ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 18: ರಾಕ್ಷಸನ ತಂತ್ರ
೧೮. ರಾಕ್ಷಸನ ತಂತ್ರ
ಅದೃಷ್ಟ ಚಕ್ರದ ಹಾಗೆ. ಒಂದು ಸಲ ಅದು ಮನುಷ್ಯನನ್ನು ಮೇಲಕ್ಕೆ ಎತ್ತುವುದು. ಮತ್ತೊಮ್ಮೆ ಕೆಳಕ್ಕೆ ತುಳಿಯುವುದು. ಅಮಾತ್ಯರಾಕ್ಷಸನ ಅಧಿಕಾರ, ಐಶ್ವರ್ಯಗಳು ಕರಗುವ ಮುಗಿಲಿನಂತೆ ಇದ್ದಕ್ಕಿದ್ದ ಹಾಗೆಯೇ ಮಾಯವಾದುವು. ಆದರೆ ಅವನಲ್ಲಿ ಸ್ವಾಮಿ ಭಕ್ತಿ ಮಾತ್ರ ದೃಢವಾಗಿ ಉಳಿಯಿತು, ಕಷ್ಟಬಂದ ಈ ಕಾಲದಲ್ಲಿ ಅಮಾತ್ಯನು ಎದೆಗೆಡಲಿಲ್ಲ. ನಂದರಿಗೆ ಮುಗಿದ ಕೈಗಳನ್ನು ಮತ್ತೊಬ್ಬರಿಗೆ ಮುಗಿಯಲು ಆ ವೀರನಿಗೆ ಮನಸ್ಸಾಗಲಿಲ್ಲ. ಈಗ ಪಾಟಲೀಪುರ ವೈರಿಗಳ ವಶವಾಗಿ ಅದನ್ನು ಪರ್ವತರಾಜನ ಸೇನೆ ಕಾದಿದೆ. ರಾಕ್ಷಸನು ನಂದರ ಆಪ್ತ; ಚಂದ್ರಗುಪ್ತನಿಗೆ ವೈರಿ. ಹಗೆಗಳಿಗೆ ರಾಕ್ಷಸನು ಸಿಕ್ಕರೆ ಅವನನ್ನು ಸುಮ್ಮನೆ ಬಿಡುವರೇ? ಮರೆಯಾಗಿದ್ದು ತಂತ್ರಗಳನ್ನು ಹೂಡಿ, ಚಂದ್ರಗುಪ್ತನನ್ನು ಸಂಹರಿಸಿ ಪರಲೋಕದಲ್ಲಿದ್ದ ನಂದರಿಗೆ ಸಂತೋಷವನ್ನುಂಟುಮಾಡಬೇಕೆಂದು ನಿಶ್ಚೈಸಿದನು ರಾಕ್ಷಸ. ಈ ಕಾರ್ಯಸಾಧನೆಗಾಗಿ ತನ್ನ ಆಪ್ತ ದೂತನಿಂದ ಚಂದನದಾಸನೆಂಬ ರತ್ನಪಡಿ ವರ್ತಕನನ್ನು ಕರೆಸಿ ಆತನಿಗೆ ಅಮಾತ್ಯನು–
” ಪ್ರಿಯಮಿತ್ರ, ನನ್ನ ತಂತ್ರಗಳೆಲ್ಲ ನಷ್ಟವಾದುವು. ಅದರೂ ಉಪಾಯವಾಗಿ ಚಂದ್ರಗುಪ್ತನನ್ನು ಸಂಹರಿಸಿ, ಹಗೆ ತೀರಿಸಿಕೊಳ್ಳಬೇಕಾಗಿದೆ. ಮುದುಕನಾದ ಮಹಾರಾಜನಿಗೆ ಮಗನನ್ನು ದತ್ತು ತಂದು ಅವನನ್ನು ಸಿಂಹಾಸನದಲ್ಲಿ ಕೂರಿಸಿ ನಂದವಂಶವನ್ನು ಮುಂದುವರಿಸುವೆನು. ಇದಕ್ಕಾಗಿ ಈಗ ನಾನು ಪಟ್ಟಣವನ್ನು ಬಿಟ್ಟು ಹೋಗಲೇಬೇಕಾಗಿದೆ. ಇತರರಿಗೆ ಗುಟ್ಟು ಗೊತ್ತಾಗದಂತೆ ನನ್ನ ಹೆಂಡತಿ ಮಕ್ಕಳನ್ನು ನೀನು ಎಚ್ಚರಿಕೆಯಿಂದ ಕಾಪಾಡು. ಈ ಪರ್ದಾರ್ಥಗಳು ನಿನ್ನಲ್ಲಿರಲಿ’ ಎಂದು ಹೇಳಿ ತನ್ನ ಹೆಂಡತಿ ಮಕ್ಕಳನ್ನು ಅವನ ವಶಕ್ಕೊಪ್ಪಿಸಿದನು.
ಆ ಬಳಿಕ ರಾಕ್ಷಸನು ಚಂದ್ರಗುಪ್ತನ ಸಂಹಾರಕ್ಕಾಗಿ ಉಪಾಯಗಳನ್ನು ನೆನೆದನು. ಅವನ ಬಳಿ ವಿಷಕನ್ಯೆಯೊಬ್ಬಳಿದ್ದಳು. ಆಕೆ ಸುಂದರಿ, ಯುವತಿ; ಸಂಗೀತಾದಿ ಕುಶಲಕಲೆಗಳಲ್ಲಿ ನಿಪುಣೆ. ರಾಕ್ಷಸನು ಮನಸ್ಸಿನಲ್ಲಿ ಏನನ್ನೋ ನೆನೆದು, ಆಕೆಯನ್ನು ತನ್ನಲ್ಲಿಗೆ ಕರೆಸಿಕೊಂಡು ಅವಳಿಗೆ ಹೇಳಬೇಕಾದ ಕೆಲವು ಮಾತುಗಳನ್ನು ತಿಳಿಸಿದನು. ಅನಂತರ ತನಗೆ ಆಪ್ತನಂತೆ ಕಾದುಕೊಂಡಿದ್ದ ಕ್ಷಪಣಕನನ್ನು ಕರೆದು ಅವನಿಗೆ ಈ ರೀತಿ ಹೇಳಿದನು.
” ಅಯ್ಯಾ, ಜೀವಸಿದ್ದಿ! ಈ ಕನ್ಯೆ ಸೆರೆಸಿಕ್ಕಿದ ವಲ್ಲಭರಾಯನ ಪ್ರಿಯಪುತ್ರಿ. ಈಕೆ ಮಹಾಪ್ರೌಢೆ. ನಂದರಲ್ಲಿ ಹಿರಿಯವನಿಗೆ ಮದುವೆಮಾಡಬೇಕೆಂದು ಈಕೆಯನ್ನು ಹದಿನೈದು ವರ್ಷ ಸಾಕಿದೆನು. ಈಗ ಅದಕ್ಕೆ ಮಾರ್ಗವಿಲ್ಲದಾಯಿತು. ದೈವ ಸಂಕಲ್ಪವನ್ನು ಮೀರುವವರಾರು? ರಾಜಯೋಗ್ಯಳಾದ ಈ ತರುಣಿಯನ್ನು ನಾನೇ ಚಂದ್ರಗುಪ್ತನಲ್ಲಿಗೆ ಕಳುಹಿಸಿದರೆ ಸ್ವಾಮಿದ್ರೋಹಿಯೆಂದು ಲೋಕ ನನ್ನನ್ನು ನಿಂದಿಸುವುದು. ಆದ್ದರಿಂದ ನಿನ್ನ ಶಿಷ್ಯಳೆಂದು ಹೇಳಿ ಈಕೆಯನ್ನು ಚಂದ್ರಗುಪ್ತನಿಗೊಪ್ಪಿಸು. ಚಂದ್ರಗುಪ್ತನು ಈಕೆಯೊಡಗೂಡಿದರೆ ಅದನ್ನೇ ಒಂದು ಪುಣ್ಯವೆಂದು ಭಾವಿಸುವೆನು. ನಂದರು ಸತ್ತ ದುಃಖ ಇದರಿಂದ ಸ್ವಲ್ಪ ಕಡಮೆಯಾಗುವುದು. ನಾನು ಸಂನ್ಯಾಸಿ, ನನಗೇಕೆ ಈ ಕೆಲಸವೆಂದು ಇದನ್ನು ಕಡೆಗಣಿಸಬೇಡ.’
ರಾಕ್ಷಸನ ಮಾತಿಗೆ ಕ್ಷಪಣಕನು ‘ಅಮಾತ್ಯರೇ, ಈ ಕಷ್ಟಕಾಲದಲ್ಲಿ ನಿಮ್ಮ ಮಾತನ್ನು ಮೀರಲಾದೀತೇ? ನನ್ನ ಬುದ್ಧಿಬಲವಿರುವ ಮಟ್ಟಿಗೆ ಏನಾದರೂ ಮಾಡಿ, ಚಂದ್ರಗುಪ್ತನನ್ನು ಒಡಂಬಡಿಸಿ ಈಕೆಯನ್ನು ಅವನು ಕೂಡುವಂತೆ ಮಾಡುವೆನು. ಒಂದು ವೇಳೆ ಚಾಣಕ್ಯನ ಮಾತನ್ನು ಕೇಳಿ ಚಂದ್ರಗುಪ್ತನು ಈಕೆಯನ್ನು ತಿರಸ್ಕರಿಸಿದರೆ ಆಗ ನಿಮ್ಮ ಯತ್ನ ಕೈಗೂಡದಷ್ಟೆ. ಆಗಲಾದರೂ ಚಂದ್ರಗುಪ್ತನಿಗೆ ನೀವು ಶರಣಾಗತರಾಗುವಿರೋ?” ಎಂದನು.
ಕ್ಷಪಣಕನ ಮಾತಿಗೆ ರಾಕ್ಷಸನು ” ಜೀವಸಿದ್ಧಿ, ಸಂನ್ಯಾಸಿಯಾದ ನಿನ್ನಲ್ಲಿ ಮುಚ್ಚುಮರೆಯುಂಟೇ? ನನ್ನ ಆಲೋಚನೆಯನ್ನು ನಿನ್ನಲ್ಲಿ ಹೇಳುವೆನು, ಕೇಳು. ಚಂದ್ರಗುಪ್ತನಲ್ಲಿ ಸಾಮದಾನಗಳು ಸಾಗದಿದ್ದರೆ ಭೇದ ಸಾಧ್ಯವಿಲ್ಲ. ಏಕೆಂದರೆ ಚಾಣಕ್ಯನಿಗೆ ಮೈತುಂಬ ಕಣ್ಣು, ಈ ನಿನ್ನ ಯತ್ನ ಚಂದ್ರಗುಪ್ತನಲ್ಲಿ ಸಾಗದಿದ್ದರೆ ಪರ್ವತರಾಜನ ಸ್ನೇಹವನ್ನು ಬೆಳೆಸುವೆನು. ಅವನು ನನ್ನನ್ನು ಚಾಣಕ್ಯನು ತನಗೆ ಕೊಡುವ ನಂದರ ಅರ್ಧರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡುವನು. ಆಗ ಬೇಕಾದಷ್ಟು ಹಣವನ್ನು ವ್ಯಯಮಾಡಿ, ಪರರಾಜರ ಸ್ನೇಹವನ್ನು ಬೆಳೆಸಿ ಮುಂದಿನ ಯತ್ನ ಮಾಡುವೆನು. ಈ ವಿಷಯ ಗುಟ್ಟಾಗಿರಲಿ’ ಎಂದು ಹೇಳಿ ವಿಷಕನ್ಯೆಯನ್ನು ಅವನಿಗೆ ಒಪ್ಪಿಸಿದನು.
ಕ್ಷಪಣಕನನ್ನು ಬೀಳ್ಕೊಟ್ಟ ಮೇಲೆ, ರಾಕ್ಷಸನು ಪಟ್ಟದಾನೆಯ ಮಾವುತನನ್ನು ಕರೆಸಿಕೊಂಡು ಅವನಿಗೆ ‘ಬರ್ಬರಕ, ನಮ್ಮ ಅರಸರಿಗೆ ಪರಮವೈರಿಯಾದ ಚಂದ್ರಗುಪ್ತನು ಪಟ್ಟಗಟ್ಟಿಸಿಕೊಂಡಮೇಲೆ ಪಟ್ಟದಾನೆಯನ್ನೇರಿ ರಾಜದ್ವಾರದಲ್ಲಿ ಬರುವನು. ಆಗ ಅವನನ್ನು ಕೊಲ್ಲಲು ನಿನಗೆ ಅವಕಾಶ ದೊರಕುವುದು. ಆ ಸಮಯದಲ್ಲಿ ನಿನ್ನ ಹಿಂದುಗಡೆ ಕುಳಿತಿರುವ ಚಂದ್ರಗುಪ್ತನನ್ನು ತಿವಿದು ಕೊಂದು ಗುಂಪಿನಲ್ಲಿ ತಲೆ ತಪ್ಪಿಸಿಕೊ’ ಎಂದು ಹೇಳಿ ಅವನಿಗೆ ಹಣ ಕೊಟ್ಟು ಕಳುಹಿಸಿದನು.
ಆ ಬಳಿಕ ದಾರುವರ್ಮನೆಂಬ ಶಿಲ್ಪಿಯನ್ನು ಕರೆಸಿಕೊಂಡು ಅವನಿಗೆ ‘ಅಯ್ಯಾ, ಸ್ವಾಮಿಭಕ್ತನಾದ ಶಿಲ್ಪಿ! ಇಷ್ಟರಲ್ಲೇ ಚಂದ್ರಗುಪ್ತನು ಪಟ್ಟಗಟ್ಟಸಿಕೊಂಡು ರಾಜದ್ವಾರದಲ್ಲಿ ಬರುವನು. ಅವನು ಬರುವುದಕ್ಕೆ ಮೊದಲೇ ಕಪಟಶಿಲ್ಪವನ್ನು ರಚಿಸಿ ಸಮಯನೋಡಿ ಅರಸನನ್ನು ಈ ರೀತಿ ಕೊಲ್ಲು’ ಎಂದು ತಿಳಿಸಿ ಅವನಿಗೆ ಬೇಕಾದಷ್ಟು ಹಣ ಕೊಟ್ಟು ಕಳುಹಿಸಿದನು.
ಅನಂತರ ಭವನಪಾಲನೆಂಬ ಅಧಿಕಾರಿಯನ್ನು ಕರೆಸಿಕೊಂಡು, ಆದರದಿಂದ ಅವನಿಗೆ ರಾಕ್ಷಸನು ‘ಎಲೈ ಆಪ್ತನಾದ ಅಧಿಕಾರಿ, ನಾಲ್ಕಾರು ದಿನಗಳಲ್ಲಿ ಚಂದ್ರಗುಪ್ತನು ಅರಸನಾಗಿ ಈ ಪಟ್ಟಣಕ್ಕೆ ಬರುವನಷ್ಟೆ. ಈ ಅರಮನೆಯಲ್ಲಿ ಯಾವುದೊಂದು ಭಾಗವೂ ಆತನ ಮನಸ್ಸಿಗೆ ರುಚಿಸದು. ಆದ್ದರಿಂದ ನಂದರ ವಿಹಾರಕ್ಕಾಗಿ ಮಾಡಿದ್ದ, ಕುಮಾರಭವನವನ್ನು ಅಲಂಕಾರಮಾಡು. ಅದರ ಆರನೆಯ ತೊಟ್ಟಿಯಲ್ಲಿರುವ ಮಲಗುವ ಮನೆಯನ್ನು ಸಿಂಗರಿಸಿ, ಅಲ್ಲಿ ಈ ರೀತಿ ಕಪಟದಿಂದ ಚಂದ್ರಗುಪ್ತನನ್ನು ಕೊಲ್ಲುವಂತೆ ನೇಮಿಸು. ಅವನು ಮಲಗುವ ಮನೆಯನ್ನು ಹೊಕ್ಕೊಡನೆಯೇ ಅರಮನೆಯ ಸುರಂಗಮಾರ್ಗದಿಂದ ನೀನು ತಲೆತಪ್ಪಿಸಿಕೊ. ನಾನೂ ಅದೇ ದಾರಿಯಿಂದ ಈ ಪಟ್ಟಣವನ್ನು ಬಿಟ್ಟು ಹೊರಡುವೆನು. ಒಳಬೊಕ್ಕಸದ ಗೊಲ್ಲನಿಗೆ ಈ ಗುರುತನ್ನು ತೋರಿಸಿ ನಿನಗೆ ಬೇಕಾದಷ್ಟು ಹಣವನ್ನು ತೆಗೆದುಕೊ’ ಎಂದು ಅವನಿಗೆ ಚಂದ್ರಗುಪ್ತನು ಮಲಗುವ ಮನೆಯಲ್ಲಿ ಮಾಡಬೇಕಾದ ಕಪಟಗಳನ್ನು ತಿಳಿಸಿ ಕಳುಹಿಸಿದನು. ಇದೆಲ್ಲ ಮುಗಿದ ಮೇಲೆ ಅಮಾತ್ಯನು ರಾಜವೈದ್ಯ ಮತ್ತು ತನ್ನ ಮನೆಗೆಲಸವನ್ನು ನೋಡುತ್ತಿದ್ದ ರಾಯಸದ ಶಕಟದಾಸ ಇವರನ್ನು ಕ್ರಮವಾಗಿ ಕರೆಸಿಕೊಂಡು ಅವರಿಗೆ, ಮಾಡಬೇಕಾದ ಕೆಲಸಗಳನ್ನು ತಿಳಿಸಿ ಬೇಕಾದಷ್ಟು ಹಣ ಕೊಡಿಸಿದನು. ಇದಾದಮೇಲೆ ನಗರದಲ್ಲಿ ಅಲ್ಲಲ್ಲಿ ಗೂಢಚಾರರನ್ನು ನೇಮಿಸಿ ರಾಕ್ಷಸನು ಅರಮನೆಯ ಸುರಂಗದ ದಾರಿಯಿಂದ ಪಟ್ಟಣವನ್ನು ಬಿಟ್ಟು ಹೊರಟುಹೋದನು.
ರಾಜಧಾನಿ ಕೈವಶವಾದ ಮೇಲೆ ಚಾಣಕ್ಯನು ರಾಕ್ಷಸನನ್ನು ಬಹುವಾಗಿ ಹುಡುಕಿಸಿದನು. ಆದರೆ ಅದರಿಂದ ಏನೂ ಉಪಯೋಗವಾಗಲಿಲ್ಲ. ರಾಯಸದ ಶಕಟದಾಸನು ರಾಕ್ಷಸನ ಗುಟ್ಟನ್ನಾಗಲೀ, ಅವನ ಮನೆಯವರ ವಿಷಯವನ್ನಾಗಲೀ ಹೊರಗೆಡಹಲಿಲ್ಲ. ರಾಕ್ಷಸನು ಪಟ್ಟಣವನ್ನು ಬಿಟ್ಟು ಹೊರಟುಹೋದ ಸಮಾಚಾರ ಚಾಣಕ್ಯನಿಗೆ ತಿಳಿಯಿತು. ಅವನು ದೂತರಿಗೆ ‘ಅಮಾತ್ಯನು ಚಂದ್ರಗುಪ್ತನಿಗೆ ಹೆದರಿ, ಹೆಂಡತಿ ಮಕ್ಕಳನ್ನು ಈ ನಗರದಲ್ಲಿರಿಸಿ ಕಳ್ಳ ದಾರಿಯಿಂದ ತಲೆ ತಪ್ಪಿಸಿಕೊಂಡಿರಬೇಕು. ಚಂದ್ರಗುಪ್ತನಿಗೆ ನಂದರ ಮೇಲೆ ಹಗೆಯಲ್ಲದೆ ರಾಕ್ಷಸನ ಮೇಲೆ ಹೊಟ್ಟೆಯುರಿಯುಂಟೇ? ಎಲ್ಲರಂತೆ ರಾಕ್ಷಸನು ತಾನೂ ಬಂದು ಪ್ರಭುವನ್ನು ಕಂಡು ಮಾತನಾಡಿಕೊಂಡು ಮನ್ನಣೆ ಹೊಂದಿ ಮೊದಲಿಗಿಂತಲೂ ಅಧಿಕನಾಗಿರಬೇಕು. ಅದನ್ನು ಬಿಟ್ಟು ಧೀರನಾದ ಆತನು ಹೆದರಿ ಮರೆಯಾಗಕೂಡದು. ರಾಕ್ಷಸನಿಲ್ಲದ ಆಸ್ಥಾನ, ಚಂದ್ರನಿಲ್ಲದ ಆಕಾಶದಂತೆ, ಜೋಯಿಸನಿಲ್ಲದ ಗ್ರಾಮದಂತೆ, ಮಕ್ಕಳಿಲ್ಲದ ಸಂಸಾರದಂತೆ ಶೋಭಿಸದು. ಆದ್ದರಿಂದ ಆತನನ್ನು ಹುಡುಕಿ ನಂಬಿಕೆಯನ್ನು ಹೇಳಿ ಕರೆತನ್ನಿ’ ಎಂದು ಅಪ್ಪಣೆಮಾಡಿ ಕಳುಹಿದನು.
ರಾಕ್ಷಸನು ಹೊರಗಿದ್ದು ಹಗೆ ಸಾಧಿಸಬಹುದೆಂಬ ಅಳುಕು ಚಾಣಕ್ಯನಿಗೆ ಇದ್ದೇ ಇತ್ತು. ಇದಕ್ಕಾಗಿ ಮುಂದಿನ ಪ್ರಯತ್ನ ರಾಕ್ಷಸನ ಸಂಗ್ರಹ.
ಮುಂದಿನ ಅಧ್ಯಾಯ: ೧೯. ಪರ್ವತರಾಜನ ಮರಣ