ಅಭಿಜ್ಞಾನ ಶಾಕುಂತಲ – ಕಾಳಿದಾಸ

ಅರಸನು ಈ ಸ್ಥಿತಿಯಲ್ಲಿರುವಾಗ ಕಣ್ವಾಶ್ರಮದ ತಾಪಸರು ಸ್ತ್ರೀಜನರೊಡನೆ ದಯಮಾಡಿಸಿರುವರೆಂದೂ ಕಣ್ವಮುನಿಗಳ ಸಂದೇಶ ನಿವೇದನಕ್ಕಾಗಿ ಅರಮನೆಗೆ ಚಿತ್ತೈಸಿರುವರೆಂದೂ ಕಂಚುಕಿಯು ದೊರೆಯಲ್ಲಿ ಅರಿಕೆ ಮಾಡಿದನು. ದೊರೆಯ ಅಪ್ಪಣೆಯಂತೆ ಅವರಿಗೆ ಉಚಿತ ಸತ್ಕಾರವನ್ನು ಸಮರ್ಪಿಸಿ, ಪುರೋಹಿತ ಸೋಮರಾತನು ಅವರನ್ನು ಅಗ್ನ್ಯಾಗಾರಕ್ಕೆ ಕರೆದುತಂದನು.

ದುಷ್ಯಂತನಿಗೆ ಅಂದು ಅಧಿಕಾರ ನಿರ್ವಹಣದ ಸಲುವಾಗಿ ಸ್ವಲ್ಪ ಆಯಾಸವಾಗಿದ್ದಿತು. ಆಗ ವೈತಾಳಿಕರು, “ಅರಸಾ, ನೀನು ಸುಖದಲ್ಲಿ ನಿರಪೇಕ್ಷನಾಗಿ ಲೋಕಕ್ಕಾಗಿ ಶ್ರಮಿಸುತ್ತಿರುವೆ. ಮರವು ಬಿಸಿಲನ್ನು ಸಹಿಸಿ ಆಶ್ರಿತರ ತಾಪವನ್ನು ಕಳೆಯುವುದಿಲ್ಲವೆ? ದಾರಿತಪ್ಪಿ ನಡೆದವರನ್ನು ನೀನು ದಂಡಧರನಾಗಿ ಶಿಕ್ಸಿಸುತ್ತಿರುವೆ, ಕಲಹವನ್ನು ಕಳೆಯುತ್ತ ರಕ್ಷಣೆಗಾಗಿ ದುಡಿಯುತ್ತ ಲೋಗರ ಧನಧಾನ್ಯ ಕ್ಷೇತ್ರದಾರಾಗಾರಾದಿಗಳ ನಡುವೆ ಎಷ್ಟೋ ಮಂದಿ ಬಂಧುಗಳಿದ್ದರೂ ಅರಸನಾದ ನೀನೇ ಆಪದ್ಬಂಧುವಾಗಿರುವೆ” ಎಂದು ಪ್ರೋತ್ಸಾಹಗೊಳಿಸಿದರು.

ಈ ಪ್ರೋತ್ಸಾಹಕ ವಾಕ್ಯಗಳು ಕಿವಿಗೆ ಬೀಳುತ್ತಲೆ, ರಾಜನ ಬೇಸರವೆಲ್ಲವೂ ದೂರವಾಯಿತು. ಉತ್ಸಾಹ ಉದಯಿಸಿ ಕಣ್ವ ಶಿಷ್ಯರನ್ನು ಕಾಣಲು ಅಗ್ನ್ಯಾಗಾರಕ್ಕೆ ಹೊರಟನು. ಕಣ್ವ ಮಹರ್ಷಿಗಳು ಯಾವ ಕಾರ್ಯದ ಸಲುವಾಗಿ ಶಿಷ್ಯರನ್ನು ತನ್ನಲ್ಲಿಗೆ ಕಳುಹಿಸಿರುವರೆಂಬುದು ಅವನಿಗೆ ತಿಳಿಯದು. ಖುಷಿಗಳ ತಪಸ್ಸಿಗೆ ವಿಘ್ನವೇನಾದರೂ ಸಂಭವಿಸಿದೆಯೇ, ಧರ್ಮಾರಣ್ಯ ನಿವಾಸಿಗಳಾದ ಪ್ರಾಣಿಗಳಲ್ಲಿ ಯಾರಾದರೂ ಅವಿನಯವನ್ನಾಚರಿಸಿದರೇ, ಅಥವಾ ತನ್ನ ಯಾವ ಅಪರಾಧದಿಂದಲಾದರೂ ಆಶ್ರಮದಲ್ಲಿ ಓಷಧಿಗಳು ಮೊಳೆಯದೆ ಹೋಗಿವೆಯೇ ಎಂದು ಅವನ ಮನಸ್ಸು ತಳಮಳಗೊಂಡಿದ್ದಿತು.

ಅರಸನು ಅಗ್ನ್ಯಾಗಾರವನ್ನು ಪ್ರವೇಶಿಸುತ್ತಲೆ ಖುಷಿಗಳನ್ನು ಕಂಡು, ಭಕ್ತಿನಮ್ರನಾಗಿ ಅವರಿಗೆ ನಮಸ್ಕರಿಸಿ, ಅವರ ಆಶೀರ್ವಾದಗಳನ್ನು ಪಡೆದನು. ಮುಖಕ್ಕೆ ತೆರೆಹಾಕಿಕೊಂಡಿದ್ದ ಶಾಕುಂತಲೆಯನ್ನು ಕಾಣುತ್ತಲೆ ಅವನಿಗೆ ಆಶ್ಚರ್ಯವಾಯಿತು. ಹಣ್ಣೆಲೆಗಳ ಮಧ್ಯದಲ್ಲಿರುವ ಕೆಂದಳಿರಂತೆ ತಪಸ್ವಿಗಳ ಮಧ್ಯದಲ್ಲಿರುವ ಅವಳನ್ನು ನೋಡಿ, ಅನುಪಮ ಲಾನಣ್ಯವತಿಯೆಂದು ತನ್ನಲ್ಲಿ ತಾನೇ ಸಂತೋಷಸಟ್ಟರೂ ಪರಸತಿಯನ್ನೇಕೆ ದೃಷ್ಟಿಸಿ ನೋಡಬೇಕೆಂದು ಅವನು ಅವಳ ವಿಚಾರದಲ್ಲಿ ನಿರುತ್ಸುಕನಾದನು. ಕಣ್ವ ಮಹರ್ಷಿಗಳ ಸಂದೇಶವನ್ನು ತಿಳಿಯಲು ಕುತೂಹಲನಾಗಿ ಖುಷಿಗಳನ್ನು ಕುರಿತು, ಮುನಿಗಳ ತಪಸ್ಸು ನಿರ್ವಿಘ್ನವಾಗಿ ನಡೆಯುತ್ತಿರುವುದೇ ಎಂದು ಕೇಳಿದನು. “ಮಹಾರಾಜ, ಸತ್ಪುರುಷನಾದ ನೀನು ರಕ್ಷಕನಾಗಿರುವಲ್ಲಿ ನಮ್ಮ ತಪಸ್ಸಿಗೆ ವಿಘ್ನವೆಂದರೇನು? ನೇಸರು ಬೆಳಗುತ್ತಿರುವಾಗ ಕತ್ತಲಿಗೆಡೆಯುಂಟೆ?” ಎಂದು ತಾಪಸರು ಹೇಳಲು, ಅರಸನು ತನಗಿರುವ ರಾಜಶಬ್ದವು ಸಾರ್ಥಕವಾಯಿತೆಂದು ಕೊಂಡು, “ಪೂಜ್ಯರಾದ ಕಣ್ವರು ಕ್ಲೇಮವೆ?” ಎಂದನು. “ತಪಸ್ಸಿದ್ದಿಯುಳ್ಳವರು ಸ್ವಾಧೀನಕುಶಲರು. ಕಣ್ವರು ನಿನಗೆ ಈ ಸಂದೇಶವನ್ನು ಕಳುಹಿಸಿರುವರು. ತಾವಿಲ್ಲದ ವೇಳೆಯಲ್ಲಿ ನೀನೂ ಶಾಕುಂತಲೆಯೂ ಪರಸ್ಪರ ಸಮ್ಮತಿಸಿ, ಗಾಂಧರ್ವ ವಿಧಾನದಲ್ಲಿ ವಿವಾಹವಾದುದನ್ನು ಕುಲಪತಿಗಳು ಅನುಮೋದಿಸಿದರು. ಈಗ ಗರ್ಭವತಿಯಾಗಿರುವ ಈ ಶಾಕುಂತಲೆಯನ್ನು ಒಪ್ಪಿಸಿಕೊಳ್ಳುವುದೆಂದು ಹೇಳಿಕಳುಹಿಸಿದ್ದಾರೆ?” ಎಂದು ತಾಪಸರು ನಿವೇದಿಸಿದರು.

ಅರಸನು ಈ ಮಾತುಗಳಿಗೆ ಯಾವ ಉತ್ತರವನ್ನು ಹೇಳುವನೋ ಎಂದು ಶಾಕುಂತಲೆಯ ಮನಸ್ಸು ತಳಮಳಗೊಂಡಿದ್ದಿತು. ಏಕೆಂದರೆ, ಅರಮನೆಯನ್ನು ಪ್ರವೇಶಿಸುವಾಗಲೇ ಬಲಗಣ್ಣು ಅದುರಿ ಅವಳಿಗೆ ಅಪಶಕುನವಾಗಿದ್ದಿತು. ಅದಕ್ಕೆ ತಕ್ಕಂತೆ ಅರಸನೂ “ಇದೇನು ನೀವು ಹೇಳುತ್ತಿರುವುದು?” ಎಂದುಬಿಟ್ಟನು.ಶಾಙರ್ಗರವನು, ನಿನಗೆ ಲೋಕ ವ್ಯವಹಾರವೆಲ್ಲವೂ ತಿಳಿದಿದೆ. ಸ್ತ್ರೀಯು ಎಷ್ಟೇ ಪತಿವ್ರತೆಯಾಗಿದ್ದರೂ ತವರುಮನೆಯಲ್ಲಿಯೇ ಇದ್ದರೆ ಅವಳನ್ನು ಜನರು ನಿಂದಿಸುವರು. ಭರ್ತನಿಗೆ ಪ್ರಿಯಳಲ್ಲದಿದ್ದರೂ ಅವನ ಬಳಿಯಲ್ಲಿಯೇ ಇದ್ದರೆ ಜನರೂ ಬಂಧುಗಳೂ ಬಹುಮಾನಿಸುವರು?’ ಎಂದನು.

Leave a Reply

Your email address will not be published. Required fields are marked *