ನನ್ನ ಹಾಗೆಯೆ – ಸು. ರಂ. ಎಕ್ಕುಂಡಿ
ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ
ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ
“ಈತನಾರು ತಾತ ಇಲ್ಲಿ ನಿಂತು ನೋಡುತಿರುವನು
ಇಂದ್ರಗಿರಿಯ ನೆತ್ತಿಯಲ್ಲಿ ಏನು ಮಾಡುತಿರುವನು?”
“ಇವನೆ ಬಾಹುಬಲಿಯು ಮಗು! ಧೀರತನದ ಮೂರ್ತಿಯು!
ನುಡಿಯ ಹೊಳೆಗಳಲ್ಲಿ ತುಂಬಿ ಹರಿವುದಿವನ ಕೀರ್ತಿಯು
ಹತ್ತುವವರ ಇಳಿಯುವವರ ನಿಂತು ನೋಡುತಿರುವನು
ನಿಲ್ಲುವವರ ನಡೆಯುವವರ ಲೆಕ್ಕ ಮಾಡುತಿರುವನು
ಬಳಲಿದವರಿಗೆಲ್ಲ ಇಲ್ಲಿ ಕೈಯ ನೀಡುತಿರುವನು”
“ಇಲ್ಲಿ ಏಕೆ ಬಂದು ನಿಂತ? ಇಷ್ಟು ದೂರ! ಎತ್ತರ!
ಭಯವಾಗದೆ ಇವನಿಗಿಲ್ಲಿ ಯಾರು ಇಲ್ಲ ಹತ್ತಿರ”
“ಇವನಿಗೆಲ್ಲಿ ಭಯವು ಮಗು ಅಭಯಮೂರ್ತಿ ಈತನು
ಭರತ ಚಕ್ರವರ್ತಿ ಇವನ ಅಣ್ಣ ಒಮ್ಮೆ ಆತನು
ಹಮ್ಮಿನಲ್ಲಿ ಬಂದು ಸೆಣಸಿ ತಮ್ಮನಲ್ಲಿ ಸೋತನು
ಗೆದ್ದರಾಜ್ಯ ಮರಳಿಸುತ್ತ ನುಡಿದನೊಂದು ಮಾತನು
ನೀನು ಸೋತುಗೆದ್ದೆ ಅಣ್ಣ, ನಾನು ಗೆದ್ದು ಸೋತೆನು
ಬೆಟ್ಟ ಕರೆಯುತಿಹುದು ನನ್ನ ಮುಗಿಲು ತನ್ನ ಹತ್ತಿರ
ಯಾವುದುಂಟು ಅಣ್ಣ ಇಲ್ಲಿ ಜೀವವೇರದೆತ್ತರ?
ತಪಸ್ಸೊಂದೆ ತಿಳಿವುದೊಂದೆ ಹುಟ್ಟು ಸಾವಿನುತ್ತರ.
ನಿಂತು ಹಾಗೆ ನಿಂತುಕೊಂಡು ಘೋರ ತಪವ ಮಾಡಲು
ಹುಟ್ಟು ಸಾವಿನಾಚೆಗಿರುವ ಹೊಳೆವ ಹಾದಿ ನೋಡಲು
ಬಿಸಿಲು ಬಂತು ನೆರಳು ಬಂತು ಗಾಳಿ ಬಿಚ್ಚಿ ಬೀಸಿತು
ಒಮ್ಮೆ ಹಸಿರು ಒಮ್ಮೆ ಹೊನ್ನು ಹಚ್ಚಡವನು ಹಾಸಿತು
ಸೂರ್ಯನೊಮ್ಮೆ ಚಂದ್ರನೊಮ್ಮೆ ಸುತ್ತು ಹಾಕಿ ನಡೆದರು
ದೀಪದಂತೆ ನಿಂತ ಇವಗೆ “ನಮೋ” ಎಂದು ನುಡಿದರು
“ಇಷ್ಟು ಜನರು ಇಲ್ಲಿಗಿಂದು ಏಕೆ ಬಂದು ನೆರೆದರು?
‘ಬಾಹುಬಲಿ’, ‘ಬಾಹುಬಲಿ’ ಎಂದು ಕರೆಯುತಿರುವರು”
“ಮಗೂ, ಇಂದು ಇವನಿಗಿಲ್ಲಿ ಹಾಲಿನಲ್ಲಿ ಸ್ನಾನವು
ದಾರಿಯಲ್ಲಿ ದಣಿದ ಇವರಿಗೆ, ಇವನದೊಂದೆ ಧ್ಯಾನವು
ಮುದ್ದುಮುಖದಿ ಮುಗುಳ್ನಕ್ಕು ಸಿದ್ಧನಾಗಿ ನಿಂತಿಹ
ದುಗ್ಧ ಹಾಸದಲ್ಲಿ ನಲಿವ ಮುಗ್ಧ ಮಗುವಿನಂತಿಹ”
“ತಾತ,
ಎರೆವ ಮುಂಚೆ ಎಣ್ಣೆ ಹಚ್ಚಿ ಅಮ್ಮ ನನಗೆ ಹೀಗೆಯೇ
ನಿಲ್ಲಿಸುವಳು. ಬಾಹುಬಲಿಯು ಕೂಡ ತನ್ನ ಹಾಗೆಯೆ
ನಿಂತು ಕಾಯುತಿರುವ ಕಣ್ಣು ತೆರೆದು ಮೊದಲ ಚೆಂಬಿಗೆ”
ಗೊಮ್ಮಟೇಶ ನಕ್ಕುಬಿಟ್ಟ ಕಂಡು ಮುಗ್ಧ ನಂಬಿಗೆ.
ವೃಷಭನಾಥನ ಮಕ್ಕಳಾದ ಭರತ ಮತ್ತು ಬಾಹುಬಲಿ ಇಬ್ಬರ ನಡುವೆ ರಾಜ್ಯಕ್ಕಾಗಿ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಬಾಹುಬಲಿಯು ತನ್ನ ಅಣ್ಣನಾದ ಭರತನನ್ನು ಮುಷ್ಟಿಯುದ್ಧ, ದೃಷ್ಟಿಯುದ್ಧ, ಹಾಗೂ ಜಲಯುದ್ಧಗಳಲ್ಲಿ ಸೋಲಿಸುತ್ತಾನೆ. ಇದರಿಂದ ಅವಮಾನಿತನಾದ ಭರತನು ಬಾಹುಬಲಿಯನ್ನು ಕೊಲ್ಲಲು ಮುಂದಾಗುತ್ತಾನೆ. ಇದರಿಂದ ಬೇಸರಗೊಂಡ ಬಾಹುಬಲಿ ಗೆದ್ದ ರಾಜ್ಯವನ್ನು ಭರತನಿಗೆ ಒಪ್ಪಿಸಿ ತಪಸ್ಸನ್ನಾಚರಿಸಲು ತೆರಳುತ್ತಾನೆ. ಈ ರೀತಿಯಲ್ಲಿ ಭೋಗವನ್ನು ತ್ಯಜಿಸಿ ತ್ಯಾಗಿಯಾಗುವ ಭವ್ಯ ತತ್ತ÷್ವವನ್ನು ಬಾಹುಬಲಿಯು ಜಗತ್ತಿಗೆ ಸಾರುತ್ತಾನೆ. ಸ್ವಾಭಿಮಾನ, ತ್ಯಾಗ ಹಾಗೂ ಅಹಿಂಸೆಯ ಪ್ರತೀಕವಾದ ಗೊಮ್ಮಟಮೂರ್ತಿಗೆ ಹನ್ನೆರಡು ವರ್ಷದಲ್ಲೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಶ್ರವಣಬೆಳಗೊಳದ ಗೊಮ್ಮಟಮೂರ್ತಿಯ ಮಹಾಮಜ್ಜನವನ್ನು ಕಂಡ ಮಗು ತನ್ನ ತಾತನ ಜೊತೆ ನಡೆಸುವ ಸಂಭಾಷಣೆ ಹಾಗೂ ಮಗುವಿನ ಮುಗ್ಧತೆ ಈ ಕವನದಲ್ಲಿದೆ.
ಟಿಪ್ಪಣಿ :
ಭರತ, ಬಾಹುಬಲಿ ಇವರು ಅಯೋಧ್ಯೆಯ ಅರಸನಾಗಿದ್ದ ವೃಷಭನಾಥನ ಅನೇಕ ಮಕ್ಕಳಲ್ಲಿ ಇಬ್ಬರು. ವೃಷಭನಾಥನು ವೈರಾಗ್ಯಪರನಾದಾಗ ತನ್ನ ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳುತ್ತಾನೆ.
ಅದರಂತೆ ಅಯೋಧ್ಯೆಯನ್ನಾಳುತ್ತಿದ್ದ ಭರತನ ಶಸ್ತ್ರಾಗಾರದಲ್ಲಿ ಚಕ್ರರತ್ನವು ಹುಟ್ಟಲು ಅದನ್ನು ಮುಂದಿಟ್ಟು ದಿಗ್ವಿಜಯ ಮುಗಿಸಿ ಹಿಂದಿರುಗುತ್ತಿದ್ದಾಗ ಅದು ಅಯೋಧ್ಯೆಯನ್ನು ಪ್ರವೇಶಿಸದೆ ನಿಂತುಬಿಡುತ್ತದೆ.
ಪೌದನಪುರದಲ್ಲಿ ಆಳುತ್ತಿದ್ದ ಬಾಹುಬಲಿಯನ್ನು ಗೆಲ್ಲದೆ ತನ್ನ ಚಕ್ರವರ್ತಿ ಪಟ್ಟ ಪೂರ್ಣಗೊಳ್ಳದು ಎಂದು ಭರತನು, ಅಣ್ಣನಾದ ತನಗೆ ಶರಣಾಗಬೇಕೆಂದು ತಮ್ಮನಿಗೆ ಸಂದೇಶ ಕಳುಹಿಸುತ್ತಾನೆ. ಅಣ್ಣನಾದರೇನಂತೆ ತಲೆಬಾಗುವುದು ಅರಸನಾಗಿರುವ ತನ್ನ ಅಭಿಮಾನಕ್ಕೆ ಕುಂದು ಎಂದು ಬಾಹುಬಲಿಯು ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಮಂತ್ರಿಗಳ ಮಾತಿನಂತೆ, ಸೈನಿಕರ ನಾಶದ ಬದಲಿಗೆ ದ್ವಂದ್ವ ಯುದ್ಧಕ್ಕೆ ಇಬ್ಬರೂ ಮನಸ್ಸುಮಾಡಿದರು. ದೃಷ್ಠಿ ಜಲ, ಮಲ್ಲ ಯುದ್ಧದಲ್ಲಿ ಬಾಹುಬಲಿ ಗೆಲ್ಲುತ್ತಾನೆ.
ಆದರೆ ಈ ಗೆಲುವಿನಿಂದ ಪ್ರಯೋಜನವಿಲ್ಲವೆಂದು ಗೆದ್ದರಾಜ್ಯವನ್ನು ಅಣ್ಣನಿಗೆ ಒಪ್ಪಿಸಿ ತಾನು ವೈರಾಗ್ಯಪರನಾಗಿ ತಪಸ್ಸಿಗೆ ತೆರಳುತ್ತಾನೆ,
ಗೊಮ್ಮಟೇಶನೆನಿಸುತ್ತಾನೆ.
Question and answer