ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 19: ಪರ್ವತರಾಜನ ಮರಣ

೧೯. ಪರ್ವತರಾಜನ ಮರಣ

ಮಂಗಳಸ್ನಾನವಾದ ಮೇಲೆ ಚಾಣಕ್ಯನು ಚಂದ್ರಗುಪ್ತನನ್ನು ವಸ್ತ್ರಾದಿ ಭೂಷಣಗಳಿಂದ ತಾನೇ ಅಲಂಕರಿಸಿ, ಅವನನ್ನು ರಾಜಸಭೆಗೆ ಕರೆತಂದು ಭದ್ರಾಸನದಲ್ಲಿ ಕುಳ್ಳಿರಿಸಿದನು. ಅಧಿಕಾರಿಗಳು ಕಾಣಿಕೆಯೊಡನೆ ಚಂದ್ರಗುಪ್ತನನ್ನು ಕಾಣಿಸಿಕೊಂಡರು. ಚಂದ್ರಗುಪ್ತನು ಅವರನ್ನು ಮನ್ನಿಸಿ, ಇನ್ನು ಮುಂದೆ ಪ್ರಧಾನಸಚಿವಶಸ್ತ್ರವನ್ನು ಸ್ವೀಕರಿಸಿರುವ ಸುರಗುರುವಿಗೆ ಸಮಾನರಾದ ಚಾಣಕ್ಯರ ಅಪ್ಪಣೆಯನ್ನು ಪಾಲಿಸಿಕೊಂಡು ಬರುವಂತೆ ಅವರಿಗೆ ಹೇಳಿ ವೀಳಯಕೊಟ್ಟು ಕಳುಹಿಸಿದನು.

ಇದೇ ಸಮಯವನ್ನು ಕಾಯುತ್ತಿದ್ದ, ಕ್ಷಪಣಕನು ವಿಷಕನ್ಯೆಯೊಡನೆ ಚಾಣಕ್ಯ ಚಂದ್ರಗುಪ್ತರಿಗೆ ಕಾಣಿಸಿಕೊಂಡನು. ರಾಕ್ಷಸನ ಮಾತನ್ನು ಕೇಳಿದಾಗ ಆ ಕನ್ನೆಯ ವಿಷಯದಲ್ಲಿ ಕ್ಷಪಣಕನಿಗೆ ಸಂದೇಹವುಂಟಾಗಿತ್ತು. ತನ್ನ ಆಶ್ರಮದಲ್ಲಿ ಆಕೆ ತಿಂದುಳಿದ ಅನ್ನವನ್ನು ತಿಂದು ಬೆಕ್ಕು ಸತ್ತುಹೋದುದರಿಂದ ಆಕೆ ವಿಷಕನ್ಯೆಯೆಂದು ಕ್ಷಪಣಕನಿಗೆ ಮಂದಟ್ಟಾಗಿದ್ದಿತು. ಈಗ ಅವನು ಚಂದ್ರಗುಪ್ತನಿಗೆ ಹರಸಲು, ಚಾಣಕ್ಯನು ಏನೂ ಅರಿಯದವನಂತೆ ‘ಕ್ಷಪಣಕರೇ, ಇತ್ತ ದಯಮಾಡಿ. ನಿಮ್ಮ ಹೆಸರೇನು? ಸಂನ್ಯಾಸಿಗಳಾದ ನಿಮಗೆ ಈ ರೂಪವತಿ ಹೇಗೆ ದೊರಕಿದಳು ‘ ಎಂದು ಪ್ರಶ್ನೆ ಮಾಡಿದನು.

ಚಾಣಕ್ಯನ ಮಾತಿಗೆ ಕ್ಷಪಣಕನು, ರಾಕ್ಷಸನು ತಿಳಿಸಿದಂತೆ ಎಲ್ಲವನ್ನೂ ತಿಳಿಸಿ ಓರೆನೋಟಿದಿಂದ ಚಾಣಕ್ಕ ನನ್ನು ನೋಡಿ…

” ಆರ್ಯರೇ, ಈ ಕನ್ಯೆ ಸಾಮಾನ್ಯಳೆಂದು ತಿಳಿಯಬೇಡಿ. ಅರ್ಜುನನ ಮನಸ್ಸನ್ನು ಅಪಹರಿಸಿದ ಉಲೂಪಿಯಂತೆ ಬಲು ಚತುರೆ. ಇವಳ ಅಂಗಸುಖವನ್ನು ಅನುಭವಿಸಿದ ಪ್ರಿಯನು ಇವಳನ್ನಗಲಿ ಮಲಗುವ ಮನೆಯಿಂದ ಮರಳಿ ಈಚೆಗೆ ಬಾರನು ” ಎಂದನು.

ಕ್ಷಪಣಕನ ಮಾತಿನಿಂದ ಆಕೆ ವಿಷಕನ್ಯೆಯೆಂದೂ, ಚಂದ್ರಗುಪ್ತನ ಮರಣಕ್ಕಾಗಿ ರಾಕ್ಷಸನು ಅವಳನ್ನು ಕಳುಹಿಸಿರುವನೆಂದೂ ಚಾಣಕ್ಯನು ಊಹಿಸಿದನು. ಕ್ಷಪಣಕನು ಅನ್ಯೋಕ್ತಿಯಿಂದ ಚಾಣಕ್ಯನಿಗೆ ಮತ್ತೆ ಹೇಳಿದನು; ‘” ‘ಈಗ ರಾಕ್ಷಸನಿಗೆ ಆಶ್ರಯವಿಲ್ಲ ಅವನು ಪರ್ವತರಾಜನನ್ನು ಆಶ್ರಯಿಸಿ ಹಗೆ ತೀರಿಸಿಕೊಳ್ಳುವನು. ಆದ್ದರಿಂದ ಈ ವಿಷಕನ್ಯೆಯ ಮೂಲಕ ಪರ್ವತರಾಜನನ್ನು ದಾಕ್ಷಿಣ್ಯವಿಡದೆ ಕೊಲ್ಲಿಸಿ ಮಲಯಕೇತುವನ್ನು ಇಲ್ಲಿಂದ ಓಡಿಸಬೇಕು. ಇಲ್ಲದಿದ್ದರೆ ಚಂದ್ರಗುಪ್ತನಿಗೆ ಕಾಡೇ ಗತಿ./

ಕ್ಷಪಣಕನ ಮಾತಿನ ಅರ್ಥವನ್ನು ತಿಳಿದು, ಚಾಣಕ್ಯನು ತನ್ನ ಮನಸ್ಸಿನಲ್ಲಿ ಈ ರೀತಿ ಯೋಚಿಸಿದನು; ‘ರಾಕ್ಷಸನಿಗೆ ಆಶ್ರಯಕೊಡುವ ಈ ಪರ್ವತರಾಜನನ್ನು ಕೊಲ್ಲಿಸಿ, ರಾಕ್ಷಸನನ್ನು ಸಂಗ್ರಹಿಸಬೇಕು. ಈಗ ಪರ್ವತರಾಜನಿಗೆ ಅರ್ಧ ರಾಜ್ಯಕೊಟ್ಟರೆ, ಉಳಿದ ಅರ್ಧ ರಾಜ್ಯವನ್ನು ಕಳೆದುಕೊಂಡು ಚಂದ್ರಗುಪ್ತನು ನನ್ನೊಡನೆಯೇ ಕಾಡಿಗೆ ಬರುವನು. ರಾಕ್ಷಸನು ಸ್ವಾಮಿ ಭಕ್ತ. ಒಮ್ಮೆ ಚಂದ್ರಗುಪ್ತನನ್ನು ಕೈ ಹಿಡಿದರೆ ಸಾಕು; ಚಂದ್ರಗುಪ್ತನ ಸೇವೆಯನ್ನು ಖಂಡಿತವಾಗಿ ಮಾಡುವನು. ಪರ್ವತರಾಜನು ಕೃತಘ್ನ ; ಅವನನ್ನು ಕೊಲ್ಲಿಸಿದರೆ ದೋಷವಿಲ್ಲ’

ಈ ವೇಳೆಗೆ ಸರಿಯಾಗಿ ಚಾಣಕ್ಯನ ಅಪ್ಪಣೆಯಂತೆ ದೂತರು ರಾಜಸಭೆಗೆ ಗಿಣಿಗಳನ್ನು ತಂದರು. ವಿಷಕನ್ಯೆಯನ್ನು ನೋಡಿದೊಡನೆಯೇ ಅವು ಅರಚಿಕೊಂಡು ಪ್ರಾಣಬಿಟ್ಟುವು. ಈಕೆ ವಿಷಕನ್ಯೆಯೆಂದು ಚಾಣಕ್ಕನಿಗೆ ಸ್ಪಷ್ಟವಾಯಿತು. ಅವನು ಕ್ಷಪಣಕನನ್ನು ನೋಡಿ–

” ಕ್ಷಪಣಕರೇ, ಚಂದ್ರಗುಪ್ತನು ಕೈಹಿಡಿದ ಹೆಂಡತಿಯನ್ನು ಹೊರತು ಮತ್ತೊಬ್ಬಳನ್ನು ಕಣ್ಣೆತ್ತಿ ನೋಡನು. ಈ ಚೆಲುವೆ ಪರ್ವತ ರಾಜನಿಗೆ ತಕ್ಕವಳು, ಆತನಿಂದಲೇ ಇವಳ ಯೌವನಕ್ಕೆ ಸಫಲತೆ. ಈ ದಿನ ಹುಣ್ಣಿಮೆ; ತುಂಬು ಬೆಳುದಿಂಗಳು ಬರುವುದು. ನಮಗೆ ಸಂತೋಷವನ್ನುಂಟುಮಾಡುವ ಬಯಕೆ ನಿಮಗಿದ್ದರೆ ಪರ್ವತರಾಜನು ಮಲಗುವ ಮನೆಗೆ ಬರುವ ವೇಳೆಯನ್ನು ಕಾದು ಈಕೆಯನ್ನು ಆತನಿಗೊಪ್ಪಿಸಿ’ ಎಂದು ಹೇಳಿ ಕಳುಹಿಸಿದನು,

ಕ್ಷಪಣಕನು ರಾಜಸಭೆಯನ್ನು ಬಿಡುವ ವೇಳೆಗೆ ಕತ್ತಲಾಗಿತ್ತು. ಚಂದ್ರನು ಆಗತಾನೆ ಮೇಲೆದ್ದು ಬಂದಿದ್ದನು. ಹೊರಗಡೆ ಹಾಲು ಚೆಲ್ಲಿದಂತೆ ಬೆಳುದಿಂಗಳು ಹರಡಿತ್ತು. ಬೀದಿಯಲ್ಲಿ ಹೋಗುವವರು ಬೆಳುದಿಂಗಳ ಹೊಳೆಯನ್ನು ಹಾಯ್ದು ಹೋಗುವವರಂತೆ ಕಂಡುಬರುತ್ತಿದ್ದರು. ತಂಗಾಳಿ ಮೆಲ್ಲಮೆಲ್ಲನೆ ಬೀಸಿ ಮನಸ್ಸಿಗೆ ಆನಂದವನ್ನುಂಟು ಮಾಡುತ್ತಿತ್ತು.

ಕ್ಷಷಣಕನು ವಿಷಕನ್ಯೆಯೊಡನೆ ಪರ್ವತರಾಜನನ್ನು ಕಂಡಾಗ, ರಾಜನು ತನ್ನ ಮಲಗುವ ಮನೆಯಲ್ಲಿ ಯೋಚನೆಯಿಲ್ಲದೆ ಸುಖವಾಗಿ ಕುಳಿತಿದ್ದನು. ಅವನ ಬಳಿ ಯಾರೂ ಇರಲಿಲ್ಲ. ಕ್ಷಪಣಕನು ರಾಜನಿಗೆ ಹರಸಿ ಕುಳಿತುಕೊಂಡನು. ಜೀವಸಿದ್ಧಿಯ ಹಿಂದೆ ಸೊಬಗನ್ನು ಬೀರುತ್ತ ನಿಂತಿದ್ದ ಚೆಲುವೆಯನ್ನು ನೋಡಿ ಪರ್ವತರಾಜನ ಬಗೆ ಕದಡಿತು. ‘ಮನುಷ್ಯರಲ್ಲಿ ಈ ರೂಪು, ಈ ಲಾವಣ್ಯ, ಈ ಬೆಡಗು ಹೇಗೆ ತಾನೆ ಬರುವುವು? ಬಹು ಪುಣ್ಯಶಾಲಿಗೆ ದೊರಕತಕ್ಕವಳಿವಳು. ಇವಳೊಡನೆ ಕೂಡುವವನು ಬಹು ಧನ್ಯ. ಋಷಿಗಳೇ ಇವಳಿಂದ ಚಂಚಲ ಮನಸ್ಸುಳ್ಳವರಾಗುವರೆಂದಮೇಲೆ ನಮ್ಮ ಮಾತೇನು? ಇವಳು ನಮ್ಮ ಪ್ರಾಣವನ್ನು ಕೇಳಿದರೂ ಕೊಡುವೆನು’ ಎಂದುಕೊಂಡನು.

ಮೋಹದಿಂದ ಮತ್ತನಾದ ರಾಜನು ಕ್ಷಪಣಕನಿಗೆ “ ಕ್ಷಷಣಕನೇ, ನೀನು ಯಾರು? ಎಲ್ಲಿಂದ ಬಂದೆ? ಸಂನ್ಯಾಸಿಯಾದ ನಿನಗೆ ಈ ಚೆಲುವೆ ಎಲ್ಲಿ ದೊರಕಿದಳು?” ಎಂದು ಪ್ರಶ್ನೆಮಾಡಿದನು.

ರಾಜನ ಮಾತಿಗೆ ಕ್ಷಪಣಕನು ಈ ರೀತಿ ಉತ್ತರಕೊಟ್ಟನು. “ ರಾಕ್ಷಸನ ಗೆಳೆಯ ನಾನು. ನನ್ನ ಹೆಸರು ಜೀವಸಿದ್ಧಿಯೆಂದು. ಚಂದ್ರಗುಪ್ತನಿಗೆ ಹೆದರಿ ಈ ಪಟ್ಟಣವನ್ನೇ ಬಿಟ್ಟು ಹೊರಟುಹೋದ ರಾಕ್ಷಸನು ನಿಮ್ಮ ಅನುಗ್ರಹವನ್ನು ಬಯಸಿ ಈ ಚತುರೆಯನ್ನು ಕಳುಹಿಸಿದ್ದಾನೆ. ಈಕೆಯನ್ನು ಸ್ವೀಕರಿಸಿ ರಾಕ್ಷಸನನ್ನು ಅನುಗ್ರಹಿಸಬೇಕು.”

ಕ್ಷಪಣಕನ ಮಾತನ್ನು ಕೇಳಿ ರಾಜನು ಮೋಹಪರವಶನಾದನು. ಇದನ್ನರಿತ ಜೀವಸಿದ್ಧಿ ವಿಷಕನ್ಯೆಯನ್ನು ಪರ್ವತರಾಜನಿಗೊಪ್ಪಿಸಿ ಹೊರಟು ಬಂದನು. ಕಾಮುಕನಾದ ರಾಜನು ವಿಷಕನ್ಯೆಯನ್ನು ಕೂಡಿ, ನಂಜುತಟ್ಟಿ, ಮಾದ್ರಿಯನ್ನಪ್ಪಿ ಸತ್ತ ಪಾಂಡುವಿನಂತೆ ಹಾಸಿಗೆಯ ಮೇಲೆ ಒರಗಿದನು.

ವಿಷಕನ್ಯೆ ರಾಜನ ಬಳಿ ಕಣ್ಣೀರು ಸುರಿಸುತ್ತ ಕುಳಿತಿದ್ದಳು. ಹೊರಗಡೆ ಎಲ್ಲೆಲ್ಲಿಯೂ ಮೌನ ಕವಿದಿತ್ತು.


ಮುಂದಿನ ಅಧ್ಯಾಯ: ೨೦. ಪಲಾಯನ


Leave a Reply

Your email address will not be published. Required fields are marked *