ಮಹಾವೀರಚರಿತ ಕತೆ – ಭವಭೂತಿಯ ರಾಮಾಯಣ

ರಾಮಲೀಲಾ

ಕೆ. ಕೃಷ್ಣಮೂರ್ತಿ ಯವರ “ಭವಭೂತಿ” ಪುಸ್ತಕದಿಂದ ಆರಿಸಿದ, ಪ್ರಸಿದ್ಧ ಸಂಸ್ಕೃತ ಕವಿ ಭವಭೂತಿ ರಚಿಸಿದ “ಮಹಾವೀರಚರಿತ” ನಾಟಕದ ಕಥಾಸಾರಾಂಶ

ಕಥಾವಸ್ತು

ರಾಮಲಕ್ಷ್ಮಣರು ವಿಶ್ವಾಮಿತ್ರನ ಆಶ್ರಮಕ್ಕೆ ಅವನ ಯಜ್ಞ ರಕ್ಷಣೆಗಾಗಿ ಬಂದಿದ್ದಾರೆ. ಆ ಯಜ್ಞಕ್ಕೆ ಮಿಥಿಲೆಯಿಂದ ಆಮಂತ್ರಿತರಾದ ಕುಶಧ್ವಜ, ಸೀತೆ. ಊರ್ಮಿಳೆಯರೂ ಬಂದಿದ್ದಾರೆ. ಜನಕಮಹಾರಾಜನು ದೀಕ್ಷೆ ವಹಿಸಿದ್ದರಿಂದ ತಮ್ಮನನ್ನು ಕಳುಹಿಸಿದ್ದನು.

ಇತ್ತ ರಾವಣನಿಗೆ ಸೀತೆಯನ್ನು ಮದುವೆಯಾಗುವ ಆಸೆಯಿತ್ತು. ಬಲಾತ್ಕಾರದಿಂದ ಅವನು ಹಾಗೆ ಮಾಡದಂತೆ ಮಾತಾಮಹನಾದ ಮಾಲ್ಯವಂತನು ಅವನನ್ನು ತಡೆದಿದ್ದನು. ವಿನಯದಿಂದಲೇ ಆಗುವುದಕ್ಕೆ ಬಲವೇಕೆ ಎಂಬುದು ಅವನ ಮತ. ಸೀತೆಯನ್ನು ರಾವಣನಿಗೆ ಮದುವೆ ಮಾಡಿಕೊಡಬೇಕೆಂದು ಸರ್ವಮಾಯನೆಂಬ ದೂತನನ್ನು ಮಿಥಿಲಾ ಪಟ್ಟಣಕ್ಕೆ ಮಾಲ್ಯವಂತನು ಕಳುಹಿಸುತ್ತಾನೆ. ಜನಕನು ಆ ಹೊಣೆಯೆಲ್ಲಾ ಕುಶಧ್ವಜನದೇ ಎಂದದ್ದರಿಂದ ಕುಶಧ್ವಜನನ್ನು ಹುಡುಕಿಕೊಂಡು ಸರ್ವಮಾಯನೂ ಆಶ್ರಮಕ್ಕೆ ಬರುತ್ತಾನೆ. ಇಷ್ಟಕ್ಕೆ ಮೊದಲೇ ರಾಮಲಕ್ಷ್ಮಣರನ್ನು ನೋಡಿ ಮೆಚ್ಚಿದ್ದ ಕುಶಧ್ವಜನು ಸೀತೆ ಊರ್ಮಿಳೆಯರನ್ನು ಅವರಿಗೇ ಕೊಡಲು ಸಂಕಲ್ಪಿಸಿರುತ್ತಾನೆ.

ಶಿವಧನುಸ್ಸಿನ ಆರೋಪಣವನ್ನು ಜನಕನು ಪಣವೆಂದು ಹೇಳಿರುವುದೊಂದೇ ಸೀತಾರಾಮರ ವಿವಾಹಕ್ಕಿರುವ ಅಡಚಣೆ. ರಾವಣನ ದೂತನು ತನ್ನ ಪ್ರಭುವಿನ ಪ್ರಾರ್ಥನೆಯನ್ನು ತಿಳಿಸಿದರೂ ಅವನಿಗೆ ಉತ್ತರವು ಆಗ ದೊರೆಯುವುದಿಲ್ಲ. ಏಕೆಂದರೆ, ಮಾರೀಚನ ತಾಯಿಯಾದ ತಾಟಕೆಯು ಅಲ್ಲಿ ಯಜ್ಞವನ್ನು ಹಾಳು ಮಾಡುತ್ತಾ ಬರುತ್ತಾಳೆ; ಋಷಿಗಳ ಬೊಬ್ಬೆಯೇಳುತ್ತದೆ. ರಾಮನು ತಾಟಕೆಯನ್ನು ಸಂಹರಿಸುತ್ತಾನೆ. ವಿಶ್ವಾಮಿತ್ರನ ಆಜ್ಞಾನುಸಾರ ರಾಕ್ಷಸರ ವಧೆಗೆ ಇದೇ ನಾಂದಿಯಾಗುತ್ತದೆ.

ವಿಶ್ವಾಮಿತ್ರನು ರಾಮಲಕ್ಷ್ಮಣರಿಗೆ ಜೃಂಭಕಾಸ್ತ್ರಗಳನ್ನು ಅನುಗ್ರಹಿಸುತ್ತಾನೆ. ಪುಷ್ಪವೃಷ್ಟಿಯಾಗುತ್ತದೆ. ಕುಶಧ್ವಜನು ರಾಮನಿಗೇ ಸೀತೆಯನ್ನು ಕೊಡುವ ಸಂಕಲ್ಪವನ್ನು ತಿಳಿಸಿ ದಶರಥನಿಗೆ ಹೇಳಿಕಳುಹಿಸುತ್ತಾನೆ. ನೆನೆದ ಕೂಡಲೆ ಶಿವಧನುಸ್ಸು ಪ್ರತ್ಯಕ್ಷವಾಗುತ್ತದೆ. ಕ್ಷಣಾರ್ಧದಲ್ಲಿ ರಾಮನು ಅದನ್ನು ಆರೋಪಿಸುತ್ತಾನೆ. ಆಗಲೇ ಅದು ಎರಡಾಗಿ ಮುರಿದು ಹೋಗುತ್ತದೆ. ಮಾಂಡವಿ ಶ್ರುತಕೀರ್ತಿಯರನ್ನು ಭರತಶತ್ರುಘ್ನರಿಗೆ ಕೊಡಬೇಕೆಂದು ಕುಶಧ್ವಜನು ನಿಶ್ಚಯಿಸುತ್ತಾನೆ. ಅಷ್ಟರಲ್ಲಿ ಯಜ್ಞಕ್ಕೆ ವಿಘ್ನ ಮಾಡಲು ಬಂದ ಸುಬಾಹುವನ್ನೂ ರಾಮನು ಸಂಹರಿಸುತ್ತಾನೆ. ಸರ್ವಮಾಯನು ರಾವಣನ ಪ್ರಾರ್ಥನೆ ಭಗ್ನವಾದುದನ್ನು ಮಾಲ್ಯವಂತನಿಗೆ ತಿಳಿಸಲು ಹೋಗುತ್ತಾನೆ. (ಅಂಕ–೧).

ಮಾಲ್ಯವಂತನು ರಾಜನೀತಿ ವಿಶಾರದ. ರಾಮನಿಗೆ ಅಗಸ್ತ್ಯ ವಿಶ್ವಾಮಿತ್ರರೇ ಮೊದಲಾದವರು ಕೊಡುತ್ತಿರುವ ದಿವ್ಯಾಸ್ತ್ರಗಳಿಂದ ಅವನಿಗೆ ಚಿಂತೆ. ಮಹಾಮಾಹೇಶ್ವರನಾದ ಪರಶುರಾಮನು ದಂಡಕಾರಣ್ಯದಲ್ಲಿ ರಾಕ್ಷಸರ ಅನಾಚಾರವನ್ನು ತಪ್ಪಿಸಬೇಕೆಂದು ಅವನಿಗೆ ಪತ್ರ ಬರೆದಿದ್ದಾನೆ. ಕೂಡಲೇ ಈ ಸಂಧಿಯನ್ನುಪಯೋಗಿಸಿಕೊಂಡು ಶಿವಧನುಸ್ಸಿಗೆ ಅಪರಾಧ ಮಾಡಿದ ರಾಮನನ್ನು ಶಿಕ್ಷಿಸುವಂತೆ ಪರಶುರಾಮನನ್ನು ಎತ್ತಿ ಕಟ್ಟುತ್ತಾನೆ. ಅವನು ರೋಷಾವೇಶದಿಂದ ಮಿಧಿಲೆಗೆ ಬಂದು ರಾಮನನ್ನು ಯುದ್ಧಕ್ಕೆ ಕರೆಯುತ್ತಾನೆ. ವಸಿಷ್ಠಾದಿಗಳು ಎಷ್ಟು ಹೇಳಿದರೂ ಕೇಳುವುದಿಲ್ಲ. ಅಂತಃಪುರದೊಳಗೇ ನುಗ್ಗಿ ನೂತನವರನಾದ ರಾಮನನ್ನು ಕದನಕ್ಕೆಳೆಯುತ್ತಾನೆ.(ಅಂಕ ೨)

ಹಿರಿಯರ ಬುದ್ಧಿವಾದವನ್ನು ಕೇಳದೆ ಪರಶುರಾಮನಿಗೆ ಯುದ್ಧದಲ್ಲಿ ಸೋಲಾಗುತ್ತದೆ. ರಾಮನ ತೇಜವೇ ಹೆಚ್ಚುತ್ತದೆ. ರಾಮನಿಗೆ ಪರಶುರಾಮನ ವೈಷ್ಣವಧನುಸ್ಸೂ ಸಿಕ್ಕುತ್ತದೆ. (ಅಂಕ ೩-೪)

ಮಾಲ್ಯವಂತನು ಮತ್ತೊಂದು ಹಂಚಿಕೆ ಮಾಡುತ್ತಾನೆ. ಮಿಥೆಲೆಯಲ್ಲಿರುವ ದಶರಥನಿಗೆ ಕೈಕೆಯು ಕಳಿಸಿದಳೆಂಬ ಸುಳ್ಳು ಪತ್ರವನ್ನು ಮಂಥರೆಯ ವೇಷದಲ್ಲಿ ಕೊಡುವಂತೆ ಶೂರ್ಪಣಖಿಯನ್ನು ನಿಯೋಜಿಸುತ್ತಾನೆ. ಕೈಕೆಯು ಯಾವ ತಪ್ಪನ್ನೂ ಮಾಡದಿದ್ದರೂ ಶೂರ್ಪಣಖಿಯ ಮಾಯೆಯಿಂದ ಅವಳೇ ರಾಮನ ವನವಾಸವನ್ನೂ ಭರತನ ಅಭಿಷೇಕವನ್ನೂ ಬಯಸುತ್ತಿರುವಂತೆ ದಶರಥನಿಗೆ ದೃಢವಾಗುತ್ತದೆ. ವನವಾಸಕ್ಕೆ ರಾಮನು ಸಂತೋಷದಿಂದ ಒಪ್ಪುತ್ತಾನೆ– ರಾಕ್ಷಸ ಸಂಹಾರಕ್ಕೆ ಸುಸಂಧಿ ದೊರೆಯಿತೆಂದು. ಮಾಲ್ಯವಂತನ ಯೋಚನೆ – ವನವಾಸಕಾಲದಲ್ಲಿ ಸೀತಾಪಹರಣ ಮಾಡಿಸಿ, ರಾಮನನ್ನು ರಾಕ್ಷಸರ ಕೈಯಿಂದ ಪರಿಪರಿಯಾಗಿ ಪೀಡಿಸಿ ಸಾಯಿಸಬೇಕೆಂಬುದು. ಕೈಕೆಯ ವರಗಳನ್ನು ನಡೆಸಿಕೊಡಲೇಬೇಕೆಂದು ರಾಮನೇ ಹಟ ಹಿಡಿದು ತಂದೆಯನ್ನೊಪ್ಪಿಸಿ ಕಾಡಿಗೆ ಹೊರಡುತ್ತಾನೆ. (ಅಂಕ ೪)

ರಾಮನು ಚಿತ್ರಕೂಟದಿಂದ ಶರಭಂಗಾಶ್ರಮಕ್ಕೆ ಬಂದು ಋಷಿಗಳನ್ನು ವಂದಿಸಿ, ಪಂಚವಟಿಗೆ ಬಂದಾಗ ಕಾಮಿಸಿ ಬಂಡ ಶೂರ್ಪಣಖೆಗೆ ವಿರೂಪಕರಣವಾಗುತ್ತದೆ. ಆಮೇಲೆ ಏರಿ ಬಂದ ಖರದೂಷಣರೇ ಮೊದಲಾದ ಹದಿನಾಲ್ಕು ಸಹಸ್ರ ರಾಕ್ಷಸರನ್ನು ರಾಮನೊಬ್ಬನೇ ಸಂಹರಿಸುತ್ತಾನೆ ಎಂಬುದೂ, ರಾಮಲಕ್ಷ್ಮಣರನ್ನು ವಂಚಿಸಿ ರಾವಣನು ಸೀತಾಪಹರಣಕ್ಕೆ ವೇಷಾಂತರದಿಂದ ಬಂದಿರುವುದೂ ಸಂಪಾತಿ, ಜಟಾಯುಗಳ ಸಂಭಾಷಣೆಯಿಂದ ತಿಳಿಯುತ್ತದೆ. (ವಿಷ್ಕಂಭಕ)

ಜಟಾಯುವು ರಾವಣನೊಡನೆ ಕಾದಿ ಮಡಿಯುತ್ತಾನೆ. ರಾಮನ ಪ್ರಲಾಪ. ಕಬಂಧನ ಹಿಡಿತದಿಂದ ಶಬರಿಯನ್ನು ಲಕ್ಷ್ಮಣನು ಕಾಪಾಡಿ ರಾಮನಲ್ಲಿಗೆ ಕರೆತರುತ್ತಾನೆ. ರಾವಣನೊಡನೆ ಜಗಳವಾಡಿ ತನ್ನ ಮಿತ್ರನಾದ ಸುಗ್ರೀವನ ಜತೆಯಲ್ಲಿರುವ ವಿಭೀಷಣನು ರಾಮನಿಗೆ ಸಖ್ಯಯಾಚನೆ ಮಾಡಿ ಬರೆದ ಪತ್ರವನ್ನು ಅವಳು ರಾಮನಿಗಾಗಿ ತಂದಿದ್ದಾಳೆ. ಹನುಮಂತನ ಮಹಿಮೆಯೂ ಅವಳಿಂದ ತಿಳಿಯುತ್ತದೆ. ಇಷ್ಟರಲ್ಲಿ ಅಗ್ನಿಸಂಸ್ಕೃತನಾದ ಕಬಂಧನು ಶಾಪವಿಮೋಚನೆಯಿಂದ ದಿವ್ಯ ಪುರುಷನಾಗಿ ಬಂದು ಮಾಲ್ಯವಂತನು ತನ್ನನ್ನು ರಾಮನ ಪೀಡೆಗಾಗಿಯೇ ಕಳಿಸಿದ್ದನೆಂದೂ, ಮುಂದೆ ವಾಲಿಯನ್ನೂ ಹೀಗೆಯೇ ರಾಮನ ಆಕ್ರಮಣಕ್ಕಾಗಿ ಸಿದ್ಧಗೊಳಿಸಿರುವನೆಂದೂ ತಿಳಿಸುತ್ತಾನೆ. ವಾಲಿಗೂ ರಾವಣನಿಗೂ ಮೊದಲಿನಿಂದಲೂ ಸಖ್ಯವಿದ್ದುದೂ ವಾಲಿಯ ಪ್ರತಾಪವೂ ಶಬರಿಯಿಂದ ತಿಳಿಯುತ್ತದೆ. ರಾಮನು ಪರ್ವತದಂತಿದ್ದ ದುಂದುಭಿಯ ಅಸ್ಥಿಸಂಚಯವನ್ನು ಹೆಬ್ಬೆರಳಿನಿಂದಲೇ ದೂರ ಮಿಡಿಯುತ್ತಾನೆ.

ಶಬರಿಯು ರಾಮ ಲಕ್ಷ್ಮಣರಿಗೆ ದಾರಿ ತೋರಿಸುತ್ತಾ ಋಷ್ಯಮೂಕಕ್ಕೆ ಅವರನ್ನು ಕರೆದುಕೊಂಡು ಬರುತ್ತಾಳೆ. ವಾಲಿಯು ಮಾಲ್ಯವಂತನ ಸೂಚನೆಯಿಂದ ಖಿನ್ನನಾಗಿದ್ದಾನೆ: ರಾವಣನ ಸಖ್ಯವೊಂದು ಕಡೆ; ಮಹಾಪುರುಷನೂ ನಿರ್ದೋಷಿಯೂ ಆದ ರಾಮನನ್ನು ಹಿಂಸಿಸಬೇಕಲ್ಲಾ ಎಂಬ ಕೊರಗೊಂದು ಕಡೆ. (೫ ನೇ ಅಂಕದ ಅರ್ಧ)

ಆದರೂ ಮನಸ್ಸನ್ನು ಗಟ್ಟಿಮಾಡಿಕೊಂಡು ಹೋಗಿ ರಾಮನನ್ನು ಯುದ್ಧಕ್ಕೆ ಕರೆಯುತ್ತಾನೆ. ನಿರಾಯುಧನೊಡನೆ ಯುದ್ಧಮಾಡಲು ರಾಮನಿಗೆ ಇಷ್ಟವಿಲ್ಲದಿದ್ದರೂ ವಾನರ ಜಾತಿಗೆ ಗಿಡಬೆಟ್ಟಗಳೇ ಆಯುಧಗಳೆಂದು ಅವನನ್ನು ಯುದ್ಧಕ್ಕೆ ಒಡಂಬಡಿಸುತ್ತಾನೆ. ಯುದ್ಧದಲ್ಲಿ ವಾಲಿಯು ಬೀಳುತ್ತಾನೆ. ಬಹಳ ಶಾಂತವಾದ ಮನಸ್ಸಿನಿಂದ ವಾಲಿಯು ಸುಗ್ರೀವನಿಗೂ ರಾಮನಿಗೂ ಅಗ್ನಿಸಾಕ್ಷಿಯಾಗಿ ಸ್ನೇಹದ ಒಪ್ಪಂದ ಮಾಡಿಸಿ, ದೈವವು ರಾವಣನಿಗೆ ಪ್ರತಿಕೂಲವೆಂದೂ, ವಿಭೀಷಣನಿಗೆ ರಾಮನ ವಚನದಂತೆ ರಾಜ್ಯಲಾಭವಾಗುವುದು ನಿಶ್ಚಯವೆಂದೂ ಎಲ್ಲರೂ ರಾಮನ ಆಜ್ಞಾಧಾರಕರಾಗಿರಬೇಕೆಂದೂ ನುಡಿದು ಜೀವಬಿಡುತ್ತಾನೆ.(೫ ನೆಯ ಅಂಕ)

ತನ್ನ ತಂತ್ರಗಳೆಲ್ಲ ವಿಫಲವಾಗುತ್ತಿರುವುದನ್ನು ಚಾರರಿಂದರಿತ ಮಾಲ್ಯವಂತನು ಚಿಂತಿಸುತ್ತಿದ್ದಾನೆ. ಆಗಲೆ ಅಕ್ಷ ಕುಮಾರನ ವಧೆಯ ಮತ್ತು ಲಂಕೆಯೇ ಉರಿಯುತ್ತಿರುವ ಸುದ್ದಿಗಳು ಬರುತ್ತವೆ. ಸೀತಾನುರಾಗದಲ್ಲೇ ಇರುವ ರಾವಣನಿಗೆ ಮಂಡೋದರಿ ಮಹಾಪುರುಷನೊಡನೆ ಯುದ್ಧ ಉಚಿತವಲ್ಲವೆಂದು ಬೋಧಿಸುತ್ತಾಳೆ. ರಾವಣನು ಕೇಳದೆ ತನ್ನ ಪ್ರತಾಪವನ್ನು ಕೊಚ್ಚಿಕೊಳ್ಳುತ್ತಾನೆ, ಅಷ್ಟರಲ್ಲಿ ರಾಮನೇ ಬಂದು ಲಂಕೆಯನ್ನು ಮುತ್ತಿರುವ ಸುದ್ದಿಯನ್ನು ಸೇನಾಪತಿಯಾದ ಪ್ರಹಸ್ತ ತರುತ್ತಾನೆ. ರಾಮದೂತನಾದ ಅಂಗದ ಬಂದು ಈಗಲಾದರೂ ಸೀತೆಯನ್ನೊಪ್ಪಿಸಿ ಬದುಕೆಂದು ರಾವಣನಿಗೆ ಔದ್ಧತ್ಯದಿಂದ ಹೇಳಿ ಹೋಗುತ್ತಾನೆ. ರಾವಣನ ಕೋಪ ಮತ್ತೂ ಕೆರಳುತ್ತದೆ. ರಾಮರಾವಣರ ಯುದ್ಧವನ್ನು ನೋಡಲು ಇಂದ್ರಾದಿದೇವತೆಗಳು ಅಂತರಿಕ್ಷದಲ್ಲಿ ನೆರೆಯುತ್ತಾರೆ. ಯುದ್ಧವು ಘೋರವಾಗಿ ನಡೆದು ರಾವಣನು ಮಡಿಯುತ್ತಾನೆ. ದೇವತೆಗಳೂ ಋಷಿಗಳೂ ತೃಪ್ತರಾಗುತ್ತಾರೆ. (೬ ನೆಯ ಅಂಕ)

ಲಂಕಾ ಮತ್ತು ಅಲಕಾ ಪಟ್ಟಣಗಳ ಅಭಿಮಾನಿದೇವಿಯರು ಮಾತನಾಡುತ್ತಾ ವಿಭೀಷಣನಿಗೆ ಅಭಿಷೇಕವಾದುದನ್ನು ಸೂಚಿಸುತ್ತಾರೆ. ರಾಮಾದಿಗಳು ಪುಷ್ಪಕ ವಿಮಾನದಲ್ಲಿ ಸಮುದ್ರ, ಕಾವೇರೀ ನದಿ, ಅಗಸ್ತ್ಯಾಶ್ರಮ, ಕಿಷ್ಕಿಂಧೆ, ದಂಡಕಾರಣ್ಯ, ಸಹ್ಯ, ಕಾಂಚನ, ಗಂಧಮಾದನ ಇತ್ಯಾದಿ ಪರ್ವತಗಳು, ಮುಂತಾದುವನ್ನು ದಾಟಿ ಬರುತ್ತಾರೆ, ದಾರಿಯಲ್ಲೇ ಅಭಿಷೇಕ ಸಾಮಗ್ರಿಗಳೊಡನೆ ಎದುರುಗೊಳ್ಳಲು ಬಂದ ವಸಿಷ್ಠ, ಭರತ, ಕೈಕೆ ಮುಂತಾದವರ ದರ್ಶನವಾಗುತ್ತದೆ, ಕೈಕೆಯ ತಪ್ಪೇನೂ ಇಲ್ಲವೆಂಬುದನ್ನು ಅರುಂಧತಿಯು ಆಕೆಗೆ ವಿವರಿಸುತ್ತಾಳೆ. ರಾಮನು ಅಭಿಷಿಕ್ತನಾಗಿ ಎಲ್ಲರಿಗೂ ಆನಂದವನ್ನುಂಟುಮಾಡುತ್ತಾನೆ. (೭ ನೆಯ ಅಂಕ)


ಕಥಾ-ಸಂವಿಧಾನ

ಈ ನಾಟಕದ ಐದನೆಯ ಅಂಕದ ಅರ್ಧದವರೆಗೆ ಭವಭೂತಿ ಬರೆದನೆಂದು ನಿಶ್ಚಯವುಂಟೇ ಹೊರತು ಉಳಿದುದನ್ನು ಪೂರ್ಣವಾಗಿ ಬರೆದನೋ ಇಲ್ಲವೋ ತಿಳಿಯುವಂತಿಲ್ಲ. ಈಗಂತೂ ಉಪಲಬ್ಧವಿರುವುದು ಅಪೂರ್ಣ ನಾಟಕ. ಬೇರೆ ಬೇರೆ ಕವಿಗಳು ಕಾಲಾಂತರದಲ್ಲಿ ಈ ಅಪೂರ್ಣತೆಯನ್ನು ನಿವಾರಿಸಿದ್ದಾರೆ. ಆದ್ದರಿಂದ ಭವಭೂತಿಯ ಮನಸ್ಸಿನಲ್ಲಿ ಇದ್ದ ನಿರ್ವಹಣಸಂಧಿಯ ಅಂಶ ನಮಗೆ ಊಹಾಮಾತ್ರ ಗೋಚರ. ಆದ್ದರಿಂದ ಕಥಾಸಂವಿಧಾನವನ್ನು ವಿಮರ್ಶಿಸುವ ಕೆಲಸವು ಸ್ವಲ್ಪ ದುಷ್ಕರ.

ರಾಮಾಯಣವನ್ನವಲಂಬಿಸಿ ಬರೆದ ಮೊದಲ ನಾಟಕಕಾರ ಭಾಸ.

ರಾಮಾಯಣವನ್ನವಲಂಬಿಸಿ ಬರೆದ ಮೊದಲ ನಾಟಕಕಾರ ಭಾಸ. ಇವನು ಕೈಕೆಯ ಪಾತ್ರವನ್ನು ಹೊಸದೃಷ್ಟಿಯಿಂದ ನೋಡಿದಂತೆ, ವಾಲಿವಧ ಮುಂತಾದ ಅಂಶಗಳಲ್ಲಿ ರಾಮನು ನಿರ್ದೋಷಿಯೆಂಬುದನ್ನೂ ಸ್ಥಾಪಿಸಲು ಯತ್ನಿಸಿದ್ದನಾದರೂ, ರಾಮಾಯಣದ ಎಲ್ಲ ಘಟನೆಗಳಿಗೂ ನಾಟಕನಿಯತವಾದ ಏಕಸೂತ್ರತೆಯನ್ನು ಸ್ಥಾಪಿಸಲು ಹೋಗಿರಲಿಲ್ಲ. ಅವನ ಅಭಿಷೇಕನಾಟಿಕದಲ್ಲಿ ಈ ಮಾತು ದೃಷ್ಟಾಂತಕ್ಕೆ ಬರುತ್ತದೆ. ಭವಭೂತಿಯು ಭಾಸನು ಮಾಡದ ಈ ಮಹಾಕಾರ್ಯವನ್ನು ಸಾಧಿಸಲು ಮಹಾವೀರಚರಿತದಲ್ಲಿ ಹೊರಟಿದ್ದಾನೆ. ಆದಿಕಾವ್ಯವಾದ ರಾಮಾಯಣದಲ್ಲಿ ರಾಮಲಕ್ಷ್ಮಣರ ವಿದ್ಯಾಭ್ಯಾಸ, ಸೀತಾಸ್ವಯಂವರ, ಪರಶುರಾಮವಿಜಯ, ತಾಟಕಾದಿ ಸಂಹಾರ, ವನಗಮನ, ಸೀತಾಪಹರಣ, ಸುಗ್ರೀವಸಖ್ಯ, ವಾಲಿವಧ ಮುಂತಾದ ವೃತ್ತಾಂತಗಳು ಬೇರೆ ಬೇರೆ ಘಟನೆಗಳಾಗಿ ರಾಮನ ಧೈರ್ಯ, ಶೌರ್ಯ, ಔದಾರ್ಯಾದಿಗುಣಗಳ ಪ್ರಕಟನೆಗೆ ಸಾಧಕವಾಗುವುವೇ ಹೊರತು ಇವುಗಳಿಗೆಲ್ಲ ಒಂದು ನಿಯಮಿತವಾದ ಕಾರ್ಯಕಾರಣಭಾವವಾಗಲಿ, ಒಂದು ನಿಯತ ಸಾಮಂಜಸ್ಯವಾಗಲಿ ಸ್ಪಷ್ಟವಾಗುವುದಿಲ್ಲ.

ಒಬ್ಬ ಮನುಷ್ಯನ ಜೀವನದಲ್ಲಿ ಇವು ಆಕಸ್ಮಿಕ ಘಟನೆಗಳಂತೆ ನಡೆದು ಕವಿಯು ಇವುಗಳನ್ನು ಇತಿಹಾಸಕಾರನಂತೆ ಒಂದಾದ ಮೇಲೊಂದನ್ನು ನಿರೂಪಿಸುತ್ತಾನೆ. ಈ ಘಟನೆಗಳೇ ನಾಟಕಕ್ಕೆ ವಸ್ತುವಾದಾಗ ಅವುಗಳಲ್ಲಿ ಈ ಐತಿಹಾಸಿಕ ಪೂರ್ವಾಪರಸಂಬಂಧದ ಬದಲು, ಬುದ್ಧಿಪೂರ್ವಕವಾಗಿ ನಿಯೋಜಿಸಿದ ಪರಸ್ಪರ ಸಾಮಂಜಸ್ಯವು ಅಥವಾ ಏಕಮುಖತ್ವವು ಮುಖ್ಯವಾಗಿ ಬರಬೇಕಾಗುತ್ತದೆ. ಈ ಘಟನೆಗಳ ಆಕಸ್ಮಿಕತೆ ಅಥವಾ ಪ್ರಾಸಂಗಿಕತೆ ತಪ್ಪಿ, ಎಲ್ಲಕ್ಕೂ ಬುದ್ಧಿಯೋಜಿತ ಸಂಬಂಧವೊದಗಬೇಕಾಗುತ್ತದೆ. ಈ ಸಮನ್ವಯವು ಸಾಧ್ಯವಾಗದಂತಹ ಇತಿಹಾಸದ ಘಟನೆಗಳು ನಾಟಕದಿಂದ ಹೊರಗೇ ಉಳಿಯಬೇಕಾಗುತ್ತದೆ. ಭವಭೂತಿಯು ಈ ದೃಷ್ಟಿಯಿಂದ ರಾಮಾಯಣದ ಪ್ರತ್ಯೇಕ ವೃತ್ತಾಂತಗಳಿಗೆ ನಾಟಕೀಯವಾದ ಸಮನ್ವಯವನ್ನು ಸಾಧಿಸಿರುವನೆನ್ನಬಹುದು. ರಾಮಾಯಣದಲ್ಲಿ ಆಕಸ್ಮಿಕಗಳೆನಿಸುವ ಪರಶುರಾಮ ವೃತ್ತಾಂತ, ಕೈಕೆಯ ವಿಚಿತ್ರ ವರ್ತನೆ, ಅಪಹರಣಪೂರ್ವದಲ್ಲಿ ಸೀತೆಯು ಲಕ್ಷ್ಮಣನನ್ನು ನಿಂದಿಸುವ ಪ್ರಸಂಗ, ಸುಗ್ರೀವಸಖ್ಯ, ವಾಲಿ ನಿಗ್ರಹ ಈ ಎಲ್ಲ ಪ್ರಸಂಗಗಳಿಗೂ ಸಕಾರಣವಾದ ಒಂದು ಹೊಸಬೆಳಕನ್ನು ಭವಭೂತಿಯ ಪ್ರತಿಭೆ ಒದಗಿಸುತ್ತದೆ. ಆದರೆ ಹೀಗೆ ಮಾಡುವಲ್ಲಿ ಭವಭೂತಿಯು ಬಳಸಿರುವ ತಂತ್ರವು ಪ್ರತಿಪಕ್ಷದ ಮಂತ್ರಿಯಾದ ಮಾಲ್ಯವಂತನನ್ನು ನೀತಿ ನೈಪುಣ್ಯದ ಶಿಖರಕ್ಕೇರಿಸುವುದೇ ವಿನಾ ನಾಯಕನ ಔನ್ನತ್ಯಕ್ಕೆ ಪುಷ್ಟಿಯನ್ನೊದಗಿಸುವುದಿಲ್ಲ. ಮುದ್ರಾರಾಕ್ಷಸದಲ್ಲಿ ಚಾಣಕ್ಯನು ಕಥೆಯ ದಾರಗಳನ್ನೆಳೆಯುತ್ತ ನಮ್ಮ ಪ್ರಶಂಸೆಯನ್ನು ಸೆಳೆಯುವಂತೆ ಇಲ್ಲಿ ಮಾಲ್ಯವಂತನು ತನ್ನ ಕುಟಲನೀತಿಯಿಂದ ನಮ್ಮನ್ನು ಬೆರಗು ಮಾಡುತ್ತಾನೆ. ರಾಮಾಯಣದ ಕಥೆಯೇ ಒಂದು ರಾಜನೀತಿಯ ಪ್ರಯೋಗಶಾಲೆಯಾಗಿ ಪರಿಣಮಿಸುತ್ತದೆ. ಆದರೆ ಮಾಲ್ಯವಂತನ ಕುಟಿಲನೀತಿಗೆ ಪ್ರತಿಯಾಗಿ ರಾಮನು ಯಾವ ತಂತ್ರವನ್ನೂ ಮಾಡುವುದಿಲ್ಲ. ತನ್ನ ಧೀರೋದಾತ್ತ ಹಾಗೂ ಸಾತ್ವಿಕ ಸ್ವಭಾವದಿಂದಲೇ ಎಲ್ಲ ವಿಘ್ನಗಳನ್ನೂ ನಿವಾರಿಸುತ್ತಾನೆ. ಆದ್ದರಿಂದ ಮುದ್ರಾರಾಕ್ಷಸದಲ್ಲಿರುವ ಬುದ್ಧಿಘರ್ಷಣದ ಸ್ವಾರಸ್ಯ ಇಲ್ಲಿಲ್ಲ.

ರಸದೃಷ್ಟಿಯಿಂದಲೂ ಈ ಅಂಶವೇ ಸ್ಫುಟತರವಾಗುತ್ತದೆ. ಮಹಾವೀರಚರಿತದ ಮುಖ್ಯರಸ ವೀರ; ಅದಕ್ಕೆ ಪೋಷಕವಾದುದು ಅದ್ಭುತ. ರಾಮನ ಚರಿತವು “ಅಸ್ತೋಕ ವೀರಗುರುಸಾಹಸಮದ್ಭುತಂ ಚ” ಎಂದು ಭವಭೂತಿಯೇ ಹೇಳಿದ್ದಾನೆ. ನಾಯಕನ ಅನೇಕ ವೀರಕಾರ್ಯಗಳಿಗೆ ಪ್ರತಿಪಕ್ಷದವರು ಸಂಧಿಯನ್ನೊದಗಿಸಿಬಿಟ್ಟರೆ ವೀರರಸವು ಪರಿಪುಷ್ಟವಾದಂತಾಯಿತೆಂದು ಭವಭೂತಿಯು ಭ್ರಮಿಸಿದಂತಿದೆ. ನಾಯಕನ ಪ್ರೇಮಕ್ಕೆ ಒಂದೆರಡು ಆಶ್ರಯಗಳ ಬದಲು ನೂರೆಂಟು ಸ್ತ್ರೀಯರ ಅನುರಾಗಪ್ರಸಂಗವನ್ನು ಕಲ್ಪಿಸಿದರೆ ಶೃಂಗಾರವು ಹೇಗೆ ಪರಿಪುಷ್ಟವಾಗಲಾರದೋ ಹಾಗೆಯೇ ರಾಮನ ವೀರರಸಪ್ರತಿಪಾದನೆಗೆ ಪರಿಪುಷ್ಟಿ ಬರಬೇಕಾಗಿದ್ದರೆ ಒಬ್ಬ ಪ್ರತಿನಾಯಕನೊಡನೆ ನಾಯಕನ ಘರ್ಷಣೆಯು ಮೊದಲಿನಿಂದ ಕಡೆಯವರಿಗೂ ಅನುಸ್ಯೂತವಾಗಿರಬೇಕಾಗಿದ್ದಿತು; ಪರಶುರಾಮ, ತಾಟಕೆ, ವಾಲಿ, ಕಬಂಧ– ಎಲ್ಲರನ್ನೂ ರಾಮ ನಿಗ್ರಹಿಸಿದನೆಂದು ತೋರಿಸುವುದರಿಂದಾಗುವುದಿಲ್ಲ. ವೇಣೀಸಂಹಾರವು ಇದಕ್ಕಿಂತ ಉತ್ತಮ ನಾಟಕವಾಗಿರುವುದು ಈ ಕಾರಣಕ್ಕಾಗಿ. ಭಾಸನ ಪ್ರತಿಮಾನಾಟಕವು ಗಾತ್ರದಲ್ಲಿ ಸಣ್ಣದಾದರೂ ಶ್ಲಾಘ್ಯವಾಗಿರುವುದೂ ಈ ಕಾರಣಕ್ಕಾಗಿಯೇ, ಹೀಗೆ ಕಥಾವಸ್ತುವಿನ ಆತ್ಮವಾದ ಘರ್ಷಣೆಯಲ್ಲಿ ಲೋಪಗಳು ಕಾಣುತ್ತಿದ್ದರೂ ಇದಕ್ಕೊಂದು ಬಗೆಯಲ್ಲಿ ಉಪಪತ್ತಿ ಹೇಳಬಹುದು: “ಘರ್ಷಣೆಯು ಸಾರ್ವಕಾಲಿಕವಾದ ಧರ್ಮ-ಅಧರ್ಮಗಳಿಗೆ. ಅಧರ್ಮದ ಪ್ರಭಾವ ಪ್ರಕಾರಗಳು ಅನೇಕ ಮತ್ತು ಅಗಾಧ. ಧರ್ಮದ ಸ್ವರೂಪವಾದರೋ ಎಂದಿಗೂ ಒಂದೇ. ಎಂತಹ ಅಧರ್ಮವೂ ಧರ್ಮದ ಮುಂದೆ ನಿಲ್ಲಲಾರದು. ಧರ್ಮದ ಗಹನಗತಿಯನ್ನು ನಿರೂಪಿಸುವುದು ಅಧರ್ಮದ ಗಹನಗತಿಯನ್ನು ನಿರೂಪಿಸುವಷ್ಟು ಚಮತ್ಕಾರಕವಲ್ಲ “ಎಂದು. ಆದರೂ ಭವಭೂತಿಯು ನಾಟಕಲಕ್ಷಣಜ್ಞನಾಗಿ ಈ ಕಥೆಯನ್ನು ಬರಿದಿರುವನೆನ್ನಬಹುದೇ ಹೊರತು ನಾಟಕರಸಜ್ಞನಾಗಿ ಬರಿದನೆನ್ನುವಂತಿಲ್ಲ.

Leave a Reply

Your email address will not be published. Required fields are marked *