ಅಭಿಜ್ಞಾನ ಶಾಕುಂತಲ – ಕಾಳಿದಾಸ

ದುಷ್ಯಂತನಿಗೆ ಸರಮಾಶ್ಚರ್ಯವಾಯಿತು. “ನಾನು ಈಕೆಯನ್ನು ಮದುವೆಯಾಗಿರುವೆನೆ??’ ಎಂದು ಕೇಳಿದನು. ಶಾಙರ್ಗರವನಿಗೆ ಸ್ವಲ್ಪ ಕೋಪಬಂದಿತು. “ಅರಸ ನೀನು ಮಾಡಿದ ಕಾರ್ಯದಲ್ಲಿ ನಿನಗೇ ತಿರಸ್ಕಾರವುಂಟಾಯಿತೆ? ಅಥವಾ ಧರ್ಮವನ್ನು ಮೀರುವ ಬುದ್ಧಿಯು ನಿನ್ನಲ್ಲಿ ಮೂಡಿತೊ? ಇಲ್ಲವೆ ನಮ್ಮನ್ನು ಅಪಮಾನಪಡಿಸಲೆಳಸುತ್ತಿರುವೆಯೋ? ಈ ಮೂರು ಬಗೆಯ ವಿಕಾರಗಳು ಸಾಮಾನ್ಯವಾಗಿ ಐಶ್ವರ್ಯದಿಂದ ಮದಿಸಿಹೋಗಿರುವವರಲ್ಲಿ ಉಂಟಾಗುತ್ತವೆ?” ಎಂದನು. ಆ ಮಾತನ್ನು ಕೇಳಿ ದುಷ್ಯಂತನ ಮನಸ್ಸು ಹಿಂಡಿದಂತಾಯಿತು. ತಾನು ತಿರಸ್ಕಾರಕ್ಕೆ ಪಾತ್ರನಾದುದಕ್ಕಾಗಿ ಅವನು ಸಂತಪಿಸಿದನು.

ಇಷ್ಟರಲ್ಲಿ ಗೌತಮಿಯು, ಶಾಕುಂತಲೆಯು ಹೊದೆದಿದ್ದ ಅವಕುಂಠನವನ್ನು ಓಸರಿಸಿದರೆ ಅರಸನು ಅವಳನ್ನು ಗುರುತಿಸಿಯಾನೆಂದು ಹಾಗೆ ಮಾಡಿದಳು. ಅವಳೆ ಅನುಪಮ ಸೌಂದರ್ಯವನ್ನು ನೋಡಿಯೂ ಅರಸನು ಅವಳನ್ನು ಪರಿಗ್ರಹಿಸಲೊಪ್ಪದೆ ಮೌನದಿಂದಿದ್ದನು. ಎಷ್ಟು ಯೋಚಿಸಿದರೂ ತಾನು ಅವಳನ್ನು ಮದುವೆಯಾದುದು ಅವನ ನೆನಪಿಗೆ ಬರಲಿಲ್ಲ. ಆ ವಿಷಯವನ್ನು ಮುಕ್ತಕಂಠದಿಂದ ತಾಪಸರಿಗೆ ಹೇಳಿಯೇ ಬಿಟ್ಟನು. ಶಾರ್ಜ್ಗರವನಿಗೆ ರೋಷವು ಮಿತಿಮಾರಿತು. “ಕಳ್ಳನು ಕದ್ದು ಬೀಳಿಸಿಕೊಂಡ ಒಡವೆಯನ್ನು ಒಡೆಯನೇ ಅವನ ಕೈಗೆ ಕೊಟ್ಟಂತೆ, ತಾನಿಲ್ಲದ ವೇಳೆಯಲ್ಲಿ ತಮ್ಮ ಮಗಳನ್ನು ಕೈಹಿಡಿದ ನಿನ್ನ ಬಳಿಗೆ ಅವಳನ್ನು ಕಳುಹಿಸಿದ ಕಣ್ವಮಹಾಮುನಿಗಳನ್ನು ಅಪಮಾನಗೊಳಿಸುವುದು ನಿನಗೆ ಎಷ್ಟು ಮಾತ್ರವೂ ಯುಕ್ತವಲ್ಲ” ಎಂದು ಚುಚ್ಚುನುಡಿಗಳನ್ನಾಡಿದನು. ಈವರೆಗೂ ಸುಮ್ಮನೆ ನಿಂತಿದ್ದ ಶಾರದ್ವತನು ಮಾತು ಬೆಳೆಯಲು ಅವಕಾಶ ಕೊಡದೆ, ಶಾಕುಂತಲೆಯ ಕಡೆ ತಿರುಗಿ, “ವತ್ಸೇ, ನಾವು ಹೇಳಬಹುದಾದುದೆಲ್ಲವನ್ನೂ ಹೇಳಿಯಾಯಿತು. ಅರಸನೋ ಹೀಗೆ ಹೇಳುತ್ತಿರುವನು. ಈಗ ಆತನಿಗೆ ನೀನೇ ನಂಬುಗೆಯನ್ನು ಕೊಡಬೇಕಾಗಿದೆ?” ಎಂದನು.

ಅಂತಹ ಅನುರಾಗವೇ ಆಗತಿಗೆ ಬಂದಿತೆಂದ ಮೇಲೆ ತಾನು ಹೇಳಿಕೊಂಡಾದರೂ ಆಗುವುದೇನು? ಎಂದು ತನ್ನಲ್ಲಿ ತಾನೇ ಯೋಚಿಸಿ ದೊರೆಯನ್ನು ಕುರಿತು ಶಾಕುಂತಲೆಯು, “ಪೌರವ, ಹಿಂದೆ ಆಶ್ರಮದಲ್ಲಿ ನಾನು ವಿವಾಹಕ್ಕೆ ಸಮ್ಮತಿಸದಿದ್ದಾಗ ಎಷ್ಟೋ ನಿಬಂಧನೆಗಳನ್ನು ಹೇಳಿ ಮೋಸಗೊಳಿಸಿ ಈಗ ಬೀದಿಯಲ್ಲಿ ತೊರೆಯುವುದು ನಿನಗೆ ಧರ್ಮವೆ, ಉಚಿತವೆ?” ಎಂದಳು. “ಶಿವಶಿವಾ” ಎಂದು ಅರಸನು ಕಿವಿ ಮುಚ್ಚಿಕೊಂಡು, “ಎಲೌ, ಏತಕ್ಕೆ ಇಂತಹ ಪಾಪವಾಕ್ಯಗಳನ್ನಾಡುವೆ?” ಎಂದನು. “ನಿನಗೆ ನನ್ನಲ್ಲಿ ಪರಸ್ತ್ರೀ ಶಂಕೆಯಿದ್ದರೆ ಇದೋ ಈ ಗುರುತಿನಿಂದಾದರೂ ಅದನ್ನು ಪರಿಹರಿಸುವೆನು?’ ಎಂದು ಹೇಳಿ ಶಾಕುಂತಲೆಯು ಅರಸನು ತನಗೆ ಕೊಟ್ಟಿದ್ದ ಉಂಗುರವನ್ನು ನೋಡಿಕೊಂಡಳು. ಅದು ಅಲ್ಲಿರಲಿಲ್ಲ. ದಾರಿಯಲ್ಲಿ ಬರುವಾಗ ಶಕ್ರವತಾರ ತೀರ್ಥದಲ್ಲಿ ಕಳೆದುಹೋಯಿತೆಂಬುದು ಅವಳಿಗೆ ಆವರೆಗೂ ಗೊತ್ತಾಗದೆ ಹೋಯಿತು. ದಿಕ್ಕುತೋರದಂತಾಯಿತು. ಲಜ್ಜಿತೆಯಾಗಿ ಸಮನ ನಿಂತಳು. ಆಗಿನ ಅವಳ ದುಃಖ ವರ್ಣನಾತೀತವಾಗಿದ್ದಿತು.

ಅರಸನು ಸ್ತ್ರೀಯರಿಗೆ ಸಮಯಾನುಸಾರ ಯುಕ್ತಿಗಳು ತೋರುವುದು ಸಹಜವೇ ಎಂದು ಅವಳನ್ನು ಮೂದಲಿಸಿದನು. ವಿಧಿಯು ತನಗೆ ವಿಮುಖವಾಗಿರುವುದನ್ನು ತಿಳಿದು ದೀನದೀನೆಯಾದ ಶಾಕುಂತಲೆಯು ಆಶ್ರಮದಲ್ಲಿ ನಡೆದ ಕೆಲವು ವಿಷಯಗಳನ್ನಾದರೂ ತಿಳಿಸಿ ಅರಸಸಿಗೆ ತನ್ನ ನೆನಪನ್ನು ತಂದುಕೊಡಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದುವು. ಸ್ತ್ರೀಜಾತಿಗೆ ಕೌಶಲವು ಕಲಿಸದಿದ್ದರೂ ತಾನಾಗಿಯೇ ಬರುವುದೆಂದು ಅರಸನು ಅಣಕಮಾಡಿದನು. ಶಾಕುಂತಲೆಗೆ ಇದು ಸಹಿಸದಾಯಿತು. ಉಕ್ಕಿಬರುತ್ತಿರುವ ರೋಷದಿಂದ ಅವಳು ಅರಸನನ್ನು ಕುರಿತು, “ಅನಾರ್ಯ, ನಿನ್ನ ಅಂತಸ್ತಿನಿಂದ ಎಲ್ಲರನ್ನೂ ಅಳೆಯತೊಡಗಿರುವೆ. ಹುಲ್ಲು ಮುಚ್ಚಿದ ಬಾವಿಗೆ ಎಣೆಯಾದುದು ನಿನ್ನ ಹೃದಯ. ಧರ್ಮವೆಂಬ ಸೋಗು ನಿನ್ನ ಹೃದಯದ ಕಪಟವನ್ನು ಮರೆ ಮಾಚಿಸಿದೆ. ಆ ನಿನ್ನ ಹೃದಯದಲ್ಲಿ ವಿಷವು ತುಂಬಿ ತುಳುಕುತ್ತಿದ್ದರೂ ನಿನ್ನ ಮಾತು ಜೇನನ್ನು ಸುರಿಸುತ್ತಿದೆ. ಅಯ್ಯೋ, ಪುರುವಂಶದ ಅರಸನೆಂದು ನಿನ್ನನ್ನು ನಂಬಿ ಮಹಾಪರಾಧಮಾಡಿದೆ?’ ಎಂದು ಹೇಳಿ ದುಃಖ ಭರವನ್ನು ತಡೆಯಲಾರದೆ ಅಳತೊಡಗಿದಳು.

ದುಷ್ಯಂತನಿಗೆ ಅವಳ ಕೋಪವು ನಿಷ್ಕಪಟವೆಂದು ತೋರಿತು. ಅವಳನ್ನು ತಾನು ಮದುವೆಯಾಗಿರಬಹುದೇ ಎಂಬ ಸಂಶಯವು ಮೂಡಿತು. ಆದರೂ ಅದು ಅಸಂಭವವೆಂದೂ ಪರವನಿತೆಯಲ್ಲಿ ಪತ್ನೀತ್ವವನ್ನು ಆರೋಪಿಸುವುದು ಪಾಪವೆಂದೂ ಅವನು ನಿರ್ಧರಿಸಿಕೊಂಡನು; “ಭದ್ರೆ, ದುಷ್ಯಂತನ ಚಾರಿತ್ರವು ಪ್ರಸಿದ್ಧವಾಗಿದೆ. ಇಂತಹ ಪಾಪ ಕಾರ್ಯವು ಅದರಲ್ಲಿ ಕಂಡುಬರುವುದಿಲ್ಲ” ಎಂದನು. ಶಾಕುಂತಲೆಯು ಅಪಮಾನ ಲಜ್ಜೆಗಳಿಂದ ಪೀಡಿತೆಯಾಗಿ ದಿಕ್ಕುಗಾಣದೆ ಸ್ತಬ್ಧಳಾಗಿ ನಿಂತಳು. ಶಾರ್ಜ್ಣರವನು “ಹಿರಿಯರನ್ನು ಕೇಳದೆ ಸ್ವೇಚ್ಛೆಯಾಗಿ ನಡೆದರೆ ಆಗುವುದು ಹೀಗೆಯೇ. ಯಾವ ಕಾರ್ಯವನ್ನಾದರೂ ಪರೀಕ್ಷಿಸಿ ಮಾಡತಕ್ಕದ್ದು. ಅಜ್ಞಾತ ಹೃದಯರಲ್ಲಿ ಸೌಹೃದವು ಹಗೆಯಾಗುತ್ತದೆ” ಎಂದನು. ಅರಸನು ಆ ತಿರಸ್ಕಾರವನ್ನು ಸಹಿಸಲಾರದೆ, “ಅಯ್ಯಾ, ಈಕೆಯ ಮಾತುಗಳನ್ನು ಕೇಳಿ ನನ್ನನ್ನೇಕೆ ದೂಷಿಸುವಿರಿ?’ ಎನ್ನಲು, ಶಾರ್ಜ್ಣರವನು ಅಣಕದ ಮಾತುಗಳಿಂದ ಹುಟ್ಟಿದಂದಿನಿಂದಲೂ ಕಪಟವನ್ನರಿಯದೆ ಬೆಳೆದ ಈ ಮುಗ್ಧೆಯ ಮಾತುಗಳು ನೆಚ್ಚತಕ್ಕುವಲ್ಲ. ಇತರರನ್ನು ಮೋಸಗೊಳಿಸುವುದೇ ಕುಲವಿದ್ಯೆಯಾಗಿರುವ ನಿನ್ನಂತಹರ ಮಾತುಗಳನ್ನು ಆಪ್ತವಾಕ್ಯಗಳೆಂದು ನೆಚ್ಚಬೇಕು!” ಎಂದು ಉತ್ತರವಿತ್ತನು. ಅರಸನಿಗೆ ಮನಸ್ಸು ಕದಡಿಹೋಗಿ, ” ಅಯ್ಯಾ ಸತ್ಯವಾದಿಯೆ, ನೀನು ಹೇಳಿದಂತೆಯೆ ಆಗಲಿ. ನಾನು ಈಕೆಯನ್ನು ಮೋಸಗೊಳಿಸಿ ಪಡೆಯುವ. ಪ್ರಯೋಜನವೇನು? ಎನ್ನಲು ಶಾರ್ಜರವನು, “ವಿನಿಪಾತ!” ಎಂದು ಮತ್ತಷ್ಟು ರೇಗಿ ನುಡಿದನು. ಶಾರದ್ವತನಿಗೆ ಈ ಉತ್ತರೋತ್ತರಗಳು ಸಾಕುಸಾಕಾದುವು. ಅವನು “ಮಹಾರಾಜ, ಇವಳು ನಿನ್ನ ಕಾಂತೆ. ಸ್ವೀಕರಿಸುವುದು ತ್ಯಜಿಸುವುದು ನಿನಗೆ ಸೇರಿದ್ದು. ಪತಿಯಾದವನಿಗೆ ಪತ್ನಿಯಲ್ಲಿ ಸರ್ವಾಧಿಕಾರವುಂಟು” ಎಂದು ಹೇಳಿ ಶಾರ್ಜ್ಜ್ವರವನನ್ನೂ ಗೌತಮಿಯನ್ನೂ ಹಿಂದಿಟ್ಟುಕೊಂಡು ಹೊರಟನು. “ಅಯ್ಯೋ ಈ ಕಿತವನು ನನ್ನನ್ನು ಮೋಸಗೊಳಿಸಿದನು. ನೀವೂ ನನ್ನನ್ನು ತೊರೆಯುವಿರಾ?” ಎಂದು ಶಾಕುಂತಲೆಯು ಅಳುತ್ತ ಹಿಂಬಾಲಿಸಿ ಬರಲು ಶಾರ್ಜ್ಣರವನು ಉಕ್ಕಿಬರುತ್ತಿರುವ ರೋಷದಿಂದ ಸರ್ರನೆ ತಿರುಗಿ, ” ದುಷ್ಟೆ, ಏನು, ಸ್ವಾತಂತ್ರ್ಯವನ್ನವಲಂಬಿಸುತ್ತಿರುವೆ? ಅರಸನು ಹೇಳುವುದು ದಿಟವಾದರೆ ಕುಲಭ್ರಷ್ಟೆಯಾಗಿರುವ ನಿನ್ನನ್ನು ಜನಕನು ಪುರಸ್ಕರಿಸುವುದಿಲ್ಲ. ಪರಿಶುದ್ಧೆಯಾಗಿ ನೀನು ಈತನನ್ನು ವರಿಸಿರುವೆಯೇ ಆದರೆ ಈತನ ಮನೆಯಲ್ಲಿ ದಾಸ್ಯವಾದರೂ ನಿನಗೆ ಯೋಗ್ಯವಾದದ್ದು. ನಿಲ್ಲು,” ಎಂದು ಹೇಳಿ ಎಲ್ಲರೊಡನೆ ಹೊರಟು ಹೋದನು.

Leave a Reply

Your email address will not be published. Required fields are marked *