ಚಂದ್ರಗುಪ್ತ ವಿಜಯ -ಕಾದಂಬರಿ, ಭಾಗ 1-2: ಮೌರ್ಯರ ಮರಣ
ನಂದರನ್ನು ಕೊಂದು ಚಂದ್ರಗುಪ್ತ ಮೌರ್ಯನನ್ನು ಪಾಟಲೀಪುರದ ಸಿಂಹಾಸನದ ಮೇಲೆ ಸ್ಥಿರವಾಗಿ ಕುಳ್ಳಿರಿಸಲು ಚಾಣಕ್ಯನೆಂಬ ಬ್ರಾಹ್ಮಣನು ಕೈಕೊಂಡ ರಾಜತಂತ್ರಗಳೆನ್ನು ವಿವರಿಸುವ ಈ ಐತಿಹಾಸಿಕ ಕಥೆ ಎರಡು ಸಾವಿರ ವರುಷಗಳಿಗಿಂತಲೂ ಹಿಂದಿನದು. ಈ ಕಥೆಯನ್ನು ವಿಶಾಖದತ್ತನೆಂಬ ಕವಿ ಸಂಸ್ಕೃತ ಭಾಷೆಯಲ್ಲಿ ನಾಟಕ ರೂಪವಾಗಿ ಮನಸ್ಸನ್ನು ಸೆರೆಹಿಡಿಯುವಂತೆ ರಚಿಸಿದ್ದಾನೆ. ಈ ನಾಟಕವನ್ನೇ ಆಧಾರವಾಗಿಟ್ಟುಕೊಂಡು, ವಿಷಯಕ್ಕೆ ಸಂಬಂಧಿಸಿದ ನಾಲ್ಕಾರು ಗ್ರಂಥಗಳನ್ನು ಉಪಯೋಗಿಸಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ.
ಲೇಖಕರು : ಎಚ್. ಎಂ. ಶಂಕರನಾರಾಯಣರಾವ್, ಎಂ. ಎ.
1947
ವಿಷಯ ಸೂಚಿಕೆ
- ಪರಿಚಯ
- ಮೌರ್ಯರ ಮರಣ
- ಸಿಂಹ ಪರೀಕ್ಷೆ
- ಚಾಣಕ್ಯ ಪ್ರತಿಜ್ಞೆ
- ಕಾರ್ಯೋದ್ಯೋಗ
- ಸ್ನೇಹ ಸಂಪಾದನೆ
- ಲಂಪಾಕಾಧಿಪತಿಯ ಪರಾಜಯ
- ಸೇನಾ ಪ್ರಯಾಣ
- ಮಿತ್ರಭೇದ
- ಜಪಶಾಲೆ
- ವರ್ತಕರ ವಿಪತ್ತು
- ಗಂಗಾಸ್ನಾನ
- ಕ್ಷಪಣಕ ಪರೀಕ್ಷೆ
- ಪುಣ್ಯಾಶ್ರಮ ದರ್ಶನ
- ಸಂಧಾನ
- ನಂದರ ಮರಣ
- ಕಂಟಕ ನಿವಾರಣೆ
- ರಾಕ್ಷಸನ ತಂತ್ರ
- ಪರ್ವತರಾಜನ ಮರಣ
- ಪಲಾಯನ
- ಕೆಳೆತನ
- ಆಶ್ರಯ
- ರಾಕ್ಷಸನ ಮುದ್ರಿಕೆ
- ಮಿತ್ರಪ್ರೇಮಿ ಚಂದನದಾಸ
- ಪ್ರತೀಕಾರ
- ಕಪಟ ಕಲಹ
- ವಿಷ ಬೀಜ
- ಫಲದ ಮಾರ್ಗದಲ್ಲಿ
- ರಾಕ್ಷಸನ ಸಂಗ್ರಹ
- ಪಟ್ಟಾಭಿಷೇಕ
೧-ಪರಿಚಯ
ಗೌಡದೇಶದಲ್ಲಿ ಹರಿಯುತ್ತಿರುವ ಪವಿತ್ರವಾದ ಗಂಗಾನದಿಯ ತೀರ ದಲ್ಲಿ ಬಹುಕಾಲದ ಹಿಂದೆ ಪಾಟಲೀಪುರವೆಂಬ ಸುಂದರವಾದ ಪಟ್ಟಣ ವೊಂದು ಕಂಗೊಳಿಸುತ್ತಿತ್ತು. ಆ ನಗರದಲ್ಲಿ ಚಂದ್ರವಂಶದ ರಾಜನಾದ ಸರ್ವಾರ್ಥಸಿದ್ದಿ ರಾಜನು ರತ್ನ ಸಿಂಹಾಸನಾರೂಢನಾಗಿ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಮಹಾರಾಜನಿಗೆ ವಕ್ರನಾಸನೇ ವೊದಲಾದ ಎಂಟು ಜನ ಮಂತ್ರಿಗಳಿದ್ದರು. ಇವರಲ್ಲೊಬ್ಬನಾದ ಅಮಾತ್ಯರಾಕ್ಷಸನು ಬಹು ಬುದ್ದಿವಂತ, ವಿವೇಕಿ; ಶೂರ ಮತ್ತು ಸ್ವಾಮಿಭಕ್ತ. ಈತನು ತನ್ನ ಶೌರ್ಯದಿಂದಲ್ಕೂ ಬುದ್ಧಿ ಬಲದಿಂದಲೂ ಅನೇಕ ರಾಜರನ್ನು ಗೆದ್ದು, ಅವರನ್ನು ತನ್ನ ರಾಜನ ವಶವರ್ತಿಗಳನ್ನಾಗಿ ಮಾಡಿ, ರಾಜ್ಯ ಕೋಶಗಳನ್ನು ಹೆಚ್ಚಿಸಿದ್ದನು. ಶೌರ್ಯಾದಿ ಗುಣಗಳಿಂದ ಕೂಡಿದ ಈ ಅಮಾತ್ಯನನ್ನು ಕಂಡರೆ ರಾಜನಿಗೆ ಬಲು ಮಮತೆ. ನಾಡನ್ನು ವಿವೇಕದಿಂದ ಆಳುತ್ತಿದ್ದ ಕಾರಣ, ಜನರಿಗೂ ಅಮಾತ್ಯನು ಅಚ್ಚುಮೆಚ್ಚು.
ಸರ್ವಾರ್ಥಸಿದ್ಧಿ ರಾಯನಿಗೆ ಇಬ್ಬರು ಹೆಂಡಿರು. ಸುನಂದಾದೇವಿ ಪಟ್ಟದರಾಣಿ. ರತಿಯಂತೆ ಚೆಲುವೆಯಾದ ಮುರಾದೇವಿ ರಾಯನ ಬಂಗಾರದ ಹೆಂಡತಿ. ಸಕಲ ಭೋಗಭಾಗ್ಯಗಳಿಂದ ಕೂಡಿದ ರಾಜನು, ದಕ್ಷನಾದ ಅಮಾತ್ಯರಾಕ್ಷಸನಿಗೆ ರಾಜ್ಯಭಾರವನ್ನು ವಹಿಸಿ ಸುಖವಾಗಿ ತನ್ನ ಹೆಂಡಿರೊಡನೆ ಕಾಲ ಕಳೆಯುತ್ತಿದ್ದನು. ಹೀಗಿರಲು ಕಾಲಕ್ರಮದಲ್ಲಿ ವೀತಿಹೋತ್ರರೆಂಬ ಮುನಿಗಳ ಅನುಗ್ರಹದಿಂದ ರಾಜನಿಗೆ ಮುರಾದೇವಿಯಲ್ಲಿ ಒಬ್ಬ ಮಗನೂ, ಪಟ್ಟಿಮಹಿಷಿಯಾದ ಸುನಂದಾದೇವಿಯಲ್ಲಿ ಒಂಬತ್ತು ಜನ ಗಂಡುಮಕ್ಕಳೂ ಹುಟ್ಟಿದರು. ಮುರಾದೇವಿಯ ಮಗನ ಹೆಸರು ಮೌರ್ಯನೆಂದು. ಸುನಂದಾದೇವಿಯ ಒಂಬತ್ತು ಜನ ಮಕ್ಕ ಳಿಗೂ ರಾಜನು ನಂದಶಬ್ದಪೂರ್ವಕವಾಗಿ ನಾಮಕರಣ ಮಾಡಿದನು. ಬಿದಿಗೆಯ ಚಂದ್ರನಂತೆ ದಿನ ದಿನಕ್ಕೆ ಬೆಳೆಯುತ್ತಿದ್ದ ಮಕ್ಕಳನ್ನು ನೋಡಿ ರಾಜನು ಸಂತೋಷದಿಂದಿದ್ದನು.
೨- ಮೌರ್ಯರ ಮರಣ
ಕಾಲ ಕಳೆದಂತೆಲ್ಲ ಮೌರ್ಯನು ಬೆಳೆದು ದೊಡ್ಡವನಾದನು. ರಾಜನು ತನ್ನ ಹಿರಿಯ ಮಗನಿಗೆ ಓದುಬರಹಗಳನ್ನು ಕಲಿಸಿ ನಿಪುಣನನ್ನಾಗಿ ಮಾಡಿದನು. ವಿದ್ಯಾಭ್ಯಾಸ ಮುಗಿದ ಮೇಲೆ ಅನೇಕ ಹೆಣ್ಣುಗಳನ್ನು ತಂದು ಮಗನಿಗೆ ಮದುವೆ ಮಾಡಿದನು. ಶೂರನಾದ ಮೌರ್ಯನಾದರೋ ಒಳ್ಳೆಯವನು, ನಿನಯಶಾಲಿ. ರಾಜ್ಯವಾಳುವುದರಲ್ಲಿ ತಂದೆಗೆ ನೆರವಾಗಿ ನಿಂತನು. ಹಿರಿಯರ ಮಾತೆಂದರೆ ಮೌರ್ಯನಿಗೆ ತುಂಬ ಗೌರವ. ನಾಡಿನ ಜನರಿಗಾದರೋ ಈ ಬಂಗಾರದ ರಾಜಕುಮಾರನನ್ನು ಕಂಡರೆ ಪಂಚಪ್ರಾಣ. ಮೌರ್ಯನಿಗೆ ಇವನ ಹೆಂಡಿರಲ್ಲಿ ಚಂದ್ರಗುಪ್ತನೇ ಮೊದಲಾದ ನೂರುಮಂದಿ ಮಕ್ಕಳಾದರು.
ಇತ್ತ ನವನಂದರೂ ಬೆಳೆದರು. ರಾಕ್ಷಸನು ರಾಜಕುಮಾರರಿಗೆ ಬೇಕಾದ ಎಲ್ಲ ವಿದ್ಯೆಗಳನ್ನೂ ನಂದರಿಗೆ ಕಲಿಸಿದನು. ತನ್ನ ಎಲ್ಲ ಮಕ್ಕಳೂ ನಿಪುಣರಾದುದನ್ನು ನೋಡಿ, ತಂದೆಗೆ ಸಂತೋಷವಾಯಿತು. ಈ ವೇಳೆಗೆ ರಾಜನಿಗೆ ಮುಪ್ಪು ಬಂದಿತ್ತು ; ಆದ್ದರಿಂದ ರಾಜನು ನಂದರಲ್ಲಿ ಹಿರಿಯನನ್ನು ಯುವರಾಜನನ್ನಾಗಿ ಮಾಡಿದನು. ಒಗ್ಗಟ್ಟಿನಲ್ಲಿ ಬಲವಿರುವುದನ್ನರಿತು ಉಳಿದವರು ಅಣ್ಣನ ಮಾತಿನಂತೆ ನಡೆಯುತ್ತಿ ದ್ದರು. ಕಾಲಕ್ರಮದಲ್ಲಿ ಇವರೆಲ್ಲರಿಗೂ ಮದುವೆಯಾಯಿತು.
ಓದುಬರಹಗಳನ್ನು ಕಲಿಸಿ ಮಕ್ಕಳನ್ನು ಚೆನ್ನಾಗಿ ಬೆಳೆಸುವುದು ತಂದೆಯ ಕರ್ತವ್ಯ. ಮೌರ್ಯನು ತನ್ನ ಈ ಕರ್ತವ್ಯಪಾಲನೆಯಲ್ಲಿ ಹಿಂದಾಗಲಿಲ್ಲ. ತನ್ನ ನೂರುಮಂದಿ ಮಕ್ಕಳನ್ನೂ ಜಾಣರನ್ನಾಗಿ ಮಾಡಿದನು. ವಿದ್ಯೆಕಲಿತು ಕೈನೆರೆಗೆ ಬಂದ ಮಕ್ಕಳು ತಂದೆಗೊಂದು ಹೆಮ್ಮೆ. ದಾಯಾದಿಗಳ ಈ ಏಳಿಗೆಯನ್ನು ಕಂಡು ನಂದರಿಗೆ ಹೊಟ್ಟಿ ಉರಿಯಿತು. ” ಹುಟ್ಟುತ್ತ ಅಣ್ಣತಮ್ಮಂದಿರು, ಬೆಳೆಯುತ್ತ ದಾಯಾದಿಗಳು ‘ ಎನ್ನು ವುದು ಸತ್ಯವಾದ ಮಾತು. ನಂದರೆಲ್ಲ ಈಗ ಒಬ್ಬಾಗಿ ಸೇರಿ ಈ ರೀತಿ ಯೋಚಿಸಿದರು “ಈ ಮೌರ್ಯರು ಎಲ್ಲ ವಿಷಯಗಳಲ್ಲೂ ನಮಗಿಂತ ಕುಶಲರು. ಈಗ ನಾವು ಕಾಲಕಳೆದರೆ ಮುಂದೆ ಇವರು ನಮ್ಮ ಅರಸುತನವನ್ನೇ ಬಯಸಬಹುದು. ದೇಹದಲ್ಲಿ ಹುಟ್ಟಿದ ರೋಗ ದೇಹವನ್ನೇ ನಾಶಮಾಡುವಂತೆ, ಕಾಲಕ್ರಮದಲ್ಲಿ ಇವರು ನಮ್ಮನ್ನೇ ನಾಶ ಮಾಡಬಹುದು. ಆದ್ದರಿಂದ ಇವರನ್ನು ಕೂಡಲೇ ಕೊಲ್ಲಬೇಕು. ಇಲ್ಲದಿದ್ದರೆ ಇವರಿಂದ ನಮಗೆ ಕೇಡು ತಪ್ಪದು.’
ನಂದರು ಈ ವಿಷಯವನ್ನು ರಾಕ್ಷಸನೊಡನೆ ಗುಟ್ಟಾಗಿ ಆಲೋಚಿಸಿದರು. ರಾಜಕುಮಾರರ ಮಾತು ರಾಕ್ಷಸನಿಗೆ ಹಿತವೆನಿಸಲಿಲ್ಲ. ಅವನು ಅವರಿಗೆ ” ರಾಜಕುಮಾರರೇ! ಮೌರ್ಯರು ಬಲು ಒಳ್ಳೆಯವರು; ಜನರಿಗೆ ಬೇಕಾದವರು. ಅವರನ್ನು ನೀವು ಕೊಂದರೆ ನಿಮಗೆ ಅಪವಾದ ಬರುತ್ತದೆ. ರಾಜನಿಗೆ ಜನರ ನಂಬಿಕೆ ಅಗತ್ಯ. ಅದನ್ನು ನೀವು ಕಳೆದುಕೊಳ್ಳುತ್ತೀರಿ. ಮೌರ್ಯರು ಮುಂದೆ ನಿಮಗೆ ಹಗೆಗಳಾದಾರೆಂದು ಹೆದರುವಿರಿ ತಾನೆ? ಇದಕ್ಕೆ ಒಂದು ಉಪಾಯ ಹೇಳುತ್ತೇನೆ. ‘ಕಳ್ಳ ! ಕಳ್ಳ ! ಹುಲಿ ಇರಿ’ ಎಂಬ ಗಾದೆಯಂತೆ ಇವರನ್ನು ಹೆಗೆಗಳ ಮೇಲೆ ಕಳುಹಿಸಿ ಕೊಡಿ. ಹೀಗೆ ಮಾಡುವುದರಿಂದ ಮೂರು ಪ್ರಯೋಜನಗಳುಂಟು – ನಿಮಗೆ ಅಪವಾದ ತಪ್ಪುತ್ತದೆ ನಿಮ್ಮ ಹೆಗೆಗಳು ನಾಶ ವಾಗುತ್ತಾರೆ, ಮೌರ್ಯರೂ ಮರಣ ಹೊಂದುತ್ತಾರೆ? ಎಂದನು.
ರಾಕ್ಷಸನ ಮಾತು ನಂದರಿಗೆ ರುಚಿಸಲಿಲ್ಲ. ಅದಕ್ಕೆ ಅವರು ರಾಕ್ಷಸನಿಗೆ ‘ಮೌರ್ಯರು ಹೆಗೆಗಳಿಂದ ಹತರಾದರೆ ಒಳ್ಳೆಯದೇ ಆಯಿತು. ಹಾಗಲ್ಲದೆ ಹೆಗೆಗಳನ್ನೇ ಇವರು ಕೊಂದರೆ ಇವರಿಗೆ ಕೀರ್ತಿ ಬರುತ್ತದೆ. ಆದ್ದರಿಂದ ಬೇರೆ ಉಪಾಯದಿಂದಲೇ ಇವರನ್ನು ಕೊಲ್ಲಬೇಕು. ಆದರೆ ಅಮಾತ್ಯರೇ ! ಒಂದು ಮಾತು. ಈ ನಮ್ಮ ಆಲೋಚನೆ ತಮ್ಮಲ್ಲಿಯೇ ಇರಲಿ. ಗುಟ್ಟು ರಟ್ಬ್ರಾದರೆ ಪ್ರಮಾದವಾದೀತು? ಎಂದು ಅವನನ್ನು ಬೀಳ್ಕೂಟ್ಟರು.
ಮೌರ್ಯರನ್ನು ಹೇಗೆ ಕೊಲ್ಲಬೇಕೆಂದು ನಂದರು ತಮ್ಮಲ್ಲಿಯೇ ಯೋಚಿಸಿಕೊಂಡರು. ಮರುದಿವಸ ದಾರುವರ್ಮನೆಂಬ ಶಿಲ್ಪಿಯನ್ನು ಕರೆದು “ಊರ ಹೊರಗಡೆ ಉದ್ಯಾನದಲ್ಲಿ ವಿಸ್ತಾರವಾದ ಒಂದು ಅರಮನೆಯನ್ನು ಕಟ್ಟು. ಅದರ ಕೆಳಗಡೆ ಒಂದು ನೆಲಮಾಳಿಗೆ ನಿರ್ಮಿತವಾಗಲಿ. ಆ ಅರಮನೆಯ ಮುಂದೆ ಒಂದು ಸರೋವರ, ಅದರ ಸುತ್ತಲೂ ಲತಾಮಂಟಪಗಳು ರಚಿತವಾಗಲಿ. ಇದೆಲ್ಲ ಸಿದ್ಧವಾದ ಮೇಲೆ ನೀನು ಮಾತ್ರ ಅಲ್ಲಿಯೇ ಕಾದಿರು’ ಎಂದು ಅವನಿಗೆ ಅಪ್ಪಣೆ ಮಾಡಿದರು. ಕೆಲವು ದಿನಗಳಲ್ಲೆ ನೆಲಮಾಳಿಗೆ ಸಿದ್ದವಾಯಿತು.
ಹೀಗಿರಲು ಮಾಫಮಾಸ ಬಂತು. ಪ್ರಯಾಗಕ್ಕೆ ಹೋಗಿ ತ್ರಿವೇಣೀ ಸಂಗಮದಲ್ಲಿ ಸ್ನಾನಮಾಡಿ ಬರಲು ರಾಜನಿಗೆ ಮನಸ್ಸಾಯಿತು. ಮೌರ್ಯರನ್ನು ಕೊಲ್ಲುವ ನಂದರ ಕೆಟ್ಟಯೋಚನೆ ರಾಕ್ಷಸನಿಗೆ ತಿಳಿದಿದ್ದಿತಷ್ಟೆ. ಪಟ್ಟಣದಲ್ಲಿದ್ದರೆ ತನಗೂ ಅಪವಾದ ತಟ್ಟುವುದೆಂದು ಯೋಚಿಸಿ ರಾಕ್ಷಸನೂ ರಾಜನೊಡನೆ ಪ್ರಯಾಗಕ್ಕೆ ಹೊರಟಿನು. ರಾಜನ ಪ್ರಯಾಣದ ಸಮಾಚಾರ ಕೇಳಿ ನಂದರಿಗೆ ಬಲು ಸಂತೋಷವಾಯಿತು. ಏಕೆಂದರೆ ಮೌರ್ಯರನ್ನು ಕೊಲ್ಲಲು ಇದೇ ತಕ್ಕಕಾಲ. ಹೆಚ್ಚು ಉತ್ಸಾಹದಿಂದ ಅವರು ತಂದೆಯ ಪ್ರಯಾಣಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೂಟ್ವಿರು.
ರಾಜನು ಪ್ರಯಾಗಕ್ಕೆ ತೆರಳಿದನು. ಹೆಚ್ಚು ಕಾಲಕಳೆಯಲು ಇಷ್ಟಪಡದೆ ನಂದರು ತಾವು ಮಾರನೆಯ ದಿನ ಬೇಟೆಗೆ ಹೋಗುವ ಸಮಾಚಾರವನ್ನು ಊರಿನಲ್ಲಿ ಹಬ್ಬಿಸಿದರು. ಬೇಟೆಗಾರರು ಬಲೆ ಮುಂತಾದ ಸಾಮಾನುಗಳೊಡನೆ ಮುಂಚೆಯೇ ಕಾಡಿಗೆ ಹೋಗಿದ್ದರು. ಬೇಟೆಯಾದ ಮೇಲೆ ಉದ್ಯಾನದ ಅರಮನೆಯಲ್ಲಿ ಭೋಜನಕ್ಕೆ ಏರ್ಪಾಲಾಗಿತ್ತು. ಇಷ್ಟೆಲ್ಲ ಏರ್ಪಾಟು ಮುಗಿದ ಮೇಲೆ ನಂದರು, ಮೌರ್ಯನ ಮಕ್ಕಳನ್ನೂ ಮೌರ್ಯನನ್ನೂ ಕರೆಕಳುಹಿಸಿ ಅವರಿಗೆ “ ಅಣ್ಣಂದಿರಾ! ಬೇಟೆಯಲ್ಲಿ ಸೋಜಿಗವುಂಟೆಂದು ಕೇಳಿರುವೆವು. ಈ ದಿನ ನಾವೆಲ್ಲ ಬೇಟೆಯಾಡಲು ಹೋಗೋಣ. ಬೇಟೆ ಆದಮೇಲೆ ಇಷ್ಟ ಮಿತ್ರರೊಡನೆ ಊರ ಹೊರಗಣ ಉದ್ಯಾನದಲ್ಲಿ ವನಭೋಜನ ಮಾಡಿ ನಾಳೆ ಪಟ್ಟಣಕ್ಕೆ ಹಿಂದಿರುಗೋಣ. ತಂದೆ ಬಂದ ಮೇಲೆ ಇದಕ್ಕೆ ಒಪ್ಪುವರೋ ಇಲ್ಲವೋ ತಿಳಿಯದು. ಆದ್ದರಿಂದ ಈಗಲೇ ಹೊರಡಬೇಕು” ಎಂದು ಬಲವಂತಪಡಿಸಿದರು. ನಂದರ ಮೋಸವನ್ನದರಿಯದೆ ಮೌರ್ಯನು ಆ ಮಾತಿಗೆ ಒಪ್ಪಿ ಮಕ್ಕಳೊಡನೆ ಬೇಟೆಗೆ ಹೊರಟನು.
ಬೇಟೆ ಮುಗಿಯಿತು. ಬೇಟೆಯ ಆಯಾಸವನ್ನು ಕಳೆದುಕೊಳ್ಳಲು ರಾಜಕುಮಾರರು ಉದ್ಯಾನದ ಮರಗಳ ನೆರಳಿನಲ್ಲಿ ಕುಳಿತು ವಿಶ್ರಮಿಸಿಕೊಂಡರು. ಕೊಂಚ ಕಾಲವಾದಮೇಲೆ ನೀರಾಟವಾಡಿ, ಬಟ್ಟೆ ಬರೆಗಳಿಂದ ದೇಹವನ್ನು ಅಲಂಕರಿಸಿಕೊಂಡರು. ಈ ವೇಳೆಗೆ ಭೋಜನ ಸಿದ್ಧವಾಗಿತ್ತು. ನಂದರು ತಮ್ಮ ಇಷ್ಟಮಿತ್ರರಿಗೆ ಉದ್ಯಾನದ ಅರಮನೆಯಲ್ಲಿ ಭೋಜನಕ್ಕೆ ಏರ್ಪಡಿಸಿದ್ದರು. ” ನಾವೆಲ್ಲ ನೆಲ ಮಾಳಿಗೆಯಲ್ಲಿ ಊಟಕ್ಕೆ ಕೂಡೋಣ. ಅದೇ ನಮಗೆ ತಕ್ಕ ಸ್ಥಳ’ ಎಂದು ಹೇಳಿ ಮೌರ್ಯನನ್ನು ಮಕ್ಕಳು ಸಮೇತ ಅಲ್ಲಿ ಕುಳ್ಳಿರಿಸಿದರು. ತಾವೂ ಅಲ್ಲಿಯೇ ಕುಳಿತುಕೊಳ್ಳುವರಂತೆ ನಟಿಸುತ್ತ, ಮೇಲಕ್ಕೆ ಹೋಗುತ್ತ ಕೆಳಕ್ಕೆ ಬರುತ್ತ ಇದ್ದರು. ಎಲ್ಲ ಪದಾರ್ಥಗಳನ್ನು ಬಡಿಸಿದ ಮೇಲೆ “ಇಗೋ, ನಾವು ಬಂದೆವು. ನೀವು ಊಟ ಮಾಡಿ’ ಎಂದು ಹೇಳಿ, ಹೊರಕ್ಕೆ ಬಂದು. ನೆಲಮಾಳಿಗೆಯ ಬಾಗಿಲಿಗೆ ಬೀಗ ಹಾಕಿಸಿದರು. ನಂದರು ಜನರ ಅಪವಾದವನ್ನು ಗಣಿಸಲಿಲ್ಲ; ದೇವರಿಗೆ ಹೆದರಲಿಲ್ಲ. ಹಿರಿದ ಕತ್ತಿಯುಳ್ಳ ಜನರನ್ನು ಬಾಗಿಲಲ್ಲಿ ಕಾವಲಿಟ್ಟು ‘ಮೌರ್ಯರಿಗೆ ಅನ್ನ ನೀರುಗಳನ್ನು ತಂದು ಕೊಡುವಂತೆ ನಟಿಸಿ. ಆದರೆ ಜನರಿಗೆ ಈ ಗುಟ್ಟು ತಿಳಿಯಬಾರದು. ಇನರು ಸತ್ತ ಸುದ್ದಿಯನ್ನು ಗುಟ್ಟಾಗಿ ಬಂದು ನಮಗೆ ತಿಳಿಸಿ’ ಎಂದು ಅಪ್ಪಣೆ ಮಾಡಿ ಪಟ್ಟಣಕ್ಕೆ ಹಿಂದಿರುಗಿ ಬಂದರು.
ನೆಲಮಾಳಿಗೆಯಲ್ಲಿ ಅನ್ನ ನೀರಿಲ್ಲದೆ, ಹಸಿವು ಬಾಯಾರಿಕೆಯಿಂದ ದಿನಕ್ಕೆ ಏಳೆಂಟು ಜನರಂತೆ ಮೌರ್ಯರು ಹೆತ್ತಾರು ದಿನಗಳಲ್ಲಿ ಚಂದ್ರಗುಪ್ತನ ಹೊರತಾಗಿ ಎಲ್ಲರೂ ಜೀವ ಬಿಟ್ಟರು. ಆಗ ಚಂದ್ರಗುಪ್ತನು ನೆಲಮಾಳಿಗೆಯ ಬೆಳಕಂಡಿಯಿಂದ ದೂತರನ್ನು ಹುರಿತು ‘ಅಯ್ಯಾ, ದೂತರಿರಾ! ಸೆರೆಸಿಕ್ಕವರಲ್ಲಿ ಎಲ್ಲರೂ ಸತ್ತು ಹೋದರು. ನಾನೊಬ್ಬನು ಮಾತ್ರ ಉಳಿದಿದ್ದೇನೆ. ಇನ್ನು ಎರಡು ದಿನಗಳಲ್ಲಿ ನನಗೂ ಸಾವು ಸಮಾಸಿಸುವಂತೆ ಕಾಣುತ್ತದೆ. ಇಲ್ಲಿಯಾದರೋ ಹೆಣಗಳ ವಾಸನೆ ಹೆಚ್ಚಾಗಿದೆ. ನನ್ನನ್ನು ಇಲ್ಲಿಂದ ತೆಗೆದು ಬೇರೆ ಕಡೆ ಇಟ್ಟರೆ ನೆಮ್ಮದಿಯಿಂದ ಪ್ರಾಣ ಬಿಡುವೆನು. ಇದನ್ನು ರಾಜರಿಗೆ ತಿಳಿಸಿ’ ಎಂದನು.
ದೂತರು ನಂದರಿಗೆ ಈ ಸಮಾಚಾರವನ್ನು ತಿಳಿಸಿದರು. ಇದನ್ನು ಕೇಳಿ ನಂದರಿಗೆ ಆನಂದವಾಯಿತು. ‘ಚಂದ್ರಗುಪ್ತನನ್ನು ಬೇರೆ ಕಡೆ ಸೆರೆಯಿಡಿ. ಅವನು ಸತ್ತ ಸುದ್ದಿಯನ್ನು ನಮಗೆ ತಿಳಿಸಿ. ನೆಲಮಾಳಿಗೆಗೆ ಬೆಂಕಿಯಿಡಿ.’ ಎಂದು ಹೇಳಿ ಕಳುಹಿಸಿದರು. ನಂದರ ಆಜ್ಞೆ ನೆರವೇರಿತು. ಅವರ ಹೆಗೆಗಳು ಸುಟ್ಟು ಬೂದಿಯಾದರು. ಆದರೆ ಈ ಬೂದಿಯಲ್ಲಿ ಸಣ್ಣ ಕಿಡಿಯೊಂದು ಮಾತ್ರ ಉಳಿಯಿತು.
ಇತ್ತ ಪ್ರಯಾಗದಲ್ಲಿ ಒಂದು ದಿನ ರಾಜನ ಪ್ರಿಯಪತ್ನಿಯಾದ ಮುರಾದೇವಿ ಗಂಗೆಯನ್ನು ಸೇರಿದಳು. ರಾಜನು ತನ್ನ ಪ್ರಿಯೆಗಾಗಿ ಬಹುವಾಗಿ ಶೋಕಪಟ್ಟನು. ಈಗ ಕುರುವಿನ ಮೇಲೆ ಬೊಕ್ಕೆ ಎದ್ದಂತಾಯಿತು. ಮೌರ್ಯರನ್ನು ಕೊಂದ ನಂದರಿಗೆ ಮನಸ್ಸಿನಲ್ಲಿ ನೆಮ್ಮದಿಯೇ ಇರಲಿಲ್ಲ. ತಂದೆ ಏನೆನ್ನುವರೋ ಎಂಬ ಭೀತಿ ಅವರನ್ನು ಕಾಡುತ್ತಲೇ ಇತ್ತು. ಈ ತಪ್ಪಿನಿಂದ ಜಾರಿಕೊಳ್ಳಲು ಅವರು ತಂದೆಗೆ ” ನೀನಿಲ್ಲದ ಕಾಲದಲ್ಲಿ ಇಲ್ಲಿ ಕಷ್ಟದ ಮೇಲೆ ಕಷ್ಟ ಬಂದೊದಗಿದೆ. ಒಂದು ದಿನ ಮೌರ್ಯರು ಬೇಟೆಯಾಡಿ ಬಂದು ಉದ್ಯಾನದ ಅರಮನೆಯ ನೆಲ ಮಾಳಿಗೆಯಲ್ಲಿ ಕುಳಿತು ಅತಿಯಾಗಿ ಮದ್ಯಪಾನ ಮಾಡಿದರು. ಆಮೇಲೆ ಅವರು ತಮ್ಮಲ್ಲಿಯೇ ಹೋರಾಡುತ್ತಿರಲು ನೆಲಮಾಳಿಗೆ ಕುಸಿದು ಬಿದ್ದು ಮೌರ್ಯರೆಲ್ಲ ಸತ್ತರು. ಚಂದ್ರಗುಪ್ತನೊಬ್ಬನು ಮಾತ್ರ ಬದುಕಿದ್ದಾನೆ. ಈಗ ಅವನೂ ಉಳಿಯುವ ಆಸೆ ಇಲ್ಲ. ನಮಗಂತೂ ಬಹಳ ಭಯವಾಗಿದೆ. ನೀವು ಬೇಗ ಬನ್ನಿ’ ಎಂದು ಪತ್ರ ಬರೆದು ಕಳುಹಿಸಿದರು. ಪತ್ರವನ್ನು ನೋಡಿದೊಡನೆಯೇ ನಂದರು ಮೌರ್ಯರನ್ನು ಕೊಂದಿರೆಬಹುದೆಂದು ರಾಕ್ಷಸನು ಊಹಿಸಿದನು. ಈ ಸುದ್ದಿ ಕೇಳಿ ರಾಜನಿಗೆ ಬಲು ಸಂಕಟವಾಯಿತು. ‘ಪುತ್ರಶೋಕಂ ನಿರಂತರಂ’ ಎನ್ನುವುದು ಆರ್ಯೋಕ್ತಿಯಲ್ಲವೇ? ಕೆಲಸ ಮಿಂಚಿಹೋಯಿತು, ಮಾಡುವುದೇನು? ರಾಜನು ಮಕ್ಕಳನ್ನು ಶಪಿಸಿದನು. ಈ ಸಂಸಾರದಲ್ಲಿ ಯಾರಿಗೆ ತಾನೆ ಎಲ್ಲ ಕಾಲದಲ್ಲೂ ಸುಖವುಂಟು? ಹೆಂಡತಿಮಕ್ಕಳು ಸತ್ತ ದುಃಖ ಮುಪ್ಪಿನಲ್ಲಿ ರಾಜನಿಗೆ ಜೊತೆಯಾಗಿ ಬಂದೊದಗಿತು. ಇದ್ದದ್ದರಲ್ಲಿ ಸಮಾಧಾನಮಾಡಿಕೊಂಡು ಮಕ್ಕಳಿಗೆ ತಿಲೋದಕವನ್ನು ಬಿಟ್ಟು ಅರಸನು ಪಟ್ಟಣಕ್ಕೆ ಹಿಂದಿರುಗಿದನು.
ಮೌರ್ಯರು ಸತ್ತ ಸುದ್ದಿ ದೇಶಗಳಲ್ಲಿ ಬಹು ಬೇಗ ಹರಡಿತು.
ಮುಂದಿನ ಅಧ್ಯಾಯ: ೩. ಸಿಂಹ ಪರೀಕ್ಷೆ