ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆ – ಸರ್ವಜ್ಞನ ತ್ರಿಪದಿಗಳು

ಅನ್ನವನು ಇಕ್ಕುವುದು | ನನ್ನಿಯನು ನುಡಿಯುವುದು |
ತನ್ನಂತೆ ಪರರ ಬಗೆದೊಡೆ ಕೈಲಾಸ |
ಬಿನ್ನಾಣವಕ್ಕು ಸರ್ವಜ್ಞ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆ
ಕೊಟ್ಟಿದ್ದು ಕೆಟ್ಟಿತ್ತೆನಬೇಡ ಮುಂದಕ್ಕೆ |
ಕಟ್ಟಿಹುದು ಬುತ್ತಿ | ಸರ್ವಜ್ಞ
ಜಾತಿಹೀನನ ಮನೆಯ | ಜ್ಯೋತಿ ತಾ ಹೀನವೇ |
ಜಾತಿ ವಿಜಾತಿಯೆನಬೇಡ – ದೇವನೊಲಿ |
ದಾತನೇ ಜಾತ ಸರ್ವಜ್ಞ
ಆಗ ಬಾ | ಈಗ ಬಾ | ಹೋಗಿ ಬಾ | ಎನ್ನದಲೆ |
ಆಗಲೇ ಕರೆದು ಕೊಡುವನ ಧರ್ಮ |
ಹೊನ್ನಾಗದೆ ಬಿಡದು | ಸರ್ವಜ್ಞ
ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು |
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ |
ನಡುವೆ ಎತ್ತಣದು? ಸರ್ವಜ್ಞ
ಕೋಪವೆಂಬುದು ತಾನು | ಪಾಪದಾ ನೆಲೆಗಟ್ಟು |
ಆಪತ್ತು ಸುಖವು ಸರಿಯೆಂದು ಕಾಂಬವಗೆ |
ಪಾಪವೆಲ್ಲಿಹುದು ಸರ್ವಜ್ಞ