ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 24: ಮಿತ್ರಪ್ರೇಮಿ ಚಂದನದಾಸ
೨೪. ಮಿತ್ರಪ್ರೇಮಿ ಚಂದನದಾಸ
ಚಾಣಕ್ಯನ ಶಿಷ್ಯ ಶೀಘ್ರಕಾರಿ, ಬಳೆಗಾರಸೆಟ್ಟಿ ಚಂದನದಾಸನಲ್ಲಿಗೆ ಬಂದು ಅವನಿಗೆ ಚಾಣಕ್ಯನ ಅಪ್ಪಣೆಯನ್ನು ತಿಳಿಸಿದನು. ಆ ಸೆಟ್ಟಿ ತನ್ನ ಮನಸ್ಸಿನಲ್ಲಿ ‘ವಜ್ರಚಿತ್ತನಾದ ಚಾಣಕ್ಯನನ್ನು ಕಂಡರೆ ನಿರಪರಾಧಿಯೂ ಭಯಪಡುವನು. ನಾನಾದರೋ ಚಂದ್ರಗುಪ್ತನ ವಿಷಯದಲ್ಲಿ ಮಹಾಪರಾಧಿ. ಚಾಣಕ್ಯನನ್ನು ಕಂಡಬಳಿಕ ನನಗೇನು ವಿಪತ್ತು ಬರುವುದೋ! ಒಳ್ಳೆಯದು. ಒಂದುವೇಳೆ ಮಿತ್ರಕಾರ್ಯಕ್ಕಾಗಿ ಹಾಗೆ ವಿಪತ್ತು ಬಂದರೂ ಬರಲಿ. ಆದರೆ ರಾಕ್ಷಸನ ಮನೆಯವರನ್ನು ಮಾತ್ರ ಚಾಣಕ್ಯನಿಗೆ ಸಿಕ್ಕದಂತೆ ಮಾಡಿದರೆ ಅದೇ ನನಗೆ ಪರಮ ಲಾಭ’ ಎಂದುಕೊಂಡು ಮುಂದಿನ ಕೆಲಸವನ್ನು ನಿರ್ಧರಿಸಿಕೊಂಡನು.
ಆ ಬಳಿಕ ಚಂದನದಾಸನು ಚಾಣಕ್ಯನ ಶಿಷ್ಯನನ್ನು ಕುರಿತು ‘ಅಯ್ಯಾ ಬ್ರಾಹ್ಮಣ, ನಾನು ಉಟ್ಟರುವ ಬಟ್ಟೆ ಳು ಕೊಳೆಯಾಗಿವೆ. ದೊಡ್ಡವರನ್ನು ಕಾಣಲು ಬೇರೆ ಮಡಿಬಟ್ಟೆಗಳನ್ನುಟ್ಟುಕೊಂಡು ಬರುವೆನು. ಆವರೆಗೂ ನೀನು ಈ ಪೀಠದ ಮೇಲೆ ಕುಳಿತಿರಬಹುದು’ ಎಂದು ಹೇಳಿ ಒಳಕ್ಕೆ ಹೋದನು.
ಚಂದನದಾಸನು ಒಳಗಡೆ ಹೋಗಿ ತನಗೆ ಆಪ್ತನಾದ ಧನಸೇನನನ್ನು ಕರೆದು, “ಮಿತ್ರನೇ, ಕ್ರೂರನಾದ ಚಾಣಕ್ಯನು ನನ್ನನ್ನು ಕರೆ ಕಳುಹಿಸಿದ್ದಾನೆ. ಅವನ ಬಳಿಗೆ ಹೋದ ಬಳಿಕ ಏನಾಗುವುದೋ ತಿಳಿಯದು. ನೀನು ಮಾತ್ರ ಅಮಾತ್ಯರ ಕುಟುಂಬದವರನ್ನು ಮತ್ತೊಂದು ಗುಟ್ಟಾದ ಸ್ಥಳದಲ್ಲಿ ಇರಿಸಿ ಕಾದುಕೊಂಡಿರು’ ಎಂದು ನೇಮಿಸಿ ಮಡಿ ಬಟ್ಟೆಗಳನ್ನುಟ್ಟುಕೊಂಡು ಹೊರಟುಬಂದು ಚಾಣಕ್ಕನನ್ನು ಕಂಡು ಕೈಮುಗಿದನು.
ಚಾಣಕ್ಯ– ಚಂದನದಾಸನೇ, ನಿನಗೆ ಕ್ಷೇಮವೇ? ನೀವು ಮಾಡುವ ವ್ಯಾಪಾರಗಳು ಯಾವ ಅಡ್ಡಿಯೂ ಇಲ್ಲದೆ ನಡೆಯುತ್ತಿವೆಯೇ? ಈ ಪೀಠದ ಮೇಲೆ ಕುಳಿತುಕೋ.
ಚಂದನದಾಸ– (ಮತ್ತೊಮ್ಮೆ ನಮಸ್ಕರಿಸಿ, ಕುಳಿತುಕೊಂಡು) ಸ್ವಾಮಿ, ತಮ್ಮ ಕೃಪೆಯಿಂದ ನಮ್ಮ ವ್ಯಾಪಾರ ಕುಂದಿಲ್ಲದೆ ಸಾಗುತ್ತಿದೆ.
ಚಾಣಕ್ಯ– ಅಯ್ಯಾ ಚಂದನದಾಸ, ಪ್ರಜೆಗಳು ಚಂದ್ರಗುಪ್ತನನ್ನು ಒಳ್ಳೆಯವನೆಂದು ಹೇಳುವರೋ ? ಇಲ್ಲವೆ ನಂದರನ್ನೇ ಉತ್ತಮರೆಂದು ಹೊಗಳಿಕೊಳ್ಳುವರೋ?
ಚಂದನದಾಸ– ಪೊಜ್ಯರೆ, ಶರತ್ಕಾಲದ ಚಂದ್ರನನ್ನು ಕಂಡ ನೈದಿಲೆಗಳಂತೆ ಪ್ರಜೆಗಳು ಚಂದ್ರಗುಪ್ತ ಮಹಾರಾಜನನ್ನೇ ಅಪೇಕ್ಷಿಸುತ್ತಿದ್ದಾರೆ.
ಚಾಣಕ್ಯ– ಅಯ್ಯಾ ಸೆಟ್ಟಿ, ಸಂತೃಪ್ತರಾದ ಪ್ರಜೆಗಳಿಂದ ಅರಸರು ಪ್ರತಿಫಲವನ್ನು ಬಯಸುವುದು ಪೂರ್ವಮರ್ಯಾದೆ.
ಚಂದನದಾಸ– ಸ್ವಾಮಿಯವರ ಅಪ್ಪಣೆಯಾದಂತೆ ಸರ್ವರೂ ತಮ್ಮ ಶಕ್ತಿಯನ್ನು ಮೀರಿ ನಡೆದುಕೊಂಡಾರು.
ಚಾಣಕ್ಯ– ಎಲೈ ಚಂದನದಾಸ, ನಿರಪರಾಧಿಗಳಾದ ರಾಷ್ಟ್ರವಾಸಿಗಳಿಂದ ದಂಡವನ್ನು ಸ್ವೀಕರಿಸುವುದಕ್ಕೆ ಇದು ನಂದರ ಪ್ರಭುತ್ವವಲ್ಲ. ನೀವೆಲ್ಲರೂ ಸುಖಿಗಳಾಗಿದ್ದರೆ ಅದೇ ಚಂದ್ರಗುಪ್ತನಿಗೆ ಮಹಾಭ್ಯುದಯ.
ಚಂದನದಾಸ- ಸ್ವಾಮಿ, ಅದೇ ರೀತಿಯಲ್ಲಿ ತಾವು ನಮ್ಮೆಲ್ಲರನ್ನೂ ರಕ್ಷಿಸಬೇಕು.
ಚಾಣಕ್ಯ- ಅಯ್ಯಾ ಸೆಟ್ಟಿ, ಈ ಸುಖವಾದ ಬದುಕು ಹೇಗೆ ಒದಗಬಹುದೆಂದು ನೀನು ನಮ್ಮನ್ನು ಕೇಳಬೇಡವೇ?
ಚಂದನದಾಸ– ಪೂಜ್ಯರು ಅಪ್ಪಣೆ ಕೊಡಿಸಬೇಕು.
ಚಾಣಕ್ಯ– ಸಂಗ್ರಹವಾಗಿ ಹೇಳಬಹುದಾದರೆ, ರಾಜನಿಗೆ ಎದುರು ಬೀಳದಂತೆ ನಡೆದುಕೊಳ್ಳಬೇಕು.
ಚಂದನದಾಸ– ಮಹಾರಾಜರಿಗೆ ಎದುರುಬಿದ್ದವನೆಂದು ತಾವು ಭಾವಿಸುವ ಆ ನಿರ್ಭಾಗ್ಯ ಯಾರಿರಬಹುದು?
ಚಾಣಕ್ಯ– ಅಯ್ಯಾ ಸೆಟ್ಟಿ ನೀನೇ ಮೊಟ್ಟ ಮೊದಲ ರಾಜದ್ರೋಹಿ.
ಚಂದನದಾಸ (ಕಿವಿಗಳನ್ನು ಮುಚ್ಚಿಕೊಂಡು) ಶಾಂತಂ ಪಾಪಂ! ಶಾಂತಂ ಪಾಪಂ! ಆರ್ಯರೆ, ಬೆಂಕಿಯೊಡನೆ ಹುಲ್ಲುಕಡ್ಡಿಗೆ ಎಂಥ ಸರಸ!
ಚಾಣಕ್ಯ– ಎಲಾ ಸೆಟ್ಟಿ! ರಾಜಾಪರಾಧಿಯಾದ ರಾಕ್ಷಸನ ಕುಟುಂಬದವರನ್ನು ನಿನ್ನ ಮನೆಯಲ್ಲಿ ಮರೆಯಾಗಿರಿಸಿಕೊಂಡು ಇದುವರೆಗೂ ಪ್ರಭುವಿಗೆ ಬಿನ್ನೈಸದಿರುವುದು ನಿನ್ನಲ್ಲಿ ಅಪರಾಧವಲ್ಲವೇ?
ಚಂದನದಾಸ– ಪೂಜ್ಯರೇ, ತಮ್ಮೊಡನೆ ಯಾರೋ ಸುಳ್ಳನ್ನು ನುಡಿದಿರಬೇಕು. ಈ ವಿಷಯವನ್ನೇ ನಾನು ಕಂಡರಿಯೆ.
ಚಾಣಕ್ಯ– ಈ ಸಂಗತಿಯನ್ನು ನೀನು ಕಂಡುದುಂಟಾದರೆ ನಿನ್ನ ಸರ್ವಸ್ವವನ್ನೂ ಅರಮನೆಗೆ ತೆಗೆದುಕೊಂಡು ನಿನಗೆ ಕ್ರೂರವಾದ ದಂಡನೆಯನ್ನು ವಿಧಿಸಬಹುದೇ?
ಚಂದನದಾಸ– ಪೂಜ್ಯರೇ, ರಾಕ್ಷಸನು ಹೋಗುವ ಸಮಯದಲ್ಲಿ ತನ್ನ ಮನೆಯ ಜನರನ್ನು ನನ್ನ ಮನೆಯಲ್ಲಿ ಇರಿಸಿದುದುಂಟು. ಆ ಬಳಿಕ ಅವರು ನನ್ನನ್ನು ವಂಚಿಸಿ ಎಲ್ಲಿಯೋ ಹೊರಟುಹೋದುದರಿಂದೆ ಈ ವಿಷಯವನ್ನು ತಮ್ಮಲ್ಲಿ ವಿಜ್ಞಾನಿಸಿಕೊಳ್ಳುವುದಕ್ಕೆ ಭಯಪಡುತ್ತಿದ್ದೆ.
ಚಾಣಕ್ಯ– ಎಲಾ ಸೆಟ್ಟಿ, ಮೊದಲು ಕಾಣೆನೆಂದು ಹೇಳಿ, ಈಗ ಕಂಡುದುಂಟು, ಎಲ್ಲಿಯೋ ಹೋದರು ಎಂದು ಎರಡು ಮಾತುಗಳನ್ನು ಹೇಳಬಹುದೇ?
ಚಂದನದಾಸ– ಪೂಜ್ಯರೇ, ಭಯದಿಂದ ಬಾಯಿತಪ್ಪಿ ಹಾಗೆ ಹೇಳಿದೆ.
ಚಾಣಕ್ಯ (ನಕ್ಕು) : ಎಲಾ ವ್ಯಾಪಾರಿ, ಚಂದ್ರಗುಪ್ತನ ಪ್ರಭುತ್ವದಲ್ಲಿ ಬಾಯಿತಪ್ಪೂ ಬರಕೂಡದು. ಸುಮ್ಮನೆ ರಾಕ್ಷಸನ ಕುಟುಂಬದವರನ್ನು ತಂದೊಪ್ಪಿಸಿ ಬಿಡು. ನಿನ್ನ ತಪ್ಪು ಸರಿಹೋಗುತ್ತದೆ.
ಚಂದನದಾಸ (ಮನಸ್ಸಿನಲ್ಲಿ) ಈಗ ನೆತ್ತಿಯ ಮೇಲೆ ಸರ್ಪ, ಹಿಮಾಲಯದಲ್ಲಿ ಅದಕ್ಕೆ ಔಷಧಯೆಂದ ಹಾಗಾಯಿತು. ಏನೋ ದೊಡ್ಡ ಆಪತ್ತು ಬಂತು!
ಚಾಣಕ್ಯ ಚಂದನದಾಸರು ಮಾತನಾಡುತ್ತಿದ್ದಾಗ ಹೊರಗಡೆ ಕಲಕಲ ಧ್ವನಿ ಕೇಳಿ ಬಂತು,
ಚಾಣಕ್ಯ (ಶಿಷ್ಯನಿಗೆ) ಹೊರಗಡೆ ಏನು ಗದ್ದಲ? ತಿಳಿದು ಬಾ.
ಶಿಷ್ಯ (ಹೋಗಿ ಬಂದು)–ಉಪಾಧ್ಯಾಯರೇ, ವಿಷಕನ್ಯೆಯ ಮೂಲಕ ಪರ್ವತರಾಜನನ್ನು ಕೊಲ್ಲಿಸಿದ ದೋಷವನ್ನು ಬಯಲಿಗೆಳೆದು, ದೂತರು ಜೀವಸಿದ್ದಿಯೆಂಬ ಕ್ಷಪಣಕನನ್ನು ಚಂದ್ರಗುಪ್ತನ ಅಪ್ಪಣೆಯಂತೆ ತುಂಬ ಅವಮಾನಪಡಿಸಿ ಊರಿನಲ್ಲಿ ಮೆರವಣಿಗೆ ಮಾಡಿಸಿ ಹೊರಕ್ಕೆ ತಳ್ಳುತ್ತಿದ್ದಾರೆ.
ಚಾಣಕ್ಯ– ತಾನು ಮಾಡಿದುದಕ್ಕೆ ತಕ್ಕ ಫಲವನ್ನು ಅನುಭವಿಸಲಿ! (ಚಂದನದಾಸನ ಕಡೆಗೆ ತಿರುಗಿ) ಚಂದನದಾಸಸೆಟ್ಟ, ರಾಜ ದ್ರೋಹಿಗಳಿಗೆ ಹೀಗಾಗುವುದು ಸಹಜ. ಆದ್ದರಿಂದ ವಂಚಿಸದೆ ರಾಕ್ಷಸನ ಕುಟುಂಬವನ್ನು ತಂದೊಪ್ಪಿಸು.
ಚಂದನದಾಸ– ಪೂಜ್ಯರೇ, ನನ್ನ ಮನೆಯಲ್ಲಿ ರಾಕ್ಷಸನ ಕುಟುಂಬ ಖಂಡಿತವಾಗಿ ಇಲ್ಲ.
ಅಷ್ಟರಲ್ಲೇ ಬೀದಿಯಲ್ಲಿ ಮತ್ತೆ ಕೋಲಾಹಲ ಕೇಳಿ ಬಂತು.
ಚಾಣಕ್ಕ(ಶಿಷ್ಯನಿಗೆ)– ಅದೇನು ಮತ್ತೆ ಗದ್ದಲ? ನೋಡಿ ಬಾ.
ಶಿಷ್ಯ (ಹೋಗಿ ಬಂದು) ಉಪಾಧ್ಯಾಯರೇ, ‘ರಾಜದ್ರೋಹಿಯಾದ ಶಕಟದಾಸನನ್ನು ರಾಜನ ಅಪ್ಪಣೆಯಂತೆ ಶೂಲಕ್ಕೆ ಹಾಕುವುದೆಂದು ಸಾರಿಕೊಂಡು ವಧ್ಯಸ್ಥಾನಕ್ಕೆ ಕರೆದೊಯ್ಯುತ್ತಿದ್ದಾರೆ.
ಚಾಣಕ್ಯ (ಚಂದನದಾಸನಿಗೆ)-ಅಯ್ಯಾ ಸೆಟ್ಟಿ, ರಾಜಾಪರಾಧಿಗಳಿಗೆ ಹೀಗೆ ಕಠಿಣದಂಡನೆಯಾಗುತ್ತಿರುವುದನ್ನು ಕಂಡೂ, ಇನ್ನೂ ಅರಿಯೆನೆಂದು ಹೇಳುತ್ತಿರುವೆಯಾ? ನಿನ್ನ ಹೆಂಡತಿ ಮಕ್ಕಳು ಸುಖವಾಗಿ ಬದುಕಿರಬೇಕೆಂದಿದ್ದರೆ ರಾಕ್ಷಸನ ಮನೆಯವರನ್ನು ತಂದೊಪ್ಪಿಸು.
ಚಂದನದಾಸ– ಪೂಜ್ಯರೇ, ಸುಮ್ಮನೆ ನನ್ನನ್ನೇಕೆ ಬೆದರಿಸುತ್ತಿರುವಿರಿ? ಅಮಾತ್ಯನ ಕುಟುಂಬದವರನ್ನು ಇದ್ದರೂ ನಾನು ಒಪ್ಪಿಸತಕ್ಕವನಲ್ಲ; ಇಲ್ಲದಿರುವಾಗ ಮತ್ತೇನು?
ಚಾಣಕ್ಯ– ಚಂದನದಾಸ, ಇದೇ ನಿನ್ನ ನಿಶ್ಚಯವೋ?
ಚಂದನದಾಸ– ಆರ್ಯರೆ, ಇದೇ ನನ್ನ ನಿಶ್ಚಯ ; ನಿಸ್ಸಂದೇಹವಾಗಿ.
ಚಾಣಕ್ಯ– (ಮನಸ್ಸಿನಲ್ಲಿ)- ಈ ಸೆಟ್ಟಿ ಸತ್ಯವಂತ. ಮಿತ್ರಕಾರ್ಯಕ್ಕಾಗಿ ತನ್ನ ಪ್ರಾಣವನ್ನಾದರೂ ಒಪ್ಪಿಸತಕ್ಕವನು. (ಪ್ರಕಾಶವಾಗಿ ಕೋಪವನ್ನು ನಟಿಸಿ, ಹುಬ್ಬನ್ನು ಗಂಟಿಕ್ಕಿ) ಎಲಾ ದುರುಳ ವರ್ತಕ, ನೀನು ಮಾಡಿರುವ ದ್ರೋಹಕ್ಕೆ ತಕ್ಕ ಫಲವನ್ನು ಅನುಭವಿಸು.
ಚಂದನದಾಸ– ಸಿದ್ದನಾಗಿದ್ದೇನೆ. ತಮ್ಮ ಅಧಿಕಾರಕ್ಕೆ ಅನುಗುಣವಾಗಿ ತಾವು ನನಗೆ ಶಿಕ್ಷೆಯನ್ನು ವಿಧಿಸಬಹುದು.
ಚಾಣಕ್ಯ–(ಶಿಷ್ಯನನ್ನು ಕರೆದು)-_-ಎಲಾ ಶೀಘ್ರಿಕಾರಿ, ಈ ದುಷ್ಟ ವರ್ತಕನ ಮನೆಯ ಪದಾರ್ಥವೆಲ್ಲವನ್ನೂ ರಾಜಭಂಡಾರಕ್ಕೆ ತೆಗೆದುಕೊಂಡು ಸ್ವಜನಸಮೇತನಾಗಿ ಇವನನ್ನು ಕಾವಲಿನಲ್ಲಿರಿಸುವಂತೆ ದುರ್ಗಪಾಲಕನಿಗೆ ಹೇಳು. ನಾನೇ ಚಂದ್ರಗುಪ್ತನಿಗೆ ತಿಳಿಸಿ ಇವನಿಗೆ ಕ್ರೂರವಾದ ದಂಡನೆಯನ್ನು ಮಾಡಿಸುವೆನು.
ಶೀಘ್ರೆಕಾರಿ ಚಂದನದಾಸನನ್ನು ಕರೆದುಕೊಂಡು ಹೊರಟು ಹೋದನು. ಜಾಣಕ್ಯಾನು ತನ್ನ ಮನಸ್ಸಿನಲ್ಲಿ ಈ ಚಂದನದಾಸನು ತನ್ನ ಮಿತ್ರನಾದ ರಾಕ್ಷಸನಿಗಾಗಿ ತನ್ನ ಪ್ರಾಣವನ್ನಾದರೂ ಕೊಟ್ಟು ಆತನ ಕುಟುಂಬದವರನ್ನು ರಕ್ಷಿಸುವೆನೆಂದು ಹೇಗೆ ನಿಶ್ಚೈಸಿರುವನೋ ಹಾಗೆಯೇ ರಾಕ್ಷಸನೂ ಚಂದನದಾಸನಿಗೆ ಬಂದ ವಿಪತ್ತನ್ನು ಪರಿಹರಿಸಲು ತನ್ನ ಪ್ರಾಣವನ್ನಾದರೂ ಕೊಟ್ಟು ಈ ಚಂದನದಾಸನನ್ನು ಬಿಡಿಸಲು ಬರುವನು. ಕರುವಿದ್ದೆಡೆಗೆ ಹಸು ತಾನಾಗಿಯೇ ಬರುವುದಲ್ಲವೇ? ಶಕಟದಾಸನನ್ನು ಶೂಲಸ್ಥಾನಕ್ಕೆ ಕಳುಹಿಸಿದಂತೆ ಸಮಯವರಿತು ಈ ಸೆಟ್ಟಿಯನ್ನು ಶೂಲಕ್ಕೆ ಕಳುಹಿಸಬೇಕು.” ಎಂದು ನಿರ್ಧರಿಸಿಕೊಂಡನು.
ಇತ್ತ ಸಿದ್ಧಾರ್ಥಕನು ಈ ಮೊದಲು ಚಾಣಕ್ಯನು ತನ್ನ ಕಿವಿಯಲ್ಲಿ ಹೇಳಿದಂತೆ ಚಂಡಾಲರು ಶಕಟದಾಸನನ್ನು ವಧ್ಯಸ್ಥಾನಕ್ಕೆ ಕರೆತರುವುದಕ್ಕೆ ಮುಂಚಿತವಾಗಿಯೇ, ಹಿರಿದ ಕತ್ತಿಯೊಡನೆ ಅಲ್ಲಿಗೆ ಬಂದು ಮರೆಯಲ್ಲಿ ಕಾದಿದ್ದ ನು. ಕಟುಕರು ಶಕಟದಾಸನನ್ನು ಶೂಲಕ್ಕೇರಿಸುವ ಸ್ಥಳಕ್ಕೆ ಕರೆತಂದು ನಿಲ್ಲಿಸುವುದನ್ನು ನೋಡಿ, ಸಿದ್ಧಾರ್ಥಕನು ಕತ್ತಿಯನ್ನು ರುಳಪಿಸುತ್ತ ಆ ಘಾತುಕರನ್ನು ಅಟ್ಟಕೊಂಡು ಬಂದು, ಮೇಲೆ ಬಿದ್ದು ಮೊರೆಯುತ್ತ ಅವರಿಗೆ ಕಣ್ಣುಸನ್ನೆ ಮಾಡಿದನು. ಅದನ್ನರಿತ ಕಟುಕರು ಅವನ ರಭಸಕ್ಕೆ ಹೆದರಿದವರಂತೆ ನಟಿಸುತ್ತ ಶಕಟದಾಸನನ್ನು ಬಿಟ್ಟು ದಿಕ್ಕುದಿಕ್ಕಿಗೆ ಓಡಿಹೋದರು. ಆಗ ಸಿದ್ಧಾರ್ಥಕನು ಶಕಟದಾಸನ ಬಳಿಗೆ ಬಂದು, ಅವನ ಕಟ್ಟುಗಳನ್ನು ಬಿಚ್ಚಿ, ಚಾಣಕ್ಯ ಚಂದ್ರಗುಪ್ತರನ್ನು ನಿಂದಿಸುತ್ತ ‘ಮಿತ್ರ, ಬಾ ಹೆದರಬೇಡ. ಈ ಹಾಳು ಚಾಣಕ್ಯ ಚಂದ್ರಗುಪ್ತರಿರುವ ಸ್ಥಳವನ್ನು ಬಿಟ್ಟು ಬೇರೆ ಎಲ್ಲಿಗಾದರೂ ಹೋಗೋಣ, ನಡೆ.’ ಎಂದು ಪರ್ವತರಾಜ್ಯಾಭಿಮುಖನಾಗಿ ಹೊರಟು ಹೋದರು.
ಚಾಣಕ್ಯನ ಶಿಷ್ಯನು ಈ ವರ್ತಮಾನವನ್ನು ತಿಳಿದುಬಂದು ( ಉಪಾಧ್ಯಾಯರೇ, ಶಕಟದಾಸನನ್ನು ಶೂಲಕ್ಕೇರಿಸುವ ಸಮಯದಲ್ಲಿ ಸಿದ್ಧಾರ್ಥಕನು ಹಿರಿದ ಕತ್ತಿಯೊಡನೆ ಬಂದು ಚಂಡಾಲರನ್ನು ಹೆದರಿಸಿ ಓಡಿಸಿ ಶಕಟದಾಸನನ್ನು ಕರೆದುಕೊಂಡು ಎಲ್ಲಿಗೋ ಪಲಾಯನ ಮಾಡಿದನಂತೆ.’ ಎಂದು ತಿಳಿಸಿದನು,
ಶಿಷ್ಯನ ಮಾತನ್ನು ಕೇಳಿ ಚಾಣಕ್ಯನು ತನ್ನ ಮನಸ್ಸಿನಲ್ಲಿ ‘ಶಕಟದಾಸನೊಡನೆ ಸಿದ್ಧಾರ್ಥಕನು ಹೊರಟು ಹೋದುದು ಉತ್ತಮವಾಯಿತು. ಇಲ್ಲಿದ್ದ ಸೇನಾಪತಿಗಳನ್ನು ಹೊರಡಿಸಿ ಕಳುಹಿಸಿದುದಕ್ಕೆ ಪುರಜನರು ಏನೆಂದು ಹೇಳಿಕೊಳ್ಳುತ್ತಿರುವರೋ ಅದನ್ನು ತಿಳಿಯಬೇಕು ಎಂದು ಯೋಚಿಸಿ, ಶಿಷ್ಯನನ್ನು ಕುರಿತು ‘ವತ್ಸ ಛಾಗಪುಚ್ಛ. ಶಕಟದಾಸ ಸಿದ್ಧಾರ್ಥಕರನ್ನು ಹಿಡಿದು ತರುವಂತೆ ಭಾಗುರಾಯಣನಿಗೆ ಹೇಳಿ ಬಾ.’ ಎಂದು ಅಪ್ಪಣೆ ಮಾಡಿ ಕಳುಹಿಸಿದನು.
ಶಿಷ್ಯನು ಹೋಗಿ ವಿಷಯವನ್ನು ತಿಳಿದುಬಂದು “ಉಪಾಧ್ಯಾಯರ, ಭಾಗುರಾಯಣನು ಮಲಯಕೇತುವಿನೊಡನೆ ಅಂದೇ ಹೊರಟುಹೋದನಂತೆ’ ಎಂದು ತಿಳಿಸಿದನು.
ಚಾಣಕ್ಯ– ಆ ವಂಚಕನಾದ ಭಾಗುರಾಯಣನನ್ನು ಹಿಡಿದು ತರುವಂತೆ ಭದ್ರಭಟಾದಿ ಸೇನಾನಾಯಕರಿಗೆ ತಿಳಿಸಿ ಬಾ.
ಶಿಷ್ಯನು ಹೋಗಿ ವಿಚಾರಿಸಿ ಬಂದು (ಓಹೋ! ಉಪಾಧ್ಯಾಯರೇ, ನಿಮ್ಮ ಕೆಲಸವೆಲ್ಲ ಕೆಟ್ಟುಹೋಯಿತು. ನೀವು ಆಸ್ಥಾನದಲ್ಲಿ ಕುಳಿತು ಕೋಪ ಮಾಡಿದುದರಿಂದ ನಿಮ್ಮ ಮೇಲೆ ರಾಜಕಾರ್ಯ ಮಾಡುವುದಕ್ಕಾಗಿ ಭದ್ರಭಟಾದಿಸೇನಾಪತಿಗಳು ತಮ್ಮ ಬಲಸಮೇತರಾಗಿ ಇಲ್ಲಿಂದ ಹೋಗಿ ಪರರಾಜರನ್ನು ಕಟ್ಟಿಕೊಂಡು ದಂಡೆತ್ತಿ ಬರುತ್ತಿದ್ದಾರಂತೆ. ಈ ವಿಷಯವನ್ನು ಜನರು ಆಡಲು ಅಂಜಿ ಗುಸುಗುಟ್ಟುತ್ತಿದ್ದಾರೆ. ತಾವು ಮಹಾಚತುರರು. ಆದ್ದರಿಂದ ಆ ಶತ್ರುಗಳ ಸೈನ್ಯಕ್ಕೆ ಸಿಕ್ಕದೆ ತಪ್ಪಿಸಿಕೊಂಡೀರಿ, ಅನಾಥರಾಗಿರುವ ನಮ್ಮನ್ನು ಹಿಡಿದು ನೀಮ್ಮ ಗುರುಗಳೆಲ್ಲಿ? ಎಂದು ವೈರಿಗಳು ನಿರ್ಬಂಧಪಡಿಸಿದರೆ ಬ್ರಾಹ್ಮಣರು ಸುಳ್ಳನ್ನು ಹೇಳಬಾರದಷ್ಟೆ. ಆದ್ದರಿಂದ ನೀವು ಹೋಗ ತಕ್ಕ ಸ್ಥಳವನ್ನು ಈಗಲೇ ತಿಳಿಸಿದ್ದರೆ ಒಳ್ಳೆಯದು’ ಎಂದು ನಮ್ರವಾಗಿ ನುಡಿದನು.
ಚಾಣಕ್ಕ (ನಸುನಗುತ್ತ)– ಎಲಾ ವಟುವೇ, ದಸ್ಯುಗಳಿಗೆ ನಮ್ಮನ್ನು ತೋರಿಸುವೆಯಾ? ಹಾಗಾದರೆ ನಾವು ರಾಮೇಶ್ವರಕ್ಕೆ ಹೋಗಿ ಅಲ್ಲಿರುವೆವು.
ಶಿಷ್ಯ– ಪೂಜ್ಯರೆ, ರಾಮೇಶ್ವರವಿರುವದೆಲ್ಲಿ?
ಚಾಣಕ್ಯ– ವತ್ಸ ರಾಮೇಶ್ವರ ರಾಮಸೇತು ಇದ್ದಲ್ಲಿ ಇರುವುದು.
ಶಿಷ್ಯ– ಗುರುಗಳೇ, ರಾಮದೇವರು ತನ್ನ ಪಟ್ಟಣದ ಸರಯೂ ನದಿಯಲ್ಲಿ ಸೇತುವೆಯನ್ನು ರಚಿಸಿರುವನೋ, ಇಲ್ಲವೇ ಯಮುನಾ ನದಿಯಲ್ಲಿ ರಚಿಸಿರುವನೋ?
ಚಾಣಕ್ಯ– ವತ್ಸ, ಲವಣಸಮುದ್ರಕ್ಕೆ.
ಶಿಷ್ಯ– ಆರ್ಯರೇ, ಲವಣಖಂಡವೇ ಸಮುದ್ರವಾದರೆ ಸಂಚರಿಸುವ ಜನರ ಪಾದಗಳಿಗೆ ಕ್ಷಾರತಗುಲದಿರುವುದಕ್ಕಾಗಿ ಸೇತುಬಂಧವೋ?
ವಟುವಿನ ಮಾತನ್ನು ಕೇಳಿ ಕೋಪಗೊಂಡ ಶಾಙಗರವನು ‘ಎಲಾ ವಟುವೇ, ಏನು ಅಸಂಬದ್ಧವಾಗಿ ಕೇಳುತ್ತಿರುವೆ. ಶತ್ರುಬಾಧೆಯುಂಟಾದರೆ ಮೊದಲು ನಿನ್ನನ್ನು ದಾಟಸುವೆವು ; ಭಯ ಪಡಬೇಡ ಹೋಗು. ಕಂದಮೂಲಗಳನ್ನು ತೊಳೆದು ಸಿದ್ಧಮಾಡು, ಮೊದಲು ಹೋದವರೆಲ್ಲ ಹೋಗಲಿ. ಮುಂದೆ ಹೋಗಬೇಕೆಂದಿರುವವರೂ ಈ ನಗರವನ್ನು ಬಿಟ್ಟು ಹೋಗಲಿ. ಆದರೆ ನಮ್ಮ ಗುರುಗಳ ಕಾರ್ಯೋತ್ಸಾಹ ಮಾತ್ರ ತಗ್ಗದಿರಲಿ. ಅದೊಂದರಿಂದ ಸಕಲವೂ ಸಾಧ್ಯವಾಗುವುದು’ ಎಂದು ನುಡಿದು ಛಾಗಪುಚ್ಛನನ್ನು ಆಚೆಗೆ ಕಳುಹಿಸಿದನು.
ಮುಂದಿನ ಅಧ್ಯಾಯ: ೨೫. ಪ್ರತೀಕಾರ