ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 28: ಫಲದ ಮಾರ್ಗದಲ್ಲಿ
೨೮. ಫಲದ ಮಾರ್ಗದಲ್ಲಿ
ರಾಕ್ಷಸನ ಅಪ್ಪಣೆಯಂತೆ ವಿಜಯಯಾತ್ರೆಗೆ ಎಲ್ಲವೂ ಅಣಿಯಾಯಿತು. ಶುಭಲಗ್ನವನ್ನು ನಿಶ್ಚೈಸಿ ಪ್ರಯಾಣ ಬೆಳೆಸುವುದೊಂದೇ ಇನ್ನು ಉಳಿದಿರುವ ಕೆಲಸ. ಆ ಸಮಯದಲ್ಲಿ ಚಂದ್ರಗುಪ್ತನಿಂದ ಅವಮಾನ ಹೊಂದಿದ ಜೀವಸಿದ್ದಿ ರಾಕ್ಷಸನ ಅರಮನೆಯ ಬಾಗಿಲ ಬಳಿ ಬಂದು ನಿಂತನು. ಆಗ ರಾಕ್ಷಸನು ಪ್ರಯಾಣದ ಲಗ್ನವನ್ನು ನಿಶ್ಚಯ ಮಾಡುವದಕ್ಕಾಗಿ ಹೊರಗೆ ಯಾರಾದರೂ ಜ್ಯೋತಿಷ್ಕರಿದ್ದಾರೆಯೇ ನೋಡಿ ಬಾ ಎಂದು ದೂತನಿಗೆ ಅಪ್ಪಣೆ ಮಾಡಲು ದೂತನು ಹೊರಗೆ ಹೋಗಿ ಬಂದು ‘ಅಮಾತ್ಯರೇ, ಹೊರಗಡೆ ಯಾವ ಜ್ಯೋತಿಷ್ಕರೂ ಕಾಣಿಸಲಿಲ್ಲ. ಕ್ಷಪಣಕ ಜೀವಸಿದ್ದಿ ಮಾತ್ರ ಬಂದು ನಿಂತಿದ್ದಾನೆ.’ ಎಂದು ಬಿನ್ನೈಸಿದನು.
ಮೊಟ್ಟ ಮೊದಲು ಕ್ಷಷಣಕನ ದರ್ಶನ ಅಪಶಕುನ. ಆದರೆ ತನಗಾಗಿ ಅವಮಾನ ಹೊಂದಿ ಕಷ್ಟಪಟ್ಟಿರುವ ಈತನನ್ನು ಹಿಂದಕ್ಕೆ ಕಳುಹಿಸಿ ಬಿಡುವುದು ಉಚಿತವಲ್ಲವೆಂದುಕೊಂಡು ರಾಕ್ಷಸನು ಜೀವಸಿದ್ಧಿಯನ್ನು ಸೌಮ್ಯ ವೇಷದಿಂದ ಒಳಗೆ ಕರೆಸಿಕೊಂಡನು. ಜೀವಸಿದ್ಧಿ ಅಮಾತ್ಯನಿಗೆ ಹರಸಿ ಕುಳಿತುಕೊಳ್ಳಲು–
ರಾಕ್ಷಸ– ಕ್ಷಪಣಕರೇ, ಈಗ ರಾಜಕಾರ್ಯ ಬಲವಾಗಿದೆ. ಉಳಿದ ವಿಷಯವನ್ನು ಆಮೇಲೆ ವಿಚಾರಿಸುತ್ತೇನೆ. ಈಗ ವಿಜಯ ಯಾತ್ರೆಗೆ ಸರಿಯಾದ ಲಗ್ನವನ್ನು ನೋಡಿ ಹೇಳಿ.
ಕ್ಷಷಣಕ- – ಅಮಾತ್ಯರೇ, ಈ ದಿನ ಮಧ್ಯಾಹ್ನವಾದ ಮೇಲೆ ಹುಣ್ಣಿಮೆಯ ತಿಥಿ ಬರುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಹೋಗಲು ಬಯಸಿರುವ ನಿಮಗೆ ನಕ್ಷತ್ರ ನಾಮಭಾಗಕ್ಕೆ ಆಗುತ್ತದೆ. ಸಂಜೆಯಾಗುತ್ತಲೇ ಪೂರ್ಣಚಂದ್ರ ಬುಧನೊಡನೆ ಉದಯಿಸುತ್ತಾನೆ. ಕೇತು ಎದ್ದು ಮುಳುಗುತ್ತಾನೆ. ನಿಮಗೆ ಚಂದ್ರಬಲ ಒದಗಿ ಒಳ್ಳೆಯ ಸಿದ್ಧಿ ದೊರೆಯುವುದು.
ರಾಕ್ಷಸನಿಗೆ ಹಿಂದಿನದನ್ನು ನೆನೆದು, ಸ್ವಲ್ಪ ಸಂಶಯಹುಟ್ಟಿ ” ಕ್ಷಪಣಕರೇ, ಬೇರೆ ಜೋತಿಷ್ಕರನ್ನು ವಿಚಾರಿಸಿ ಸ್ವಲ್ಪ ಸರಿಯಾಗಿ ಹೇಳಿ’ ಎಂದನು. ಅದಕ್ಕೆ ಕ್ಷಸಣಕನು ‘ತಾವೇ ಬೇರೆಯವರನ್ನು ವಿಚಾರಿಸಬಹುದು. ನಿನ್ನಲ್ಲಿ ನನಗೆ ಕೋಪವಿಲ್ಲ. ನಿನ್ನವರನ್ನು ಬಿಟ್ಟು ಪರರನ್ನು ನೆಚ್ಚಿಕೊಂಡಿರುವ ನಿನ್ನಲ್ಲಿ ದೈವವೇ ಕೋಪಗೊಂಡಿದೆ’ ಎಂದು ಹೇಳಿ ಅಲ್ಲಿಂದ ಹೊರಟುಹೋದನು. ಅಧಿಕಾರ, ಐಶ್ವರ್ಯಗಳು ಕೈಬಿಟ್ಟಾಗ ಆಶ್ರಿತರು ದೂರವಾಗುವುದು ಹೀಗೆಯೇ ಎಂದೆನಿಸಿತು ಅಮಾತ್ಯನಿಗೆ.
ಅಮಾತ್ಯನ ಅಪ್ಪಣೆಯಂತೆ ಮಲಯಕೇತುವಿನ ಸೈನ್ಯ ವಿಜಯಯಾತ್ರೆಗೆ ಹೊರಟು ಪಾಟಲೀಪುರವನ್ನು ಸಮೀಪಿಸಿತು. ಆಗ ಸೇನಾಪತಿಗಳು ಮಲಯಕೇತುವಿನ ಬಳಿ ರಾಕ್ಷಸನಿಗಿರುವ ಆಶ್ರಯವನ್ನು ತಪ್ಪಿಸಿ, ಮೃಗವನ್ನು ಹಿಡಿಯಲು ಸಿದ್ಧರಾದರು. ಇತ್ತ ಸಿದ್ಧಾರ್ಥಕನು ಶಕಟದಾಸನ ಬಳಿಗೆ ಬಂದು ‘ತೌರೂರಿನಲ್ಲಿರುವ ನನ್ನ ಹೆಂಡತಿಗೆ ಅಮಾತ್ಯರು ಕೊಟ್ಟ ಆಭರಣಗಳನ್ನು ತೋರಿಬರುತ್ತೇನೆ. ಅವುಗಳನ್ನು ಕೊಡು. ಎಂದು ಹೇಳಿ ಅವನಿಂದ ಆಭರಣದ ಪೆಟ್ಟಿಗೆಯನ್ನು ತೆಗೆದುಕೊಂಡು, ಚಾಣಕ್ಯನು ತನಗೆ ಹಿಂದೆ ಕೊಟ್ಟಿದ್ದ ಲೇಖನದೊಡನೆ ಭಾಗುರಾಯಣನು ಉಂಡಿಗೆಯನ್ನು ಕೊಡುತ್ತಿದ್ದ ಉಕ್ಕಡದ ಮಾರ್ಗವಾಗಿ ಬರುತ್ತಿದ್ದನು. ಆಗ ಅವನೆದುರಿಗೆ ಕ್ಷಪಣಕನು ಬರಲು ‘ಕ್ಷಪಣಕನು ನೋಟ ಅಪಶಕುನವಾದರೂ ನನಗೆ ಒಳ್ಳೆ ಯದು. ಎಷ್ಟಾದರೂ ಇವನು ನಮ್ಮವನಲ್ಲನೆ?’ ಎಂದುಕೊಂಡು ಅವನನ್ನು ಈ ರೀತಿ ಕೇಳಿದನು.
ಸಿದ್ದಾರ್ಥಕ– ಸ್ವಾಮಿ ಕ್ಷಪಣಕರೇ, ನಮಸ್ಕಾರ. ಎಲ್ಲಿಂದ ಬಂದಿರಿ? ಎಲ್ಲಿಗೆ ಪ್ರಯಾಣ?
ಕ್ಷಪಣಕ– ನನ್ನ ಮಾತು ಹಾಗಿರಲಿ. ನೀನು ಎಲ್ಲಿಗೋ ಹೊರಟರುವಂತಿದೆ!
ಸಿದ್ಧಾರ್ಥಕ– ಕ್ಷಪಣಕರೇ, ತಾವು ಜ್ಯೊತಿಷ್ಯವನ್ನು ಬಲ್ಲವರು. ತಮಗೆ ಹೇಳತಕ್ಕದ್ದೇನಿದೆ?
ಕ್ಷಪಣಕ– ಸಿದ್ಧಾರ್ಥಕ, ನಿನ್ನಲ್ಲಿರುವ ಪತ್ರವೇ ನಿನ್ನ ಪ್ರಯಾಣವನ್ನು ಸೂಚಿಸುತ್ತಿದೆ.
ಸಿದ್ಧಾರ್ಥಕ– ನನ್ನ ಗುಟ್ಟನ್ನು ತಾವು ಕಂಡುಕೊಂಡುಬಿಟ್ಟಿರಿ ನಾನು ಮತ್ತೊಂದು ದೇಶಕ್ಕೆ ಪ್ರಯಾಣ ಹೊರಟಿರುತ್ತೇನೆ. ಪ್ರಯಾಣಕ್ಕೆ ದಿವಸ ಹೇಗಿದೆ?
ಕ್ಷಪಣಕ– ಕ್ಷೌರಮಾಡಿಸಿಕೊಂಡ ಮೇಲೆ ಆಯುಷ್ಕರ್ಮಕ್ಕೆ ದಿವಸ ಹೇಗಿದೆ ಎಂದು ಕೇಳಿದಂತಾಯಿತು ನಿನ್ನ ಪ್ರಶ್ನೆ. ಈ ದಿನ ಮೊದಲುಗೊಂಡು ಪಾಟಿಲೀಪುರದ ಮಾರ್ಗವಾಗಿ ಹೋಗುವ ಜನರು ಭಾಗುರಾಯಣನು ಕೊಡುವ ಉಂಡಿಗೆಯನ್ನು ಉಕ್ಕಡದವರಿಗೆ ತೋರಿಸಿ ಹೋಗಬೇಕಂತೆ. ರಾತ್ರಿಯಕಾಲದಲ್ಲಿ ಉಂಡಿಗೆಯ ಆವಶ್ಯಕತೆ ಇನ್ನೂ ಹೆಚ್ಚು. ನೀನು ರಾತ್ರಿಯ ಕಾಲದಲ್ಲಿ ಉಕ್ಕಡದವರಿಗೆ ಸಿಲುಕಿ ಬಂಧನಕ್ಕೆ ಒಳಗಾಗಿ ರಾಜಕುಮಾರನ ಮುಂದೆ ನಿಲ್ಲಬೇಕೆಂಬ ಬಯಕೆ ಇದ್ದರೆ ಉಂಡಿಗೆಯಿಲ್ಲದೆ ಹೋಗು. ಎಷ್ಟಾದರೂ ನೀನು ರಾಕ್ಷಸನ ಕಡೆಯವನಾದ್ದರಿಂದ ನಿನ್ನನ್ನು ಯಾರೂ ತಡೆಯರು. ನಮ್ಮ ಕಾರ್ಯಸಿದ್ಧಿಯ ಕಾಲ ಹತ್ತಿರವಾಯಿತು. ಉಂಡಿಗೆಗಾಗಿ ನಾನೂ ಭಾಗುರಾಯಣನ ಬಳಿಗೆ ಹೋಗುವೆನು.
ಕ್ಷಪಣಕ ಸಿದ್ಧಾರ್ಥಕರು ಮುಂದಿನ ಕಾರ್ಯವನ್ನು ನಡೆಸಲು ಒಬ್ಬರನ್ನೊಬ್ಬರು ಬೀಳ್ಳೊಂಡರು.
ಚಾಣಕ್ಯನ ತಂತ್ರ ಎಷ್ಟು ವಿಚಿತ್ರವಾದದ್ದು! ಅಕಾಲ ಮೇಘದೆಂತೆ, ವಿಚಿತ್ರವಾದ ದೈವವಿಲಾಸದಂತೆ ಅವನ ನೀತಿಪ್ರಯೋಗ ಒಮ್ಮೆ ಮಹಾಫಲನನ್ನು ಕೊಡುತ್ತದೆ. ಒಮ್ಮೆ ಅದರ ನೆಲೆಯೇ ಗೊತ್ತಾಗುವುದಿಲ್ಲ. ಅವನ ಕಡೆಯವರೇ ಅದರ ಪೂರ್ಣ ಸ್ವರೂಪವನ್ನರಿಯರು. ಸೇನಾಪತಿ ಭಾಗುರಾಯಣನಿಗೂ ಇದರ ಸ್ವರೂಪ ಅರ್ಥವಾಗದು. ಸ್ವಾಮಿಗಾಗಿ, ಹಣಕ್ಕಾಗಿ ದೇಹವನ್ನು ಮಾರಿಕೊಂಡದ್ದಾಗಿದೆ. ಆದ್ದರಿಂದ ಕುರಿಯಂತೆ ತಲೆಬಾಗಿ ಚಾಣಕ್ಯನ ಅಪ್ಪಣೆಯನ್ನು ಪರಿಪಾಲಿಸುತ್ತಿರುವುದೇ ಭಾಗುರಾಯಣನು ಈಗ ಅನುಸರಿಸುತ್ತಿರುವ ನೀತಿ.
ಪಾಟಿಲೀಪುರ ಹತ್ತಿರವಾದಂತೆಲ್ಲ ಭಾಗುರಾಯಣನು ಆಪ್ತನಂತೆ ಮಲಯಕೇತುವಿನ ಬಳಿಯಲ್ಲೇ ಇರತೊಡಗಿದನು. ರಾಕ್ಷಸನಂತೆ ರಾಜಕುಮಾರನಿಗೆ ತನ್ನ ಮೇಲೆ ಸಂಶಯ ಬಂದರೆ ತನ್ನಗತಿ ಏನಾಗುವುದೋ ಎಂಬ ಹೆದರಿಕೆ ಅವನಿಗೆ. ಮಲಯಕೇತುವನ್ನು ಒಡಂಬಡಿಸಿ ಸ್ಥಳದಿಂದ ಪರಸ್ಥಳಗಳಿಗೆ ಹೋಗುವ ಜನರಿಗೆ ಉಂಡಿಗೆಯನ್ನು ಕೊಡುವ ಅಧಿಕಾರವನ್ನು ಭಾಗುರಾಯಣನು ತಾನೇ ಇಟ್ಟುಕೊಂಡನು. ಇತ್ತ ಭಾಗುರಾಯಣನು ಮಲಯಕೇತುವಿನ ಮನಸ್ಸಿನಲ್ಲಿ ನೆಟ್ಟ ವಿಷ ಬೀಜ ಕುಡಿವಡೆಯಲು ಮೊದಲಾಗಿತ್ತು. ‘ಪಾಟಲೀಪುರ ಹತ್ತಿರವಾಯಿತು. ರಾಕ್ಷಸನು ಹೆಂಡತಿ ಮಕ್ಕಳ ಮೇಲಿನ ಮೋಹದಿಂದ, ನಂದರ ವಂಶದಲ್ಲಿ ಹುಟ್ಟಿದವನೆಂಬ ಅಭಿಮಾನದಿಂದ ಚಂದ್ರಗುಪ್ತ ನೊಡನೆ ಸಂಧಿಗೆ ಒಡಂಬಡುವನೋ, ಇಲ್ಲವೆ ಹಿಡಿದ ಕೆಲಸವನ್ನು ಮಾಡಿಕೊಡುವನೋ ತಿಳಿಯದು. ಈಗ ನನಗಿರುವ ಆಪ್ತನೆಂದರೆ ಭಾಗುರಾಯಣನೊಬ್ಬನೇ. ಅವನನ್ನು ಕೇಳಿ ಮುಂದಿನ ಕೆಲಸವನ್ನು ಮಾಡಬೇಕು? ಎಂದು ಯೋಚಿಸುತ್ತ ಮಲಯಕೇತು ಭಾಗುರಾಯಣನು ಉಂಡಿಗೆಯನ್ನು ಕೊಡುತ್ತಿದ್ದ ಚಾವಡಿಯ ಬಳಿಗೆ ಬರುತ್ತಿದ್ದನು.
ಆಗ ಉಂಡಿಗೆಗಾಗಿ ಕ್ಷಪಣಕನು ತನ್ನಲ್ಲಿಗೆ ಬರಲು ರಾಜಕುಮಾರನು ತನ್ನಲ್ಲಿಗೆ ಬರುತ್ತಿರುವ ಸುಳಿವನ್ನರಿತು ಭಾಗುರಾಯಣನು ರಾಕ್ಷಸನ ಸ್ನೇಹಿತನಾದ ಕ್ಷಪಣಕನನ್ನು ಕೆಣಕಿ ಈ ರೀತಿ ಮಾತನಾಡಿಸಿದನು–
ಭಾಗುರಾಯಣ– ಸ್ವಾಮಿ ಕ್ಷಪಣಕರೇ, ರಾಕ್ಷಸನ ಕಾರ್ಯ ನಿರ್ವಹಣಕ್ಕಾಗಿ ಹೊರಡಲು ತಾವು ಉಂಡಿಗೆಯನ್ನು ಕೇಳುತ್ತಿಲ್ಲವಷ್ಟೆ?
ಕ್ಷಪಣಕ (ಕಿವಿಯನ್ನು ಮುಚ್ಚಿಕೊಂಡು)–ಶಾಂತಂ ಪಾಪಂ! ಭಾಗುರಾಯಣ, ವಂಚಕನಾದ ರಾಕ್ಷಸನ ಕಾರ್ಯ ನನಗೇಕೆ ಬೇಕು? ಅವನ ಹೆಸರು ಯಾವ ದೇಶದಲ್ಲಿ ಕೇಳಿ ಬರುವುದಿಲ್ಲವೋ ಅಲ್ಲಿಗೆ ಹೋಗುವೆನು. ಉಂಡಿಗೆಯನ್ನು ಕೊಡು.
ಭಾಗುರಾಯಣ– ಕ್ಷಪಣಕರೇ, ಇದೇನು? ಮಿತ್ರನಲ್ಲಿ ಇಷ್ಟೊಂದು ಪ್ರಣಯಕಲಹ? ಆತನು ಮಾಡಿದ ಅಪರಾಧವೇನು? ಆ ವಿಷಯ ಗುಟ್ಟಿಲ್ಲದಿದ್ದರೆ ನನ್ನೊಡನೆ ಹೇಳಿ.
ಕ್ಷಪಣಕ– ಅಯ್ಯಾ ಸೇನಾಪತಿ, ರಾಕ್ಷಸನದು ವಂಚಕನ ಸ್ವಭಾವ. ನಾನು ಮಾಡಿಕೊಂಡ ಕೆಲಸಕ್ಕೆ ನನಗೇ ನಾಚೆಕೆಯುಂಬಾಗಿದೆ. ಅದು ಗುಟ್ಟಾದ ವಿಷಯವಲ್ಲದಿದ್ದರೂ, ಮಹಾ ಘಾತುಕವ್ಯಾಪಾರವಾಗಿರುವುದರಿಂದ ಅದನ್ನು ತಮ್ಮಲ್ಲಿ ಹೇಳಲಾಗದು.
ಭಾಗುರಾಯಣ– ಹಾಗಾದರೆ ತಾವು ಉಂಡಿಗೆಯನ್ನು ಕೇಳಲಾಗದು.
ಕ್ಷಪಣಕ– ಅಯ್ಯೋ, ಇನ್ನೇನು ಗತಿ! ಹೇಳದಿದ್ದರೆ ವಿಧಿಯಿಲ್ಲ. ಭಾಗುರಾಯಣ, ನಿನಗೆ ಅಷ್ಟೊಂದು ಕುತೂಹಲವಿದ್ದರೆ ಹೇಳುವೆನು ಕೇಳು. ಪರ್ವತರಾಜನು ಹಿಂದೆ ಪಾಟಲೀಪುರದಲ್ಲಿದ್ದಾಗ, ರಾಕ್ಷಸನು ನನ್ನ ಮೂಲಕ ಆ ವಿಷಕನ್ಯೆಯನ್ನೊಪ್ಪಿಸಿ ಆತನನ್ನು ಕೊಲ್ಲಿಸಿದನು. ಇದನ್ನು ತಿಳಿದು ಚಾಣಕ್ಯನು ರಾಕ್ಷಸನ ಮಿತ್ರನಾದ ನನ್ನನ್ನು ಅವಮಾನಪಡಿಸಿ ನಗರದಿಂದ ಹೊರಡಿಸಿದನು. ಅಂದಿನಿಂದಲೂ ರಾಜನೀತಿ ನಿಪುಣನಾದ ರಾಕ್ಷಸನ ಹತ್ತಿರ ಓಡಾಡಲು ನನಗೆ ತುಂಬ ಹೆದರಿಕೆ. ಏಕೆಂದರೆ ಈ ತೆರನಾದ ಪ್ರಸಂಗ ಮತ್ತೊಂದು ಒದಗಿದರೆ ನಾನು ಈ ಲೋಕದಲ್ಲಿ ಇರದಂತೆಯೇ ಆಗಬಹುದು.
ಭಾಗುರಾಯಣ– ಪರ್ವತೇಶ್ವರನಿಗೆ ಕೊಡಬೇಕಾದ ರಾಜ್ಯಾರ್ಧವನ್ನು ಉಳಿಸಿಕೊಳ್ಳಲು ಚಾಣಕ್ಯನೇ ಈ ಕೆಲಸ ಮಾಡಿದನೆಂದು ನಾವು ಕೇಳಿದ ಸುದ್ದಿ ಸುಳ್ಳೇ?
ಕ್ಷಪಣಕ– ಭಾಗುರಾಯಣ ,ಚಾಣಕ್ಯನು ನನ್ನ ವೈರಿ; ನಿಜ: ಅಷ್ಟುಮಾತ್ರದಿಂದಲೇ ನಾನು ಅವನಲ್ಲಿ ದೋಷವನ್ನು ಹೇಳಬಹುದೇ? ಸತ್ಯವಾಗಿಯೂ ಅವನು ಇದೊಂದನ್ನೂ ಅರಿತವನಲ್ಲ.
ಭಾಗುರಾಯಣ– ಕ್ಷಪಣಕರೇ, ಹಾಗಾದರೆ ಈ ವಿಷಯವನ್ನು ರಾಜಕುಮಾರನಾದ ಮಲಯಕೇಶತುವಿನ ಮುಂದೆ ಹೇಳಬಹುದಲ್ಲ!
ಕ್ಷಷಣಕ -ಭಾಗುರಾಯಣ, ಆ ವೇಳೆಯಲ್ಲಿ ನಾನು ರಾಕ್ಷಸನಿಗೆ ಮಿತ್ರನಾಗಿದ್ದು, ಈ ಸಮಯದಲ್ಲಿ ಅವನಲ್ಲಿ ಶತ್ರುಭಾವವನ್ನು ಆಚರಿಸಬಹುದೇ?
ಭಾಗುರಾಯಣ ಕ್ಷಪಣಕರ ಮಾತನ್ನು ಮರೆಯಲ್ಲಿ ಹೊಂಚಿ ಕೇಳುತ್ತಿದ್ದ ಮಲಯಕೇತುವಿಗೆ ನಂದಿಹೋಗಿದ್ದ ತಂದೆ ಸತ್ತ ದುಃಖ ಮತ್ತೆ ಎರಡುಮಡಿಯಾಯಿತು. ಈಗ ಅವನು ಮುಂದೆ ಬರಲು ತಾನು ಬಂದ ಕೆಲಸವಾಯಿತೆಂದು ತಿಳಿದು ಮತ್ತೊಮ್ಮೆ ಸೇನಾಪತಿಯನ್ನು ಉಂಡಿಗೆಗಾಗಿ ಕಾಣಿಸಿಕೊಳ್ಳುವೆನೆಂದು ಹೇಳಿ ಕ್ಷಪಣಕನು ಮರೆಯಾದನು. ಕೋಪ ಶೋಕಗಳಿಂದ ಕೂಡಿದ ಮಲಯಕೇತು ಸೇನಾಪತಿಗೆ ‘ಭಾಗುರಾಯಣ, ರಾಕ್ಷಸನು ಎಂಥ ಕೃತಘ್ನ! ಮಿತ್ರನಾದ ನನ್ನ ತಂದೆಯನ್ನೇ ಕೊಲ್ಲಿಸಿದ. ಅವನಿಗೆ ನಾವು ಮಾಡಿದ ಉಪಕಾರ ಹಾವಿಗೆ ಹಾಲೆರದಂತಾಯಿತು. ಅವನಿಗೆ ಏನನ್ನು ಮಾಡಿದರೆ ತಾನೆ ನನ್ನ ಕೋಪ ಆರೀತು? ನೀನೊಬ್ಬ ಆಪ್ತ ನನಗಿರದಿದ್ದರೆ ನನ್ನ ಗತಿ ಏನಾಗುತ್ತಿತ್ತೆಂದು ನನ್ನ ಮನಸ್ಸು ಚಿಂತಿಸದಾಗಿದೆ’ ಎಂದು ನೊಂದು ನುಡಿದನು,
ಮಲಯಕೇತುವಿನ ಮಾತನ್ನು ಕೇಳಿ ಭಾಗುರಾಯಣನಿಗೆ ಹೆದರಿಕೆಯಾಯಿತು. ಕೋಪದಿಂದ ರಾಜಕುಮಾರನು ರಾಕ್ಷಸನನ್ನು ಕೊಲ್ಲಿಸಿದರೆ ಚಾಣಕ್ಯನ ರಾಜತಂತ್ರ ಕೆಡುವುದೆಂದೆಣಿಸಿ, ಭಾಗುರಾಯಣನು ಮಲಯಕೇತುವಿಗೆ ‘ಕುಮಾರ, ಈಗ ನೀನು ಕೋಪಗೊಳ್ಳದೆ ಶಾಂತಿಯಿಂದ ವರ್ತಿಸಬೇಕು. ಈ ಸಮಯದಲ್ಲಿ ನೀನು ರಾಕ್ಷಸನ ಪ್ರಾಣಕ್ಕೆ ಕೈಹಾಕಿದರೆ, ಸೇನೆಯಲ್ಲಿ ಕಳವಳವುಂಟಾಗಿ ನಮಗೆ ಜಯ ದೊರೆಯದೆ ಹೋಗಬಹುದು. ಇದೂ ಅಲ್ಲದೆ ರಾಜನೀತಿ ನಿನಗೆ ತಿಳಿಯದೇ? ಪರ್ವತರಾಜನನ್ನು ರಾಕ್ಷಸನು ವಿಷಕನ್ಯೆಯಿಂದ ಕೊಲ್ಲಿಸಿದಾಗ ಚಂದ್ರಗುಪ್ತನಂತೆ ನಿಮ್ಮ ತಂದೆಯೂ ಅವನಿಗೆ ವೈರಿಯಾಗಿದ್ದರು. ಆದ್ದರಿಂದಲೇ ಆತನು ಈ ಕೆಲಸವನ್ನು ನಡೆಸಿರಬೇಕು, ರಾಜನೀತಿಪ್ರಯೋಗದಲ್ಲಿ ಇದು ಒಂದು ದೋಷವಲ್ಲ. ಕಳೆದುಹೋದ ವಿಷಯಗಳನ್ನು ವಿವೇಕಿಗಳು ಸ್ಮರಿಸರು. ನಮಗೆ ಗೌಡದೇಶ ಕೈವಶವಾಗುವ ಈ ಸಮಯದಲ್ಲಿ ಮುಂದಿನ ಕಾರ್ಯದಲ್ಲೇ ನಟ್ಟ ದೃಷ್ಟಿಯುಳ್ಳ ನೀನು ಈ ದುಃಖವನ್ನು ಸೈರಿಸಿಕೊಂಡು ಈ ವಿಷಯವನ್ನು ಮರೆತುಬಿಡು ‘ ಎಂದು ಸಮಾಧಾನಪಡಿಸಿದನು. ಸಕಾಲದಲ್ಲಿ ಭಾಗುರಾಯಣನು ತನ್ನನ್ನು ಎಚ್ಚರಿಸಿದನೆಂದುಕೊಂಡು ಮಲಯಕೇತು ಮನಸ್ಸನ್ನು ಹಿಡಿತಕ್ಕೆ ತಂದುಕೊಂಡು, ಪ್ರಮಾದದಿಂದ ಪಾರಾಗಿ ಅಂತಃಪುರವನ್ನು ಸೇರಿದನು.
ಮಾರನೆಯ ದಿನ ರಾತ್ರಿ ಉಂಡಿಗೆಯಿಲ್ಲದೆ ಉಕ್ಕಡವನ್ನು ದಾಟಿ ಹೋಗಲು ಯತ್ನಿಸಿದ ಸಿದ್ಧಾರ್ಥಕನನ್ನು ಚಾರರು ಮುದ್ರೆಯೊತ್ತಿದ ಲೇಖನದೊಡನೆ ಭಾಗುರಾಯಣ ಮತ್ತು ರಾಜಕುಮಾರರೆದುರಿಗೆ ತಂದು ನಿಲ್ಲಿಸಿದರು. ರಾಕ್ಷಸನನ್ನು ಮಲಯಕೇತುವಿನ ಬಳಿಯಿಂದ ಹೊರಡಿಸಲು ಸಮಯ ಬಂದಿತೆಂದು ತಿಳಿದು, ಭಾಗುರಾಯಣನು ಚಾರರನ್ನು ನೋಡಿ ‘ಇವನು ಇಲ್ಲಿಗೆ ಹೊಸಬನೋ, ಇಲ್ಲವೆ ಯಾವನೋ ಒಬ್ಬ ಅಧಿಕಾರಿಯ ಸೇವಕನೋ?’ ಎಂದು ಪ್ರಶ್ನಿಸಿದನು.
ಸಿದ್ಧಾರ್ಥಕ– ಸ್ವಾಮಿ, ನಾನು ಅಮಾತ್ಯರ ಸೇವಕ. ಅವಸರದ ರಾಜಕಾರ್ಯವಿದ್ದ ಕಾರಣ ತಮ್ಮಲ್ಲಿಗೆ ಬಂದು ಉಂಡಿಗೆಯನ್ನು ಕೇಳಲಾಗಲಿಲ್ಲ.
ಭಾಗುರಾಯಣ–ಎಲಾ, ಈ ವೇಳೆಯಲ್ಲಿ ರಾಜಶಾಸನವನ್ನು ಮೀರಿ ಹೋಗುವಂಥ ಕೆಲಸವಾದರೂ ಏನು?
ಅಷ್ಟರಲ್ಲೇ ಭಾಗುರಾಯಣನ ಸಮಿಾಪದಲ್ಲಿದ್ದ ಮಲಯಕೇತುವಿಗೆ ಸಿದ್ಧಾರ್ಥಕನ ಬಳಿಯಿದ್ದ ಲೇಖನದ ವಿಷಯವನ್ನರಿಯುವ ಕುತೂಹಲ ಹೆಚ್ಚಿ ರಾಕ್ಷಸನ ಮುದ್ರೆ ಕೆಡದಂತೆ ಪತ್ರವನ್ನೋದುವಂತೆ ಸೇನಾಪತಿಗೆ ಅಪ್ಪಣೆಮಾಡಿದನು. ಭಾಗುರಾಯಣನು ಎಚ್ಚರಿಕೆಯಿಂದ ಆ ಪತ್ರವನ್ನು ಬಿಚ್ಚಿ ಓದಿದನು. ಅದರಲ್ಲಿ ಈ ರೀತಿ ಬರೆದಿತ್ತು
‘ಸ್ಥಳದಲ್ಲಿರುವ ಮಹಾಶಯರಿಗೆ ಬೇರೊಂದು ಕಡೆ ಇರುವ ಪುರುಷನು ಬಿನ್ನೈಸಿಕೊಳ್ಳುವುದೇನೆಂದರೆ -ನನ್ನ ವೈರಿಯನ್ನು ತಾವು ದೂರಮಾಡಿದಿರಿ. ಆತನೆದುರಿಗೆ ನನ್ನನ್ನು ಬಾಯಿತುಂಬ ಹೊಗಳಿದಿರಿ. ಬೇರೊಬ್ಬರಿಂದ ಈ ವಿಷಯ ನಮಗೆ ತಿಳಿದುಬಂದುದಲ್ಲದೆ, ತಾವು ಕಳುಹಿಸಿದ ಮೂರು ಆಭರಣದ ಪೆಟ್ಟಿಗೆಗಳೂ ಕೈಸೇರಿದುವು. ನಮ್ಮ ಆಪ್ತರು ಸಮಯ ನೋಡಿ ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಇಲ್ಲಿ ಕಾದಿದ್ದಾರೆ. ಕೆಲಸ ಕೈಗೂಡಿದಾಗ ತಾವು ಇದನ್ನು ನಡೆಸಿಕೊಡಬೇಕು. ಕೆಲವರಿಗೆ ಶತ್ರುವಿನ ಭಂಡಾರದಲ್ಲಿ ಆಸೆಯಿದೆ. ಮತ್ತೆ ಕೆಲವರು ಹಗೆಯ ಗಜಸೇನೆಯನ್ನು ಬಯಸುವರು. ಉಳಿದವರು ನಿಮ್ಮ ವೈರಿಯ ರಾಜ್ಯಕ್ಕೆ ಆಸೆಪಡುತ್ತಾರೆ. ಈ ಆಭರಣಗಳನ್ನು ನೋಡಿದರೆ ಇಲ್ಲಿ ನನ್ನದೇ ಸರ್ವಾಧಿಕಾರವೆಂದು ತಮಗೆ ತಿಳಿಯದಿರದು. ಮಿಕ್ಕ ಸಂಗತಿಗಳನ್ನು ಈ ಆಪ್ತನ ಬಾಯಿಮಾತಿನಿಂದ ತಿಳಿಯಬಹುದು.
ಭಾಗುರಾಯಣ– ಎಲಾ, ಈ ಲೇಖನವನ್ನು ನಿನಗೆ ಕೊಟ್ಟವರಾರು? ಬಾಯಿಮಾತೇನು? ಆಭರಣಗಳೆಲ್ಲಿ?
ಸಿದ್ಧಾರ್ಥಕ– ಸ್ವಾಮಿ, ನನಗಾವ ವಿಷಯವೂ ತಿಳಿಯದು.
ಸಿದ್ಧಾರ್ಥಕನು ತಮ್ಮನ್ನು ವಂಚಿಸುತ್ತಿರುವನೆಂದು ಮಲಯಕೇತುವಿಗೆ ಹೇಳಿ, ಅವನಿಂದ ವಿಷಯವನ್ನು ಸಂಗ್ರಹಿಸಲು ಸೇನಾಪತಿ ಚಾವಟಯಿಂದ ಸಿದ್ಧಾರ್ಥಕನನ್ನು ಹೊಡೆಯಿಸಿದನು. ಆ ಹೊಡೆತವನ್ನು ತಾಳಲಾರದೆ ಸಿದ್ಧಾರ್ಥಕನು ನಡುಗಲು, ಅವನ ಕಂಕುಳಲ್ಲಿದ್ದ ಆಭರಣದ ಪೆಟ್ಟಿಗೆ ಕೆಳಗೆ ಬಿತ್ತು. ದೂತರು ಅದನ್ನು ತಂದು ಮಲಯಕೇತುವಿಗೊಪ್ಪಿಸಲು, ಭಾಗುರಾಯಣನು ಕುಮಾರನ ಅಪ್ಪಣೆಯಂತೆ ಮುದ್ರೆ ಕೆಡದ ಹಾಗೆ ಅದರ ಮುಚ್ಚಳವನ್ನು ತೆಗೆದು ತೋರಿಸುತ್ತಾನೆ ; ಅದರಲ್ಲಿ ಮಲಯಕೇತು ರಾಕ್ಷಸನಿಗೆ ತನ್ನ ಮೈಯಿಂದಲೇ ಕಳಚಿಕೊಟ್ಟಿದ್ದ ಆಭರಣಗಳಿವೆ! ಮಭಯಕೇತುವಿಗೆ ಅಮಾತ್ಯನಲ್ಲಿದ್ದ ಸಂಶಯ ಇನ್ನೂ ಬಲಪಟ್ಟಿತು. ವಿಷಯವನ್ನು ದೃಢಪಡಿಸಲು ಭಾಗುರಾಯಣ ಸಿದ್ಧಾರ್ಥಕನನ್ನು ಮತ್ತೆ ಚಾವಟಯಿಂದ ಹೊಡೆಸಿದನು. ಸಿದ್ಧಾರ್ಥಕನು ಹೆದರಿದವನಂತೆ ಕೈಮುಗಿಯುತ್ತ ‘ಸ್ವಾಮಿ, ಈ ಏಟನ್ನು ತಾಳಲಾರೆ, ಅಭಯ ಕೊಟ್ಟರೆ ಎಲ್ಲವನ್ನೂ ಮರೆಮಾಚದೆ ಹೇಳುವೆನು’ ಎಂದು ಕೇಳಿಕೊಂಡನು.
ಭಾಗುರಾಯಣ– ನಿಜವನ್ನು ಅರಿಕೆಮಾಡು. ನಿನಗೆ ಅಭಯ ದಾನ ಮಾಡಿದ್ದೇವೆ.
ಸಿದ್ಧಾರ್ಥಕ– ಈ ಪತ್ರ, ಈ ಪೆಟ್ಟಿಗೆ ಅಮಾತ್ಯರದು. ಪಾಟಲೀಪುರದ ಚಕ್ರವರ್ತಿ ಚಂದ್ರಗುಪ್ತ ಮಹಾರಾಜರಿಗೆ ಇವನ್ನು ಕೊಟ್ಟು ಬರುವಂತೆ ಅಮಾತ್ಯರು ನನಗೆ ಅಪ್ಪಣೆ ಮಾಡಿದ್ದಾರೆ. ಅವರು ಹೇಳಿದ ಬಾಯಿಮಾತುಗಳಿವು. ‘ಇಲ್ಲಿ ತಮಗೆ ಆಪ್ತರಾದ ಐದುಮಂದಿ ಅರಸರುಂಟು. ಇಲ್ಲಿಯೂ ಆಪ್ತರಂತಿರುವ ಅವರು, ಎಚ್ಚರಿಕೆಯಿಂದಿದ್ದು, ಸಮಯಕಾದು ಇನ್ನು ಕೆಲವು ದಿನಗಳಲ್ಲಿ ನಿಮ್ಮ ಕಾರ್ಯವನ್ನು ಕೈಗೂಡಿಸಿಕೊಡುವರು. ಅವರ ಹೆಸರುಗಳನ್ನು ತಮಗೆ ತಿಳಿಸಲೇಬೇಕಾಗಿಲ್ಲ. ತಮ್ಮ ಕೆಲಸ ಕೈಗೂಡಿದಾಗ ಅವರ ಬಯಕೆಯನ್ನು ತಾವು ಸಲ್ಲಿಸಿಕೊಡಬೇಕು.’
ರಾಕ್ಷಸನು ಚಂದ್ರಗುಪ್ತನ ಆಪ್ತನೆನ್ನುವುದಕ್ಕೆ ‘ಈಗ ಸ್ಪಷ್ಟವಾದ ನಿದರ್ಶನ ಬಂದೊದಗಿತು. ಮಗನಂತೆ ಕಂಡು ಸಾಕಿದ ರಾಕ್ಷಸನು ತನಗೆ ಒಳ್ಳೆಯ ಉಪಕಾರವನ್ನೇ ಮಾಡಿದನೆಂದುಕೊಂಡನು ರಾಜಕುಮಾರ. ನಾವು ಆಪ್ತರೆಂದು ನಂಬಿದವರೇ ಹೀಗೆ ದ್ರೋಹ ಬಗೆದರೆ ಲೋಕದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು? ಭಾಗುರಾಯಣನೊಬ್ಬನ ಹೊರತಾಗಿ ಲೋಕವೆಲ್ಲ ದ್ರೋಹಮಯವಾಗಿ ತೋರುತ್ತಿದೆ ರಾಜಕುಮಾರನಿಗೆ. ಯಾವ ರಾಜಕಾರ್ಯನವಿದ್ದರೂ ಬಿಟ್ಟು ರಾಕ್ಷಸನು ತನ್ನಲ್ಲಿಗೆ ಬರಬೇಕೆಂದು ದೂತನ ಮೂಲಕ ಮಲಯಕೇತು ಅಪ್ಪಣೆ ಮಾಡಿ ಕಳುಹಿಸಿದನು. ಮಲಯಕೇತುವಿನ ದೂತನು ರಾಕ್ಷಸನಲ್ಲಿಗೆ ಬಂದಾಗ ಅಮಾತ್ಯನು ಪ್ರಯಾಣದ ವ್ಯವಸ್ಥೆಯಲ್ಲಿ ತೊಡಗಿದ್ದನು. ಕುಮಾರನ ಅಪ್ಪಣೆಯನ್ನು ಕೇಳಿ, ಮಲಯಕೇತು ಕೊಟ್ಟ ಆಭರಣಗಳನ್ನು ಸಿದ್ಧಾರ್ಥಕನಿಗೆ ಕೊಟ್ಟಿದ್ದ ಕಾರಣ ವರ್ತಕರಿಂದ ಕ್ರಯಕ್ಕೆ ತೆಗೆದುಕೊಂಡಿದ್ದ ಆಭರಣಗಳನ್ನು ಧರಿಸಿ ಅಮಾತ್ಯನು ಮಲಯಕೇತುವಿನ ಬಳಿಗೆ ಬಂದನು. ದೈವಗತಿ ವಿಚಿತ್ರವಾದದ್ದು. ಮುಂದಾಗುವುದನ್ನು ರಾಕ್ಷಸನು ಅರಿಯ.
ಮಲಯಕೇತುವಿನ ಬಳಿಗೆ ಅಮಾತ್ಯನು ಬಂದಾಗ ರಾಜಕುಮಾರನ ಮುಖ ಪ್ರಸನ್ನವಾಗಿರಲಿಲ್ಲ. ರಾಜಕುಮಾರನ ಈ ಮುಖಭಾವವನ್ನು ರಾಕ್ಷಸನು ಗ್ರಹಿಸದಿರಲಿಲ್ಲ. ಅಂದು ತನಗೆ ಏನೋ ಆಪತ್ತು ಕಾದಿದೆಯೆಂದು ರಾಕ್ಷಸನಿಗೆ ಅಲ್ಲಿನ ಆವರಣದಿಂದ ಅರ್ಥವಾಯಿತು. ಅಮಾತ್ಯನು ರಾಜಕುಮಾರನಿಗೆ ಹರಸಿ ಕುಳಿತುಕೊಳ್ಳಲು, ಮಲಯಕೇತು ರಾಕ್ಷಸನನ್ನು ನೋಡಿ ‘ಅಮಾತ್ಯರೇ, ನಿಮ್ಮನ್ನು ನೋಡುವ ಬಯಕೆಯಿಂದ ರಾಜಕಾರ್ಯವ್ಯವಸ್ಥೆಯಲ್ಲಿದ್ದ ತಮಗೆ ಶ್ರಮಕೊಡ ಬೇಕಾಯಿತು. ಪ್ರಯಾಣದ ವ್ಯವಸ್ಥೆ ಹೇಗೆ ಎಂಬುದನ್ನು ಕೇಳಲು ನನಗೆ ಕುತೂಹಲವುಂಟಾಗಿದೆ.’ ಎಂದನು.
ರಾಕ್ಷಸ– ಕುಮಾರ, ನಮ್ಮ ನಗರರಕ್ಷಣೆಯ ಭಾರವನ್ನು ಶೇಖರನಿಗೆ ಒಪ್ಪಿಸಿದೆ. ಮಗಧ ಕಿರಾತಸೇನೆಗಳು ನನ್ನೊಡನೆ ಮುಂದೆ ಬರುತ್ತವೆ. ಚಿತ್ರವರ್ಮಾದಿಗಳು ನಿನ್ನ ಅಂಗರಕ್ಷಕರಾಗಿ ಹಿಂದುಗಡೆ ಬರುತ್ತಾರೆ.
ಮಲಯಕೇತು (ಮನಸ್ಸಿನಲ್ಲಿ) ನನ್ನನ್ನು ಚಂದ್ರಗುಪ್ತನಿಗೆ ಕೈಸೆರೆ ಒಪ್ಪಿಸತಕ್ಕವರೇ ನನ್ನ ಅಂಗರಕ್ಷಕರು! ಚೆನ್ನಾಯಿತು. (ಪ್ರಕಾಶವಾಗಿ) ಅಮಾತ್ಯರೇ, ಈಗ ಪಾಟಲೀಪುರಕ್ಕೆ ಹೋಗತಕ್ಕವರು ಯಾರಾದರೂ ಉಂಟೇ?
ರಾಕ್ಷಸ– ಕುಮಾರ, ಉಳಿದವರಿಂದ ಏನು ಪ್ರಯೋಜನ? ಇನ್ನು ಒಂದೆರಡು ದಿನಗಳಲ್ಲಿ ಸೇನೆಯೊಡನೆ ನಾವೇ ಅಲ್ಲಿಗೆ ಹೋಗುವೆವಲ್ಲ!
ಮರೆಯಾಗಿದ್ದ ಸಿದ್ಧಾರ್ಥಕನು ಈಗ ಮುಂದೆ ಬಂದನು. ಮಲಯಕೇತು ರಾಕ್ಷಸನಿಗೆ ‘ಈ ಚಾರ ಯಾರ ಕಡೆಯವನು? ಈ ಲೇಖನ ಯಾರದು? ಈ ಪೆಟ್ಟಿಗೆಯನ್ನು ತಾವು ಕಳುಹಿಸಿದುದೆಲ್ಲಿಗೆ?’ ಎಂದು ಮುಖವನ್ನು ಗಂಟಿಕ್ಕಿಕೊಂಡು ಪ್ರಶ್ನೆಮಾಡಿದನು. ರಾಕ್ಷಸನಿಗೆ ಆಕಾಶವೇ ಮೈಮೇಲೆ ಕಳಚಿ ಬಿದ್ದಂತಾಯಿತು. ಅವನು ಸಿದ್ಧಾರ್ಥಕನ ಮುಖ ನೋಡಲು, ತನ್ನನ್ನು ತುಂಬಾ ಹೊಡೆದುದರಿಂದ ತಾನು ನಿಜವನ್ನು ಹೇಳಬೇಕಾಯಿತೆಂದು ಅವನು ನುಡಿದನು. ಇದಾವುದನ್ನೂ ಅರಿಯದ ರಾಕ್ಷಸನಿಗೆ ದಿಕ್ಕೇ ತೋರದಾಯಿತು. ಅವನ ಪ್ರಯತ್ನಗಳು ಭಗ್ನವಾದುವು. ಶತ್ರುಗಳ ತಂತ್ರ ಚೆನ್ನಾಗಿ ಕೈಗೂಡಿತು.
ಭಾಗುರಾಯಣನು ಕೊಟ್ಟ ಲೇಖನವನ್ನೋದಿಕೊಂಡು ರಾಕ್ಷಸನು ‘ಕುಮಾರ, ಈ ಲೇಖನ ನನ್ನದಲ್ಲ. ಈ ಮುದ್ರೆ ಶತ್ರುಗಳ ಸೃಷ್ಟಿ. ನೀನು ಕೊಟ್ಟಿದ್ದ ಆಭರಣಗಳನ್ನು ಯಾವುದೋ ಕಾಲದಲ್ಲಿ ನಮ್ಮ ಕಾರ್ಯಸಾಧನೆ ಮಾಡಿದ ಇವನಿಗೆ ಉಚಿತವಾಗಿ ಕೊಟ್ಟಿದ್ದೆನು. ನನ್ನ ಪರಮವೈರಿಗೆ ನಾನು ಬಾಯಿಮಾತನ್ನು ಹೇಳಿಕಳುಹಿಸುವುದೆಂದರೇನು?’
ಭಾಗುರಾಯಣ– ಕುಮಾರನೇ ನಿಮಗೆ ಕೊಟ್ಟಿದ್ದ ಈ ಆಭರಣಗಳನ್ನು ಈ ಚಾರನಿಗೆ ಕೊಡುವುದೆಂದರೇನು? ನಿಮ್ಮ ಮಾತನ್ನು ಒಪ್ಪುವಂತಿಲ್ಲ. ಎಲಾ ಈ ಲೇಖನವನ್ನು ಬರೆದವರಾರು?
ಸಿದ್ಧಾರ್ಥಕ– ಆರ್ಯ, ರಾಯಸದ ಶಕಟದಾಸ.
ರಾಕ್ಷಸ– ಈ ಅಕ್ಷರ ಶಕಟದಾಸನದಲ್ಲ. ಇದನ್ನು ಅವನು ಬರೆದಿದ್ದರೆ ನಾನು ಬರೆದಂತೆಯೇ.
ರಾಕ್ಷಸನೆದುರಿಗೆ ಶಕಟದಾಸನು ಸುಳ್ಳಾಡಬಹುದೆಂದೆಣಿಸಿ, ಅವನ ಇನ್ನೊಂದು ಬರವಣಿಗೆಯನ್ನು ತರಿಸಿ ಅಕ್ಷರವನ್ನು ಹೋಲಿಸಿ ನೋಡುತ್ತಾರೆ; ಒಂದರ ಪ್ರಕತಿ ಮತ್ತೊಂದು! ಆಗ ರಾಕ್ಷಸನು ಮನಸ್ಸಿನಲ್ಲಿ “ಅಯ್ಯೋ, ಮಿತ್ರನಾದ ಶಕಟದಾಸನೂ ಹಣದಾಸೆಗಾಗಿ ಶತ್ರುಗಳಿಗೆ ವಶನಾದನೆಂದರೆ ಇನ್ನಾರನ್ನು ನಂಬುವುದು? ಈ ಲೇಖನದ ಅಕ್ಷರ ಶಕಟದಾಸನದು. ಶಕಟದಾಸ ಸಿದ್ಧಾರ್ಥಕರು ಸ್ನೇಹಿತರು. ನನ್ನ ಮುದ್ರಿಕೆ ಶಕಟದಾಸನ ಬಳಿಯಲ್ಲೇ ಇತ್ತು. ಈಗ ಇವರು ಹೊರಿಸುವ ಅಪವಾದವನ್ನು ನಾನು ಹೊತ್ತುಕೊಳ್ಳಲೇಬೇಕಾಗಿದೆ. ಅಯ್ಯೋ, ಏನು ಗತಿ ಬಂತು!’ ಎಂದು ಚಿಂತಿಸುತ್ತಿದ್ದನು.
ಆಗ ಇದ್ದಕ್ಕಿದಂತೆಯೇ ಮಲಯಕೇತುವಿನ ಗಮನ ರಾಕ್ಷಸನು ಧರಿಸಿದ್ದ ಆಭರಣಗಳ ಕಡೆಗೆ ಹೊರಳಿತು. ‘ಇದೇನು! ನಮ್ಮ ತಂದೆ ಧರಿಸುತ್ತಿದ್ದ ಆಭರಣಗಳು ರಾಕ್ಷಸನ ಮ್ಳ ಮೇಲಿವೆ. ಸಂದೇಹವೇಕೆ? ಅಯ್ಯೋ! ತಂದೆಯೇ, ಈ ವಜ್ರದ ಹಾರವನ್ನು ಧರಿಸಿ ಸಿಂಹಾಸನದ ಮೇಲೆ ನೀನು ಕುಳಿತಾಗ ತಾರೆಗಳಿಂದ ಸುತ್ತುಗಟ್ಟಿದ ಶರಶ್ಚಂದ್ರನಂತಿದ್ದ ನಿನ್ನ ಮುಖವನ್ನು ಹೇಗೆ ಮರೆಯಲಿ? ‘ ಎಂದು ದುಃಖದಿಂದ ‘ಅಮಾತ್ಯರೆ, ಈ ಆಭರಣಗಳು ಎಲ್ಲಿಯವು? ಚಂದ್ರಗುಪ್ತನು ಕಳುಹಿಸಿದ ಆಭರಣಗಳೋ ಇವು? ಎಂದು ಬಿರುಸಾಗಿ ಮಲಯಕೇತು ನುಡಿದನು.
ರಾಕ್ಷಸ (ಮನಸ್ಸಿನಲ್ಲಿ)- ಏನು? ಇವು ಪರ್ವತರಾಜನ ಆಭರಣಗಳೇ! ಆಹಾ! ಈಗ ಶತ್ರುಗಳ ಕಪಟ ಚೆನ್ನಾಗಿ ಫಲಿಸಿತು. (ಪ್ರಕಾಶವಾಗಿ) ಕುಮಾರ, ವರ್ತಕರಿಂದ ಕ್ರಯಕ್ಕೆ ತೆಗೆದುಕೊಂಡ ಆಭರಣಗಳಿವು. ಚಾಣಕ್ಕನೇ ವರ್ತಕರ ಮೂಲಕ ಇವನ್ನು ನನಗೆ ಮಾರಿಸಿರಬೇಕು.
ಮಲಯಕೇತು– ಆರ್ಯ, ನಮ್ಮ ತಂದೆ ಧರಿಸುತಿದ್ದ ಭೂಷಣಗಳಿವು. ಅಲ್ಲದೆ ಚಂದ್ರಗುಪ್ತನ ವಶದಲ್ಲಿದ್ದುವು. ಹೀಗಿರುವಾಗ ವರ್ತಕರು ಇವನ್ನು ನಿನಗೆ ಮಾರಿದರೆಂದರೆ ಯಾರಾದರೂ ಒಪ್ಪತಕ್ಕ ಮಾತೇ ಇದು? ಯಾವ ಹೆಚ್ಚು ಲಾಭಕ್ಕಾಗಿ ನೀನು ನನ್ನನ್ನು ಚಂದ್ರಗುಪ್ತನ ವಶಪಡಿಸಲು ಬಯಸಿದೆ? ಚಂದ್ರಗುಪ್ತನು ನಿನಗೆ ಸ್ವಾಮಿಯ ಮಗ; ನಾನು ಸ್ನೇಹಿತನ ಮಗ. ಅಲ್ಲಿ ನೀನು ದಾಸ; ಇಲ್ಲಿ ನೀನೇ ಸ್ವಾಮಿ. ಅಲ್ಲಿ ಚಂದ್ರಗುಪ್ತನು ನಿನಗೆ ಹಣವನ್ನು ದಯಪಾಲಿಸಬೇಕು. ಇಲ್ಲಿ ನೀನು ನನಗೆ ಕೊಟ್ಟರುಂಟು. ಹೀಗಿರುವಲ್ಲಿ ಕೃತಘ್ನನಾಗಿ, ಲೋಭಕ್ಕೆ ಒಳಗಾಗಿ ನೀನು ನನ್ನನ್ನು ಶತ್ರುವಿಗೆ ಮಾರಿದೆ. ಅಲ್ಲದೆ ನಮ್ಮ ತಂದೆಯನ್ನು ವಿಷಕನ್ಯೆಯ ಮೂಲಕ ಕೊಲ್ಲಿಸಿದೆ. ನಿನ್ನಂಥ ವಂಚಕರು ಲೋಕದಲ್ಲುಂಟೇ? ನಿನಗೆ ಯಾವ ಶಿಕ್ಷೆಯನ್ನು ವಿಧಿಸಿದರೆ ತಾನೇ ಮನಸ್ಸಿಗೆ ಸಮಾಧಾನ ಉಂಟಾದೀತು?
ರಾಕ್ಷಸ (ಕಣ್ಣೀರು ಮಿಡಿದು ಮನಸ್ಸಿನಲ್ಲಿ) ಅಯ್ಯೋ! ಇದೇನು ಬಂತು ಮತ್ತೆ? ಶಕಟದಾಸ ಮತ್ತು ನಾನು ಮಿತ್ರನಲ್ಲವೆಂದು ಹೇಳಿದರೆ ಯಾರಾದರೂ ನಂಬುವರೇ? ಹೀಗಿರುವಾಗ ಪರ್ವತರಾಜನನ್ನು ನಾನು ಕೊಲ್ಲಿಸಿದೆನೆಂಬ ಮಾತನ್ನು ಕೇಳಿ ಕುರುವಿನ ಮೇಲೆ ಬೊಕ್ಕೆ ಎದ್ದಂತಾಯಿತು. (ಪ್ರಕಾಶವಾಗಿ) ಕುಮಾರ, ಪರ್ವತರಾಜನನ್ನು ಕೊಲ್ಲಿಸಿದವನು ನಾನಲ್ಲ.
ಮಲಯಕೇತು– ಹಾಗಾದರೆ ಇನ್ನಾರು?
ರಾಕ್ಷಸ– ಈ ವಿಷಯದಲ್ಲಿ ದೈವವನ್ನು ಕೇಳಬೇಕು.
ಮಲಯಕೇತು– ದೈವವನ್ನು ಕೇಳಬೇಕೇ? ಜೀವಸಿದ್ಧಿಯನ್ನಲ್ಲ.
ಕ್ಷಪಣಕನೂ ಚಾಣಕ್ಯನ ಗೂಢಚಾರನೆಂದಮೇಲೆ ಶತ್ರುಗಳು ತನ್ನ ಹೃದಯವನ್ನೇ ಆಕ್ರಮಿಸಿದಂತಾಯಿತೆಂದು ರಾಕ್ಷಸನು ಸ್ತಬ್ಧನಾಗಿ ನಿಂತುಬಿಟ್ಟನು. ಆಗ ಮಲಯಕೇತು, ದೂತನನ್ನು ಕರೆದು ‘ಶೇಖರನಿಗೆ ನಾವು ಹೇಳಿದೆವೆಂದು ಈ ರೀತಿ ತಿಳಿಸು. ರಾಕ್ಷಸನ ಸ್ನೇಹಿತರಾಗಿ, ನಮಗೆ ದ್ರೋಹಬಗೆದು ಚಂದ್ರಗುಪ್ತನನ್ನು ಮೆಚ್ಚಿಸತಕ್ಕವರು ಐವರು ‘ರಾಜರು. ಇವರಲ್ಲಿ ನಮ್ಮ ರಾಜ್ಯವನ್ನು ಬಯಸುವ ಚಿತ್ರವರ್ಮಾದಿ ಮೂವರನ್ನು ಆಳವಾದ ಕಮರಿಗೆ ತಳ್ಳಿಸಿ ಮಣ್ಣನ್ನು ಮುಚ್ಚಿಸಲಿ. ಆನೆಯ ಸೇನೆಯನ್ನು ಬಯಸುವ ಮೇಘನಾದಾದಿ ಇನ್ನಿಬ್ಬರನ್ನು ಆನೆಯ ಕಾಲಿಗೆ ಕಟ್ಟಿ ಎಳೆಸಿ.’ ಎಂದು ಅಪ್ಪಣೆಮಾಡಿ ಕಳುಹಿಸಿದನು: ಆಮೇಲೆ ರಾಕ್ಷಸನನ್ನು ನೋಡಿ ‘ರಾಕ್ಷಸ, ನೀನು ರಾಕ್ಷಸನೇ ಆದೆ. ನೀನು ಬ್ರಾಹ್ಮಣನಾದ ಕಾರಣ ನಿನ್ನನ್ನು ಜೀವಸಹಿತ ಬಿಟ್ಟಿದ್ದೇನೆ. ಈಗ ನಿನ್ನ ಮನಬಂದಂತೆ ಚಂದ್ರಗುಪ್ತನನ್ನು ಹೋಗಿ ಸೇವಿಸು. ಚಾಣಕ್ಯ ಚಂದ್ರಗುಪ್ತರಿಬ್ಬರನ್ನೂ ನೀನು ಕಟ್ಟಿಕೊಂಡು ಬಂದರೂ ನಾಶಮಾಡುವ ಶಕ್ತಿ ನನಗುಂಟು.’ ಎಂದು ಹೇಳಿ ಕೋಪದಿಂದ ಅಂತಃಪುರಕ್ಕೆ ಹೊರಟುಹೋದನು.
ಈ ಮಾತನ್ನು ಕೇಳಿ ಖಿನ್ನನಾದ ರಾಕ್ಷಸನು ಏನೊಂದೂ ತೋರದವನಂತೆ ಅಲ್ಲಿಂದ ಎದ್ದುಹೋದನು. ಭಾಗುರಾಯಣನ ಅಪ್ಪಣೆಯಂತೆ ಪ್ರಯಾಣಕ್ಕೆ ಬೇರೊಂದು ದಿನ ಗೊತ್ತಾಯಿತು. ಪ್ರಯಾಣಕ್ಕಲ್ಲ; ಮಲಯಕೇತುವನ್ನು ಸೆರೆಹಿಡಿಯುವುದಕ್ಕೆ, ಇತ್ತ ಮಲಯಕೇತು ವಿನ ಅಪ್ಪಣೆಯಂತೆ ಚಿತ್ರವರ್ಮಾದಿಗಳು ಹತರಾಗಲು, ಅವರ ಸೇನೆ ದಿಕ್ಕು ಕೆಟ್ಟು ಓಡಿತು. ಶೇಖರನು ಆ ಸೇನೆಯನ್ನಟ್ಟಿಕೊಂಡು ಹೋಗಲು ಸಮಯ ನೋಡಿ ಭದ್ರಭಟಾದಿಗಳು ಮಲಯಕೇತುವನ್ನು ಸೆರೆಹಿಡಿದರು.
ಮುಂದಿನ ಅಧ್ಯಾಯ: ೨೯. ರಾಕ್ಷಸನ ಸಂಗ್ರಹ