ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 25: ಪ್ರತೀಕಾರ
೨೫. ಪ್ರತೀಕಾರ
ಮಲಯಕೇತುವಿನ ಬಳಿ ಸರ್ವಾಧಿಕಾರವನ್ನು ಪಡೆದ ರಾಕ್ಷಸನು ಕೈಕಟ್ಟಿಕೊಂಡು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಪಾಟಿಲೀಪುರದ ಮುತ್ತಿಗೆ, ಚಂದ್ರಗುಪ್ತನ ಸಂಹಾರ, ನಂದರಾಜ್ಯದಲ್ಲಿ ಮಲಯಕೇತುವಿನ ಪ್ರತಿಷ್ಠೆ ಈ ಯೋಚನೆಗಳೇ ಈಗ ಅವನ ಮನಸ್ಸನ್ನು ಮುತ್ತಿದ್ದುವು. ಹಗಲಿರುಳು ಈ ಚಿಂತೆಯಿಂದ ರಾಕ್ಷಸನಿಗೆ ರಾತ್ರಿ ಸರಿಯಾಗಿ ನಿದ್ದೆಯಿಲ್ಲ; ಅನ್ನಾದಿಗಳು ರುಚಿಸವು. ಅಲಂಕಾರದ ಮೇಲೆ ನಿರಾಶೆ. ಹೀಗೆ ರಾಕ್ಷಸನು ಭೂಷಣರಹಿತನಾಗಿ ಒಂದೇ ಮನಸ್ಸಿನಿಂದ ರಾಜಕಾರ್ಯದಲ್ಲಿ ತೊಡಗಿರುವುದನ್ನು ಕಂಡು ರಾಜಕುಮಾರನಿಗೆ ಅಮಾತ್ಯನು ತನಗಾಗಿ ಎಷ್ಟು ತೊಂದರೆಪಡುತ್ತಿರುವನಲ್ಲಾ ಎಂದು ಮರುಕವುಂಬಾಯಿತು. ರಾಕ್ಷಸನಲ್ಲಿ ತನಗಿದ್ದ ಸಹಜವಾದ ಪ್ರೀತಿಯಿಂದ ಮಲಯಕೇತು ಆತನು ಧರಿಸಲು ತನ್ನ ಮೈಮೇಲಿನ ಆಭರಣಗಳನ್ನೇ ಕಳಚಿ ಕಂಚುಕಿಯೊಡನೆ ಅವನ್ನು ಅಮಾತ್ಯನಲ್ಲಿಗೆ ಕಳುಹಿಸಿದನು. ತನ್ನಲ್ಲಿಗೆ ಆಭರಣಗಳೊಡನೆ ಬಂದ ಕಂಚುಕಿಗೆ ರಾಕ್ಷಸನು ‘ಆರ್ಯ ಜಾಜಲಿ, ಈ ಭೂಷಣಗಳ ಮೇಲೆ ನನಗೆ ಆಸೆಯಿಲ್ಲ. ಈಗ ನನಗಿರುವ ಬಯಕೆ ಒಂದೇ– ಅದು ಚಂದ್ರಗುಪ್ತನ ಸಂಹಾರ; ಪಾಟಲೀಪುರದ ಸಿಂಹಾಸನದಲ್ಲಿ ಕುಮಾರನ ಪ್ರತಿಷ್ಠೆ. ಈ ಕೆಲಸಗಳು ಕೈಗೂಡುವವರೆಗೆ ಈ ಭೂಷಣಗಳನ್ನು ಧರಿಸೆನು. ಈ ವಿಷಯವನ್ನು ವಿನಯದಿಂದ ಕುಮಾರನಿಗೆ ಬಿನ್ನೈಸು, ಎಂದನು. ಅಮಾತ್ಯನ ಮಾತಿಗೆ ಕಂಚುಕಿ ‘ಆರ್ಯ, ರಾಜಕುಮಾರನ ಬಳಿ ಸರ್ವಾಧಿಕಾರ ಪಡೆದ ದಿನವೇ ನಮ್ಮ ವೈರಿಗಳು ಹತರಾದರು. ನೀವು ಭೂಷಣರಹಿತರಾಗಿರುವುದನ್ನು ಕಂಡು ಕುಮಾರನಿಗೆ ಸಮಾಧಾನವಿಲ್ಲ. ಈ ಅಲಂಕಾರಗಳನ್ನು ತಾವು ಧರಿಸಲೇಬೇಕು’ ಎಂದು ಬಲವಂತಪಡಿಸಿದನು. ರಾಕ್ಷಸನು ಕಂಚುಕಿಯ ಮಾತಿಗೆ ಮನವಿಲ್ಲದ ಮನಸ್ಸಿನಲ್ಲಿ ಒಪ್ಪಿಕೊಳ್ಳಲು ಜಾಜಲಿ ಅಮಾತ್ಯರಿಗೆ ತಾನೇ ಆಭರಣಗಳನ್ನು ತೊಡಿಸಿ ಹೊರಟುಹೋದನು.
ಕಂಚುಕಿ ಹೊರಟುಹೋದಮೇಲೆ ತನ್ನನ್ನು ಕಾಣಲು ಯಾರಾದರೂ ಹೊರಗೆ ಕಾದಿರುವರೇ ಎಂದು ರಾಕ್ಷಸನು ತನ್ನ ಚಾರನನ್ನು ಕೇಳಿದನು. ಆಗ ರಾಕ್ಷಸನ ಎಡಗಣ್ಣು ಅದುರಲು ಅಪಶಕುನದಿಂದ ರಾಕ್ಷಸನು ಬೆಚ್ಚಿದನು. ಚಾರನು ‘ಅಮಾತ್ಯರೇ, ತಮ್ಮನ್ನು ಕಾಣಲು ಹಾವಾಡಿಗನೊಬ್ಬನು ಹೊರಗೆ ಕಾದಿದ್ದಾನೆ. ಎಷ್ಟು ಹೇಳಿದರೂ ಹೋಗಲೊಲ್ಲ. ತಮ್ಮನ್ನು ಕಾಣಲೇಬೇಕೆಂಬ ಹಟ ಅವನಿಗೆ. ಈ ಪದ್ಯವನ್ನು ಬೇರೆ ತಮಗೆ ಕಳುಹಿಸಿದ್ದಾನೆ’ ಎಂದು ಬಿನ್ನೈಸಿದನು. ಮೊಟ್ಟ ಮೊದಲೇ ಹಾವುಗಳ ನೋಟ ಅಪಶಕುನ. ಮೇಲಾಗಿ ಹಾವಾಡಿಗನ ಪದ್ಯದ ಭಾವವೇನು? ದುಂಬಿ ಕುಸುಮದಿಂದ ಕುಸುಮಕ್ಕೆ ಹಾರಿ, ಅದರ ಸಾರವನ್ನು ಗ್ರಹಿಸಿ ಇನ್ನೊಬ್ಬರ ಉಪಯೋಗಕ್ಕಾಗಿ ಅದನ್ನು ಕಾರುವುದೆಂದು. ಇದರ ಭಾವವನ್ನು ಗ್ರಹಿಸಿ ಪಾಟಿಲೀಪುರದ ಸಮಾಚಾರವನ್ನು ತಂದ ಗೂಢಚಾರನಿವನೆಂದರಿತು ರಾಕ್ಷಸನು ಚಾರನಿಗೆ ‘ಪ್ರಿಯಂವದಕ, ಹಾವಾಡಿಗನ ಸುಭಾಷಿತಗಳನ್ನು ಕೇಳಲು ನನಗಾಶೆಯಾಗಿದೆ. ಹಾವುಗಳನ್ನು ಹೊರಗಿಟ್ಟು ಸೌಮ್ಯವೇಷದಿಂದ ಅವನನ್ನು ಒಳಗೆ ಬರುವಂತೆ ಹೇಳು. ನಿನ್ನ ಕೆಲಸದಲ್ಲಿ ಎಚ್ಚರಿಕೆಯಿಂದಿರು’ ಎಂದು ಅಪ್ಪಣೆ ಮಾಡಿದನು.
ಗೂಢಚಾರನು ಅಮಾತ್ಯನನ್ನು ಏಕಾಂತದಲ್ಲಿ ಕಂಡನು. ಗೂಢಚಾರನನ್ನು ಆದರಿಸಿ ರಾಕ್ಷಸನು ” ದಾತ್ಯೂಹಕ, ಪಾಟಲೀಪುರದ ಸಮಾಚಾರವೇನು? ಚಂದ್ರಗುಪ್ತನ ವಧೆ ಕೈಗೂಡಿತೇ? ರಾಜಧಾನಿಯಲ್ಲಿ ನಮ್ಮವರು ಏನೇನು ಕೆಲಸಮಾಡುತ್ತಿದ್ದಾರೆ? ಎಲ್ಲವನ್ನೂ ವಿವರವಾಗಿ ತಿಳಿಸು’ ಎಂದನು. ಚಾರನು ರಾಕ್ಷಸನ ಮಾತಿಗೆ ಉತ್ತರವಾಗಿ ಈ ರೀತಿ ಬಿನ್ನೈಸಿದನು. ‘ಅಮಾತ್ಯರೇ, ಚಂದ್ರಗುಪ್ತನ ವಧೆಯೆಲ್ಲಿ ಬಂತು? ಚಾಣಕ್ಯನಿಗೆ ಮೈತುಂಬ ಕಣ್ಣು. ನಮ್ಮವರ ಕಪಟ ನಮ್ಮವರಿಗೇ ಸಾವನ್ನು ತಂದುವು. ಪರ್ವತರಾಜನು ತೀರಿಕೊಂಡ ಮೇಲೆ ಚಾಣಕ್ಯನು ಅವನ ತಮ್ಮ ವಿರೋಚನನನ್ನು ಕರೆಸಿಕೊಂಡು ಅವನಿಗೆ ಅರ್ಧರಾಜ್ಯ ಕೊಡುವ ಏರ್ಪಾಟನ್ನು ಮಾಡಿದನು. ಚಂದ್ರಗುಪ್ತನ ಪಟ್ಟಾಭಿಷೇಕ, ಮೆರವಣಿಗೆಗಾಗಿ ಎಲ್ಲವೂ ಚಾಣಕ್ಯನ ಅಪ್ಪಣೆಯಂತೆ ಸಿದ್ಧವಾದುವು. ಎಲ್ಲರಿಗಿಂತಲೂ ಮೊದಲು ದಾರುವರ್ಮನು ರಾಜ ದ್ವಾರವನ್ನು ಸಿಂಗರಿಸಿ, ಚಾಣಕ್ಯನಲ್ಲಿಗೆ ಬಂದು ಬಹುಮಾನ ಬೇಡಿದನು. ಚಾಣಕ್ಯನಿಗೆ ಅನುಮಾನ ಬಂದು ಆ ಸ್ಥಳವನ್ನು ಚೆನ್ನಾಗಿ ಪರೀಕ್ಷಿಸಿ ನೋಡಿ, ಮನಸ್ಸಿನಲ್ಲಿ ಏನನ್ನೋ ಯೋಚಿಸಿಕೊಂಡು ಸುಮ್ಮನಾದನು. ಶಿಲ್ಪಿಯನ್ನು ಮತ್ತೊಂದು ದಿನ ಬರಹೇಳಿ ವಿರೋಚನನನ್ನು ಕರೆಸಿಕೊಂಡು, ಅವನನ್ನು ಸಿಂಹಾಸನದಲ್ಲಿ ಕುಳ್ಳಿ ರಿಸಿ ಅಭಿಷೇಕಮಾಡಿ. ಅರ್ಧರಾಜ್ಯವನ್ನು ಕೊಟ್ಟನು. ಸರಿರಾತ್ರಿಯಲ್ಲಿ ವಿರೋಚನನ ಮೆರವಣಿಗೆ ರಾಜದ್ವಾರಕ್ಕೆ ಬರಲು, ಅವನನ್ನು ಚಂದ್ರಗುಪ್ತನೆಂದೇ ತಿಳಿದು ದಾರುವರ್ಮನು ಕೀಲನ್ನು ಸಡಿಲಿಸಿದನು. ಆ ಭಾರವಾದ ತೊಲೆಯಿಂದ ಪಟ್ಟದಾನೆಯ ಮಾವಟಿಗನು ಹತನಾದನು. ಅದನ್ನು ಕಂಡು ಕೆಲಸ ಕೆಟ್ಟಿತೆಂದು ತಿಳಿದು ದಾರುವರ್ಮನು ತನ್ನ ಕೊಡತಿಯಿಂದ ವಿರೋಚಕನ ತಲೆಯೊಡೆಯಲು, ಭಲ್ಲೆಯವರು ಶಿಲ್ಪಿಯನ್ನು ತಿವಿದುಕೊಂದರು. ಇನ್ನು ವೈದ್ಯನ ಸಂಗತಿಯನ್ನು ಹೇಳುವೆನು ಕೇಳಿ. ಒಂದು ದಿನ ಚಂದ್ರಗುಪ್ತನಿಗೆ ತಲೆನೋವೆಂದು ಚಾಣಕ್ಯನು ರಾಜವೈದ್ಯನನ್ನು ಕರೆಸಿದನು. ವೈದ್ಯನು ಕೊಟ್ಟ ಚೂರ್ಣವನ್ನು ಚಿನ್ನದ ಬಟ್ಟಲಿಗೆ ಹಾಕಿಸಿ ಚಾಣಕ್ಯನು ಪರೀಕ್ಷಿಸಲು, ಅದರ ಬಣ್ಣ ಕೆಟ್ಟಿತು. ಔಷಧಿಯಲ್ಲಿ ವಿಷವಿದೆಯೆಂದು ತಿಳಿದು ಅದನ್ನು ಕುಡಿಯಕೂಡದೆಂದು ಚಾಣಕ್ಯನು ಚಂದ್ರಗುಪ್ತನಿಗೆ ಹೇಳಿದನು. ಅದೇ ಔಷಧಿಯನ್ನು ವೈದ್ಯನಿಗೆ ಕುಡಿಸಿದರು. ಅವನು ಸತ್ತುಹೋದನು.’
ಕಥೆಯನ್ನು ಹೇಳುತ್ತಾ ದಾತ್ಯೂಹಕನು ಕಣ್ಣೀರು ಮಿಡಿದನು. ರಾಕ್ಷಸನು ಎಲ್ಲವನ್ನೂ ಕೇಳುತ್ತ ಸುಮ್ಮನೆ ಕುಳಿತಿದ್ದನು. ನಡುನಡುವೆ ಅವನ ಕಣ್ಣುಗಳಿಂದ ಬಿಸಿನೀರು ಮುತ್ತಿನಂತೆ ಉದುರುತ್ತಿತ್ತು. ಕಥೆ ಮುಂದುವರಿಯಿತು. ” ಮಲಗುವ ಮನೆಯಲ್ಲಿ ಚಂದ್ರಗುಪ್ತನನ್ನು ಕೊಲ್ಲಲು ನೇಮಿಸಿದ್ದ ಪ್ರಮೋದಕನ ಗತಿಯೂ ಹೀಗೆಯೇ ಆಯಿತು. ನೀವು ಕೊಟ್ಟ ಹಣವನ್ನು ವಿವೇಕವಿಲ್ಲದೆ ವೆಚ್ಚಮಾಡಿ ಅವನು ಮೆರೆಯತೊಡಗಿದನು. ಅವನ ಬಟ್ಟೆಬರೆ, ಊಟ ಉಪಚಾರ, ವಿಲಾಸ ವಿಹಾರ ಇವಕ್ಕೆ ಮಿತಿಯೇ ಇರಲಿಲ್ಲ. ಚಾಣಕ್ಯನು ಅವನನ್ನು ಕರೆದು ‘ನಿನ್ನ ಸಂಬಳ ಸ್ವಲ್ಪ. ಈ ವಿಲಾಸಕ್ಕೆ ನಿನಗೆಲ್ಲಿ ಹಣ ಬಂತು?’ ಎಂದು ಕೇಳಿದನು. ಪ್ರಮೋದಕನು ತಪ್ಪುತಪ್ಪಾಗಿ ಉತ್ತರಕೊಡಲು ಗುಟ್ಟುರಟ್ಟಾಯಿತು. ಇದರ ಪರಿಣಾಮ, ಪ್ರಮೋದಕನಿಗೆ ಚಿತ್ರ ಹಿಂಸೆ. ಚಂದ್ರಗುಪ್ತನು ಮಲಗುವ ಮನೆಯ ಗೋಡೆಯಲ್ಲಿ ಅಡಗಿದ್ದ ಚೋರರ ಸುದ್ದಿಯಂತೂ ಕೇಳಲು ಬಲುಘೋರ. ಗೋಡೆಯ ಬಿರುಕಿನಲ್ಲಿ ಅನ್ನದ ಅಗುಳನ್ನು ಕಚ್ಚಿಕೊಂಡು ಒಯ್ಯುತ್ತಿದ್ದ ಇರುವೆಯ ಸಾಲು ಚಾಣಕ್ಯನ ಕಣ್ಣಿಗೆ ಬೀಳಲು ಅಲ್ಲಿ ಯಾರೋ ಇರುವರೆಂದು ಊಹಿಸಿ ಅವನು ಆ ಮನೆಗೆ ಬೆಂಕಿ ಇಡಿಸಿದನು. ಮನೆಯನ್ನೆಲ್ಲಾ ಹೊಗೆ ಸುತ್ತಿಕೊಳ್ಳಲು ಚೋರರು ಹೊರಗೆ ಬರಲು ಯತ್ನಿಸಿದರು. ಅವರಿಗೆ ಸುರಂಗದ ದಾರಿಯೂ ಕಾಣಿಸಲಿಲ್ಲ. ಹೆಗ್ಗಣಗಳಂತೆ ಅವರು ಒಳಗೇ ಸುಟ್ಟು ಬೂದಿಯಾದರು.’
ರಾಕ್ಷಸನು ಕಥೆಯನ್ನು ಮೈಯೆಲ್ಲ ಕಿವಿಯಾದವನಂತೆ ಕೇಳುತ್ತಿ ದ್ದನು. ದುಃಖದಿಂದ ಅವನ ಕೊರಳ ಸೆರೆಹಿಗ್ಗಿ ದುವು. ಸಂಕಟವನ್ನು ಸ್ವಲ್ಪ ಸೈರಿಸಿಕೊಂಡು ರಾಕ್ಷಸನು ಹೇಳಿದನು: ‘ದಾತ್ಯೂಹಕ ಚಂದ್ರಗುಪ್ತನಿಗಿರುವ ದೈವಸಹಾಯವನ್ನು ನೋಡು. ನನ್ನ ಪ್ರಯತ್ನಗಳೆಲ್ಲಾ ಹೇಗೆ ಹಾಳಾಗುತ್ತಿವೆ! ಅದಿರಲಿ: ರಾಜಧಾನಿಯಲ್ಲಿರುವ ನನ್ನ ಮಿತ್ರರಿಗೆ ಏನೂ ಕೇಡಾಗಲಿಲ್ಲವಷ್ಟೆ!’ ರಾಕ್ಷಸನ ಮಾತಿಗೆ ಗೂಢಚಾರನು ‘ಅಮಾತ್ಯರೇ, ಕಥೆಯೊಳರೆ ಮುಗಿದಿಲ್ಲ. ಈ ಫೆಟನೆಗಳಾದ ಮೇಲೆ ಚಾಣಕ್ಯನು ಚಂದ್ರಗುಪ್ತನನ್ನು ಎಚ್ಚರಿಕೆಯಿಂಡ ನೋಡಿಕೊಳ್ಳತೊಡಗಿದನು. ರಾಕ್ಷಸನ ಮಾತಿನಂತೆ ವಿಷಕನ್ಯೆಯನ್ನು ಜೀವಸಿದ್ದಿ, ಪರ್ವತರಾಜನಿಗೊಪ್ಪಿಸಿ ರಾಜನನ್ನು ಕೊಲ್ಲಿಸಿದನೆಂದು ಅವನನ್ನು ಅವಮಾನಪಡಿಸಿ ನಗರದಿಂದ ಹೊರಡಿಸಲಾಯಿತು. ರಾಜವೈದ್ಯ ಮುಂತಾದವರಿಂದ ಶಕಟದಾಸನು ಚಂದ್ರಗುಪ್ತನ ಸಾವಿಗೆ ಏರ್ಪಡಿಸಿದನೆಂದು ಅವನನ್ನು ಶೂಲಕ್ಕೇರಿಸಿದನು. ಅಮಾತ್ಯರ ಕುಟುಂಬದ ಸುಳಿವು ಚಂದನದಾಸ ಸೆಟ್ಟಿಯ ಮನೆಯಲ್ಲಿರುವುದು ಚಾಣಕ್ಯನಿಗೆ ತಿಳಿದು, ಅವನ ಆಸ್ತಿಯೆಲ್ಲವನ್ನು ತೆಗೆದುಕೊಂಡು, ಹೆಂಡತಿ ಮಕ್ಕಳೊಡನೆ ಅವನನ್ನು ಸೆರೆಮನೆಯಲ್ಲಿಟ್ಟಿದ್ದಾನೆ. ಗುಟ್ಟನ್ನು ರೆಟ್ಟುಮಾಡದಿದ್ದುದೇ ಅವನ ಅಪರಾಧ’ ಎಂದು ಹೇಳಿ ಸುಮ್ಮನಾದನು.
ಈ ಸಮಾಚಾರವನ್ನು ಕೇಳಿ ಹೆಂಡತಿ ಮಕ್ಕಳೊಡನೆ ಚಾಣಕ್ಯನಿಗೆ ತಾನೇ ವಶವಾದಂತಾಯಿತೆಂದುಕೊಂಡನು ರಾಕ್ಷಸ. ಅಷ್ಟರಲ್ಲೇ ಚಾರನು ಬಂದು ಶಕಟದಾಸನು ಬಾಗಿಲಲ್ಲಿ ಕಾದಿರುವನೆಂದು ಬಿನ್ನೈಸಿದನು. ಇದೇನು ಸೋಜಿಗ? ಶೂಲಕ್ಕೇರಿದ ಶಕಟದಾಸನು ಬದುಕಿ ಬರುವುದೆಂದರೇನು? ಬದುಕತಕ್ಕವನನ್ನು ದೈವವೇ ಕಾಪಾಡಬಹುದಲ್ಲವೇ? ರಾಕ್ಷಸನ ಅಪ್ಪಣೆಯಂತೆ ಶಕಟಿದಾಸನು ಒಳಕ್ಕೆ ಬರಲು ಕೌಟಲ್ಯನ ದೃಷ್ಟಿಗೆ ಬಿದ್ದೂ ಬದುಕಿಬಂದ ಮಿತ್ರನನ್ನು ಅಮಾತ್ಯನು ಅಪ್ಪಿಕೊಂಡನು. ಈ ಆನಂದವನ್ನು ಒದಗಿಸಿದ ಶಕಟದಾಸನ ಮಿತ್ರನಾದ ಸಿದ್ಧಾರ್ಥಕನಿಗೆ ತನ್ನ ಮೈಮೇಲಿದ್ದ ಒಡವೆಗಳನ್ನು ಅಮಾತ್ಯನು ಕಳಚಿಕೊಟ್ಟನು.
ಆಗ ರಾಕ್ಷಸನ ಪಾದಕ್ಕೆ ಬಿದ್ದು ಸಿದ್ಧಾರ್ಥಕನು ಅವನಲ್ಲಿ ಈ ರೀತಿ ಬಿನ್ನೈಸಿಕೊಂಡನು. ‘ಅಮಾತ್ಯರೇ, ಇದು ನನಗೆ ಹೊಸ ಊರು. ಇಲ್ಲಿ ಒಬ್ಬರ ಗುರುತೂ ನನಗಿಲ್ಲ. ಈ ಆಭರಣಗಳನ್ನು ಈ ಮುದ್ರಿಕೆಯಿಂದ ಮುದ್ರಿಸಿ ತಮ್ಮ ವಶದಲ್ಲೇ ಇಡಿಸಿಕೊಳ್ಳಬೇಕು. ನನಗೆ ಬೇಕಾದಾಗ ಅವನ್ನು ತೆಗೆದುಕೊಳ್ಳುತ್ತೇನೆ. ಅಲ್ಲದೆ ತಮ್ಮಲ್ಲಿ ಮತ್ತೊಂದು ಅರಿಕೆ. ಈಗ ನಾನು ಚಾಣಕ್ಯನಿಗೆ ಎದಿರುಬಿದ್ದಂತಾಗಿದೆ. ಆದ್ದರಿಂದ ರಾಜಧಾನಿಗೆ ಕಾಲಿಡುವಂತಿಲ್ಲ. ತಮ್ಮ ಪಾದಸೇವೆಯಲ್ಲಿ ಇಲ್ಲಿಯೇ ಇದ್ದು ಕಾಲಕಳೆಯಬೇಕೆಂಬುದು ನನ್ನ ಬಯಕೆ.’
ಸಿದ್ಧಾರ್ಥಕನು ಕೊಟ್ಟ ತನ್ನ ಮುದ್ರಿಕೆಯನ್ನು ನೋಡಿ ಹೆಂಡತಿಗೆ ಕೊಟ್ಟ ಈ ಮುದ್ರಿಕೆ ವೈರಿಗಳ ಕೈಗೆ ಬೀಳಲಿಲ್ಲವೆಂದು ಅಮಾತ್ಯನಿಗೆ ಹರುಷವಾಯಿತು. ಶತ್ರುಗಳ ಕೈಗೆ ಬಿದ್ದು ಬಂದ ತನ್ನ ಮುದ್ರಿಕೆ ಅದು ಎಂದರಿಯ ರಾಕ್ಷಸ. ಆ ಬಳಿಕ ಶಕಟದಾಸನನ್ನು ಕುರಿತು ರಾಕ್ಷಸನು ‘ಶಕಟದಾಸ ಸಿದ್ಧಾರ್ಥಕನು ನಮ್ಮ ಬಳಿಯಲ್ಲೇ ಇರಲಿ. ಈ ಮುದ್ರೆಯುಂಗುರದಿಂದಲೇ ನಿನ್ನ ರಾಯಸದ ಕೆಲಸವನ್ನು ಮಾಡುತ್ತಿರು, ಆಯಾಸಹೊಂದಿರುನ ನೀವು ಇನ್ನು ವಿಶ್ರಮಿಸಿಕೊಳ್ಳಿ’ ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟನು.
ಶಕಟದಾಸನು ಹೊರಟುಹೋದ ಮೇಲೆ ಚಂದ್ರಗುಪ್ತನ ಆಸ್ಥಾನದ ನಡವಳಿಕೆಗಳೇನೆಂದು ದಾತ್ಯೂಹಕನನ್ನು ರಾಕ್ಷಸನು ಕೇಳಿದನು.
ಅದಕ್ಕೆ ಉತ್ತರವಾಗಿ ಅವನು ‘ಅಮಾತ್ಯರೇ, ಚಂದ್ರಗುಪ್ತನ ಆಸ್ಥಾನದಲ್ಲಿ ನಿಮ್ಮ ಉಪಾಯ ಫಲಿಸುವಂತೆ ತೋರುತ್ತಿದೆ. ಮಲಯಕೇತುವನ್ನು ಓಡಿಹೋಗಲು ಅವಕಾಶಕೊಟ್ಟದ್ದು, ಆಗಾಗ ವಿಜಯದಿಂದ ಕೊಬ್ಬಿರುವ ಚಾಣಕ್ಯನು ಚಂದ್ರಗುಪ್ತನ ಅಪ್ಪಣೆಯನ್ನು ಮುರಿಯುತ್ತಿರುವುದು ಚಂದ್ರಗುಪ್ತನಿಗೆ ಅಸಮಾಧಾನವನ್ನು ತಂದಿದೆ ‘ ಎಂದು ಅರಳಿದ ಮುಖದಿಂದ ಹೇಳಿದನು.
ಚಂದ್ರಗುಪ್ತನಿಗೆ ಚಕ್ರವರ್ತಿಪದವಿಯ ದರ್ಪವಿದೆ. ಚಾಣಕ್ಯನು ಅಭಿಮಾನಿ. ಒಬ್ಬನಿಗೆ ರಾಜ್ಯ ಕೈವಶವಾಯಿತು. ಮತ್ತೊಬ್ಬನ ಪ್ರತಿಜ್ಞೆ ಕೈಗೂಡಿತು. ಹೀಗಿರುವಾಗ ಇವರಲ್ಲಿ ಅಸಮಾಧಾನ ಹುಟ್ಟಿರಬಹುದೆಂದು ಯೋಚಿಸಿ ರಾಕ್ಷಸನು ‘ದಾತ್ಯೂಹಕ, ಇದೇ ವೇಷದಿಂದ ಮತ್ತೆ ಪಾಟಲೀಪುರಕ್ಕೆ ಹೋಗು. ಸಮಯವರಿತು ವೈತಾಳಿಕರಾದ ನಮ್ಮ ಕಲಶಕ ವಿಜಯರು ಚಂದ್ರಗುಪ್ತನನ್ನು ಹೊಗಳಿ, ಅವನಿಗೆ ಚಾಣಕ್ಯನ ಮೇಲೆ ಕೋಪ ಕೆರಳುವಂತೆ ಮಾಡಲಿ. ಅಲ್ಲಿನ ಗುಟ್ಟಾದ ಸುದ್ದಿಯನ್ನು ಕರಭಕನೊಡನೆ ನನಗೆ ಅವರು ಹೇಳಿ ಕಳುಹಿಸಲಿ’ ಎಂದು ಅವನನ್ನು ಕಳುಹಿಸಿಕೊಟ್ಟನು.
ಈ ವೇಳೆಗೆ ಪ್ರಿಯಂವದಕನು ಮೂವರು ಇವರು ವರ್ತಕರು ಮಾರಾಟಕ್ಕಾಗಿ ಆಭರಣದ ಪೆಟ್ಟಿಗೆಗೆಗಳನ್ನು ತಂದಿದ್ದಾರೆಂದು ವಿಜ್ಞಾಪಿಸಿ ಅವುಗಳನ್ನು ತಂದು ಅಮಾತ್ಯನಿಗೆ ತೋರಿಸಿದನು. ಆಭರಣಗಳು ಚೆನ್ನಾಗಿದ್ದುವು. ಅಲ್ಲದೆ ಮೈಮೇಲಿದ್ದ ಆಭರಣಗಳನ್ನು ಸಿದ್ಧಾರ್ಥಕನಿಗೆ ಉಚಿತವಾಗಿ ಕೊಟ್ಟಿದ್ದ ಕಾರಣ ರಾಕ್ಷಸನು ಆ ಪೆಟ್ಟಿಗೆಗಳನ್ನು ಮಾರಾಟಕ್ಕೆ ತೆಗೆದುಕೊಂಡನು. ಚಾಣಕ್ಯನ ತಂತ್ರ ಕೈಗೂಡಿತು.
ಮುಂದಿನ ಅಧ್ಯಾಯ: ೨೬. ಕಪಟಕಲಹ