ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 30: ಪಟ್ಟಾಭಿಷೇಕ

 ೩೦. ಪಟ್ಟಾಭಿಷೇಕ

ಇಂದು ಹುಣ್ಣಿಮೆ. ಚಂದ್ರಗುಪ್ತಮಹಾರಾಜನ ಪಟ್ಟಾಭಿಷೇಕಕ್ಕೆ ಗೊತ್ತಾದ ಶುಭದಿವಸ. ಅಮಾತ್ಯರಾಕ್ಷಸನ ಅಪ್ಪಣೆಯಂತೆ ನಗರವೆಲ್ಲ ಸಿಂಗಾರವಾಗಿದೆ. ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಲು ಪುರಜನರು ಉಟ್ಟು ತೊಟ್ಟು ನಲಿಯುತ್ತಿದ್ದಾರೆ. ಎಲ್ಲರ ಮುಖಗಳೂ ಹರುಷದಿಂದ ಅರಳಿವೆ. ಪಾಟಲೀಪುತ್ರನಗರಕ್ಕೆ ಹೊಸ ಕಳೆ ಬಂದಿದೆ.

ಶುಭಮುಹೂರ್ತ ಸಾರಿ ಬಂತು. ಅರಮನೆಯ ಪ್ರಾಕಾರದಲ್ಲಿ ಮಂಗಳ ವಾದ್ಯಗಳು ಮೊಳಗುತ್ತಿರಲು ಚಾಣಕ್ಯನು ಚಂದ್ರಗುಪ್ತನನ್ನು ತಾನೇ ಅಲಂಕರಿಸಿ ಅವನ ಕೈಹಿಡಿದು ಕಲ್ಯಾಣಮಂಟಪಕ್ಕೆ ಕರೆ ತಂದನು. ಆಗ ವಿಪ್ರರ ವೇದಘೋಷ ಕೇಳಿ ಬರುತ್ತಿರಲು, ಸಾಮಂತ ರಾಜರಿಂದ ಪರಿವೃತನಾದ ಚಂದ್ರಗುಪ್ತನು ಹೆಂಡತಿಯೊಡನೆ ಆರ್ಯ ಚಾಣಕ್ಕರ ಪಾದವನ್ನು ತೊಳೆದು, ಆ ನೀರನ್ನು ತಾವಿಬ್ಬರೂ ತಲೆಯಲ್ಲಿ ತಳೆದು ‘ಆರ್ಯರೇ, ತಮ್ಮ ಅನುಗ್ರಹದಿಂದ ನನಗಿಂದು ಈ ಸಾರ್ವಭೌಮಪದವಿ ದೊರಕಿತು. ನಾನು ಧನ್ಯನಾದೆ, ಮೌರ್ಯ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಕೀರ್ತಿ ತಮ್ಮದು. ತಮ್ಮ ಅಶೀರ್ವಾದ ನನಗೆ ಯಾವಾಗಲೂ ರಕ್ಷೆಯಾಗಿರಲಿ’ ಎಂದು ಚಾಣಕ್ಯ ರಾಕ್ಷಸರಿಬ್ಬರಿಗೂ ನಮಸ್ಕರಿಸಿದನು. ಆ ಸಮಯದಲ್ಲಿ ಭಾಗುರಾಯಣನು ಬೆಳ್ಳನೆ ಕೊಡೆಯನ್ನು ಹಿಡಿಯಲು, ಭದ್ರಭಟಾದಿಗಳು ಚಾಮರವಿಕ್ಕಲು, ಚಾಣಕ್ಯನು ಚಂದ್ರಗುಪ್ತನನ್ನು ಸಿಂಹಾಸನದಲ್ಲಿ ಕೂರಿಸಿ ಬ್ರಾಹ್ಮಣರಿಂದ ಅಭಿಷೇಕ ಮಾಡಿಸಿದನು. ಆಗ ತಂಗಾಳಿ ಬೀಸಿತು. ದಿಕ್ಕುಗಳು ಪ್ರಸನ್ನವಾದುವು. ದೀನಾನಾಥರ ಬಡತನ ಹರಿಯಿತು. ಬಡಬಗ್ಗರಿಗೆ ಅನ್ನದಾನ, ವಸ್ತ್ರದಾನಗಳು ನಡೆದುವು. ಬಂದಿಗಳಿಗೆ ಬಿಡುಗಡೆ ದೊರೆಯಿತು. ಕೈಕೊಂಡ ಕೆಲಸ ಸಂಪೂರ್ಣವಾಗಿ ಕೈಗೂಡಿದುದಕ್ಕಾಗಿ ಚಾಣಕ್ಯನಿಗೆ ಅಂದು ಅತಿಶಯವಾದ ಸಂತೋಷ. ಸಂಜೆಯ ಮೆರವಣಿಗೆಯಿಂದ ಚಂದ್ರಗುಪ್ತ ಮಹಾರಾಜನ ಪಟ್ಟಾಭಿಷೇಕಮಹೋತ್ಸವ ಮುಗಿಯಿತು.

ಮಾರನೆಯ ದಿನ ಚಾಣಕ್ಯನು ಚಂದ್ರಗುಪ್ತನಿಗೆ ‘ವತ್ಸ, ನಿನಗೆ ಅಮಾತ್ಯರು ಮಂತ್ರಿಯಾಗಿ ದೊರಕಿದರು. ಇನ್ನು ನಾನು ನೆಮ್ಮದಿಯಿಂದ ತಪೋವನಕ್ಕೆ ಹೋಗುವೆನು. ಅಪ್ಪಣೆ ಕೊಡು. ನಾನಿಲ್ಲಿ ಬಹುಕಾಲ ನಿಲ್ಲಲಾರೆ. ಆಗಲೇ ತಪೋವನ ನನ್ನನ್ನು ಕರೆಯುತ್ತಿದೆ. ಪರ್ವತರಾಜನು ನಮಗೆ ಮಾಡಿದ ಸಹಾಯವನ್ನು ನೆನೆದು ರಾಜಕುಮಾರ ಮಲಯಕೇತುವಿನಲ್ಲಿ ಆದರವನ್ನು ತೋರು. ಭದ್ರಭಟಾದಿಗಳು ಅವನೊಂದಿಗೆ ಹೋಗಿ ಅವನನ್ನು ರಾಜ್ಯದಲ್ಲಿ ಸ್ಥಾಪಿಸಿ ಬರಲಿ. ಚಂದನದಾಸನು ಸತ್ಯವಂತ; ಮಿತ್ರ ಪ್ರೇಮಿ. ಇನ್ನು ಮುಂದೆ ಅನನೇ ನಗರದ ಶ್ರೇಷ್ಠಿ ಪದವಿಯನ್ನು ಅನುಭವಿಸಿಕೊಂಡು ಬರಲಿ. ಈ ನನ್ನ ಹಿತವಚನವನ್ನು ಗ್ರಹಿಸಿ ಯಾವಾಗಲೂ ಅದರಂತೆ ನಡೆಯಲು ಪ್ರಯತ್ನ ಮಾಡು. ನಿನ್ನ ರಾಜ್ಯ ಭದ್ರವಾಗಿರಬೇಕಾದರೆ ಹಿಂದಿನ ಅಧಿಕಾರಿಗಳನ್ನೇ ನಿಯಮಿಸಿಕೊಂಡು ಅವರನ್ನು ಮರ್ಯಾದೆಯಿಂದ ಕಾಪಾಡಿಕೊಂಡು ಬಾ. ಅನಾದಿಕಾಲದಿಂದ ನಡೆದುಕೊಂಡು ಬಂದಿರುವ ದೇಶಮರ್ಯಾದೆಗಳಿಗೆ ಕೊರತೆ ಬಾರದಂತೆ ರಕ್ಷಿಸಿಕೊಂಡು ಬರುವುದೇ ರಾಜ್ಯನಿರ್ವಾಹ. ಆ ಮರ್ಯಾದೆಯ ಸ್ವರೂಪವನ್ನು ಹೇಳುವೆನು, ಕೇಳು. ವರ್ಣಾಶ್ರಮ ಧರ್ಮಗಳಲ್ಲಿ ವ್ಯತ್ಯಾಸ ಬಾರದಂತೆ ವಿಚಾರಿಸಿ ನಿಗ್ರಾಹಾನುಗ್ರಹದಿಂದ, ಪ್ರಜೆಗಳನ್ನು ಕಾಪಾಡಿಕೊಂಡು ಬರುವುದೇ ಮರ್ಯಾದೆಯ ಪಾಲನೆ. ಇದನ್ನು ಉಪೇಕ್ಷಿಸಿದರೆ ಧರ್ಮಕ್ಕೆ ಹಾನಿಯುಂಟಾಗುವುದು. ರಾಜನು ಸರಿಯಾದ ಮಾರ್ಗದಲ್ಲಿ ನಡೆದರೆ ಪ್ರಜೆಗಳೂ ಹಾಗೆಯೇ ನಡೆಯುವರು. ಆದ್ದರಿಂದ ನಿನ್ನ ದೇಹವನ್ನು ಕಾಪಾಡುವಂತೆ ವರ್ಣಾಶ್ರಮ ಧರ್ಮವನ್ನು ರಕ್ಷಿಸು. ಇದಕ್ಕೆ ವಿರುದ್ಧವಾಗಿ ನಡೆದು ರಾಜ್ಯ ಭ್ರಷ್ಟರಾಗಿ ಲೋಕಾಪವಾದಕ್ಕೆ ಗುರಿಯಾದ ರಾಜರನ್ನು ಕಾಲ ಕಾಲಕ್ಕೂ ನೆನೆಯುತ್ತಿರು. ಪ್ರಜೆಗಳನ್ನು ಮಕ್ಕಳಂತೆ ಕಾಪಾಡಿಕೊಂಡು ಬಾ. ಅವರಿಗೆ ನಿನ್ನಲ್ಲಿ ಭಯ ಭಕ್ತಿ ವಿಶ್ವಾಸಗಳುಂಟಾಗುವಂತೆ ಮಾಡು. ಮೇರೆ ಮೀರಿ ನಡೆಯುವವರನ್ನು ಯೋಗ್ಯತೆಯರಿತು ದಂಡಿಸು. ಸಾಧುಸಜ್ಜನರಲ್ಲಿ ನಿನ್ನ ದಯೆ ದಾಕ್ಷಿಣ್ಯಗಳು ಸ್ಥಿರವಾಗಿರಲಿ. ನೀನು ನ್ಯಾಯಪಕ್ಷಪಾತಿಯಾಗಿರು. ಲೋಕಾಪವಾದಕ್ಕೆ ಅಂಜಿ ನಡೆ. ನೀತಿಮಾರ್ಗವನ್ನು ಬಿಟ್ಟು ಹೋಗಬೇಡ. ಅಪೂಜರನ್ನು ಪೂಜ್ಯರೆಂದು ಕಾಣಬೇಡ. ನಿಷ್ಕುರವಾದರೂ ಹತವಚನವನ್ನು ಯಾರು ನುಡಿಯುವರೋ ಅವರನ್ನು ಅಪದ್ಬಂಧುಗಳೆಂದೆಣಿಸು.. ವಿಮರ್ಶೆಮಾಡಿ ಕೆಲಸ ಮಾಡು. ಪಾಪಭೀರುಗಳಾದ ವಿದ್ವಾಂಸರನ್ನು ಸೇವಿಸು. ಕಾರ್ಯದಕ್ಷರ ಮುಂದೆ ಹೇಡಿಗಳಿಗೆ ಸನ್ಮಾನ ಮಾಡಬೇಡ. ಹಿತೈಷಿಗಳೂ, ಕಾರ್ಯದಕ್ಷರೂ ಅದವರಿಗೆ ಪ್ರೋತ್ಸಾಹ ಕೊಟ್ಟು ಉತ್ಸಾಹವುಕ್ಕುವಂತೆ ಮಾಡು. ಸಾಧು ಸಜ್ಜನರಿಗೂ ದೀನಾನಾಥರಿಗೂ ಆಧಾರವಾಗಿರು. ನ್ಯಾಯಮಾರ್ಗದಲ್ಲಿ ಹಣವಂತವರಾದವರಿಂದ ದ್ರವ್ಯವನ್ನು ಪಡೆದು ಬಡವರನ್ನು ಕಾಪಾಡು. ರಾಜನಾದವನು ಸ್ತ್ರೀ ಮದ್ಯ ದ್ಯೂತಾದಿಗಳಿಗೆ ವಶನಾಗದೆ ರಾಜ್ಯಭಾರ ಮಾಡುತ್ತಿದ್ದರೆ ರಾಜ್ಯಲಕ್ಷ್ಮಿ ಅವನಲ್ಲಿ ಸ್ಥಿರವಾಗಿ ನಿಲ್ಲುವಳು. ಆಗ ಕಲಿಯುಗವೂ ಕೃತಯುಗದಂತಾಗುವುದು. ನಾನು ಧರ್ಮವನ್ನು ಸ್ಥಾಪಿಸಿದೆ. ಅದನ್ನು ಕಾಪಾಡಿಕೊಂಡು ಬರುವ ಭಾರ ನಿನ್ನದಾಗಿದೆ. ಇನ್ನು ಮುಂದೆ ನಿನ್ನ ಲಾಲನೆಪಾಲನೆ ಸಂಪೂರ್ಣವಾಗಿ ಅಮಾತ್ಯರಿಗೆ ಸೇರಿದೆ. ನನ್ನ ಆಶೀರ್ವಾದ ನಿನ್ನ ಮೇಲೆ ಪೂರ್ಣವಾಗಿದೆ. ನಿನಗೆ ಮಂಗಳವಾಗಲಿ.’ ಎಂದು ಹರಸಿ ಹೊರಡಲು ಸಿದ್ಧನಾದನು, ನಿರ್ವಾಹವಿಲ್ಲದೆ ಚಾಣಕ್ಯನನ್ನು ತಪೋವನಕ್ಕೆ ಕಳುಹಿಸಿಕೊಡಲು ಚಂದ್ರಗುಪ್ತನು ಒಪ್ಪಬೇಕಾಯಿತು. ಮಹಾವೈಭವದಿಂದ ಸಾಮಂತರಾಜರು ಹಿಂಬಾಲಿಸಿ ಬರುತ್ತಿರಲು, ಚಾಣಕ್ಯನು ನಿರ್ಲಿಪ್ತನಾಗಿ ತಪೋವನಕ್ಕೆ ತೆರಳಿದನು. ತನ್ನ ಭಾಗ್ಯದೇವತೆಯನ್ನು ಹಿಂದೆಬಿಟ್ಟು ಬರುತ್ತಿರುವೆನೆಂಬ ಅರಿವಿನಿಂದ ಚಾಣಕ್ಯನನ್ನು ಬೀಳ್ಳೊಟ್ಟು ತಾಯನಗಲಿದ ಕರುವಿನಂತೆ ದುಃಖದಿಂದ ಚಂದ್ರಗುಪ್ತನು ಅಮಾತ್ಯನೊಡನೆ ರಾಜಧಾನಿಗೆ ಹಿಂದಿರುಗಿ ಬಂದನು.

ಚಾಣಕ್ಕನ ಪ್ರತಿಯೊಂದು ಆಜ್ಞೆಯೂ ನೆರವೇರಿತು. ಭದ್ರಭಟಾದಿಗಳು ಮಲಯಕೇತುವನ್ನು ರಾಜ್ಯದಲ್ಲಿ ಸ್ಥಾಪಿಸಿ ಬಂದರು. ತನ್ನ ಅಧಿಕಾರಿಗಳ ಗೌರವಕ್ಕೆ ಪಾತ್ರನಾಗಿ, ಪ್ರಜೆಗಳ ಪ್ರೀತಿ ವಿಶ್ವಾಸಗಳನ್ನು ಗಳಿಸಿ, ಅಮಾತ್ಯರ ಹರಕೆಯನ್ನು ಹೊತ್ತು ಅನುದಿನವೂ ತನ್ನ ಕುಲದೇವರಾದ ಚಾಣಕ್ಯನನ್ನು ನೆನೆಯುತ್ತ ಚಂದ್ರಗುಪ್ತನು ಬಹುಕಾಲ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದನು.

ಕ್ಷೀರಿಣ್ಯಸ್ಸಂತು ಗಾವೋ ಭವತು ವಸುಮತೀ ಸರ್ವಸಂಪನ್ನ ಸಸ್ಯಾ |
ಪರ್ಜನ್ಯಃ ಕಾಲವರ್ಷೀ ಸಕಲಜನಮನೋನಂದಿನೋ ವಾಂತು ವಾತಾಃ ||
ಮೋದಂತಾಂ ಜನ್ಮಭಾಜ ಸತತಮಭಿನುತಾ ಬ್ರಾಹ್ಮಣಾಸ್ಸ೦ತು ಸ್ಸ೦ತಃ |
ಶ್ರೀಮಂತಃ ಪಾಂತು ಪೃಥ್ವೀಂ ಪ್ರಶಮಿತರಿಪವೋ ಧರ್ಮನಿಷ್ಠಾಶ್ಚ ಭೂಪಃ||


ಮುಕ್ತಾಯ


Leave a Reply

Your email address will not be published. Required fields are marked *