ಅಭಿಜ್ಞಾನ ಶಾಕುಂತಲ – ಕಾಳಿದಾಸ

ಮಹರ್ಷಿಗಳು ತಮ್ಮ ಮಗಳು ಶಾಕುಂತಲೆಗೂ ಕೆಲ ಮಾತುಗಳನ್ನು ಹೇಳಬಯಸಿದರು. ಅವರು ಕೇವಲ ಆರಣ್ಯಕರಾದರೂ ಲೋಕವ್ಯವಹಾರವನ್ನು ಚೆನ್ನಾಗಿ ಬಲ್ಲವರು. ತಪಸ್ಸಿನಿಂದ ಸರ್ವಜ್ಞರಾಗಿರುವವರಿಗೆ ತಿಳಿಯದ ನಿಚಾರವೇನಿದೆ? ಶಾಕುಂತಲೆಯನ್ನು ಸಂಬೋಧಿಸಿ, “ಮಗು, ನೀನು ಪತಿಗೃಹಕ್ಕೆ ತೆರಳುತ್ತಿರುವೆ. ಅಲ್ಲಿನ ನಡವಳಿಯನ್ನು ನೀನು ತಿಳಿಯಬೇಕು. ಗುರುಜನರ ಶುಶ್ರೂಷೆಯನ್ನು ತಪ್ಪದೆ ಮಾಡು. ನಿನ್ನ ಪತಿದೇವನ ಪ್ರೇಮಕ್ಕೆ ಸಹಭಾಗಿನಿಯರಾದ ಸಪತ್ನೀ ಜನರಲ್ಲಿ ಗೆಳತಿಯಾಗಿ ನಡೆ. ಭರ್ತನು ಮುನಿದರೂ, ಅದನ್ನು ಮನಸ್ಸಿಗೆ ತಂದುಕೊಂಡು ಎದುರು ನಡೆಯಬೇಡ. ಊಳಿಗದವರಲ್ಲಿ ವಿಶ್ವಾಸದಿಂದಿರು. ಭಾಗ್ಯಸಮಯಗಳಲ್ಲಿ ಗರ್ವಿಸಬೇಡ. ಹೀಗೆ ನಡೆದರೆ ಎಲ್ಲರೂ ನಿನ್ನನ್ನು ಒಳ್ಳೆಯ ಗೃಹಿಣಿ ಎಂದು ಬಹುಮಾನಿಸುತ್ತಾರೆ. ಇದಕ್ಕೆ ವಿರುದ್ಧವಾಗಿ ನಡೆಯುವವರು ನಿಂದೆಗೆ ಒಳಗಾಗಬೇಕಾಗುವುದು ”ಎಂದರು. ಶಾಕುಂತಲೆಯು ಭಕ್ತಿನಮ್ರೆಯಾಗಿ ಅವರಿಗೆ ನಮಸ್ಕರಿಸಿ, ಆ ಉಪದೇಶವನ್ನು ಪ್ರಸಾದವಾಗಿ ಕೈಕೊಂಡಳು.

ಶಾಕುಂತಲೆಗೆ ತನ್ನ ಗೆಳತಿಯರಿಬ್ಬರನ್ನೂ ತನ್ನೊಡನೆ ಕರೆದೊಯ್ಯುವ ಆಸೆ ಬಹುವಾಗಿದ್ದಿತು. ಅವರನ್ನೂ ತಾನು ಅಗಲಬೇಕೆಂದು ತಿಳಿದಮೇಲೆ ಅನಳ ದುಃಖ ಹಿಡಿಸದಾಯಿತು. ಕಣ್ವರು ಕನ್ಯೆಯರಾಗಿರುವ ಅವರು ಜೊತೆಗೆ ಬರಬಾರದೆಂದೂ, ಗೌತಮಿಯು ಬರುವಳೆಂದೂ ಹೇಳಿ ಅವಳನ್ನು ಸಮಾಧಾನಗೊಳಿಸಿದರು. ಇದಾದಮೇಲೆ ತಾನು ಹುಟ್ಟಿ ಬೆಳೆದು ಬಹಳವಾಗಿ ಪ್ರೀತಿಸುತ್ತಿದ್ದ ಆಶ್ರಮವನ್ನು ಮತ್ತಾವಾಗ ನೋಡುವೆನೋ ಎಂದು ಶಾಕುಂತಲೆಯ ಮನಸ್ಸು ಮಿಡಿಯಿತು. ಆಗಿನ ಅವಳ ಸ್ಥಿತಿಯು ಮಲಯಪರ್ವತವನ್ನು ಅಗಲಿದ ಚಂದನ ಲತೆಯಂತೆ ಇದ್ದಿತು. ಕಣ್ವರು ಸತ್ಕುಲಪ್ರಸೂತನಾದ ಅವಳ ಭರ್ತನು ಶ್ಲಾಘ್ಯವಾದ ರಾಜ್ಞಿ ಪದವಿಯಿತ್ತು ಸನ್ಮಾನಿಸಿದಮೇಲೆ ಆ ವಿಭವದಲ್ಲಿ ಅವಳು ಮಾಡಬೇಕಾದ ಕಾರ್ಯಕಲಾಪಗಳಲ್ಲಿಯೇ ಕಾಲವು ಕಳೆದುಹೋಗುವುದೆಂದೂ, ಪುತ್ರ ಪ್ರಸವಿನಿಯಾದ ಬಳಿಕ ಅವಳ ಹೃದಯದಲ್ಲಿ ಹೊಸ ಬೆಳಕು ಮೂಡಿ, ಅಂದು ತಮ್ಮ ಅಗಲಿಕೆಯ ದುಃಖವನ್ನು ಮರೆಯುವಳೆಂದೂ ಹೇಳಿದರು. ಆ ಮಾತನ್ನು ಕೇಳುತ್ತಲೆ ಶಾಕುಂತಲೆ ಅವರ ಅಡಿಗೆರಗಿದಳು. ಗೆಳತಿಯರಿಬ್ಬರೂ ಅವಳನ್ನು ಅಪ್ಪಿಕೊಂಡು ಬೀಳ್ಕೊಟ್ಟಿರು. ಶಾಙರ್ಗರವ, ಶಾರದ್ವತ, ಗೌತಮಿಯರೊಡನೆ ಶಾಕುಂತಲೆಯು ಪ್ರಯಾಣಕ್ಕನುವಾದಳು. ಆಗ ಸಖಿಯರಿಬ್ಬರೂ ಅವಳ ಬಳಿಗೈದಿ, “ಗೆಳತಿ, ದೊರೆಯು ನಿನ್ನನ್ನು ಗುರುತಿಸಲು ತಡಮಾಡಿದರೆ ನಾಮಾಕ್ಷರಗಳು ಕೆತ್ತಿದ ಈ ಉಂಗುರವನ್ನು ತೋರಿಸು” ಎಂದರು. ಶಾಕುಂತಲೆಗೆ ಭಯವಾಯಿತು. ಎದೆ ಜಗ್ಗೆಂದಿತು. ಸಖಿಯರು, “ಹೆದರಬೇಡ. “ಸ್ನೇಹಃ ಪಾಪಶಂಕೀ, ಅದಕ್ಕಾಗಿ ಹಾಗೆ ಹೇಳಿದೆವು” ಎಂದರು. ಆ ಹೊತ್ತಿಗೆ ಶಾಙರ್ಗರವನು ಹೊರಡಲು ಹೊತ್ತಾಯಿತೆಂದು ಎಚ್ಚರಿಸಿದನು. ಶಾಕುಂತಲೆಯು ಮತ್ತೆ ಅಶ್ರುಮುಖಿಯಾಗಿ, “ಅಪ್ಪ, ತಪೋವನವನ್ನು ಮುಂದೆ ಇನ್ನಾವಾಗ ನೋಡುವುದು?” ಎಂದಳು. ಕುಲಪತಿಗಳು, “ವತ್ಸೇ, ನಿನ್ನ ಭರ್ತನು ಬಹುಕಾಲ ರಾಜ್ಯಭಾರಮಾಡಿ, ಸುಖದಿಂದಿದ್ದು, ಚತುಸ್ಸಮುದ್ರವಾದ ಮುದ್ರಿತವಾದ ಮಹೀಪಾಲನ ಭಾರವನ್ನು ಅಪ್ರತಿರಥನಾದ ನಿನ್ನ ಪುತ್ರನಿಗೆ ವಹಿಸಿ, ಶಾಂತಿಯನ್ನರಸಿ ವಾನಪ್ರಸ್ಥಾಶ್ರಮಿಯಾಗಿ ನಿನ್ನೊಡನೆ ತಪೋವನಕ್ಕೆ ಬರುವನು. ಯೋಚಿಸಬೇಡ. ಇನ್ನು ನೀನು ಹೊರಡು, ತಡಮಾಡಬೇಡ. ಮಾರ್ಗದಲ್ಲಿ ನಿನಗೆ ಮಂಗಳವಾಗಲಿ” ಎಂದರು.

ಶಾಕುಂತಲೆಯು ತನ್ನ ಪರಿವಾರದೊಡನೆ ಪ್ರಯಾಣ ಬೆಳೆಸಿದಳು. ಕಣ್ವರು ಮಗಳನ್ನಗಲಿದ ದುಃಖವನ್ನು ಹೇಗೆ ಹೇಗೋ ಅಡಗಿಸಿಕೊಂಡರು. ಅವಳನ್ನು ಕಳುಹಿಸಿದಮೇಲೆ, ಕದಡಿದ್ದ ಮನಸ್ಸು ತಿಳಿಯಾದುದನ್ನು ಕಂಡು ಅವರಿಗೇ ಆಶ್ಚರ್ಯವಾಯಿತು. ಹೆಣ್ಣು ಹೊನ್ನು ಹೆರರವು. ಕೈ ಹಿಡಿದವನಿಗೆ ಅವಳನ್ನು ಕಳುಹಿಸಿಕೊಟ್ಟುದಾಯಿತು. ಒತ್ತೆಯಿಟ್ಟ ಒಡವೆಯನ್ನು ಒಡೆಯನಿಗೆ ಕೊಟ್ಟವನಂತೆ ಮನಸ್ಸು ಪ್ರಶಾಂತನಾಯಿತೆಂದುಕೊಂಡು ಆಶ್ರಮದ ಕಡೆಗೆ ತೆರಳಿದರು.

ಶಾಙರ್ಗರವ ಶಾರದ್ವತರೂ, ಗೌತಮಿಯೂ ಶಾಕುಂತಲೆಯೊಡನೆ ಹೆಸ್ತಿನಾವತಿಗೆ ಬಂದರು. ಆ ಹೊತ್ತಿಗಾಗಲೇ ದುರ್ವಾಸರ ಶಾಪವು ಸಂಪೂರ್ಣವಾಗಿ ಫಲಿಸಿದ್ದಿತು. ಅರಸನು ಶಾಕುಂತಲೆಯನ್ನು ಮರೆತೇ ಹೋಗಿದ್ದನು. ಬಹೆಳ ಹಿಂದೆ ಮರೆತುಹೋದ ಯಾವುದೋ ಒಂದು ಪ್ರಿಯ ವಸ್ತುವನ್ನು ಅವನ ಮನಸ್ಸು ಸ್ಮರಿಸಿಕೊಳ್ಳುತ್ತಿದ್ದರೂ ಅದೇನೆಂಬುದು ಮಾತ್ರ ಹೊಳೆಯಲಿಲ್ಲ. ಒಮ್ಮೆ ಸುಖವನ್ನನುಭನಿಸಿದ ಪ್ರಾಣಿಯು ಸುಂದರ ವಸ್ತುಗಳನ್ನು ನೋಡಿಯೂ, ಮಧುರ ಶಬ್ದಗಳನ್ನು ಕೇಳಿಯೂ ಉತ್ಸಾಹಗೊಳ್ಳುತ್ತದೆ. ಅದೇ ಉತ್ಸಾಹದಿಂದಲೇ ಹಿಂದಾವಗಲೋ ಅನುಭವಿಸಿದ ಸುಖವನ್ನು ನೆನಪಿಗೆ ತಂದುಕೊಳ್ಳುತ್ತದೆ. ಇದಕ್ಕೆ ಒಂದೇ ಕಾರಣ. ಎಂದಿನದೋ ಆದ ಕೆಳೆತನ ಭಾವದಲ್ಲಿ ಸ್ಥಿರವಾಗಿ ನಿಲ್ಲುತ್ತದೆ ಎಂದು ದೊರೆ ತನ್ನಲ್ಲಿ ತಾನೇ ಯೋಚಿಸಿಕೊಳ್ಳುವನು. ಆ ಪ್ರಿಯವಸ್ತುವು ಶಾಕುಂತಲೆಯೇ ಆದರೂ ಅದು ಅವನ ಪ್ರಜ್ಞೆಗೆ ಅಗೋಚರವಾಗಿದ್ದಿತು.

Leave a Reply

Your email address will not be published. Required fields are marked *