ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 23: ರಾಕ್ಷಸನ ಮುದ್ರಿಕೆ
೨೩. ರಾಕ್ಷಸನ ಮುದ್ರಿಕೆ
ರಾಜಧಾನಿಯಲ್ಲಿ ಅಮಾತ್ಯರಾಕ್ಷಸನ ಮನೆಯ ಜನರಿರುವ ಸ್ಥಳವನ್ನು ತಿಳಿದುಬಂದು ಹೇಳುವಂತೆ ನಿಯಮಿತರಾಗಿದ್ದ ಗೂಢಚಾರರಲ್ಲಿ ಮರಾಳನೆಂಬುವನು ಚಿತ್ರಪಟಗಳನ್ನು ತನ್ನೊಡನೆ ತೆಗೆದುಕೊಂಡು ತನ್ನ ಕಾರ್ಯಕ್ಕೆ ಉಚಿತವಾದ ವೇಷವನ್ನು ಧರಿಸಿ ಗಾನಮಾಡುತ್ತ ಒಂದು ದಿನ ಬೀದಿಯಲ್ಲಿ ಬರುತ್ತಿದ್ದನು. ಅಲ್ಲಲ್ಲಿ ಗುಂಪುಕೂಡಿ ಚಿತ್ರ ಪಟಗಳನ್ನು ನೋಡುವುದಕ್ಕೆ ಬಂದ ಜನರಿಗೆ ಅವುಗಳನ್ನು ತೋರಿಸುತ್ತ ” ಇದು ಸ್ವರ್ಗ; ಪುಣ್ಯವಂತರ ನೆಲೆವೀಡು. ಧರ್ಮಮೂರ್ತಿ ಸ್ವರ್ಗದ ಅಧಿಪತಿ. ಇದು ನರಕ; ಪಾಪಿಗಳನ್ನು ದಂಡಿಸುವುದು ಇಲ್ಲೇ. ಯಮಮೂರ್ತಿ ನರಕದ ನಿಯಾಮಕ. ಈ ಮಾತು ಸತ್ಯ. ಆದ್ದರಿಂದ ನೀವೆಲ್ಲರೂ ಸತ್ಯವನ್ನು ನುಡಿಯಿರಿ; ಧರ್ಮವನ್ನು ಆಚರಿಸಿ’ ಎಂದು. ಬೋಧಿಸುತ್ತಿದ್ದನು. ಹೀಗೆ ಬೋಧಿಸುತ್ತ ಪ್ರತಿಮನೆಯನ್ನೂ ಹೊಕ್ಕು ತನ್ನ ಗಾನದಿಂದ ಜನರನ್ನು ತೃಪ್ತಿಪಡಿಸುತ್ತ ಮನೆಯವರು ಕೊಟ್ಟುದನ್ನು ಸ್ಪೀಕರಿಸುತ್ತಿದ್ದನು. ಕೊನೆಗೆ ಅವನು ಚಂದನದಾಸನೆಂಬ ರತ್ನಪಡಿ ವ್ಯಾಪಾರಿಯ ಮನೆಗೆ ಬಂದು ಅಲ್ಲಿಯೂ ಮನೆಯವರಿಗೆ ಚಿತ್ರಪಟಗಳನ್ನು ತೋರಿಸಿ, ಗಾನದಿಂದ ಅವರನ್ನು ಸಂತೋಷಪಡಿಸಿ ಅಲ್ಲಿನ ವಿದ್ಯಮಾನವನ್ನು ಚೆನ್ನಾಗಿ ಸಂಗ್ರಹಿಸಿಕೊಂಡು ಚಾಣಕ್ಯನ ಆಶ್ರಮಕ್ಕೆ ಬಂದನು.
ಚಾಣಕ್ಯನ ಆಶ್ರಮಕ್ಕೆ ಬಂದ ಮರಾಳನು ಬಾಗಿಲಲ್ಲಿ ನಿಂತಿದ್ದ ಶಿಷ್ಯನನ್ನು ನೋಡಿ ‘ಅಯ್ಯಾ ಬ್ರಾಹ್ಮಣ, ಬ್ರಹ್ಮಲೋಕದಲ್ಲಿರುವ ಮರಾಳಪಕ್ಷಿಯ ಭಾವಚಿತ್ರ ನನ್ನಲ್ಲಿ ಉಂಟು. ಇದನ್ನು ನೋಡಿ ಇದರ ಅಭಿಪ್ರಾಯವನ್ನು ತಿಳಿದು ಹೇಳುವ ಪ್ರಾಜ್ಞರು ಈ ಆಶ್ರಮದಲ್ಲಿ ಉಂಟೇ?’ ಎಂದನು.
ಶಿಷ್ಯ– ಅಯ್ಯಾ ಚಿತ್ರಪಟಧಾರಿ, ಈ ವಿಷಯವನ್ನು ನಮ್ಮ ಗುರುಗಳಲ್ಲಿ ಬಿನ್ನೈಸಿಬರುವೆನು. ಅಲ್ಲಿಯವರೆಗೆ ಸ್ವಲ್ಪ ನೀನು ಇಲ್ಲಿಯೇ ಇರು.
ಹೀಗೆಂದು ಹೇಳಿ ಶಿಷ್ಯನು ಆಶ್ರಮದ ಒಳಹೊಕ್ಕು ಈ ವಿಷಯವನ್ನು ಚಾಣಕ್ಯನಿಗೆ ತಿಳಿಸಿದನು. ಚಾಣಕ್ಯನು ಮರಾಳನ ಮಾತಿನ ಭಾವವನ್ನು ಗ್ರಹಿಸಿ ಅವನು ತನ್ನ ಗೂಢಚಾರನಾಗಿರಬೇಕೆಂದು ಊಹಿಸಿ ಅವನನ್ನು ಒಳಕ್ಕೆ ಕರೆಸಿಕೊಂಡನು. ಮರಾಳನು ಒಳಕ್ಕೆ ಬರಲು ಚಾಣಕ್ಯನು ಅವನನ್ನು ನೋಡಿ ಈ ರೀತಿ ಹೇಳಿದನು: “ಅಯ್ಯಾ ಮರಾಳ, ಇಷ್ಟು ದಿನಗಳವರೆಗೆ ನೀನು ಯಾವ ಕಾರ್ಯವನ್ನು ನೋಡುತ್ತಿದ್ದೆ? ಈ ಪಟ್ಟಣದಲ್ಲಿ ಚಂದ್ರಗುಪ್ತನಲ್ಲಿ ಯಾರಿಗೆ ಅನುರಾಗವಿದೆ? ಯಾರಿಗೆ ದ್ವೇಷವುಂಟು? ‘
ಮರಾಳ– ಪೂಜ್ಯರೆ, ಈ ಪಟ್ಟಣದಲ್ಲಿ ಮೂವರು ಹೊರತಾಗಿ ಉಳಿದ ಪ್ರಜೆಗಳೆಲ್ಲರೂ ಚಂದ್ರಗುಪ್ತನಲ್ಲಿ ಅನುರಕ್ತರಾಗಿರುವರು.
ಚಾಣಕ್ಯ- ಆ ಮೂವರು ಯಾರು?
ಮರಾಳ– ಆರ್ಯರೇ, ರಾಕ್ಷಸನಿಗೆ ಮಿತ್ರನಾಗಿ ಚಂದ್ರಗುಪ್ತನ ಅಭ್ಯುದಯವನ್ನು ನೋಡಿ ಸಹಿಸಲಾರದೆ ಹಿಂದೆಮುಂದೆ ಆಡಿಕೊಳ್ಳುತ್ತಿರುವ ಕ್ಷಪಣಕ ಜೀವಸಿದ್ಧಿಯೊಬ್ಬ. ಅಮಾತ್ಯರಾಕ್ಷಸನಿಗೆ ಆಪ್ತ ರಾಯಸದವನಾದ ಶಕಟದಾಸನು ಮತ್ತೊಬ್ಬ. ಇವರಿಬ್ಬರಿಗೂ ಮಿಗಿಲಾಗಿ ರಾಕ್ಷಸನ ಎರಡನೆಯ ಹೃದಯದಂತಿರುವ ರತ್ನಪಡಿ ವ್ಯಾಪಾರಿ ಚಂದನದಾಸ ಮೂರನೆಯವನು. ರಾಕ್ಷಸನು ಈ ನಗರವನ್ನು ಬಿಟ್ಟು ಹೋಗುವಾಗ ತನ್ನ ಹೆಂಡತಿ ಮಕ್ಕಳನ್ನು ಚಂದನದಾಸನ ಮನೆಯಲ್ಲಿ ಬಿಟ್ಟು ಹೋಗಿರುವಂತೆ ಕಾಣುತ್ತದೆ.
ಚಾಣಕ್ಯ– ಈ ವಿಷಯ ನಿನಗೆ ತಿಳಿದ ಬಗೆ ಹೇಗೆ?
ಮರಾಳ- ಪೂಜ್ಯರೇ, ಈ ದಿನ ನಾನು ಚಿತ್ರಪಟಗಳನ್ನು ತೆಗೆದುಕೊಂಡು ಗಾನಮಾಡುತ್ತ, ಪ್ರತಿಮನೆಯಲ್ಲಿಯೂ ಈ ಪಟಗಳನ್ನು ತೋರಿಸುತ್ತ ಮನೆಯವರು ಕೊಟ್ಟುದನ್ನು ಸ್ವೀಕರಿಸುತ್ತ ಚಂದನದಾಸನ ಮನೆಗೆ ಬಂದನು. ಅಲ್ಲಿ ಚಿತ್ರಪಟಗಳನ್ನು ತೋರಿಸುತ್ತಿರುವಾಗ ಅಮಾತ್ಯರಾಕ್ಷಸನ ಹೋಲಿಕೆಯುಳ್ಳ ರೂಪವಂತನಾದ ಐದುವರುಷದ ಒಬ್ಬ ಹುಡುಗನು ನನ್ನ ಸಂಗೀತವನ್ನು ಕೇಳಿ ಹುಡುಗತನದ ಚಾಪಲ್ಯಕ್ಕೆ ಒಳಗಾಗಿ ಪಟಗಳನ್ನು ನೋಡಲು ಒಳಗಿನಿಂದ ಓಡಿಬಂದು ನನ್ನ ಬಳಿ ನಿಂತನು. ಆ ಮಗುವನ್ನು ನೋಡಿ ನನ್ನ ಮನಸ್ಸಿಗೆ ಏನೋ ಸಂಶಯವುಂಟಾಗಿ ಆ ಮಗುವನ್ನೇ ಚೆನ್ನಾಗಿ ನೋಡುತ್ತಿದ್ದೆ. ಆ ಸಮಯದಲ್ಲಿ ಆ ಹುಡುಗನು ಓಡಿಬಂದ ಒಳಮನೆಯಿಂದ ಹೆಂಗಸೊಬ್ಬಳು ಹೆದರಿದ ಧ್ವನಿಯಿಂದ ಒಳಗೆ ಬರುವಂತೆ ಮಗುವನ್ನು ಕರೆಯತೊಡಗಿದಳು. ಇಲ್ಲಿ ಏನೋ ವಿಶೇಷವಿರಬೇಕೆಂದು ನಾನು ನಂದರ ಭಾವಚಿತ್ರಗಳನ್ನು ಹರಡಿಕೊಂಡು ಅಲ್ಲಿ ನೆರೆದಿದ್ದವರಿಗೆ ಅವುಗಳನ್ನು ತೋರಿ ಸುತ್ತ ನಡುನಡುವೆ ಅಮಾತ್ಯರಾಕ್ಷಸನ ಭಾವಚಿತ್ರವನ್ನು ತೆಗೆದು ತೋರಿಸುತ್ತ ಅವನ ಗುಣಗಾನವನ್ನು ಮಾಡುತ್ತಿದ್ದೆನು. ಆಗ ಆ ಹೆಂಗಸು ‘ಒಳಗಡೆ ಬಾಗಿಲ ಬಳಿ ಬಂದು ನಿಂತು ಸನ್ನೆಮಾಡಿ ಅನೇಕ ಬಾರಿ ಕರೆದರೂ ಮಗು ಒಳಗೆ ಹೋಗದೆ ಪಟದ ಬಳಿಯಲ್ಲೇ ನಿಂತಿತ್ತು. ಆಗ ಆಕೆ ಬೇಗ ಬಂದು ಮಗುವನ್ನು ಗದರಿಸಿ ಅದರ ಭುಜವನ್ನು ಹಿಡಿದೆಳೆದರೂ ಮಗು ಆ ಸ್ಥಳವನ್ನು ಬಿಟ್ಟು ಕದಲಲಿಲ್ಲ. ಸಮಿಾಪದಲ್ಲೇ ಇದ್ದ ನಂದರ ಮತ್ತು ಅಮಾತ್ಯರ ಭಾವಚಿತ್ರಗಳನ್ನು ನೋಡಿ ಆಕೆ ಕಣ್ಣೀರು ತುಂಬಿದಳು. ಮುತ್ತಿನಂತೆ ಬೀಳುತ್ತಿದ್ದ ಕಂಬನಿಗಳನ್ನು ಸೆರಗಿನಿಂದೊರಸಿಕೊಳ್ಳುತ್ತ, ಮಗುವನ್ನು ಒಂದು ಕೈಯಿಂದ ಬಲವಂತವಾಗಿ ಸೆಳೆದುಕೊಂಡು ಹೋಗುತ್ತಿರಲು ಆಕೆಯ ಕೈಯಲ್ಲಿ ಪುರುಷನು ಧರಿಸತಕ್ಕ, ಅಕ್ಷರಗಳಿಂದ ಕೂಡಿದ ಅಷ್ಟಕೋಣಾಕಾರದ ಮುದ್ರಿಕೆಯೊಂದನ್ನು ಕಂಡೆನು. ಪೂರ್ಣಗರ್ಭವನ್ನು ಧರಿಸಿದ ಆಕೆ ಮೆಲ್ಲನೆ ಒಳಕ್ಕೆ ತೆರಳಿದುದರಿಂದ ಅವಳ ಸೌಂದರ್ಯಲಕ್ಷಣಗಳು ನನಗೆ ಚೆನ್ನಾಗಿ ತಿಳಿದು ಬಂದುವು. ಇದೆಲ್ಲವನ್ನೂ ನೋಡಿದರೆ ರಾಕ್ಷಸನ ಹೆಂಡತಿ ಮಕ್ಕಳು ಚಂದನದಾಸನ ಮನೆಯಲ್ಲಿ ಮರೆಯಾಗಿರುವಂತೆ ತೋರುತ್ತದೆ.
ಚಾಣಕ್ಯ (ಮನಸ್ಸಿನಲ್ಲಿ) ಇವನು ಹೇಳಿದುದೆಲ್ಲ ಸರಿಯೆಂದೇ ತೋರುತ್ತದೆ. ಆ ಹೆಂಗಸಿನ ಕೈಯಲ್ಲಿರುವ ಮುದ್ರಿಕೆ ರಾಕ್ಷಸನದಾಗಿರಬಹುದು. ಅದು ನಮ್ಮ ಕೈಸೇರಿದರೆ ಅನೇಕ ಕಾರ್ಯಗಳಿಗೆ ಉಪಯೋಗವಾಗಬಹುದು. (ಪ್ರಕಾಶವಾಗಿ) ಎಲೈ ಮರಾಳ ನೀನು ಹೇಳಿದ ಅಭಿಪ್ರಾಯ ನಮ್ಮ ಮನಸ್ಸಿಗೆ ಬಂತು. ಚಂದ್ರಗುಪ್ತನ ಏಳಿಗೆಯಲ್ಲಿ ಅಸಹನೆಯುಳ್ಳ ಕ್ಷಪಣಕನೇ ಮುಂತಾದವರಿಗೆ ತಕ್ಕುದನ್ನು ಮಾಡಿಸುವೆವು. ನೀನು ನಿನ್ನ ಕೆಲಸದಲ್ಲಿ ಜಾಗರೂಕನಾಗಿರು.
ಮರಾಳನು ಹೊರಟುಹೋದ ಮೇಲೆ ಚಾಣಕ್ಕನು ರಾಕ್ಷಸನ ಮುದ್ರಿಕೆಯನ್ನು ಸಂಗ್ರಹಿಸುವ ಉಪಾಯವನ್ನು ನೆನೆದು ಸಿದ್ಧಾರ್ಥಕನನ್ನು ತನ್ನಲ್ಲಿಗೆ ಕರೆಸಿಕೊಂಡನು.
ತನ್ನಲ್ಲಿಗೆ ಬಂದ ಸಿದ್ಧಾರ್ಥಕನಿಗೆ ಚಾಣಕ್ಯನು ‘ಸಿಧ್ಧಾರ್ಥಕ, ಚಂದನದಾಸನೆಂಬ ವರ್ತಕನ ಮನೆಯಲ್ಲಿ ರಾಕ್ಷಸನ ಹೆಂಡತಿ ಮಕ್ಕಳಿದ್ದಾರೆ. ಅಮಾತ್ಯನ ಹೆಂಡತಿಯ ಕೈಯಲ್ಲಿ ಆತನ ಮುದ್ರೆಯುಂಗುರವಿದೆ. ಅದನ್ನು ಈ ರೀತಿಯಲ್ಲಿ ತರಿಸು’ ಎಂದು ಹೇಳಿ ಅವನ ಕಿವಿಯಲ್ಲಿ ಗುಟ್ಟಾಗಿ ಏನನ್ನೋ ಹೇಳಿದನು. ಆ ಬಳಿಕ ರಾಯಸದವರ ಬಳಿಯಲ್ಲಿದ್ದ ರಾಕ್ಷಸನ ಮುದ್ರೆಯ ಕಾಗದವನ್ನು ತರಿಸಿ ಅದನ್ನು ಸಿದ್ಧಾರ್ಥಕನ ಕೈಯಲ್ಲಿ ಕೊಟ್ಟು ಕಳುಹಿಸಿದನು.
“ಚಾಣಕ್ಯನ ಅಪ್ಪಣೆಯಂತೆ ಸಿಧ್ಧಾರ್ಥಕನು ಆ ಕಾಗದದಲ್ಲಿ ಒತ್ತಿದ ಮುದ್ರಿಕೆಯಂತೆ ಬೇರೊಂದು ಸ್ವಮುದ್ರಿಕೆಯನ್ನು ಮಾಡಿಸಿ, ಹೇಳಿದೆ ಕೆಲಸವನ್ನು ಮಾಡುವುದರಲ್ಲಿ ನಿಪುಣೆಯಾದ ಓರ್ವ ಸೂಲಗಿತ್ತಿಯನ್ನು ತನ್ನಲ್ಲಿಗೆ ಕರೆಸಿಕೊಂಡು ಬಹುಮಾನಪೂರ್ವಕವಾಗಿ ಅವಳ ಕೈಯಲ್ಲಿ ಆ ಮುದ್ರಿಕೆಯನ್ನು ಕೊಟ್ಟು, ಅಮಾತ್ಯರಾಕ್ಷಸನ ಹೆಂಡತಿಯ ಬಳಿಯಿರುವ ರಾಕ್ಷಸನ ಮುದ್ರಿಕೆಯನ್ನು ಈ ರೀತಿಯಿಂದ ತೆಗೆದುಕೊಂಡು ಬಾ’ ಎಂದು ಹೇಳಿ ಅವಳನ್ನು ಕಳುಹಿಸಿಕೊಟ್ಟನು. ಆ ಬಳಿಕ ನಗರದ ತಳವಾರನನ್ನು ಬರಮಾಡಿಕೊಂಡು ‘ನೀನು ಈ ದಿನ ಚಾಣಕ್ಯರ ಮುಂದೆ ಹೇಳುವ ವರ್ತಮಾನದೊಡನೆ ಈ ವಿಷಯವನ್ನು ಬಿನ್ನೈಸು’ ಎಂದು ಅವನಿಗೊಂದು ವಿಷಯವನ್ನು ಹೇಳಿ ಅವನನ್ನು ಬೀಳ್ಕೊಟ್ಟನು.
ಆ ದಿನ ಚಾಣಕ್ಯನು ಆಸ್ಥಾನದಲ್ಲಿ ಕುಳಿತಿದ್ದಾಗ, ತಳವಾರನು ಬಂದು ಎಂದಿನಂತೆ ದಿನದ ಸಮಾಚಾರವನ್ನು ತಿಳಿಸಿದ ಮೇಲೆ “ಪೂಜ್ಯರೇ, ಈ ದಿನ ಬ್ರಾಹ್ಮಣ ಸ್ತ್ರೀಯೊಬ್ಬಳ ಹೆರಿಗೆಯ ಸಮಯದಲ್ಲಿ ಓರ್ವ ಸೂಲಗಿತ್ತಿ ಅದೇನು ಹೊಟ್ಟೆಯುರಿಯಿಂದಲೋ ತಿಳಿಯದು– ಮಗುವನ್ನು ಕೊಂದು, ಮನೆಯವರನ್ನು ಮೋಸಗೊಳಿಸಿ ಓಡಿ ಹೋದಳು ‘ ಎಂದು ಬಿನ್ನೈಸಿದನು. ತಳವಾರನ ಮಾತನ್ನು ಕೇಳಿ ಚಾಣಕ್ಯನು ಕೋಪಗೊಂಡವನಂತೆ ನಟಿಸಿ “ಆಹಾ! ಈ ಪಟ್ಟಣದಲ್ಲಿ ಇಂಥ ಅಕಾರ್ಯ ಎಷ್ಟು ನಡೆದಿರುವುದೋ! ತಿಳಿಯದು. ಈ ನಗರದ ಸೂಲಗಿತ್ತಿಯರನ್ನೆಲ್ಲ ಹಿಡಿದುತಂದು, ವಿಚಾರಿಸಿ, ದಂಡಿಸಿ, ಮುಂದೆ ಈ ತೆರನಾದ ಅಕಾರ್ಯ ನಡೆಯದಂತೆ ನೋಡಿಕೊಳ್ಳಿ ‘ ಎಂದು ಅಪ್ಪಣೆ ಮಾಡಿದನು.
ಚಾಣಕ್ಯನ ಅಪ್ಪಣೆಯಂತೆ ತಳವಾರರು ಸೂಲಗಿತ್ತಿಯರನ್ನು ಬೀದಿ ಬೀದಿಗಳಲ್ಲಿ ಹುಡುಕಿ, ಹಿಡಿದುಕೊಂಡು ಹೋಗಲು ಮೊದಲು ಮಾಡಿದರು. ಆ ಸಮಯದಲ್ಲಿ ಸಿದ್ದಾರ್ಥಕನಿಂದ ನಿಯಮಿತಳಾದ ಸೂಲಗಿತ್ತಿ ಬೇಗ ಹೋಗಿ ಚಂದನದಾಸನ ನಡುಮನೆಯ ಬಾಗಿಲ ಹಿಂದೆ ಹೆದರಿಕೆಯಿಂದ ನಡುಗುವವಳಂತೆ ನಿಂತುಕೊಂಡಳು. ಅವಳನ್ನು ನೋಡಿ ಆ ಮನೆಯ ಜನರು ‘ನೀನು ಯಾರು? ಇಲ್ಲಿಗೇಕೆ ಬಂದೆ?’ ಎಂದು ಪ್ರಶ್ನಿಸಿದರು. ಆಕೆ ಮನೆಯವರ ಕಾಲನ್ನು ಹಿಡಿದುಕೊಂಡು ‘ತಾಯಂದಿರಾ ಅರಮನೆಯವರು ಈ ನಗರದ ಸೂಲಗಿತ್ತಿಯರನ್ನು ಹಿಡಿದು ದೇಶಾಂತರಕ್ಕೆ ಕಳುಹಿಸುತ್ತಿದ್ದಾರೆ. ನಾನು ನಾಲ್ಕು ಮಕ್ಕಳುಳ್ಳವಳು. ಈ ಅವಾಂತರ ಮುಗಿಯುವವರೆಗೆ ನಾಲ್ಕು ದಿನ ಮರೆಯಾಗಿ ನಿಮ್ಮಲ್ಲಿಯೇ ಇರುವೆನು. ದಯವಿಟ್ಟು ಇದಕ್ಕೆ ಅವಕಾಶ ಕೊಡಿ. ಇದರಿಂದ ನಿಮಗೆ ಪುಣ್ಯಬರುವುದು’ ಎಂದು ಬೇಡಿಕೊಂಡಳು. ಸೂಲಗಿತ್ತಿಯ ಮಾತನ್ನು ಕೇಳಿ ಚಂದನದಾಸನ ಹೆಂಡತಿ ನಮ್ಮ ಅಮಾತ್ಯರ ಹೆಂಡತಿಗೆ ಹೆರಿಗೆಯ ಕಾಲ ಹತ್ತಿರವಾಗಿದೆಯಷ್ಟೆ. ಆ ಸಮಯಕ್ಕೆ ಸೂಲಗಿತ್ತಿಯರು ದೊರಕುವರೋ ಇಲ್ಲವೋ, ಬಲ್ಲವರಾರು? ಆದ್ದರಿಂದ ಇವಳನ್ನು ಇಲ್ಲಿಯೇ ಇರಿಸಿಕೊಳ್ಳಬೇಕು’ ಎಂದು ಯೋಚಿಸಿ ಅವಳಿಗೆ ‘ನಿನ್ನಿಂದ ನಮಗೆ ಕೆಲಸವುಂಟು. ನೀನು ಬೇರೆ ಕಡೆಗೆ ಹೋಗದೆ ನಮ್ಮಲ್ಲಿಯೇ ಇರು’ ಎಂದು ಹೇಳಿದಳು. ಅದಕ್ಕೆ ಸೂಲಗಿತ್ತಿ ” ನಮ್ಮವ್ವ, ನಾನು ಬದುಕಿದೆ. ಇಲ್ಲಿಯೇ ಇರುತ್ತೇನೆ’ ಎಂದು ಚಂದನದಾಸನ ಮನೆಯಲ್ಲೆ ಇದ್ದುಬಿಟ್ಟಳು.
ಹೀಗಿರಲು ಒಂದು ದಿವಸ ರಾಕ್ಷಸನ ಹೆಂಡತಿಗೆ ಹೆರಿಗೆಯ ಸಮಯ ಸಮೀಪಿಸಲು, ಆಗ ಸಿದ್ಧಾರ್ಥಕನಿಂದ ನಿಯಮಿತಳಾಗಿದ್ದ ಸೂಲಗಿತ್ತಿ ರಾಕ್ಷಸನ ಹೆಂಡತಿ ತೆಗೆದಿಟ್ಟಿದ್ದ ವಸ್ತ್ರಾಭರಣಗಳಲ್ಲಿ ರಾಕ್ಷಸನ ಮುದ್ರಿಕೆಯನ್ನು ತೆಗೆದುಕೊಂಡು ಸಿದ್ಧಾರ್ಥಕನು ಕೊಟ್ಟ ಮುದ್ರಿಕೆಯನ್ನು ಅದರ ಸ್ಥಳದಲ್ಲಿಟ್ಟಳು. ಹೆರಿಗೆಯ ಕೆಲಸ ಮುಗಿದ ಮೇಲೆ ಆ ವಸ್ತ್ರಾಭರಣಗಳನ್ನು ರಾಕ್ಷಸನ ಹೆಂಡತಿಗೆ ಒಪ್ಪಿಸಿ ಚಂದನದಾಸನ ಹೆಂಡತಿಯ ಅಪ್ಪಣೆಯನ್ನು ಪಡೆದು ಮನೆಗೆ ಬಂದು ಆ ಮುದ್ರಿಕೆಯನ್ನು ಸಿದ್ಧಾರ್ಥಕನಿಗೆ ಒಪ್ಪಿಸಿದಳು. ಅವನು ಅದನ್ನು ಚಾಣಕ್ಯನಿಗೆ ತಂದುಕೊಡಲು, ರಾಕ್ಷಸನ ಹೆಸರುಳ್ಳ ಪುರಾತನವಾದ ಎಂಟುಮೂಲೆಯ ಆ ಮುದ್ರಿಕೆಯನ್ನು ರಾಕ್ಷಸನದೆಂದೇ ಚಾಣಕ್ಯನು ನಿರ್ಧರಿಸಿದನು. ಆ ಮುದ್ರಿಕೆ ಸಿಕ್ಕಿದುದರಿಂದ ರಾಕ್ಷಸನೇ ಚಂದ್ರಗುಪ್ತನ ಬಳಿಗೆ ಬಂದಂತಾಯಿತೆಂದುಕೊಂಡನು ಚಾಣಕ್ಯ. ಮಲಯಕೇತುವಿನಿಂದ ತಿರಸ್ಕೃತನಾಗಿ ರಾಕ್ಷಸನು ತಮ್ಮಲ್ಲಿಗೆ ಬರುವವರೆಗೂ ಮಾಡತಕ್ಕ ಕಾರ್ಯವನ್ನು ನಿಶ್ಚೈಸಿ, ಯಾರ ಹೆಸರೂ ಇಲ್ಲದ ಒಂದು ಲೇಖನವನ್ನು ಬರೆದು ಸಿದ್ಧಾರ್ಥಕನಿಗೆ ‘ಸಿದ್ಧಾರ್ಥಕ, ಯಾವುದೋ ಒಂದು ಕೆಲಸಕ್ಕಾಗಿ ವೈದಿಕಲಿಪಿಯಲ್ಲಿ ಬರೆದಿರುವ ಈ ಪತ್ರಿಕೆಯನ್ನು ನಿನಗೆ ಪರಿಚಿತನಾದ ಶಕಟದಾಸನ ಅಕ್ಷರದಲ್ಲಿ ಸ್ಫುಟವಾಗಿ ಬರೆಸಿಕೊಂಡು ಬಾ’ ಎಂದು ಹೇಳಿ ಕಳುಹಿಸಿದನು.
ಈ ಲೇಖನವನ್ನು ತೆಗೆದುಕೊಂಡು ಶಕಟದಾಸನಲ್ಲಿಗೆ ಬರುತ್ತ ಸಿದ್ಧಾರ್ಥಕನು ಅದನ್ನು ನೋಡಿಕೊಂಡು ಈ ರೀತಿ ಯೋಚಿಸಿದನು: ‘ಚಾಣಕ್ಯರು ಏನೋ ಮಹತ್ಕಾರ್ಯವನ್ನು ಯೋಚಿಸಿ ಈ ಲೇಖನವನ್ನು ಬರೆದಿದ್ದಾರೆ. ಇದರ ಫಲವನ್ನು ಕಾರ್ಯಾಂತದಲ್ಲೇ ತಿಳಿಯಬೇಕು’. ಶಕಟದಾಸನ ಮನೆಗೆ ಬಂದಮೇಲೆ ಸಿದ್ಧಾರ್ಥಕನು ಅವನೊಡನೆ ಆ ಮಾತು ಈ ಮಾತು ಆಡುತ್ತ ಆಮೇಲೆ ತನ್ನ ಬಳಿಯಿದ್ದ ಕಾಗದವನ್ನು ಕೊಟ್ಟು ಈ ರೀತಿ ಹೇಳಿದನು; ‘ಅಯ್ಯಾ ಶಕಟದಾಸ, ಈ ಪತ್ರದಲ್ಲಿ ಒಂದು ಸೋಜಿಗವುಂಟು. ಇದನ್ನು ಪ್ರಾಕೃತವಾಕ್ಯಗಳಲ್ಲಿ ಬರೆದಿದ್ದರೂ ಇದರ ಅಕ್ಷರಗಳನ್ನು ವ್ಯತ್ಯಾಸಮಾಡಿ ಪ್ರಯೋಗಿಸಿದರೆ ಸಂಸ್ಕೃತಶ್ಲೋಕಗಳಾಗುತ್ತವೆ. ಆ ಶ್ಲೋಕಗಳನ್ನು ಪ್ರತಿಲೋಮವಾಗಿ ಬರೆದರೆ ಚಿತ್ರಬಂಧೆಗಳಾಗುತ್ತವೆ. ಆದ್ದರಿಂದ ಸ್ಫುಟವಾಗಿ ಇದರ ಇನ್ನೊಂದು ಪ್ರತಿಯನ್ನು ಬರೆದುಕೊಡು. ಈ ಪತ್ರ ವೈದಿಕಲಿಪಿಯಲ್ಲಿದೆ. ಒಬ್ಬ ಕವೀಶ್ವರನು ಇದರೆ ಪದ್ಧತಿಯನ್ನು ಹೇಳಿದನು.’ ತನ್ನ ಹೆಂಡತಿಗೆ ಹಿಡಿದ ಪಿಶಾಚಿಯನ್ನು ಬಿಡಿಸಿದಂದಿನಿಂದ ಸಿದ್ಧಾರ್ಥಕನಲ್ಲಿ ತುಂಬ ನಂಬಿಕೆಯನ್ನಿಟ್ಟುಕೊಂಡಿದ್ದ ಶಕಟದಾಸನು ಆ ಲೇಖನದ ಇನ್ನೊಂದು ಪ್ರತಿಯನ್ನು ತನ್ನ ಕೈಯಿಂದಲೇ ಮಾಡಿಕೊಟ್ಟು ಅದರ ಪದ್ದತಿಯನ್ನು ವಿವರಿಸುವಂತೆ ಸಿದ್ದಾರ್ಥಕನನ್ನು ಕೇಳಿದನು. ಸಿದ್ಧಾರ್ಥಕನು ಸ್ವಲ್ಪ ಯೋಚಿಸುತ್ತಿದ್ದವನಂತೆ ನಟಸಿ, ‘ಅಯ್ಯಾ, ಕವೀಶ್ವರನು ಹೇಳಿದ ಕ್ರಮ ಸ್ವಲ್ಪ ಮರೆತುಹೋಗಿದೆ. ಇದನ್ನು ಇನ್ನೊಂದು ವೇಳೆ ತಿಳಿದುಹೇಳುವೆನು’ ಎಂದು ಹೇಳಿ ಅಲ್ಲಿಂದ ಹೊರಟು ಅದನ್ನು ಚಾಣಕ್ಯನ ಕೈಯಲ್ಲಿ ತಂದುಕೊಟ್ಟನು.
ಲೇಖನವನ್ನು ಓದಿಕೊಂಡು ಅದರ ಅಕ್ಷರಗಳನ್ನು ಮೆಚ್ಚಿ ಅದಕ್ಕೆ ರಾಕ್ಷಸನ ಮುದ್ರಿಕೆಯಿಂದಲೇ ಮುದ್ರೆಯನ್ನೊತ್ತಿ ಸಿದ್ಧಾರ್ಥಕನನ್ನು ಕುರಿತು ಚಾಣಕ್ಯನು ಪ್ರಿಯ ಸಿದ್ಧಾರ್ಥಕ, ಚಂದ್ರಗುಪ್ತನ ಕಾರ್ಯ ನಿನ್ನಿಂದ ಈವರೆಗೆ ಬಹಳ ಅನುಕೂಲವಾಯಿತು. ಈಗ ನಿನ್ನಿಂದ ಒಂದು ದೊಡ್ಡ ಕೆಲಸವಾಗಬೇಕಾಗಿದೆ. ಅದನ್ನು ಈ ರೀತಿ ಮಾಡು ‘ ಎಂದು ಅವನ ಕಿವಿಯಲ್ಲಿ ಕೆಲವು ರಹಸ್ಯವಾದ ಮಾತುಗಳನ್ನು ಹೇಳಿ ಆ ಲೇಖನವನ್ನೂ ರಾಕ್ಷಸನ ಮುದ್ರಿಕೆಯನ್ನೂ ಅವನೊಡನೆ ಕೊಟ್ಟು ಕಳುಹಿಸಿದನು.
ಆ ದಿನಕ್ಕೆ ಸರಿಯಾಗಿ ಪರ್ವತರಾಜನ ಪರಲೋಕಕ್ರಿಯೆಗಳು ಮುಗಿದುವು. ಬೊಕ್ಕಸದಲ್ಲಿದ್ದ ಆತನ ಆಭರಣಗಳನ್ನೇನು ಮಾಡಬೇಕೆಂದು ಚಾಣಕ್ಯನಿಗೆ ಚಂದ್ರಗುಪ್ತನು ಕಂಚುಕಿಯೊಡನೆ ಹೇಳಿ ಕಳುಹಿಸಿದನು. ಅದೇ ವಿಷಯವನ್ನು ಚಿಂತಿಸುತ್ತಿದ್ದ ಚಾಣಕ್ಯನು ಕಂಚುಕಿಗೆ ‘ಶೋಣಕ, ಪರ್ವತರಾಜನ ಆಭರಣಗಳು ಅಮೂಲ್ಯವಾದುವು. ಅವನ್ನು ಪಡೆಯಲು ತಕ್ಕ ಬ್ರಾಹ್ಮಣರನ್ನು ನಾವೇ ನೋಡಿ ಕಳುಹಿಸುತ್ತೇವೆ. ಅವರಿಗೆ ಅವುಗಳನ್ನು ಕೊಟ್ಟರೆ ಅದರಿಂದ ರಾಜನಿಗೆ ಮುಂದೆ ಮಹಾಫಲ ಉಂಟಾಗುತ್ತದೆ. ಅಲ್ಲದೆ ಇನ್ನು ಮುಂದೆ ಸ್ವರಾಷ್ಟ್ರದ ವಿಷಯವನ್ನು ತಾನೇ ನೋಡಿಕೊಳ್ಳುತ್ತ, ಪರರಾಷ್ಟ್ರದ ವಿಷಯವನ್ನು ಮಾತ್ರ ನಮಗೆ ತಿಳಿಸುವಂತೆ ರಾಜನಿಗೆ ಹೇಳು ‘ ಎಂದು ಹೇಳಿದನು. ಕಂಚುಕಿ ಹೊರಟುಹೋದ ಮೇಲೆ ತನಗೆ ಅನುಕೂಲರಾದ ವಿಶ್ವಾವಸುವೇ ಮೊದಲಾದ ಮೂವರು ಬ್ರಾಹ್ಮಣರನ್ನು ಕರೆಸಿ ಅವರಿಗೆ ಚಾಣಕ್ಯನು ‘ಬ್ರಾಹ್ಮಣರೇ, ಚಂದ್ರಗುಪ್ತನಿಂದ ನಿಮಗೆ ದಾನವಾಗಿ ದೊರಕುವ ಆಭರಣಗಳನ್ನು ವರ್ತಕವೇಷದಿಂದ ಮಲಯಕೇತುವಿನ ಬಳಿಯಿರುವ ರಾಕ್ಷಸನಲ್ಲಿಗೆ ಹೋಗಿ ಅವನ್ನು ಅವನಿಗೆ ಮಾರಿ, ಆ ವಿಷಯವನ್ನು ನಮಗೆ ಬಂದು ತಿಳಿಸಿ’ ಎಂದು ಅಪ್ಪಣೆಮಾಡಿ ಕಳುಹಿದನು.
ಇದಾದಮೇಲೆ ಪರ್ವತರಾಜನನ್ನು ಕೊಲ್ಲಿಸಿದ ಜೀವಸಿದ್ಧಿಯನ್ನು ಅವಮಾನಪಡಿಸಿ ರಾಜಧಾನಿಯಿಂದ ಹೊರಡಿಸಲು, ದಾರುವರ್ಮಾದಿಗಳಿಗೆ ಸಹಾಯಕನಾಗಿದ್ದ ರಾಜದ್ರೋಹಿ ಶಕಟದಾಸನನ್ನು ಶೂಲಕ್ಕೇರಿಸಲು ಚಾಣಕ್ಯನು ಏರ್ಪಾಟು ಮಾಡಿದನು. ಅವನ ಮತ್ತೊಬ್ಬ ಶಿಷ್ಯನು ಚಂದನದಾಸನಲ್ಲಿಗೆ ಓಡಿದನು.
ಮುಂದಿನ ಅಧ್ಯಾಯ: ೨೪. ಮಿತ್ರಪ್ರೇಮಿ ಚಂದನದಾಸ