ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 11: ವರ್ತಕರ ವಿಪತ್ತು

೧೧. ವರ್ತಕರ ವಿಪತ್ತು

ವೇಗಶರ್ಮನು ಗುರುವಿನ ಅಪ್ಪಣೆಯಂತೆ ಕ್ಷಪಣಕನ ಲೇಖನವನ್ನು ತಂದು ಚಾಣಕ್ಯನಿಗೆ ಕೊಟ್ಟನು. ಅದನ್ನು ಓದಿಕೊಂಡು ಚಾಣಕ್ಯನು ಚಂದ್ರಗುಪ್ತನಿಗೆ ‘ವತ್ಪ, ರಾಕ್ಷಸನು ನಮ್ಮ ನಾಶಕ್ಕೆ ಬಲವಾದ ತಂತ್ರಹೊಡಿದ್ದಾನೆ. ನಂದರ ಮಂತ್ರಿಗಳು ವರ್ತಕ ವೇಷದಿಂದ ಪರ್ವತರಾಜನ ಬಳಿಯಲ್ಲಿದ್ದು ನಮ್ಮ ನಾಶಕ್ಕೆ ಸಮಯ ಕಾಯುತ್ತಿದ್ದಾರೆ. ಈ ವಿಷಯವನ್ನು ನಮ್ಮ ಮಿತ್ರನಾದ ಇಂದ್ರಶರ್ಮನು ಬರೆದು ಕಳುಹಿಸಿದ್ದಾನೆ. ಈ ಕಪಟವೇ ನಂದರ ನಾಶಕ್ಕೆ ಕಾರಣವಾಗಬಹುದು. ಈಗಲೇ ಈ ಅಂಶವನ್ನು ಪರ್ವತರಾಜನಿಗೆ ತಿಳಿಸಿ ರಾಕ್ಷಸನ ತಂತ್ರಕ್ಕೆ ಪ್ರತೀಕಾರಮಾಡಿ ಜಯಸಂಪಾದಿಸಬೇಕು’ ಎಂದು ಪರ್ವತರಾಜನ ಬಳಿಗೆ ಬಂದು ಆತನಿಗೆ ಈ ರೀತಿ ಹೇಳಿದನು–

“ರಾಜನೇ, ಧನದ ಮೇಲೆ ಈ ಲೋಕ ನಿಂತಿದೆ. ಅದು ಎಲ್ಲರಿಗೂ ಹುಚ್ಚು ಹಿಡಿಸುವುದು. ಈಗಿನ ಸಮಯದಲ್ಲಿ ಧನದಿಂದ ಮಿತ್ರರು ಶತ್ರುಗಳಾಗಬಹುದು ; ಶತ್ರುಗಳು ಮಿತ್ರರಾಗಬಹುದು. ನೀನು ಚಂದ್ರಗುಸ್ತನಿಗೆ ಕೊಟ್ಟಿರುವ ಅಭಯವನ್ನು ರಾಕ್ಷಸನು ತಿಳಿದು, ನಿನಗೂ ನಿನ್ನ ಬಳಿಯಲ್ಲಿರುವ ಅರಸರಿಗೂ ಜಗಳ ಗಂಟಕ್ಕುವ ಉಪಾಯ ಹೊಡಿದ್ದಾನೆ. ಅವರ ಬಳಿ ಇರುವ ವರ್ತಕರಿಗೆ ರಾಕ್ಷಸನ ಪತ್ರ ಬಂದಿದೆ. ಈ ಅಂಶವನ್ನು ಚೆನ್ನಾಗಿ ಪರಿಶೋಧಿಸಬೇಕು.

ಚಾಣಕ್ಯನು ಈ ರೀತಿ ಹೇಳುತ್ತಿರುವ ಸಮಯಕ್ಕೆ ಸರಿಯಾಗಿ ದೂತನೊಬ್ಬನು ಲೇಖನದೊಡನೆ ಬಂದಿದ್ದ ಪಾಟಿಲೀಪುರದ ಗೂಢಚಾರನನ್ನು ಹಿಡಿದು ತಂದು ಪರ್ವತರಾಜನ ಮುಂದೆ ನಿಲ್ಲಿಸಿದನು. ಗೂಢಚಾರನಲ್ಲಿದ್ದ ಲೇಖನಗಳನ್ನು ಓದಿಕೊಂಡು ರಾಜನು ಅದರ ವಿವರಗಳನ್ನು ತಿಳಿದುಕೊಂಡನು. ಚಾಣಕ್ಯನು ರಾಕ್ಷಸನ ವಿಷಯವಾಗಿ ಹೇಳಿದ ಅಭಿಪ್ರಾಯ ರಾಜನ ನಿದರ್ಶನಕ್ಕೆ ಬಂತು. ಕೂಡಲೇ ಚಾಣಕ್ಯನು ಕ್ಷಪಣಕನ ಪತ್ರವನ್ನು ರಾಜನಿಗೆ ತೋರಿಸಿದನು. ‘ಈ ಗೂಢಮಂತ್ರಿಗಳಿಗೆ ಏನು ದಂಡನೆ ಮಾಡಬೇಕು? ಕ್ರೂರವಾದ ಶಿಕ್ಷೆ ಮಾಡಿದರೆ ಈ ಅರಸರಿಗೆ ಮುಖಭಂಗವಾಗಿ ರಾಜಕಾರ್ಯ ಕೆಡಬಹುದು ಹೀಗೆಂದು ಯೋಚಿಸಿ, ಪರ್ವತರಾಜನು ಚಾಣಕ್ಯನ ಮಾತಿನಂತೆ ಈ ಎಂಟು ಜನ ವರ್ತಕರನ್ನು ದಂಡಿಸದೆ ಕಾವಲಿಟ್ಟು ಅವರ ದೇಶಗಳಿಗೆ ಕಳುಹಿಸಿದನು. ರಾಜನ ಸಾಮಂತರು ಈ ವಿಷಯವಾಗಿ ಏನೊಂದೂ ಮಾತನಾಡಲಿಲ್ಲ. ತೆರೆಯ ಮರೆಯಲ್ಲಿ ಏನು ನಡೆದಿದೆಯೋ ಎಂದು ಅವರು ಸುಮ್ಮನಿದ್ದರು. ಇದೆಲ್ಲವನ್ನೂ ನೋಡಿ ಪಾಟಲೀಪುರದ ಇತರ ಚಾರರು ಹೆದರಿ ತಮ್ಮಲ್ಲಿದ್ದ ಕಾಗದಗಳನ್ನು ಹರಿದು ಭಕ್ಷಿಸಿ ತಪ್ಪಿಸಿಕೊಂಡು ಹಿಂದಿರುಗಿ ಹೋದರು.

ವರ್ತಕರನ್ನು ದಂಡಿನಿಂದ ಹೊರಡಿಸಿದ ಮೇಲೆ, ಚಾಣಕ್ಯನು ವೇಗಶರ್ಮನಿಂದ ಪಾಟಲೀಪುರದ ವಿವರಗಳನ್ನೆಲ್ಲ ತಿಳಿದುಕೊಂಡನು. ನಂದರ ಸಂಹಾರಕ್ಕೆ ಅನುಕೂಲವಾದ ಎಲ್ಲ ಏರ್ಪಾಟುಗಳನ್ನು ಇಂದುಶರ್ಮನು ಮಾಡಿದ್ದಾನೆಂದು ಚಾಣಕ್ಕನಿಗೆ ಮನದಟ್ಟಾಯಿತು. ವೇಗಶರ್ಮನನ್ನು ಕುರಿತು ಚಾಣಕ್ಯನು ‘ವತ್ಸ, ನೀನು ಹೇಳಿದುದೆಲ್ಲ ನಮ್ಮ ಮನಸ್ಸಿಗೆ ಬಂತು. ಈಗ ರಾಕ್ಷಸನ ಸಂಧಾನ ಮುರಿದಿರುವ ಕಾರಣ ಅವನಿಗೆ ಇಂದುಶರ್ಮನಮೇಲೆ ಸಂಶಯ ಬರುವುದು. ಆದ್ದರಿಂದ ಇಂದುಶರ್ಮನಲ್ಲಿ ರಾಕ್ಷಸನಿಗೆ ಕಪಟ ತೋರದ ರೀತಿ ಎಚ್ಚರಿಕೆಯಿಂದಿರುವಂತೆ ಆತನಿಗೆ ತಿಳಿಸು. ಅಲ್ಲದೆ ಬುದ್ಧಿವಂತನಾದ ಮಾಸೋಪವಾಸಿಗೆ ನಾವು ಈ ರೀತಿ ಹೇಳಿದೆವೆಂದು ಗುಟ್ಟಾಗಿ ತಿಳಿಸು. ‘ನಂದರು ಪಟ್ಟಣದಿಂದ ಹೊರಟು ತಮ್ಮ ದಂಡಿನ ಬೀಡಾರಕ್ಕೆ ಬರುವ ವೇಳೆಯಲ್ಲಿ ಆತನು ಶಿಷ್ಯಸಮೇತನಾಗಿ ಅರಸರಿಗೆ ಕಾಣಿಸಿಕೊಂಡು ಅವರಿಗೆ ಫಲ ಮಂತ್ರಾಕ್ಷತೆಗಳನ್ನು ಕೊಟ್ಟು ಮೃದುವಾದ ಮಾತನ್ನಾಡಲಿ. ಅವರಿಗೆ ಜಪಹೋಮಗಳಲ್ಲಿ ನಂಬಿಕೆಯನ್ನುಂಟುಮಾಡಿ ಮೂರನೆಯ ದಿನ ನಾಲ್ಕನೆಯ ಜಾವದಲ್ಲಿ ನಡೆಯುವ ಪೂರ್ಣಾಹುತಿಯ ಸಮಯಕ್ಕೆ ಅವರು ಜಪಶಾಲೆಗೆ ಬರುವಂತೆ ಮಾಡಲಿ. ಆಗ ಜಪಶಾಲೆಯ ಸುತ್ತಲೂ ಶೂದ್ರಾದಿಗಳ ಸಂಪರ್ಕವಿಲ್ಲದಂತೆ ಮಾಡಿಸಬೇಕು. ನಿನಗೆ ಮಂಗಳವಾಗಲಿ’ ಎಂದು ಅವನನ್ನು ಕಳುಹಿಸಿಕೊಟ್ಟನು. ಚಾಣಕ್ಯನ ಸಂದೇಶ ಇಂದುಶರ್ಮ, ಮಾಸೋಪವಾಸಿಗಳಿಗೆ ತಿಳಿಯಿತು.

ರಾಕ್ಷಸನಿಗೆ ಭೇದೋಪಾಯ ನಷ್ಟವಾದರೆ, ತನ್ನಲ್ಲಿ ಅವನಿಗೆ ಸಂಶಯ ಹುಟ್ಟಿ ತನ್ನನ್ನು ತೊಂದರೆಪಡಿಸಬಹುದೆಂದು ತಿಳಿದು, ತನ್ನ ಶಿಷ್ಯರು ಕೆಲಕಾಲ ತನ್ನ ಬಳಿಗೆ ಬರಕೂಡದೆಂದು ಅವರಿಗೆ ತಿಳಿಸಿ ಊರ ಹೊರಗಣ ಜಗತೀಕಟ್ಟೆಯಲ್ಲಿ ಕ್ಷಪಣಕನು ಏಕಾಂಗಿಯಾಗಿ ಮೌನದಿಂದಿದ್ದು ಬಿಟ್ಟನು.


ಮುಂದಿನ ಅಧ್ಯಾಯ: ೧೨. ಗಂಗಾಸ್ನಾನ


Leave a Reply

Your email address will not be published. Required fields are marked *