಪದೂರ ಬಂದಮೇಲೆ ಶಾಕುಂತಲೆಯು ತಂದೆ ಕಣ್ವರನ್ನು ಕುರಿತು, “ಅಪ್ಪ! ತೆನೆಯಾದ ಈ ಹೆಣ್ಣು ಜಿಂಕೆಯು ಮರಿಹಾಕಿದೊಡನೆ ನನಗೆ ಸುದ್ದಿ ಕಳುಹಿಸಬೇಕು” ಎಂದಳು. ಅವರು ಒಪ್ಪಿ ಅವಳನ್ನು ಸಂತಯಿಸಿ ಮುಂದುವರಿಯುತ್ತಿರಲು, ಅವಳ ಸೆರಗನ್ನು ಯಾವುದೋ ಪ್ರಾಣಿ ಸೆಳೆದಂತಾಯಿತು. ಏನೆಂದು ತಿರುಗಿನೋಡಲು, ಪುತ್ರ ವಾತ್ಸಲ್ಯಕ್ಕಿಂತಲೂ ಮಿಗಿಲಾಗಿ ಅವಳು ಸಾಕಿ ಬೆಳೆಯಿಸಿದ್ದ ಮುದ್ದು ಜಿಂಕೆ. ತಾಯನ್ನಗಲಿದ ಅದಕ್ಕೆ ತಿನಿಸುಕೊಟ್ಟು, ಅದರ ಗಾಯಗಳಲ್ಲವೆನ್ನೂ ಮಾಯಿಸಿ, ತಾಯಿಗಿಂತಲೂ ಹೆಚ್ಚು ಮಮತೆಯಿಂದ ಅವಳದನ್ನು ಸಾಕಿದ್ದಳು. ಅದನ್ನು ಅಗಲಿಹೋಗುವುದು ಅವಳಿಗೆ ಬಹಳ ಕಷ್ಟವಾಯಿತು. ದುಃಖವಿಮ್ಮಡಿಸಿತು. ಅಳುತಳುತ್ತ “ಮಗೂ, ನಿನ್ನ ಸಹವಾಸವನ್ನೇ ತೊರೆದುಹೋಗುತ್ತಿರುವ ನನ್ನನ್ನೇಕೆ ಅನುಸರಿಸಿ ಬರುತ್ತಿರುವೆ? ಎಳಮೆಯಲ್ಲಿ ತಾಯನ್ನೇ ಅಗಲಿ ಬದುಕಿದೆಯಂತೆ. ಈಗ ನನ್ನನ್ನಗಲಿ ಬದುಕಲಾರೆಯ? ತಂದೆಯವರೇ ನಿನ್ನ ಸಂರಕ್ಷಣೆಯನ್ನು ನೋಡಿಕೊಳ್ಳುವರು, ಹೋಗು, ಅವರಿಗೆ ಮಗನಾಗಿ ಬಾಳು” ಎಂದಳು. ಆಗ ಕಣ್ವರು ಅವಳ ಮನಸ್ಸಿನ ಸ್ಥಿತಿಯನ್ನು ನೋಡಿ, “ವತ್ಸೆ, ಕಂಬನಿಗರೆಯದಿರು, ದಾರಿ ನೋಡಿ ನಡೆ. ಹಳ್ಳ ತಿಟ್ಟುಗಳಿವೆ” ಎಂದು ಅವಳನ್ನು ಸಮಾಧಾನಸಡಿಸಿ ನಡೆಯಿಸಿಕೊಂಡು ಹೊಳೆಯವರೆಗೆ ಬಂದರು.
ಪ್ರಯಾಣಕ್ಕೆ ಬೀಳ್ಳೊಡುವವರು ಮೊದಲ ಹೊಳೆವರೆಗೆ ಮಾತ್ರ ಹಿಂಬಾಲಿಸಬೇಕೆಂದು ಶಾಸ್ತ್ರ. ಕುಲಪತಿಗಳು ಶಾಕುಂತಲೆಯನ್ನು ಅಲ್ಲಿಂದಲೇ ಕಳುಹಿಸಿಕೊಡಲು ಮನಸ್ಸುಮಾಡಿ ಅಲ್ಲಿಯೇ ಇದ್ದ ಆಲದ ಮರದಡಿಯಲ್ಲಿ ನಿಂತು, ದುಷ್ಯಂತ ಮಹಾರಾಜನಿಗೆ ತಮ್ಮ ಸಂದೇಶವನ್ನು ಶಾಙರ್ಗರವನೊಡನೆ ಹೇಳಿಕಳುಹಿಸಲು ನಿಶ್ಚಯಿಸಿದರು. ಅವರು “ವತ್ಸ, ಶಾಕುಂತಲೆಯನ್ನು ದುಷ್ಯಂತನಿಗೆ ಒಪ್ಪಿಸಿ ಆತನಿಗೆ ನನ್ನ ಈ ಮಾತುಗಳನ್ನು ತಿಳಿಸು: ತಪಸ್ವಿಗಳಾದ ನಮ್ಮನ್ನೂ ನಿನ್ನ ಮಹಾವಂಶವನ್ನೂ ಶಾಕುಂತಲೆಗೆ ನಿನ್ನಲ್ಲಿರುವ ಗಾಢವಾದ ಪ್ರೇಮವನ್ನೂ ಮನ್ನಿಸಿ, ಈಕೆಯನ್ನು ಬಹುಮಾನ ಪುರಸ್ಸರವಾಗಿ ಕಾಣಬೇಕು. ವಧೂಬಂಧುಗಳು ಹೇಳಬೇಕಾದುದು ಇಷ್ಟು ಮಾತ್ರವೆ. ಉಳಿದುದೆಲ್ಲ ಭಾಗ್ಯಾಯತ್ತ. ಅದಕ್ಕೆ ನಾವು ಹೊಣೆಯಲ್ಲ” ಎಂದರು.