ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 17: ಕಂಟಕ ನಿವಾರಣೆ

೧೭. ಕಂಟಕ ನಿವಾರಣೆ

ನಂದರ ಮರಣದಿಂದ ಪಾಟಲೀಪುರದ ಸಿಂಹಾಸನ ಚಂದ್ರಗುಪ್ತನದಾಯಿತು. ಈಗ ಅದನ್ನು ಭದ್ರಸಡಿಸುವ ಯತ್ನ ಮಾಡಬೇಕು. ಇಲ್ಲದಿದ್ದರೆ ಚಾಣಕ್ಯನೊಡನೆ ಚಂದ್ರಗುಪ್ತನಿಗೆ ವನವಾಸವೇ ಗತಿ. ಚಂದ್ರಗುಪ್ತನಿಗೆ ಒದಗಬಹುದಾದ ಕಂಟಕಗಳನ್ನು ತೊಡೆದುಹಾಕಲು ಚಾಣಕ್ಯನು ಈ ರೀತಿ ಯೋಚಿಸಿದನು. ‘ರಾಕ್ಷಸನು ಸ್ವಾಮಿಭಕ್ತ. ನಂದರು ಮಡಿದರೂ ಅವನ ಸ್ವಾಮಿಭಕ್ತೆ ಎಳ್ಳಷ್ಟೂ ಕುಗ್ಗಿಲ್ಲ. ಈಗ ಚಂದ್ರಗುಪ್ತನನ್ನು ಕಂಡರೆ ಅವನಿಗಾಗದು. ಚಂದ್ರಗುಪ್ತನನ್ನು ನಾಶಪಡಿಸಬೇಕೆಂದು ನಂದರ ತಂದೆಯಾದ ಸರ್ವಾರ್ಥಸಿದ್ಧಿರಾಯನಿಗೆ ದತ್ತು ಮಗನನ್ನುಂಟುಮಾಡಿ ನಂದವಂಶವನ್ನು ಮುಂದುವರಿಸುವ ಯೋಚನೆಯನ್ನು ಅವನು ಮಾಡಬಹುದು, ಇದಕ್ಕೆ ಅವಕಾಶ ಕೊಡದೆ ಮೊದಲು ಸರ್ವಾರ್ಥಸಿದ್ಧಿರಾಯನನ್ನು ಸಂಹರಿಸಬೇಕು. ಇದಾದಮೇಲೆ ಮಂತ್ರಶಕ್ತಿಯಿಂದ ಹಾವನ್ನು ಸೆರೆಹಿಡಿಯುವಂತೆ ರಾಕ್ಷಸನನ್ನು ಹಿಡಿದುತಂದು ಮಂತ್ರಿಪದವಿಯಲ್ಲಿ ನಿಲ್ಲಿಸಬೇಕು. ಆಗ ಚಿಂತೆಯಿಲ್ಲದೆ ನಾನು ತಪೋವನಕ್ಕೆ ಹೋಗಬಹುದು, ರಾಕ್ಷಸನು ಹೊರಗಿದ್ದರೆ ಇಮ್ಮಡಿಯಾದ ನಷ್ಟ. ಒಳಗೆ ಬಂದರೆ ಇಮ್ಮಡಿಯಾದ ಲಾಭ. ಅವನಿಂದಲೇ ಚಂದ್ರಗುಪ್ತನ ರಾಜ್ಯ ಭದ್ರ. ಎರಡನೆಯದಾಗಿ ಯುದ್ಧ ಮುಗಿದಿರುವ ಈ ವೇಳೆಯಲ್ಲಿ ಪರ್ವತರಾಜನು ಚಂದ್ರಗುಪ್ತನ ಅರ್ಧರಾಜ್ಯಕ್ಕಾಗಿ ಈ ಪುರದಲ್ಲೇ ಚಾತಕಪಕ್ಷಿಯಂತೆ ಬಾಯಿಬಿಟ್ಟುಕೊಂಡು ಕಾದು ಕುಳಿತಿದ್ದಾನೆ. ಪರ್ವತರಾಜ ಕೃತಘ್ನ, ಅಲ್ಪ ಲಾಭದ ಆಸೆಗಾಗಿ ಚಂದ್ರಗುಪ್ತನನ್ನು ಹಗೆಗೆ ಒಪ್ಪಿಸಬೇಕೆಂದಿದ್ದ. ಮುಳ್ಳಿನಿಂದ ಮುಳ್ಳನ್ನು ತೆಗೆಯುವಂತೆ ಉಪಾಯದಿಂದ ಅತನನ್ನು ಕೊಲ್ಲಿಸಬೇಕು.. ಈಗ ಮೊದಲು ಶೇಖರನ ಸೇನೆಯನ್ನು ಇಲ್ಲಿಂದ ಹೊರಡಿಸಬೇಕು.’

ಬೇಟೆಗಾರನು ಬಲೆ ಬೀಸಿದನು. ಮಂಗಳಸ್ನಾನವಾದನಂತರ ಚಂದ್ರಗುಪ್ತನು ಚಾಣಕ್ಯನ ಅಪ್ಪಣೆಯಂತೆ ಅಜ್ಜನನ್ನು ಬಂದುಕಂಡು ನಮಸ್ಕರಿಸಿದನು. ಚಂದ್ರಗುಪ್ತನನ್ನು ಕಂಡೊಡನೆಯೇ ಮಕ್ಕಳ ಸಾವನ್ನು ನೆನೆದು ಮುದುಕನ ಕಣ್ಣುಗಳು ಹನಿಗೂಡಿದುವು. ಚಂದ್ರಗುಪ್ತನು ಮಹಾರಾಜನ ಮೊಮ್ಮಗ; ನಿಜ. ನಂದರು ಮೌರ್ಯರಿಗೆ ದ್ರೋಹವನ್ನು ಬಗೆದರು. ಅದಕ್ಕೆ ತಕ್ಕ ಗತಿ ಅವರಿಗಾಯಿತು. ಹಿಂದೆ ನಡೆದುದೆಲ್ಲಾ ಈಗ ಕನಸಿನ ಮಾತು. ಮಹಾರಾಜನ ಕಣ್ಣೆದುರಿಗೇ ಮಕ್ಕಳು ಮೊಮ್ಮಕ್ಕಳು ಸತ್ತರು. ಮುದುಕನಿಗೆ ಮುಪ್ಪಿನಲ್ಲಿ ಮೇಲಿಂದ ಮೇಲೆ ದುಃಖ ಬಂದೊದಗಿತು. ಈಗ ಆತನು ದುಃಖದಲ್ಲಿ ಶಾಂತಿಯನ್ನರಸಬೇಕು. ರಾಜನು ಚಂದ್ರಗುಪ್ತನಿಗೆ ‘ವತ್ಸ, ರಾಜಧಾನಿ ನನಗೆ ಬೇಸರವಾಗಿದೆ. ಆದ್ದರಿಂದ ನಾನು ತಪೋವನಕ್ಕೆ ಹೋಗುವೆನು. ಕುಲದ ಹೆಸರನ್ನು ಹೇಳಲು ನೀನೊಬ್ಬನುಳಿದಿರುವೆ. ದೇವರು ನಿನ್ನನ್ನು ಸುಖವಾಗಿಟ್ಟಿರಲಿ. ಅಂತಃಪುರದ ಹೆಂಗಸರನ್ನು ಒಡಹುಟ್ಟಿದವರಂತೆ ಕಾಣು. ಅಷ್ಟೆ ನನ್ನ ಕೋರಿಕೆ” ಎಂದನು. ಮುದುಕನ ಮಾತಿಗೆ ಚಂದ್ರಗುಪ್ತನು ಕಣ್ಣೀರುತುಂಬಿ ಹೇಳಿದನು; ” ತಾತ, ನಾನು ನಿಮ್ಮ ಸೇವೆಮಾಡಿ ಕಾಲಕಳೆಯಬೇಕೆಂದಿದ್ದೆ. ಈಗ ಆ ಬಯಕೆ ಬರಿದಾಯಿತು. ನೀವು ತಪೋವನಕ್ಕೆ ತೆರಳಿದರೆ ನನಗೆ ಗತಿ ಯಾರು?’ ಮಹಾರಾಜನು ಮೊಮ್ಮಗನಿಗೆ ಸಮಾಧಾನ ಹೇಳಿದನು. ಮಹಾರಾಜನನ್ನು ರಾಜಧಾನಿಯಲ್ಲಿ ನಿಲ್ಲಿಸಲು ಚಂದ್ರಗುಪ್ತನು ಮಾಡಿದ ಪ್ರಯತ್ನ ಸಫಲವಾಗಲಿಲ್ಲ. ಚಾಣಕ್ಯನು ಬಯಸಿದ್ದು ಮಹಾರಾಜನ ತಪೋವನ ಗಮನವನ್ನೇ.

ಶೂರರಾದ ಮಕ್ಕಳನ್ನು ಕಳೆದುಕೊಂಡು, ನೀಚನಾದ ಚಂದ್ರಗುಪ್ತನ ಕೈಕೂಳಿಗಾಗಿ ಕಾಯುವುದು ತಕ್ಕುದಲ್ಲವೆಂದರಿತು ರಾಜನು ರಾಣಿಯೊಡನೆ ಗಂಗಾತೀರದ ತಪೋವನಕ್ಕೆ ಅರಮನೆಯ ಸುರಂಗ ಮಾರ್ಗದಿಂದ ಹೊರಟನು. ತಪೋವನ ಹತ್ತಿರವಾದಂತೆಲ್ಲ ರಾಜನ ಪುತ್ರಶೋಕ ಕಡಮೆಯಾಗಿ, ಮನಸ್ಸು ಹಗುರವಾಗುತ್ತ ಬಂತು. ತಪೋವನದ ಮಹಿಮೆಯೇ ಅಂಥದು! ಏಕೆಂದರೆ ಶಾಂತಿಯ ತೌರೂರು ತಪೋವನ. ಅಲ್ಲಿ ಕಾಡುಬತ್ತವನ್ನು ತಿಂದು ಆಶ್ರಮದ ಮಕ್ಕಳಂತೆ ಬೆಳೆದ ಹುಲ್ಲೆಗಳು ಹೆದರಿಕೆಯಿಲ್ಲದೆ ಹಸುರಿನ ಮೇಲೆ ಹಾಯಾಗಿ ಮಲಗಿದ್ದುವು. ಒಂದು ಕಡೆ ಖುಷಿ ಕನ್ಯೆಯರು ಗಿಡಗಳ ಪಾತಿಗಳಿಗೆ ನೀರೆರೆಯುತ್ತಿದ್ದರು. ಹಕ್ಕಿಗಳು ಆತುರದಿಂದ ಓಡಿಬಂದು ಭೀತಿಯಿಲ್ಲದೆ ಆ ನೀರನ್ನು ಕುಡಿಯುತ್ತಿದ್ದುವು. ರಾಜನು ಆಶ್ರಮದ ಹತ್ತಿರಕ್ಕೆ ಬರಲು ಸುವಾಸನೆಯಿಂದ ಕೂಡಿದ ಹೋಮಧೂಮ ಗಾಳಿಯಿಂದ ಮುರಿಹೋಗಿ ಇವರನ್ನು ಮುಟ್ಟಿ ಬಂದು ಪವಿತ್ರರನ್ನಾಗಿ ಮಾಡಿತು. ಆಶ್ರಮದ ಬಳಿಯಲ್ಲಿಯೇ ರಾಜನು ತನ್ನ ಪರಿವಾರದೊಡನೆ- ರಾಣಿ ಚೇಟಿ, ಬೀಸಣಿಗೆಯವನು, ಇಷ್ಟೇ ಅವನ ಪರಿವಾರ– ಒಂದು ಗುಡಿಸಲನ್ನು ಕಟ್ಟಿಕೊಂಡು ಇರತೊಡಗಿದನು. ದೇವತಾರ್ಚನೆ, ಪುರಾಣ ಶ್ರವಣ, ಯೋಗಾಭ್ಯಾಸ ಇವೇ ರಾಜನ ನಿತ್ಯಕರ್ಮ. ಹೀಗೆ ಸ್ವಲ್ಪ ಕಾಲ ಕಳೆಯಿತು.

ಬಿಲ್ಲು ಬಾಣಗಳನ್ನು ಧರಿಸಿ ಸುರಂಗಮಾರ್ಗದಿಂದ ರಾಜನು ಪಟ್ಟಣವನ್ನು ಬಿಟ್ಟು ಹೊರಟು ಹೋದುದನ್ನು ಗೂಢಚಾರರು ಜಾಣಕ್ಯನಿಗೆ ತಿಳಿಸಿದರು. ಅವನು ಕೂಡಲೇ ಚಂಡಾಲರನ್ನು ಕರೆಸಿ ‘ಚಂಡಾಲರೇ, ರಾಜನಿರುವ ಆಶ್ರಮದಲ್ಲಿ ಯಾರಿಗೂ ಕಾಣದಂತೆ ಗುಟ್ಟಾಗಿ ವಾಸಮಾಡುತ್ತಿರಿ. ಸಮಯ ನೋಡಿ ರಾಜನು ಒಂಟಿಯಾಗಿರುವಾಗ ಅವನನ್ನು ಕೊಂದು ನಮಗೆ ಗುರುತನ್ನು ತಂದು ತೋರಿಸಿ” ಎಂದು ಅಪ್ಪಣೆ ಮಾಡಿದನು. ಚಾಣಕ್ಯನ ಅಪ್ಪಣೆಯಂತೆ ರಾಜನನ್ನು ಕೊಲ್ಲಲು ಚಂಡಾಲರು ಸಮಯ ಕಾಯುತ್ತಿದ್ದರು.

ಇತ್ತ ರಾಜನು ಒಂದು ದಿನ ತನಗೆ ಸಾವು ಸಮೀಪಿಸುತ್ತಿದ್ದ ಸೂಚನೆಯನ್ನು ಕಂಡುಕೊಂಡನು. ಒಂದು ದಿನ ಆತನು ಒಂಟಿಯಾಗಿ ದರ್ಭೆಯ ಆಸನದ ಮೇಲೆ ಕುಳಿತು ಯೋಗದಿಂದ ಪ್ರಾಣ ಬಿಟ್ಟನು. ಅವನ ಬಳಿಯಲ್ಲಿ ಯಾರೂ ಇರಲಿಲ್ಲ. ಸಮಯ ಕಾಯುತ್ತಿದ್ದ ಚಂಡಾಲರು ರಾಜನ ತಲೆಯನ್ನು ಕತ್ತರಿಸಿ ಆತನ ಕೈಯಲ್ಲಿದ್ದ ಜಪ ಮಾಲೆಯನ್ನು ಕೊಂಡೊಯ್ದು ಅದನ್ನು ಚಾಣಕ್ಯನಿಗೆ ತೋರಿಸಿ ಬಹುಮಾನ ಪಡೆದರು. ಗಂಡ ಸತ್ತ ಸಮಾಚಾರ ಸುನಂದಾದೇವಿಗೆ ತಿಳಿ ಯಿತು. ಪತಿಗಾಗಿ ಬಹುವಾಗಿ ಶೋಕಿಸಿ ಈ ಮಹಾಸತಿ ಚಿತೆಯನ್ನೇರಿದಳು. ತನಗೆ ಎಲ್ಲರೂ ಸಮವೆಂಬಂತೆ ಗಂಗೆ ಆ ದಂಪತಿಗಳ ಬೂದಿಯ ರಾಶಿಯನ್ನು ಕದಡಿಕೊಂಡು ಹೋದಳು. ಬೀಸಣಿಗೆಯವನು ಅನಾಥನಾದನು. ಒಡೆಯ ತೀರಿಕೊಂಡ ಮೇಲೆ ಆಶ್ರಮದಲ್ಲಿ ಅವನಿಗೇನು ಕೆಲಸ? ಪಟ್ಟಣವನ್ನು ಸೇರಿ ಮುಂದಿನ ದಾರಿ ಕಾಣಬೇಕೆಂದು ಅವನು ಪಾಟಲೀಪುರದ ಕಡೆಗೆ ಹೊರಟನು. ಚೇಟಿ ಮಾತ್ರ ಋಷಿಗಳ ಸೇವೆಗಾಗಿ ಆಶ್ರಮದಲ್ಲಿ ನಿಂತಳು.

ರಾಜನ ಮರಣವಾರ್ತೆಯನ್ನು ಕೇಳಿ ಚಾಣಕ್ಯನು ಚಂದ್ರಗುಪ್ತನ ಮೊದಲ ಮುಳ್ಳು ಮುರಿದು ಹೋಗಿ ಹೇಳಹೆಸರಿಲ್ಲದಾಯಿತೆಂದುಕೊಂಡನು.

ಇನ್ನೊಂದು ದಿನ ಚಾಣಕ್ಯನು ಪರ್ವತರಾಜನ ಸೇನಾಪತಿಯಾದ ಶೇಖರನನ್ನು ಕರೆಸಿಕೊಂಡು ‘ಶೇಖರನೇ, ನಿಮ್ಮಿಂದ ನಮಗೆ ಬಹಳ ಉಪಕಾರವಾಯಿತು. ಪರ್ವತರಾಜನಿಗೆ ನೀನು ಹೇಗೆ ಬೇಕಾದವನೋ ನಮಗೂ ಹಾಗೆಯೇ. ಈಗ ಯುದ್ದಕ್ಕೆ ಕಾರಣವಿಲ್ಲವಾದ ಕಾರಣ, ಸ್ವಲ್ಪ ಸೇನೆಯನ್ನು ಉಳಿಸಿಕೊಂಡು ಉಳಿದೆಲ್ಲ ಸೈನ್ಯವನ್ನು ರಾಜಧಾನಿಗೆ ಹಿಂದಿರಿಗಿ ಕಳುಹಿಸಿಕೊಡು. ಇಷ್ಟರಲ್ಲೇ ಪರ್ವತರಾಜನಿಗೆ ಅರ್ಧ ರಾಜ್ಯ ಕೊಡುವ ಏರ್ಪಾಟನ್ನು ಮಾಡುತ್ತೇವೆ” ಎಂದು ಹೇಳಿ ಆತನಿಗೆ ಬೆಲೆ ಬಾಳುವ ಉಡುಗೊರೆಯನ್ನು ಕೊಟ್ಟು ಕಳುಹಿಸಿದನು.

ಶೇಖರನು ಈ ವಿಷಯವನ್ನು ಪರ್ವತರಾಜನಿಗೆ ತಿಳಿಸಲು, ಅದಕ್ಕೆ ದೊರೆ ‘ಚಾಣಕ್ಯರು ಹೇಳಿದ ಮಾತು ಸತ್ಯ. ಅದೇ ರೀತಿಯಲ್ಲಿ ನಮ್ಮ ಸೇನೆಯನ್ನು ರಾಜಧಾನಿಗೆ ಕಳುಹಿಸು. ಎರಡು ಸೇನೆ ಒಂದೆಡೆಯಲ್ಲಿ ನಿಂತರೆ ಕ್ಷಾಮ, ದೇಶಕ್ಷೋಭೆ, ಸಾಂಕ್ರಾಮಿಕರೋಗ — ಇವು ಉಂಟಾಗುವುವು. ಇದರಿಂದ ಇಬ್ಬರಿಗೂ ನಷ್ಟ ಎಂದನು. ರಾಜನ ಅಪ್ಪಣೆಯಂತೆ ಅವನ ಸೈನ್ಯದ ಬಹುಭಾಗ ಶಾಹುರೀನಗರಕ್ಕೆ ತೆರಳಿತು. ಚಂದ್ರಗುಪ್ತನ ಪಟ್ಟಾಭಿಷೇಕಕ್ಕಿದ್ದ ತೊಂದರೆಯಲ್ಲಿ ಮೂರರಲ್ಲಿ ಎರಡು ಪಾಲು ಕಳೆಯಿತು.

ತೀಕ್ಷ್ಣವಾದ ಬುದ್ದಿ, ದೈವಸಹಾಯ-ಇವುಗಳಿಂದ ಮನುಷ್ಯನಿಗೆ ಯಾವುದು ತಾನೆ ಅಸಾಧ್ಯ?


ಮುಂದಿನ ಅಧ್ಯಾಯ: ೧೮. ರಾಕ್ಷಸನ ತಂತ್ರ


Leave a Reply

Your email address will not be published. Required fields are marked *