ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 14: ಪುಣ್ಯಾಶ್ರಮ ದರ್ಶನ

೧೪. ಪುಣ್ಯಾಶ್ರಮ ದರ್ಶನ

ವೈರಿಗಳು ಪಾಟಲೀಪುರಕ್ಕೆ ಹತ್ತಿರವಾಗುತ್ತಿರುವರೆಂಬ ಸುದ್ದಿಕೇಳಿ ಸರ್ವಾರ್ಥಸಿದ್ಧಿ ಮಹಾರಾಜನಿಗೆ ಚಿಂತೆಗೆ ಮೊದಲಾಯಿತು. ತನ್ನ ಪ್ರೀತಿಯ ಮಕ್ಕಳು ಮತ್ತು ಮೊಮ್ಮಗ– ಇವರು ಒಬ್ಬರೊಡನೊಬ್ಬರು ನೆಲಕ್ಕಾಗಿ ಹೋರಾಡಲು ಸಿದ್ಧವಾಗಿರುವುದನ್ನು ಕೇಳಿ ಮುದುಕನು ಕುಗ್ಗಿಹೋದನು. ಇಬ್ಬರಲ್ಲಿ ಯಾರೊಬ್ಬರು ಸೋತರೂ ನಷ್ಟವೇ. ತಾನು ಬದುಕಿರುವಾಗಲೇ ನಡೆಯುವ ಕುಲದ ಕೊಲೆಯನ್ನು ತಪ್ಪಿಸಬೇಕೆಂದು ಯೋಚಿಸಿ, ಅಮಾತ್ಯರಾಕ್ಷಸನೊಡಗೂಡಿ ನಂದರ ಬಳಿಗೆ ಬಂದು ಅವರಿಗೆ ಈ ರೀತಿ ಹೇಳಿದನು–

‘ಮಕ್ಕಳಿರಾ, ಪರ್ವತರಾಜನು ಈಗ ಅನೇಕ ದೇಶಗಳ ಅರಸುಗಳನ್ನು ಕೂಡಿಕೊಂಡು ನಮ್ಮ ಮೇಲೆ ದಂಡೆತ್ತಿ ಬರುತ್ತಿದ್ದಾನೆ. ನೀವು ಶೂರರು, ನಿಜ. ಆದರೆ ವೈರಿ ಪ್ರಬಲನಾದಾಗ ಆತನೊಡನೆ ಸಮಯೋಚಿತವಾಗಿ ಸಂಧಿಮಾಡಿಕೊಳ್ಳುವುದೇ ಮೇಲು. ಸ್ವಲ್ಪ ಕಾಲವಾದ ಮೇಲೆ ಪರ್ವತರಾಜನಿಗೂ ಇತರರಿಗೂ ಭೇದವನ್ನುಂಟುಮಾಡಿ ಆ ಬಳಿಕ ಅವನನ್ನು ಗೆಲ್ಲಬಹುದು. ಇದು ನಮಗೆ ಅವಮಾನವಲ್ಲ. ನಾವು ಅಗತ್ಯವಾಗಿ ಮಾಡಬೇಕಾದ ರಾಜಕಾರ್ಯ. ನಾನು ಮುದುಕನಾದೆ. ಈ ನನ್ನ ಮಾತು ಅಮಾತ್ಯರಿಗೆ ರುಚಿಸಿದರೆ ಅದರೆಂತೆ ಕೆಲಸ ಮಾಡಿ.

ರಾಜನ ಮಾತಿಗೆ ಅಮಾತ್ಯರಾಕ್ಷಸನು ” ಸ್ವಾಮಿ, ತಾವು ಅಪ್ಪಣೆ ಕೊಡಿಸಿದ ಮಾತು ಯುಕ್ತವಾದದ್ದು. ಆದರೂ ನನಗೆ ತೋರಿದ ಒಂದೆರಡು ಅಂಶಗಳನ್ನು ತಮ್ಮಲ್ಲಿ ಬಿನ್ನೈಸುವೆನು. ಪರ್ವತರಾಯನು ದಂಡೆತ್ತಿ ಬಂದ ಮಾತ್ರಕ್ಕೆ ನಾವು ಸಂಧಿಯ ಮಾತನ್ನೆತ್ತಬಾರದು. ಏಕೆಂದರೆ ಅವನು ನಮ್ಮನ್ನು ಬಲಹೀನರೆಂದು ತಿಳಿದು ನಮ್ಮ ರಾಜ್ಯ ಕೋಶಗಳನ್ನು ಬಯಸಬಹುದು. ಬಲದಲ್ಲಿ ನಾವೇನು ಕಡಮೆಯೇ? ಮೇಲಾಗಿ ಪರ್ವತರಾಜನಿಗೆ ಇದು ಪರದೇಶ. ಇಲ್ಲಿ ನಮಗಿರುವ ಅನುಕೂಲ ಆತನಿಗಿರಲಾರದು. ಆದ್ದರಿಂದ ಮೊದಲು ವೈರಿಗಳ ಮೇಲೆ ನಮ್ಮ ಪರಾಕ್ರಮವನ್ನು ಮೆರೆಯೋಣ. ಆಮೇಲೆ ಮುಂದಿನ ಮಾತು’ ಎಂದು ನುಡಿದನು. ರಾಕ್ಷಸನ ಮಾತು ರಾಜಕುಮಾರರಿಗೆ ಒಪ್ಪಿತು. ಅರಸನು ದೇವರು ಮಾಡಿಸಿದಂತಾಗಲೆಂದು ಸುಮ್ಮನಾದನು. ವಿಜಯ ಯಾತ್ರೆಗೆ ಎಲ್ಲವೂ ಅಣಿಯಾಯಿತು.

ಇತ್ತ ಪರ್ವತೇಶ್ವರನು ಶಬರವರ್ಮನೊಡನೆ ಆಲೋಚಿಸಿ ತನ್ನ ಸೇನೆ ನಾಲ್ಕು ದಿಕ್ಕುಗಳಿಂದಲೂ ಪಾಟಿಲೀಪುರವನ್ನು ಮುತ್ತುವಂತೆ ಅಪ್ಪಣೆ ಮಾಡಿದನು.

ವಿಜಯಯಾತ್ರೆಗೆ ಹೊರಡುವುದಕ್ಕೆ ಮುಂಚೆ ರಾಕ್ಷಸನು ಕ್ಷಪಣಕನನ್ನು ಕಂಡು ‘ಕ್ಷಪಣಕರೇ, ನಾಳೆ ತುಲಾಲಗ್ನದಲ್ಲಿ ನಂದರು ವಿಜಯಯಾತ್ರೆಗೆ ಹೊರಡಲು ಗೊತ್ತಾಗಿದೆ. ಲಗ್ನಬಲ ಹೇಗಿದೆ? ತಿಳಿದುಹೇಳಿ’ ಎಂದನು. ಜೀವಸಿದ್ಧಿ ‘ಅಮಾತ್ಯರೇ, ತುಲಾಲಗ್ನಕ್ಕಿಂತ ವೃಶ್ಚಿಕ ಲಗ್ನ ಉತ್ತಮ. ಲಗ್ನಾಧಿಪತಿ ಶತ್ರುಸ್ಥಾನವನ್ನು ನೋಡುವುದರಿಂದ, ಶತ್ರು ಕ್ಷಯವಾಗುತ್ತದೆ.’ ಎಂದು ಗುಣಿಸಿ ಹೇಳಿದನು. ಕ್ಷಪಣಕನ ಮಾತನ್ನು ಕೇಳಿ ಹತ್ತಿರದಲ್ಲಿದ್ದ ಸಿದ್ಧಾರ್ಥಕನು ಶತ್ರುವಿನ ದೆಸೆಯಿಂದ ಕ್ಷಯ ಎಂದು ಮನಸ್ಸಿನಲ್ಲೆಂದುಕೊಂಡನು. ವೃಕ್ಚಿಕಲಗ್ನದಲ್ಲಿ ವಿಜಯಯಾತ್ರೆಗೆ ತೆರಳಬೇಕೆಂದು ರಾಕ್ಷಸನ ಅಪ್ಪಣೆಯಾಯಿತು.

ಇತ್ತ ರಾಜಕುಮಾರರು ತಮ್ಮ ಪತ್ನಿಯರನ್ನೊಪ್ಪಿಸಿ, ತಂದೆತಾಯಿಗಳ ಹರಕೆಯನ್ನು ಪಡೆದು, ಬ್ರಾಹ್ಮಣರಿಗೆ ನಮಸ್ಕರಿಸಿ ವಾದ್ಯಗಳು ಮೊರೆಯುತ್ತಿರಲು ವಿಜಯಯಾತ್ರೆಗೆ ಪ್ರಯಾಣ ಹೊರಟರು. ಆಗ ಅವರ ಎಡಗಣ್ಣು ಅದುರಿದುವು. ಹದ್ದುಗಳು ಅವರ ರಥಗಳ ಮೇಲೆ ಕುಳಿತವು. ಈ ಅಪಶಕುನಗಳನ್ನು ಕಂಡು ಮುಂದೇನಾಗುನುದೋ ಎಂದು ಜನ ಹೆದರಿದರು. ಆ ಸಮಯದಲ್ಲಿ ಶಿವವರ್ಮನಿಂದ ದುರ್ಗರಕ್ಷಿತವಾಗಿ, ಅಂದಿನ ಯುದ್ದದಲ್ಲಿ ನಂದರಿಗೆ ಜಯವಾಯಿತೆಂಬ ಶುಭಸಮಾಚಾರ ದೂತರಿಂದ ತಿಳಿದುಬಂತು. ರಾಕ್ಷಸನು ನಂದರಿಗೆ ಧೈರ್ಯ ಹೇಳಿ, ನಗರ ರಕ್ಷಣೆಗೆ ಭಾಗುರಾಯಣನು ಮಾಡಿದ ಏರ್ಪಾಟನ್ನು ನೋಡಿ ಬರಲು ತಾನೇ ಹೊರಟನು. ಇತ್ತ ನಂದರು ಸೇನಾಸಮೇತರಾಗಿ ತಮ್ಮ ಬೀಡಾರದ ಬಳಿಗೆ ಬರುತ್ತಿರಲು, ಗಂಗಾಸರಯೂಸಂಗಮದ ದಕ್ಷಿಣದಲ್ಲಿ ಉನ್ನತವಾಗಿದ್ದ ಜಪಶಾಲೆಯನ್ನು ಕಂಡು ಇದೇನೆಂದು ದೂತರನ್ನು ಕೇಳಿದರು.

” ಸ್ವಾಮಿ, ಇದು ಅಮಾತ್ಯರ ಅಪ್ಪಣೆಯಂತೆ ಮಾಡಿರುವ ಶತ್ರು ಪಲಾಯನ ಜಪಶಾಲೆ. ಇಲ್ಲಿ ಜಪಮಾಡುವ ಬ್ರಾಹ್ಮಣರು ಫಲ ಮಂತ್ರಾಕ್ಷತೆಗಳನ್ನು ಹಿಡಿದುಕೊಂಡು ತಮ್ಮನ್ನು ಕಾಣಲು ಬಂದು. ನಿಂತಿದ್ದಾರೆ’ ಎಂದು ದೂತರಿಂದ ಉತ್ತರ ಬಂತು.

ನಂದರು ಆ ಬ್ರಾಹ್ಮಣರನ್ನು ನೋಡಿ ‘ಬ್ರಾಹ್ಮಣೋತ್ತಮರೇ, ಜಪ ಹೋಮಗಳನ್ನು ಸಾಂಗವಾಗಿ ಮಾಡಿ. ಈಗ ನಮ್ಮ ಮೇಲೆ ದಂಡೆತ್ತಿ ಬಂದಿರುವ ವೈರಿಗಳು ಪಲಾಯನಮಾಡಿದರೆ ನಿಮಗೆ ವಿಶೇಷವಾದ ಮರ್ಯಾದೆಯನ್ನು ಸಲ್ಲಿಸುತ್ತೇವೆ” ಎಂದು ಹೇಳಿದರು. ಅಷ್ಟರಲ್ಲೇ ಜೋಲುಗಡ್ಡದ ಜಟಾಧಾರಿಯಾದ ಮಾಸೋಪವಾಸಿಮುನಿ ನಂದರಿಗೆ ಕಾಣಿಸಿಕೊಂಡನು. ಮುನಿರೂಸವನ್ನು ಧೆರಿಸಿದ ಮಾರೀಚನಂತಿತ್ತು ಅವನ ಯೋಗಿ ವೇಷ! ಈ ಯೋಗಿಯನ್ನು ನೋಡಿ ನಂದರು ಅವನ ಶಿಷ್ಯರನ್ನು ಕುರಿತು ಇವರಾರು? ‘ ಎಂದು ಪ್ರಶ್ನಿಸಿದರು.

ಅದಕ್ಕೆ ಆತನ ಶಿಷ್ಯರು ‘ಅರಸರೇ, ದತ್ತಾತ್ರೇಯ ಮುನಿಗಳ ಅನುಗ್ರಹವನ್ನು ಪಡೆದ ಮಾಸೋಪವಾಸಿಮುನಿಗಳಿವರು. ಧರ್ಮಾತ್ಮರಾದ ನಂದರಿಗೆ ಬಂದಿರುವ ವಿಪತ್ತನ್ನು ದೂರಮಾಡಲು ಇಲ್ಲಿ ಜಪವನ್ನು ಕೈಗೊಂಡಿದ್ದಾರೆ. ಮಹಾಮಹಿಮರಿವರು’’ ಎಂದರು.

ಶಿಷ್ಯರ ಮಾತಿನಲ್ಲಿ ನಂದರಿಗೆ ವಿಶ್ವಾಸವುಂಟಾಯಿತು. ಹಿಂದೆ ಸರ್ವಾರ್ಥಸಿದ್ಧಿ ಮಹಾರಾಜನು ಪುತ್ರವಂತನಾದುದು ಮುನಿಯ ವರದ ಬಲದಿಂದ. ಈಗ ಈ ಮಹನೀಯರು ನಂದರಲ್ಲಿ ಅನುಗ್ರಹವಿಟ್ಟು ಜಪವನ್ನು ಕೈಕೊಂಡ ಬಳಿಕ ವೈರಿಪಲಾಯನವಾಗುವುದರಲ್ಲಿ ಏನು ಸೋಜಿಗ?

“ಮುನಿಗಳಿಗೆ ಮೌನವ್ರತವೇನೋ?’ಎಂದರು ರಾಜಕುಮಾರರು.

ಅಯ್ಯಾ, ಅರಸುಗಳೇ! ಸಾಧಾರಣ ಜನರಲ್ಲಿ ಮಾತಿಗೆ ಮಾತು ಬೆಳೆಸುವುದನ್ನು ತಡೆಗಟ್ಟುವುದಕ್ಕಾಗಿ ಮೌನ. ಅರಸುಗಳೆಲ್ಲಿಯೂ, ಭಕ್ತರಲ್ಲಿಯೂ ಮೌನವುಂಟೇ? ನಾಳೆ ಶುಕ್ರವಾರ ಸಂಜೆಗೆ ಸರಿಯಾಗಿ ಶೂಲಿನೀಜಪ ಹೋಮಗಳು ಮುಗಿಯುವುವು. ಪೂರ್ಣಾಹುತಿಯ ಕಾಲದಲ್ಲಿ ದಿಕ್ಕುಗಳು ಪ್ರಸನ್ನವಾಗಿ, ತಂಗಾಳಿ ಬೀಸಿ ಶತ್ರುನಿಗ್ರಹ ಸೂಚನೆ ಕಂಡುಬರುವುದು, ಹೋಮದ ಕೊನೆಯಲ್ಲಿ ಜ್ಯೋತಿಯೊಂದು ಬೆಳಗುವುದು. ಬಳಿಕ ಅಗ್ನಿ ಕುಂಡದಿಂದ ದೇವತಾಹಸ್ತ ಕಾಣಿಸಿಕೊಂಡು ಆ ಪೂರ್ಣಾಹುತಿಯನ್ನು ತಾನೇ ಸ್ವೀಕರಿಸುವುದು. ಪುಣ್ಯವಂತರಿಗೆ ಮಾತ್ರ ಈ ನೋಟ ಕಾಣಿಸುವುದು.’

‘ಮುನಿವೋತ್ತಮರೇ, ಈ ನೋಟವನ್ನು ನೋಡಲು ನಾವೂ ಬರಬಹುದೋ?’ ಎಂದರು ನಂದರು ವಿನಯ ವಿಶ್ವಾಸಗಳಿಂದ.

” ಅರಸುಗಳಿರಾ ಕುತೂಹಲವಿದ್ದರೆ ಬಂಧುಮಿತ್ರರೊಡನೆ ಅವಶ್ಯವಾಗಿ ತಾವೆಲ್ಲರೂ ಬಂದು ದೇವತಾಹಸ್ತವನ್ನು ನೋಡಿ ಪ್ರಸಾದವನ್ನು ಸ್ಟೀಕರಿಸಿ ತೆರಳಬಹುದು. ಈ ನೋಟ ಮರೆಯಾದ ಒಂದು ಯಾಮದೊಳಗೆ ಹೊಟ್ಟೆನೋವಿನಿಂದ ವೈರಿಗಳು ಹತರಾಗುವುದು ಸತ್ಯ. ನಿಮ್ಮ ಬಯಕೆ ಕೈಗೂಡಿದಾಗ ಬ್ರಾಹ್ಮಣರಲ್ಲಿ ನಿಮಗೆ ಗೌರವ ಚಲಿಸದಿದ್ದರೆ ಅದೇ ನೀವು ನಮಗೆ ಕೊಡುವ ಜಪದಕ್ಷಿಣೆ.’

ಮಾಸೋಪವಾಸಿಯ ಮಾತು ಮುಗಿದ ಮೇಲೆ ನಂದರು ‘ಅಯ್ಯಾ ಶಿಷ್ಯೋತ್ತಮರೇ, ಪೂರ್ಣಾಹುತಿಯ ಸಮಯವನ್ನು ತಿಳಿದು ನಮಗೆ ನೆನಪುಗೊಟ್ಟರೆ ನಾವೆಲ್ಲರೂ ದೇವತಾದರ್ಶನಕ್ಕೆ ಬರುತ್ತೇವೆ?’ ಎಂದರು.

ಅದಕ್ಕೆ ಶಿಷ್ಯರು ‘« ‘ಹಾಗೆ ಆಗಲಿ. ಆದರೆ ಜಪಶಾಲೆಯ ಸುತ್ತಲೂ ಶೂದ್ರಾದಿಗಳು ಬರದಂತೆ ಅಪ್ಪಣೆಯಾಗಬೇಕು’ ಎಂದು ಅರಸರನ್ನು ಹೇಳಿಕೊಂಡರು.

ಆ ಮಾತಿಗೆ ನಂದರು ತಮ್ಮ ಒಪ್ಪಿಗೆಯನ್ನು ಸೂಚಿಸಿ, ಜಪಶಾಲೆಯ ಸುತ್ತಲೂ ಬ್ರಾಹ್ಮಣ ಹರಿಕಾರರಿರುವಂತೆ ನೇಮಿಸಿ, ದೇವತಾ ದರ್ಶನಕ್ಕೆ ಖಂಡಿತ ಬರಲೇಬೇಕೆಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತ ಸಂತೋಷದಿಂದ ತಮ್ಮ ಬೀಡಾರಗಳನ್ನು ಹೊಕ್ಕರು.


ಮುಂದಿನ ಅಧ್ಯಾಯ: ೧೫. ಸಂಧಾನ


Leave a Reply

Your email address will not be published. Required fields are marked *