ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 13: ಕ್ಷಪಣಕ ಪರೀಕ್ಷೆ
೧೩. ಕ್ಷಪಣಕ ಪರೀಕ್ಷೆ
ಶತ್ರುಗಳಲ್ಲಿ ತಾನು ಮಾಡಿದ ಭೇದೋಪಾಯ ಭಂಗವಾದುದು ದೂತರಿಂದ ರಾಕ್ಷಸನಿಗೆ ತಿಳಿದುಹೋಯಿತು. ದೂತರ ಮಾತನ್ನು ಹೇಳಿ ರಾಕ್ಷಸನು ತಲೆದೂಗಿ ತನ್ನ ಮನಸ್ಸಿನಲ್ಲಿ ‘ಶತ್ರುಗಳಲ್ಲಿ ನಾನು ಮಾಡಿದ ಉಪಾಯಕ್ಕೆ ಭಂಗ ಬಂದುದು ಇದೇ ಮೊದಲು. ಶತ್ರು ಸೇನೆಯಲ್ಲಿ ಸಿಕ್ಕ ಒಬ್ಬ ಚಾರನ ಕೈಯಲ್ಲಿದ್ದ ಎರಡು ಕಾಗದಗಳಿಂದ ಇಬ್ಬರು ವರ್ತಕರು ಮಾತ್ರ ಬಯಲಿಗೆ ಬರಬೇಕಲ್ಲದೆ ಎಂಟು ಜನ ವರ್ತಕರನ್ನೂ ಪರ್ವತೇಶ್ವರನು ದಂಡಿನಿಂದ ಹೊರಡಿಸಿದುದಕ್ಕೆ ಕಾರಣ ಗೊತ್ತಾಗಲಿಲ್ಲ. ರಾಯಸದವರಿಂದ ಈ ಗುಟ್ಟು ವೈರಿಗಳಿಗೆ ಬಯಲಾಯಿತೆಂದು ಹೇಳಲವಕಾಶವಿಲ್ಲ. ಏಕೆಂದರೆ ಕುಲಪರಂಪರೆಯಿಂದ ಬಂದ ಆಪ್ತರವರು. ರಾಜಕಾರ್ಯವನ್ನು ಆಲೋಚಿಸುವಾಗ ಇಬ್ಬರ ಹೊರತು ಪಂಜರದ ಗಿಳಿಯೂ ಬಳಿಯಲ್ಲಿರಕೂಡದೆಂಬುದು ನೀತಿ ಶಾಸ್ತ್ರಕಾರರ ಮತ. ನಮ್ಮ ಆಲೋಚನೆಯ ವೇಳೆಯಲ್ಲಿ ತಪಸ್ತಿಯಾದ ಕ್ಷಪಣಕನು ಧ್ಯಾನಾಸಕ್ತನಾಗಿದ್ದ. ಅವನಿಂದ ಈ ಗುಟ್ಟು ರಟ್ಟಾಗಿರಬಹುದೇ? ಕಾರ್ಯಮಿಂಚಿಹೋಗಿರುವಾಗ ಈಗ ಅದನ್ನು ಚಿಂತಿಸಿ ಫಲವೇನು? ಆದರೂ ಉಪೇಕ್ಷೆಮಾಡದೆ ಈ ವಿಷಯದಲ್ಲಿ ಕ್ಷಪಣಕನನ್ನು ಸರೀಕ್ಷಿಸಬೇಕು’ ಎಂದು ಯೋಚಿಸಿದನು.
ಆ ಬಳಿಕ ರಾಕ್ಷಸನು, ಹೇಳಿದ ಕಾರ್ಯವನ್ನು ಮಾಡುವುದರಲ್ಲಿ ನಿಪುಣನಾದ ಒಬ್ಬ ಬ್ರಾಹ್ಮಣನನ್ನು ಕರೆದು “ನೀನು ಕ್ಷಪಣಕನ ಪ್ರತ್ಯಕ್ಷಪರೋಕ್ಷಗಳಲ್ಲಿ ಅವನ ಶೀಲಸ್ವಭಾವಗಳನ್ನು ಚೆನ್ನಾಗಿ ಪರೀಕ್ಷಿಸಿ ಬಂದು ನಮಗೆ ತಿಳಿಸುವವನಾಗು.’ ಎಂದು ಅಪ್ಪಣೆಮಾಡಿ ಕಳುಹಿಸಿದನು.
ರಾಕ್ಷಸನು ತನ್ನನ್ನು ಪರೀಕ್ಷಿಸಬಹುದೆಂದು ಕ್ಷಪಣಕನು ಈ ಮೊದಲೇ ಊಹಿಸಿದ್ದನು. ಆದ್ದರಿಂದ ಅವನು ಊರ ಹೊರಗಡೆ ಜಗತಿಯ ಕಟ್ಟೆಯ ಮೇಲೆ ಯಾರ ಸಂಗವನ್ನೂ ಬಯಸದೆ ಸ್ಥಾಣುವಿನಂತೆ ಚಲಿಸದೆ ಕುಳಿತುಬಿಟ್ಟಿದ್ದನು. ಇತ್ತ ರಾಕ್ಷಸನಿಂದ ನಿಯಮಿತನಾದ ಬ್ರಾಹ್ಮಣನು ದೂರದಿಂದಲೇ ಕ್ಷಪಣಕನನ್ನು ನೋಡಿ ‘ಇವನು ಎಲ್ಲಿ ತಿರುಗುವನು? ಇವನಲ್ಲಿಗೆ ಯಾರು ಬಂದು ಹೋಗುವರು? ‘ ಎಂಬುದನ್ನು ತಿಳಿಯಬೇಕೆಂದು ಯೋಚಿಸಿ ವೇಷಮರೆಯಿಸಿಕೊಂಡು ಅವನ ಕಾರ್ಯಗಳನ್ನು ಒಂದೆರಡು ದಿನಗಳವರೆಗೆ ಗುಟ್ಟಾಗಿ ಎಚ್ಚರಿಕೆಯಿಂದ ಪರಿಶೀಲಿಸಿದನು. ಕ್ಷಪಣಕನಾದರೊ ಆ ಒಂದೆರಡು ದಿನ ಅನ್ನ ನೀರುಗಳನ್ನೂ ಬಯಸದೆ ಮರದ ಮೊದ್ದಿನಂತೆ ಕುಳಿತಲ್ಲೇ ಕುಳಿತುಬಿಟ್ಟಿದ್ದನು. ಇದನ್ನು ಕಂಡು ಬ್ರಾಹ್ಮಣನು ‘ಎಲ್ಲರಂತೆ ಈತನು ಸಾಮಾನ್ಯನಲ್ಲ. ಆರೂಢ ಯೋಗಿಯಾಗಿರಬೇಕು. ಆದ್ದರಿಂದ ನಾನು ಈತನಲ್ಲಿ ಶಿಷ್ಯಭಾವದಿಂದಿರುತ್ತ ಈತನ ಶೀಲಸ್ವಭಾವಗಳನ್ನು ಪರಿಶೀಲಿಸುವೆನು’ ಎಂದು ನಿರ್ಧರಿಸಿ ಬೌದ್ಧಮತದವನಂತೆ ವೇಷಧರಿಸಿ ಕ್ಷಪಣಕನಲ್ಲಿಗೆ ಹೋಗಿ, ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಅವನೆದುರಿಗೆ ಕೈಜೋಡಿಸಿಕೊಂಡು ನಿಂತನು. ಕ್ಷಪಣಕನು ಅವನನ್ನು ನೋಡಿ ತನ್ನ ಪಿಂಛದಿಂದ ‘ಕುಳ್ಳಿರು ಏನು ಬಂದೆ? ‘ ಎಂದು ಸನ್ನೆ ಮಾಡಿದನು.
ಕ್ಷಪಣಕನಿಗೆ ಬ್ರಾಹ್ಮಣನು : ಗುರುವೇ, ಸಂಸಾರಬಾಡಬಾಗ್ನಿಯಿಂದ ಸಂತಪ್ತನಾದ ನಾನು ತಮ್ಮ ಅಡಿದಾವರೆಯನ್ನು ಸೇರಿ ಆ ಸಂತಾಪದಿಂದ ಮುಕ್ತನಾಗಬೇಕೆಂಬ ಅಪೇಕ್ಷೆಯಿಂದ ತಮ್ಮಲ್ಲಿಗೆ ಬಂದೆನು. ನನಗಾಗಿ ಮೌನವನ್ನುಳಿದು ಪರತತ್ತ್ವವನ್ನು ಉಪದೇಶಿಸಿ ನನ್ನನ್ನು ಧನ್ಯನನ್ನಾಗಿ ಮಾಡಬೇಕು’? ಎಂದು ಅವನ ಕಾಲುಗಳನ್ನು ಹಿಡಿದುಕೊಂಡನು.
ತನ್ನ ಕಾಲುಗಳನ್ನು ಹಿಡಿದುಕೊಂಡಿದ್ದ ಬ್ರಾಹ್ಮಣನ ಮುಖವನ್ನು ಚೆನ್ನಾಗಿ ನೋಡಿ ಅವನ ಹಣೆಯಲ್ಲಿದ್ದ ತಿಲಕದ ಕಲೆಯನ್ನು ಕಂಡು ಕ್ಷಪಣಕನು ಮನಸ್ಸಿನಲ್ಲೇ ಇವನು ಬೌದ್ಧನಲ್ಲ. ಏಕೆಂದರೆ ಬೌದ್ಧರು ಶೂನ್ಯಲಲಾಟರು. ಈತನಿಗೆ ತಿಲಕದ ಕಲೆಯಿರುವುದರಿಂದ ಇವನು ನಿಸ್ಸಂದೇಹವಾಗಿ ಬ್ರಾಹ್ಮಣ. ರಾಕ್ಷಸನಿಂದ ಪ್ರೇರಿತನಾಗಿ ಈ ವೇಷವನ್ನು ಧರಿಸಿ ನಮ್ಮ ಪರೀಕ್ಷೆಗಾಗಿ ಬಂದಿರುವುದೇ ನಿಶ್ಚಯ. ಇರಲಿ, ಇವನಿಗೆ ತಕ್ಕ ಹಾಗೆ ಮಾಡಿ ಕಳುಹಿಸಬೇಕು’ ಎಂದು ಯೋಚಿಸಿ ಮೌನವನ್ನು ಬಿಟ್ಟು ಆ ಬ್ರಾಹ್ಮಣನಿಗೆ ಈ ರೀತಿ ನುಡಿದನು. –
“ಅಯ್ಯಾ, ನಿನ್ನನ್ನು ನೋಡಿದರೆ ಗುರುಭಕ್ತನಂತೆ ತೋರುತ್ತದೆ. ದಿಗಂಬರ ಸಿದ್ಧಾಂತೋಪದೇಶವನ್ನು ಹೊಂದಲು ನೀನು ಯೋಗ್ಯನಾಗಿರುವೆ. ಆದಿ ಸಂಸ್ಕಾರದಲ್ಲಿ ಯಾವ ಸಂಪ್ರದಾಯದಿಂದ ನಿನಗೆ ವ್ಯಾಹೃತಿಯನ್ನು ಉಪದೇಶಿಸಿದ್ದಾರೆ? ಅದನ್ನು ಹೇಳು? ಎಂದನು.
ಕ್ಷಪಣಕನ ಮಾತು ಬ್ರಾಹ್ಮಣನಿಗೆ ಅರ್ಥವಾಗದೆ ತಬ್ಬಿಬ್ಬಾಗಿ ಯೋಚಿಸಿ ಏನೋ ಒಂದು ವಿಧವಾಗಿ ಉತ್ತರ ಕೊಟ್ಟನು. ಬ್ರಾಹ್ಮಣನ ವೇಷ, ನಡತೆ ಇವು ಕೃತ್ರಿಮವೆಂದು ನಿಶ್ಚೈಸಿ, ಕ್ಷಪಪಣಕನು ಅವನ ಮಾತಿಗೆ ಒಪ್ಪಿಕೊಂಡವನಂತೆ ನಟಸಿದನು. ಆ ಬಳಿಕ ತನ್ನ ಪಿಂಛದಿಂದ ಅವನ ಶರೀರವನ್ನಭಿಮಂತ್ರಿಸಿದಂತೆ ಮಾಡಿ, ಬ್ರಾಹ್ಮಣನಿಗೆ ಮುಂಡನ ಮಾಡಿಸಿದನು. ಇದಾದಮೇಲೆ ಅವನ ಬಟ್ಟೆ ಬರೆಗಳೆಲ್ಲವನ್ನೂ ದಾರಿಯಲ್ಲಿ ಹೋಗುತ್ತಿರುವವರಿಗೆ ಕೊಡಿಸಿ ಮತ್ತೊಂದು ನವಿಲುಗರಿಯ ದೊಂದೆಯನ್ನು ಅವನ ಕೈಯಲ್ಲಿ ಕೊಟ್ಟು ‘ಈ ಕಪ್ಪರವನ್ನು ತೆಗೆದುಕೊಂಡು ಮನಸ್ಸು ಹದಕ್ಕೆ ಬರುವವರೆಗೆ ಆಯಾ ಚಿತವೃತ್ತಿಯಿಂದ ಜೀವಿಸು. ಚೈತ್ಯವಂದನಾದಿಗಳನ್ನು ಮಾಡುತ್ತ ಗುರುಭಕ್ತಿ ನಿರತನಾಗಿದ್ದರೆ ನಿನ್ನ ಮನಸ್ಸು ಹದಕ್ಕೆ ಬಂದುದನ್ನರಿತು ನಿನಗೆ ಪರತತ್ವೋಪದೇಶವನ್ನು ಮಾಡುವೆವು. ನಮ್ಮ ಪೀಠಕ್ಕೆ ಮುಂದೆ ನೀನೇ ಅಧಿಕಾರಿ. ಬೆಳಿಗೈ ನಮಗೆ ಹನ್ನೆರಡು ನಮಸ್ಕಾರಮಾಡಿ, ನೂರೆಂಟು ಬಾರಿ ಚೈತ್ಯ ವಂದನೆಯನ್ನು ಮಾಡು. ಆ ಮೇಲೆ ಭಿಕ್ಷೆ ಬೇಡಿ ಬಾ. ಇದೇ ರೀತಿಯಲ್ಲಿ ಸಾಯಂಕಾಲದಲ್ಲಿಯೂ ಆಚರಿಸು’ ಎಂದು ಹೇಳಿ ಮತ್ತೆ ಮೌನವನ್ನು ಧರಿಸಿದನು.
ತನಗುಂಟಾದ ದುರ್ದಿಶೆಯನ್ನು ನೆನೆದು ಬ್ರಾಹ್ಮಣನಿಗೆ ಬಲು ಸಂಕಟವುಂಟಾಯಿತು. ಆದರೆ ಕ್ಷಪಣಕನು ಹೇಳಿದಂತೆ ಮಾಡದಿದ್ದರೆ ವಿಧಿಯಿಲ್ಲವೆಂದುಕೊಂಡು, ಅವನಿಗೆ ಹನ್ನೆರಡು ನಮಸ್ಕಾರ, ಜಗತಿಯ ಕಟ್ಟಿಗೆ ನೂರೆಂಟು ನಮಸ್ಕಾರ ಹಾಕುವಷ್ಟರಲ್ಲೇ ಆಯಾಸದಿಂದ ಬಳಲಿ ಬೆಂಡಾಗಿ ಬಾಯಾರಿ ಬ್ರಾಹ್ಮಣನ ಕೈಕಾಲುಗಳು ಸೋತು ಹೋದುವು. ಆ ಬಳಿಕ ಕಪ್ಪರ ಪಿಂಛಗಳನ್ನು ಹಿಡಿದು, ಗುರುವಿಗೆ ಅಭಿವಂದಿಸಿ ಭಿಕ್ಷೆ ಬೇಡಲು ಆತನ ಅಪ್ಪಣೆಯನ್ನು ಬೇಡಿ ಹೊರಟನು. ಬೆತ್ತಲೆಯಾಗಿದ್ದ ಕಾರಣ ಊರಕಡೆ ಹೊರಡಲು ಬ್ರಾಹ್ಮಣನಿಗೆ ನಾಚಿಕೆಯುಂಟಾಗಿ ಅಲ್ಲಿಯೇ ಕಪ್ಪರ ಪಿಂಛಗಳನ್ನು ಎಸೆದು ಸಂಜೆಯವರೆಗೆ ಕಾಡಿನಲ್ಲಿ ಮರೆಯಾಗಿದ್ದು, ಕತ್ತಲಾಗುತ್ತಲೇ ವಲ್ಕಲಕೌಪೀನವನ್ನು ಧರಿಸಿ ತನ್ನ ಮನೆಯನ್ನು ಸೇರಿಕೊಂಡನು.
ನಡೆದ ವಿಷಯವನ್ನು ರಾಕ್ಷಸನಿಗೆ ತಿಳಿಸಲು ಬ್ರಾಹ್ಮಣನಿಗೆ ನಾಚಿಕೆಯಾಯಿತು. ಮಾರನೆಯ ದಿನ ರಾಕ್ಷಸನನ್ನು ಉಚಿತವೇಷದಲ್ಲಿ ಕಂಡು ‘ಸ್ವಾಮಿ, ತಾವು ಅಪ್ಪಣೆಕೊಡಿಸಿದಂತೆ ಕ್ಷಪಣಕನನ್ನು ಪ್ರತ್ಯಕ್ಷ ಪರೋಕ್ಷಗಳಲ್ಲಿ ನಾನಾ ವಿಧವಾಗಿ ಪರೀಕ್ಷಿಸಿದೆನು. ಅವನಲ್ಲಿ ಲೇಸವಾದರೂ ಕಪಟಕಾಣಿಸಲಿಲ್ಲ. ಆತನು ಸರ್ವಸಂಗಪರಿತ್ಯಾಗ ಮಾಡಿದ ಮಹಾಯೋಗಿಯೇ ಸರಿ’ ಎಂದು ಬಿನ್ನೈಸಿದನು.
ಇದನ್ನು ಕೇಳಿ ರಾಕ್ಷಸನು ಕ್ಷಪಣಕನಲ್ಲಿಯೂ ಕಪಟವಿಲ್ಲದ ಬಳಿಕ ಪರ್ವತರಾಜನು ನಮ್ಮ ಲೇಖನದಿಂದ ಇಬ್ಬರು ವರ್ತಕರು ನಮಗೆ ಅನುಕೂಲರಾದವರೆಂದು ನಿಶ್ಚೈಸಿ, ಉಳಿದ ರಾಜರ ಬಳಿಯಲ್ಲಿರುವ ವರ್ತಕರೂ ಇಂಥವರೇ ಆಗಿರಬೇಕೆಂಬ ಊಹೆಯಿಂದ ಆ ಆರು ಮಂದಿಯನ್ನೂ ದಂಡಿನಿಂದ ಹೊರಡಿಸಿರಬೇಕು’ ಎಂದು ನಿರ್ಧರಿಸಿ ಕ್ಷಪಣಕನಲ್ಲಿ ಸಂಶಯವನ್ನು ಬಿಟ್ಟು ಬೇರೆ ಕೆಲಸಗಳನ್ನು ನೋಡ ತೊಡಗಿದನು.
ಮುಂದಿನ ಅಧ್ಯಾಯ: ೧೪. ಪುಣ್ಯಾಶ್ರಮ ದರ್ಶನ