ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 15: ಸಂಧಾನ
೧೫. ಸಂಧಾನ
ಎರಡು ಕಡೆಯವರೂ ಯುದ್ಧಕ್ಕೆ ಸಿದ್ಧರಾದರು. ಗಂಗಾಸರಯೂ ಸಂಗಮದ ಉತ್ತರಭಾಗದಲ್ಲಿ ನಂದರ ಬೀಡಾರಗಳು ಕಂಗೊಳಿಸಿದುವು. ನಂದರು ಜಪಶಾಲೆಗೆ ಬರುವಂತೆ ಮಾಸೋಪವಾಸಿ ಗೊತ್ತುಪಡಿಸಿದ್ದ ವೇಳೆಯನ್ನು ಕ್ಷಪಣಕನು ವೇಗಶರ್ಮನ ಮೂಲಕ ಚಾಣಕ್ಯನಿಗೆ ತಿಳಿಸಿದನು. ಈ ಸುದ್ದಿಯನ್ನರಿತ ಸಿದ್ಧಾರ್ಥಕನು ಮಾರನೆಯದಿನ ನಂದರಿಗೂ ಪರ್ವತರಾಜನಿಗೂ ಯುದ್ಧವಾಗಬಹುದೆಂದು ನಿರ್ಧರಿಸಿದನು. ಭಾರತ ಯುದ್ಧ ಮೊದಲಾಗುವುದಕ್ಕಿಂತ ‘ಮುಂಚೆ ಧರ್ಮರಾಯನು ತನ್ನೆದುರು ಪಕ್ಷದ ಕೌರವರಲ್ಲಿ ಭೇದವನ್ನೆಸಗಿದಂತೆ, ಭಾಗುರಾಯಣಾದಿ ಸೇನಾಪತಿಗಳಿಗೆ ನಂದರಲ್ಲಿ ಉಪೇಕ್ಷೆ ಹುಟ್ಟುವಂತೆ ಮಾಡಬೇಕೆಂದು ಈ ಕಪಟಿವೈದ್ಯನು ಮನಸ್ಸಿನಲ್ಲೇ ಗೊತ್ತುಮಾಡಿಕೊಂಡನು. ಸಿದ್ಧಾರ್ಥಕನ ಬುದ್ಧಿ ಪಾದರಸ. ವಿಷಯ ಅವನ ಮನಸ್ಸಿಗೆ ಹೊಳೆಯುವುದೇ ತಡ ಮಿಂಚಿನಂತೆ ಅವನಿಂದ ಕಾರ್ಯ ನಡೆದು ಹಗುವುದು. ರಾಕ್ಷಸನ ಮನೆಯ ರಾಯಸದವನಾದ ಶಕಟದಾಸ, ಅಮಾತ್ಯರ ಮೈಗಾನಲಿನವನಾದ ವಿನತ– ಇವರಿಂದ ರಾಜಕಾರ್ಯದ ಗುಟ್ಟನ್ನು ತಿಳಿದುಕೊಂಡು, ಅಲ್ಲಿಂದ ಸಿದ್ಧಾರ್ಥಕನು ಭಾಗುರಾಯಣನಲ್ಲಿಗೆ ಬಂದು ಅವನಿಗೆ ಈರೀತಿ ಹೇಳಿದನು. –
‘ಸೇನಾಸತಿಯೇ, ನಾನು ನಿನ್ನ ಸ್ನೇಹಿತನಾದ ಕಾರಣ ನಿನ್ನಲ್ಲಿ ನನಗಿರುವ ಪ್ರೀತಿಯಿಂದ ನಿನಗೊಂದು ಗುಟ್ಟಾದ ರಾಜಕಾರ್ಯವನ್ನು ತಿಳಿಸುವೆನು. ಚಂದ್ರಗುಪ್ತನಿಗಾದರೋ ನಿನ್ನಲ್ಲಿ ಅತಿಶಯವಾದ ಪ್ರೀತಿಯುಂಟು. ನಿನಗೂ ಅವನಲ್ಲಿ ಪ್ರೀತಿಯುಂಟೆಂದೇ ತೋರುತ್ತದೆ. ನಿಮ್ಮ ಲೇಖನದ ನಂಬಿಕೆ, ಚಾಣಕ್ಯನ ಮಾತಿನ ಜಾಣ್ಮೆ ಇವು ಚಂದ್ರಗುಪ್ತನಿಗೆ ಪರ್ವತರಾಜನ ಸಹಾಯ ದೊರಕುವಂತೆ ಮಾಡಿದುವು.
ನಂದರಿಗೆ ರಾಕ್ಷಸನು ಆಪ್ತನಾಗಿರುವಂತೆ ನನಗೆ ಭಾಗುರಾಯಣನೇ ಆಪ್ತನೆಂದು ಚಂದ್ರಗುಪ್ತನು ಪರೋಕ್ಷದಲ್ಲಿ ಹೇಳಿಕೊಳ್ಳುತ್ತಿದ್ದಾನೆ. ಚಂದ್ರಗುಪ್ತನಿಗೆ ಜಯವಾಗುವುದರಲ್ಲಿ ಸಂದೇಹವೇ ಇಲ್ಲ. ರಾಕ್ಷಸನ ತಂತ್ರ ನಷ್ಟವಾದುದೇ ಇದಕ್ಕೆ ಸಾಕ್ಷಿ. ಅಧಿಕವಾದ ಪರ್ವತೇಶ್ವರನ ಸೇನೆ, ಚಾಣಕ್ಕನ ಕಪಟೋಪಾಯ ಇವುಗಳಿಂದ ನಂದರಿಗೆ ಜಯವಾಗುವುದೆಂದರೇನು? ಚಂದ್ರಗುಪ್ತನ ವೈರಿಗಳನ್ನು ಸಂಹರಿಸಿ, ಅವನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ತನಗೆ ಬೇಕಾದವರಿಗೆ ಮಂತ್ರಿ ಪದವಿಯನ್ನು ಕೊಟ್ಟು ಚಾಣಕ್ಯನು ತಪೋವನಕ್ಕೆ ತೆರಳುವನು. ಆದ್ದರಿಂದ ಈ ವೇಳೆಯಲ್ಲಿ ಚಂದ್ರಗುಪ್ತನಿಗೆ ನಿನ್ನಲ್ಲಿರುವ ವಿಶ್ವಾಸವನ್ನು ದೃಢ ಪಡಿಸಿಕೊ. ನನ್ನ ಮಾತೇ ಚಂದ್ರಗುಪ್ತನ ಮಾತೆಂದು ತಿಳಿದು, ಅವನಿಗೆ ಸಹಾಯಮಾಡು, ಹತ್ತುಪಾಲು ನಂದರ ಸೇನೆಯನ್ನು ಚಾಣಕ್ಯನೊಬ್ಬನೇ ಎದುರಿಸಬಲ್ಲ. ಈ ನನ್ನ ಮಾತಿಗೆ ಈ ರಾತ್ರಿ ಇಲ್ಲಿಗೆ ಸಮೀಪದಲ್ಲಿ ಯುದ್ಧವಾಗುವುದೇ ನಿದರ್ಶನ. ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು ? ಆಪ್ತನಾದವನು ಇಂಥ ಸಮಯದಲ್ಲಿ ಮಾಡಬೇಕಾದ ಕೆಲಸವನ್ನು ನಾನು ಮಾಡಿದ್ದೇನೆ. ನಿನಗೆ ಮಂಗಳವಾಗಲಿ.’
ವೈದ್ಯನಂತಿದ್ದ ಸಿದ್ಧಾರ್ಥಕನು ಚಂದ್ರಗುಪ್ತನಿಗೆ ಆಪ್ತನಾಗಿರಬಹುದಲ್ಲವೇ? ಹಾಗಲ್ಲದಿದ್ದರೆ ಈ ದೊಡ್ಡಗುಟ್ಟನ್ನು ಇವನು ನನ್ನಲ್ಲಿ ಏಕೆ ಹೇಳುತ್ತಿದ್ದ? ಆದ್ದರಿಂದ ನನ್ನ ಹಿತೈಷಿ ಸಿದ್ಧಾರ್ಥಕ ಎಂದು ಭಾಗುರಾಯಣನು ನಿರ್ಧರಿಸಿ, ಅವನಿಗೆ ‘ಸಿದ್ಧಾರ್ಥಕ, ರಾಕ್ಷಸನಂತೆ ನಾವು ಚಂದ್ರಗುಪ್ತನಿಗೆ ದ್ರೋಹಿಗಳಲ್ಲ. ನಾವು ಮಾಡುವ ಸಹಾಯ ಮುಂದೆ ಆತನಿಗೇ ತಿಳಿದುಬರುವುದು. ಆದರೆ ಲೋಕಾಪವಾದಕ್ಕೆ ಹೆದರಿ, ನಾವು ಅವನಿಗೆ ಗುಟ್ಟಾಗಿಯೇ ಸಹಾಯಮಾಡಬೇಕು. ರಾಜಧಾನಿಯನ್ನು ಅವನು ಬಿಡುವುದಕ್ಕಿಂತ ಮುಂಚೆ ನಾವು ಬರೆದುಕೊಟ್ಟ ಲೇಖನ ಅವನಿಗೆ ಉಪಯೋಗವಾಗಿರಬಹುದು. ನಾನು ಹೇಳಿರುವ ವಿಷಯ ನಿನ್ನಲ್ಲಿಯೇ ಗುಟ್ಟಾಗಿರಲಿ, ನೀನು ಹೋಗಿ ಬಾ’ ಎಂದು ಅವನನ್ನು ಕಳುಹಿಸಿಕೊಟ್ಟನು.
ಸಿದ್ದಾರ್ಥಕನು ಹೊರಟುಹೋದ ಮೇಲೆ ಭಾಗುರಾಯಣನು ಮನಸ್ಸಿನಲ್ಲಿ ಏನನ್ನು ನೆನೆದನೋ ‘ಉರಿಯುವನೆ ಬಲ್ಲ’. ಅಧಿಕಾರದ ಆಸೆ ಅವನನ್ನು ಸ್ವಾಮಿದ್ರೋಹಿಯನ್ನಾಗಿ ಮಾಡಿರಬೇಕು. ತನ್ನ ಆಪ್ತದೂತನನ್ನು ಕರೆದು ಅವನಿಗೆ ‘ಭದ್ರಭಟಾದಿ ಸೇನಾಪತಿಗಳಿಗೆ ನಾನು ಈ ರೀತಿ ಹೇಳಿದೆನೆಂದು ಕಿವಿಯಲ್ಲಿ ಗುಟ್ಟಾಗಿ ತಿಳಿಸು. ಈಗ ಮೊದಲಾಗುವ ಯುದ್ದದಲ್ಲಿ ಸಾಮಂತರಾಜರೇ ಮುಂದೆ ನಿಂತು ಕಾದಾಡಲಿ. ನೀವು ಮಾತ್ರ ತೋರಿಕೆಯ ಯುದ್ಧ ಮಾಡುತ್ತ, ಕಾಲ ಹರಣಮಾಡಿ ವೈರಿಗಳನ್ನು ತಡೆಯದೆ ಬಿಡತಕ್ಕದ್ದು. ಇದರ ವಿವರವನ್ನು ಮುಂದೆ ತಿಳಿಸಲಾಗುವುದು ‘ ಎಂದು ಹೇಳಿ ಕಳುಹಿಸಿದನು. ಭಾಗುರಾಯಣನ ಮಾತನ್ನು ಹಿತವಚನವೆಂದು ನಂಬಿ ಭದ್ರಭಟಾದಿಗಳು ಅದರಂತೆ ನಡೆದುಕೊಂಡರು.
ವೈರಿಸೇನಾಪತಿಗಳು ಯುದ್ಧಮಾಡದೆ ಸುಮ್ಮನಿರುವುದನ್ನು ದೂತರಿಂದ ತಿಳಿದ ಪರ್ವತರಾಜನು, ನಾವೆಗಳನ್ನು ಹತ್ತಿ ಅದೇ ರಾತ್ರಿ ಪಾಟಲೀಪುರವನ್ನು ಮುತ್ತಬೇಕೆಂದು ತನ್ನ ಸಾಮಂತರಿಗೆ ಅಪ್ಪಣೆ ಮಾಡಿದನು. ಅವರು ಅದರಂತೆ ರಾಜಧಾನಿಯನ್ನು ಮುತ್ತಲು ಅಣಿಯಾದರು.
ಇತ್ತ ರಾಕ್ಷಸನು ಭಾಗುರಾಯಣನು ಮಾಡಿದ ಯುದ್ದ ಸನ್ನಾಹವನ್ನು ತಾನೇ ಪರೀಕ್ಷಿಸಿದನು. ವೈರಿಬಲವನ್ನು ಹಿಮ್ಮೆಟ್ಟಿಸಲು ಸೇನಾಪತಿ ಮಾಡಿದ ಸಿದ್ಧತೆ ಸಾಲದಿಂದು ತಿಳಿದು, ಅದಕ್ಕೆ ತಕ್ಕ ಏರ್ಪಾಟುಗಳನ್ನು ಮಾಡಿಸಿದನು. ‘ಈ ರಾತ್ರಿ ವೈರಿಗಳು ಪಟ್ಟಣವನ್ನು ಮುತ್ತುವರೆಂಬ ಸುದ್ದಿ ನಮಗೆ ಬಂದಿದೆ. ರಾಜಧಾನಿಯನ್ನು ಕಾಪಾಡುವ ಭಾರ ನಿನಗೆ ಸೇರಿದೆ. ಈ ವಿಷಯದಲ್ಲಿ ಎಚ್ಚರಿಕೆಯಿಂದಿರು’ ಎಂದು ಭಾಗುರಾಯಣನಿಗೆ ಅಪ್ಪಣಮಾಡಿ ಅಮಾತ್ಯನು ನಂದರ ಬಳಿಗೆ ಬಂದನು. ರಾಕ್ಷಸನು ಮಾಡಿದ ಏರ್ಪಾಟುಗಳನ್ನು ಕೇಳಿ ನಂದರು ತುಂಬ ಸಂತೋಷಿಸಿದರು. ಸ್ವಾಮಿಭಕ್ತನಾದ ಅಮಾತ್ಯರಾಕ್ಷಸ, ಕಾರ್ಯದಕ್ಷನಾದ ಕಾಶೀರಾಜ-ಇವರಿರುವಲ್ಲಿ ಹಗೆಗಳು ಹತರಾಗುವುದರಲ್ಲಿ ಸಂದೇಹವುಂಟೇ ಎಂದು ನಂದರು ಎಣಿಸಿದರು. ನಂದರು ಹಾಲನ್ನು ಕಂಡರು; ದೊಣ್ಣೆಯನ್ನು ಕಾಣಲಿಲ್ಲ. ಅವರು ಚಾಪೆಯ ಕೆಳಗೆ ನುಸಿದರೆ ದೈವ ರಂಗವಲ್ಲಿಯ ಕೆಳಗಡೆ ನುಸಿಯಿತು. ಮನುಷ್ಯನು ಸುಖ ಶಾಶ್ವತವೆಂದೇ ನಂಬುತ್ತಾನೆ. ಸುಖದ ಕೆಳಗಡೆ ಇರುವ ವಿಷದ ಪಾತ್ರೆ ಅವನ ಕಣ್ಣಿಗೆ ಕಾಣಿಸುವುದಿಲ್ಲ. ಈ ವೇಳೆಗೆ ಸಂಜೆಯಾಯಿತು. ಮುಂದಾಗುವ ಕದನವನ್ನು ನೋಡಲಾರದೆ ಸೂರ್ಯದೇವನು ಕಣ್ಣನ್ನು ಮುಚ್ಚಿಕೊಂಡನು. ಕಾಡಿಗೆಯನ್ನು ಬಳಿದಂತೆ ಲೋಕವನ್ನೆಲ್ಲ ಕತ್ತಲೆ ಮುಸುಗಿತು. ರಾತ್ರಿ ಕಣ್ಣು ಬಿಟ್ಟಂತೆ ಎರಡು ಕಡೆಯ ಪಾಳೆಯಗಳಲ್ಲೂ ಸೊಡರುಗಳು ಮಿನುಗಿದುವು.
ಮಾರನೆಯ ದಿನ ನಂದರ ಸೇನೆಗೂ ಪರ್ವತರಾಜನ ಸೇನೆಗೂ ಯುದ್ಧ ಮೊದಲಾಯಿತು. ಪಾಟಲೀಪುರವನ್ನು ಮುತ್ತುವ ಆವೇಶದಲ್ಲಿ ಸರ್ವತರಾಜನ ಸೇನೆ ಜೀವದ ಹಂಗು ತೊರೆದು ಹೋರಾಡಿತು. ಎರಡು ಕಡೆಗಳಲ್ಲಿಯೂ ಅನೇಕರು ಹತರಾದರು. ನಂದರ ಕಡೆ ಅಂದು ವಿಶೇಷವಾಗಿ ಕಾದಾಡಿದವರು ಅವರ ಸಾಮಂತರೇ. ಭಾಗುರಾಯಣನ ಅಪ್ಪಣೆಯಂತೆ ಭದ್ರಭಟಾದಿಗಳು ಕಾದದೆ ಹಿಂದುಗಡೆ ಸುಮ್ಮನಿದ್ದುಬಿಟ್ಟರು. ವೈರಿಗಳು ರಾಜಧಾನಿಗೆ ಸಮೀಪವಾದರು. ದೂತರಿಂದ ಈ ಸಮಾಚಾರ ನಂದರಿಗೆ ತಿಳಿಯಿತು. ಭದ್ರಭಟಾದಿ ಸೇನಾನಾಯಕರು ಮನಮುಟ್ಟಿ, ಕಾದದಿರಲು ಕಾರಣವೇನು? ಶತ್ರುಗಳು ಇವರ ಮನಸ್ಸನ್ನು ಒಲಿಸಿಕೊಂಡಿರಬಹುದೇ? ನದಿಯ ನಡುವೆ ದೋಣಿಗನೊಡನೆ, ಕ್ಷೌರದ ನಡುವೆ ಕ್ಷೌರಿಕನೊಡನೆ ಹಗೆಕಟ್ಟಿಕೂಳ್ಳುವುದು ಹೇಗೆ ಉಚಿತವಲ್ಲವೋ ಹಾಗೆಯೇ ಈ ಸಮಯದಲ್ಲಿ ಅಧಿಕಾರಿಗಳನ್ನು ಮೇಲೆ ಹಾಕಿಕೊಳ್ಳುವುದು ಅನುಚಿತವೆಂದು ತೋರಿತು ನಂದರಿಗೆ. ಆಗ ತಾವೇ ಯುದ್ಧಕ್ಕೆ ಹೊರಡಬೇಕೆಂದು ಅವರು ನಿಶ್ಚಯಿಸಿದರು. ಈ ವೇಳೆಯಲ್ಲಿ ರಾಕ್ಷಸನೂ ಸಿಡಿಲಾಳಿನಂತೆ ಯುದ್ಧಕ್ಕೆ ಮುನ್ನುಗ್ಗಿದನು. ಆ ಮಂತ್ರಿಶ್ರೇಷ್ಠನ ಪರಾಕ್ರಮವನ್ನು ಏನೆಂದು ವರ್ಣಿಸುವುದು? ಆತನ ಸಿಡಿಲಾಳುತನವನ್ನು ಒಂದೇ ಮಾತಿನಲ್ಲಿ ಬಣ್ಣಿಸುವುದೇ ಉಚಿತ. ವೈರಿಸೇನೆಗೆ ರಾಕ್ಷಸನು ರಾಕ್ಷಸನೇ ಆದನು. ಆತನ ಪರಾಕ್ರಮದಿಂದ ಅಂದು ನಂದರಿಗೆ ಜಯಲಕ್ಷ್ಮಿ ಒಲಿದಳು. ಇದರಿಂದ ನಂದರಿಗೆ ಅತಿಯಾಗಿ ಸಂತೋಷವಾಯಿತು. ಮಾರನೆಯದಿನ ನಡೆದ ಯುದ್ದದಲ್ಲಿಯೂ ನಂದರದೇ ಮೇಲುಗೈ.
ನಂದರಿಗೆ ಉಂಟಾದ ಜಯದಿಂದ ಪರ್ವತರಾಜನಿಗೆ ಕಳವಳವುಂಟಾಯಿತು. ಕಷ್ಟಸುಖಗಳು ಬಂದರೆ ಗುಂಪುಕೂಡಿ ಬರುವಂತೆ ಪರ್ವತರಾಜನಿಗೆ ಮೇಲಿಂದಮೇಲೆ ಕೆಟ್ಟ ಸುದ್ದಿಗಳು ಬರತೊಡಗಿದುವು. ಮೊದಲನೆಯದಾಗಿ ನಂದರೆ ಮೂಲಬಲ ಇನ್ನೆರಡು ದಿನಗಳಲ್ಲಿ ಅವರಿಗೆ ಬೆಂಬಲವಾಗಿ ಬರುವುದೆಂಬ ಸುದ್ದಿ ಬಂತು. ಅಷ್ಟರಲ್ಲೇ ರಾಜಧಾನಿಯಿಂದ ನಗರರಕ್ಷಕನು ‘ಶತ್ರುಗಳು ನಮ್ಮ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಅನೇಕ ಗಡಿದುರ್ಗಗಳು ಅವರ ವಶವಾದುವು. ತಡಮಾಡಿದರೆ ರಾಜಧಾನಿ ವೈರಿಗಳ ವಶವಾಗುತ್ತದೆ. ನನ್ನಿಂದ ಪಟ್ಟಣವನ್ನು ಕಾಪಾಡಲು ಸಾಧ್ಯವಿಲ್ಲ. ನೀವು ನಂದರೊಡನೆ ಬೇಗ ಸಂಧಿಮಾಡಿಕೊಂಡು ಬರಬೇಕು ‘ ಎಂದು ಬರೆದು ಕಳುಹಿಸಿದ ಲೇಖನ ಬಂದು ತಲುಪಿತು. ಕೆಸರಿನಲ್ಲಿ ಬಿದ್ದ ಮದ್ದಾನೆಯಂತಾಯಿತು ಪರ್ವತರಾಜನ ಸ್ಥಿತಿ. ಮನಸ್ಸಿನ ಗಾಯಕ್ಕೆ ತೈಲ, ಪ್ರತಿದಿನದ ಮರಣದಂತಿರುವ ಮೃದುಮಧುರವಾದ ನಿದ್ದೆ ರಾಜನಿಗೆ ಬಾರದಾಯಿತು. ಉಲೂಕನ ಮಾತನ್ನು ಕೇಳಿ, ಚಾಣಕ್ಯನ ಕುತಂತ್ರಕ್ಕೆ ಒಳಗಾಗದಿದ್ದರೆ ಎಷ್ಟು ಚೆನ್ನಿರುತ್ತಿತ್ತು ಎಂದುಕೊಂಡನು ಪರ್ವತರಾಜ. “ಹಿಂದಿನ ಮನೆ ಭಿಕ್ಷೆ ಇಲ್ಲ, ಮುಂದಿನ ಮನೆ ಕೋರುಧಾನ್ಯ ತಪ್ಪಿತು’ ಎಂಬ ಗಾದೆ ರಾಜನ ವಿಷಯದಲ್ಲಿ ಸತ್ಯವಾದಂತೆ ತೋರಿತು,
ಇತ್ತ ರಾಕ್ಷಸನು ಸ್ವಲ್ಪಕಾಲ ಯುದ್ಧ ನಿಲ್ಲಿಸಿ ಕಾಲಕಳೆಯಲು ಬಯಸಿದನು. ನಷ್ಟವಾದ ಸೇನೆಯನ್ನು ಜತೆಗೊಳಿಸಿ, ಮೂಲಬಲವನ್ನು ಈ ಸೇನೆಯೊದನೆ ಸೇರಿಸಲು ನಿಜವಾಗಿಯೂ ಅಮಾತ್ಯನಿಗೆ ಸ್ವಲ್ಪಕಾಲ ಬೇಕಾಗಿತ್ತು. ಅದಕ್ಕಾಗಿ ಕಪಟಸಂಧಿಯ ನೆವದಿಂದ ವಿಷ್ಣುದಾಸನೆಂಬ ನಿಯೋಗಿಯನ್ನು ಪರ್ವತರಾಜನಲ್ಲಿಗೆ ಕಳುಹಿಸಿದನು. ವಿಷ್ಣುದಾಸನು ರಾತ್ರಿಯಲ್ಲಿ ಪರ್ವತರಾಜನನ್ನು ಮರ್ಯಾದೆಯಿಂದ ಬಂದು ಕಂಡು ‘ಅರಸರೇ, ನಂದರು ತಮಗೆ ಈ ರೀತಿ ಹೇಳಿ ಕಳುಹಿಸಿದ್ದಾರೆ. ನಮಗೂ ಪರ್ವತರಾಜನಿಗೂ ಎಂದೂ ಇಲ್ಲದ ವೈರ ಚಂದ್ರಗುಪ್ತನಿಂದುಂಟಾಗಿದೆ. ಈ ಅಲ್ಪ ಮನುಷ್ಯನಿಗಾಗಿಯೇ ಇಷ್ಟು ದೊಡ್ಡ ನಷ್ಟ ಉಂಟಾಗಿದೆ. ಆದ್ದರಿಂದ ಚಂದ್ರಗುಪ್ತನನ್ನು ನಮ್ಮ ವಶಪಡಿಸಿದರೆ ಅದೇ ಅರ್ಧರಾಜ್ಯವನ್ನು ನಾವೇ ನಿಮಗೆ ಕೊಡುತ್ತೇವೆ. ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿದು ಬರುವಂತೆ ನನಗೆ ಅಪ್ಪಣೆಯಾಗಿದೆ’ ಎಂದು ತಿಳಿಸಿದನು.
ನಿಯೋಗಿಯ ಮಾತನ್ನು ಕೇಳಿ ಪರ್ವತರಾಜನ ಮನಸ್ಸಿನಲ್ಲಿ ಆಸೆ, ಅಭಿಮಾನಗಳು ಏಕಕಾಲದಲ್ಲಿ ತಲೆದೋರಿದುವು. ತಮಗೆ ಕ್ಷೇಮವನ್ನುಂಟುಮಾಡುವ ಸಂಧಿಯ ಆಶೆಯನ್ನು ಕ್ಷಣಕಾಲ ಅದುಮಿ ಪರ್ವತರಾಜನು ಅಭಿಮಾನದಿಂದ ನಿಯೋಗಿಗೆ ಈ ರೀತಿ ನುಡಿದನು. ‘ನಮಗೆ ರಾಜ್ಯದ ಮೇಲೆ ಆಶೆಯಿಲ್ಲ. ಮರೆಹೊಕ್ಕವರನ್ನು ಕಾಪಾಡುವುದು ಕ್ಷತ್ರಿಯರ ಧರ್ಮ. ಚಂದ್ರಗುಪ್ತನಿಗೆ ನಂದರು ಅರ್ಧರಾಜ್ಯವನ್ನು ಕೊಟ್ಟರೇ ನಮಗೆ ಸಂಧಿ ಒಪ್ಪಿಗೆ. ಈ ವಿಷಯವನ್ನು ನಂದರಿಗೆ ತಿಳಿಸಿ, ಅವರ ಕುಶಲವನ್ನು ನಾವು ಕೇಳಿದೆನೆಂದು ತಿಳಿಸು” ಪರ್ವತ ರಾಜನು ಅಭಿಮಾನದಿಂದ ಮಾತನಾಡಿದರೂ ಅವನ ಮನಸ್ಸಿನ ಆತಂಕ ಮುಖದಲ್ಲಿ ಕಂಡುಬರುತ್ತಿತ್ತು. ಇದನ್ನರಿತ ನಿಯೋಗಿ ಸ್ವಲ್ಪ ಸಮಾಧಾನ ಹೊಂದಿ ಬಂದ ದಾರಿಯಲ್ಲಿ ಹಿಂದಿರುಗಿದನು.
ನಿಯೋಗಿ ಹೊರಟುಹೋದ ಮೇಲೆ, ಪರ್ವತರಾಜನು ಶಬರವರ್ಮನಿಗೆ ” ಮಂತ್ರಿ, ನಮ್ಮ ರಾಜಧಾನಿಗೆ ಈಗ ವಿಪತ್ತು ಒದಗಿದೆ. ಇದು ರಾಕ್ಷಸನು ಮಾಡಿರುವ ತಂತ್ರ. ಇಷ್ಟರಲ್ಲೇ ನಂದರ ಸೇನೆಗೆ ಮೂಲಬಲ ಬಂದು ಸೇರುತ್ತದೆ. ಈ ಎರಡು ಸುದ್ದಿ ರಾಕ್ಷಸನಿಗೆ ತಿಳಿದರೆ ಆತನು ಸಂಧಿಗೆ ಒಡಂಬಡನು. ಆದ್ದರಿಂದ ಪೂರ್ವದಲ್ಲಿ ಜನಮೇಜಯನು ಸರ್ಪಯಾಗವನ್ನು ಮಾಡಿದಾಗ ಶರಣಾಗತನಾದ ತಕ್ಷಕನನ್ನು ಪರಿತ್ಯಜಿಸಿ ದೇವೇಂದ್ರನು ಸುಖಿಯಾದಂತೆ ಈಗ ಚಂದ್ರಗುಪ್ತನನ್ನು ನಂದರಿಗೊಪ್ಪಿಸಿ, ಅವರು ಕೊಡುವ ಅರ್ಧರಾಜ್ಯವನ್ನು ಸ್ವೀಕರಿಸಿ ರಾಜಧಾನಿಗೆ ಹೋಗುವೆನು” ಎಂದನು. ರಾಜನ ಮಾತು ಮಂತ್ರಿಗೆ ರುಚಿಸಲಿಲ್ಲ. ಮಾಡತಕ್ಕ ಕೆಲಸವನ್ನು ಜಾಣಕ್ಯನಿಗೆ ತಿಳಿಸಿ ಮಾಡತಕ್ಕದ್ದೆಂದು ಮಾತ್ರ ಹೇಳಿ ಶಬರವರ್ಮನು ಬೀಡಾರಕ್ಕೆ ತೆರಳಿದನು. ಇತ್ತ ರಾಜದೂತನು ಚಾಣಕ್ಯನಲ್ಲಿಗೆ ಬಂದನು.
ದಾರಿಯಲ್ಲಿ ದೂತನೊಡನೆ ರಾಜಸಭೆಗೆ ಹೋಗುತ್ತಿದ್ದ ಚಾಣಕ್ಯನನ್ನು ಕಂಡು ಶಬರವರ್ಮನು ತನ್ನ ಮನಸ್ಸಿನಲ್ಲಿ ” ಪೂಜ್ಯರು ನನ್ನ ಬಳಿಗೆ ಬಂದು ರಾಜನು ಈಗ ನಮ್ಮನ್ನು ಕರೆಕಳುಹಿಸಿದುದಕ್ಕೆ ಕಾರಣವೇನೆಂದು ಕೇಳಿದರೆ ಏನು ಹೇಳಲಿ? ಆಸ್ಥಾ ನದಲ್ಲಿ ನಡೆದುದನ್ನು ಅನ್ಯರಿಗೆ ಹೇಳುವುದು ಮಂತ್ರಿಧರ್ಮವಲ್ಲ. ಆದರೆ ಮಹಾತ್ಮರಲ್ಲಿ ಸುಳ್ಳಾಡಕೂಡದು. ಆದ್ದರಿಂದ ಈಗ ಮರೆಯಾಗುವುದೇ ಉತ್ತಮ ‘ ಎಂದುಕೊಂಡು ಮರೆಯಾದನು. ಇದನ್ನು ದೂರದಲ್ಲೇ ಕಂಡ ಚಾಣಕ್ಯನು “ಶಬರವರ್ಮನು ಮರೆಯಾದುದಕ್ಕೆ ಕಾರಣವೇನು? ಆಸ್ಥಾನದಲ್ಲಿ ನಮಗೆ ಅಪ್ರಿಯವಾದ ಮಾತುಕತೆಗಳು ನಡೆದಿರಬೇಕು. ನಂದರ ನಿಯೋಗಿ ಪರ್ವತರಾಜನಲ್ಲಿಗೆ ಬಂದು ಏನೋ ಆಸೆಯನ್ನು ಒಡ್ಡಿರಬೇಕು. ಅದು ಪರ್ವತರಾಜನಿಗೆ ಸಮ್ಮತವಾಗಿ, ಸೇನಾಪತಿಗೆ ಅಸಮ್ಮತವಾಗಿ ವಾಗ್ವಾದ ನಡೆದಿರಬೇಕು. ಅದನ್ನು ನಮಗೆ ತಿಳಿಸಲು ನಾಚಿಕೆಯಾಗಿ ಶಬರವರ್ಮನು ಈಗ ಮರೆಯಾಗಿರಬೇಕು. ಈತನ ಅಭಿಪ್ರಾಯವನ್ನು ತಿಳಿದ ಬಳಿಕ ರಾಜನ ಬಳಿಗೆ ಹೋಗೋಣ ‘ ಎಂದು ಯೋಚಿಸಿ ದೂತನಿಂದ ಅವನನ್ನು ತನ್ನಲ್ಲಿಗೆ ಕರೆಸಿಕೊಂಡನು. ಹಾಗೆ ಬಂದು ನಮಸ್ಕರಿಸಿ ಖಿನ್ನನಾಗಿ ನಿಂತಿದ್ದ ಶಬರವರ್ಮನನ್ನು ನೋಡಿ ಚಾಣಕ್ಯನು ‘ಎಲೈ ಮಂತ್ರಿ, ಈ ದಿನ ಆಸ್ಥಾನದಲ್ಲಿ ನಡೆದ ಅಪ್ರಿಯವಾದ ಮಾತನ್ನು ನಮಗೆ ತಿಳಿಸುವುದು ಮಂತ್ರಿಧರ್ಮವಲ್ಲವೆಂದು ತಿಳಿದು ನೀನು ಮರೆಯಾದಂತೆ ತೋರುತ್ತದೆ. ಶತ್ರುಗಳು ಒಡ್ಡಿರುವ ಆಶೆಗೆ ಮರುಳಾಗಿ, ಅವರು ಹೇಳಿದಂತೆ ನಡೆಸಿಕೊಡಲು ಅರಸನು ಒಪ್ಬಿರುವನೇ? ಸ್ವರಕ್ಷಣೆಗಾಗಿ ಅರಸರು ಸಮಯೋಚಿತವಾಗಿ ಹೀಗೆ ಮಾಡುವುದುಂಟು’ ಎಂದು ಕೇಳಿದನು. ಚಾಣಕ್ಯನ ಮಾತಿಗೆ ಶಬರವರ್ಮನು ‘ಪೂಜ್ಯರೇ, ನೀವು ಊಹಿಸಿದುದು ಸುಳ್ಳಾದೀತೇ? ಭಯಗ್ರಸ್ತನಾದವನಿಗೆ ಕಾರ್ಯಾಕಾರ್ಯ ವಿವೇಕವಿರದು. ಆದ್ದರಿಂದ ಅಕಾರ್ಯಕ್ಕೆ ಸಮ್ಮತಿಸದ, ದಕ್ಷನಾದ ಶೇಖರನ ಕೈಯಲ್ಲಿ ಚಂದ್ರಗುಪ್ತನನ್ನು ಒಪ್ಪಿಸಿ ನಿಮ್ಮ ಮನಬಂದಂತೆ ಆಚರಿಸಿ’ ಎಂದು ಹೇಳಿ ಹೊರಟುಹೋದನು. ಶಬರವರ್ಮನ ಮಾತಿನ ಅರ್ಥವನ್ನು ಚೆನ್ನಾಗಿ ಗ್ರಹಿಸಿ, ಮುಂದೆ ಮಾಡುವ ಕೆಲಸವನ್ನು ಬೇಗ ಮಾಡಬೇಕೆಂದು ನಿಶ್ಚಯಿಸಿ ಚಾಣಕ್ಯನು ಆಸ್ಥಾನಕ್ಕೆ ಬಂದನು.
ಪರ್ವತರಾಜನು ಚಾಣಕ್ಯನನ್ನು ಆದರದಿಂದ ಸಭೆಗೆ ಬರಮಾಡಿ ಕೊಂಡನು. ಸಭೆಯ ಸ್ಥಿತಿ, ರಾಜನ ಮುಖಲಕ್ಷಣ–ಇವುಗಳಿಂದ ನಂದರ ನಿಯೋಗಿ ಪರ್ವತರಾಜನೆಡೆಗೆ ಬಂದಿರಲೇಬೇಕೆಂದು ಚಾಣಕ್ಯನಿಗೆ ಹೊಳೆಯಿತು. ರಾಜನು ಚಾಣಕ್ಯನನ್ನು ನೋಡಿ ‘ಪೂಜ್ಯರೇ, ಸಂಧಿಗಾಗಿ ನಂದರ ನಿಯೋಗಿ ಈಗತಾನೆ ನಮ್ಮ ಲ್ಲಿಗೆ ಬಂದಿದ್ದ. ಚಂದ್ರಗುಪ್ತನನ್ನು ವೈರಿಗಳಿಗೆ ಒಪ್ಪಿಸಿದರೆ, ಅವರು ನಮಗೆ ಅರ್ಧರಾಜ್ಯವನ್ನು ಕೊಡುವರಂತೆ. ಈ ಮಾತಿಗೆ ನಾನು ಉಚಿತವಾದ ಉತ್ತರವನ್ನು ಹೇಳಿಕಳುಹಿಸಿದೆ. ಮೊನ್ನಿನ ಯುದ್ಧದಲ್ಲಿ ನಮಗೆ ಅಪಜಯವುಂಟಾ ಯಿತು. ನಿನ್ನೆಯದು ಸಮಯುದ್ಧ. ನಾಳಿನ ಯುದ್ಧದಲ್ಲಿ ಜಯಲಕ್ಷ್ಮಿಯ ಕುಡಿನೋಟ ಯಾರ ಮೇಲಿರುವುದೋ ಹೇಳಬಲ್ಲವರಾರು? ನಾವು ಸಂಧಿಗೆ ಈಗ ಒಪ್ಪಕೂಡದೇಕೆ? ನಮಗೆ ನಂದರಿಂದ ಬರುವ ಅರ್ಧರಾಜ್ಯಕ್ಕೆ ಚಂದ್ರಗುಪ್ತನನ್ನು ಒಡೆಯನನ್ನಾಗಿ ಮಾಡುವೆನು. ಇದರಿಂದ ಇಬ್ಬರಿಗೂ ಇರುವ ವೈರ ಶಾಂತವಾಗುವುದು.’
ಚಾಣಕ್ಯ (ಮುಗುಳು ನಗೆ ನಕ್ಕು ಮನಸ್ಸಿನಲ್ಲೇ) ರಾಕ್ಷಸ, ನಿನ್ನ ಕಪಟ ನನ್ನ ಬಳಿ ಸಾಗದು. (ಪ್ರಕಾಶವಾಗಿ) ಅರಸನೇ, ಬಲಹೀನರು ಶೂರರನ್ನು ಸಂಧಿಗಾಗಿ ಬೇಡುವುದು ಲೋಕಧರ್ಮ. ಈಗಿನ ಯುದ್ಧ ದಲ್ಲಿ ಅವರಿಗೆ ಜಯವುಂಟಾಗಿದೆ. ಶೂರರು ಸಂಧಿಗೆ ಹೇಳಿಕಳುಹಿಸುವರೇ? ಇದು ಕಾಲ ಕಳೆಯಲು ವೈರಿಗಳು ಮಾಡಿರುವ ಕಪಟ, ಈ ಅಂಶವನ್ನು ನೀನು ಯೋಚಿಸಬೇಡವೇ? ಅದಿರಲಿ; ನಿನ್ನ ಮುಖ ಕಳೆಗುಂದಿರಲು ಕಾರಣವೇನು? ನಿನ್ನ ಕಣ್ಣುಗಳು ನಿದ್ದೆಯಿಲ್ಲದೆ ಕೆಂಪಾಗಿವೆ.
ಪರ್ವತರಾಜ– ಆರ್ಯರೇ, ರಾಕ್ಷಸನ ತಂತ್ರದ ಫಲವಾಗಿ ನಮ್ಮ ರಾಜಧಾನಿ ವೈರಿಗಳಿಂದ ಸೂರೆಯಾಗುವುದರಲ್ಲಿದೆ. ಇಷ್ಟರಲ್ಲೇ ನಂದರಿಗೆ ಬೆಂಬಲವಾಗಿ ಅವರ ಮೂಲಬಲ ಬಂದೊದಗುವುದಂತೆ. ಈಗ ರಾಜಧಾನಿಗೆ ಸಹಾಯವಾಗಿ ಸೇನೆಯನ್ನು ಕಳುಹಬೇಕು. ನಂದರಿಗೆ ಬೆಂಬಲವಾಗಿ ಮೂಲಬಲ ಬರದಂತೆ ತಡೆಯಬೇಕು. ವೈರಿಗಳೂಡನೆ ಯುದ್ಧ ನಡೆಸಬೇಕು. ಒಂದೇಕಾಲದಲ್ಲಿ ಈ ಮೂರು ಕೆಲಸ ಹೇಗೆ ತಾನೆ ಸಾಧ್ಯ? ಈ ಕಾರಣದಿಂದ ನನಗೆ ನಿದ್ದೆಯಿಲ್ಲದಾಗಿದೆ. ಈಗ ನನಗೆ ಸುಖವಾಗುವ ದಾರಿ ತೋರಿ.
ಚಾಣಕ್ಯ– ಅರಸ! ಪರ್ವತರಾಜನು ಎದೆಗೆಟ್ಟು ಮಂಜಿಗೆ ಹೆದರಬೇಕೇ? ನಂದರನ್ನು ನಿಗ್ರಹಿಸಲು ನಾನು ಇಷ್ಟು ಸೇನೆಯನ್ನು ಬಯಸಲಿಲ್ಲ. ಈಗ ನೀನು ನಗರರಕ್ಷಕನಿಗೆ ‘ನಿನ್ನಿನ ಯುದ್ಧದಲ್ಲಿ ನಂದರು ಮರಣಹೊಂದಿದರು. ಪಾಟಿಲೀಪುರ ನಮ್ಮ ಕೈವಶವಾಯಿತು. ಅಮಾತ್ಯರಾಕ್ಷಸನು ಓಡಿಹೋದನು. ಎಷ್ಟು ಹುಡುಕಿಸಿದರೂ ಆತನು ಸಿಕ್ಕಲಿಲ್ಲ. ನಿಮ್ಮಲ್ಲಿ ಆತನಿರುವ ಸುದ್ದಿ ತಿಳಿದರೆ, ಆತನನ್ನು ಹಿಡಿಸಿ ಸೆರೆಯಲ್ಲಿಡಿಸುವುದು. ಈ ಒಸಗೆಗಾಗಿ ರಾಜಧಾನಿಯಲ್ಲಿ ಜಯಭೇರಿ ಹೊಡೆಸಿ, ಸಕ್ಕರೆಯನ್ನು ಹಂಚಿಸು. ನಗರದಲ್ಲಿ ಉತ್ಸವ ನಡೆಯಲಿ ಎಂದು ಬರೆದು ಕಳುಹಿಸು. ಇದರಿಂದ ಶತ್ರುಗಳು ನಿಂತಲ್ಲಿ ನಿಲ್ಲದೆ ಓಡಿಹೋಗುವರು. ಇಷ್ಟರಲ್ಲೇ ದಕ್ಷಿಣದೇಶದಿಂದ ಬರುವ ಬಲ ಓಡಿ ಹೋದ ಸುದ್ದಿ ತಿಳಿದುಬರುವುದು.
ಪರ್ವತರಾಜ– ನೀವು ಹೇಳಿದಂತೆ ದಕ್ಷಿಣದಿಂದ ಬರುವ ಸೇನೆ ಓಡಿಹೋಗದಿದ್ದರೆ, ಆಗಲಾದರೂ ನಾವು ಸಂಧಿಗೆ ಒಡಂಬಡಬೇಕಲ್ಲವೆ?
ಚಾಣಕ್ಯ (ಕೈಹೊಯ್ದು ನಗುತ್ತ)– ಚಂದ್ರಗುಪ್ತನನ್ನು ನಂದರಿಗೆ ಒಪ್ಪಿಸುವುದು ತಾನೆ ನಿನ್ನ ಅಭಿಮತ? ಈ ಅಕಾರ್ಯ ಖಂಡಿತವಾಗಿ ನಾವಿರುವವರೆಗೆ ನಡೆಯಲಾರದು. ನಮ್ಮಲ್ಲಿ ಬುದ್ಧಿ ಶಕ್ತಿ, ಪೌರುಷಗಳು ಇಲ್ಲವೆಂದು ಭಾವಿಸಿರುವೆಯಾ? ನನ್ನ ತಪಸ್ಸಿನಿಂದಲೇ ನಂದರನ್ನು ಸುಟ್ಟು ಬೂದಿಮಾಡುವೆನು.
ಈ ವೇಳೆಗೆ ಲಂಪಾಕಾಧಿಪತಿ, ಕಾಮರೂಪ ದೇಶಾಧಿಪತಿಯಿಂದ ಸೋತುಹೋದನೆಂಬ ಸುದ್ದಿ ಚಾರರಿಬ್ಬರಿಂದ ತಿಳಿದುಬಂತು. ಅದನ್ನು ಕೇಳಿಸಂತೋಷದಿಂದ ಪರ್ವತರಾಜನು ಚಾಣಕ್ಯನ ಮುಖ ನೋಡಲು ಚಾಣಕ್ಯನು ಪರ್ವತರಾಜನನ್ನು ನೋಡಿ ” ರಾಜನೇ, ಇದು ಯಾವ ಮಹಾಸಂತೋಷದ ಸುದ್ದಿ? ನಾಳೆ ಆಗಬಹುದಾದ ಜಯಲಾಭವನ್ನು ನೋಡಬೇಕಾದರೆ ಶೇಖರನನ್ನು ನಿನ್ನೆಲ್ಲ ಸೇನೆಗೆ ಅಧಿಪತಿಯನ್ನಾಗಿ ಮಾಡಿ ನಮ್ಮಲ್ಲಿಗೆ ಕಳುಹು’ ಎಂದನು. ಅಂದಿನ ಸಭೆ ಮುಗಿಯಿತು. ಆಸ್ಥಾನದಿಂದ ಎಲ್ಲರೂ ತಮ್ಮ ಬೀಡಾರಗಳಿಗೆ ತೆರಳಿದರು.
ಸಭೆ ಮುಗಿಯುವ ವೇಳಗೆ ನಡುರಾತ್ರಿಯಾಗಿತ್ತು. ಕೆಟ್ಟ ಯೋಚನೆಗಳನ್ನು ಹುದುಗಿಟ್ಟು ಕೊಂಡ ಮನುಷ್ಯನ ಮನಸ್ಸಿನಂತೆ ಹೊರಗಡೆ ಕಗ್ಗತ್ತಲೆ ದಟ್ಟವಾಗಿ ಹೆಬ್ಬಿತ್ತು. ಆಸ್ಥಾನದಿಂದ ತನ್ನ ಬೀಡಾರಕ್ಕೆ ಹೋಗುತ್ತ ಚಾಣಕ್ಯನು ತನ್ನ ಮನಸ್ಸಿನಲ್ಲಿ ಈ ರೀತಿ ಯೋಚಿಸಿದನು. ‘ರಾಕ್ಷಸನ ಕಪಟಕ್ಕೆ ಪರ್ವತರಾಜನು ಮರುಳಾಗಿದ್ದಾನೆ. ಆದ್ದರಿಂದ ಚಂದ್ರಗುಪ್ತನಿಗೆ ವಿಸತ್ತು ಬರುವುದಕ್ಕೆ ಮುಂಚೆ ನಾವು ಕಾರ್ಯಸಾಧನೆ ಮಾಡಬೇಕು.
ಮುಂದಿನ ಅಧ್ಯಾಯ: ೧೬. ನಂದರ ಮರಣ