ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 27: ವಿಷ ಬೀಜ

೨೭. ವಿಷ ಬೀಜ

ಇತ್ತ ಪಾಟಿಲೀಪುರದಲ್ಲಿದ್ದ ರಾಕ್ಷಸನ ಗೂಢಚಾರನಾದ ಕರಭಕನು ತನ್ನೊಡೆಯನ ಅರಮನೆಯ ಬಾಗಿಲ ಬಳಿಗೆ ಬಂದ ಕಾಲದಲ್ಲಿ ರಾಕ್ಷಸನು ಶಕಟದಾಸನೊಡನೆ ಈ ರೀತಿ ಮಾತನಾಡುತ್ತಿದ್ದನು: ‘ಶಕಟದಾಸ, ನಾನು ಕೈಕೊಂಡ ಕೆಲಸಕ್ಕೆಲ್ಲ ದೈವ ಪ್ರತಿಕೂಲವಾಗುತ್ತಿದೆ. ಚಾಣಕ್ಯನು ನಮ್ಮ ಕೈಗೆ ಎಂದಿಗೆ ಸಿಕ್ಕುತ್ತಾನೆ; ಈಗ ನಾನು ಕೈಕೊಂಡ ಕಾರ್ಯ ಎಂದಿಗೆ ಕೊನೆಗಾಣುತ್ತದೆ ಎಂಬ ಚಿಂತೆಯೇ ಹಗಲಿರುಳು ನನ್ನನ್ನು ಪೀಡಿಸುತ್ತಿದೆ. ರಾತ್ರಿ ನನಗಂತೂ ನಿದ್ದೆಯೇ ಬಾರದು.’ ಹೀಗೆ ನುಡಿಯುತ್ತಿರುವಾಗ ರಾಕ್ಷಸನ ಎಡಭುಜ ಅದುರಿತು. ಈ ಅಪಶಕುನದಿಂದ ರಾಕ್ಷಸನಿಗೆ ಸ್ವಲ್ಪ ಭಯವಾಯಿತು. ಅಷ್ಟರಲ್ಲೆ ದ್ವಾರಪಾಲಕನು ಪಾಟಲೀಪುರದಿಂದ ಕರಭಕನು ಬಂದಿರುವುದನ್ನು ಅಮಾತ್ಯನಿಗೆ ಅರುಹಿದನು. ರಾಕ್ಷಸನ ಅಪ್ಪಣೆಯಂತೆ ಕರಭಕನು ಒಳಗೆ ಬರಲು, ರಾಕ್ಷಸನು ಅವನಿಂದ ಪಾಟಲೀಪುರದ ಸಮಾಚಾರವನ್ನು ಕೇಳತೊಡಗಿದನು.

ರಾಜಕಾರ್ಯದಲ್ಲೇ ತೊಡಗಿದ್ದ ರಾಕ್ಷಸನು ನಾಲ್ಕಾರು ದಿನಗಳಿಂದ ತಲೆನೋವಿನಿಂದ ತೊಂದರೆಪಡುತ್ತಿದ್ದ ವಿಷಯ ರಾಜಕುಮಾರ, ಸೇನಾಪತಿಗಳಿಗೆ ತಿಳಿದು ಬಂದಿತ್ತು. ಈ ದಿನ ರಾಕ್ಷಸನಲ್ಲಿಗೆ ಪಾಟಲೀಪುರದ ಗೂಢಚಾರನು ಬೇರೆ ಬಂದಿದ್ದಾನೆ. ರಾಕ್ಷಸನಿಗೂ ಗೂಢಾಚಾರನಿಗೂ ಗುಟ್ಟಾಗಿ ನಡೆಯುವ ಮಾತುಕತೆಗಳನ್ನು ಕೇಳಲು ಭಾಗುರಾಯಣನಿಗೆ ಆತುರನಿದ್ದುದರಿಂದ ಅವನು ರಾಕ್ಷಸನ ಮನೆಯ ಕಡೆಗೆ ಹೊರಟನು. ಈ ವೇಳೆಗೆ ರಾಜಕುಮಾರನೂ ರಾಕ್ಷಸನಲ್ಲಿಗೆ ಹೋಗಲು ಸಿದ್ಧನಾದನು. ತನ್ನ ಹಿಂದೆ ಬರುತ್ತಿದ್ದ ಸೇನಾಪತಿಗಳನ್ನು ನೋಡಿ ರಾಜಕುಮಾರನು ಅಮಾತ್ಯರ ಬಳಿಗೆ ತಾನೊಬ್ಬನೇ ಹೋಗುವೆನೆಂದೂ ಮಿಕ್ಕವರು ಹಿಂದೆಯೇ ನಿಲ್ಲಬೇಕೆಂದೂ ಅಪ್ಪಣೆ ಮಾಡಿದನು. “ನಾವು ರಾಕ್ಷಸನ ಮೂಲಕ ತಮ್ಮನ್ನು ಆಶ್ರಯಿಸಲಿಲ್ಲ. ಶೇಖರನ ಮೂಲಕ ನಮಗೆ ತಮ್ಮಲ್ಲಿ ಆಶ್ರಯ ದೊರಕಿತು. ಆದ್ದರಿಂದ ತಮ್ಮ ಅಪ್ಪಣೆಯಂತೆ ನಾವು ಇಲ್ಲಿಯೇ ಇರುವೆವು’ ಎಂದು ಹೇಳಿ ಸೇನಾಪತಿಗಳು ಹಿಂದುಳಿದರು.

ಆಪ್ತನಾದ ಭಾಗುರಾಯಣನೊಡನೆ ರಾಕ್ಷಸನ ಮನೆಗೆ ಬರುತ್ತಿದ್ದ ಮಲಯಕೇತು, ಭದ್ರಭಟಾದಿಗಳು ಆಡಿದ ಮಾತಿನ ಭಾವವೇನೆಂದು ಸೇನಾಪತಿಯನ್ನು ಕೇಳಿದನು. ರಾಜಕುಮಾರನ ಮಾತಿಗೆ ಉತ್ತರವಾಗಿ ಭಾಗುರಾಯಣನು ‘ಕುಮಾರ, ಲೋಕದಲ್ಲಿ ಗುಣವಂತನಾದ ಪ್ರಭುವನ್ನು ಆತನ ಆಪ್ತಮಿತ್ರರ ಮೂಲಕ ಆಶ್ರಯಿಸಬೇಕು. ರಾಕ್ಷಸನು ನಮಗೆ ಮಿತ್ರನಲ್ಲವೇ? ಎಂದು ನೀನು ಕೇಳಬಹುದು. ಮಾತಿಗೆ ನಾನು ಹೇಳುವ ಸಮಾಧಾನವಿಷ್ಟು. ರಾಕ್ಷಸನಿಗೆ ಆ ಚಾಣಕ್ಯನಲ್ಲಿ ವೈರ, ಚಂದ್ರಗುಪ್ತನಲ್ಲಲ್ಲ. ವಿಜಯದಿಂದ ಕೊಬ್ಬಿರುವ ಚಾಣಕ್ಯನು ಈಗ ಚಂದ್ರಗುಪ್ತನನ್ನು ಲಕ್ಷಿಸದಿರಬಹುದು. ವಂಶಪಾರಂಪರ್ಯವಾಗಿ ಬಂದ ಪ್ರಜಾರಂಜಕನೂ, ದಕ್ಷನೂ ಆದ ರಾಕ್ಷಸನನ್ನೇ ನಂಬಿ, ಸಮಯಕಾದು ಚಂದ್ರಗುಪ್ತನು ಚಾಣಕ್ಯನನ್ನು ಮಂತ್ರಿಪದವಿಯಿಂದ ತೆಗೆದುಹಾಕಬಹುದು. ಚಂದ್ರೆಗುಪ್ತನು ನಂದರ ವಂಶದವನು. ಈಗ ನೋಡು, ರಾಕ್ಷಸನ ಮನೆಯವರು ಪಾಟಲೀಪುರದಲ್ಲಿದ್ದಾರೆ. ಆದ್ದರಿಂದ ಚಂದ್ರಗುಪ್ತ ರಾಕ್ಷಸರಿಬ್ಬರೂ ಸಂಧಿಗೆ ಒಡಂಬಡಬಹುದು. ಹಾಗಾದರೆ ಪಾಟಲೀಪುರದ ಜನರೆಲ್ಲ ದ್ರೋಹಿಗಳೆಂದು ನೀನು ತಿಳಿಯುವುದಿಲ್ಲವೇ? ಆದ್ದರಿಂದ ತಮಗೆ ನಿನ್ನ ಆಶ್ರಯ ತಪ್ಪಕೂಡದೆಂದು ನಿನ್ನಲ್ಲಿ ಈ ರೀತಿ ಅವರು ಮುಂಚೆಯೇ ಬಿನ್ನೈಸಿಕೊಂಡಿರಬಹುದು ‘ ಎಂದು ನುಡಿದನು. ಎಷ್ಟಾದರೂ ಜನಗಳಿಗೆ ತಾಯ್ನಾಡಿನ ಮಮತೆ ತಪ್ಪುವುದೇ ಎಂದಂದುಕೊಂಡು ಮಲಯಕೇತು ರಾಕ್ಷಸನ ಮನೆಗೆ ಬಂದನು. ರಾಕ್ಷಸ ಮಲಯಕೇತು– ಇವರ ಸ್ನೇಹವನ್ನು ಕಳಚುವುದರಲ್ಲಿ ಭಾಗುರಾಯಣನು ಮೊದಲನೆಯ ಮೆಟ್ಟಿಲನ್ನೆರಿದನು.

ರಾಕ್ಷಸನೆದುರಿನಲ್ಲಿ ಪಾಟಲೀಪುರದ ಸಮಾಚಾರ ತನಗೆ ಪೂರ್ತಿಯಾಗಿ ತಿಳಿದುಬರದೆಂದು, ಮಲಯಕೇತು ಭಾಗುರಾಯಣನೊಡನೆ ಕರಭಕ ರಾಕ್ಷಸರ ಸಂವಾದವನ್ನು ಹೊರಗಡೆಯಲ್ಲಿಯೇ ಆಲಿಸುತ್ತ ನಿಂತನು. ತಒಳಗಡೆ ಕರಭಕನು ಅಮಾತ್ಯನಿಗೆ ರಾಜಧಾನಿಯ ಸಮಾಚಾರಗಳನ್ನು ಕ್ರಮವಾಗಿ ಹೇಳತೊಡಗಿದನು. ‘ಅಮಾತ್ಯರೇ, ತಮ್ಮ ಅಪ್ಪಣೆಯನ್ನು ಕಲಶಕ ವಿಜಯರಿಗೆ ತಿಳಿಸಿದೆನು. ನೀವು ನೆನೆಸಿದಂತೆ ಕಾರ್ಯ ಕೈಗೂಡಿತು. ಕೌಮುದೀಮಹೋತ್ಸವವನ್ನು ನಿಲ್ಲಿಸಲು ಕಾರಣವೇನೆಂದು ತುಂಬುಸಭೆಯಲ್ಲಿ ಚಂದ್ರಗುಪ್ತನು ಚಾಣಕ್ಯನನ್ನು ಆಕ್ಷೇಪಿಸಿದನು. ಇದೇ ಸಮಯವನ್ನು ಕಾದು ನಮ್ಮವರು ಚಂದ್ರಗುಪ್ತನನ್ನು ಬಾಯಿತುಂಬ ಹೊಗಳಿದರು. ಮಾತಿಗೆ ಮಾತು ಬೆಳೆದು ಚಂದ್ರಗುಪ್ತನು, ಅಮಾತ್ಯರಿಗಿಂತಲೂ ಬುದ್ದಿವಂತರುಂಟೇ? ಎಂದು ನಿಮ್ಮನ್ನು ಹೊಗಳಿದನು. ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಮಂತ್ರಿ ಪದವಿ ಚಾಣಕ್ಯನ ಕೈಬಿಟ್ಟಿತು. ಖಿನ್ನನಾಗಿ ಚಾಣಕ್ಯನು ಸಭೆಯಿಂದೆದ್ದು ಹೋದನು. ಇವರಿಬ್ಬರ ಅಸಮಾಧಾನಕ್ಕೆ ಕಾರಣ ಇಷ್ಟೇ ಅಲ್ಲ. ರಾಕ್ಷಸ ಮಲಯಕೇತು- ಇವರನ್ನು ನಗರದಿಂದ ತಪ್ಪಿಸಿಕೊಂಡು ಹೋಗಲು ಚಾಣಕ್ಯನು ಅವಕಾಶಕೊಟ್ಟಿದ್ದು ಚಂದ್ರಗುಪ್ತನಿಗೆ ತುಂಬ ಅಸಮಾಧಾನವನ್ನುಂಟುಮಾಡಿದೆ. ಇಷ್ಟರಲ್ಲೇ ಚಾಣಕ್ಯನು ತಪೋವನಕ್ಕೆ ಹೋಗುವನೆಂಬ ಸುದ್ದಿ ಎಲ್ಲ ಕಡೆ ಹರಡಿದೆ.’

ಕರಭಕನ ಮಾತನ್ನು ಕೇಳಿ ರಾಕ್ಷಸನಿಗೆ ಹಿಡಿಸಲಾರದಷ್ಟು ಸಂತೋಷವುಂಟಾಯಿತು. ಸಕಾಲದಲ್ಲಿ ಬಿತ್ತಿದ ಬೀಜ ಉತ್ತಮವಾದ ಫಲವನ್ನು ಕೊಟ್ಟೇಕೊಡುವುದಲ್ಲವೇ? ರಾಕ್ಷಸನು ಶಕಟದಾಸಸನಿಗೆ ‘ಮಿತ್ರ, ಇನ್ನು ಚಂದ್ರಗುಪ್ತನು ನನ್ನ ಕೈವಶನಾದನೆಂದೇ ತಿಳಿ. ಚಂದನದಾಸನು ಬಿಡುಗಡೆ ಹೊಂದುತ್ತಾನೆ. ನೀನೂ ಹೆಂಡತಿ ಮಕ್ಕಳನ್ನು ಬೇಗ ನೋಡುವೆ. ಇದಲ್ಲದೆ ಚಾಣಕ್ಯನು ತಪೋವನಕ್ಕೆ ಹೊರಡುವುದು ನಿಜವಿರಬಹುದು. ಅವನ ಈ ಒಂದು ಪ್ರತಿಜ್ಞೆ ಕೈಗೂಡುವುದೇ ಕಷ್ಟವಾಯಿತು. ಹೀಗಿರುವಾಗ ಮತ್ತೊಮ್ಮೆ ತಿಳಿದೂ ತಿಳಿದೂ ಅವನು ಹೇಗೆ ಪ್ರತಿಜ್ಞೆಮಾಡಿಯಾನು’ ಎಂದನು. ಮಾತು ಮುಗಿದ ಮೇಲೆ ಕರಭಕನು ವಿಶ್ರಮಿಸಿಕೊಳ್ಳಲು ಹೊರಟುಹೋದನು.

ರಾಕ್ಷಸನ ಮಾತು ಮಲಯಕೇತುವಿನ ಸಂದೇಹವನ್ನು ಬಲಪಡಿಸಿತು. ಹೆಜ್ಜೆಹೆಜ್ಜೆಗೂ ರಾಕ್ಷಸನ ಬಣ್ಣ ಬದಲಾಯಿಸುತ್ತಿದೆ ಎನ್ನಿಸಿತು ರಾಜಕುಮಾರನಿಗೆ. ಗೋಮುಖದ ಈ ರಾಕ್ಷಸನನ್ನು ನಂಬುವುದೆಂತು? ಅವನಿಗೆ ಸಂದೇಹವಿಲ್ಲದೆ ಚಂದ್ರಗುಪ್ತನಲ್ಲಿ ಅಭಿಮಾನವಿದೆ. ಅವನನ್ನು ಪರೀಕ್ಷಿಸದೆ ಮುಂದಿನ ಕೆಲಸಕೆ ಕೈಹಾಕಕೂಡದೆಂದು ಮಲಯಕೇತು ಮುಂದೆ ಬಂದು ರಾಕ್ಷಸನಿಗೆ ಕಾಣಿಸಿಕೊಂಡು ಕೊಂಡನು.

ತನ್ನಲ್ಲಿಗೆ ಅಕಸ್ಮಾತ್ತಾಗಿ ಬಂದ ಕುಮಾರನನ್ನು ರಾಕ್ಷಸನು ಆದರದಿಂದ ಕಂಡನು. ಇದರಿಂದ ಸಂತೋಷಗೊಂಡ ಮಲಯಕೇತು ‘ಅಮಾತ್ಯರೇ, ನಿಮಗೆ ತಲೆನೋವೆಂದು ಕೇಳಿದೆವು. ಈಗ ಅದು ಹೇಗಿದೆ? ವಿಜಯಯಾತ್ರೆಗೆ ಪ್ರಯಾಣಮಾಡಲು ಏನು ಅಡ್ಡಿ?’ ಎಂದು ಕೇಳಿದನು.

ಮಲಯಕೇತುವಿಗೆ ಅಮಾತ್ಯನು ‘ಕುಮಾರ, ಇನ್ನು ವಿಜಯಯಾತ್ರೆಗೆ ನಾವು ತೆರಳಬಹುದು. ಚಂದ್ರಗುಪ್ತನಿಂದ ಚಾಣಕ್ಯನು ದೂರನಾದ. ಚಂದ್ರಗುಪ್ತನಿಗೆ ಇದೊಂದು ದೊಡ್ಡ ನಷ್ಟವೆಂದು ತಿಳಿ. ಸ್ಪಂತವಾಗಿ ಆತನು ಕಾರ್ಯನಿರ್ವಾಹಮಾಡಲಾರನು. ಮಂತ್ರಿಯಿಲ್ಲದ ಚಂದ್ರಗುಪ್ತ, ನಂದರಲ್ಲೇ ಅನುರಕ್ತರಾದ ಪ್ರಜೆ, ನನಗೆ ಪರಿಚಿತವಾದ ಪಾಟಲೀಪುತ್ರ, ನಿನ್ನನ್ನು ಆಶ್ರ ಯಿಸಿರುವ ನಾನು- ಇಷ್ಟೆಲ್ಲ ಅನುಕೂಲವಿರುವಾಗ ಕಾಲ ಕಳೆಯಕೂಡದು.’ ಎಂದು ಅವನನ್ನು ಪ್ರೋತ್ಸಾಹಿಸಿದನು. ಶುಭಲಗ್ನದಲ್ಲಿ ವಿಜಯಯಾತ್ರೆಗೆ ಪ್ರಯಾಣ ಬೆಳೆಸಬೇಕೆಂದು ಮಲಯಕೇತುವಿನ ಅಪ್ಪಣೆಯಾಯಿತು.


ಮುಂದಿನ ಅಧ್ಯಾಯ: ೨೮. ಫಲದ ಮಾರ್ಗದಲ್ಲಿ


Leave a Reply

Your email address will not be published. Required fields are marked *