ಅಭಿಜ್ಞಾನ ಶಾಕುಂತಲ – ಕಾಳಿದಾಸ
ಈವರೆಗೂ ನಡೆದ ಸಂಗತಿಗಳೆಲ್ಲವನ್ನೂ ನೋಡುತ್ತ ನಿಂತಿದ್ದ ಕುಲ ಪುರೋಹಿತನಾದ ಸೋಮರಾತನು ದೊರೆಯ ಧರ್ಮಭೀರುತೆಯನ್ನು ಕಂಡು, “ಅರಸ, ತಾಪಸರು ನಿನಗೆ ಚಕ್ರವರ್ತಿಯಾಗುವ ಪುತ್ರನಾಗುವನೆಂದು ಹರಸಿದ್ದಾರೆ. ಈಕೆಯು ಪ್ರಸವಿಸುವ ಪುತ್ರನು ಆ ಲಕ್ಷಣಗಳಿಂದ ಕೂಡಿದ್ದರೆ ಅಭಿನಂದಿಸಿ ಅಂತಃಪುರಕ್ಕೆ ಬರಮಾಡಿಕೊಳ್ಳುವುದೂ, ಇಲ್ಲದಿದ್ದರೆ ತಂದೆಯ ಮನೆಗೆ ಕಳುಹಿಸುವುದೂ ನಿರ್ಣಯವಾಗಿಯೆ ಇದೆ. ಹಾಗೆ ಮಾಡಬಹುದು’? ಎಂದು ಹೇಳಿದನು. ದುಷ್ಯಂತನು ಅದಕ್ಕೆ ಒಪ್ಪಿದನು.
ಸೋಮರಾತನು ದುಷ್ಯಂತನಿಂದ ತಿರಸ್ಕ್ರತೆಯಾದ ಶಾಕುಂತಲೆಯನ್ನು ಹಿಂದಿಟ್ಟುಕೊಂಡು, ಗೃಹಾಭಿಮುಖವಾಗಿ ಹೋಗುತ್ತಿದ್ದನು. ಆಗ ಒಂದು ಆಶ್ಚರ್ಯ ನಡೆಯಿತು. ಶಾಕುಂತಲೆಯ ತನಗೊದಗಿದ ದೌರ್ಭಾಗ್ಯಕ್ಕಾಗಿ ಬಹುವಾಗಿ ದುಃಖಿಸಿ, ಭೂಮಿಯಾದರೂ ಬಿರಿದು ತನ್ನನ್ನು ಹುದುಗಿಸಿಕೊಳ್ಳಬಾರದೆ ಎಂದು ಗೋಳಿಡುತ್ತ, ಎರಡೂ ತೋಳುಗಳನ್ನು ಮೇಲೆತ್ತಿ ರೋದಿಸುತ್ತಿರಲು, ಅಪ್ಸರತೀರ್ಥದೆಡೆಯಿಂದ ಅಪೂರ್ವವಾದ ಸ್ತ್ರೀ ಜ್ಯೋತಿಯೊಂದು ಕಾಣಿಸಿ, ಅವಳನ್ನೆತ್ತಿಕೊಂಡು ಕಣ್ಮರೆಯಾಯಿತು.
ದುಷ್ಯಂತನಿಗೆ ಈ ವಿಚಾರವು ತಿಳಿಯಲು ಅವನಿಗೆ ಆಶ್ಚರ್ಯವಾಯಿತು. ಆ ದುಃಖಿನಿಗೆ ದೈವವು ನೆರವಾದುದಕ್ಕೆ ತನ್ನಲ್ಲಿ ತಾನೇ ಸಂತೋಷಪಟ್ಟುಕೊಂಡನು. ಆಕೆಯ ಮುಗ್ಧಭಾವವನ್ನು ನೆನೆದ ಅವನಲ್ಲಿ ಮೂಡಿದ್ದ ಪರಿಗ್ರಹಶಂಕೆಯು ಬಲಗೊಂಡಿತು. ಆದರೂ ಎಷ್ಟು ಯೋಚಿಸಿದರೂ ನೆನಪು ಮರಳಲಿಲ್ಲ.
ಕೆಲವು ದಿನಗಳು ಕಳೆದುವು. ಹಸ್ಕಿನಾವತಿಯಲ್ಲಿ ಒಂದು ದಿನ ಸಡಗರವೋ ಸಡಗರ. ಪುರದ ಬಳಿಯಿರುವ ಶಕ್ರಾವತಾರ ನಿವಾಸಿಯಾದ ಬೆಸ್ತನೊಬ್ಬನು ದುಷ್ಯಂತ ನಾಮಾಂಕಿತವಾದ ಉಂಗುರವನ್ನು ಪೇಟೆಯಲ್ಲಿ ಮಾರುವ ಪ್ರಯತ್ನದಲ್ಲಿದ್ದನು. ಆಗ ನಗರ ರಕ್ಪಕನು. ಅವನನ್ನು ಹಿಡಿದು, ಹೊಡೆದು, ಆ ಉಂಗುರವು ಲೋಹಿತ ಮತ್ಸ್ಯದಲ್ಲಿ ದೊರೆತ ಸಂಗತಿಯನ್ನು ಅವನಿಂದ ತಿಳಿದು ಅರಸನಿಗೆ ಅರಿಕೆಮಾಡಿದನು.
ಉಂಗುರವನ್ನು ನೋಡಿದೊಡನೆಯೇ ದುರ್ವಾಸರ ಶಾಪವು ಕಳೆದುಹೋಯಿತು. ಅರಸನಿಗೆ ಪೂರ್ವ ವೃತ್ತಾಂತವೆಲ್ಲವೂ ನೆನಪಿಗೆ ಬಂದಿತು. ಅಬಲೆಯಾದ ಶಾಕುಂತಲೆಯನ್ನು ತಿರಸ್ಕರಿಸಿದ ಪಾಪಕ್ಕಾಗಿ ಪಶ್ಚಾತ್ತಾಪವು ತಾನೇ ತಾನಾಗಿ ಅವನನ್ನು ಮುತ್ತಿತು. ಬೆಸ್ತನಿಗೆ ಬಹುಮಾನ ಕೊಟ್ಟು ಕಳುಹಿಸುವಂತೆ ನಾಗರಿಕನಿಗೆ ಅಪ್ಪಣೆಮಾಡಿದನು. ಬೆಸ್ತನು ಹಿಗ್ಗಿನಿಂದ ಹೊರಟುಹೋದನು.
ಉಂಗುರ ದೊರೆತಂದಿನಿಂದ ದುಷ್ಯಂತನ ನಡವಳಿಯೇ ಬೇರೆ ಯಾಯಿತು. ಕಣ್ವಾಶ್ರಮದ ವೃತ್ತಾಂತವೆಲವೂ ನೆನಪಿಗೆ ಬಂದು ಧರ್ಮಪತ್ಟಿಯನ್ನು ನಿರಾಕರಿಸಿದುದನ್ನು ನೆನೆನೆನೆದು ಅವನು ಮನಮರುಗಿದನು. ಅವನಿಗೆ ಸಂತೋಷವೇ ಇಲ್ಲವಾಯಿತು. ಯಾವ ಉತ್ಸವ ಉತ್ಸಾಹಗಳೂ ಅವನಿಗೆ ಬೇಡವಾದುವು. ಅನ್ನಪಾನಾದಿಗಳು ಬೇಕಾಗಲಿಲ್ಲ. ದುಃಖದಿಂದ ಕಂದಿ ಸೊರಗುತ್ತಿದ್ದ ಅವನಿಗೆ ನಿದ್ದೆಯೆಂಬುದೇ ಇಲ್ಲವಾಯಿತು. ರಾಜಧಾನಿಯಲ್ಲಿ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಮದನಮಹೋತ್ಸವವನ್ನೂ ನಿಲ್ಲಿಸಿಬಿಟ್ಟನು. ಬರುಬರುತ ಅವನು ಸವೆದು ಸಿಪ್ಪೆಯಾಗಿಹೋದನು.