ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 20: ಪಲಾಯನ
೨೦. ಪಲಾಯನ
ಕ್ಷಪಣಕನು ಹೊರಟುಹೋದಮೇಲೆ ಮುಂದಿನ ಕಾರ್ಯವನ್ನು ಯೋಚಿಸಿ ಚಾಣಕ್ಯನು ಒಂದು ಲೇಖನವನ್ನು ಬರೆದು, ಅದನ್ನು ಸಿದ್ಧಾರ್ಥಕನಿಗೆ ಕಳುಹಿಸಿದನು. ಸಿದ್ಧಾರ್ಥಕನು ಅದನ್ನು ನೋಡಿಕೊಂಡು, ಭಾಗುರಾಯಣನಲ್ಲಿಗೆ ಬಂದು
‘ಸೇನಾಪತಿ, ಈ ಕಾಲಕ್ಕೆ ನೀನೇ ಪುಣ್ಯವಂತ. ಚಾಣಕ್ಯರಿಗೆ ನಿನ್ನಲ್ಲಿ ಅದೆಂಥ ವಿಶ್ವಾಸ! ಚಂದ್ರಗುಪ್ತನ ಕಾರ್ಯ ನಿನ್ನಿಂದ ಬಹುವಾಗಿ ಆಗಬೇಕಾಗಿದೆ. ರಾಕ್ಷಸನಂತೆ ನೀನು ಎಲ್ಲದರಲ್ಲಿಯೂ ಪ್ರೌಢ. ನಿನಗೆ ಹೇಳಬೇಕಾದುದೇನಿದೆ? ಈ ಲೇಖನವನ್ನು ಓದಿಕೊಂಡು ಅದರಂತೆ ನಡೆದುಕೊ. ಇದರಿಂದ ನಿನಗೆ ರಾಜಾನುಗ್ರಹವುಂಬಾಗುವುದು. ಇದು ಸತ್ಯ’ ಎಂದು ಹೇಳಿ ಚಾಣಕ್ಯನ ಲೇಖನವನ್ನು ಅವನಿಗೊಪ್ಪಿಸಿ ಹೊರಟುಹೋದನು.
ಈ ಮಾತನ್ನು ಕೇಳಿ ಭಾಗುರಾಯಣನಿಗೆ ಸೋಜಿಗವಾಯಿತು. ಸೇನಾಪತಿ ಲೇಖನನನ್ನೋದಿಕೊಂಡು, ಭದ್ರಭಟಾದಿಗಳಿಗೆ ತಮ ಸೇನೆಯೊಡನೆ ಮಲಯಕೇತುವಿನ ಪಾಳಯದ ಬಳಿ ಕಾಣಿಸಿಕೊಳ್ಳುವಂತೆ ಗುಟ್ಟಾಗಿ ಹೇಳಿ ಕಳುಹಿಸಿದನು. ಇದಾದ ಮೇಲೆ ‘ವಿಷಕನ್ಯೆಯಿಂದ ಪರ್ವತರಾಜನ ಸಾವು ಸಿದ್ಧ. ಈಗ ಮಲಯಕೇತುವಿಗೆ ಹೆದರಿಕೆಯನ್ನುಂಟುಮಾಡಿ, ಅವನನ್ನು ರಾಜಧಾನಿಗೆ ಕರೆದೊಯ್ಯಬೇಕು. ಅಲ್ಲಿ ಅವನ ಆಪ್ತಮಂತ್ರಿಯಂತಿದ್ದು, ರಾಕ್ಷಸನು ಅವನಲ್ಲಿಗೆ ಬಂದರೆ ಪ್ರಾಣಸಹಿತವಾಗಿ ಅವನನ್ನು ಅಲ್ಲಿಂದ ಹೊರಡಿಸಬೇಕು. ಕಾಲ ಕಳೆದರೆ ನಮಗೆ ಕೇಡು ತಪ್ಪದು ‘ ಎಂದು ಯೋಚಿಸಿ, ಬೆತ್ತಲ ಕುದುರೆಯನ್ನೇರಿ ಮಲಯಕೇತುವಿನ ಪಾಳಯದೆಡೆಗೆ ಬರುತ್ತಿದ್ದನು. ದಾರಿಯಲ್ಲಿ ಅವನಿಗೆ ವಿಷಕನ್ಯೆ ಕಾಣಿಸಿಕೊಂಡಳು. ಪಪರ್ವತರಾಜನು ಇವಳಿಂದಲೇ ಸತ್ತಿರಬೇಕೆಂದು ನಿರ್ಧರಿಸಿ ಅವನು ರಾಜನ ಗೂಡಾರದ ಬಳಿಗೆ ಬಂದನು. ಅಲ್ಲಿ ಜನರಾಡಿಕೊಳ್ಳುತ್ತಿದ್ದ ಪಿಸುಮಾತಿನಿಂದ ಪರ್ವತರಾಜನು ಸತ್ತಿರಬೇಕೆಂದು ಸೇನಾಸತಿಗೆ ಮನದಟ್ಟಾಯಿತು.
ತಂದೆ ಸತ್ತ ಸಮಾಚಾರ ಮಲಯಕೇತುವಿಗೆ ತಿಳಿಯದು. ಜಯಲಕ್ಷ್ಮಿ ಕೈವಶವಾದ ಈ ಕಾಲದಲ್ಲಿ ಅವನು ತನ್ನ ಗೂಡಾರದಲ್ಲಿ ವಿನೋದದಿಂದಿದ್ದನು. ಭಾಗುರಾಯಣನು ಬೆತ್ತಲ ಕುದುರೆಯನ್ನೇರಿ ಬಂದಿರುವುದನ್ನು ದೂತರಿಂದ ಕೇಳಿ, ಮಲಯಕೇತು ಹೊರಗೆ ಬಂದು ಸಮಾಚಾರವೇನೆಂದು ಕೇಳಿದನು. ಭಾಗುರಾಯಣನು ಆತುರದಿಂದ–
“ರಾಜಕುಮಾರ, ಸಮಾಚಾರದ ಮಾತು ಹಾಗಿರಲಿ. ಅದನ್ನು ಆಮೇಲೆ ಹೇಳುವೆನು. ಈ ಬೆತ್ತಲ ಕುದುರೆಯನ್ನೇರಿ ಈಗಲೇ ಇಲ್ಲಿಂದ ಹೊರಡು. ಇಲ್ಲದಿದ್ದರೆ ಸರ್ವನಾಶವಾದೀತು! ಅಗೋ ನೋಡು, ನಿನ್ನನ್ನು ಸಂಹರಿಸಲು ಚಂದ್ರಗುಪ್ತನ ಸೇನೆ ಹಿರಿದ ಕತ್ತಿಯೊಡನೆ ಬರುತ್ತಿದೆ. ನಿನ್ನ ತಂದೆಯ ಸುದ್ದಿ ನಿನಗೆ ತಿಳಿಯುವುದಿರಲಿ. ಓಡು, ಓಡು ಎಂದು ತ್ವರೆಗೊಳಿಸಿದನು. ಮಲಯೆಕೇತು ದಿಕ್ಕುತೋರದೆ ಹೆದರಿ ಕುದುರೆಯನ್ನೇರಿ ಓಡಿದನು. ಮಲಯಕೇತು ಮುಂದೆ ಮೈಗಾವಲಿನವರು ಹಿಂದೆ. ಸ್ವಲ್ಪದೂರ ಹೋದ ಮೇಲೆ ಮಲಯಕೇತು ಸೇನಾಧಿಪತಿಯೊಡನೆ ಒಂದು ದಿಣ್ಣೆಯ ಮೇಲೆ ವಿಶ್ರಮಿಸಿಕೊಂಡನು. ಆಯಾಸದಿಂದ ಅವನ ಮೈಯಲ್ಲಿ ಬೆವರು ಸುರಿಯುತ್ತಿತ್ತು. ಆಗ ಭಾಗುರಾಯೆಣನು ರಾಜಕುಮಾರನಿಗೆ ಈ ರೀತಿ ಹೇಳಿದನು–
‘ರಾಜಕುಮಾರ, ನಿನಗೆ ಎಂಥ ದುರವಸ್ಥೆ ಬಂತು! ನಿನ್ನೆ ರಾತ್ರಿ ನಿನ್ನಮೇಲೆ ಕೈಮಾಡಬೇಕೆಂದು ಸೇನಾಧಿಪತಿಗಳಿಗೆ ಚಾಣಕ್ಯನ ಅಪ್ಪಣೆಯಾಯಿತು. ಅದರಂತೆಯೇ ಚಂದ್ರಗುಪ್ತನ ಸೇನೆ ನಿನ್ನ ಗೂಡಾರವನ್ನು ಸುತ್ತುಗಟ್ಟಿತು. ನಿನಗೆ ಅಪಾಯವಾಗಬಹುದೆಂದೆಣಿಸಿ ನಾನು ಈ ಕುದುರೆಯನ್ನೇರಿ ನಿನ್ನ ಗೂಡಾರದ ಬಳಿ ಬರುತ್ತಿದ್ದೆ. ಅಷ್ಟರಲ್ಲೇ ವಿಷಕನ್ಯೆಯೊಬ್ಬಳು ನನ್ನೆದುರಾಗಿ ಬಂದಳು. ಆಕೆಯನ್ನು ಕೂಡಿ ನಿನ್ನತಂದೆ ಮರಣ ಹೊಂದಿರಬಹುದೆಂದು ಅನುಮಾನವಾಯಿತು. ನಿಮ್ಮ ತಂದೆಯ ಗೂಡಾರದ ಬಳಿ ಅಲ್ಲಿ ಜನರಾಡಿಕೊಳ್ಳುತ್ತಿದ್ದ ಪಿಸು ಮಾತಿನಿಂದ ನನ್ನ ಅನುಮಾನ ಧೃಢಪಟ್ಟತು. ಈ ಸಮಯದಲ್ಲಿ ನಿನ್ನನ್ನು ಕೇಡಿನಿಂದ ಪಾರುಮಾಡಲು ನಿನ್ನ ಗುರುತಿಲ್ಲದಿದ್ದರೂ ನಿನ್ನ ಬಳಿಗೆ ಬಂದೆ. ಈಗ ರಾಜಧಾನಿಗೆ ಹೊರಡು. ಸ್ವಲ್ಪ ಕಾಲವಾದ ಮೇಲೆ ಸೈನ್ಯವನ್ನು ಜತೆಗೊಳಿಸಿ ಪಾಟಿಲೀಪುರವನ್ನು ಮುತ್ತುವೆಯಂತೆ. ನೀನಿನ್ನೂ ಹುಡುಗ. ವಿವೇಕಿಗಳಾದ ಹಿರಿಯರನ್ನು ಮಂತ್ರಿಗಳನ್ನಾಗಿ ನೇಮಿಸಿಕೊಂಡು ಕೆಲಸಮಾಡು. ದುಡುಕಬೇಡ. ನಾನು ತಲೆ ಮರೆಸಿಕೊಂಡು ರಾಜಧಾನಿಯನ್ನು ಸೇರುವೆನು. ನಿನಗೆ ಮಂಗಳವಾಗಲಿ.
ತಂದೆ ಸತ್ತ ಸುದ್ದಿಯನ್ನು ಕೇಳಿ ಮಲಯಕೇತುವಿನ ಕಣ್ಣುಗಳು ಹರಿಗೂಡಿದುವು. ರಾಜಕುಮಾರನು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದನು. ಭಾಗುರಾಯಣನು ಅವನನ್ನು ಸಮಾಧಾನಪಡಿಸಿದನು. ದುಃಖ ಸ್ವಲ್ಪ ಹಿಡಿತಕ್ಕೆ ಬರಲು ಮಲಯಕೇತು ‘ಭಾಗುರಾಯಣ, ನೀನೇ ನನ್ನ ಆಪ್ತ, ಮಂತ್ರಿ. ನೀನು ನನ್ನ ಬಳಿಯಲ್ಲೇ ಇರಬೇಕು. ಪಾಟಲೀಪುರಕ್ಕೆ ಹೋಗುವುದು ನಿನಗೆ ತರವಲ್ಲ. ಇದು ನನ್ನ ಆಜ್ಞೆ ‘ ಎಂದು ಅವನನ್ನು ತನ್ನ ಬಳಿ ನಿಲ್ಲುವಂತೆ ಬಲವಂತಪಡಿಸಿದನು. ಈ ವೇಳೆಗೆ ಅವನ ಸೇನೆ ಹೆದರಿಕೆಯಿಂದ ಓಡುತ್ತ ಅವನಲ್ಲಿಗೆ ಬಂತು. ಎಲ್ಲರೂ ಇಳಿಮುಖದಿಂದ ರಾಜಧಾನಿಗೆ ಬಂದರು.
ಮುಂದಿನ ಅಧ್ಯಾಯ: ೨೧. ಕೆಳೆತನ