ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 12: ಗಂಗಾಸ್ನಾನ

೧೨. ಗಂಗಾಸ್ನಾನ

ವರ್ತಕರನ್ನು ಅವರವರ ದೇಶಗಳಿಗೆ ಕಳುಹಿಸಿದ ಮೇಲೆ ಚಾಣಕ್ಯನು ಮುಂದಿನ ರಾಜಕಾರ್ಯವನ್ನು ಯೋಚಿಸಿದನು. ಪರ್ವತರಾಜನಿಗೆ ಚಾಣಕ್ಯನು ” ರಾಜನೇ, ವೇಗವಾಗಿ ಹರಿಯುವ ಪ್ರವಾಹಕ್ಕೆ ಮರಳು ಸೇತುವೆಯನ್ನು ಕಟ್ಟಿದಂತೆ ರಾಕ್ಷಸನು ಮಾಡಿದ ಪ್ರಯತ್ನ ನಷ್ಟವಾಯಿತು. ಇದು ನಮಗೊಂದು ವಿಜಯವೆಂದು ತಿಳಿ. ಇನ್ನು ನಾವು ಸುಮ್ಮನಿರಬಾರದು. ಎಲ್ಲರಿಗೂ ತಿಳಿಯುವಂತೆ ಪ್ರಕಟವಾಗಿ ಕಾರ್ಯಸಾಧನೆ ಮಾಡಿ ಜಯಸಂಪಾದಿಸಬೇಕು. ಈಗ ನಮಗೆ ಸೈನ್ಯದೊಡನೆ ಬಂದು ಸಹಾಯಮಾಡಬೇಕೆಂದು ನಂದರ ಮಿತ್ರನಾದ ಕಾಶೀರಾಜನಿಗೆ ಲೇಖನವನ್ನು ಬರೆದು ಕಳುಹಿಸು. ಹಾಗೆ ಮಾಡುವುದರಿಂದ ಲಾಭವುಂಟು. ಈ ಕಾರ್ಯವನ್ನು ಸಾಧಿಸಿಕೊಂಡು ಬರಲು ಕಮಲಾಸೀಡನನ್ನು ನಮ್ಮಲ್ಲಿಗೆ ಕಳುಹಿಸು” ಎಂದನು. ಚಾಣಕ್ಯರ ಮಾತಿಗೊಪ್ಪಿ ಪರ್ವತರಾಜನು ತನ್ನ ನಿಯೋಗಿಯನ್ನು ಚಾಣಕ್ಯನ ಸಮೀಪಕ್ಕೆ ಕಳುಹಿಸಿದನು.

ಚಾಣಕ್ಯನು ಕಾಶೀರಾಜನಿಗೆ ಲೇಖನವನ್ನು ಬರೆಸಿ, ಅದಕ್ಕೆ ರಾಜಮುದ್ರೆಯನ್ನೊತ್ತಿ, ಅದನ್ನು ಕೆಮಲಾಪೀಡನ ವಶಕ್ಕೆ ಕೊಟ್ಟು ಆತನು ಅಲ್ಲಿ ಮಾಡಬೇಕಾದ ಕೆಲಸಗಳನ್ನು ತಿಳಿಸಿ ಕಳುಹಿಸಿಕೊಟ್ಟನು. ಕಾಶೀಪಟ್ಟಣವನ್ನು ಸೇರಿದ ಮೇಲೆ ಕಮಲಾಪೀಡನು, ಕಾಶೀಸಟ್ಟಣದಿಂದ ಪಾಟಿಲೀಪುರಕ್ಕೆ ಹೋಗಿ ಬರುವ ನಡುದಾರಿಯಲ್ಲಿ ಕಾಶೀರಾಜನ ದೂತರು ಪಾಟಲೀಪುರಕ್ಕೆ ಹೋಗಿ ಬರುವುದನ್ನು ಗಮನಿಸಲು, ತನ್ನಿಬ್ಬರು ದೂತರನ್ನು ಕಾವಲಿಟ್ಟನು. ಈ ಏರ್ಪಾಟು ಮುಗಿದ ಮೇಲೆ ಕಮಲಾಪೀಡನು ಕಾಶೀರಾಜನನ್ನು ಬಂದು ಕಂಡು ಪರ್ವತರಾಜನು ಕೊಟ್ಟ ಲೇಖನವನ್ನು ಉಡುಗೊರೆಯೊಡನೆ ಒಪ್ಪಿಸಿದನು. ಕಾಶೀರಾಜನು ಆ ಪತ್ರವನ್ನು ಬಿಚ್ಚಿ ಓದಿಕೊಂಡನು. ನಂದರ ನಾಶದಲ್ಲಿ ಕಾಶೀರಾಜನು ಸೈನ್ಯದೊಡನೆ ಬಂದು ಚಂದ್ರಗುಪ್ತನಿಗೆ ಸಹಾಯ ಮಾಡಬೇಕೆಂಬುದೇ ಈ ಪತ್ರದ ಸಾರಾಂಶ. ಪತ್ರವನ್ನು ಓದಿಕೊಂಡ ಮೇಲೆ ಕಾಶೀರಾಜನು ‘ಈ ನಿಯೋಗಿ ಇಲ್ಲಿಗೆ ಬಂದಿರುವ ಸುದ್ದಿ ಮೊದಲು ನಂದರಿಗೆ ತಿಳಿದರೆ ಪ್ರಭುಗಳಿಗೆ ನನ್ನಲ್ಲಿ ಅಪನಂಬಿಕೆಯುಂಟಾಗುವುದು ; ಅಲ್ಲದೆ ನಾನು ಅವರ ಕೋಪಕ್ಕೂ ಗುರಿಯಾಗಬಹುದು. ಆದ್ದರಿಂದ ಈ ಸುದ್ದಿಯನ್ನು ನಾನೇ ಮೊದಲು ಅವರಿಗೆ ತಿಳಿಸುವೆನು’ ಎಂದು ನಿರ್ಧರಿಸಿ, ಕಮಲಾಪೀಡನಿಗೆ ‘ಅಯ್ಯಾ, ನೀನು ಈ ದಿನ ನಿಮ್ಮ ಬೀಡಾರದಲ್ಲಿದ್ದು ವಿಶ್ರಮಿಸಿಕೋ. ಈ ಪತ್ರಕ್ಕೆ ನಾಳ ಉತ್ತರ ಹೇಳುವೆವು’ ಎಂದು ಅವನನ್ನು ಬೀಳ್ಕೊಟ್ಟನು- ಕಮಲಾಪೀಡನು ಆಸ್ಥಾನವನ್ನು ಬಿಡುವುದಕ್ಕಿಂತ ಮುಂಚೆ ಅಲ್ಲಿನ ಸಮಾಚಾರವನ್ನು ತಿಳಿದು ಬರಲು ಆಸ್ಥಾನದ ಬಾಗಿಲಲ್ಲಿ ತನ್ನ ದೂತರನ್ನು ನಿಲ್ಲಿಸಿ ಬೀಡಾರಕ್ಕೆ ಬಂದನು.

ಕಾಶೀರಾಜನು ನಂದರಿಗೆ ಈ ವಿಷಯವಾಗಿ ಒಂದು ಪತ್ರ ಬರೆದು, ಅದರೊಡನೆ ಪರ್ವತರಾಜನು ಕಳುಹಿಸಿದ ಲೇಖನವನ್ನಿಟ್ಟು, ಮರುದಿನ ಸಂಜೆಗೆ ಅದಕ್ಕೆ ಉತ್ತರ ತರತಕ್ಕದ್ದೆಂದು ಅಪ್ಪಣೆಮಾಡಿ ದೂತರನ್ನು ಪಾಟಲೀಪುರಕ್ಕೆ ಅಟ್ಟಿದನು. ದೂತರು ಕಾಶೀರಾಜನ ಲೇಖನವನ್ನು ರಾಕ್ಷಸನಿಗೆ ಕೊಡಲು ಅವನು ಅದನ್ನು ಓದಿಕೊಂಡು ತನ್ನ ಮನಸ್ಸಿನಲ್ಲಿಯೇ ‘ಕಾಶೀರಾಜನಿಗೂ ನಮಗೂ ಇರುವ ಸ್ನೇಹವನ್ನು ಪರ್ವತರಾಜನು ಅರಿಯ. ಕಾಶೀರಾಜನು ಕಾರ್ಯದಕ್ಷ . ಅವನಿಂದಲೇ ನಂದರ ವೈರಿಯನ್ನು ನಾಶಮಾಡಬೇಕು’ ಎಂದು ಯೋಚಿಸಿ, ನಂದರ ಒಪ್ಪಿಗೆಯನ್ನು ಪಡೆದು ಅವನಿಗೆ ಈ ರೀತಿ ಪತ್ರ ಬರೆಸಿದನು.

” ಪ್ರಿಯ ಕಾಶೀರಾಜ, ನಿಮ್ಮ ಪತ್ರ ಕೈಸೇರಿ ಅದರರ್ಥ ತಿಳಿಯಿತು. “ನಮಗೂ ನಿಮಗೂ ಇರುವ ಸ್ನೇಹವೆಷ್ಟೆಂಬುದನ್ನು ಪರ್ವತರಾಜನು ಅರಿಯ. ಅವನು ನಿಮ್ಮಲ್ಲಿ ಮಾಡಿರುವ ಪ್ರಾರ್ಥನೆಯಿಂದ ನಮ್ಮ ಕಾರ್ಯಕ್ಕೆ ಅನುಕೂಲವೇ ಆಯಿತು. ಈಗ ನಮ್ಮ ಅಭ್ಯುದಯವೇ ನಿಮ್ಮ ಅಭ್ಯುದಯವೆಂದರಿತು, ಪರ್ವತರಾಜನ ಮಾತಿಗೊಪ್ಪಿಕೊಂಡು, ನಿಮ್ಮ ಸೈನ್ಯದೊಡನೆ ಅವನ ಸಹಾಯಕ್ಕೆ ಹೊರಡಿ. ನೀವು ನಡುದಾರಿಗೆ ಬರಲು ನಿಮ್ಮ ಉಪಕಾರವನ್ನು ನೆನೆದು ನಿಮ್ಮನ್ನು ಎದುರುಗೊಂಡು ಗೌರನಿಸಲು, ಆತನು ಚಂದ್ರಗುಪ್ತನನ್ನುಕಳುಹಿಸುತ್ತಾನೆ. ಆಗ ನೀವು ಚಂದ್ರಗುಪ್ತನನ್ನು ಸಂಹರಿಸತಕ್ಕದ್ದು. ಹಾಗಲ್ಲದೆ ಪರ್ವತರಾಜನ ಮಗನಾದ ಮಲಯಕೇತುವನ್ನು ಕಳುಹಿಸಿದರೆ ಅವನನ್ನು ಸೆರೆಹಿಡಿದು ನಮ್ಮ ಬಳಿಗೆ ಕಳುಹಿಸತಕ್ಕದ್ದು. ಅಲ್ಲದೆ ಇನ್ನಾರನ್ನಾದರೂ ಕಳುಹಿಸಿದರೆ ಪರ್ವತರಾಜನ ಸೇನೆಯಲ್ಲಿಳಿದು, ಸಮಯನೋಡಿ ಚಂದ್ರಗುಪ್ತನನ್ನು ಸಂಹರಿಸಿ.’

ರಾಕ್ಷಸನ ಪತ್ರವನ್ನು ತೆಗೆದುಕೊಂಡು ಕಾಶೀರಾಜನ ದೂತರು ವೇಗವಾಗಿ ರಾಜಧಾನಿಗೆ ಹಿಂದಿರುಗಿದರು.

ರಾಜಧಾನಿಯಲ್ಲಿ ಕಮಲಾಹೀಡನು ಪಾಟಲೀಪುರಕ್ಕೆ ಹೋಗಿ ಬರುತ್ತಿದ್ದ ದೂತರ ಚಲನವಲನಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದನು. ದಿನವೂ ಕಾಶೀರಾಜನ ಆಸ್ಥಾನಕ್ಕೆ ಹೋಗಿಬರುವುದು, ಅಲ್ಲಿ ಸಂಜೆ ಬಾ, ನಾಳೆ ಬಾ, ಎನ್ನಿಸಿಕೊಳ್ಳುವುದು ಅವನ ಕೆಲಸವಾಗಿತ್ತು. ಪಾಟಲೀಪುರದಿಂದ ದೂತರು ಹಿಂದಿರುಗಿದ ಮೇಲೆ ಕಾಶೀರಾಜನೇ ಅವನನ್ನು ಕರೆಸಿಕೊಂಡು, ಪರ್ವತರಾಜನಿಗೆ ತಾನು ಸಹಾಯವಾಗಿ ಸೇನೆಯನ್ನು ತೆಗೆದುಕೊಂಡು ಬರುವೆನೆಂದು ಅವನಿಗೆ ತಿಳಿಸಿದನು; ಅದಕ್ಕೆ ಉತ್ತರವಾಗಿ ಕಮಲಾಪೀಡನು ‘ಕಾಶೀರಾಜರೇ, ಪರ್ವತರಾಜನಿಗೆ ತಾವು ಸಹಾಯವಾಗಿ ಬರುವುದೇ ಹೆಚ್ಚು. ನಿಮ್ಮನ್ನು ಎದುರುಗೊಳ್ಳಲು, ಚಂದ್ರಗುಪ್ತನೇ ಬರಬೇಕು ಇಲ್ಲವೇ ಮಲಯಕೇತುವಾದರೂ ಬರಬೇಕು. ತಾವು ಒಪ್ಪಿದರೆ ಈ ವಿಷಯವನ್ನು ನಮ್ಮ ಅರಸರಿಗೆ ತಿಳಿಸುವೆನು. ಅವರಿಂದ ಉತ್ತರ ಬಂದ ಬಳಿಕ ತಮ್ಮಲ್ಲಿ ಬಿನ್ನೈಸುವೆನು. ಆ ಬಳಿಕ ಸೇನಾಸಮೇತರಾಗಿ ಪರ್ವತರಾಜನ ಸಹಾಯಕ್ಕೆ ತಾವು ಹೊರಡಬಹುದು’ ಎಂದನು. ಕಾಶೀರಾಜನು ನಿಯೋಗಿಯ ಮಾತಿಗೆ ಒಪ್ಪಿ ಅವನನ್ನು ಬೀಡಾರಕ್ಕೆ ಕಳುಹಿಸಿದನು.

ಕಮಲಾಪೀಡನು ತನ್ನ ಬೀಡಾರಕ್ಕೆ ಬಂದು, ರಾಜಧಾನಿಯಲ್ಲಿ ನಡೆದ ಎಲ್ಲ ವಿಷಯಗಳನ್ನೂ ವಿವರನಾಗಿ ಬರೆದು ಚಾಣಕ್ಯನಿಗೆ ಕಳುಹಿಸಿದನು. ಇತ್ತ ಕಾಶೀರಾಜನು ಕಮಲಾಪೀಡನನ್ನು ಮರುದಿವಸ ಕರೆಸಿ ಪರ್ವತರಾಜನಿಂದ ಉತ್ತರ ಬಂತೇ ಎಂದು ಕೇಳಲು ‘ಇಂದು ಬರಬಹುದು. ದಾರಿಯಲ್ಲಿ ರಾಜಕಾರ್ಯಕ್ಕೆ ಏನು ತಡೆಯೋ ತಿಳಿಯದು. ತಾವು ಆತುರಪಡಬೇಡಿ’ ಎಂದನು. ಮಾರನೆಯ ದಿನವೂ ರಾಜನಿಗೆ ಅದೇ ಉತ್ತರ ಹೇಳಿದನು. ಹೀಗೆಯೇ ಕಾಲಕಳೆಯುತ್ತ, ಕಮಲಾನೀಡನು ರಾಜಧಾನಿಯಲ್ಲಿ ಗಂಗಾಸ್ನಾನತತ್ಪರನಾಗಿ ಚಾಣಕ್ಯನ ಉತ್ತರವನ್ನೇ ಕಾಯುತ್ತ ಕಾಶಿಯಲ್ಲಿದ್ದುಬಿಟ್ಟನು.

ಕಮಲಾಪೀಡನ ಲೇಖನವನ್ನೋದಿಕೊಂಡು ಚಾಣಕ್ಯನು, ಕಾಶೀರಾಜನು ತನ್ನ ಪತ್ರನನ್ನೋದಿಕೊಂಡು ಅದಕ್ಕೆ ಮಾಡಿದ ಕೆಲಸವನ್ನೆಲ್ಲ ಊಹಿಸಿದನು. ‘ಕಾಶೀರಾಜನು ಈ ಕೆಲಸವನ್ನೆಲ್ಲ ಏಕೆ ಮಾಡಿದನು? — ನಂದರ ಪ್ರಸಾದವನ್ನು ಬಯಸಿ. ಈ ಕಪಟವನ್ನು ನಾನು ಬೇಕೆಂದೇ ಮಾಡಿದೆನು. ಸೇನೆಯಿಂದ ನಂದರು ದೂರವಾಗಲು ಇದೇ ಮೊದಲ ಮೆಟ್ಟಿಲು. ಮಾಸೋಪವಾಸಿಯ ವಾಕ್ಯ ಎರಡನೆಯ ಮೆಟ್ಟಿಲು. ಈ ಶೇಖರನ ಸೇನೆ ಮೂರನೆಯ ಮೆಟ್ಟಿಲು. ಈ ಮೂರು ಸಾಧನೆಗಳಿರುವಾಗ ನಂದರು ಯಾವ ದೇವಗರ್ಭವನ್ನು ಹೋಗುವರು?’ ಎಂದು ಯೋಚಿಸಿದನು. ಈ ವೇಳೆಗೆ ಸೂರ್ಯನು ಮುಳುಗಲು ಮೆಲ್ಲಮೆಲ್ಲನೆ ಕತ್ತಲೆ ಲೋಕವನ್ನು ಆವರಿಸಿತು. ಚಾಣಕ್ಯನು ಸಂಧ್ಯಾವಂದನೆಗೆ ತೆರಳಿದನು.


ಮುಂದಿನ ಅಧ್ಯಾಯ: ೧೩. ಕ್ಷಪಣಕ ಪರೀಕ್ಷೆ


Leave a Reply

Your email address will not be published. Required fields are marked *