ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 16: ನಂದರ ಮರಣ

೧೬. ನಂದರ ಮರಣ

ಚಾಣಕ್ಯನಿದ್ದ ಧೈರ್ಯ ಪರ್ವತರಾಜನಿಗಿರಲಿಲ್ಲವಾದ ಕಾರಣ ರಾಜನಿಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಆ ದಿನದ ಘಟನೆಗಳಿಂದ ಪರ್ವತರಾಜನ ಮನಸ್ಸು ಇನ್ನೂ ಹಿಡಿತಕ್ಕೇ ಬಂದಿರಲಿಲ್ಲ. ಚಾಣಕ್ಯರ ಬುದ್ಧಿಶಕ್ತಿಯಿಂದ ಆಗದ ಕೆಲಸವಾಗುವುದು? ಅವರ ಸಹವಾಸ ಬೆಂಕಿಯೊಡನೆ ಸರಸವಾಡಿದಂತೆ. ಆದರೆ ಇತ್ತ ನೋಡಿದರೆ ನಂದರ ಸೇನೆಗೆ ಮಿತಿಯೇ ಇರುವಂತೆ ತೋರುವುದಿಲ್ಲ, ಹೀಗಿರುವಲ್ಲಿ ಮುಂದೇನು ಮಾಡಬೇಕು? ಈ ಯೋಚನೆಯೇ ರಾಜನ ಮನಸ್ಸನ್ನು ಮುಸುಕಿತ್ತು, ಎಷ್ಟು ಯೋಚಿಸಿದರೂ ದಾರಿಗಾಣದೆ, ಕೊನೆಗೆ ಪರ್ವತರಾಜನು ತನಗೆ ಆಪ್ತನಾದ ಶೇಖರನನ್ನು ಕರೆಸಿ ಅವನಿಗೆ ಈ ರೀತಿ ಹೇಳಿದನು. ‘ಸೇನಾಪತಿ, ನಮಗೆ ಎಂಥ ವಿಪತ್ತು ಬಂತು! ಈ ಸಮಯದಲ್ಲಿ ನನಗೆ ದಿಕ್ಕೇ ತೋರದಾಗಿದೆ. “ಇತ್ತ ಪುಲಿ ಅತ್ತ ದರಿ” ಎನ್ನುವಂತಾಗಿದೆ ನನ್ನ ಅವಸ್ಥೆ. ರಾಕ್ಷಸನ ತಂತ್ರ, ಅದಕ್ಕೆ ಚಾಣಕ್ಯರು ಹೇಳಿರುವ ಪರಿಹಾರ– ಇವು ಒಂದಕ್ಕಿಂತ ಒಂದು ಬಲವಾಗಿವೆ. ಈಗ ನಾನು ಚಂದ್ರಗುಪ್ತನನ್ನು ವೈರಿಗಳ ವಶಪಡಿಸಿ, ರಾಕ್ಷಸನ ಸ್ನೇಹ ಸಂಪಾದಿಸುತ್ತೇನೆ. ನಂದರು ನಮಗೆ ಕೊಡುವ ಅರ್ಧ ರಾಜ್ಯಕ್ಕೆ ನಿನ್ನನ್ನು ಅಧಿಪತಿಯನ್ನಾಗಿ ಮಾಡಬೇಕೆಂದಿರುತ್ತೇನೆ. ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು?’

ಪರ್ವತರಾಜನಿಗೆ ಕೇಡು ಹತ್ತಿರವಾದಂತೆ ಶೇಖರನಿಗೆ ತೋರಿತು. ಎಷ್ಟೇ ಕಷ್ಟ ಬಂದರೂ ಚಂದ್ರಗುಪ್ತನನ್ನು ಕಾಪಾಡಬೇಕೆಂದು ಸೇನಾಪತಿ ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡು, ರಾಜನಿಗೆ ಗಯನೆಂಬ ಗಂಧರ್ವನ ಕಥೆಯನ್ನು ವಿವರಿಸಿ, ಮರೆಹೊಕ್ಕವರನ್ನು ಕಾಪಾಡುವುದೇ ಕ್ಷತ್ರಿಯ ಧರ್ಮವೆಂದು ಬೋಧಿಸಿದನು. ಶೇಖರನ ಮಾತನ್ನು ಒಪ್ಪಿಕೊಂಡು, ರಾಜನು ಚಾಣಕ್ಯನ ಅಪ್ಪಣೆಯಂತೆ ಅವನನ್ನು ತನ್ನ ಸಮಸ್ತಸೇನೆಗೂ ಅಧಿಪತಿಯನ್ನಾಗಿ ಮಾಡಿದನು.

ಇತ್ತ ರಾಜನ ಓಲಗದಿಂದ ತನ್ನ ಬೀಡಾರಕ್ಕೆ ಬಂದಮೇಲೆ, ಚಾಣಕ್ಯನು ನಂದರ ಮರಣಕ್ಕಾಗಿ ಬೇಕಾಗುವ ಎಲ್ಲ ಏರ್ಪಾಟುಗಳನ್ನೂ ಎಚ್ಚರಿಕೆಯಿಂದ ಮಾಡಿದನು. ಪಾಟಿಲೀಪುರದಿಂದ ಕಾಶೀನಗರಕ್ಕೆ ಹೋಗುವ ದಾರಿಯ ನಡುವೆ ಶೇಖರನ ಮೂವತ್ತು ಸಾವಿರ ಯೋಧರು ಕಾಶೀರಾಜನ ಯೋಧರಂತೆ ವೇಷಧರಿಸಿ, ಚಾಣಕ್ಯನ ಅಪ್ಸಣೆಗಾಗಿ ಕಾದು ನಿಂತರು. ಅವರಲ್ಲಿ ಸುಂದರನೂ ಬುದ್ದಿವಂತನೂ ಆದ ಒಬ್ಬನಿಗೆ ಮಲಯಕೇತುವಿನಂತೆ ವೇಷಹಾಕಿಸಿ, ಆನೆಯ ಮೇಲೆ ಕೂರಿಸಿದ್ದರು. ಅವನ ಸುತ್ತಲೂ ರಾಜಪರಿವಾರ ಮೆರೆಯುತ್ತಿತ್ತು. ನಂದರು ಜಪಶಾಲೆಗೆ ಬಂದೊಡನೆಯೇ, ಅವರಿಗೆ ಏನೋ ಒಂದು ಸುದ್ದಿಯನ್ನು ತಿಳಿಸಲು ಜಪಶಾಲೆಯ ಬಳಿ ಇಬ್ಬರು ಸವಾರರನ್ನು ಕಾವಲಿಡಲಾಯಿತು. ಕಾಶೀಮಾರ್ಗದ ನಡುವೆ ನಿಂತು ಸೇನೆ ಜಪಶಾಲೆಗೆ ಬರುವುದನ್ನು ಕಂಡು, ಜಪಶಾಲೆಯಲ್ಲಿರುವ ನಂದರಿಗೆ ಯಾವುದೋ ಮಾತನ್ನು ಹೇಳಲು ಇಬ್ಬರು ಸವಾರರನ್ನು ನೇಮಕ ಮಾಡಲಾಯಿತು. ಕಾಶೀಮಾರ್ಗದ ಸೇನೆಯಲ್ಲಿ ನಿಂತು ನಂದರು ಜಪಶಾಲೆಗೆ ಬಂದ ಸುದ್ದಿ, ಶೇಖರನ ಸೂಚನೆ– ಇದನ್ನು ತಿಳಿದು ಮುಂದಿನ ಕಾರ್ಯ ನಡೆಸಲು, ಇಬ್ಬರು ಸವಾರರನ್ನು ಗೊತ್ತುಮಾಡಲಾಯಿತು.

ಈ ಸನ್ನಾಹ ಮುಗಿದ ಮೇಲೆ ಚಾಣಕ್ಯನು ಶೇಖರನಿಗೆ ‘ಸೇನಾಪತಿ, ನಂದರು ಜಪಶಾಲೆಗೆ ಹೋದ ಸಮಾಚಾರ ಸೈನ್ಯಕ್ಕೆ ತಿಳಿಯಲು ತಕ್ಕ ಸ್ಥಳಗಳಲ್ಲಿ ಸವಾರರನ್ನು ನಿಲ್ಲಿಸು. ನಂದರೊಡನೆ ಯುದ್ಧ ಮೊದಲಾದ ಕೂಡಲೇ ಜಯಭೇರಿಯನ್ನು ಹೊಡೆಯಿಸು. ಜಪಶಾಲೆಯಲ್ಲಿ ಉರಿ ಹೆಚ್ಚಿದುದನ್ನು ಕಂಡೊಡನೆಯೆ, ನಮ್ಮ ಸೇನೆ ನಂದರ ಸೇನೆಯ ಮೇಲೆ ಬಿದ್ದು ಅದನ್ನು ಬೆನ್ನಟ್ಟಲಿ, ಸೆನಾಪತಿಗಳು ಸಿದ್ಧರಾಗಿ ಕಾದಿರಲಿ. ಅಲ್ಲಲ್ಲಿ ಗೂಢಚಾರರು ನಿಂತು ನಮಗೆ ಸಮಾಚಾರ ಕೊಡಲಿ’ ಎಂದು ಅಪ್ಪಣೆಮಾಡಿದನು. ಚಾಣಕ್ಯನ ಅಪ್ಪಣೆಯಂತೆ ಎಲ್ಲ ಸಿದ್ಧತೆಗಳೂ ಆದುವು. ಅಂದಿನ ರಾತ್ರಿ ಚಾಣಕ್ಯನಿಗೆ ನಿದ್ದೆಯಿಲ್ಲ. ಈ ಸಿದ್ಧತೆಗಳು ಮುಗಿಯುವ ವೇಳೆಗೆ ಸರಿರಾತ್ರಿ ಮೀರಿತ್ತು. ನಿದ್ದೆಮಾಡಲು ಮನಸ್ಸಾಗದೆ ಚಾಣಕ್ಯನು ಸ್ನಾನಮಾಡಿ ಅಂದು ರಾಕ್ತಸನಿಗೂ, ನಂದರಿಗೂ ಅಗಲಿಕೆಯಾಗಲೆಂದು ತನ್ನ ಕುಲದೇವರನ್ನು ಪ್ರಾರ್ಥಿಸಿದನು.

ರಾತ್ರಿ ಮೆಲ್ಲನೆ ಜಾರಿ ಬೆಳಗಾಯಿತು. ತಂಗಾಳಿ ಬೀಸಿ ಲೋಕವನ್ನು ಎಚ್ಚರಗೊಳಿಸಿತು. ಹಕ್ಕಿಗಳು ಇಂಪಾಗಿ ಹಾಡಿದುವು. ಚಂದ್ರಗುಪ್ತನ ಅಭ್ಯುದಯವನ್ನು ನೋಡಲೆಂಬಂತೆ ಪೂರ್ವದಿಕ್ಕಿನಲ್ಲಿ ಸೂರ್ಯನು ಉದಯಿಸಿದನು.

ಅಂದು ನಂದರ ಬಾಳಿನ ಕೊನೆಯ ದಿನ. ಆದರೆ ಅವರು ಅದನ್ನು ಅರಿಯರು. ಸ್ನಾನಾದಿಗಳನ್ನು ಮಾಡಿ, ಭೋಜನ ಮಾಡಿದರು. ನಿಯೋಗಿಯ ಮಾತು ನಂದರಿಗೆ ಸಮಾಧಾನ ತಂದಕಾರಣ ತಿರುಗಿ ಅವರು ಮಲಗಿಕೊಂಡರು. ನಿದ್ದೆ ಅವರನ್ನು ಮುತ್ತಿಟ್ಟು ಆಲಿಂಗಿಸಿತು. ಇತ್ತ ನಿಯೋಗಿಯ ಮಾತನ್ನು ಕೇಳಿ ಯುದ್ಧ ಮಾಡಲು ಸ್ವಲ್ಪ ಅವಕಾಶ ಉಂಟಾಯಿತೆಂದು ತಿಳಿದು, ರಾಕ್ಷಸನೂ ಎರಡು ದಿನ ನಿದ್ದೆಯಿರದಿದ್ದ ಕಾರಣ ಮಲಗಿಕೊಂಡನು. ದೈವವೇ ಚಾಣಕ್ಯನಿಗೆ ಸಹಾಯವಾಗಿ ನಿಂತು ಈ ಸಂಚು ನಡೆಸಿತು.

ನಂದರಿಗೆ ಎಚ್ಚರವಾಯಿತು. ಅವರಿಗೆ ರಾಜಕಾರ್ಯಗೌರವವಿರಲಿಲ್ಲವಾದ ಕಾರಣ ಕಾಲ ಕಳೆಯಲು ಪಗಡೆಯಾಡಬೇಕೆಂದು ನಿರ್ಧರಿಸಿದರು. ಆ ವೇಳೆಗೆ ಸರಿಯಾಗಿ ಜಪಶಾಲೆಯಿಂದ ಯಮದೂತರಂತೆ ಮಾಸೋಪವಾಸಿಯ ಶಿಷ್ಯರಿಬ್ಬರು ನಂದರಲ್ಲಿಗೆ ಬಂದು ” ಸ್ವಾಮಿ, ಜಪಶಾಲೆಯಲ್ಲಿ ಅನುಷ್ಠಾನ ಮಾಡುತ್ತಿರುವ ಮಾಸೋಪವಾಸಿ ಮಹಾಮುನಿಗಳ ಶಿಷ್ಯರು ನಾವು. ಇಂದು ಶುಕ್ರವಾರವಾದುದರಿಂದ ಹೋಮ ಮುಗಿಯುತ್ತಿದೆ. ಪೂರ್ಣಾಹುತಿಯ ಸಮಯದಲ್ಲಿ ಉಂಟಾಗುವ ದೇವತಾದರ್ಶನಕ್ಕೆ ಇದು ತಕ್ಕ ಕಾಲ. ನಮ್ಮ ಗುರುಗಳು ತಮ್ಮ ಬರುವಿಕೆಯನ್ನೇ ಎದುರು ನೋಡುತ್ತಿದ್ದಾರೆ. ಬೇಗ ದಯಮಾಡಿಸಬೇಕು’ ಎಂದು ವಿನಯದಿಂದ ಬಿನ್ನೈಸಿದರು. ಹೋಮದರ್ಶನಕ್ಕೆ ಹೋಗಲು ನಿರ್ಧರಿಸಿ ದೈನಬಲಹೀನರಾದ ನಂದರು, ಅಮಾತ್ಯರ ಸಮಯ ನೋಡಲು ದೂತರನ್ನು ಕಳುಹಿಸಿದರು. ರಾಕ್ಷಸನಿಗೆ ಬಹಳ ನಿದ್ರಾಭಾರವೆಂದು ತಿಳಿದು ಬಂತು. ‘ಅಮಾತ್ಯರಿಗೆ ಅತಿಯಾಗಿ ಆಯಾಸವಾಗಿದೆ. ಅವರು ಸುಖವಾಗಿ ನಿದ್ರಿಸಲಿ. ನಾವೇ ಜಪಶಾಲೆಗೆ ಹೋಗೋಣ ‘ ಎಂದುಕೊಂಡು ನಂದರೆಲ್ಲರೂ ಅಲಂಕೃತರಾಗಿ ಕುದುರೆಗಳನ್ನೇರಿದರು. ಜಸಶಾಲೆಯ ಬಳಿ ಶೂದ್ರಾದಿಗಳಿಗೆ ಅವಕಾಶವಿರದಿದ್ದ ಕಾರಣ, ಅವರ ಮೈಗಾವಲಿನ ಸೇನೆ ಹಿಂದೆ ನಿಂತಿತು. ಬೆಂಬಲವಾಗಿ ಬಂದ ಭಾಗ್ಯಲಕ್ಷ್ಮಿಯನ್ನು ನಂದರೇ ನಿರಾಕರಿಸಿದಂತಾಯಿತು.

ಮುತ್ತಿನ ಸತ್ತಿಗೆಯ ನೆರಳಿನಲ್ಲಿ ಮಿತಪರಿವಾರದಿಂದ ನಂದರು ಜಪಶಾಲೆಯನ್ನು ಸಮೀಪಿಸಿ ಕುದುರೆಗಳನ್ನಿಳಿದು ಒಳಹೊಕ್ಕರು. ಅಷ್ಟರಲ್ಲೇ ಕಾಶೀಮಾರ್ಗದಲ್ಲಿ ಕಿವಿಯೊಡೆಯುವಂತೆ ಶಬ್ದ ಕೇಳಿ ಬಂತು. ಪರ್ವತರಾಜನಿಗೂ ಕಾಶೀರಾಜನಿಗೂ ಕಾಳಗ ನಡೆಯುತ್ತಿರಬಹುದೆಂದು ಎಣಿಸಿ ನಂದರು ಜಪಶಾಲೆಯಲ್ಲಿ ಹೋಮಕುಂಡವನ್ನು ಬಳಸಿ ಬಂದರು. ಆಗ ಚಾಣಕ್ಯನಿಂದ ನಿಯಮಿತರಾದ ಕಪಟದೂತರಿಬ್ಬರು ನಂದರಲ್ಲಿಗೆ ಬಂದು “ಸ್ವಾಮಿ, ನಾವು ಕಾಶೀರಾಜನ ದೂತರು. ಮಲಯಕೇತು ಕಾಶೀರಾಜನಿಗೆ ಸೆರೆಸಿಕ್ಕಿದ್ದಾನೆ. ಪರ್ವತರಾಜನ ಸೇನೆ ತಮ್ಮ ಮೇಲೆ ಬಂದು ಕವಿಯದಂತೆ ನಿಮ್ಮ ಸಹಾಯವನ್ನು ದೊರೆ ಬಯಸುತ್ತಿದ್ದಾರೆ’ ಎಂದರು. ನಂದರು ಈ ಮಾತನ್ನು ಕೇಳಿ ಸಂತೋಷದಿಂದ ‘ಮಿತ್ರ ಕಾಶೀರಾಜನು ಕಾರ್ಯದಕ್ಷ. ಅವನಿಂದ ನಮಗೆ ಜಯಲಕ್ಷ್ಮಿ ಬಂದು ಕೈಸೇರಿದಳು. ಮಲಯಕೇತು ಸೆರೆಸಿಕ್ಕಿದುದರಿಂದ ಚಂದ್ರಗುಪ್ತನೇ ನಮ್ಮ ಕೈವಶವಾದಂತಾಯಿತು. ಈ ಮುನಿಗಳು ಮಹಾಮಹಿಮರು ‘ ಎಂದುಕೊಂಡು ಪರ್ವತರಾಜನ ಸೇನೆಯನ್ನು ತಡೆಯುವಂತೆ ಭದ್ರಭಟಾದಿ ಸೇನಾಪತಿಗಳಿಗೂ ಇತರ ಸಾಮಂತರಾಜರಿಗೂ ಹೇಳಿ ಕಳುಹಿಸಿದರು. ಈಗ ನಂದರ ಬಳಿ ರಾಕ್ಷಸನಿಲ್ಲ ಮೈಗಾವಲಿನ ಜನರಿಲ್ಲ. ಸೇನಾಪತಿಗಳು ದೂರವಾದರು. ನಂದರಿಗೆ ದೈವದೊಲುಮೆ ತಪ್ಪಿತು. ನಂದರ ನಿಗ್ರಹಕ್ಕೆ ಚಾಣಕ್ಯನ ಮಾರ್ಗ ಸುಗಮವಾಯಿತು.

ಭದ್ರಭಟಾದಿಗಳು ನಂದರಿಗೆ ದೂರವಾದುದನ್ನರಿತು ಶೇಖರನ ಯೋಧರು ಕಪಟಮಲಯಕೇತುವನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅದಕ್ಕೆ ಮುಸುಕಿಟ್ಟು ನಂದರ ಬಳಿಗೆ ಅದನ್ನು ತರಲು ತೊಡಗಿದರು. ಪಲ್ಲಕ್ಕಿಯ ಸುತ್ತಲೂ ಹಿರಿದ ಕತ್ತಿಯುಳ್ಳ ಯೋಧರ ಕಾವಲು ಬಲವಾಗಿತ್ತು. ನಂದರ ಗೂಡಾರದ ಬಳಿ ಪಲ್ಲಕ್ಕಿಯು ಬರಲು ಮಲಯಕೇತುವನ್ನು ನೋಡುವ ಕುತೂಹಲದಿಂದ ಆ ಗೂಡಾರವನ್ನು ಕಾಯುತ್ತಿದ್ದ ದಳಪತಿ ಪಲ್ಲಕ್ಕಿಯ ಬಳಿಗೆ ಬಂದನು. ಉಳಿದ ಸೇನಾಜನರೂ ತಮ್ಮ ಆಯುಧೆಗಳನ್ನು ತಾವಿದ್ದಲ್ಲಿಯೇ ಬಿಟ್ಟು ಪಲ್ಲಕ್ಕಿಯ ಸುತ್ತಲೂ ನೆರೆದರು. ಗೂಡಾರದ ಕಾವಲಿನವರು ನಿರಾಯುಧರಾಗಿ ಬರುತ್ತಿರುವುದನ್ನು ಕಂಡು, ಪಲ್ಲಕ್ಕಿಯ ರಕ್ಷಕನು ‘ಜನರೆಲ್ಲ ಒಟ್ಟಿಗೆ ಬಂದು ಸೇರಲಿ. ಮಲಯಕೇತುವನ್ನು ನೋಡುವ ಕುತೂಹಲವಿದ್ದರೆ ತೋರಿಸುವೆವು’ ಎಂದು ಹೇಳುತ್ತ ಜನರ ಗುಂಪು ಸೇರಲು ಪಲ್ಲಕ್ಕಿಯ ಮುಸುಕನ್ನು ಸ್ವಲ್ಪ ಸ್ವಲ್ಪವಾಗಿ ಓರೆಮಾಡಿ ಒಳಗಿದ್ದ ಪುರುಷನನ್ನು ಈತನೇ ಮಲಯಕೇತುವೆಂದು ತೋರಿಸುತ್ತ ಪಲ್ಲಕ್ಕಿಯನ್ನು ಮುಂದೆ ಸಾಗಿಸಿದನು. ಇತ್ತ ನಂದರ ಸೇನೆ ದಳಪತಿಯೊಡನೆ ಗೂಡಾರದ ಚಿಂತೆಯನ್ನು ಬಿಟ್ಟು ಕಪಟಿ ಮಲಯಕೇತುವನ್ನು ನೋಡಿ ಆಶ್ವರ್ಯಸಡುತ್ತ ಮನಸ್ಸಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದರು. ಇದೆಲ್ಲವನ್ನು ನೋಡುತ್ತ ಪಲ್ಲಕ್ಕಿಯ ಹಿಂದೆ ಬರುತ್ತಿದ್ದ ಪರ್ವತರಾಜನ ಸೇನೆ ನಂದರೆ ಗೂಡಾರವನ್ನು ಸೂರೆಮಾಡಿ ಅಲ್ಲಿದ್ದ ಆಯುಧಗಳಲ್ಲಿ ತಮಗೆ ಬೇಕಾದುವನ್ನು ತೆಗೆದುಕೊಂಡು ಉಳಿದುವನ್ನು ಕಂದಕದಲ್ಲಿ ಬಿಸುಟಿರು. ಗೂಡಾರದ ಕಾವಲಿನವರು ತಮ್ಮ ಸ್ಥಳಗಳಿಗೆ ಹಿಂದಿರುಗಿ ಬರುತ್ತಿರುವಾಗ, ಪಲ್ಲಕ್ಕಿಯ ರಕ್ಷಣೆಗಾಗಿ ನಿಯಮಿತರಾಗಿದ್ದ ಯೋಧರು ಅವರನ್ನು ಸಂಹರಿಸಿದರು. ನಂದರಿಗೆ ಈ ಘಟನೆಗಳ ಅರಿವೇ ಇರಲಿಲ್ಲ. ಈ ವೇಳೆಗೆ ಪಲ್ಲಕ್ಕಿಯನ್ನು ಜಪಶಾಲೆಯಲ್ಲಿದ್ದ ನಂದರೆ ಬಳಿಗೆ ತಂದಿಳುಹಲು ನಂದರು ಒಳಗಿದ್ದವನು ಮಲಯಕೇತುವೆಂದೇ ಬಗೆದು ‘ಮಲಯಕೇತು, ಬುದ್ಧಿಹೀನನಾಗಿ ಈ ತೆರನಾದ ಕೆಲಸಮಾಡಿ ನಮ್ಮ ಕೈಸೆರೆ ಸಿಕ್ಕಬಹುದೇ?’ ಎಂದು ಕೇಳಿದರು.

ಕಪಟ ಮಲಯಕೇತು– ನಮ್ಮ ತಂದೆ ದರಿದ್ರನಾದ ಚಂದ್ರಗುಪ್ತನ ಕೈ ಹಿಡಿದುದರಿಂದ ನನಗೆ ಈ ಗತಿ ಬಂತು. ಈಗ ನಿಮ್ಮ ವಶವಾದ ಬಳಿಕ ಹೆಚ್ಚು ನುಡಿದು ಫಲವೇನು?

ನಂದರು– ರಾಜಕುಮಾರ, ಆದದ್ದು ಆಯಿತು. ಅದಕ್ಕಾಗಿ ದುಃಖಪಟ್ಟು ಫಲವಿಲ್ಲ. ಈಗಲಾದರೂ ನಿಮ್ಮ ತಂದೆ ಚಂದ್ರಗುಪ್ತನನ್ನು ನಮಗೊಪ್ಪಿಸಲಿ. ನಿನಗೆ ಬಿಡುಗಡೆಯಾಗುವುದು.

ಕಪಟಮಲಯಕೇತು– ಸತ್ಯವಂತನಾದ ನಮ್ಮ ತಂದೆ ಹಿಡಿದ ಕೆಲಸನನ್ನು ಪೂರ್ತಿಗೊಳಿಸಲು ನನ್ನನ್ನು ಬಿಡಬಹುದು. ಆದರೆ ಮರೆ ಹೊಕ್ಕವನನ್ನು ಖಂಡಿತ ಬಿಟ್ಟು ಕೊಡಲಾರ.

ನಂದರು– ಹುಚ್ಚ, ಮಗನಿಗಿಂತಲೂ ಚಂದ್ರಗುಪ್ತನು ಹೆಚ್ಚೇ? ಹಿಡಿದ ಕಾರ್ಯವೆಂದರೇನು? ಹೊರಗೆ ಬಂದು ಮಾತನಾಡು.

ಕಪಟಮಲಯಕೇತು– ನಿಮಗೆ ಸೆರೆಸಿಕ್ಕಿರುವ ನಾನು ನಾಚಿಕೆಯಿಲ್ಲದೆ ಹೊರಗೆ ಬಂದು ನೆರೆದ ಜನರಿಗೆ ಹೇಗೆ ಮುಖ ತೋರಿಸಲಿ?

ಈ ವೇಳೆಗೆ ಸರಿಯಾಗಿ ಪರ್ವತರಾಜನ ಸೇನೆ ಬಂದು ನಂದರನ್ನು ಸುತ್ತುಗಟ್ಟಿ ನಿಂತಿತು. ಈ ಸೂಚನೆಯನ್ನು ತಿಳಿದ ಕಪಟಮಲಯಕೇತು ಮುಸುಕನ್ನು ತೆಗೆದು ಹಿರಿದ ಕತ್ತಿಯನ್ನು ಹಿಡಿದು ಪಲ್ಲಕ್ಕಿಯಿಂದ ಹೊರಗೆ ಬಂದನು. ಮುಖವೈವರ್ಣ್ಯವಿಲ್ಲದೆ ನೆರೆದಿದ್ದ ಜನರನ್ನು ನೋಡಿ ನಗುತ್ತಿದ್ದ ಇವನನ್ನು ಕಂಡು ನಂದರಿಗೆ ಭಯವಾಯಿತು. ಕಣ್ಣರಳಿಸಿ ಸುತ್ತಲೂ ನೋಡುತ್ತಾರೆ! ತಮ್ಮ ಬಳಿ ಇರುವ ಪರಿವಾರ ಸ್ವಲ್ಪ. ವೈರಿಬಲ ತಮ್ಮ ಸುತ್ತಲೂ ದಟ್ಟವಾಗಿ ನಿಂತಿದೆ. ತಪ್ಪಿಸಿಕೊಳ್ಳಲು ಮಾರ್ಗವಿಲ್ಲ. ಹಿರಿಯರ ಮಾತನ್ನು ಕೇಳದಿದ್ದದ್ದು ಅವಿವೇಕವಾಯಿತೆಂದುಕೊಂಡರು.’ ಅವರ ಮಾತಿನಂತೆ ಮೈಗಾವಲಿನವರು ಹಿಂದುಳಿದರು. ಭದ್ರಭಟಾದಿಗಳು ದೂರವಾದರು. ಈಗ ಯುದ ಮಾಡಲೇಬೇಕು. ‘ಸತ್ತರೆ ಸ್ವರ್ಗ, ಗೆದ್ದರೆ ಸಾರ್ವಭೌಮಪದವಿ’ ಎಂದುಕೊಂಡು ಕತ್ತಿಯನ್ನು ಹಿಡಿದು ಯುದ್ಧಮಾಡುವುದಕ್ಕಾಗಿ ಕುದುರೆಗಳನ್ನೇರಲು ಸಿದ್ಧರಾದರು. ಅಷ್ಟರಲ್ಲೇ ವೈರಿಗಳು ನಂದರ ಕುದುರೆಗಳ ಕಾಲುಗಳನ್ನು ಕತ್ತರಿಸಿ, ಜಪಶಾಲೆಯಲ್ಲಿದ್ದ ಬ್ರಾಹ್ಮಣರನ್ನು ಓಡಿಸಿ ಹೋಮಕುಂಡದ ಬೆಂಕಿಯಿಂದಲೇ ಜಪಶಾಲೆಯನ್ನು ಹೊತ್ತಿಸಿದರು. ತಾನು ಬಂದ ಕೆಲಸವಾದುದರಿಂದ, ಮಾಸೋಪವಾಸಿ ನಂದರಿಗೆ ಕೆಲವು ಚುಚ್ಚುಮಾತುಗಳನ್ನಾಡಿ ಚಾಣಕ್ಯನಿದ್ದಲ್ಲಿಗೆ ಹೊರಟುಹೋದನು.

ನಂದರು ವೀರಾವೇಶದಿಂದ ಹೋರಾಡಿದರು. ಶೇಖರನ ಸೇನೆ ಜಪಶಾಲೆ ಬೆಳಕಾದುದುನ್ನು ಕಂಡು ನಂದರಿಗೆ ಸಹಾಯ ಬಂದೊದೆಗದಂತೆ ಅವರನ್ನು ಬಳಸಿ ನಿಂತಿತು. ಕಪಟಮಲಯಕೇತು, ಶಬರ ವರ್ಮ– ಇವರೆಲ್ಲ ಒಬ್ಬೊಬ್ಬರಾಗಿ ನಂದರ ಕತ್ತಿಗೆ ಬಲಿಯಾದರು. ಶೇಖರನ ಸೇನೆ ಎಷ್ಟು ಕಾದಿದರೂ, ನಂದರ ಬಲ ಕುಗ್ಗುವಂತೆ ಕಾಣಲಿಲ್ಲ. ಯುದ್ಧಭೂಮಿಯಲ್ಲಿ ಎಲ್ಲೆಲ್ಲಿಯೂ ನಂದರೇ ಕಂಡು ಬಂದರು. ಅವರ ಕೈಚಳಕಕ್ಕೆ ಪರ್ವತರಾಜನ ಸೇನೆ ದಾರಿ ಕಾಣದೆ ಸುಮ್ಮನೆ ನಿಂತುಬಿಟ್ಟಿತು. ಈ ಸಮಾಚಾರವನ್ನು ಕೇಳಿ ಚಾಣಕ್ಯನು ಕೋಪಗೊಂಡು, ಉತ್ತರೀಯವನ್ನು ನಡುವಿಗೆ ಕಟ್ಟಿ ಯಜ್ಞೋಪವೀತವನ್ನು ಕಿವಿಗೆ ಸುತ್ತಿ, ದಂಡವನ್ನು ಹಿಡಿದು, ಎಲ್ಲರನ್ನೂ ಹೇಡಿಗಳೆಂದು ಜರೆಯುತ್ತ ನಂದರನ್ನು ನಿಗ್ರಹಿಸಲು ತಾನೇ ಯುದ್ಧ ಭೂಮಿಗೆ ಬಂದನು. ಚಾಣಕ್ಯನ ಮಾತಿನಿಂದ ನಾಚಿಕೆಗೊಂಡ ಸೇನಾಪತಿಗಳು ಇಮ್ಮಡಿಯಾದ ಉತ್ಸಾಹದಿಂದ ಹೋರಾಡಿದರು. ಹೆಚ್ಚು ಮಾತಿನಿಂದೇನು? ನಂದರು ಏಕಾಂಗಿಗಳಾಗಿ ಎಷ್ಟು ಹೊತ್ತು ಹೋರಾಡಲು ಸಾಧ್ಯ? ಚಂದ್ರಗುಪ್ತನಿಂದ ಆರು ಮಂದಿ ನಂದರು ಹತರಾದರು. ಚಾಣಕ್ಯನ ಮಾತಿನಂತೆ ಉಳಿದ ಮೂವರ ಕತ್ತಿಗೆ ಹಗ್ಗವನ್ನು ಬೀರಿ ಶೇಖರನು ಅವರನ್ನು ಸಂಹರಿಸಿದನು. ಇದೆಲ್ಲವನ್ನೂ ನೋಡುತ್ತಿದ್ದ ಪರ್ವತರಾಜನಿಗೆ ಚಾಣಕ್ಯನ ಸಾಹಸವನ್ನು ಕಂಡು ಭಯವಾಯಿತು ; ನಂದರು ಮರಣ ಹೊಂದಿದುದಕ್ಕೆ ಸಂತೋಷವೂ ಆಯಿತು. ತುಂಬಿದ ಸಭೆಯಲ್ಲಿ ತನ್ನನ್ನು ಅವಮಾನಪಡಿಸಿದ ನಂದರನ್ನು ಕೊಂದು ಚಾಣಕ್ಯನು ತನ್ನ ಪ್ರತಿಜ್ಞೆಯನ್ನು ನೆರವೇರಿಸಿಕೊಂಡನು. ಚಂದ್ರಗುಪ್ತನ ಹಗೆ ಹರಿಯಿತು. ಜಯಭೇರಿಯ ಶಬ್ದ ಹತ್ತು ದಿಕ್ಕುಗಳನ್ನೂ ಮುಸುಕಿತು.

ನಂದರ ಮರಣಾನಂತರ ಚಾಣಕ್ಯನು ಗಂಗಾಜಲದಲ್ಲಿ ಸ್ನಾನ ಮಾಡಿ ಬಿಚ್ಚಿದ್ದ ತನ್ನ ಶಿಖಿಯನ್ನು ಬಂಧಿಸಿ ಚಂದ್ರಗುಪ್ತರೊಡರೆ ಬೀಡಾರಕ್ಕೆ ಬಂದನು.

ಇತ್ತ ರಾಕ್ಷಸನು ನಿದ್ದೆಯಿಂದ ಇನ್ನೂ ಎಚ್ಚರಗೊಂಡಿರಲಿಲ್ಲ. ರಾಕ್ಷಸನ ದೂತರು ನಂದರ ಗೂಡಾರ ಸೂರೆಹೋಗಿ ಸರ್ವನಾಶವಾದುದನ್ನು ಕಂಡು ರಾಕ್ಷಸನನ್ನು ತಟ್ಟಿ, ಎಬ್ಬಿಸಿ ನಡೆದ ವಿಷಯವನ್ನು ತಿಳಿಸಿದರು. ಮೈಗಾವಲಿನ ನಷ್ಟ, ಜಪಶಾಲೆ ಬೆಂದದ್ದು, ಭದ್ರ ಭಟಾದಿಗಳು ರಾಜರಿಂದ ದೂರವಾದದ್ದು, ಗೂಡಾರದ ಸೂರೆ ಇವೆಲ್ಲವನ್ನೂ ಕೇಳಿ ರಾಕ್ಷಸನು ಕ್ಷಣಕಾಲ ದಿಕ್ಕು ತೋರದವನಂತೆ ಸುಮ್ಮನಿದ್ದನು. ಅವನ ಕಣ್ಣುಗಳಲ್ಲಿ ನೀರು ತುಂಬಿತು. ನಂದರ ಬಿಡುಗಡೆಗೆ ಸಿದ್ಧನಾಗಿ ಹೊರಡಲು, ಅಷ್ಟರಲ್ಲೇ ಜಯಭೇರಿಯ ಶಬ್ದ ಕೇಳಿ ಬಂತು. ನಂದರು ಸತ್ತು ಸ್ವರ್ಗ ಸೇರಿದರೆಂದು ರಾಕ್ಷಸನಿಗೆ ಮನದಟ್ಟಾಯಿತು. ಸ್ಟಾಮಿಭಕ್ತನಾದ ತಾನು ನಂದರ ಸಹಾಯಕ್ಕಾದರೂ ಹೋಗಬೇಕೆನಿಸಿತು ರಾಕ್ಷಸನಿಗೆ. ಅಂಥ ಪ್ರಭುಗಳೇ ಸತ್ತಮೇಲೆ ತಾನು ಬದುಕಿದ್ದು ಏನು ಫಲ? ಹೀಗೆ ಅಮಾತ್ಯನು ಚಿಂತಿಸಿ, ಕುದುರೆಯನ್ನೇರಿ ಯುದ್ಧರಂಗದ ಕಡೆಗೆ ಹೊರಡುವುದಕ್ಕೆ ಅಣಿಯಾಗಲು, ಆತನ ಮೈಗಾವಲಿನವನಾದ ವಿನತನು ಸ್ವಾಮಿಯನ್ನು ತಡೆದು “ಅಮಾತ್ಯರೇ, ನನ್ನದೊಂದು ಬಿನ್ನಹ. ನಂದರನ್ನು ಈಗ ದೈವ ತನ್ನಡೆಗೆ ಸೆಳೆದು ಕೊಂಡಿದೆ. ಈ ಸಮಯದಲ್ಲಿ ನೀವು ದುಡುಕಿ ಪ್ರಾಣ ಕಳೆದುಕೊಂಡರೆ ಏನು ಪ್ರಯೋಜನ? ಈಗ ಮೊದಲು ಮಹಾರಾಜನ ಮತ್ತು ಅಂತಃಪುರದ ಹೆಂಗಸರ ರಕ್ಷಣೆ ಆಗಬೇಕು. ಈ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ. ನೀವು ಬದುಕಿದ್ದರೆ ಉಪಾಯದಿಂದ ವೈರಿಯನ್ನು ನಾಶಮಾಡಿ ಸತ್ತ ಪ್ರಭುಗಳಿಗೆ ಸಂತೋಷವನ್ನುಂಟುಮಾಡಬಹುದು. ಅಲ್ಲದೆ ಯುದ್ಧದಲ್ಲಿ ಪ್ರಾಣವನ್ನು ಬಿಡುವುದು ಬ್ರಾಹ್ಮಣನ ಧರ್ಮವಲ್ಲ’ ಎಂದನು. ಮುಂದಿನ ದಾರಿಯನ್ನು ಕಾಣದೆ ರಾಕ್ಷಸನು ಸುಮ್ಮಕೆ ನಿಂತುಬಿಟ್ಟನು. ಆತನ ಪ್ರಯತ್ನವೆಲ್ಲ ಕೊನೆಗಂಡಂತೆ ತೋರಿತು. ನಂದರು ಸತ್ತ ಸಮಾಚಾರ ಸರ್ವಾರ್ಥಸಿದ್ಧಿರಾಯನಿಗೆ ತಿಳಿಯಲು ಪುತ್ರಶೋಕದಿಂದ ಮುದುಕನ ಎದೆ ಬಿರಿಯಿತು. ಅಂತಃಪುರದ ಹೆಂಗಸರು ಕಣ್ಣೀರಿನ ಕೋಡಿಯನ್ನೇ ಸುರಿಸಿದರು. ಗಂಡನನ್ನು ಹಿಂಬಾಲಿಸುವುದು ಹೆಂಡತಿಯ ಧರ್ಮ. ನಂದರ ಹೆಂಡಿರಿಗೆ ಈಗ ಸಹಗಮನನೇ ಮುಂದಿನ ಮಾರ್ಗವೆಂದು ತೋರಿತು. ನಂದರ ದೇಹ ಜಪಶಾಲೆಯ ಬೆಂಕಿಯಲ್ಲಿ ಈಗಾಗಲೇ ಸುಟ್ಟು ಬೂದಿಯಾಗಿದ್ದುವು. ಆದಕಾರಣ ಭಾಗುರಾಯಣನಿಂದ ತಮ್ಮ ಗಂಡಂದಿರ ತಲೆಗಳನ್ನು ತರಿಸಿಕೊಂಡು ಬ್ರಾಹ್ಮಣರಿಗೆ ದಾನಧರ್ಮಗಳನ್ನು ಮಾಡಿ ಅವರು ಚಿತೆಯನ್ನೇರಿದರು.

ಈಗ ನಂದರ ಕಡೆ ಉಳಿದವರು ಇನ್ನಿಬ್ಬರು- ಸ್ವಾಮಿಭಕ್ತ ಅಮಾತ್ಯ ರಾಕ್ಷಸ, ಮಕ್ಕಳನ್ನು ನೀಗಿಕೊಂಡ ವೃದ್ಧ ದಂಪತಿಗಳು.

ಇತ್ತ ರಾಕ್ಷಸನು ಭಾಗುರಾಯಣನನ್ನು ಕರೆಸಿಕೊಂಡು ‘ಇಂದು ನಂದರ ಮರಣದಿಂದ ನಮ್ಮ ಬುದ್ಧಿ ಪೌರುಷಗಳು ನಷ್ಟವಾದುವು. ಮುಂದೆ ನಾವು ಮಾಡಬೇಕಾದ ಕಾರ್ಯವೇನು? ಪಟ್ಟಣವನ್ನು ಕಾಪಾಡುವ ಬಗೆ ಹೇಗೆ? ‘ ಎಂದು ಕೇಳಿದನು. ಅಂತಃಪುರದ ಹೆಂಗಸರ ಮಾನವನ್ನು ಕಾಪಾಡುವುದರ ಸಲುವಾಗಿ ಪಟ್ಟಣದ ಬೀಗಮುದ್ರೆಗಳನ್ನು ಚಂದ್ರಗುಪ್ತನಿಗೊಪ್ಪಿಸಿ, ಆತನನ್ನು ಪ್ರಭುವೆಂದು ಕರೆತರುವುದೇ ಲೇಸೆಂದು ಸೇನಾಪತಿ ಸೂಚಿಸಿದನು. ಭಾಗುರಾಯಣನಿಗೆ ಯುದ್ಧದಲ್ಲಿ ಮನಸ್ಸಿಲ್ಲದಿರುವುದನ್ನರಿತು ರಾಕ್ಷಸನು ಅವನ ಮಾತಿಗೊಪ್ಪಿಕೊಳ್ಳಬೇಕಾಯಿತು ಮಾರನೆಯ ದಿನ ಸಿದ್ಧಾರ್ಥಕನ ಮಾತಿನಂತೆ ಭಾಗುರಾಯಣನು ಚಂದ್ರಗುಪ್ತನನ್ನು ತಾನೇ ಹೋಗಿ ನೋಡದೆ ತನ್ನ ತಮ್ಮನೊಡನೆ ಅವನಿಗೆ ಬೀಗಮುದ್ರೆಗಳನ್ನು ಕಳುಹಿಸಿದನು. ಪಟ್ಟಣ ವೈರಿಗಳಿಗೆ ಸುಲಭವಾಗಿ ವಶವಾಯಿತು. ಇಂದಿಗೆ ನಂದರ ರಾಜ್ಯ ಲಕ್ಷ್ಮಿ ಸುಲಭವಾಗಿ ಚಂದ್ರಗುಪ್ತನ ಕೈವಶಳಾದಳು. ಇನ್ನು ಮುಂದಿನ ಕಾರ್ಯ ಅವಳನ್ನು ಧ್ರುವಜಲದಲ್ಲಿ ನಟ್ಟಿ ತಾವರೆಯಂತೆ ಸ್ಥಿರಪಡಿಸುವುದು.


ಮುಂದಿನ ಅಧ್ಯಾಯ: ೧೭. ಕಂಟಕ ನಿವಾರಣೆ


Leave a Reply

Your email address will not be published. Required fields are marked *