ಚಂದಿರನೇತಕೆ ಓಡುವನಮ್ಮ – ನೀ.ರೇ.ಹಿರೇಮಠ ರವರ ಪದ್ಯ

ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೇ
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೇ
ಹಿಂಜಿದ ಅರಳೆಯು ಗಾಳಿಗೆ ಹಾರಿ
ಮೋಡಗಳಾಗಿಹವೇ
ಅರಳೆಯು ಮುತ್ತಿ ಮೈಯನು ಸುತ್ತಿ
ಚಂದ್ರನ ಬಿಗಿಯುವವೆ?
ಮಂಜಿನ ಗಡ್ಡೆಯ ಮೋಡವು ಕರಗಲು
ಚಂದಿರ ನಗುತಿಹನು
ಕರಗಿದ ಮೋಡದ ಸೆರೆಯನು
ಹರಿಯುತ ಬಾನಲಿ ತೇಲುವನು
ಚಂದಿರನೆನ್ನಯ ಗೆಳೆಯನು
ಅಮ್ಮಾ ನನ್ನೊಡನಾಡುವನು
ನಾನೂ ಓಡಲು ತಾನೂ ಓಡುವ
ಚೆನ್ನಿಗ ಚಂದಿರನು
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ.