ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 22: ಆಶ್ರಯ

೨೨. ಆಶ್ರಯ

ಇತ್ತ ಪಾಟಲೀಪುರದಲ್ಲಿ ಚಾಣಕ್ಯನು ರಾಕ್ಷಸನ ಸಂಗ್ರಹಕ್ಕಾಗಿ ಎಲ್ಲ ಪ್ರಯತ್ನಗಳನ್ನೂ ನಡೆಸಿದನು. ಅಮಾತ್ಯನು ಮಲಯಕೇತುವಿನ ಆಶ್ರಯವನ್ನು ಸಂಪಾದಿಸಿದುದು ಸಮಿದ್ದಾರ್ಥಕನೆಂಬ ಗೂಢಚಾರನಿಂದ ಚಾಣಕ್ಯನಿಗೆ ತಿಳಿಯಿತು. ಅವನು ತನ್ನ ಮನಸ್ಸಿನಲ್ಲಿ ‘ಚಂದ್ರಗುಪ್ತನ ಮೇಲೆ ಹಗೆ ಸಾಧಿಸಲು ರಾಕ್ಷಸನು ಮಲಯಕೇತುನಿನೊಡನೆ ನಮ್ಮ ಮೇಲೆ ದಂಡೆತ್ತಿಬರಲಿ. ಅವನು ಪಾಟಲೀಪುರದ ಹತ್ತಿರಕ್ಕೆ ಬಂದೊಡನೆಯೇ ಆನೆಯನ್ನು ಉಪಾಯದಿಂದ ಹಿಡಿತರುವಂತೆ ಹಿಡಿ ತರುವೆನು ಎಂದುಕೊಂಡು ರಾಕ್ಷಸನ ಬಳಿ ಎಚ್ಚರಿಕೆಯಿಂದಿರುವಂತೆ ಗೂಢಚಾರನಿಗೆ ಹೇಳಿ ಕಳುಹಿಸಿದನು.

ಮಾರನೆಯದಿನ ಚಾಣಕ್ಯನು ರಾಜಸಭೆಯಲ್ಲಿ ಕುಳಿತಿರಲು, ದೂತರು ಬಂದು ವೇತನಕ್ಕಾಗಿ ಭಾಗುರಾಯಣಾದಿಗಳು ಇನ್ನೂ ರಾಜ ಸನ್ನಿಧಿಗೆ ಬಂದಿಲ್ಲವೆಂಬ ಅಂಶವನ್ನು ಅವನಲ್ಲಿ ಅರಿಕೆಮಾಡಿದರು.

ಆ ಮಾತನ್ನು ಕೇಳಿ ಚಾಣಕ್ಯನು ಸೇನಾಪತಿಗಳ ಮೇಲೆ ಕೋಪವನ್ನು ನಟಿಸಿ, ಬಳಿಯಿದ್ದ ಅಧಿಕಾರಿಗಳಿಗೆ ‘ಭದ್ರಭಟಾದಿಗಳಿಗೆ ಚಂದ್ರಗುಪ್ತನ ಏಳಿಗೆಯನ್ನು ನೋಡಿ ಸಹಿಸದೆಂದು ತೋರುತ್ತದೆ. ಅವರು ಮನಸ್ಸಿನಲ್ಲಿ ಏನನ್ನು ಯೋಚಿಸಿರುವರೋ ದೇವರೇ ಬಲ್ಲ! ನಮ್ಮನ್ನು ಕಂಡರೆ ಅವರಿಗೆ ಉದಾಸೀನಭಾವ. ಈ ಅಧಿಕಾರಿಗಳು ಕೊಬ್ಬಿ ಹೋಗಿದ್ದಾರೆ. ಇವರನ್ನು ಅಧಿಕಾರದಿಂದ ತೆಗೆದುಹಾಕಿದೆ. ಇವರಿಂದಾಗುವ ಕೆಲಸವನ್ನು ನಾವೇ ನೋಡಿಕೊಳ್ಳುತ್ತೇವೆ. ನಮ್ಮ ನಗರದಿಂದ ಇವರನ್ನು ಈಗಲೇ ಹೊರಡಿಸಿ. ಇಲ್ಲವಾದರೆ ಸೇನಾಪತಿಗಳು ರಾಜನ ಕೋಪಕ್ಕೆ ಗುರಿಯಾಗಬೇಕಾದೀತು. ನಮ್ಮ ಆಜ್ಞೆಯನ್ನು ಅವರಿಗೆ ಕೂಡಲೇ ತಿಳಿಸಿ’ ಎಂದು ಅಪ್ಪಣೆಮಾಡಿದನು. ಅಧಿಕಾರಿಗಳು ಹೊರಟುಹೋದ ಮೇಲೆ ಸಿದ್ಧಾರ್ಥಕನನ್ನು ಕರೆದು, ‘ಭದ್ರಭಟಾದಿಗಳು ಮಲಯಕೇತುವಿನಲ್ಲಿ ಹೋಗಿ ಆಶ್ರಯ ಪಡೆಯಲಿ. ಸೇನೆಯೊಡನೆ ಅವರು ಅಲ್ಲಿದ್ದು ಚಂದ್ರಗುಪ್ತನ ಕಾರ್ಯವನ್ನು ಸಾಧಿಸಲಿ. ಸೇನಾಪತಿಗಳಿಗೆ ಈ ಲೇಖನವನ್ನೂ ಬೇಕಾದಷ್ಟು ಧನವನ್ನೂ ಕೊಟ್ಟು ನಮ್ಮ ಅಪ್ಪಣೆಯನ್ನು ಅವರಿಗೆ ತಿಳಿಸು” ಎಂದು ಚಾಣಕ್ಯನು ಹೇಳಿ ಕಳುಹಿಸಿದನು. ರಾಜಾಜ್ಞೆಗೆ ತಲೆಬಾಗಿ ಭದ್ರಭಟಾದಿಗಳು ತಮ್ಮ ಸೇನೆಗಳೊಡನೆ ನಗರವನ್ನು ಬಿಟ್ಟರು.

ಕೆಲವು ದಿನಗಳಾದ ಮೇಲೆ ಭದ್ರಭಟಾದಿಗಳು ಮಲಯಕೇತುವಿನ ರಾಜಧಾನಿಗೆ ಬಂದು ಶೇಖರ ಭಾಗುರಾಯಣಾದಿಗಳನ್ನು ಕಾಣಿಸಿಕೊಂಡರು. ಅವರ ಒಪ್ಪಿಗೆಯನ್ನು ಪಡೆದು ಮಾರನೆಯ ದಿನ ಮಲಯಕೇತುವನ್ನು ಕಂಡು ಕಾಣಿಕೆಕೊಟ್ಟು ಚಂದ್ರಗುಪ್ತನು ತಮ್ಮನ್ನು ಅಧಿಕಾರದಿಂದ ತೆಗೆದುಹಾಕಿದ ಬಗೆಯನ್ನು ಆತನಿಗೆ ವಿವರಿಸಿದರು. ಇವರ ಮಾತನ್ನು ಕೇಳಿ ರಾಜಕುಮಾರನು ಭಾಗುರಾಯಣನ ಮುಖವನ್ನು ನೋಡಲು ಅವನು ‘ಇವರ ಹೇಳಿಕೆ ನಿಜವಾದರೆ ಚಂದ್ರಗುಪ್ತನು ನಮ್ಮ ಕೈವಶನಾದನೆಂದೇ ಹೇಳಬೇಕು. ಇವರಾಗಿಯೇ ನಮ್ಮಲ್ಲಿಗೆ ಬಂದಿರುವ ಕಾರಣ ಇವರಿಂದ ನಮ್ಮ ಕಾರ್ಯಕ್ಕೆ ಬಹುಮಟ್ಟಿನ ಅನುಕೂಲವಾಯಿತು. ಇವರೆಲ್ಲ ಶೂರರು’ ಎಂದು ನುಡಿದನು. ಭಾಗುರಾಯಣನ ಮಾತು ಮಲಯಕೇತುನಿಗೆ ಸೋಜಿಗವೆನಿಸಿತು. ಹಿಂದೆ ಭದ್ರ ಭಟಾದಿಗಳು ಚಂದ್ರಗುಪ್ತನಿಗೆ ಬರೆದುಕೊಟ್ಟ ಕಾಗದವನ್ನು ರಾಜಕುಮಾರನು ಸೇನಾಪತಿಗೆ ಕೊಡಲು ಭಾಗುರಾಯಣನು ಅದನ್ನು ನೋಡಿಕೊಂಡು, ‘ಕುಮಾರ, ಇದು ನಾವು ಚಂದ್ರಗುಪ್ತನಿಗೆ ಬರೆದು. ಕೊಟ್ಟ ಒಪ್ಪಿಗೆಯ ಪತ್ರ, ನಿಜ ಆದರೆ ಧರ್ಮಕಾರ್ಯಕ್ಕಾಗಿ ನಾವು ಬರೆದುಕೊಟ್ಟ ಈ ಲೇಖನವನ್ನು ಚಂದ್ರಗುಪ್ತನು ರಾಜಕಾರ್ಯಕ್ಕಾಗಿ ಉಪಯೋಗಿಸಿಕೊಂಡಿದ್ದಾನೆ. ಕತ್ತರಿಸಿರುವ ಇದರ ಭಾಗವೇ ನನ್ನ ಮಾತಿಗೆ ಸಾಕ್ಷಿ, ಇದು ಚಾಣಕ್ಯನ ತಂತ್ರ’ ಎಂದು ಮಲಯಸಕೇತುವಿಗೆ ಸಮಾಧಾನ ಹೇಳಿದನು. ಚಾಣಕ್ಯನು ಮಹಾಕಪಟ. ಅವನು ಏನನ್ನು ತಾನೇ ಮಾಡಿರಲಾರ? ಎಂದುಕೊಂಡು ಮಲಯಕೇತು ಸೇನಾಪತಿಗಳಿಗೆ ಆಶ್ರಯಕೊಡಲು ಒಪ್ಪಿದನು.

ಈ ಸಮಯಕ್ಕೆ ಸರಿಯಾಗಿ ರಾಕ್ಷಸನು ರಾಜಸಭೆಗೆ ಬಂದನು. ಸೇನಾಪತಿಗಳು ಅಮಾತ್ಯನ ಬರುವಿಕೆಯನ್ನೇ ಗಮನಿಸದೆ, ಮಲಯಕೇತುವಿನ ಬಳಿ ನಿಂತಿದ್ದರು. ರಾಕ್ಷಸನು ತನ್ನ ಮನಸ್ಸಿನಲ್ಲಿ ಭದ್ರಭಟಾದಿಗಳು ಇಲ್ಲಿಗೆ ಬರಲು ಕಾರಣವೇನು? ಚಂದ್ರಗುಪ್ತನಲ್ಲಿ ಇವರಿಗೆ ನಿಜವಾದ ಕೋಪವುಂಟೇ? ಇಲ್ಲವೇ ಇದು ಚಾಣಕ್ಯನ ಮತ್ತೊಂದು ಕಪಟವೋ ತಿಳಿಯದು. ಇವರನ್ನು ಇಲ್ಲಿಂದ ಕಳುಹಿಸಕೂಡದು. ಏಕೆಂದರೆ ಇವರು ಇನ್ನೊಬ್ಬ ರಾಜನನ್ನು ಆಶ್ರಯಿಸಿದರೆ ನಮಗೆ ನಷ್ಟ. ಚಂದ್ರಗುಪ್ತನನ್ನೇ ಮತ್ತೆ ಕೂಡಿಕೊಂಡರೆ ಇನ್ನೂ ಕಷ್ಟ. ಅವರು ನನ್ನನ್ನು ಲಕ್ಷಿಸದೆ ಶೇಖರ ಭಾಗುರಾಯಣರನ್ನು ಆಶ್ರಯಿಸಿದ್ದಾರೆ. ಆದರೇನಂತೆ? ಹೆಚ್ಚಾಗಿ ಸ್ವಾತಂತ್ರವನ್ನು ಕೊಡದೆ ಇವರನ್ನು ಇಲ್ಲಿಯೇ ಇಟ್ಟುಕೊಳ್ಳುತ್ತೇನೆ’ ಎಂದು ಯೋಚಿಸುತ್ತಿದ್ದನು, ಅಷ್ಟರಲ್ಲೇ ಮಲಯಕೇತು ಅಮಾತ್ಯನನ್ನು ಸೇನಾಪತಿಗಳ ವಿಷಯವಾಗಿ ಆತನ ಅಭಿಪ್ರಾಯವೇನೆಂದು ಕೇಳಲು ರಾಕ್ಷಸನು ‘ಕುಮಾರ, ಈ ಸೇನಾಪತಿಗಳು ಶೂರರು. ಇವರಿಂದ ನಮ್ಮ ಕಾರ್ಯಕ್ಕೆ ಅನುಕೂಲವಾಗುತ್ತದೆ. ಇವರಿಗೆ ತಕ್ಕ ಕೆಲಸಗಳನ್ನು ನಾನೇ ನಿಯಮಿಸುತ್ತೇನೆ’ ಎಂದನು. ಮಲಯಕೇತು ಅಮಾತ್ಯನ ಮಾತನ್ನು ಒಪ್ಪಿದನು.

ಅವರಿಗೆ ಅನುಕೂಲವಲ್ಲದ ಕಾರ್ಯಗಳಲ್ಲಿ ಸೇನಾಪತಿಗಳನ್ನು ರಾಕ್ಷಸನು ನಿಯಮಿಸಲು, ಮುಂದಿನ ಕಾರ್ಯಸಾಧನೆಗಾಗಿ ಸೇನಾಪತಿಗಳು ಮನವಲ್ಲದ ಮನಸ್ಸಿನಿಂದ ಕಾಲಕಳೆಯುತ್ತ ಮಲಯಕೇತುವಿನ ಬಳಿ ಇದ್ದರು.


ಮುಂದಿನ ಅಧ್ಯಾಯ: ೨೩. ರಾಕ್ಷಸನ ಮುದ್ರಿಕೆ


Leave a Reply

Your email address will not be published. Required fields are marked *