ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 10: ಜಪಶಾಲೆ
ಇತ್ತ ಭಾಗುರಾಯಣನು ಶತ್ರು ಪಲಾಯನಕ್ಕಾಗಿ ಜಯಶೀಲರಾದ ಬ್ರಾಹ್ಮಣರನ್ನು ವಿಚಾರಿಸುತ್ತಿದ್ದನು. ಕಪಣಕನ ಶಿಷ್ಯನಾದ ಸಿದ್ಧಾರ್ಥಕನು ಭಾಗುರಾಯಣನ ಬಳಿ ವೈದ್ಯವೇಷದಿಂದ ಇರುತ್ತಿದ್ದನಷ್ಟೆ.
ಅವನು ಚಾಣಕ್ಯನ ರಾಜಕಾರ್ಯಕ್ಕೆ ಅನುಕೂಲವಾಗುವಂತೆ ಸರಯೂ ನದಿಯ ತೀರದಲ್ಲಿ ಜಪಶಾಲೆಯನ್ನು ಮಾಡಿಸಬೇಕೆಂದು ಯೋಚಿಸಿ . ಸೇನಾಪತಿಗಳೇ, ಗಂಗಾಸರಯೂ ಸಂಗಮದ ಪೂರ್ವಭಾಗ ಜಪಕ್ಕೆ ಅನುಕೂಲವಾದ ಸ್ಥಳ. ಏಕೆಂದರೆ ಜಪ ಅಲ್ಲಿ ಬಹು ಬೇಗ ಸಿದ್ದಿಸುವುದೆಂದು ಬಲ್ಲವರು ಹೇಳುವರು.’ ಎಂದನು. ಅಷ್ಟರಲ್ಲೇ ಸಿದ್ಧಾರ್ಥಕನ ಸ್ನೇಹಿತನಾದ ಮಾಸೋಪವಾಸಿ ಮುನಿಯ ವೇಷವನ್ನು ಧರಿಸಿ ಅದೃಷ್ಟವಶದಿಂದ ಬೀದಿಯಲ್ಲಿ ಹೋಗುವಂತೆ ನಡೆಯುತ್ತಿದ್ದನು. ಸಿದ್ಧಾರ್ಥಕನು ‘ಇದೇನು ಸೋಜಿಗ! ಇವರು ಇಲ್ಲಿಗೆ ಬರಲು ಕಾರಣವೇನು? ‘ ಎಂದು ದೂರದಿಂದಲೇ ಅವನಿಗೆ ಕೈ ಮುಗಿದನು. ಭಾಗುರಾಯಣನು ಇದನ್ನು ನೋಡಿ ‘ಸಿದ್ದಾರ್ಥಕನೇ ಇದೇನು? ಇನರಾರು?’ ಎನಲು, ಆತನು ‘ಸೇನಾಪತಿಗಳೇ, ಇವರು ಮಾಸೋಸವಾಸಿಗಳೆಂಬ ಮಹಾಮುನಿಗಳು. ನಮ್ಮ ಪುಣ್ಯದಿಂದಲೇ ಇವರು ಈ ಕಡೆ ಬಂದಿರುವಂತಿದೆ. ಇವರ ಕ್ಷೇಮಸಮಾಚಾರವನ್ನು ಕೇಳುವ ಮಾತು ಹಾಗಿರಲಿ. ಏನಾದರೂ ಮಾಡಿ ಈ ಜಪದ ಆರ್ತ್ವಿಜ್ಯಕ್ಕೆ ಇವರನ್ನು ಒಪ್ಪಿಸಿದರೆ ಇವರಿಂದ ಕೆಲಸ ಕೈಗೂಡುವುದರಲ್ಲಿ ಸಂದೇಹವಿಲ್ಲ’ ಎಂದನು. ಸಿದ್ಧಾರ್ಥಕನ ಮಾತಿನಂತೆ ಭಾಗುರಾಯಣನು ಮಾಸೋಪವಾಸಿಯನ್ನು ವಿನಯದಿಂದ ಕರೆತಂದು ಅವನಿಗೆ ನಾನಾ ಬಗೆಯಾಗಿ ಹೇಳಿಸಿ ಆರ್ತ್ವಿಜ್ಯಕ್ಕೆ ಒಪ್ಪುವಂತೆ ಮಾಡಿದನು. ಸಿದ್ಧಾರ್ಥಕನು ಹೇಳಿದ ಸ್ಥಳದಲ್ಲೇ ಜಪ ಶಾಲೆ ರಚಿತವಾಯಿತು. ಅವನ ಕಡೆಯ ಬ್ರಾಹ್ಮಣರೇ ಮಾಸೋ ವಾಸಿಗೆ ಜಪದಲ್ಲಿ ಸಹಾಯಕರಾಗಿ ನಿಂತರು. ತನ್ನ ನಾಲ್ಕು ಜನ ಶಿಷ್ಯರಿಂದ ಕೂಡಿ ಮಾಸೋಪವಾಸಿ ಚಾಣಕ್ಯನ ಆಗಮನವನ್ನೇ ಕಾದುಕೊಂಡಿದ್ದನು.
ಇತ್ತ ರಾಕ್ಷಸನು ತನ್ನ ಮನಸ್ಸಿನಲ್ಲಿ ಈ ರೀತಿ ಯೋಚಿಸಿದನು. ” ನಂದರು ನಿಷ್ಕಾರಣವಾಗಿ ಮೌರ್ಯರನ್ನು ಕೊಂದರು. ಇದರಿಂದ ನಮ್ಮ ಅಧಿಕಾರಿಗಳಿಗೆ ಇವರಲ್ಲಿ ವಿಶ್ವಾಸ ತಪ್ಪಿರಬಹುದು. ಇವರು ತಮ್ಮ ಕಾರ್ಯಸಾಧನೆಗಾಗಿ ನಂದರಲ್ಲಿ ಸ್ವಾಮಿ ಭೃತ್ಯರಂತೆ ನಟಿಸುತ್ತ ದಂಡೆತ್ತಿ ಬರುತ್ತಿರುವ ಚಂದ್ರಗುಪ್ತನಲ್ಲಿ ಪ್ರೀತಿಯನ್ನಿಟ್ಟಿರಬಹುದು. ಚಂದ್ರಗುಪ್ತ ಶೂದ್ರ ಸ್ತ್ರೀಯ ಮೊಮ್ಮಗ. ರಾಜ್ಯಕ್ಕೆ ಯೋಗ್ಯನಲ್ಲವೆಂಬುದನ್ನು ಮರೆತಿರಬಹುದು. ರಾಜಕಾರ್ಯ ಪ್ರಬಲವಾಗಿರುವಾಗ ಈ ವಿಷಯದ ಚರ್ಚೆಯ ಗೋಜಿಗೇ ಈಗ ಹೋಗಬಾರದು. ಈ ಸಮಯದಲ್ಲಿ ಸೇನಾಪತಿಗಳನ್ನು ಬಹುಮಾನಗಳಿಂದ ಪ್ರೋತ್ಸಾಹಿಸಿ, ಅವರಿಗೆ ಚಂದ್ರಗುಪ್ತನಲ್ಲಿ ಉಪೇಕ್ಷೆ ಹುಟ್ಟುವಂತೆ ಮಾಡಬೇಕು.” ಹೀಗೆ ನಿಶ್ಚಯಿಸಿ, ಭಾಗುರಾಯಣಾದಿ ಸೇನಾಪತಿಗಳನ್ನು ರಾಜಸಭೆಗೆ ಕರೆಸಿ ಕೊಂಡು ‘ಸೇನಾಪತಿಗಳೇ, ನಂದರ ವಿಜಯವೇ ನಿಮ್ಮ ಅಭ್ಯುದಯ. ಶತ್ರು ದಂಡೆತ್ತಿ ಬರುವ ಈ ವೇಳೆಯಲ್ಲಿ ಸ್ವಾಮಿಕಾರ್ಯದಲ್ಲಿ ನೀವು ಎಚ್ಚರಿಕೆಯಿಂದಿರಬೇಕು.’ ಎಂದು ಹುರಿದುಂಬಿಸಿ, ವಸ್ತ್ರಾಭರಣಗಳಿಂದ ಅವರನ್ನು ಬಹುಮಾನಿಸಿ ಕಳುಹಿಸಿದನು.
ಮುಂದಿನ ಅಧ್ಯಾಯ: ೧೧. ವರ್ತಕರ ವಿಪತ್ತು