ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 29: ರಾಕ್ಷಸನ ಸಂಗ್ರಹ
ಮುಂದಿನ ಅಧ್ಯಾಯ: ೨೯. ರಾಕ್ಷಸನ ಸಂಗ್ರಹ
ಮಲಯಕೇತುವಿನ ಆಶ್ರಯ ತಪ್ಪಿದ ಮೇಲೆ, ರಾಕ್ಷಸನ ಮನಸ್ಸು ಚಂದನದಾಸನ ಬಿಡುಗಡೆಯ ಕಡೆಗೆ ಹರಿಯಿತು. ಚಿಂತೆಯಿಂದ ಭಾರವಾದ ಮನಸ್ಸಿನೊಡನೆ ರಾಕ್ಷಸನು ಮೆಲ್ಲನೆ ಪಾಟಲೀಪುರದ ಕಡೆಗೆ ಹೆಜ್ಜೆಯಿಡತೊಡಗಿದನು. ಬೆನ್ನು ಹತ್ತಿದ ಭೇತಾಳದಂತೆ ಚಾಣಕ್ಯನ ಚಾರನೊಬ್ಬನು ಮರೆಯಾಗಿ ಅವನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದನು. ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ರಾಕ್ಷಸನಿಗೆ ತಪ್ಪಲಿಲ್ಲ. ಅವನಿಗೆ ಗುರುಬಲ ಒದಗಿ ಶನಿಕಾಟಿ ಕಳೆಯುವ ಕಾಲ ಹತ್ತಿರವಾಗುತ್ತಿದೆ.
ಇತ್ತ ಭಾಗುರಾಯಣ ಸಿದ್ಧಾರ್ಥಕರು ಚಾಣಕ್ಯನಲ್ಲಿಗೆ ಬಂದು ಎಲ್ಲ ವಿಷಯಗಳನ್ನೂ ವಿವರವಾಗಿ ತಿಳಿಸಿ ಅವನಿಗೆ ಹರುಷವನ್ನು ತಂದರು. ಚಾಣಕ್ಯನು ಭಾಗುರಾಯಣನಿಗೆ ‘ಸೇನಾಪತಿ, ಮೌರ್ಯನು ನಿನಗೆ ಮಾಡಿದ ಉಪಕಾರಕ್ಕೆ ನೂರುಮಡಿಯಾಗಿ ಪ್ರತ್ಯುಪಕಾರ ನಿನ್ನಿಂದ ಚಂದ್ರಗುಪ್ತನಿಗೆ ಸಂದಿತು. ನಿಮ್ಮಂಥ ಸ್ವಾಮಿಭಕ್ತರಿರುವಾಗ ಚಂದ್ರಗುಪ್ತನಿಗೇನು ಕಡಿಮೆ? ಇನ್ನು ಮುಂದೆ ನೀನು ಎಂದಿನಂತೆ ಮುಖ್ಯ ಸೇನಾಪತಿಯ ಕೆಲಸದಲ್ಲಿದ್ದು ಚಂದ್ರಗುಪ್ತನನ್ನು ಎಚ್ಚರಿಕೆಯಿಂದ ಸೇವಿಸು. ಮಲಯಕೇತುವನ್ನು ಗೌರವದಿಂದ ಕಂಡು ಅವನಿಗೆ ಬೀಡಾರದ ಏರ್ಪಾಟನ್ನು ಮಾಡು ‘ ಎಂದು ಸೇನಾಪತಿಯನ್ನು ಹೊಗಳಿ ಕಳುಹಿಸಿದನು. ಆ ಬಳಿಕ ‘ಸಿದ್ಧಾರ್ಥಕ, ಚಂದನದಾಸನನ್ನು ನೀನು ಚಂಡಾಲವೇಷದಿಂದ ವಧ್ಯಸ್ಥಾನಕ್ಕೆ ಕರೆದುಕೊಂಡು ಹೋಗು; ಅದಕ್ಕೆ ಈ ರೀತಿಯ ಏರ್ಪಾಟನ್ನು ಮಾಡು ‘ ಎಂದು ಅವನು ಮಾಡಬೇಕಾದ ಕೆಲಸಗಳನ್ನೆಲ್ಲ ಹೇಳಿ ಕಳುಹಿಸಿದನು. ಚಾಣಕ್ಯನ ರಾಜನೀತಿಯ ನೆಲೆ ವಿಚಿತ್ರವಾದದ್ದು– ಒಂದು ಕಲ್ಲು ಹೊಡೆದು ಮೂರು ಹಣ್ಣು ಕೆಡವಿದಂತೆ.
ಇತ್ತ ಚಂದನದಾಸನ ಬಿಡುಗಡೆಗಾಗಿ ಹೊರಟ ರಾಕ್ಷಸನು ಪಾಟಲೀಪುರದ ಉಪವನಕ್ಕೆ ಬಂದು ವಿಶ್ರಾಂತಿಗಾಗಿ ಹಾಸುಗಲ್ಲೊಂದರ ಮೇಲೆ ಕುಳಿತನು. ನಂದರು ಮಾಡುತ್ತಿದ್ದ ವಿಹಾರ, ಜಲಕ್ರೀಡೆ, ವನಭೋಜನ– ಇವೆಲ್ಲ ಅವನ ನೆನಪಿಗೆ ಬಂದು ಮನಸ್ಸಿನಲ್ಲಿ ಏನೋ ಒಂದು ತೆರನಾದ ಸಂಕಟವುಂಟಾಯಿತು. ಅಷ್ಟರಲ್ಲೇ ‘ದೇವತೆಗಳಿರಾ, ನಿಮಗೆ ಸಾಷ್ಟಾಂಗ ಪ್ರಣಾಮಗಳು. ನಾನು ಹುಟ್ಟಿದ ಮೊದಲು ಇದುವರೆಗೆ ಪಾಪವನ್ನಾಚರಿಸಿದವನಲ್ಲ. ಲೋಕಾಪವಾದಕ್ಕೆ ಅಂಜದೆ ನಡೆದವನಲ್ಲ. ಕಾಮಕ್ರೋಧಗಳಿಗೆ ವಶನಾದವನಲ್ಲ. ಆದರೆ ಮಿತ್ರನ ನಾಶವನ್ನು ಸಹಿಸದೆ ನಾನು ಜೀವವನ್ನು ಕಳೆದುಕೊಳ್ಳುತ್ತಿದ್ದೇನೆ. ನನಗೆ ಆತ್ಮಹತ್ಯದೋಷ ಒದಗದಂತೆ ಅನುಗ್ರಹ ಮಾಡಿ’ ಎಂಬ ಕೆಟ್ಟ ಕೂಗೊಂದು ವನದ ನಡುವೆ ಕೇಳಿ ಬಂತು. ಬೆಚ್ಚಿ ರಾಕ್ಷಸನು ಹಿಂದಿರುಗಿ ನೋಡುತ್ತಾನೆ; ಯಾವನೋ ಒಬ್ಬನು ಜೀವವನ್ನು ಕಳೆದುಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾನೆ! ತನ್ನಂತೆಯೇ ಈತನೂ ದುಃಖಿಯಾಗಿರಬೇಕೆಂದು ಅವನ ಬಳಿಗೆ ಬಂದು ರಾಕ್ಷಸನು ‘ಅಯ್ಯಾ, ಜೀವವನ್ನು ತೆಗೆದುಕೊಳ್ಳುವಷ್ಟು ಸಂಕಟ ನಿನಗೇನು? ನಿನ್ನ ದುಃಖವನ್ನು ನನಗೆ ತಿಳಿಸು. ನಮ್ಮ ಸುಖದುಃಖಗಳನ್ನು ಹಿತವರೆಲ್ಲಿ ಹೇಳಿಕೊಂಡರೆ ಅದು ನಮ್ಮ ಮನಸ್ಸಿಗೆ ಸಮಾಧಾನವನ್ನು ತರುವುದು” ಎಂದನು.
ಅದಕ್ಕೆ ಆ ಪುರುಷನು ‘ಸ್ವಾಮಿ, ಭಾಗ್ಯಹೀನನಾದ ನನ್ನ ವೃತ್ತಾಂತವನ್ನು ತಾವು ಏಕೆ ಕೇಳುವಿರಿ? ಇದರಿಂದ ನಿಮಗೇನು ಫಲ? ಆದರೂ ನಿಮಗೆ ಅಷ್ಟು ಕುತೂಹಲವಿದ್ದರೆ ಹೇಳುವೆನು ಕೇಳಿ. ಪಾಟಲಿಪುರದಲ್ಲಿ ವಿಷ್ಣುದಾಸನೆಂಬ ಒಬ್ಬ ವರ್ತಕನಿದ್ದಾನೆ. ಈ ನನ್ನ ಮಿತ್ರನು ಈ ಊರಿನ ರತ್ನಪಡಿ ವರ್ತಕನಾದ ಚಂದನದಾಸನ ಸ್ನೇಹಿತ. ಅಮಾತ್ಯರಿಗೆ ಪರಮಮಿತ್ರನಾದ ಚಂದನದಾಸನು ತನ್ನ ಮನೆಯಲ್ಲಿದ್ದ ರಾಕ್ಷ ಸನ ಹೆಂಡತಿ ಮಕ್ಕಳನ್ನು ಚಾಣಕ್ಯನಿಗೆ ಒಪ್ಪಿಸದಿರಲು ಈ ದಿನ ಚಂದನದಾಸನನ್ನು ಚಾಣಕ್ಯನ ಅಪ್ಪಣೆಯಂತೆ ಶೂಲಕ್ಕೇರಿಸುತ್ತಾರೆ. ಇದನ್ನು ನೋಡಲಾರದೆ ನನ್ನ ಮಿತ್ರನು ತನ್ನೆಲ್ಲ ಆಸ್ತಿಯನ್ನು ದೀನಾನಾಥರಿಗೆ ಕೊಟ್ಟು ಅಗ್ನಿ ಪ್ರವೇಶಮಾಡಲು ನಿಶ್ಚೈಯಿಸಿದ್ದಾನೆ. ಅವನನ್ನು ನಿಲ್ಲಿಸುವುದಕ್ಕೆ ಉಪಾಯಗಾಣದೆ ನನ್ನ ಮಿತ್ರನ ಸಾವನ್ನು ಕೇಳುವುದಕ್ಕಿಂತ ಮುಂಚೆ ಜೀವವನ್ನು ಕಳೆದುಕೊಳ್ಳುತ್ತೇನೆ. ಇನ್ನು ನಾನು ತಡಮಾಡಕೂಡದು’ ಎಂದನು.
ದೈವವು ಈಗ ರಾಕ್ಷಸನ ದುಃಖದ ಹೆಬ್ಬಾಗಿಲನ್ನೇ ತೆರೆಯಿತು. ಏನೋ ಪ್ರಮಾದ ಬಂತು; ಕಾರ್ಯಮಿಂಚುವುದಕ್ಕೆ ಮೊದಲೇ ಚಂದನದಾಸನನ್ನು ಬಿಡಿಸಬೇಕೆಂದೆಣಿಸಿ ರಾಕ್ಷಸನು ‘ಅಯ್ಯಾ, ನೀನು ಜೀವವನ್ನು ಕಳೆದುಕೊಳ್ಳಬೇಡ. ಈಗಲೇ ಹೋಗಿ ನಿನ್ನ ಮಿತ್ರನ ಯತ್ನವನ್ನು ನಿಲ್ಲಿಸು. ಈ ಖಡ್ಗದಿಂದಲೇ ನಾನು ಚಂದನದಾಸನನ್ನು ಬಿಡಿಸುವೆನು’ ಎಂದು ವೀರವಾಣಿಯಿಂದ ನುಡಿದನು.
ಪುರುಷ– ಸ್ವಾಮಿ, ಚಂದನದಾಸನಿಗೆ ಆಪದ್ಬಂಧುಗಳಾಗಿ ಬಂದಿರುವ ತಮ್ಮನ್ನು ನಾನು ಯಾರೆಂದು ತಿಳಿಯಲಿ?
ರಾಕ್ಷಸ– ಅಯ್ಯಾ ಸ್ನೇಹಿತ, ನಂದರನ್ನು ಕಳೆದುಕೊಂಡು, ಮಿತ್ರರನ್ನು ಕಷ್ಟಕ್ಕೆ ಸಿಲುಕಿಸಿ, ದಯಾರಹಿತನಾಗಿ ತೊಳಲುತ್ತಿರುವ ನನ್ನನ್ನು ರಾಕ್ಷಸನೆಂದು ತಿಳಿ.
ಪುರುಷ– (ಕೊರಳಿಗೆ ಹಾಕಿದ ಹಗ್ಗವನ್ನು ತೆಗೆದುಹಾಕಿ) ಅಮಾತ್ಯರೇ, ನಿಮ್ಮಿಂದ ನಮ್ಮ ಕಷ್ಟಗಳು ತೊಲಗಿದುವು. ನನ್ನ ಸಂಶಯ ದೂರವಾಯಿತು. ಆದರೂ ತಮ್ಮಲ್ಲಿ ನನ್ನದೊಂದು ಅರಿಕೆ. ನೀವು ಈ ಸಮಯದಲ್ಲಿ ಹಿರಿದ ಕತ್ತಿಯೊಡನೆ ಹೋದರೆ ಚಂದನದಾಸನಿಗೆ ಕ್ಷೇಮವುಂಟಾಗುವುದಿಲ್ಲ. ಇದರಿಂದ ಪ್ರಮಾದವೇ ಉಂಟೆಂದು ತೋರುತ್ತದೆ. ಏಕೆಂದರೆ ಹಿಂದೆ ಶಕಟದಾಸನನ್ನು ಶೂಲಕ್ಕೇರಿಸುವಾಗ ಯಾರೋ ಹಿರಿದ ಕತ್ತಿಯೊಡನೆ ಅವನನ್ನು ಬಿಡಿಸಿಕೊಂಡು ಹೋದರು. ಇದರಿಂದ ಕೋಪಗೊಂಡ ಚಾಣಕ್ಯನು ಕಟುಕರನ್ನು ಕೊಲ್ಲಿಸಿದನು. ಅಂದಿನಿಂದ ಕಟುಕರು ವಧ್ಯಸ್ಥಾನದ ಬಳಿ ಎಚ್ಚರಿಕೆಯಿಂದಿರುತ್ತಾರೆ. ಯಾರಾದರೂ ಕತ್ತಿಯೊಡನೆ ಅಲ್ಲಿ ಸುಳಿದರೆ ತಕ್ಷಣವೇ ಬಂದಿಯನ್ನು ಸಂಹರಿಸಿ, ಖಡ್ಗಹಸ್ತನಾದವನನ್ನು ಚಾಣಕ್ಯನ ಬಳಿಗೆ ಕರೆದೊಯ್ಯುತ್ತಾರೆ. ಆದ್ದರಿಂದ ನೀವು ಚಂದನದಾಸನನ್ನು ಬಿಡಿಸುವುದು ಸತ್ಯವಾದರೆ ವಧ್ಯಸ್ಥಾನದ ಬಳಿ ಹಿರಿದ ಕತ್ತಿಯೊಡನೆ ಹೋಗುವುದು ಅಪಾಯಕರ. ತಮಗೆ ಹೆಚ್ಚಾಗಿ ಹೇಳಲು ನಾನು ಶಕ್ತನಲ್ಲ’
ಇದನ್ನು ಕೇಳಿ ರಾಕ್ಷಸನು ತನ್ನ ಮನಸ್ಸಿನಲ್ಲಿ ” ಚಾಣಕ್ಯನ ತಂತ್ರದ ನೆಲೆಯೇ ಗೊತ್ತಾಗುವುದಿಲ್ಲವಲ್ಲ! ಮೊದಲು ಶಕಟದಾಸನನ್ನು ಶೂಲಕ್ಕೇರಿಸುವಂತೆ ನಿಯಮಿಸಿ ಸಂಗಡವೇ ಅವನನ್ನು ಬಿಡಿಸಲು ಸಿದ್ಧಾರ್ಥಕನನ್ನು ಕಳುಹಿಸಿದನೆಂದು ಯೋಚಿಸಲೇ? ಹಾಗಾದರೆ ಶಕಟದಾಸನನ್ನು ಬಿಟ್ಟು ಕಟುಕರನ್ನೇಕೆ ಸಂಹರಿಸಬೇಕು? ಹಗೆತನವನ್ನು ಸಾಧಿಸಲು ಶಕಟದಾಸನನ್ನು ವಧ್ಯಸ್ಥಾನಕ್ಕೆ ಕಳುಹಿಸಿದನೆಂದೇ ಇಟ್ಟುಕೊಳ್ಳೋಣ. ಅದೃಷ್ಟದಿಂದ ತಪ್ಪಿಸಿಕೊಂಡು ನನ್ನ ಬಳಿಗೆ ಬಂದು ತನಗೆ ಒದಗಿದ ವಿಪತ್ತನ್ನು ಪರಿಹಾರಮಾಡಿದ ಸಿದ್ಧಾರ್ಥಕನಿಗೆ ಉಚಿತವನ್ನು ಕೊಡಿಸಿದೆನೆಂದು ನಿಶ್ಚೈಸಲೇ? ಹಾಗಾದರೆ ಚಂದ್ರಗುಪ್ತನ ಕಾರ್ಯಕ್ಕೆ ಅನುಕೂಲವಾದ ಕಪಟಲೇಖನವನ್ನು ಸಿದ್ಧಾರ್ಥಕನ ಕೈಯಲ್ಲಿ ಕೊಡಲು ಕಾರಣವಿಲ್ಲ. ಅದು ಏನೇ ಆಗಲಿ, ನನಗಾಗಿ ಶೂಲವನ್ನೇರುವ ಚಂದನದಾಸನನ್ನು ಬಿಡಿಸುವುದೇ ಧರ್ಮ’ ಎಂದು ಯೋಚಿಸಿ, ಖಡ್ಗವನ್ನು ಬಿಸುಟು, ವಧ್ಯಸ್ಥಾನದ ಮಾರ್ಗವಾಗಿ ಹೊರಟುಹೋದನು. ಈ ಸಮಾಚಾರವನ್ನು ಚಾಣುಕ್ಯನಿಗೆ ತಿಳಿಸಲು ಪಶುಲೋಮನು ಓಡಿಹೋದನು.
ಇತ್ತ ಚಾಣಕ್ಯನ ಅಪ್ಪಣೆಯಂತೆ ಚಂದನದಾಸನ ಮೆರವಣಿಗೆ ರಾಜಬೀದಿಯ ಮಾರ್ಗವಾಗಿ ವಧ್ಯಸ್ಥಾನದ ಕಡೆಗೆ ಹೊರಬತು. ರಾಜಬೀದಿಯ ಇಕ್ಕೆಲದಲ್ಲಿಯೂ ಈ ನೋಟವನ್ನು ನೋಡಲು ಕಣ್ಣೀರು ಸುರಿಸುತ್ತ ಪುರ ಜನರು ನೆರೆದಿದ್ದರು. ‘ಚಂದನದಾಸಸೆಟ್ಟಿಗೆ ಏನು ಗತಿ ಬಂತು! ಹಾಳು ಚಾಣಕ್ಯನಿಗೆ ಕರುಣೆಯೇ ಇಲ್ಲವಲ್ಲ! ಇನ್ನೆಷ್ಟು ಜನರನ್ನು ಆಹುತಿ ತೆಗೆದುಕೊಳ್ಳುವನೋ ಈ ಪಾಪಿ! ಕಳ್ಳನಂತೆ ಕೊರಳಿಗೆ ಕಣಿಗಲೆಯ ಹೂವಿನ ಸರವನ್ನು ಹಾಕಿ ಚಂಡಾಲರು ಇವನನ್ನು ಶೂಲಕ್ಕೇರಿಸಲು ಒಯ್ಯುತ್ತಿದ್ದಾರೆ. ಸೆಟ್ಟಿಯನ್ನು ಹಿಂಬಾಲಿಸಿ ರೋದಿಸುತ್ತ ಹೋಗುತ್ತಿರುವ ಅವನ ಹೆಂಡತಿ ಮಗನಿಗೆ ದಿಕ್ಕಾರು? ಸ್ನೇಹಿತನಿಗಾಗಿ ಪ್ರಾಣಕೊಡಲು ಸಿದ್ಧನಾಗಿರುವ ಈತನು ಕಲಿಯುಗದ ಶಿಬಿಯಲ್ಲದೆ ಮತ್ತೇನು?’ ಎಂದು ಜನರೆಲ್ಲ ಚಂದನದಾಸನನ್ನು ಹೊಗಳುವವರೇ. ಮೆರವಣಿಗೆ ವಧ್ಯಸ್ಥಾನಕ್ಕೆ ಬರಲು ಚಂದನದಾಸನು ಹೆಂಡತಿಯನ್ನು ನೋಡಿ ‘ಪ್ರಿಯೆ ನನಗಾಗಿ ಏಕೆ ಅಳುವೆ? ಮಿತ್ರನಿಗಾಗಿ ನಾನು ಪ್ರಾಣಬಿಡುತ್ತಿದ್ದೇನೆ. ನೀನು ನನ್ನ ಮೇಲಣ ಆಸೆಯನ್ನು ಬಿಟ್ಟು ಮಗುವಿನೊಡನೆ ಹಿಂದಿರುಗು’ ಎಂದನು. ಆಗ ಒಬ್ಬ ಕಟುಕನು ‘ಸೆಟ್ಟಿ, ಶೂಲ ನೆಟ್ಟಿದೆ. ನಿನ್ನ ಒಡವೆಗಳು ನಮಗೆ ಸಲ್ಲಬೇಕು. ಅವುಗಳನ್ನು ನಮಗೆ ಕೊಟ್ಟು, ನಿನ್ನವರನ್ನು ಹಿಂದಕ್ಕೆ ಕಳುಹು’ ಎಂದನು.
ಕಟುಕನ ಮಾತನ್ನು ಕೇಳಿ ಚಂದನದಾಸನ ಹೆಂಡತಿ ಕಣ್ಣೀರು ತುಂಬಿದಳು. ಆಕೆಯನ್ನು ನೋಡಿ ಚಂದನದಾಸನು ‘ಪ್ರಿಯೆ, ಈ ಬಾಲಕನು ಲೋಕವ್ಯವಹಾರವನ್ನರಿತವನಲ್ಲ. ಇವನನ್ನು ಕಾಪಾಡಿ ಮುಂದಕ್ಕೆ ತರುವ ಭಾರ ನಿನ್ನದಾಗಿದೆ. ನೀನಿನ್ನು ಹಿಂದಿರುಗು ‘ ಎಂದು ಮಗನ ತಲೆಯನ್ನು ಸವರುತ್ತ ನುಡಿದನು.
ಚಂದನದಾಸನ ಹೆಂಡತಿ– ನಾಥ, ಪತಿಯನ್ನು ಹಿಂಬಾಲಿಸುವುದು ಸತಿಗೆ ಪರಮ ಧರ್ಮ. ಸೃಷ್ಟಿಸಿದ ದೇವರೇ ಈ ಮಗುವನ್ನು ಕಾಪಾಡುವನು. ನಿನ್ನನ್ನು ಅಗಲಿ ನಾನು ಒಂದು ನಿಮಿಷವೂ ಇರಲಾರೆ. (ಮಗುವನ್ನು ನೋಡಿ)ಮಗು, ನಿಮ್ಮ ತಂದೆಯ ಮುಖವನ್ನು ಚೆನ್ನಾಗಿ ನೋಡಿ, ಆತನು ಹೇಳುವ ಬುದ್ಧಿವಾದವನ್ನು ಗ್ರಹಿಸಿಕೋ. ಚಂದನದಾಸನ ಮಗ (ತಂದೆಯ ಕಾಲಮೇಲೆ ಬಿದ್ದು ಹೊರಳುತ್ತ)–ಅಪ್ಪಾ, ನೀನು ಹೋದ ಬಳಿಕ ಇನ್ನಾರನ್ನು ನಾನು ತಂದೆಯೆಂದು ಕರೆಯಲಿ? ಯಾರಿಗೆ ನಮಸ್ಕರಿಸಲಿ? ನಿನ್ನ ಅಗಲಿಕೆಯ ನೋವನ್ನು ಹೇಗೆ ಸಹಿಸಲಿ? ನಾನು ಜೀವಿಸುವ ಬಗೆ ಹೇಗೆ?
ಮಗನ ಗೋಳಾಟವನ್ನು ನೋಡಿ ಚಂದನದಾಸನು .ಮಗು ಚಾಣಕ್ಯನ ಹೆಸರು ಎಲ್ಲಿ ಕೇಳಿ ಬರುವುದಿಲ್ಲವೋ ಆ ದೇಶಕ್ಕೆ ಹೋಗಿ ಅಲ್ಲಿ ಜೀವಿಸಿಕೊಂಡಿರು.’ ಎಂದು ಮಗನನ್ನು ಸಂತೈಸಿದನು.
ಈ ಗೋಳಾಟ ಮುಗಿಯದುದನ್ನು ನೋಡಿ ಚಂಡಾಲರು “ಎಲಾ ಸೆಟ್ಟಿ, ಶೂಲ ಸಿದ್ಧವಾಗಿದೆ. ಮುಂದೆ ಬಾ.’ ಎಂದು ಚಂದನದಾಸನನ್ನು ತ್ವರೆಪಡಿಸಿದರು.
” ಅಣ್ಣಂದಿರ, ಪತಿಯನ್ನು ಶೂಲಕ್ಕೆ ಹಾಕಬೇಡಿ, ರಕ್ಷಿಸಿ’ ಎಂದು ಚಂದನದಾಸನ ಹೆಂಡತಿ ಗೋಳಿಡಲು ಚಂದನದಾಸನು ‘ಪ್ರಿಯೆ ಇನ್ನೊಬ್ಬರ ಅಪ್ಪಣೆಯನ್ನು ಪಾಲಿಸುವ ಈ ಚಂಡಾಲರನ್ನು ಬೇಡಿದರೆ ಏನು ತಾನೆ ಪ್ರಯೋಜನ? ನಿಮ್ಮನ್ನು ಇನ್ನುಮುಂದೆ ದೇವರೇ ಕಾಪಾಡುವನು. ಕಂದಾ, ನೀನಿನ್ನು ಇಲ್ಲಿರಬೇಡ, ನಡೆ. ತಾಯಿಯನ್ನು ಸಂತೈಸುತ್ತಾ ಹಿಂದಕ್ಕೆ ಕರೆದುಕೊಂಡುಹೋಗು.’ ಎಂದು ಧೈರ್ಯದಿಂದ ನುಡಿದನು.
ತಂದೆಯ ಮಾತನ್ನು ಕೇಳಿ ಮಗನು ‘ಅಪ್ಪಾ, ಪರೋಪಕಾರಕ್ಕಾಗಿ ತಮ್ಮ ಸರ್ವಸ್ವವನ್ನೂ ವ್ಯಯಮಾಡಿ ಕೀರ್ತಿಯನ್ನು ಪಡೆದವರುಂಟು. ನೀನಾದರೋ ಇನ್ನೊಬ್ಬರಿಗಾಗಿ ಪ್ರಾಣವನ್ನೇ ಕೊಡುವುದರಿಂದ ನಿನಗೆ ಇಹಪರಗಳಲ್ಲಿ ಶಾಶ್ವತವಾದ ಕೀರ್ತಿಸುಖಗಳುಂಟಾದುವು. ನಾವು ಮಾತ್ರ ಅನಾಥರಾದೆವು.’ ಎಂದು ಕಣ್ಣೀರು ತುಂಬಿದನು.
ಚಂದನದಾಸನನ್ನು ಶೂಲಕ್ಕೆ ಹತ್ತಿಸಲು ಅಣಿಮಾಡಿ, ಚಂಡಾಲರು ಅವನ ಹೆಂಡತಿ ಮಕ್ಕಳನ್ನು ಕುರಿತು ‘ಇನ್ನು ಯಾರೂ ಇಲ್ಲಿರಕೂಡದು. ಹೋಗಿ’ ಎಂದು ಗರ್ಜಿಸಲುು ಚಂದನದಾಸನ ಹೆಂಡತಿ ಎದೆ ಚೆಚ್ಚಿಕೊಳ್ಳುತ್ತ, ಭೂಮಿಯಲ್ಲಿ ಬಿದ್ದು ಹೊರಳುತ್ತಾ ‘ಅಪ್ಪಾ, ನನ್ನ ಗಂಡನನ್ನು ಉಳಿಸಿ’ ಎಂದು ಅಳಲಾರಂಭಿಸಿದಳು. ಇನ್ನೇನು? ಇನ್ನೆರಡು ನಿಮಿಷಗಳಲ್ಲಿ ಚಂದನದಾಸನ ಅವತಾರ ಮುಗಿಯುವುದು.
ಇದ್ದಕ್ಕಿದ್ದ ಹಾಗೆ ‘ತಾಯೇ, ಅಂಜದಿರು ; ಶೋಕವನ್ನು ಬಿಡು. ನಿನ್ನ ಗಂಡನ ಜೀವವನ್ನು ಉಳಿಸುವೆನು.’ ಎಂಬ ಮಾತು ಕೇಳಿ ಬಂತು. ಚಂದನದಾಸನು ಬೆಚ್ಚಿ ನೋಡಲಾಗಿ ಅಮಾತ್ಯರು ಕಾಣಿಸಿಕೊಂಡರು. ರಾಕ್ಷಸನು ಚಂಡಾಲರಿಗೆ ” ಎಲಾ, ನಂದರನ್ನು ಕಳೆದುಕೊಂಡು ಮಿತ್ರನನ್ನು ಆಪತ್ತಿಗೆ ಗುರಿಮಾಡಿದ ಪಾಪಯಾದ ನನ್ನನ್ನು ಶೂಲಕ್ಕೇರಿಸಬೇಕು. ಹಾಗಲ್ಲದೆ ನಿರಪರಾಧಿಯಾದ ಚಂದನದಾಸನನ್ನು ಶೂಲಕ್ಕೇರಿಸುವುದೇ? ನನಗಾಗಿ ಚಂದನದಾಸನು ಶೂಲಕ್ಕೇರುವನಲ್ಲವೆ? ಅವನನ್ನು ಬಿಟ್ಟುಬಿಡಿ. ನನ್ನನ್ನು ಶೂಲಕ್ಕೇರಿಸಿ’ ಎಂದನು. ಈ ಮಾತನ್ನು ಕೇಳಿ ಚಂದನದಾಸನು ‘ಅಮಾತ್ಯರೇ, ಇದೇನು ಮಾಡಿದಿರಿ? ಇದುವರೆಗೂ ನೀವು ಮಾಡಿದ ಪ್ರಯತ್ನನೆಲ್ಲ ವ್ಯರ್ಥವಾಯಿತಲ್ಲ!’ ಎನಲು ರಾಕ್ಷಸನು ‘ಅಯ್ಯಾ, ಮಿತ್ರ! ನಿನ್ನ ನಡತೆಯಲ್ಲಿ ಒಂದು ಭಾಗದ ಅನುಕರಣ ಇದು. ಅದಿರಲಿ, ಚಂಡಾಲರೇ, ನಾನು ಶೂಲಕ್ಕೇರಲು ಸಿದ್ದನಾಗಿದ್ದೇನೆ. ಈ ಸಮಾಚಾರವನ್ನು ಚಾಣಕ್ಯ ಚಂದ್ರಗುಪ್ತರಿಗೆ ತಿಳಿಸಿ” ಎಂದನು.
ರಾಕ್ಷಸನ ಮಾತಿಗೆ ಚಂಡಾಲರು ‘ಅಮಾತ್ಯರೇ, ಪ್ರಭುಗಳ ಅಪ್ಪಣೆಯಿಲ್ಲದೆ ತಾವು ಶೂಲವನ್ನೇರಲಾಗದು. ಚಂದನದಾಸನನ್ನೂ ನಾವು ಬಿಡುವಂತಿಲ್ಲ. ಸ್ನೇಹಿತನಲ್ಲಿ ನಿಮಗಷ್ಟು ಮಮತೆಯಿದ್ದರೆ ಅರಸರಿಂದ ಅಪ್ಪಣೆಯನ್ನು ಹೊರಡಿಸಿ. ಅಲ್ಲಿಯವರಿಗೆ ನಾವು ಕೈ ತಡೆಯುವೆವು. ಚಂದನದಾಸನನ್ನು ಇಲ್ಲಿಯೇ ನಿಲ್ಲಿಸಿ ನಾವೇ ನಿಮ್ಮನ್ನು ಅಲ್ಲಿಗೆ ಕರೆದೊಯ್ಯುವೆವು’ ಎಂದರು. ವಿಧಿಯಿಲ್ಲದೆ ರಾಕ್ಷಸನು ಒಪ್ಪಿಕೊಳ್ಳಲು ಚಂಡಾಲರು ಹೆಂಡತಿ ಮಗನೊಡನಿದ್ದ ಚಂದನದಾಸನನ್ನು ಮರದ ನೆರಳಿನಲ್ಲಿ ಕುಳ್ಳಿರಿಸಿ ಅಮಾತ್ಯನೊಡಕೆ ಚಾಣಕ್ಯನ ಆಶ್ರಮಕ್ಕೆ ಬಂದರು. ಅಷ್ಟರಲ್ಲೇ ಮಲಯಕೇತುವನ್ನು ಹಿಡಿದು ತರುತ್ತಿದ್ದ ಸೈನ್ಯದ ಹರುಷದ ಧ್ವನಿ ಕೇಳಿ ಬಂತು. ಅಮಾತ್ಯನಿಗೆ ಚಾಣಕ್ಯನ ತಂತ್ರದ ವಿಷಯದಲ್ಲಿ ಆಶ್ಚರ್ಯದ ಮೇಲೆ ಆಶ್ಚರ್ಯ.
ಚಾಣಕ್ಯನ ಆಶ್ರಮಕ್ಕೆ ರಾಕ್ಷಸನೊಡನೆ ಚಂಡಾಲರು ಬಂದು ‘ಅಮಾತ್ಯರು ತಮ್ಮ ನೀತಿಪಾಶದಿಂದ ಕಟ್ಟುವಡೆದು, ತಮ್ಮ ದಶರ್ನಕ್ಕೆ ಬಂದಿದ್ದಾರೆ. ಈ ವಿಷಯವನ್ನು ಪೂಜ್ಯರಿಗೆ ತಿಳಿಸಿ” ಎಂದು ಶಿಷ್ಯನಿಗೆ ಬಿನ್ನೈಸಿಕೊಂಡರು. ಈ ವಿಷಯವನ್ನು ಶಿಷ್ಯನು ಚಾಣಕ್ಯನಿಗೆ ತಿಳಿಸಲು, ಚಾಣಕ್ಯನು ದೂರದಿಂದಲೇ ಅಮಾತ್ಯನನ್ನು ನೋಡಿ ‘ಈತನೇ ಮಹಾಪುರುಷನಾದ ರಾಕ್ಷಸ ಎಂದು ಎದೆ ತುಂಬಿದ ಸಂತೋಷದಿಂದ ಹೊರಗೆ ಬಂದು ದೂತರಿಗೆ ಈ ರೀತಿ ನುಡಿದನು–
ಚಾಣಕ್ಯ– ಎಲಾ, ಧಗಧಗಿಸುವ ಬೆಂಕಿಯನ್ನು ಬಟ್ಟೆಯ ಸೆರಗಿನಲ್ಲಿ ಕಟ್ಟಿದವರಾರು? ಚಂಡಮಾರುತನನ್ನು ಹಗ್ಗದಿಂದ ಬಿಗಿದವರಾರು? ಕ್ರೂರವಾದ ಸಿಂಹವನ್ನು ಮೈದಡವಿ ತಂದವರಾರು?
ಚಂಡಾಲರು– ನಂದಕುಲಗಿರಿವಜ್ರಾಯುಧರೂ, ಮೌರ್ಯಕುಲ ಪ್ರತಿಷ್ಠಾಸನಾಚಾರ್ಯರೂ ಆದ ತಾವು ಮತ್ತು ತಮ್ಮ ನೀತಿಕುಶಲತೆ.
ಚಾಣಕ್ಯ– ಹಾಗಲ್ಲ. ನಂದಕುಲ ವಿದ್ವೇಷಿಯಾದ ದೈವವೇ ಇವರನ್ನು ಇಲ್ಲಿಗೆ ಕರೆತಂದಿತು. ಅಮಾತ್ಯರೇ, ವಿಷ್ಣುಗುಪ್ತನು ಅಭಿವಂದಿಸುತ್ತಾನೆ.
ರಾಕ್ಷಸನು ‘ಈತನೇ ದುರಾತ್ಮನಾದ ಚಾಣಕ್ಯನು!’ ಎಂದು ಕೌಟಲ್ಯನನ್ನು ದಿಟ್ಟಿಸಿ ನೋಡಿದನು. ತಕ್ಷಣವೇ ಮನಸ್ಸಿನಲ್ಲಿ “ಛೇ, ಈತನು ನಿಜವಾಗಿಯೂ ಮಹಾತ್ಮನೇ ಸರಿ. ಅಭ್ಯುದಯಕಾಲದಲ್ಲಿಯೂ ವಿದ್ಯಾನಿಧಿಯಾದ ಈತನಿಗೆ ಎಂಥ ವಿರಕ್ತಿ! ಈ ತೇಜಸ್ವಿಯನ್ನು ಅವಮಾನ ಪಡಿಸಿದ್ದರಿಂದಲೇ ನಂದರು ಹತರಾದರು. ಈತನ ಸಾಹಸವನ್ನು ಮೆಚ್ಚದಿದ್ದರೆ ನನ್ನಲ್ಲಿ ಮಾತ್ಸರ್ಯದೋಷವುಂಟಾಗುವುದು’ ಎಂದು ಕೊಂಡು ‘ಆರ್ಯರೇ, ಚಂಡಾಲರ ಸಹವಾಸದಿಂದ ನಾನು ದೂಷಿತನಾಗಿದ್ದೇನೆ. ತಾವು ನಮಸ್ಕರಿಸಕೂಡದು.’ ಎಂದನು.
ಚಾಣಕ್ಯನು ಸ್ವಲ್ಪ ನಕ್ಕು ‘ಅಮಾತ್ಯರೇ, ಇವರು ಚಂಡಾಲರಲ್ಲ. ಚಂಡಾಲ ವೇಷಧಾರಿಗಳು. ಈ ಸಿದ್ಧಾರ್ಥಕನ ಪರಿಚಯ ತಮಗಿದ್ದೇ ಇದೆ. ಮತ್ತೊಬ್ಬನು ಸಮಿದ್ಧಾರ್ಥಕ. ಈ ದಿನ ವನದಲ್ಲಿ ತಮಗೆ ಕಾಣಿಸಿಕೊಂಡವನು ಪಶುಲೋಮ. ಕ್ಷಪಣಕನು ನನ್ನೊಡನಾಡಿಯಾದ ಇಂದುಶರ್ಮ. ಈ ಲೇಖನ, ಈ ಪೆಟ್ಟಿಗೆ – ಇವೆಲ್ಲ ನನ್ನ ತಂತ್ರ. ಭಾಗುರಾಯಣ ಭದ್ರಭಟಾದಿಗಳು ನನ್ನ ಅಪ್ಪಣೆಯಂತೆ ಮಲಯಕೇತುವಿನ ಬಳಿ ಇದ್ದರು. ಇದೆಲ್ಲವನ್ನೂ ನಿಮಗೆ ಚಂದ್ರಗುಪ್ತನ ಸಂಬಂಧವನ್ನುಂಟುಮಾಡಲು ನಾನೇ ಹೊಡಿದ ತಂತ್ರ.” ಎಂದು ಎಲ್ಲವನ್ನೂ ವಿವರವಾಗಿ ತಿಳಿಸಿದನು. ಚಾಣಕ್ಯನ ಮಾತನ್ನು ಹೇಳಿ ಅಮಾತ್ಯನಿಗೆ ಶಕಟದಾಸನಲ್ಲಿದ್ದ ಸಂಶಯ ದೂರವಾಯಿತು.
ಚಾಣಕ್ಯನು ಹೀಗೆ ಹೇಳುತ್ತಿರುವಷ್ಟರಲ್ಲಿಯೇ ಚಂದ್ರಗುಪ್ತನು ಅಲ್ಲಿಗೆ ಬಂದು ಅಮಾತ್ಯ ಚಾಣಕ್ಯರಿಗೆ ನಮಸ್ಕರಿಸಿದನು. ಸ್ವಾಮಿಭಕ್ತ ನಾದ ರಾಕ್ಷಸನ ಸ್ಥಿತಿ ಚಂದ್ರಗುಪ್ತನಿಗೆ ಹರಸುವಷ್ಟರ ಮಟ್ಟಿಗೆ ಇಳಿಯಿತು. ರಾಕ್ಷಸನು ಮನಸ್ಸಿನಲ್ಲಿ ‘ಚಂದ್ರಗುಪ್ತನಲ್ಲಿ ಮೊದಲಿಂದಲೂ ಪ್ರಭುಲಕ್ಷಣಗಳಿದ್ದುವು. ಈತನಿಗೆ ತೇಜಸ್ವಿಯಾದ ಬ್ರಾಹ್ಮಣನ ನೆರೆ ಬೇರೆ ದೊರಕಿತು. ಹೀಗಾಗಿ ಸಲಗನಿಗೆ ಹಿಂಡಿನ ಒಡೆತನ ದೊರಕುವಂತೆ ರಾಜ್ಯಲಕ್ಷ್ಮ್ಮಿ ಕೈಸೇರಿದಳು. ನಾನು ಮಾತ್ರ ಅಯೋಗ್ಯನನ್ನು ನೆಚ್ಚಿ ಕೆಟ್ಟೆ. ಎಂದು ಯೋಚಿಸಿ ಚಂದ್ರಗುಪ್ತನಿಗೆ ಹರಸಿದನು.
ಚಾಣಕ್ಕ– ಅಮಾತ್ಯರೇ, ಚಂದನದಾಸನು ಬದುಕಬೇಕೆಂಬ ಆಸೆ ನಿಮಗುಂಟೋ?
ರಾಕ್ಷಸ– ಚಾಣಕ್ಯರೇ, ಅದಕ್ಕಾಗಿ ತಾನೇ ನಾನು ಇಷ್ಟು ಪ್ರಯತ್ನ ಮಾಡಿದ್ದು.
ಚಾಣಕ್ಯ— ಅಮಾತ್ಯರೇ, ಹಾಗಾದರೆ ಚಂದ್ರಗುಪ್ತನು ನಿಮ್ಮ ಪ್ರಾಣವನ್ನು ಬಯಸುವುದಿಲ್ಲ; ಆಲೋಚನೆಯನ್ನು ಬಯಸುತ್ತಾನೆ. ಈ ಸಚಿವಶಸ್ತ್ರವನ್ನು ಸ್ವೀಕರಿಸಿ, ಮಿತ್ರನ ಪ್ರಾಣವನ್ನು ಉಳಿಸಿ.
ರಾಕ್ಷಸ (ಮನಸ್ಸಿನಲ್ಲಿ) ಇದೇನು ಬಂತು? ನನ್ನ ಪರಮವೈರಿಯನ್ನು ನಾನು ಸೇವಿಸುವುದೇ? (ಪ್ರಕಾಶವಾಗಿ) ಆರ್ಯರೇ, ತಾವು ಧರಿಸಿದ ಶಸ್ತ್ರವನ್ನು ನಾನು ಹಿಡಿಯಲು ತಕ್ಕವನಲ್ಲ.
ಚ್ಛಾಣಕ್ಯ — ಅಮಾತ್ಯರೆ, ಏನು ಮಾತಿದು? ಸಚಿವಶಸ್ತ್ರವನ್ನು ಹಿಡಿಯಲು ನಿಮಗಿಂತ ಯೋಗ್ಯರು ಇನ್ನಾರಿದ್ದಾರೆ? ನಿಮಗಾಗಿ ತಾನೆ ನಮ್ಮ ಸೇನೆಗಳು ಅನ್ನ ನೀರಿಲ್ಲದೆ ನಿಂತಲ್ಲಿ ನಿಲ್ಲದೆ ಬಳಲುತ್ತಿವೆ. ಅದೆಲ್ಲ ಹಾಗಿರಲಿ. ನೀವು ಸಚಿವಶಸ್ತ್ರನನ್ನು ಸ್ವೀಕರಿಸಿದ ಹೊರತು ಚಂದನದಾಸನಿಗೆ ಬಿಡುಗಡೆ ದೊರಕದು.
ರಾಕ್ಷಸ– ಆರ್ಯರೇ, ಮಿತ್ರನಿಗಾಗಿ ನಾನು ಈ ಸಚಿವಶಸ್ತ್ರವನ್ನು ಧರಿಸುವೆನು. ಪುರದ ಉದ್ಯಾನದಲ್ಲಿ ನಾನು ಕತ್ತಿಯನ್ನು ಬಿಸುಟಾಗಲೇ ನಂದರಿಗೆ ನನ್ನ ಸೇವೆ ಸಂದುಹೋಯಿತು,
ಚಾಣಕ್ಯನು ಹಿಗ್ಗಿ ಚಂದ್ರಗುಪ್ತನಿಗೆ ‘ ಕುಮಾರ, ಅಮಾತ್ಯರು ನಿನ್ನ ಮೇಲೆ ಅನುಗ್ರಹ ಮಾಡಿದರು. ನಾನು ಧನ್ಯನಾದೆ. ನನ್ನ ಕೆಲಸ ಕೈಗೊಡಿತು. ನಿನ್ನ ಪಟ್ಟಾಭಿಷೇಕವನ್ನು ನೋಡಿ ತಪೋವನಕ್ಕೆ ಹೋಗುವೆನು. ನಾಳೆ ಹುಣ್ಣಿಮೆ. ನಿನ್ನ ಪಟ್ಟಾಭಿಷೇಕ ನಡೆಯಲಿ.’ಎಂದನು.
ಅಷ್ಟರಲ್ಲೇ ಮಲಯಕೇತು ಅಲ್ಲಿಗೆ ಬಂದು ಚಾಣಕ್ಯರಾಕ್ಷಸರಿಗೆ ನಮಸ್ಕರಿಸಿದನು. ಚಂದ್ರಗುಪ್ತನು ರಾಜಕುಮಾರನನ್ನು ಆಲಿಂಗಿಸಿಕೊಂಡನು. ರಾಕ್ಷಸನ ಮನಸ್ಸಿನಲ್ಲಿದ್ದ ಸಂಶಯಗಳೆಲ್ಲ ಈಗ ಪರಿಹಾರವಾದುವು. ಮೆರವಣಿಗೆಗೆ ಎಲ್ಲವೂ ಸಿದ್ಧವಾಯಿತು. ಅಮಾತ್ಯ ಚಾಣಕ್ಯರು ಒಂದೇ ಪಲ್ಲಕ್ಕಿಯನ್ನೇರಿ ಕುಳಿತರು. ಮಲಯಕೇತು ಚಂದ್ರಗುಪ್ತರು ಮದ್ದಾನೆಯನ್ನೇರಿದರು. ಈ ವೇಳೆಗೆ ಅಲಂಕಾರದಿಂದ ಭೂಷಿತನಾದ ಚಂದನದಾಸನೂ ಬಂದು ಮೆರವಣಿಗೆಯೊಡನೆ ಸೇರಿದನು. ಪಾಟಲೀಪುರದಲ್ಲಿ ಇಂದು ಉತ್ಸವದ ಮೇಲೆ ಉತ್ಸವ. ಮಂಗಳ ವಾದ್ಯಗಳು ಮೊರೆಯುತ್ತಿರಲು ಮೆರವಣಿಗೆ ನಿಧಾನವಾಗಿ ರಾಜಬೀದಿಗಳ ಮೂಲಕ ಅರಮನೆಯ ಕಡೆಗೆ ಹೊರಟತು.
ಮುಂದಿನ ಅಧ್ಯಾಯ: ೩೦. ಪಟ್ಟಾಭಿಷೇಕ