ಭೀಮ ಮತ್ತು ಘಟೋತ್ಕಚರ ಮಲ್ಲಯುದ್ಧದ ಕತೆ
ಸಾವಿರಾರು ವರ್ಷಗಳ ಹಿಂದೆ ಭಾಸನೆಂಬ ಕವಿ ಸಂಸ್ಕೃತ ಭಾಷೆಯಲ್ಲಿ ಹದಿಮೂರು ನಾಟಕಗಳನ್ನು ಬರೆದನು. ಅವುಗಳಲ್ಲಿ ಮಹಾಭಾರತದ ಕಥೆಗೆ ಸಂಬಂಧಪಟ್ಟ ಐದು ಏಕಾಂಕ ನಾಟಕಗಳನ್ನು ಶ್ರೀ ಎಲ್. ಗುಂಡಪ್ಪನವರು “ಭಾಸನ ಏಕಾಂಕ ನಾಟಕಗಳು“ ಎಂದು ಹದಿನೈದು ವರುಷದ ಹಿಂದೆ ಕನ್ನಡಕ್ಕೆ ಅನುವಾದಮಾಡಿದರು.
ಈ ನಾಟಕಗಳನ್ನು ಕನ್ನಡದ ಇನ್ನೊಬ್ಬ ಪ್ರಸಿದ್ಧ ಸಾಹಿತಿ ಜಿ.ಪಿ. ರಾಜರತ್ನಂ ರವರು ಕಥಾರೂಪದಲ್ಲಿ ರಚಿಸಿದ “ಭಾಸನ ಭಾರತ” ಪುಸ್ತಕದಿಂದ ಆರಿಸಿದ “ಮಧ್ಯಮ ವ್ಯಾಯೋಗದ ಕಥೆ” ಎಂಬ ಕತೆಯಿದು.

ಹಿಂದೆ ಚಂದ್ರವಂಶದ ದುರ್ಯೋಧನನು ತನ್ನ ಸೋದರಮಾವನಾದ ಶಕುನಿಯ ಪ್ರೇರಣೆಯಿಂದ ದಾಯಾದಿಯಾದ ಧರ್ಮರಾಯನೊಡನೆ ಕಪಟದ್ಯೂತವನ್ನು ಆಡಿ, ಅವನ ರಾಜ್ಯಕೋಶಗಳನ್ನೂ ತಮ್ಮಂದಿರನ್ನೂ ಹೆಂಡತಿಯನ್ನೂ ಗೆದ್ದು, ಅವರಿಗೆ ಹನ್ನೆರಡು ವರುಷಕಾಲ ವನವಾಸವನ್ನೂ ಒಂದು ವರುಷಕಾಲ ಅಜ್ಞಾತವಾಸವನ್ನೂ ವಿಧಿಸಿದನು. ಅದರಂತೆ ಪಾಂಡವರು ತಮ್ಮ ಪತ್ನಿಯಾದ ದ್ರೌಪದಿಯೊಡನೆ ಕಾಡಿಗೆ ಬಂದು, ಅಲ್ಲಿ ವಾಸಮಾಡತೊಡಗಿದರು.
ಒಂದುಸಲ ಅದೇ ಕಾಡಿನಲ್ಲಿದ್ದ ಧೌಮ್ಯ ಮಹರ್ಷಿಗಳು ಶತಕುಂಭವೆಂಬ ಯಜ್ಞವನ್ನು ನಡಸುತ್ತಾರೆಂಬುದನ್ನು ಕೇಳಿ ಧರ್ಮರಾಯನು ಆ ಯಜ್ಞವನ್ನು ನೋಡಬೇಕೆಂಬ ಅಭಿಲಾಷೆಯಿಂದ ದ್ರೌಪದಿಯೊಡನೆ ಅಲ್ಲಿಗೆ ಹೋದನು. ಅರ್ಜುನ, ನಕುಲ, ಸಹದೇವರುಗಳು ತಾವೂ ಅಣ್ಣನ ಹಿಂದೆ ಹೋದರು. ಭೀಮನನ್ನು ಮಾತ್ರ ಆಶ್ರಮದ ರಕ್ಷಣೆಗಾಗಿ ಅಲ್ಲಿಯೇ ನಿಲ್ಲಿಸಿದರು. ಅವನಾದರೂ ಮುಂದೆ ವನವಾಸ ಅಜ್ಞಾತವಾಸಗಳು ಮುಗಿದಮೇಲೆ ನಡೆಸಬೇಕಾದ ಕೌರವರ ಯಜ್ಞವನ್ನು ಪೂರೈಸಲು ಬೇಕಾಗುವ ಶಕ್ತಿಯನ್ನು ಸಂಗ್ರಹಿಸುಪುದಕ್ಕಾ ಗಿ ವ್ಯಾಯಾಮ ಮಾಡುತ್ತ ಅಲ್ಲಿಯೇ ನಿಂತನು.
ಹೀಗೆ ಪಾಂಡವರು ತಮ್ಮ ಆಶ್ರಮವನ್ನು ಬಿಟ್ಟು ದೂರದ ಧೌಮ್ಯಾಶ್ರಮಕ್ಕೆ ಹೋಗಿದ್ದ ಕಾಲದಲ್ಲಿ, ಕೇಶವದಾಸನೆಂಬ ಬ್ರಾಹ್ಮಣನು ತನ್ನ ಹೆಂಡತಿಯನ್ನೂ, ಮೂವರು ಮಕ್ಕಳನ್ನೂ ಕರೆದುಕೊಂಡು ಆ ಪಾಂಡವಾಶ್ರಮದ ಮಾರ್ಗವಾಗಿ ಹೋಗುತ್ತಿದ್ದನು. ಆತನು ಯುಧಿಷ್ಠಿರನು ದ್ಯೂತವಾಡುವುದಕ್ಕೆ ಮೊದಲು ಆಳುತ್ತಿದ್ದ ಕುರು ಜಾಂಗಲ ದೇಶದ ಯೂಪಗ್ರಾಮದ ನಿವಾಸಿ; ಮಾಠರಸಗೋತ್ರದ ಕಲ್ಪಶಾಖೆಯ ಅಧ್ವರ್ಯುವಾದ ಬ್ರಾಹ್ಮಣ. ಆ ದಿವಸ ಉತ್ತರ ಆತನು ದಿಕ್ಕಿನ ಉದ್ಯಾಮಕ ಗ್ರಾಮದಲ್ಲಿ ವಾಸಮಾಡುತ್ತಿದ್ದ ಕೌಶಿಕಸಗೋತ್ರದ ಯಜ್ಞಬಂಧುವೆಂಬ ತನ್ನ ಸೋದರಮಾವನ ಮಗನ ಉಪನಯನವನ್ನು ನೋಡುವುದಕ್ಕಾಗಿ ಹೆಂಹತಿ ಮಕ್ಕಳೊಡನೆ ಹೊರಟಿದ್ದನು. ಮಾರ್ಗದಲ್ಲಿ ಜಲಕ್ಲಿನ್ನರೆಂಬ ಮುನಿಗಳು ಅವನನ್ನು ಕುರಿತು ‘ಈ ಅರಣ್ಯದಲ್ಲಿ ರಾಕ್ಷಸರಿದ್ದಾರೆ, ಆದುದರಿಂದ ಜೋಪಾನವಾಗಿ ದಾರಿ ನೋಡಿಕೊಂಡು ಹೋಗಿ’ ಎಂದು ಎಚ್ಚರಿಸಿ ಕಳುಹಿಸಿದ್ದರು
ಅದೇ ಅರಣ್ಯದಲ್ಲಿ ಹಿಡಿಂಬಾದೇವಿ ವಾಸವಾಗಿದ್ದಳು. ಹಿಂದೆ ಪಾಂಡವರು ಅರಗಿನ ಮನೆಯಲ್ಲಿ ಉರಿದುಹೋಗದೆ ಉಳಿದುಕೊಂಡು ಅರಣ್ಯವನ್ನು ಹೊಕ್ಕಾಗ ಈಕೆ ತನ್ನ ಅಣ್ಣನಾದ ಹಿಡಿಂಬನ ಮಾತಿನ ಪ್ರಕಾರ ಪಾಂಡವರನ್ನು ಕೊಂದು ತಿನ್ನಲು ಬಂದು, ಭೀಮನ ರೂಪಿಗೆ ಮನಸ್ಸು ಸೋತು ಕಡೆಗೆ ಅವನನ್ನೇ ಮದುವೆಯಾಗಿ ಘಟೋತ್ಕಚನೆಂಬ ಮಗನನ್ನು ಪಡೆದಳು. ಅನಂತರ ಪಾಂಡವಾದಿಗಳು ಹಿಡಿಂಬೆಯನ್ನು ಹಿಡಿಂಬವನದಲ್ಲೇ ಬಿಟ್ಟು, ಮುಂದೆ ಏಕಚಕ್ರ ನಗರಕ್ಕೆ ಹೋಗಿ ದ್ರೌಪದಿಯನ್ನು ಮತ್ಸ್ಯಯಂತ್ರ ಪರೀಕ್ಷೆಯಲ್ಲಿ ಸಂಪಾದಿಸಿಕೊಂಡು ಹಸ್ತಿನಾಪುರಕ್ಕೆ ಹಿಂದಿರುಗಿ, ತಂದೆಯ ರಾಜ್ಯದಲ್ಲಿ ಸುಖವಾಗಿದ್ದರು. ಇದಾದ ಸ್ವಲ್ಪಕಾಲದಲ್ಲಿಯೇ ಅವರು ಕಪಟದ್ಯೂತದಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ಪುನಃ ಕಾಡುಪಾಲಾದದ್ದು.
ಹೀಗೆ ಅನೇಕಕಾಲ ಕಳೆದಮೇಲೆ ಮತ್ತೆ ಕಾಡಿಗೆ ಬಂದ ಭೀಮಸೇನನನ್ನು ಕಾಣಬೇಕೆಂದು ಹಿಡಿಂಬೆಗೆ ಆಸೆಯಾಯಿತು. ಆದರೆ ಹೆಣ್ಣಾದ ತಾನೇ ಗಂಡನ್ನು ಅರಸಿಕೊಂಡು ಹೋಗಲು ಲಜ್ಜೆಪಟ್ಟು, ಹಿಡಿಂಬೆಯು ಆ ದಿವಸ ಭೀಮನು ಹೊರತಾಗಿ ಉಳಿದ ಪಾಂಡವರು ಆಶ್ರಮದಲ್ಲಿ ಇಲ್ಲದುದನ್ನೂ ಮುದಿ ಬ್ರಾಹ್ಮಣನೊಬ್ಬನು ಹೆಂಡತಿ ಮಕ್ಕಳೊಡನೆ ಆ ಮಾರ್ಗವಾಗಿ ಪ್ರಯಾಣಮಾಡುತ್ತಿದ್ದುದನ್ನೂ ತಿಳಿದು ಭೀಮನನ್ನು ಕರೆಸುವುದಕ್ಕೆ ಒಂದು ಉಪಾಯವನ್ನು ಚಿಂತಿಸಿದಳು. ತನ್ನ ಮಗನಾದ ಘಟೋತ್ಕಚನನ್ನು ಕರೆದು, ‘ಮಗು, ನನ್ನ ಉಪವಾಸ ಮುಗಿದಮೇಲೆ ಪಾರಣೆಗೋಸ್ಕರ ಆಹಾರ ಬೇಕಾಗಿದೆ. ಆದಕಾರಣ ಈ ಅರಣ್ಯದಲ್ಲಿ ಯಾವನಾದರೂ ಮನುಷ್ಯನನ್ನು ಹುಡುಕಿ ಹಿಡಿದುಕೊಂಡು ಬಾ” ಎಂದು ಆಜ್ಞೆಮಾಡಿದಳು. ತಾಯಿಯ ಮಾತನ್ನು ಶಿರಸಾವಹಿಸಿ, ಘಟೋತ್ಕಚನು ಮನುಷ್ಯನನ್ನು ಹುಡುಕುತ್ತಾ ಆ ಅರಣ್ಯದಲ್ಲಿ ಸಂಚರಿಸುತ್ತಿದ್ದನು.
ಹೀಗೆ ಸಂಚರಿಸುತ್ತಿದ್ದ ಘಟೋತ್ಕಚನ ಕಣ್ಣಿಗೆ ಕೇಶವದಾಸನೂ ಅವನ ಹೆಂಡತಿ ಮಕ್ಕಳೂ ಕಾಣಿಸಿಕೊಂಡ ಕೂಡಲೇ ಆ ರಾಕ್ಷಸನು ಅವರ ಬೆನ್ನಟ್ಟಿ ಬಂದನು. ಕೆಂಪು ಬಣ್ಣದ ಕೂದಲನ್ನು ಕೆದರಿಕೊಂಡು, ಹುಬ್ಬುಗಂಟಿಕ್ಕಿ, ದೊಡ್ಡ ಕೆಂಗಣ್ಣುಗಳನ್ನು ಬಿರಬಿರನೆ ತಿರುಗಿಸುತ್ತ ಪ್ರಳಯಕಾಲದ ಸಂಹಾರರುದ್ರನ ಹಾಗೆ ಬಂದನು. ಮಳೆಗಾಲದ ಕರಿಯ ಮೋಡದ ಹಾಗಿದ್ದ ಅವನ ದೇಹದಲ್ಲಿ ಕಂಠಸೂತ್ರ ಮಿಂಚಿನ ಹಾಗೆ ಮಿನುಗುತ್ತಿತ್ತು. ಆ ಬೆಳೆದು ಉಬ್ಬಿ ಹರಡಿದ ಎದೆ, ಸೊಂಡಿಲಿಗೆ ಸಮನಾದ ಆ ತೋಳು, ಆನೆಯ ಕೊಂಬಿನಂತಹ ಕೋರೆ, ನೇಗಿಲಿನ ಆಕಾರದ ನಾಸಿಕ, ಆ ಕೆಂಬಣ್ಣದ ಕೂದಲು, ಉಟ್ಟ ಪಟ್ಟೆ ಪೀತಾಂಬರ ಎಲ್ಲವನ್ನೂ ನೋಡಿದರೆ ತ್ರಿಪುರಸಂಹಾರ ಕಾಲದಲ್ಲಿ ರುದ್ರನಾದ ಶಂಕರನ ರೂಪವನ್ನು ನೋಡಿದಂತೆ ಭಯವುಂಬಾಗುತ್ತಿತ್ತು. ಕತ್ತಲೆಯ ಮೊತ್ತವನ್ನು ಕಟ್ಟಿಟ್ಟ ನೀಲಮೇಘದ ವರ್ಣದಿಂದ ರಂಜಿಸುತ್ತಿದ್ದ ಅವನ ಮೈ ಹೋಮಕುಂಡದಲ್ಲಿ ಅಗ್ನಿ ಆಹುತಿಯನ್ನು ಕೊಂಡು ಉರಿಯುವ ಹಾಗೆ ಹೊಳೆಯುತ್ತಿತ್ತು. ಆ ಕಪ್ಪುಬಣ್ಣದ ಮುಖದಲ್ಲಿ ಮೇಲೆದ್ದ ಬೆಳ್ಳನೆಯ ಕೋರ ಹೊಸ ಮೋಡವು ಮುಸುಕಿ ಮರೆಮಾಡತೊಡಗಿರುವ ಚಂದ್ರರೇಖೆಯಂತೆ ಪ್ರಕಾಶಿಸುತ್ತಿತ್ತು.
ಇಂತಹ ಭೀಕರಾಕಾರನಾದ ಆ ಘಟೋತ್ಕಚನನ್ನು ಕೇಶವದಾಸನು ಕಂಡು, ಹೆಂಡತಿ ಮಕ್ಕಳಿಗಾಗಿ ಬಹಳ ಕಳವಳಗೊಂಡನು. ಹುಲಿಯು ಹಿಂದೆ ಬರುವುದನ್ನು ಕಂಡ ಹಿರಿಯ ಗೂಳಿ ಹೆದರಿ ನಡುಗುವ ಕರುಗಳನ್ನೂ ಹಸುವನ್ನೂ ಜೊತೆಗೆ ಕರೆದುಕೊಂಡು ಹೋಗುವಂತೆ ಕೇಶನದಾಸನು ಘಟೋತ್ಕಚನ ಕೈಯಿಂದ ಪಾರಾಗಲು ಮುಂದೆ ಮುಂದೆ ಹೋದನು. ಆದರೆ ಪರ್ವತಗಳನ್ನು ಪೀಡಿಸಿದ ವಜ್ರಾಯುಧದಂತೆ ಹಕ್ಕಿಗಳನ್ನು ಬೆನ್ನಟ್ಟುವ ಗಿಡುಗನಂತೆ, ಜಿಂಕೆಗಳ ಮೇಲೆ ಎರಗುವ ಸಿಂಹದಂತೆ, ರಾಕ್ಷಸರೂಪಿನ ಮೃತ್ಯುವಿನಂತೆ ಹಿಂಬಾಲಿಸಿ ಬರುತ್ತಿದ್ದ ಆ ಘಟೋತ್ಕಚನಿಂದ ತಪ್ಪಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ.
ಆಗ, ಆ ವೇಳೆಗಾಗಲೇ ದಣಿದು ಬಳಲಿಹೋಗಿದ್ದ ಕೇಶವದಾಸನನ್ನೂ ಅವನ ಹೆಂಡತಿ ಮಕ್ಕಳನ್ನೂ ಘಟೋತ್ಕಚನು ತಡೆದು, ‘ನಿಲ್ಲು, ನಿಲ್ಲು, ಬ್ರಾಹ್ಮಣ. ಹೆಂಡತಿಯೊಡನೆ ಹೋಗುತ್ತಿರುವ ಹಾವು ಬೆನ್ನಟ್ಟಿ ಬರುವ ಗರುಡನ ರೆಕ್ಕೆಯ ತುದಿಯ ಗಾಳಿಗೇ ಹೆದರಿ ದಿಕ್ಕು ಕಾಣದೆ ಓಡುತ್ತದೆ. ಅದು ಹಾಗೆ ಓಡಿದಷ್ಟೂ, ಗರುಡನಿಗೆ ಹಾರಿ ಹಾರಿ ರೋಷ ಹೆಚ್ಚಿ ಹಬ್ಬುತ್ತದೆ. ಅದರ ಹಾಗೆಯೇ ನನ್ನನ್ನು ಕಂಡು ಹೆದರಿ, ಧೈರ್ಯಗೆಟ್ಟು, ಏಕೆ ಹೀಗೆ ಓಡುವೆ? ಭಯಪಟ್ಟು ಹೆದರಿ ನಡುಗುತ್ತಿರುವ ಹೆಂಡತಿ ಮಕ್ಕಳನ್ನು ಕಾಪಾಡುವುದಕ್ಕೆ ಶಕ್ತಿಯಿಲ್ಲದ ನೀನು ಏಕೆ ಹೀಗೆ ಓಡುತ್ತಿರುವೆ?’ ಎಂದನು.
ಅವನ ಮಾತನ್ನು ಕೇಳಿ ವೃದ್ಧ ಬ್ರಾಹ್ಮಣನಿಗೆ ಸ್ವಲ್ಪ ಧೈರ್ಯ ಬಂದಿತು. ಆಗ ಅವನು ‘ಈ ರಾಕ್ಷಸನು ದುಡುಕುವವನಲ್ಲ. ನಿದಾನಿಸಿ ವಿಚಾರಮಾಡಿ ಮಾತನಾಡುತ್ತಿದ್ದಾನೆ. ಆದಕಾರಣ ಹೆದರಬೇಡಿ’ ಎಂದು ಹೇಳಿ, ಹೆಂಡತಿಯನ್ನೂ ಮಕ್ಕಳನ್ನೂ ಸಮಾಧಾನಪಡಿಸಿದನು.
ಘಟೋತ್ಕಚನಿಗಾದರೂ ಆ ಬ್ರಾಹ್ಮಣನನ್ನು ಪೀಡಿಸುವುದು ಮನಸ್ಸಿಗೆ ಅಷ್ಟು ಇಷ್ಟವಾಗಿರಲಿಲ್ಲ. ಸದಾಕಾಲದಲ್ಲೂ ಸರ್ವದೇಶದಲ್ಲೂ ಭೂಸುರೋತ್ತಮರು ಪೂಜಾರ್ಹರೆಂದು ಅವನಿಗೆ ಗೊತ್ತು. ಆದರೆ ‘ಯಾವನಾದರೂ ಮನುಷ್ಯನನ್ನು ಹಿಡಿದು ತಾ’ ಎಂಬ ತಾಯಿಯ ಆಜ್ಞೆಯನ್ನು ಪಾಲಿಸುವುದಕ್ಕಾಗಿ ತಾನು ಇಂತಹ ಅಕಾರ್ಯವನ್ನು ಮಾಡುತ್ತಿರುವೆನೆಂದು ಘಟೋತ್ಕಚನು ತಾನೂ ಮನಸ್ಸಿನಲ್ಲೇ ನೊಂದನು.
ಇತ್ತ, ಮುಂದೆ ಏನುಮಾಡಬೇಕೋ ತಿಳಿಯದೆ ಎಲ್ಲರೂ ದಿಕ್ಕುಗೆಟ್ಟು ನಿಂತಿರುವಾಗ ‘ಸಹಾಯಕ್ಕೆ ಯಾರನ್ನಾದರೂ ಕೂಗಿಕೊಳ್ಳೋಣವೆ?’ ಎಂದು ಕೇಶವದಾಸನ ಹೆಂಡತಿಗೆ ತೋಚಿತು. ಆದರೆ ‘ಸುತ್ತಲೂ ದಿಕ್ಕುದಾರಿಗಳಿಗೆ ಅಡ್ಡವಾಗಿ ಬೆಟ್ಟಗಳು ಕೋಟೆ ಕಟ್ಟಿರುವ ಈ ಕಗ್ಗತ್ತಲೆಯ ಕಾಡಿನಲ್ಲಿ ಯಾರು ಇದ್ದಾರು? ಇಲ್ಲಿ ತುಂಬಿರುವ ಮೃಗಪಕ್ಷಿಗಳು ನಮಗೆ ಏನು ರಕ್ಷಣೆ ಕೊಟ್ಟಾವು? ಇಂತಹ ಕಡೆ ವನವಾಸಿಗಳು ಹೊರತು ಬೇರೆ ಯಾರು ಇದ್ದಾರು?’ ಎಂದು ಮೊದಲನೆಯ ಮಗ ಹೇಳಿದನು.
‘ವನವಾಸಿ’ಗಳೆಂಬ ಶಬ್ದವನ್ನು ಕೇಳಿದ ಕೂಡಲೆ ಕೇಶವದಾಸನಿಗೆ ವನವಾಸಕ್ಕಾಗಿಯೇ ಕಾಡಿಗೆ ಬಂದ ಪಾಂಡವರ ಜ್ಞಾಪಕವಾಯಿತು. ‘ಪಾಂಡವರಿಗೆ ಯುದ್ಧವೆಂದರೆ ಇಷ್ಟ. ಶರಣರನ್ನು ಪ್ರೀತಿಸಿ, ದೀನರಲ್ಲಿ ದಯೆಯಿಟ್ಟು, ಅವರನ್ನು ಕಾಪಾಡುವುದಕ್ಕಾಗಿ ಅವರು ತಮ್ಮ ಸಾಹಸವನ್ನು ವಿನಿಯೋಗಿಸುವರು. ಭಯಂಕರವಾದ ಆಕಾರದಿಂದ ಬಂದು ಕ್ರೂರಕೃತ್ಯಗಳನ್ನು ಮಾಡುವ ಇಂತಹ ದುಷ್ಟರಿಗೆ ಯಾವ ಶಿಕ್ಷೆ ಯೋಗ್ಯವೋ ಅದನ್ನು ತಿಳಿದು ವಿಧಿಸಲು ಅವರು ಸಮರ್ಥರು’ ಎಂದು ಆಗ ಅವನಿಗೆ ಧೈರ್ಯ ಬಂತು. ಆದರೆ ಪಾಂಡವರು ಆ ಕಾಲದಲ್ಲಿ ಅಲ್ಲಿ ಇಲ್ಲದುದನ್ನೂ, ಭೀಮನು ಬಬ್ಬನು ಇದ್ದರೂ ಅವನು ವ್ಯಾಯಾಮಕ್ಕಾಗಿ ದೂರ ಪ್ರದೇಶಕ್ಕೆ ಹೋಗಿರುತ್ತಾನೆಂಬುದನ್ನೂ ಮೊದಲ ಮಗನು ತಿಳಿಸಿದಾಗ ಮುದುಕನಿಗೆ ಎದ್ದ ಆಸೆ ಬಿದ್ದುಹೋಯಿತು.
ಆಗ ಮುಂದೇನು ಮಾಡಬೇಕೋ ತಿಳಿಯದೆ ಆ ಮುದುಕನು ‘ನಮ್ಮ ಗತಿಯೇನು?’ ಎಂದು ಘಟೋತ್ಕಚನನ್ನೇ ಕೇಳಿದಾಗ ಅವನು ‘ನಮ್ಮ ತಾಯಿಯ ಆಜ್ಞೆಯಂತೆ ನಾನು ಯಾರಾದರೊಬ್ಬರನ್ನು ಹಿಡಿದುಕೊಂಡು ಹೋಗಬೇಕು. ಆದ್ದರಿಂದ, ನಿನಗೂ ನಿನ್ನ ಹೆಂಡತಿಗೂ ಉಳಿದುಕೊಳ್ಳುವ ಆಸೆಯಿದ್ದರೆ, ಇರುವ ಮೂವರು ಮಕ್ಕಳಲ್ಲಿ ಇಬ್ಬರನ್ನು ಉಳಿಸಿಕೊಳ್ಳುವ ಇಷ್ಟವಿದ್ದರೆ, ನೀನೇ ಇದರ ಗುಣದೋಷಗಳನ್ನು ತೂಗಿ ನೋಡಿ, ಒಬ್ಬನನ್ನು ಕೊಟ್ಟು ಕಳುಹು’ ಎಂದನು.
ಆ ಮಾತು ಕೇಳಿ ಕೇಶವದಾಸನಿಗೂ ಸಹನೆ ತಪ್ಪಿತು. ‘ಎಲಾ ನೀಚ! ಶಾಸ್ತ್ರಗಳನ್ನು ಬಲ್ಲ ನಾನು, ವಯಸ್ಸು ಆಗಿ ಮುದಿಯಾದ ನಾನು ಇಂಥ ಗುಣಾಢ್ಯರಾದ ಮಕ್ಕಳಲ್ಲಿ ಒಬ್ಬನನ್ನು ಮನುಷ್ಯಮಾಂಸವನ್ನು ತಿನ್ನುವ ರಾಕ್ಷಸನಿಗೆ ಒಪ್ಪಿಸಿದರೆ ನನಗೆ ಸುಖ ಹೇಗೆ ಸಿಕ್ಕೀತು ಎಂದನು.
ಅದಕ್ಕೆ ಘಟೋತ್ಕಚನು ವಿನಯದಿಂದಲೇ ‘ಅಯ್ಯಾ ಬ್ರಾಹ್ಮಣ, ಬೇಡಿಕೊಂಡಾಗ ಒಬ್ಬ ಮಗನನ್ನು ನೀನಾಗಿಯೇ ಕೊಡದೆಹೋದರೆ ನೀನೂ ನಿನ್ನ ಹೆಂಡತಿ ಮಕ್ಕಳೂ ಇಷ್ಟರಲ್ಲೇ ನಾಶವಾಗುವುದು ಖಂಡಿತ’ ಎಂದನು.
ಆಗ ‘ಹೇಗಿದ್ದರೂ ಒಂದು ಮನುಷ್ಯದೇಹವನ್ನು ಇವನಿಗೆ ಒಪ್ಪಿಸಿದ ಹೊರತು ಉಳಿದವರು ಪಾರಾಗುವಂತಿಲ್ಲ’ ಎಂದು ಕೇಶವದಾಸನು ‘ಈ ನನ್ನ ಮುದಿಯಾದ ದೇಹ ಕರ್ತವ್ಯಗಳನ್ನೆಲ್ಲಾ ಮಾಡಿ ಮುಗಿಸಿದೆ. ಇನ್ನುಹೆಚ್ಚು ದಿನ ಇದ್ದು ಏನಾಗಬೇಕು? ನನ್ನ ಮಕ್ಕಳನ್ನು ಉಳಿಸುವುದಕ್ಕಾಗಿ ಈ ರಾಕ್ಷಸನೆಂಬ ಅಗ್ನಿಗೆ ನನ್ನ ಶರೀರವನ್ನೇ ಹೋಮವಾಗಿ ಅರ್ಪಿಸುತ್ತೇನೆ’ ಎಂದು ನಿಶ್ಚೈಸಿ ನುಡಿದನು.
ಅದಕ್ಕೆ ಅವನ ಹೆಂಡತಿ ‘ಆರ್ಯ, ಅದು ಸರಿಯಲ್ಲ. ಪತಿವ್ರತೆಗೆ ಪತಿಯೇ ಸರ್ವಸ್ವ. ಮಕ್ಕಳನ್ನೂ ಈ ನನ್ನ ಪತಿಯನ್ನೂ ನನ್ನ ವಂಶದ ಕಾಪಾಡುವುದಕ್ಕಾಗಿ ನಾನು ಈ ರಾಕ್ಷಸನಿಗೆ ನನ್ನ ಶರೀರವನ್ನು ತ್ಯಾಗಮಾಡುತ್ತೇನೆ” ಎಂದಳು.
ಅವರಿಬ್ಬರ ಮಾತನ್ನು ಕೇಳಿ ಘಟೋತ್ಕಚನು “ನಿಮ್ಮಿಬ್ಬರನ್ನೂ ನಾನೊಲ್ಲೆ. ನಮ್ಮ ತಾಯಿ ಹೆಂಗಸನ್ನು ತಿನ್ನುವುದಿಲ್ಲ. ನೀನು ಮುದುಕ್ಕ ನಿನ್ನ ಮೈಯಲ್ಲಿ ಮಾಂಸನಿಲ್ಲ. ಮಕ್ಕಳು ಮೂವರಲ್ಲಿ ಯಾರನ್ನಾದರೂ ಬೇಗ ಕೊಟ್ಟು ಕಳುಹು’ ಎಂದನು.
ಆಗ ತಾಯಿತಂದೆಯರ ಪ್ರಾಣಗಳನ್ನು ಉಳಿಸಲು ತಾನು ರಾಕ್ಷಸನೊಡನೆ ಹೋಗುವೆನೆಂದು ಮೊದಲನೆಯ ಮಗನು ಮುಂದೆ ಬಂದನು. ಆದಕ್ಕೆ ವಂಶಕ್ಕೆ ಹಿರಿಯನಾದವನು ಪಿತೃಗಳಿಗೆ ಪ್ರಿಯನಾದ ಕಾರಣದಿಂದ, ಅವನ ಬದಲು ಎರಡನೆಯವನು ಮುಂದೆ ಬಂದನು. ತಾನು ಹೋಗುನೆನೆಂದು ಅದಕ್ಕೆ ಮೂರನೆಯವನು ‘ಹಿರಿಯಣ್ಣನಾದವನು ತಂದೆಗೆ ಸಮಾನನೆಂದು ಜ್ಞಾನಿಗಳು ಹೇಳುತ್ತಾರೆ, ಆದ್ದರಿಂದ ಹಿರಿಯವರ ಪ್ರಾಣಗಳನ್ನು ರಕ್ಷಿಸಲು ನಾನು ರಾಕ್ಷಸನಿಗೆ ಯೋಗ್ಯನು’ ಎಂದನು.
ಹೀಗೆ ಅವರು ಮೂವರೂ ಘಟೋತ್ಕಚನೊಡನೆ ಹೋಗಲು ನಾನು ತಾನೆಂದು ಉತ್ಸಾಹಪಡುತ್ತಿರಲು, ‘ತಾಯಿತಂದೆಗೆ ಆಪತ್ತು ಬಂದಾಗ ಅವರ ನೆರವಿಗೆ ನಿಲ್ಲಬೇಕಾದುದು ಹಿರಿಯ ಮಗನ ಧರ್ಮ. ಆದಕಾರಣ ನೀವು ಇಬ್ಬರೂ ನನ್ನ ಕರ್ತವ್ಯಕ್ಕೆ ಅಡ್ಡಿ ಬರಬಾರದು’ ಎಂದು ಹಿರಿಯವನು ಹೇಳಿದನು.
ಘಟೋತ್ತಚನು ಅವರ ಅಪೂರ್ವವಾದ ತ್ಯಾಗಬುದ್ಧಿಯನ್ನು ಕಂಡು ಆಶ್ಚರ್ಯದಿಂದ ಮೂಕನಾದನು. ಅಷ್ಟರಲ್ಲಿ ಕೇಶನದಾಸನು ‘ನನಗೆ ಹಿರಿಯ ಮಗ ಎಲ್ಲರಿಗಿಂತ ಹೆಚ್ಚು ಇಷ್ಟ. ಅವನನ್ನು ನಾನು ಕಳುಹಿಸಲಾರೆ’ ಎಂದೂ, ಕೇಶವದಾಸನ ಹೆಂಡತಿ ‘ನನಗೆ ಕಿರಿಯ ಮಗ ಎಲ್ಲರಿಗಿಂತ ಹೆಚ್ಚು ಇಷ್ಟ. ಅವನನ್ನು ನಾನು ಕಳುಹಿಸಲಾರೆ’ ಎಂದೂ ತಮತಮಗೆ ಬೇಕಾದ ಇಬ್ಬರನ್ನು ಆರಿಸಿಕೊಂಡರು.
ಆಗ ಉಳಿದ ಮಧ್ಯದವನನ್ನು ಕುರಿತು ಘಟೋತ್ಕಚನು ‘ತಾಯಿಗೂ ಬೇಡವಾದವನು, ತಂದೆಗೂ ಬೇಡವಾದವನು, ನೀನು ನನಗೆ ಬೇಕಾದವನು. ಬಾ’ ಎಂದು ಕರೆಯಲು ‘ಬಾಂಧವರು ಬದುಕಿಕೊಳ್ಳುವ ಹಾಗೆ ನನ್ನ ಜೀವವನ್ನು ಕೊಟ್ಟು, ಇಂದು ನಾನು ಧನ್ಯನಾದೆ. ಈ ರೀತಿಯ ಸಾವು ಎಲ್ಲರಿಗೂ ಸುಲಭವಾಗಿ ಸಿಕ್ಕುವುದಿಲ್ಲ’ ಎಂದು ಅವನು ಸಂತೋಷದಿಂದ ಘಟೋತ್ಕಚನ ಜೊತೆಯಲ್ಲಿ ಹೋಗಲು ಒಪ್ಪಿದನು. ಆ ಬ್ರಾಹ್ಮಣ ವಟುವಿನ ಸ್ವಜನವಾತ್ಸಲ್ಯವು ಘಟೋತ್ಕಚನಿಗೆ ಬಹಳ ಮೆಚ್ಚಿಕೆಯಾಯಿತು.
ಅನಂತರ ಆ ಮಧ್ಯದವನು ತಂದೆಗೂ ತಾಯಿಗೂ ಅಣ್ಣನಿಗೂ ನಮಸ್ಕಾರ ಮಾಡಿದನು. ತಂದೆಯಾದರೋ ಮಗನನ್ನು ಇನ್ನು ಮುಂದೆ ಕಾಣುವುದಿಲ್ಲವೆಂದುಕೊಂಡು ಆತನಿಗೆ ಮರಣಾನಂತರ ಬ್ರಹ್ಮಲೋಕ ಸಿದ್ದಿಸಲಿ ಎಂದು ಹರಸಿದನು. ತಾಯಿ ಮಗ ಹೇಗಾದರೂ ಬದುಕಲಿ ಎಂದು ಆಶಿಸಿ ‘ದೀರ್ಫಾಯುವಾಗು’ ಎಂದು ಆಶೀರ್ವದಿಸಿದಳು. ಹಿರಿಯ ಮಗನು ತಮ್ಮನನ್ನು ಬಿಗಿದಪ್ಪಿ ‘ಕೀರ್ತಿವಂತನಾಗು’ ಎಂದು ಬಯಸಿದನು. ಕಿರಿಯವನು ಅಣ್ಣನನ್ನು ಬೀಳ್ಕೊಡುವ ಮೊದಲು ಅವನಿಗೆ ನಮಸ್ಕರಿಸಿದನು, ಮಧ್ಯದವನು ತಮ್ಮನಿಗೆ ಶುಭವನ್ನು ಕೋರಿದನು.
ಮಧ್ಯದವನು ಹೀಗೆ ತನ್ನವರನ್ನೆಲ್ಲಾ ಬೀಳ್ಕೊಂಡು ಹೊರಡುವ ಮೊದಲು ಘಟೋತ್ಕಚನನ್ನು ಕುರಿತು ‘ಅಯ್ಯಾ, ನಾನು ಹೇಗೂ ಪರಲೋಕಕ್ಕೆ ಹೊರಡಲು ಸಿದ್ದನಾಗಿದ್ದೇನೆ. ಅದಕ್ಕೆ ಮೊದಲು ಇಲ್ಲಿ ಎಲ್ಲಿಯಾದರೂ ಇರುವ ಕೊಳದಲ್ಲಿ ಇಳಿದು ಬಾಯಾರಿಕೆಯನ್ನು ಕಳೆದುಕೊಂಡು ಬರುತ್ತೇನೆ. ಅಪ್ಪಣೆ ಕೊಡು’ ಎಂದು ಬೇಡಿದನು. ಅವನ ದೃಢವಾದ ನಿಶ್ಚಯಕ್ಕೆ ಮಾರುಹೋಗಿದ್ದ ಘಟೋತ್ಕಚನು ಅವನನ್ನು ಹೋಗಗೊಟ್ಟನು. ಕಳುಹುವಾಗ ‘ನಮ್ಮ ತಾಯಿಯ ಆಹಾರಕಾಲ ಮೀರುವುದಕ್ಕೆ ಮುಂಚೆ ಬಾ’ ಎಂದು ಅವನನ್ನು ಎಚ್ಚರಿಸಿದನು.
ಇತ್ತ ಕೇಶವದಾಸನುು ಮೂರು ಶಿಖರಗಳಿಂದ ಸುಂದರವಾದ ಪರ್ವತ ಹೇಗೋ ಹಾಗೆ ಮೂರು ಮಕ್ಕಳಿಂದ ಮೇಲೆ ಬಂದಿದ್ದ ತನ್ನ ವಂಶವು ಮಧ್ಯದ ಮಗನನ್ನು ಕಳೆದುಕೊಂಡಿತಲ್ಲಾ ಎಂದು ಸಂತಾಪಪಟ್ಟು, ಮಗನ ತಾರುಣ್ಯವನ್ನೂ ವರ್ಚಸ್ಸನ್ನೂ ಸೊಬಗನ್ನೂ ಬುದ್ಧಿಯನ್ನೂ ಗುಣವನ್ನೂ ಮೇಲಿಂದ ಮೇಲೆ ಜ್ಞಾಫಿಸಿಕೊಂಡು, ‘ಹಾ, ಹಾ! ಹೂಬಿಟ್ಟ ಮರವು ಮದದಾನೆಯ ಕೊಂಬಿನ ಏಟಿಗೆ ಸಿಕ್ಕಿ ಮುರಿದು ಬೀಳುವಂತೆ ಈ ರಾಕ್ಷಸನ ಕೈಗೆ ಸಿಕ್ಕಿ ನಾಶವಾದೆಯಾ, ಮಗನೇ!’ ಎಂದು ಗೋಳಾಡಿದನು.
ಅಷ್ಟರಲ್ಲಿ ಘಟೋತ್ಕಚನು ತಾಯ ಆಹಾರಕಾಲ ಮೀರಿ ಹೋಗುಪುದೆಂದೂ ನೀರು ಕುಡಿಯಲು ಹೋದವನು ಬರುಪುದು ತಡವಾಗುತ್ತಿದೆಯೆಂದೂ ವ್ಯಾಕುಲಗೊಂಡನು. ‘ಮಗನನ್ನು ಬೇಗ ಬರುವಂತೆ ಕರೆ’ ಎಂದು ತಂದೆಗೆ ಹೇಳಿದರೆ, ಅವನು ‘ರಾಕ್ಷಸರು ಕೂಡ ಇಂಥ ಮಾತನಾಡಲಾರರು. ನಿನ್ನ ಕೈಯಲ್ಲಿ ಸಿಕ್ಕಿ ಸಾಯುವುದಕ್ಕೆ ನನ್ನ ಮಗನನ್ನು ನಾನು ಕೂಗಲೆ?’ ಎಂದುಬಿಟ್ಟನು. ಆದರೂ ಘಟೋತ್ಕಚನು ಶಾಂತನಾಗಿಯೇ ಅವನ ಕೋಪವನ್ನು ಶಮನಗೊಳಿಸುತ್ತ ‘ಕ್ಪಮಿಸಬೇಕು, ವಿಚಾರಮಾಡದೆ ಮಾತನಾಡಿದೆ. ನೀವು ಕರೆಯುವುದು ಬೇಡ, ಅವನ ಹೆಸರನ್ನಾದರೂ ಹೇಳಿ. ನಾನೇ ಕರೆಯುತ್ತೇನೆ’ ಎಂದ. ಕೇಶವದಾಸನಿಗೆ ಅವನ ಹೆಸರು ಹೇಳುವುದಕ್ಕೂ ಮನಸ್ಸು ಒಪ್ಪಲಿಲ್ಲ. ಘಟೋತ್ಕಚನು ಹಿರಿಯ ಮಗನನ್ನು ಪ್ರಶ್ನಿಸಿದನು. ಅವನು ‘ಹಿರಿಯನಾಗಿದ್ದರೆ ತಂದೆ ಉಳಿಸಿಕೊಳ್ಳುತ್ತಿದ್ದನು. ಕಿರಿಯನಾಗಿದ್ದರೆ ತಾಯಿ ಉಳಿಸಿಕೊಳ್ಳುತ್ತಿದ್ದಳು. ಅದೃಷ್ಟ ಚೆನ್ನಾಗಿಲ್ಲದೆ ಅವನು ಮಧ್ಯದವನಾದ’ ಎಂದುಕೊಂಡು, ‘ಅವನು ನಿರ್ಭಾಗ್ಯನಾದ ಮಧ್ಯಮ’ ಎಂದ. ಘಟೋತ್ಕಚನಾದರೂ ‘ಇವನಿಗ ಮಧ್ಯಮನೆಂಬ ಹೆಸರು ಚೆನ್ನಾಗಿಯೇ ಒಪ್ಪುತ್ತದೆ. ಒಳ್ಳೆಯದು. ಅವನನ್ನು ನಾನೇ ಕೂಗುತ್ತೇನೆ’ ಎಂದು ‘ಮಧ್ಯಮಾ! ಮಧ್ಯಮಾ! ಹೊತ್ತಾಯಿತು, ಬೇಗ ಬಾ!’ ಎಂದು ಕೂಗಿದನು.
ಆ ಘಟೋತ್ಕಚನ ಕೂಗು ಆ ಕಾಡಿನಲ್ಲಿ ದಟ್ಟವಾಗಿ ಬೆಳೆದಿದ್ದ ಮರಗಳನ್ನು ದಾಟಿ, ಅಲ್ಲಿದ್ದ ಹಕ್ಕಿಗಳ ಕಲಕಲವನ್ನು ಮೆಟ್ಟಿ, ಅದೇ ಕಾಡಿನಲ್ಲಿ ವ್ಯಾಯಾಮ ಮಾಡುತ್ತಿದ್ದ ಭೀಮಸೇನನ ಕಿವಿಗೆ ಬಿದ್ದು, ಅನನ ಮ್ಬೆ ಜುಮ್ಮೆಂದಿತು. ಆ ಧ್ವನಿಯನ್ನು ಕೇಳಿ ಭೀಮನು ‘ಇದೇನಿದು? ಈ ದ್ವನಿ ನನ್ನ ತಮ್ಮನಾದ ಧನಂಜಯನ ದ್ವನಿ ಇದ್ದ ಹಾಗೆ ಇದೆಯಲ್ಲ!’ ಎಂದುಕೊಂಡನು.
ಘಟೋತ್ಕಚನು ಎಲ್ಲಿ ತಾಯಿಯ ಪಾರಣೆಯಕಾಲ ಮೀರಿ ಹೋಗುವುದೋ ಎಂಬ ಕಾತರದಿಂದ, ತಡಮಾಡುತ್ತಿರುವ ಆ ಬ್ರಾಹ್ಮಣ ವಟುವನ್ನು ಬರಮಾಡುವುದಕ್ಕಾಗಿ ಪುನಃ ‘ಮಧ್ಯಮಾ ! ಮಧ್ಯಮಾ!’ ಎಂದು ಕೂಗಿದನು. ಆಗ ಭೀಮನು ‘ಮಧ್ಯಮಾ ! ಮಧ್ಯಮಾ!’ ಎಂದು ನನ್ನನ್ನು ಹೆಸರು ಹಿಡಿದು ಕರೆಯುವವರು ಯಾರು? ಇದರಿಂದ ನನ್ನ ವ್ಯಾಯಾಮಕ್ಕೆ ಅಡ್ಡಿಯಾದರೂ ಸರಿಯೆ, ಇದು ಯಾರೆಂದು ನೋಡೋಣ?’ ಎಂದು ಮುಂದೆ ಬಂದು ಫುಘಟೋತ್ಕಚನನ್ನು ನೋಡಿದನು.
ಘಟೋತ್ಕಚನಾದರೋ ಮುದದಾನೆಯಂತೆ, ಕೊಬ್ಬಿದ ಗೂಳಿಯಂತೆ ಆಚೆ ಈಚೆ ಹೆಜ್ಜೆಹಾಕುತ್ತಿದ್ದಾನೆ! ಅವನ ಸಿಂಹದಂತಿರುವ ಮುಖದಲ್ಲಿ ಸಿಂಹದ ಕೋರೆಗಳು, ಜೇನಿನಂತೆ ಹೊಳೆಯುವ ಕಣ್ಣು, ಕಂದುಬಣ್ಣದ ಹುಬ್ಬು, ಗಿಡಗನ ಮೂಗು, ಮದದಾನೆಯ ದವಡೆ, ಆ ಕೆದರುಕೂದಲು, ಮುಂದಕ್ಕೆ ಉಬ್ಬಿರುವ ವಿಶಾಲವಾದ ಎದೆ, ವಜ್ರದಂತೆ ಕಠಿಣವಾದ ನಡು, ಮಾಂಸಪುಷ್ಟವಾದ ಆ ನಿಡುತೋಳು ಇವುಗಳನ್ನು ನೋಡಿ ಭೀಮನು ‘ಇವನು ಯಾರೋ ರಾಕ್ಷಸಿಯ ಮಗನಿರಬೇಕು. ಇವನ ತಂದೆ ನಿಜವಾಗಿಯೂ ಯಾವನೋ ಲೋಕವೀರನೇ ಇರಬೇಕು’ಎಂದು ಅವನ ಆಕಾರವನ್ನು ನೋಡಿ ಮೆಚ್ಚಕೊಳ್ಳುತ್ತಿದ್ದನು.
ಇತ್ತ ಘಟೋತ್ಕಚನು ‘ಎರಡು ಬಾರಿ ಕೂಗಿದರೂ ಬ್ರಾಹ್ಮಣ ವಟು ಇನ್ನೂ ಬರಲಿಲ್ಲವಲ್ಲ, ತಾಯಿಯ ಊಟಕ್ಕೆ ತಡವಾಗುವುದಲ್ಲ” ಎಂದು ಪುನಃ ಮೂರನೆಯ ಬಾರಿ ‘ಮಧ್ಯಮಾ! ಮಧ್ಯಮಾ!’ ಎಂದು ಕೂಗಿದನು.
‘ಇದೋ ಬಂದೆ’ ಎಂದು ಭೀಮನು ಘಟೋತ್ಕಚನ ಎದುರಿಗೆ ಬಂದು ನಿಂತನು. ಘಟೋತ್ಕಚನು ಭೀಮನ ಮನೋಹರವಾದ ಆಕೃತಿಯನ್ನು ನೋಡಿದನು. ಸಿಂಹದಂತಹ ಆಕಾರ, ಚಿನ್ನದ ತಾಳೆಯ ಮರಗಳಂತಹ ಎರಡು ತೋಳು ; ಕೃಶವಾದ, ಬಿಗಿಯಾದ ನಡು; ನಡುವಿನಿಂದ ಮೇಲಕ್ಕೆ ಹರಡಿರುವ ವಿಶಾಲವಾದ ವಕ್ಷಸ್ಥಲವನ್ನು ನೋಡಿದರೆ ಗರುಡನ ರೆಕ್ಕೆಗಳನ್ನು ಮುಚ್ಚಿ ಪಕ್ಕಗಳನ್ನು ಕೈಯಿಂದ ಸವರಿದ ಹಾಗಿದೆ. ‘ಇವನಾರು? ಅರಳಿದ ತಾವರೆಯಂತೆ ವಿಶಾಲವಾದ ಕಣ್ಣುಳ್ಳ ವಿಷ್ಣುವಿರಬಹುದೆ? ಈತನನ್ನು ನೋಡಿದರೆ ಏಕೋ ಬಂಧುವನ್ನು ನೋಡಿದಂತೆ ಸಂತೋಷವಾಗುತ್ತದೆ?’ ಎಂದು ಘಟೋತ್ಕಚನು ಭೀಮನ ಆಕಾರವನ್ನು ತಾನೂ ನೋಡಿ ಮಚ್ಚಿಕೂಂಡನು.
ಆದರೂ ಘಟೋತ್ಸಚನು ತಾಯಿಯ ಆಜ್ಞೆಯನ್ನು ಪಾಲಿಸಬೇಕೆಂಬುದನ್ನು ಮರೆಯಲಿಲ್ಲ. ಪುನಃ ಮತ್ತೊಂದುಸಲ ‘ಮಧ್ಯಮಾ! ಮಧ್ಯಮಾ! ಹೊತ್ತಾಯಿತು, ಬೇಗ ಬಾ’ ಎಂದು ಕೂಗಿದನು.
‘ನಾನು ಇಲ್ಲೇ ಇರುವೆನಲ್ಲ’ ಎಂದು ಭೀಮನೆಂದನು.
‘ಏನು? ನೀನೂ ಮಧ್ಯಮನೇ?’ ಎಂದು ಘಟೋತ್ಕಚನು ಆಶ್ಚರ್ಯದಿಂದ ಕೇಳಿದನು.
ಅದಕ್ಕೆ ಭೀಮಸೇನನು ‘ಕೇಳಯ್ಯ, ಮಧ್ಯಮನೆಂಬವನು ನಾನೊಬ್ಬನೇ, ಬೇರೆ ಯಾರೂ ಅಲ್ಲ. ವಧಿಸಲು ಅಸಾಧ್ಯರಾದವರಲ್ಲಿ ನಾನು ಮಧ್ಯಮನು, ಧೀರರಲ್ಲಿ ನಾನು ಮಧ್ಯಮನು, ಭೂಮಿಯಲ್ಲಿಯೂ ಮಧ್ಯಮನು ನಾನೇ, ಸೋದರರ ಗುಂಪಿನಲ್ಲಿಯೂ ನಾನು ಮಧ್ಯಮನು’ ಎಂದು ತನ್ನ ಪರಿಚಯವನ್ನು ತಿಳಿಸಿ, ಪುನಃ ಮುಂದುವರಿದು, ‘ಪಂಚಭೂತಗಳಲ್ಲಿ ನಾನು ಮಧ್ಯಮನು, ರಾಜರುಗಳ ನಡುವೆ ನಾನು ಮಧ್ಯಮನು, ಜನ್ಮದಲ್ಲಿ ಮಧ್ಯಮನು, ಲೋಕದಲ್ಲಿ ಮಧ್ಯಮನು. ಹೀಗೆ ಸರ್ವಕಾರ್ಯಗಳಲ್ಲೂ ನಾನೇ ಮಧ್ಯಮನು’ ಎಂದನು.
ಆದರೆ ಇನ್ನೊಬ್ಬ ಮಧ್ಯಮನಿಗಾಗಿ ತವಕಪಡುತ್ತಿದ್ದ ಘಟೋತ್ಕಚನಿಗೆ ಭೀಮನ ಮಾತಿನಲ್ಲಿ ಗಮನನಿರಲಿಲ್ಲ. ಕೇಶವದಾಸನಿಗೆ ಮಾತ್ರ ಭೀಮನ ಪರಿಚಯದ ಗುಟ್ಟು ಅರ್ಥವಾಯಿತು. ನಾನೇ ಮಧ್ಯಮನೆಂಬ ಮಾತಿನಿಂದ ಇವನು ಪಾಂಡುವಿನ ಮೂವರು ಮಕ್ಕಳಲ್ಲಿ ಮಧ್ಯದವನಾಗಿರಬೇಕು. ಮೊದಲ ಇವನು ಬಂದುದರಿಂದ ನಾವು ಈ ಮೃತ್ಯುವಿನ ಬಾಯಿಂದ ಉಧ್ಧಾರವಾಗಿ ಬದುಕಿದೆವು” ಎಂದು ಅವನು ಧೈರ್ಯ ತಂದುಕೊಂಡನು.
ಅಷ್ಟು ಹೊತ್ತಿಗೆ ಕೇಶವದಾಸನ ಮಗನಾದ ಮಧ್ಯಮನು ಹತ್ತಿರದಲ್ಲಿದ್ದ ಕಮಲಸರೋವರದಲ್ಲಿ ಆಚಮನಮಾಡಿ, ತಾವರೆಯ ಎಲೆಯಲ್ಲಿ ಕೊಳದ ತಿಳಿನೀರನ್ನು ಎತ್ತಿಕೊಂಡು, ಪರಲೋಕದಲ್ಲಿ ತನಗೆ ದೊರಕಲಾರದ ತರ್ಪಣವನ್ನು ತನಗೆ ತಾನೇ ಕೊಟ್ಟುಕೊಂಡು, ಘಟೋತ್ಕಚನೊಡನೆ ಹೋಗುವುದಕ್ಕೆ ಸಿದ್ದವಾಗಿ ಬಂದನು. ಘಟೋತ್ಕಚನು ಅವನನ್ನು ಕಂಡು, ಸಮಾಧಾನಗೊಂಡು, ಅವನನ್ನು ಕರೆದೊಯ್ಯಲು ತೊಡಗಿದನು.
ಆಗ ವೃದ್ಧ ಕೇಶವದಾಸನು ಭೀಮನ ಮರೆಹೊಕ್ಕು, ತನ್ನ ಕುಲವನ್ನು ರಕ್ಷಿಸಬೇಕೆಂದು ಬೇಡಿಕೊಳ್ಳಲು, ಭೀಮನು ಆತನಿಗೆ ವಂದಿಸಿ, ಆತನ ಆಶೀರ್ವಾದವನ್ನು ಪಡೆದ ಬಳಿಕ ಆತನ ಭಯಕ್ಕೆ ಕಾರಣವೇನೆಂದು ಕೇಳಿ ತಿಳಿದುಕೊಂಡನು. ಅನಂತರ ಬ್ರಾಹ್ಮ ಣರ ದಾರಿಗೆ ಅಡ್ಡ ಬಂದು ಅವರನ್ನು ಪೀಡಿಸುತ್ತಿರುವ ರಾಕ್ಷಸನನ್ನು ತಾನು ನಿಗ್ರಹಿಸುವೆನೆಂದು ಆತನಿಗೆ ಅಭಯವನ್ನು ಕೊಬ್ಬು, ಘಟೋತ್ಕಚನನ್ನು ಕರೆದು ನಿಲ್ಲಿಸಿ ಅವನನ್ನು ನುಡಿಸಿದನು.
‘ಅಯ್ಯಾ, ಈ ಬ್ರಾಹ್ಮಣನನ್ನೇಕೆ ಪೀಡಿಸುವೆ? ಮಕ್ಕಳು ನಕ್ಷತ್ರಗಳಂತೆ ಇದ್ದಾರೆ. ಬ್ರಾಹ್ಮಣಿ ತಂಪಾದ ಬೆಳ್ಳಿಂಗಳಂತೆ ಇದ್ದಾಳೆ. ಇವರೊಡನೆ ಚಂದ್ರನ ಹಾಗಿರುವ ಈ ಬ್ರಾಹ್ಮಣನನ್ನು ನೀನು ರಾಹುವಿನ ಹಾಗೆ ಪೀಡಿಸಬಹುದೆ?’ ಎಂದನು.
ತಾಯ ಬಳಿಗೆ ಮನುಷ್ಯನನ್ನು ಒಯ್ಯುವ ತ್ವರೆಯಲ್ಲಿದ್ದ ಘಟೋತ್ಕಚನು ‘ಹೌದು, ರಾಹುವೇ ನಾನು’ ಎಂದು ಧೃಷ್ಟತನದಿಂದ ನುಡಿದು, ಮಧ್ಯಮನನ್ನು ಬಿಡಲೊಪ್ಪಲಿಲ್ಲ. ‘ಈ ಬ್ರಾಹ್ಮಣ ನಿರಪರಾಧಿ, ಸಂಯಮಿ. ಇಂಥವನನ್ನು ಪೀಡಿಸಬೇಡ’ ಎಂದು ಭೀಮನು ಎಷ್ಟ ನಯದಿಂದ ನುಡಿಸಿದರೂ ಆ ರಾಕ್ಷಸನು ತನ್ನ ಹಠವನ್ನು ಬಿಡಲಿಲ್ಲ.
ಅವನ ಆ ಮೊಂಡುತನ ಕೂಡ ಭೀಮನಿಗೆ ಪ್ರಿಯವಾಗಿ ಕಂಡಿತು. ಆ ‘ಆಹಾ! ಇವನು ಯಾರ ಮಗನೊ? ಇವನಲ್ಲಿ ನನ್ನ ಸಹೋದರರ ಗುಣಗಳೆಲ್ಲ ಕಂಡುಬರುತ್ತವೆ. ಈ ಬಾಲಕನ ಧೃಷ್ಟತನವನ್ನು ನೋಡಿದರೆ, ನಮ್ಮ ಅರ್ಜುನನ ಮಗನಾದ ಅಭಿಮನ್ಯುವಿನ ಜ್ಞಾಪಕವಾಗುತ್ತದೆ’ ಎಂದುಕೊಂಡು, ಆ ಬ್ರಾಹ್ಮಣವಟುವನ್ನು ಬಿಟ್ಟುಬಿಡುವಂತೆ ಪುನಃ ಹೇಳಿದನು.
ಆದರೆ ಘಟೋತ್ಕಚನು, ತಾಯಿಯ ಆಜ್ಞೆಯ ಪ್ರಕಾರವಾಗಿ ಮನುಷ್ಯನೊಬ್ಬನನ್ನು ಹಿಡಿದವನು, ತಾಯಿಯ ಆಜ್ಞೆಯಿಲ್ಲದೆ ಅವನನ್ನು ಬಿಡಲು ಒಪ್ಪಲಿಲ್ಲ. ‘ನಮ್ಮ ತಂದೆಯೇ ಬಂದು, ಬಿಡು ಎಂದು ಹೇಳಿದರೂ ಬಿಡುವುದಿಲ್ಲ’ ಎಂದನು.
ಆ ಮಾತು ಭೀಮನ ಮನಸ್ಸಿಗೆ ಒಪ್ಪಿಗೆಯಾಯಿತು. ‘ಹೌದು, ತಾಯಿ ಎಲ್ಲ ದೇವರಿಗಿಂತ ಹಿರಿಯ ದೇವತೆ. ಇವನು ರಾಕ್ಷಸನಾದರೂ ಗುರುಶುಶ್ರೂಷೆಯಲ್ಲಿ ಎಷ್ಟು ಆಸಕ್ತಿ!’ ಎಂದು ಮೆಚ್ಚಿಕೊಂಡು, ಅವನ ತಾಯಿಯ ಹೆಸರನ್ನು ಬೆಸಗೊಂಡನು.
ಅದಕ್ಕೆ ಘಟೋತ್ಕಚನು ‘ನನ್ನ ತಾಯಿ ಹಿಡಿಂಬೆಯೆಂಬ ರಾಕ್ಷಸಿ. ಆಕೆಯು ಕುರುಕುಲ ಪ್ರದೀಪನೆನಿಸಿದ ಮಹಾತ್ಮನಾದ ಪಾಂಡುಪುತ್ರನನ್ನು ವರಿಸಿ, ಭಾಗ್ಯವತಿಯಾದಳು. ಆಕಾಶವು ಪೂರ್ಣ ಚಂದ್ರನನ್ನು ಪಡೆದಂತೆ ನನ್ನ ತಾಯಿ ನನ್ನ ತಂದೆಯನ್ನು ಸೇರಿದಳು’ ಎಂದು ಅಭಿಮಾನದಿಂದ ಹೇಳಿದನು.
ಆಗ ಭೀಮನು ‘ಓಹೊ ಇವನು ಹಿಡಿಂಬೆಯ ಮಗನೋ! ಅದಕ್ಕೇ ಇವನಿಗೆ ಈ ಗರ್ವ! ರೂಪದಲ್ಲೂ ಸತ್ವದಲ್ಲೂ ಬಲದಲ್ಲೂ ಇವನು ತಂದೆಯಂತಿದ್ದರೂ ಅದೇಕೋ ಪ್ರಜೆಗಳಲ್ಲಿ ಇವನಿಗೆ ಕರುಣೆಯಿಲ್ಲವಲ್ಲ!’ ಎಂದುಕೊಂಡು, ಆ ಬ್ರಾಹ್ಮಣವಟುವನ್ನು ಬಿಟ್ಟು ಕೊಡುವಂತೆ ಪುನಃ ಹೇಳಿದನು. ಆದರೂ ಫಬೋತ್ಕಚನು ತನ್ನ ಹಿಂದಿನ ಹಠವನ್ನೇ ಹಿಡಿಯಲು, ಆ ವಟುವಿಗೆ ಬದಲಾಗಿ ತಾನೇ ಅವನೊಡನೆ ಹೋಗುವುದಾಗಿ ಭೀಮನು ಮುಂದೆ ಬಂದನು. ತನಗೆ ಬದಲಾಗಿ ಈ ಅಪರಿಚಿತನು ರಾಕ್ಷಸನೊಡನೆ ಹೋಗುವುದನ್ನು ಆ ಎರಡನೆಯ ಮಗ ತಾನು ಒಪ್ಪಲಿಲ್ಲ. ‘ನನ್ನ ಬಂಧುಗಳ ಜೀವವನ್ನು ಉಳಿಸಲು ನಾನು ಮೊದಲೇ ನನ್ನ ಜೀವನನ್ನು ಮೀಸಲು ಕೊಟ್ಟಿದ್ದೇನೆ. ಯುವಕನೂ ರೂಪವಂತನೂ ಗುಣಶಾಲಿಯೂ ಆದ ನೀನು ನನಗಾಗಿ ಸಾಯುವುದು ಬೇಡ ‘ ಎಂದು ಭೀಮನನ್ನು ತಡೆದನು. ಅದಕ್ಕೆ ಭೀಮನು ‘ಇದು ಸರಿಯಲ್ಲ. ಕ್ಷತ್ರಿಯನಾದ ನಾನು ಬ್ರಾಹ್ಮಣರಾದ ನಿಮ್ಮ ಜೀವವನ್ನು ಉಳಿಸುವುದಕ್ಕಾಗಿ ಪ್ರಯತ್ನಿಸಬೇಕಾದುದು ನನ್ನ ಧರ್ಮ ಎಂದು ಅವನನ್ನು ಸಮಾಧಾನಗೊಳಿಸಿದನು.
ಈ ವೃಥಾ ವಾಗ್ವಾದದಿಂದ ತಡವಾಗುತ್ತಿದ್ದುದನ್ನು ಘಟೋತ್ಕಚನು ಕಂಡು, “’ಕ್ಷತ್ರಿಯನೆಂದು ಗರ್ವಪಡುತ್ತಿರುವ ಇವನನ್ನೇ ಕೊಂದು ತೆಗೆದುಕೊಂಡು ಹೋಗುತ್ತೇನೆ’ ಎಂದು ನಿಶ್ಚಯಿಸಿ, ‘ಎಲೈ! ಇವನನ್ನು ಉಳಿಸುವುದಾದರೆ ನೀನೇ ನನ್ನ ಹಿಂದೆ ಬಾ” ಎಂದು ಭೀಮನನ್ನು ಕರೆದನು.
ತನಗೆ ಮಗನ ಗುರುತಾಗಿದ್ದರೂ ಮಗನಿಗೆ ಮಾತ್ರ ತನ್ನ ಗುರುತು ತಿಳಿಯದಿದ್ದುದನ್ನು ಕಂಡು, ಭೀಮನಿಗೆ ಅವನನು ಸ್ವಲ್ಪ ವಿನೋದ ಮಾಡಬೇಕೆನ್ನಿಸಿತು. ಆದಕಾರಣ ‘ನೀನು ವೀರನಾದರೇನು, ಬಲಶಾಲಿಯಾದರೇನು? ನಾನು ಯಾರನ್ನೂ ಹಿಂಬಾಲಿಸುವವನಲ್ಲ. ನಿನಗೆ ಅಷ್ಟು ಶಕ್ತಿಯಿದ್ದರೆ, ನನ್ನನ್ನು ಎಳೆದುಕೊಂಡು ಹೋಗು’ ಎಂದನು.
ಘಟೋತ್ಕಚನು ಅವನನ್ನು ಬಲಪ್ರಯೋಗದಿಂದ ಹೆದರಿಸಬೇಕೆಂದು ‘ನಾನು ಯಾರು, ಗೊತ್ತೊ?’ ಎಂದು ಗರ್ಜಿಸಿದನು. ಭೀಮನು ನಗುತ್ತ ‘ಓಹೋ, ನೀನು ನನ್ನ ಮಗನಲ್ಲವೆ’ ಎಂದನು. ಘಟೋತ್ಕಚನು ಕೆರಳಿ, ‘ಏನೆಂದೆ? ನಿನ್ನ ಮಗನೆ?’ ಎಂದೆನ್ನಲು, ಭೀಮನು ‘ಅಷ್ಟು ಕೋಪ ಏಕಯ್ಯ? ತಾಳಿಕೊ ತಾಳಿಕೊ. ಕ್ಷತ್ರಿಯರಾದ ನಾವು ಎಲ್ಲ ಪ್ರಜೆಗಳನ್ನೂ ಮಕ್ಕಳೆಂದೇ ಕರೆಯುತ್ತೇವೆ. ಹಾಗೆ ಹೇಳಿದೆ’ ಎಂದು ಸಮಾಧಾನಹೇಳಿದನು. ಭೀಮನು ಹೆದರಿಕೊಂಡನೆಂದು ಘಟೋತ್ಕಚನು ತಿಳಿದುಕೊಂಡು ಅವನನ್ನು ಹಂಗಿಸಿದನು. ಅದಕ್ಕೆ ಭೀಮನು ‘ಸತ್ಯದ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಭಯವೆಂದರೆ ಏನೆಂಬುದನ್ನು ಇದುವರೆಗೆ ನಾನು ಕಂಡಿಲ್ಲ. ಆ ಭಯವೆಂಬುದು ಹೇಗಿದೆಯೆಂದು ಈಗ ನಿನ್ನಿಂದ ಕಲಿಯಬೇಕೆಂದಿದ್ದೇನೆ. ಹೇಳಪ್ಪ, ಕೇಳೋಣ. ಅದರ ಗುಣದೋಷಗಳನ್ನು ತಿಳಿದ ಮೇಲೆ ಏನು ಮಾಡಬೇಕೋ ನೋಡೋಣ’ ಎಂದು ಅವನನ್ನು ಅಣಕಿಸಿದನು.
ಘಟೋತ್ಕಚನಿಗೆ ಮಹಾರೋಷ ಬಂದಿತು. ಇದೋ, ಭಯವನ್ನು ಉಪದೇಶಮಾಡುತ್ತೇನೆ. ಆಯುಧವನ್ನು ಹಿಡಿದುಕೊ’ ಎಂದು ಯುದ್ಧಕ್ಕೆ ಕರೆದನು. ‘ಆಯುಧವನ್ನು ಹೊಸದಾಗಿ ಹಿಡಿಯಬೇಕಾಗಿಲ್ಲ. ಸದಾ ಹಿಡಿದೇ ಇದ್ದೇನೆ’ ಎಂದು ಭೀಮನು ಹೇಳಿ, ತಾನು ಆಡಿದುದು ಘಟೋತ್ಕಚನಿಗೆ ಅರ್ಥವಾಗದೆ ಹೋದುದನ್ನು ಕಂಡು ‘ಚಿನ್ನದ ಕಂಬದಂತಿರುವ ಈ ತೋಳು ನೋಡು. ಶತ್ರುಗಳನ್ನು ಅಡಗಿಸುವುದರಲ್ಲಿಯೇ ಸದಾ ಆಸಕ್ತವಾಗಿರುವ ಈ ಬಲದ ತೋಳೇ ನನಗೆ ತಕ್ಕ ಆಯುಧ’ ಎಂದನು. ಅದಕ್ಕೆ ಘಟೋತ್ಕಚನು ‘ಈ ಮಾತನ್ನು ನನ್ನ ತಂದೆಯಾದ ಭೀಮಸೇನನು ಹೇಳಿದರೆ, ಅದು ಅವನಿಗೆ ಒಪ್ಪುತ್ತದೆ’ ಎಂದನು.
ಆಗ ಭೀಮನು ಮಗನ ಮಾತುಗಳನ್ನು ಕೇಳಿ ಒಳಗೊಳಗೆಯೇ ನಗುತ್ತ, ‘ಅದು ಯಾರಯ್ಯ, ಆ ಭೀಮ? ಯಾರ ಹಾಗಿದ್ದಾನೆ ಅವನು? ಬ್ರಹ್ಮನ ಹಾಗೊ? ಶಿವನ ಹಾಗೊ? ಕೃಷ್ಣನ ಹಾಗೊ? ಇಂದ್ರನ ಹಾಗೊ? ಅಥವಾ ಯಮನ ಹಾಗೊ?’ ಎಂದು ಏನೂ ತಿಳಿಯದವನ ಹಾಗೆ ಕೇಳಿದನು. ಘಟೋತ್ಕಚನು ತಂದೆಯ ಮೇಲಿನ ಅಭಿಮಾನದಿಂದ ‘ನಮ್ಮ ತಂದೆ ಈ ಎಲ್ಲರಿಗೂ ಸಮನಾದವನು’ ಎಂದನು. ಭೀಮನು ಅವನನ್ನು ಇನ್ನೂ ರೇಗಿಸಬೇಕೆಂದು ‘ಅದು ಸುಳ್ಳು’ ಎಂದನು.
ಘಟೋತ್ಕಚನ ಕೋಪ ಮಿತಿಮೀರಿತು. ‘ಎಲಾ! ನನ್ನ ಮಾತನ್ನು ಸುಳ್ಳೆನ್ನುವೆಯ? ನನ್ನ ತಂದೆಯನ್ನು ನಿಂದಿಸುವೆಯ?’ ಎಂದು, ಒಂದು ದಪ್ಪ ಮರವನ್ನು ಕಿತ್ತು, ಅದರಿಂದ ಭೀಮನನ್ನು ಹೊಡೆದನು. ಭೀಮನಿಗೇನೂ ಹಾನಿಯಾಗಲಿಲ್ಲ. ‘ಮತ್ತೇನು ಮಾಡಲಿ?’ ಎಂದುಕೊಂಡು ಘಟೋತ್ಕಚನು ಒಂದು ಬೆಟ್ಟದ ಕೋಡುಗಲ್ಲನ್ನು ಕಿತ್ತು, ‘ಈ ಬಂಡೆ ನಿನ್ನ ಜೀವವನ್ನು ಹಿಂಡಿಬಿಡುತ್ತದೆ’ ಎಂದು ಅದನ್ನು ಅವನ ಮೇಲೆ ಎಸೆದನು. ಭೀಮನು ಅದನ್ನೂ ತಪ್ಪಿಸಿಕೊಂಡು, ‘ಕಾಡಾನೆ ಎಷ್ಟು ರೇಗಿದರೂ ಹುಲಿಯನ್ನು ಹೆದರಿಸಲಾರದಯ್ಯಾ!’ ಎಂದನು.
ಹೀಗೆ ಏನು ಮಾಡಿದರೂ ಅವನನ್ನು ಕೊಲ್ಲಲು ಸಾಧ್ಯವಾಗದಿರಲ್ಲು ಕಡೆಗೆ ‘ಭೀಮಸೇನನ ಮಗನೂ ವಾಯುವಿನ ಮೊಮ್ಮಗನೂ ಆದ ನಾನು ಮಲ್ಲಯುದ್ಧದಲ್ಲಿ ಅಸಮಾನನಾದವನು. ಇದೋ, ಸಿಧ್ಧನಾಗು. ನಿನ್ನನ್ನು ಹಿಡಿದು ಸೋಲಿಸುತ್ತೇನೆ’ ಎಂದು ಘಟೋತ್ಕಚನು ಭೀಮನೆದುರಿಗೆ ಸಿದ್ಧನಾಗಿ ನಿಂತನು.

ಆಗ ತಂದೆ ಮಕ್ಕಳು ಇಬ್ಬರೂ ಮಲ್ಲಯುದ್ಧವಾಡಿದರು. ಗಟ್ಟಿಯಾದ ಹಗ್ಗಗಳಿಂದ ಆನೆಯನ್ನು ಕಟ್ಟುವಂತೆ ಘಟೋತ್ಕಚನು ತನ್ನ ತೋಳುಗಳಿಂದ ಭೀಮನನ್ನು ಬಂಧಿಸಿ, ‘ಅದು ಹೇಗೆ ಬಿಡಿಸಿಕೊಳ್ಳುವೆಯೋ ನೋಡೋಣ’ ಎಂದನು. ಮಗನ ಬಾಹುಬಲವನ್ನು ಅಳೆದು ಭೀಮನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ದುರ್ಯೋಧನನ ಶತ್ರುಪಕ್ಷ ಬೆಳೆಯುತ್ತಿದೆಯೆಂದು ಅವನು ಹಿಗ್ಗಿದನು. ‘ಇದೋ ಹೀಗೆ ಬಿಡಿಸಿಕೊಳ್ಳುತ್ತೇನೆ, ನೋಡು. ನೀನು ಎಷ್ಟೇ ಎಚ್ಚರದಿಂದಿದ್ದರೂ ಬಿಡಿಸಿಕೊಳ್ಳುತ್ತೇನೆ, ನೋಡು’ ಎಂದು ಹೇಳುತ್ತಿದ್ದ ಹಾಗೆಯೇ ಭೀಮನು ಮಗನ ಬಾಹುಬಂಧದಿಂದ ಬಿಡಿಸಿಕೊಂಡು, ‘ನಾನೇ ಅತ್ಯಂತ ಬಲಶಾಲಿ ಎಂಬ ಹೆಮ್ಮೆಯನ್ನು ಮರೆತುಬಿಡು. ನಿನ್ನ ಸಾಮರ್ಥ್ಯವನ್ನು ನಾನು ಈಗ ಕಂಡಿದ್ದೇನೆ. ಮಲ್ಲಯುದ್ಧದಲ್ಲಿ ನನಗೆ ಯಾವಾಗಲೂ ಆಯಾಸವಾಗುವುದಿಲ್ಲ’ ಎಂದನು.
ಇಂತಹ ಎದುರಾಳಿಯನ್ನು ಹೇಗೆ ಕಟ್ಟಿಕೊಂಡೊಯ್ಯಬೇಕೋ ಘಟೋತ್ಕಚನಿಗೆ ತೋರದಾಯಿತು. ಆದರೆ ಉತ್ತರ ಕ್ಷಣದಲ್ಲೇ ತನಗೆ ತನ್ನ ತಾಯಿ ತಿಳಿಸಿಕೊಟ್ಟಿದ್ದ ಮಾಯಾಪಾಶದ ಜ್ಞಾಪಕವಾಯಿತು. ಒಡನೆಯೇ ಪಕ್ಕದಲ್ಲಿದ್ದ ಪರ್ವತವನ್ನು ಪ್ರಾರ್ಥಿಸಿ ನೀರನ್ನು ಪಡೆದು, ಆಚಮನಮಾಡಿ ಶುದ್ಧನಾಗಿ, ಮಾಯಾಪಾಶವನ್ನು ಭೀಮನ ಮೇಲೆ ಪ್ರಯೋಗಿಸಿದನು. ಆ ಮಾಯಾಪಾಶದ ಕಟ್ಟಿಗೆ ಸಿಕ್ಕಿಬಿದ್ದ ಭೀಮನು ಅದನ್ನು ಬಿಡಿಸಿಕೊಳ್ಳುವುದಕ್ಕಾಗಿ ಮಹೇಶ್ವರನ ಪ್ರಸಾದದಿಂದ ತಾನು ಪಡೆದ ಮಾಯಾಪಾಶಮೋಕ್ಷದ ಮಂತ್ರವನ್ನು ಜ್ಞಾಪಿಸಿಕೊಂಡನು. ಒಡನೆಯೆ ವೃದ್ಧ ಕೇಶವದಾಸನ ಕಮಂಡಲದ ನೀರನ್ನು ತರಿಸಿಕೊಂಡು, ಆಚಮನ ಮಾಡಿ ಮಂತ್ರವನ್ನು ಜಪಿಸಿ, ಮಾಯಾಪಾಶದಿಂದ ಮುಕ್ತನಾದನು.
ಮುಂದೇನು ಮಾಡಬೇಕೋ ಘಟೋತ್ಕಚನಿಗೆ ತೋರದಾಯಿತು. ಕಡೆಗೆ ‘ಅಯ್ಯಾ, ಬ್ರಾಹ್ಮಣವಟುವನ್ನು ಬಿಡುವುದಾದರೆ ನಾನು ಬರುವೆನೆಂದು ಒಪ್ಪಿಕೊಂಡಿದ್ದೆಯಲ್ಲ. ಆ ಒಪ್ಪಂದವನ್ನು ನೆನೆದು, ಬಾ’ ಎಂದು ವಿನಯದಿಂದ ಕರೆದನು. ‘ಹಾಗಾದರೆ ಆಗಬಹುದು’ ಎಂದು ಭೀಮನು ಅವನ ಜೊತೆಯಲ್ಲಿ ಹೊರಟನು. ಜಡಿಮಳೆಯು ಸುರಿಯುವಾಗ ಮೈಮೇಲೆ ಬಿದ್ದ ಹನಿಗಳನ್ನು ಒದರುತ್ತ ಗೂಳಿ ಮುಂದೆ ನುಗ್ಗುವ ಹಾಗೆ ಭೀಮನು ಆ ಉಗ್ರರೂಪದ, ಉಗ್ರವೀರ್ಯದ ರಾಕ್ಷಸನನ್ನು ದಮನಮಾಡಿ, ಅವನ ಸಂಗಡ ಹೋದನು.
ಅವರಿಬ್ಬರೂ ಬಹುಬೇಗನೆ ಹಿಡಿಂಬಾದೇವಿಯಿದ್ದ ಸ್ಥಳಕ್ಕೆ ಬಂದರು, ಘಟೋತ್ಕಚನು ಅವನನ್ನು ಅಲ್ಲೇ ನಿಲ್ಲಿಸಿ, ತಾನು ತಾಯಿಯ ಹತ್ತಿರ ಹೋಗಿ, ಅವಳಿಗೆ ಅಭಿವಂದಿಸಿ, ಅವಳ ಪಾರಣೆಗಾಗಿ ತಾನು ಮನುಷ್ಯನನ್ನು ಹಿಡಿದು ತಂದಿರುವ ವಾರ್ತೆಯನ್ನು ತಿಳಿಸಿದನು. ಹಿಡಿಂಬೆ ಮಗನನ್ನು ಹರಸಿ, ಅದೆಂಥ ಮನುಷ್ಯನನ್ನು ತಂದಿರುವನೋ ಎಂದು ಕುತೂಹಲದಿಂದ ಕೇಳಿದಳು. ಘಟೋತ್ಕಚನು ‘ಮಾತಿನಲ್ಲಿ ಮನುಷ್ಯನೇ ಹೊರತು, ಅವನ ವೀರ್ಯವನ್ನು ನೋಡಿದರೆ ಮನುಷ್ಯನೆನ್ನುವ ಹಾಗಿಲ್ಲ’ ಎಂದನು. ‘ಹಾಗಾದರೆ ಅವನು ಬ್ರಾಹ್ಮಣನೆ?’ ‘ಬ್ರಾಹ್ಮಣನಲ್ಲ.’ ‘ಮುದುಕನೆ?’ ‘ಮುದುಕನಲ್ಲ.’ “ಹುಡುಗನೆ?’ ‘ಹುಡುಗನೂ ಅಲ್ಲ.’
‘ಹಾಗಾದರೆ, ಅದೆಂತಹವನನ್ನು ಹಿಡಿದುಕೊಂಡು ಬಂದಿರುವೆಯೋ ನೋಡೋಣ’ ಎಂದು ಹಿಡಿಂಬೆ ಈಚೆ ಬಂದೊಡನೆಯೇ ಭೀಮನನ್ನು ಕಂಡು, ‘ಈ ಮನುಷ್ಯನನ್ನೇ ನೀನು ಹಿಡಿದು ತಂದದ್ದು? ಈತನು ಮನುಷ್ಯನಲ್ಲವೋ! ಈತನು ದೇವತೆ’ ಎಂದು ಘಟೋತ್ಕಚನನ್ನು ಗದರಿದಳು. ಘಟೋತ್ಕಚನು ಬೆಪ್ಪಾಗಿ, ‘ದೇವತೆಯೇ? ಯಾರಿಗೆ ದೇವತೆ?’ ಎಂದನು. ‘ನನಗೂ ನಿನಗೂ’ ಎಂದಳು ಹಿಡಿಂಬೆ. ‘ಸಾಕ್ಷಿಯೇನು?’ ಎಂದ ಘಟೋತ್ಕಚ, ‘ಇದೇ ಸಾಕ್ಷಿ’ ಎಂದು ಹಿಡಿಂಬೆಯು ‘ಆರ್ಯಪುತ್ರನಿಗೆ ಜಯವಾಗಲಿ’ ಎಂದು ಭೀಮನನ್ನು ನುಡಿಸಿದಳು.
‘ ಭೀಮನು ಆ ನುಡಿಯನ್ನು ಕೇಳಿ, ಕಣ್ಣೆತ್ತಿ ಹಿಡಿಂಬೆಯನ್ನು ಕಂಡು, ‘ಯಾರು? ದೇವಿ ಹಿಡಿಂಬೆಯೆ? ದೇವಿ, ಹಿಂದೆ ನಾವು ರಾಜ್ಯವನ್ನು ಕಳೆದುಕೊಂಡು ಕಾಡಿನಲ್ಲಿ ಕೋಟಲೆಪಡುತ್ತಿದ್ದಾಗ ನೀನು ನಮ್ಮ ಸಂತಾಪವನ್ನು ಹೋಗಲಾಡಿಸಿದೆ’ ಎಂದು ಅವಳ ಉಪಕಾರವನ್ನು ಸ್ಮರಿಸಿ, ‘ಹಿಡಿಂಬೇ, ಇದೇನಿದು?’ ಎಂದು ಅವಳು ಮನುಷ್ಯಮಾಂಸವನ್ನು ತರಿಸಿಕೊಂಡ ಕಾರಣವನ್ನು ಕುರಿತು ಕೇಳಿದನು, ಹಿಡಿಂಬೆ ಲಜ್ಜೆಯಿಂದ ‘ಅದು, ಹೀಗೆ?’ ಎಂದು ಅವನ ಕಿವಿಯಲ್ಲಿ ಏನೋ ಪಿಸುಗುಟ್ಟಿದಳು. ‘ಓಹೋ! ಹಾಗೋ! ರಾಕ್ಷಸರ ಮನೆಯಲ್ಲಿ ಹುಟ್ಟಿದುದು ಅಷ್ಟೇ ಹೊರತು ನಡತೆಯಲ್ಲಿ ನೀನು ರಾಕ್ಷಸಿಯಲ್ಲ’ ಎಂದು ಭೀಮನು ಹಿಡಿಂಬೆಯನ್ನು ಪ್ರಶಂಸಿಸಿದನು.
ಅನಂತರ ಹಿಡಿಂಬೆಯು ನಡೆದುದು ಏನೊಂದೂ ಅರ್ಥವಾಗದೆ ಕಿಂಕರ್ತವ್ಯಮೂಢನಾಗಿ ನಿಂತಿದ್ದ ಘಟೋತ್ಕಚನನ್ನು ಕರೆದು ‘ಹುಚ್ಚ, ತಂದೆಗೆ ವಂದಿಸು’ ಎಂದಳು. ಘಟೋತ್ಕಚನು ಭೀಮನ ಕಾಲಿಗೆರಗಿ, ‘ತಂದೆಯೇ, ಧೃತರಾಷ್ಟ್ರನ ಮಕ್ಕಳೆಂಬ ಕಾಡಿಗೆ ಕಾಡುಗಿಚ್ಚಾದ ನಾನು, ಘಟೋತ್ಕಚನು, ವಂದಿಸುತ್ತೇನೆ’ ಎಂದು ಅಭಿವಂದಿಸಿ, ತಿಳಿಯದೆ ಮಾಡಿನ ತನ್ನ ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿದನು. ಭೀಮನು ಮಗನನ್ನು ಎತ್ತಿ ತಬ್ಬಿಕೊಂಡು, ‘ಮಗನೆ, ನೀನು ತಿಳಿಯದೆ ಅವಿನಯದಿಂದ ಅಪಚಾರಮಾಡಿದ್ದು ಕೂಡ ನಮಗೆ ಇಷ್ಟವೇ. ಧಾರ್ತರಾಷ್ಟ್ರರ ವನಕ್ಕೆ ಕಾಡುಕಿಚ್ಚಾಗಿರುವ ನಿನ್ನಂತಹ ಮಕ್ಕಳನ್ನೇ ನಿನ್ನ ತಂದೆಯರಾದ ಪಾಂಡವರು ಸದಾ ಬಯಸುವುದು’ ಎಂದು ಅವನನ್ನು ಮೆಚ್ಚಿ, ‘ಅಸಮಾನವಾದ ಬಲಪರಾಕ್ರಮಗಳುಳ್ಳವನಾಗು’ ಎಂದು ಆಶೀರ್ವಾದ ಮಾಡಿದನು.
ಈ ನಡುವೆ ಕೇಶವದಾಸನು ತಾನೂ ತನ್ನ ಹೆಂಡತಿ ಮಕ್ಕಳೊಡನೆ ಭೀಮಘಟೋತ್ಕಚರ ಹಿಂದೆಯೇ ಬಂದಿದ್ದನು. ಈ ಮೊದಲೇ ಅವನಿಗೆ ಮಧ್ಯಮನೆಂದು ಬಂದವನು ಪಾಂಡವಮಧ್ಯಮನಾದ ಭೀಮನೇ ಇರಬೇಕು ಎನ್ನಿಸಿತ್ತು. ಆದರೆ ಆ ರಾಕ್ಷಸನು ಯಾರೆಂಬುದು ತಿಳಿದಿರಲಿಲ್ಲ. ಈಗ ಅವರ ಪರಸ್ಪರ ಸಮಾಗಮವನ್ನು ಕಂಡ ಬಳಿಕ ‘ಹಾಗಾದರೆ ಇವನೇ ಭೀಮನ ಮಗನಾದ ಫಟೋತ್ಕಚನೇನು!’ ಎಂದು ನಿರ್ಭೀತಿಯಿಂದ ಪತ್ನೀಪುತ್ರರೊಡನೆ ಮುಂದೆ ಬಂದನು.
ಘಟೋತ್ಕಚನು ತಂದೆಯ ಅಪ್ಪಣೆಯ ಮೇರೆಗೆ ಕೇಶವದಾಸನಿಗೆ ಅಭಿವಂದಿಸಿದನು. ಕೇಶವದಾಸನು ‘ತಂದೆಯಂತೆಯೇ ಗುಣಶಾಲಿಯೂ ಕೀರ್ತಿವಂತನೂ ಆಗು’ ಎಂದು ಆಶೀರ್ವದಿಸಿದನು.
ಅನಂತರ ಕೇಶವದಾಸನು ಭೀಮನನ್ನು ಕುರಿತು ‘ನೀನು ಈ ದಿನ ನಿನ್ನ ಮಗನನ್ನು ತಡೆದು ನಮ್ಮ ಕುಲವನ್ನು ಉಳಿಸಿದೆ ನಿನ್ನ ಕುಲವನ್ನೂ ಉಳಿಸಿಕೊಂಡೆ’ ಎಂದು ಹೇಳಿ, ಹೊರಡಲು ಅಪ್ಪಣೆ ಕೇಳಿದನು. ಭೀಮನು ಕೂಡ ‘ತಮ್ಮ ಅನುಗ್ರಹದಿಂದ ನಾನು ಈ ದಿನ ನನ್ನ ಪತ್ನಿಪುತ್ರರನ್ನು ಕೂಡಿದೆನು. ಹತ್ತಿರದಲ್ಲಿಯೇ ನಮ್ಮ ಆಶ್ರಮವಿದೆ, ಅಲ್ಲಿ ವಿಶ್ರಮಿಸಿಕೊಂಡು ಹೋಗಬಹುದು’ ಎಂದನು. ಅದಕ್ಕೆ ಕೇಶವದಾಸನು ‘ಈ ದಿನ ನಮಗೆ ಪ್ರಾಣದಾನ ಮಾಡಿದುದಕ್ಕಿಂತ ದೊಡ್ಡ ಆತಿಥ್ಯ ಬೇರೇನು ಬೇಕು! ಆದ್ದರಿಂದ ನಾವಿನ್ನು ಹೊರಡುತ್ತೇವೆ’ ಎಂದೆನ್ನಲು, ‘ಪೂಜ್ಯರು ಹೆಂಡತಿ ಮಕ್ಕಳೊಡನೆ ಹೊರಡಬಹುದು. ಮತ್ತೆ ಹಿಂದಿರುಗಿ ಹೋಗುವಾಗ ಹೀಗೇ ಬಂದು ದರ್ಶನಕೊಡಬೇಕು’ ಎಂದು ಭೀಮನು ಅವನನ್ನು ಪ್ರಾರ್ಥಿಸಿ ಒಪ್ಪಿಸಿದನು.
ಅನಂತರ ಭೀಮನೂ ಹಿಡಿಂಬೆ ಘಟೋತ್ಯಚರೂ ಕೇಶವದಾಸನನ್ನೂ ಅವನ ಕುಟುಂಬವನ್ನೂ ಆಶ್ರಮದ ಬಾಗಿಲವರೆಗೂ ಕಳುಹಿಸಿಕೊಟ್ಟು, ಹಿಂದಿರುಗಿ ಬಂದರು.