ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 3: ಸಿಂಹ ಪರೀಕ್ಷೆ

೩. ಸಿಂಹ ಪರೀಕ್ಷೆ

” ಬಲವಿಲ್ಲದ ಕಾಲದಲ್ಲಿ ನೆಲ ಎದ್ದು ಬಡಿಯಿತು.’ ಎನ್ನುವುದು ಅನುಭವದ ಮಾತು. ನಂದರಿಗೆ ತಿಳಿಯದಂತೆ ಈಗ ಅವರ ಬಲ ಕುಗ್ಗಿತು. ಅವರ ಸಂಸಾರದ ಕಟ್ಟಿನಲ್ಲಿ ನೂರುಹತ್ತು ಬಲವಾದ ಮರದ ತುಂಡುಗಳು ಒಟ್ಟಾಗಿದ್ದುವು. ಇತರರು ಅವುಗಳನ್ನು ಕತ್ತರಿಸಲಾರದವರಾಗಿದ್ದರು. ಈಗ ನಂದರೇ ಆ ಕಟ್ಟನ್ನು ಬಿಚ್ಚಿ ಅದರಲ್ಲಿ ನೂರು ತುಂಡುಗಳನ್ನು ಕೊಚ್ಚಿಹಾಕಿದರು. ಹೇಳಹೆಸರಿಲ್ಲದಂತೆ ಮಾಡಿದರು. ಇದರಿಂದ ಅವರ ಹಗೆಗಳಿಗೆ ಉಳಿದ ಒಂಬತ್ತು ತುಂಡುಗಳನ್ನು ನಾಶಮಾಡುವುದು ಸುಲಭವಾಯಿತು. “ಒಗ್ಗಟ್ಟಿನಲ್ಲಿ ಬಲವಿದೆ” ಎನ್ನುವುದು ಮುತ್ತಿನಂಥ ಮಾತು. ವೇದ ಸುಳ್ಳಾದರೂ ಗಾದೆ ಸುಳ್ಳಾದೀತೇ?

ನಂದರಿಗೆ ಬಹುಮಂದಿ ಹಗೆಗಳಿದ್ದರು. ಮೌರ್ಯರು ಬದುಕಿರುವವರೆಗೂ, ಅವರಿಗೆ ಹೆದರಿ ಹಗೆಗಳು ತಲೆಯೆತ್ತಿರಲಿಲ್ಲ ಈಗ ಅವರಿಗೆಲ್ಲ ಅನುಕೂಲವಾದ ಸಮಯ ದೊರಕಿತು. ಇವರ ಹೆಗೆಗಳಲ್ಲಿ ಹಸುವಿನ ಮುಖದ ಹುಲಿಯಂತಿದ್ದ ಪರ್ವತರಾಜನೆಂಬುವವನೂ ಒಬ್ಬನು. ನಂದರಿಗೆ ಬೇಕಾದವನಂತೆ ಇವನು ನಟಸುತ್ತಿದ್ದರೂ ಅವರ ಮೇಲೆ ಬೀಳಲು ಸಮಯಕಾಯುತ್ತಿದ್ದನು. ಪಾಟಲೀಪುರದ ವಿಶೇಷ ಸಮಾಚಾರವನ್ನು ತಿಳಿಯಲು ಹೋಗಿದ್ದ ಅವನ ಗೂಢಚಾರರು ಬಂದು ಅವನಿಗೆ ಮೌರ್ಯರು ಸತ್ತ ಸುದ್ದಿಯನ್ನು ತಿಳಿಸಿದರು. ಚಾರರ ಮಾತನ್ನು ಕೇಳಿ ಪರ್ವತರಾಜನು ಕ್ಷಣಕಾಲ ಸುಮ್ಮನಿದ್ದು ತಲೆದೂಗಿ, ಬಳಿಕ ಮಂತ್ರಿಯಾದ ಶಬರವರ್ಮನನ್ನು ಕುರಿತು ಈ ರೀತಿ ಹೇಳಿದನು:

ಅಯ್ಯಾ ಮಂತ್ರಿ! ಪಾಟಿಲೀಪುರದ ಸುದ್ದಿಯನ್ನು ಕೇಳಿದೆಯಾ? ನಂದರ ನಾಶ ಹತ್ತಿರವಾದಂತೆ ಕಾಣುತ್ತದೆ. ತಮ್ಮವರಾಗಿ ಸೇವಕರಂತೆ ಕೆಲಸ ಮಾಡುತ್ತಿದ್ದ ಮೌರ್ಯರನ್ನು ಕೊಂದುಹಾಕಿ, ನಂದರು ಬುದ್ಧಿಯಿಲ್ಲದ ಕೆಲಸವನ್ನು ಮಾಡಿದರು. ಇದನ್ನು ನೋಡಿದರೆ ಕದನಕ್ಕೆ ಹೋಗುವ ಮನುಷ್ಯನು ತನ್ನ ಕೈಖಡ್ಗವನ್ನು ತಾನೇ ಮುರಿದು ಬಿಸುಟಂತಾಯಿತು. ನಂದರು ಶೂರರೆಂಬ ಭಯ ಹೆಗೆಗಳಿಗೆ ತಪ್ಪಿತು. ಹಣಕ್ಕಾಗಿ ಜೀತಮಾಡುವ ಜನ ಬಂಧುಗಳಾದಾರೇ? ನಂದರ ಈ ಕೆಲಸಕ್ಕೆ ರಾಕ್ಷಸನು ಒಪ್ಪಿರಲಾರನು. ಈಗ ಬದುಕಿರುವ ಚಂದ್ರಗುಪ್ತನೇ ಮುಂದೆ ಇವರಿಗೆ ಹೆಗೆಯಾದಾನು. ಒಟ್ಟಿನಲ್ಲಿ ನಂದರು ಜನರ ಪ್ರೀತಿಯನ್ನು ಕಳೆದುಕೊಂಡರು.

ರಾಯನ ಮಾತಿಗೆ ಶಬರವರ್ಮನು ” ಜೀಯಾ, ತಾನು ಹೇಳಿದುದೆಲ್ಲ ಸತ್ಯ. ನಂದರು ತಮ್ಮ ಬಲಗೈಯನ್ನು ತಾವೇ ಕತ್ತರಿಸಿಕೊಂಡರು. ಈಗ ಬದುಕಿರುವ ಚಂದ್ರಗುಪ್ತನು ಸೆರೆಮನೆಯಿಂದ ಬಿಡುಗಡೆ ಹೊಂದಿದರೆ ಸಾಕು. ಮೌರ್ಯನಿಂದ ಏಳಿಗೆ ಹೊಂದಿದ ಭಾಗುರಾಯಣನೇ ಮೊದಲಾದ ಸೇನಾಪತಿಗಳು ಅವನಿಗೆ ಸಹಾಯಕರಾಗಬಹುದು. ಇದು ಹಗೆಗಳಿಗೆ ತುಂಬ ಅನುಕೂಲವಾದ ಕಾಲ. ಅಂಗೈ ಅಗಲದ ಮೋಡ ಯಾವಾಗ ಆಕಾಶವನ್ನು ತುಂಬುವುದೆಂದು ಹೇಳುವವರಾರು? ಈಗ ನಾವು ಸುಮ್ಮನಿರಬಾರದು. ನಂದರು ಬಹುವಾಗಿ ಹೆಚ್ಚಿ ಹೋಗಿದ್ದಾರೆ. ಅವರನ್ನು ಉಪಾಯದಿಂದ ನಿಗ್ರಹಿಸಬೇಕು. ಆದ್ದರಿಂದ ಪಾಟಿಲೀಪುರದ ಸಮಾಚಾರವನ್ನು ಚೆನ್ನಾಗಿ ತಿಳಿಯಲು ಒಂದು ಕಪಟಶಿಲ್ಪವನ್ನು ಮಾಡಿ ಕಳುಹುವೆನು’ ಎಂದನು. ಮಂತ್ರಿಯ ಮಾತು ರಾಜನಿಗೆ ಒಪ್ಪಿತು.

ಅನಂತರ ಶಬರವರ್ಮನು ಚತುರರಾದ ಶಿಲ್ಪಿಗಳನ್ನು ಕರೆಸಿ, ಅವರಿಂದ ಒಂದು ಉಕ್ಕಿನ ಪಂಜರವನ್ನೂ, ಅದರಲ್ಲಿ ಒಂದು ಕಪಟ ಸಿಂಹವನ್ನೂ ಮಾಡಿಸಿದನು. ಆ ಪಂಜರಕ್ಕೆ ರಕ್ಷಕರನ್ನು ನೇಮಿಸಿ, ಅದರ ಉಪಾಯವನ್ನೂ, ಇನ್ನೂ ಕೆಲವು ಮಾತುಗಳನ್ನೂ ಅವರಿಗೆ ತಿಳಿಸಿದನು. ಇಷ್ಟೆಲ್ಲ ಆದಮೇಲೆ ಅವರಿಗೆ ‘ಈ ಪಂಜರವನ್ನು ಪಾಟಿಲೀಪುರದ ಆಸ್ಥಾನದ ಬಳಿ ಇಳುಹಿ. ನಾನು ಹೇಳಿದ ರೀತಿಯಲ್ಲಿ ಹೇಳಿಕೊಂಡು ಬೀದಿಯಲ್ಲಿ ಸಾರುತ್ತ ಬನ್ನಿ. ಇದರ ಪರೀಕ್ಷಕರನ್ನೂ ಅಲ್ಲಿ ನಡೆಯುವ ಹೆಚ್ಚಿನ ವರ್ತಮಾನವನ್ನೂ ನಮಗೆ ಬಂದು ತಿಳಿಸಿ’ ‘ಎಂದು ಹೇಳಿ ಕಳುಹಿಸಿಕೊಟ್ಟನು. ಈ ವೇಳೆಗೆ ಪರ್ವತರಾಜನ ಸಾಮಂತನಾದ ಲಂಪಾಕಾಧಿಪತಿ ದಂಡೆತ್ತಿ ಬರುತ್ತಿರುವ ಸುದ್ದಿ ಬಂತು.

ಇತ್ತಕಡೆ ಪಂಜರರಕ್ಷಕರು ಪರ್ವತರಾಜನ ಪಟ್ಟಣದಿಂದ ಹೊರಟು ಕೆಲವು ದಿವಸಗಳಾದ ಮೇಲೆ ಪಾಟಲೀಪುರಕ್ಕೆ ಬಂದರು. ಪಂಜರವನ್ನು ಆಸ್ಥಾನದ ಬಳಿ ಇಳಿಸಿ, ವಾದ್ಯದೊಡನೆ ‘ಈ ಸಿಂಹ ಅಮಾನುಷಕೃತವಾದುದು. ಈ ನಗರದಲ್ಲಿ ಯಾರಾದರೂ ನಿಪುಣರಿದ್ದ ರೆ ಈ ಸಂಜರವನ್ನು ಖಂಡಿಸದೆ, ಇದರಲ್ಲಿರುವ ಸಿಂಹವನ್ನು ಜೀವಸಹಿತವಾಗಿ ಹೊರಕ್ಕೆ ತೆಗೆಯಿರಿ. ಇಲ್ಲದಿದ್ದ ರೆ ಉಳಿದ ದೇಶದ ಜನರಂತೆ ನಮಗೆ ಮರ್ಯಾದೆ ಮಾಡಿ ಮುಂದಕ್ಕೆ ಹೊರಡಲು ಅಪ್ಪಣೆಕೊಡಿ’ ಎಂದು ತೋಳೆತ್ತಿಕೊಂಡು ಸಾರುತ್ತಿದ್ದರು. ಈ ಮಾತನ್ನು ಕೇಳಿ ಊರಿನ ಜನರೆಲ್ಲ ಅಲ್ಲಿಗೆ ಬಂದು ನೋಡಿ, ಅದರ ಗುಟ್ಟನ್ನು ತಿಳಿಯಲಾರದೆ ಹಿಂದಿರುಗುತ್ತಿದ್ದರು.

ಈ ಸಮಾಚಾರ ನಂದರಿಗೆ ತಿಳಿಯಿತು. ರಾಕ್ಷಸನೊಬ್ಬನನ್ನು ಬಿಟ್ಟು ಉಳಿದ ಮಂತ್ರಿಗಳೆಲ್ಲ ಪಂಜರವನ್ನು ಪರೀಕ್ಷಿಸಿದರು. ಆದರೆ ಅದರ ಗುಟ್ಟು ಅವರಿಗೂ ಬಗೆಹರಿಯಲಿಲ್ಲ. ಆಗ ರಾಕ್ಷಸನು ‘ಇದು ನಮ್ಮ ಜಾಣತನವನ್ನು ತಿಳಿಯಲು ಪರರಾಜರು ಕಳುಹಿಸಿರುವ ಕಪಟಶಿಲ್ಪ ವೆಂದು ಕಾಣುತ್ತದೆ. ನಮ್ಮ ಪಟ್ಟಣದಲ್ಲಿ ಇದನ್ನು ನೋಡದಿರುವ ಜನ ಇನ್ನೂ ಇರಬಹುದು. ಇದರ ಗುಟ್ಟನ್ನು ಯಾರಾದರೂ ತಿಳಿದು ಹೇಳಿದರೆ, ಅವರಿಗೆ ವಿಶೇಷವಾದ ರಾಜಮರ್ಯಾದೆಯಾಗುವುದೆಂದು ಸಾರುತ್ತ ಬನ್ನಿ” ಎಂದು ಅಪ್ಪಣೆ ಮಾಡಿದನು.

ರಾಕ್ಷಸನ ಅಪ್ಪಣೆಯಂತೆ ದೂತರು ಈ ವಿಷಯವನ್ನು ಊರಿನಲ್ಲಿ ಸಾರಿದರು. ಆದರೆ ಪಂಜರವನ್ನು ಪರೀಕ್ಷೆಮಾಡಲು ಯಾರೂ ಮುಂದೆ ಬರಲಿಲ್ಲ. ಸೆರೆಮನೆಯ ಬಾಗಿಲಲ್ಲಿ ನಿಂತಿದ್ದ ಚಂದ್ರಗುಪ್ತನು ‘ಎಲೈ ದೊತರಿರಾ, ಈ ಪಟ್ಟಣದಲ್ಲಿ ಈ ಪಂಜರದ ಪರೀಕ್ಷಕರು ಯಾರೂ ದೊರಕಲಿಲ್ಲವೇ?’ ಎಂದು ಕೇಳಿದನು. ದೂತರು ಅವನ ಮಾತಿಗೆ ಉತ್ತರ ಕೊಡದೆ, ನಂದರ ಬಳಿ ಬಂದು ‘ನಿಮ್ಮ ಮಾತಿನಂತೆ ಊರಿನಲ್ಲೆಲ್ಲ ಸಾರಿದೆವು. ಆದರೆ ಇದರ ಪರೀಕ್ಷಕರು ಮಾತ್ರ ಯಾರೊಬ್ಬರೂ ದೊರಕಲಿಲ್ಲ, ಸೆರೆಮನೆಯ ಬಾಗಿಲಲ್ಲಿ ನಿಂತಿದ್ದ ಯಾರೋ ಒಬ್ಬ ನಮ್ಮನ್ನು ಕುರಿತು ‘ಈ ಊರಿನಲ್ಲಿ ಪಂಜರಪರೀಕ್ಷಕರು ಯಾರೂ ದೊರಕಲಿಲ್ಲವೆ?’ ಎಂದು ಕೇಳಿದನು ಎಂದರು. ಅವರ ಮಾತಿಗೆ ನಂದರು ‘ಅವನು ಅದರ ಗುಟ್ಟನ್ನು ಬಲ್ಲವನಾಗಿರಬೇಕು. ಅವನು ಪಂಜರ ಪರೀಕ್ಷೆಯನ್ನು ಮಾಡಿದರೆ ಅವನಿಗೆ ಸೆರೆಮನೆಯಿಂದ ಬಿಡುಗಡೆ, ರಾಜಮರ್ಯಾದೆ ಉಂಟಾಗುವುದು. ಅವನನ್ನು ಕರೆತಂದು ಪರೀಕ್ಷೆ ನಡೆಸಿ” ಎಂದು ಅಪ್ಪಣೆಮಾಡಿ ಹೊರಟುಹೋದರು.

ಈಗ ರಾಕ್ಷಸನು ತನ್ನಲ್ಲಿಯೇ ಹೀಗೆ ಯೋಚಿಸಿದರು. “ನಾನು ಈಗಲೇ ಹೋಗಿ ಪಂಜರವನ್ನು ಪರೀಕ್ಷಿಸಕೂಡದು. ಏಕೆಂದರೆ ಇದರ ಪರೀಕ್ಷ ನನ್ನಿಂದ ಆಗದೆ ಹೋಗಿ ಆಮೇಲೆ ಮತ್ತೊಬ್ಬನು ಬಂದು, ತಿಳಿದು ಹೇಳಿದರೆ ಆಗ ನನಗೆ ಬಹೆಳ ಅವಮಾನ ಉಂಟಾಗುವುದು, ಆದಕಾರಣ ಈಗ ಹೋಗಿ ಪಂಜರನನ್ನು ನೋಡುವುದು ಯುಕ್ತವಲ್ಲ. ಸೆರೆಯಾಳು ಬಂದು ನೋಡಿ ಅದರ ಪರೀಕ್ಷೆಯನ್ನು ಮಾಡಿ ಸನ್ಮಾನಿತನಾಗಿ ಹೋದರೆ ಹೋಗಲಿ. ಅದು ಅವನಿಂದ ಆಗದಿದ್ದರೆ, ಆಗ ನಾನು ಹೋಗಿ ನೋಡುವೆನು. ನನ್ನಿಂದ ಪರೀಕ್ಷೆ ಆದರೆ ನನಗೆ ವಿಶೇಷ ಬಹುಮಾನವುಂಟಾಗುವುದು. ಅದರ ಪರೀಕ್ಷೆ ತಿಳಿಯದ ಪಕ್ಷದಲ್ಲಿ ಎಲ್ಲರಂತೆ ನಾನೂ ಒಬ್ಬನಾಗುವೆನು. ಇದೇನೂ ಅನಮಾನವಲ್ಲ’ ಹೀಗೆಂದು ರಾಕ್ಷಸನು ಸುಮ್ಮನಿದ್ದುಬಿಟ್ಟನು.

ಚಂದ್ರಗುಪ್ತನು ಸಿಂಹನಿದ್ದ ಸ್ಥಳಕ್ಕೆ ಬಂದು ಅದನ್ನು ಚೆನ್ನಾಗಿ ಪರೀಕ್ಷಿಸಿದನು. ಅವನು ತನ್ನಲ್ಲಿಯೇ (ಈ ಪಂಜರವನ್ನು ಅಖಂಡವಾದ ಎರಕದಿಂದ ಮಾಡಿದೆ. ಇದರಲ್ಲಿರುವ ಸಿಂಹ ಪೋಷಕನು ಕೊಟ್ಟ ಮಾಂಸಕ್ಕೆ ಎರಗುತ್ತ, ಹೊರಗಡೆಯಲ್ಲಿ ಅವನು ಪಂಜರವನ್ನು ಬಳಸಿ ಬಂದರೆ ತಾನೂ ಬಳಸಿ ಬರುತ್ತದೆ. ಆದ್ದರಿಂದಲೇ ಇದನ್ನು ಅಮಾನುಷ ಕೃತವೆನ್ನುತ್ತಾರೆ. ಇರಲಿ, ಇದನ್ನು ಪರೀಕ್ಷಿಸುತ್ತೇನೆ’ ಎಂದುಕೊಂಡು ರಾಜಭಟರಿಂದ ಮಾಂಸವನ್ನು ತರಿಸಿ ತಾನೇ ಸಿಂಹಕ್ಕೆ ಕೊಟ್ಟನು. ಆದರೆ ಅದು ಮಾಂಸವನ್ನು ಗ್ರಹಿಸಲಿಲ್ಲ.

ಚಂದ್ರಗುಪ್ತ (ಪಂಜರದವನನ್ನು ನೋಡಿ)- ಏನಯ್ಯಾ, ನಾನು ಕೊಟ್ಟ ಮಾಂಸವನ್ನು ಈ ಸಿಂಹ ಏಕೆ ಗ್ರಹಿಸಲಿಲ್ಲ?

ಚಾರರು(ಮನಸ್ಸಿನಲ್ಲಿಯೇ ಆತಂಕಪಡುತ್ತ)-ಅಯ್ಯಾ, ಈ ಸಿಂಹ ಅಮಾನುಷಕೃತ. ಚಿಕ್ಕಂದಿನಿಂದಲೂ ಇದು ಸಾಕಿದವರಿಂದ ಮಾತ್ರ ಆಹಾರವನ್ನು ಗ್ರಹಿಸುತ್ತದೆ. ಬೇರೆಯವರನ್ನು ಲಕ್ಷಿಸುವುದೇ ಇಲ್ಲ.

ಪಂಜರರಕ್ಷಕರ ಮಾತು ಕಪಟನೆಂದು ಚಂದ್ರಗುಪ್ತನು ಅರಿತು

ಮತ್ತೆ ಮನಸ್ಸಿನಲ್ಲಿ ಈರೀತಿ ಯೋಚಿಸಿದನು. ‘ಈ ಪಂಜರೆ ಅಖಂಡವಾದ ಕಾರಣ ಜೀವಸಿಂಹ ಇದರಲ್ಲಿ ಹೋಗುವುದು ಹೇಗೆ ಸಾಧ್ಯ? ಇದು ಪಂಜರವನ್ನು ಬಳಸಿ ಬರುತ್ತದೆ. ಮಾಂಸದ ಆಶೆಯಿಂದ ಬಾಲವನ್ನು ಕುಣಿಸುತ್ತದೆ. ಮಾಂಸವನ್ನು ಕಚ್ಚುತ್ತದೆ. ಪಂಜರದವನು ದೂರವಾದರೆ ಆಯಾಸದಿಂದ ನಿಟ್ಟುಸಿರು ಬಿಡುವಂತೆ ಕಾಣುತ್ತದೆ. ಆದ್ದರಿಂದ ಇದು ಜೀವಸಿಂಹವೇ ಸರಿಯೆಂದು ತೋರುತ್ತದೆ. ಹೀಗಿದ್ದರೂ ಇದು ಜೀವಸಿಂಹವಾಗಿರಲಾರದೆ, ಅರಗು ಮೇಣಗಳಿಂದ ಮಾಡಿ, ಮೇಲೆ ಬಣ್ಣ ಬಳಿದ ಕಪಟಸಿಂಹವಾಗಿರಬೇಕು. ಇರಲಿ. ಇನ್ನೊಂದು ಪರೀಕ್ಷೆಯನ್ನು ಮಾಡುವೆನು.” ಹೀಗೆಂದುಕೊಂಡು ಲಾಯದಿಂದ ಒಂದು ಆನೆಯ ಮರಿಯನ್ನು ತರಿಸಿ, ಅದರ ಕಣ್ಣನ್ನು ಬಿಗಿದು, ಪಂಜರದ ಸುತ್ತಲೂ ಅದು ಬಳಸಿಬರುವಂತೆ ಮಾಡಿದನು. ಅದನ್ನು ನೋಡಿ ಸಿಂಹ ಗರ್ಜಿಸಲಿಲ್ಲ. ಆಗ ಇದು ಕಪಟಸಿಂಹವೆಂದು ಚಂದಗುಪ್ತನಿಗೆ ಮನದಟ್ಟಾಯಿತು. ಸೂಜಿಗಲ್ಲಿನಿಂದಾದ ಸಲಾಕೆಯ ಸತ್ವವೇ ಸಿಂಹ ತಿರುಗುವುದಕ್ಕೆ ಕಾರಣವೆಂದರಿತು,

ಚಂದ್ರಗುಪ್ತ (ಪಂಜರರಕ್ಷಕರಿಗೆ)–ಎಲೈ ಪಂಜರರಕ್ಷಕನೆ, ನಿನ್ನ ಕೈಯಲ್ಲಿರುವ ಸ ಸಲಾಕಿಯನ್ನು ಬಿಟ್ಟು ಪಂಜರವನ್ನು ಬಳಸಿ ಬಾ.

ಪಂಜರದವನು (ಮನಸ್ಸಿನಲ್ಲಿ) ಯಾರಿಗೂ ತಿಳಿಯದ ಸಲಾಕಿಯ ಪರೀಕ್ಷೆ ಈತನಿಗೆ ತಿಳಿಯಿತು! ಇರಲಿ. ಹೀಗೆ ಹೇಳುವೆನು. (ಚಂದ್ರಗುಪ್ತನಿಗೆ) ಅಯ್ಯಾ, ಹುಟ್ಟಿದಂದಿನಿಂದ ಈ ಸಲಾಕಿಯ ತುದಿಯ ಮಾಂಸದಿಂದಲೇ ಈ ಸಿಂಹ ಜೀವಿಸುತ್ತಿದೆ. ಅದನ್ನು ತೊರೆದರೆ ಸಿಂಹ ಮಾಂಸವನ್ನೇ ಮುಟ್ಟುವುದಿಲ್ಲ. ಆದ್ದರಿಂದ ಈ ಸಲಾಕಿಯನ್ನು ಬಿಡಕೂಡದು.

ಚಂದ್ರಗುಪ್ತ – ಇನ್ನು ಮುಚ್ಚು ಮರೆಯೇಕೆ? ಉಕ್ಕು, ಕಬ್ಬಿಣ, ಸಲಾಕಿ ಇವುಗಳ ಸಮೂಹದಿಂದ ಮಾಡಿದ ಈ ಕಪಟಸಿಂಹ ಚಲಿಸುವುದರಲ್ಲಿ ಸೋಜಿಗವೇನು? ಇನ್ನು ನಿಮ್ಮ ಕಪಟವನ್ನು ಸಾಕುಮಾಡಿ.

ಪಂಜರದನನು (ನಾಚಿಕೆಯಿಂದ) ಸ್ವಾಮಿ, ನಾವು ಜಿತರಾದೆವು.

ಚಂದ್ರಗುಪ್ತ (ಮನಸ್ಸಿನಲ್ಲಿ) -ಇದು ಪರರಾಜರ ಕಪಟವೆಂದು ಕಾಣುತ್ತದೆ. ನಂದರ ಅವಹೇಳನಕ್ಕಾಗಿ ಕಳುಹಿಸಿರುವ ಶಿಲ್ಪ ಇದು. ಇವರಿಂದ ನನಗೆ ಬಿಡುಗಡೆಯಾಗುತ್ತದೆ. ರಾಕ್ಷಸನು ಇವರನ್ನು ದಂಡಿಸದೆ ಬಿಡನು. ಈ ದೂತರ ದೇಶವನ್ನು ತಿಳಿದು ಇವರನ್ನು ಇಲ್ಲಿಂದ ಚದುರಿಸಬೇಕು. (ಪ್ರಕಾಶವಾಗಿ) ಎಲೈ ದೂತರೇ, ನಿಮ್ಮ ದೇಶ ಯಾನುದು?

ಪಂಜರದವರು- ಸ್ವಾಮಿ, ಬೆಟ್ಟಗುಡ್ಡಗಳಲ್ಲಿ ಜೋಗಿಗಳಂತೆ ಜೀವಿಸುವವರು ನಾವು. ನಮ್ಮದು ಯಾವ ದೇಶವೆಂದು ಹೇಳೋಣ? ಚಂದ್ರಗುಪ್ತನಿಗೆ ಅವರು ಪರ್ವತರಾಜನ ಕಡೆಯವರೆಂದು ತಿಳಿದು, ಅವರ ಮುಖವನ್ನು ಚೆನ್ನಾಗಿ ನೋಡಿ ‘ಈಗಲೇ ಇಲ್ಲಿಂದ ಹೊರಟು ಹೋಗಿ’ ಎಂದು ಕಣ್ಣುಸನ್ನೆಯಿಂದ ಸೂಚಿಸಿದನು. ಈ ಸೂಚನೆಯನ್ನು ಗ್ರಹಿಸಿ, ಪಂಜರದವರು ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಬೈರಾಗಿಗಳ ವೇಷದಿಂದ ಮರೆಯಾಗಿ ಬಿಟ್ಟರು. ಚಂದ್ರಗುಪ್ತನಿಂದ ಸಿಂಹ ಪರೀಕ್ಷೆ ಆಯಿತೆಂದು ನಂದರು ತಿಳಿದು ಸಿಂಹವಿದ್ದ ಸ್ಥಳಕ್ಕೆ ಬಂದು ‘ಇದರೆ ಗುಟ್ಟನ್ನು ಹೇಗೆ ತಿಳಿದೆ?’ ಎಂದು ಚಂದ್ರಗುಪ್ತನನ್ನು ಕೇಳಿದರು. ಕೂಡಲೇ ‘ಚಂದ್ರಗುಪ್ತನು ಬೆಂಕಿಯನ್ನು ತರಿಸಿ ಸಿಂಹಕ್ಕೆ ತೋರಿಸಿದನು. ಅರಗು, ಮೇಣಗಳು ಕರಗಿ, ಒಳಗಿದ್ದ ಕಬ್ಬಿಣ ಮಾತ್ರ ಉಳಿಯಿತು. ತಮ್ಮ ನಗರದಲ್ಲಿ ಪಂಜರ ಪರೀಕ್ಷೆಯಾದ ಸಂತೋಷ, ಚಂದ್ರಗುಪ್ತನಂಥ ಬುದ್ದಿಶಾಲಿಯಾದ ಹಗೆ ಉಳಿದುದಕ್ಕೆ ಸಂಕಟ, ಇವು ಏಕಕಾಲದಲ್ಲಿ ನಂದರಿಗೆ ಉಂಬಾದುವು.

ನಂದರ ಮನಸ್ಸನ್ನು ಹತ್ತಿರದಲ್ಲಿದ್ದ ವೃದ್ಧಮಂತ್ರಿ ವಕ್ರನಾಸನು ಗ್ರಹಿಸಿ ನಂದರಿಗೆ ‘ಜೀಯಾ ತಮ್ಮನ್ನೇ ನಂಬಿರುವ ಈ ಚಂದ್ರಗುಪ್ತನನ್ನು ಸೆರೆಯಿಂದ ಬಿಡಿಸಿ ಈತನಿಗೆ ಉಚಿತವಾದ ಅಧಿಕಾರವನ್ನು ಕೊಡಿ. ಮುಂದೆ ಈತನು ತಮ್ಮ ಕೆಲಸಕ್ಕೆ ಬಂದಾನು. ತಾವು ಸಭೆಯಲ್ಲಿ ನುಡಿದ ಮಾತೂ ಸತ್ಯವಾಗುವುದು’ ಎಂದನು. ನಂದರಿಗೆ ಈಗ ಏನು ಮಾಡುವುದಕ್ಕೂ ತೋಚಲಿಲ್ಲ. ಮಂತ್ರಿಯ ಮಾತಿನಂತೆ ನಡೆದರೆ ಶತ್ರು ಶೇಷ ಉಳಿಯುತ್ತದೆ. ನಡೆಯದಿದ್ದರೆ ನಂದರು ಆಡಿದ ಮಾತಿಗೆ ತಪ್ಪುವರೆಂಬ ಜನಾಪವಾದ ಬೇರೆ. ಏನು ಮಾಡುವುದೆಂದು ಅವರು ಯೋಚಿಸುತ್ತಿದ್ದರು.

ಆಗ ಸುಮತಿಯೆಂಬ ಇನ್ನೊಬ್ಬ ಮಂತ್ರಿ “ಸ್ವಾಮಿ, ಚಂದ್ರಗುಪ್ತನನ್ನು ಸೆರೆಯಿಂದ ಬಿಡಿಸಿ, ಆತನಿಗೆ ಬೇರಾವ ಅಧಿಕಾರವನ್ನೂ ಕೊಡದೆ ಅನ್ನ ಸತ್ರದ ಅಧಿಕಾರವನ್ನು ಕೊಡಿ” ಎಂದನು.

ನಂದರು (ರಾಕ್ಷಸನನ್ನು ನೋಡಿ) ಇವನೇಕೆ ಹೀಗೆ ಹೇಳುತ್ತಾನೆ?

ರಾಕ್ಷಸ (ಮಂತ್ರಿಯ ಭಾವವನ್ನು ಗ್ರಹಿಸಿ, ನಂದರಿಗೆ ಗುಟ್ಟಾ ಗಿ) ರಾಜಕುಮಾರಾರಿರಾ, ಮಂತ್ರಿ ಆಡಿದ ಮಾತು ಸತ್ಯ. ಚಂದ್ರಗುಪ್ತ ಚಕ್ರವರ್ತಿಯ ಮೊಮ್ಮಗ. ಆದ್ದರಿಂದ ಈ ಸಣ್ಣ ಅಧಿಕಾರದಲ್ಲಿ ಉದಾಸೀನನಾಗಿ, ಬ್ರಾಹ್ಮಣರ ಶಾಪಕ್ಕೆ ಗುರಿಯಾಗಿ ನಾಶವಾಗುತ್ತಾನೆ.

ರಾಕ್ಷಸನ ಮಾತು ನಂದರಿಗೆ ಒಪ್ಪಿತು. ಚಂದ್ರಗುಪ್ತನನ್ನು ಸೆರೆಯಿಂದ ಬಿಡಿಸಿ, ಅವನನ್ನು ಆ ಕೆಲಸಕ್ಕೆ ಒಪ್ಪಿಸಿ ಅನ್ನ ಸತ್ರಾಧಿಕಾರದಲ್ಲಿ ನಿಯಮಿಸಿದರು. ಚಂದ್ರಗುಪ್ತನು ಗಂಗೆಯಲ್ಲಿ ಸ್ನಾನಮಾಡಿ ತಂದೆ ತಮ್ಮಂದಿರಿಗೆಲ್ಲ ತಿಲೋದಕವನ್ನು ಕೊಟ್ಟು, ‘ಪಾಲಿಗೆ ಬಂದದ್ದು ಪಂಚಾಮೃತ ‘ ಎನ್ನುವಂತೆ ಅನ್ನಸತ್ರದ ಅಧಿಕಾರವನ್ನು ಚೆನ್ನಾಗಿ ನೋಡಿಕೊಳ್ಳುತ್ತ ಕಾಲ ಕಳೆಯುತ್ತಿದ್ದನು.

ಇತ್ತ ರಾಕ್ಷಸನು ಪರ್ವತರಾಜನ ದೂತರನ್ನು ಹುಡುಕಿಸಿದನು. ಆದರೆ ಅವರು ಸಿಕ್ಕಲಿಲ್ಲ.


ಮುಂದಿನ ಅಧ್ಯಾಯ: ೪. ಚಾಣಕ್ಯ ಪ್ರತಿಜ್ಞೆ


Leave a Reply

Your email address will not be published. Required fields are marked *