ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 4: ಚಾಣಕ್ಯ ಪ್ರತಿಜ್ಞೆ

೪. ಚಾಣಕ್ಯ ಪ್ರತಿಜ್ಞೆ

ಒಂದು ದಿಸ ಮಧ್ಯಾಹ್ನದ ಉರಿಬಿಸಿಲು. ಸೂರ್ಯನು ಆಕಾಶ ದಲ್ಲಿ ಕೆಂಡದಂತೆ ಹೊಳೆಯುತ್ತಿದ್ದಾನೆ. ಬಿಸಿಲ ಬೇಗೆಗೆ ಬೇಸತ್ತು ಜನರು ನೆರಳನ್ನು ಆಶ್ರಯಿಸಿದ್ದಾರೆ. ಹೊರಗಡೆ ಸದ್ದೆಲ್ಲ ಅಡಗಿದೆ. ಆ ಸಮಯದಲ್ಲಿ ಚಂದ್ರಗುಪ್ತನು ಅನ್ನಸತ್ರದ ಬಾಗಿಲಲ್ಲಿ ಅತಿಥಿಗಳಿಗಾಗಿ ಕಾದು ನಿಂತಿದ್ದನು. ಆಗ ಆ ಅನ್ನಸತ್ರದ ದಾರಿಯಲ್ಲಿ ಕೃಷ್ಣಾಜಿನವನ್ನು ಧರಿಸಿ, ಕೈಯಲ್ಲಿ ದಂಡವನ್ನು ಹಿಡಿದು ಉರಿಯುವ ಬೆಂಕಿಯೋ ಎನ್ನುವಂತೆ ಪ್ರಕಾಶಿಸುತ್ತಿದ್ದ ಚಾಣಕ್ಯನೆಂಬ ಬ್ರಾಹ್ಮಣನು ನೈಮಿಶಾರಣ್ಯ ಮಾರ್ಗವಾಗಿ ಹೋಗುತ್ತಿದ್ದನು. ಹಾಗೆ ಹೋಗುತ್ತಿರುವಾಗ ಅವನ ಕಾಲಿಗೆ ಗರಿಕೆಯ ಬಳ್ಳಿ ಸುತ್ತಿಕೊಂಡು ಅವನನ್ನು ಮುಗ್ಗರಿಸುವಂತೆ ಮಾಡಿತು. ಯಾವುದೋ ಕೆಲಸಕ್ಕಾಗಿ ಹೊರಟಿದ್ದ ಚಾಣಕ್ಯನು ಕೋಪದಿಂದ ಆ ಕಾರ್ಯಕ್ಕಾಗಿ ಹೋಗುವುದನ್ನು ಬಿಟ್ಟು, ತನ್ನ ಮಾರ್ಗಕ್ಕೆ ಅಡ್ಡಲಾಗಿ ಬಂದ ಗರಿಕೆಯನ್ನು ಬೇರು ಸಹಿತ ಕಿತ್ತುಹಾಕಿ ಮುಂದಕ್ಕೆ ಹೊರಟನು.

ಚಂದ್ರಗುಪ್ತನು ದೂರದಿಂದಲೇ ಇದೆಲ್ಲವನ್ನೂ ನೋಡಿ, ಮನಸ್ಸಿ ನಲ್ಲಿ ‘ಈತನ್ಯಾರೋ ಮಹಾತೇಜಸ್ವಿ, ಕೋಪಿಷ್ಠ ಬೇರೆ. ಈ ತೆರನಾದ ಕೋಪವಿದ್ದವರಲ್ಲೇ ಆಶ್ರಿತಾಭಿಮಾನ ದೃಢವಾಗಿರುವುದು. ನನ್ನ ಪುಣ್ಯದಿಂದ ಈತನು ಅನುಕೂಲನಾದರೆ ಕೇಳುವುದೇನು! ಆದ್ದರಿಂದ ಈತನನ್ನು ಕರೆತಂದು ಸತ್ಕರಿಸಬೇಕು’ ಎಂದು ಯೋಚಿಸಿ ಚಾಣಕ್ಯನ ಸಮೀಪಕ್ಕೆ ಬಂದನು. ದಾರಿಯಲ್ಲಿ ಹೋಗುತ್ತಿದ್ದ ಚಾಣಕ್ಕನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ” ಸ್ವಾಮಿ, ಮಧ್ಯಾಹ್ನ ಮೀರಿತು. ನನ್ನ ಮನೆಯಲ್ಲಿ ಸ್ವಲ್ಪ ತಂಗಿದ್ದು ನನ್ನ ಉಪಚಾರವನ್ನು ಕೈಕೊಂಡು ಮುಂದಕ್ಕೆ ತೆರಳಬೇಕು” ಎಂದು ಬೇಡಿಕೊಂಡನು. ಚಂದ್ರಗುಪ್ತನು ಬೇಡಿಕೆಯನ್ನು ಮನ್ನಿಸಿ, ಚಾಣಕ್ಯನು ಎರಡು ಮೂರು ದಿನ ಅವನ ಮನೆಯಲ್ಲಿ ತಂಗಿ ಅವನು ಮಾಡಿದ ಸತ್ಕಾರವನ್ನು ಸ್ತೀಕರಿಸಿದನು. ಇದರಿಂದ ಚಂದ್ರಗುಪ್ತನಿಗೆ ಬಲು ಸಂತೋಷವಾಯಿತು.

ಚಂದ್ರಗುಪ್ತನ ಉಪಚಾರದಿಂದ ಸಂತೋಷಗೊಂಡ ಚಾಣಕ್ಯನು ಅವನನ್ನು ಕುರಿತು “ಅಯ್ಯಾ, ನೀನು ಯಾರ ಮಗ? ನಿನ್ನ ಹೆಸರೇನು? ಇಲ್ಲಿ ನಿನ್ನ ಜೀವನವೇನು?’ ಎಂದು ಪ್ರಶ್ನೆ ಮಾಡಿದನು. ಚಾಣಕ್ಯನ ಮಾತಿಗೆ ಉತ್ತರವಾಗಿ ಚಂದ್ರಗುಪ್ತನು ಅವನಿಗೆ ತನ್ನ ಹಿಂದಣ ಕಥೆಯನ್ನು ವಿಸ್ತಾರವಾಗಿ ತಿಳಿಸಿ, ಆ ಮೇಲೆ ” ಸ್ವಾಮಿ ನನಗೆ ಎಂಥ ಗತಿ ಬಂತು! ನಾನಾದರೋ ಚಕ್ರವರ್ತಿಯ ಮೊಮ್ಮಗ ನನಗೆ ಉಂಟಾಗಿರುವ ಪದವಿಯಾದರೋ ಈ ಅನ್ನಸತ್ರದ ಯಾಜಮಾನ್ಯ. ನಮ್ಮ ತಂದೆ ಸಿಂಹದಂತೆ ಶೂರ, ಆದರೆ ಆತನಿಗೆ ಬಂದ ಸಾವನ್ನು ನೆನೆಯುವುದು ಬಲುಘೋರ. ಕಾಶಿಯಲ್ಲಿ ಆತನು ಕಟ್ಟಸಿದ ವಿರೂಪಾಕ್ಷ ದೇವಾಲಯದಲ್ಲಿ ಪೂಜೆ ಕೂಡ ನಿಂತು ಹೋಗಿದೆ. ಅದನ್ನು ನಡೆಸಲು ಹಣವಿಲ್ಲದಷ್ಟು ಬಡತನ ನನಗೆ ಬಂದಡಸಿದೆ. ವೈರಿಗಳ ನಡುವೆ ಹೀಗೆ ಜೀವಿಸುವುದಕ್ಕಿಂತ ಕಾಡಿನಲ್ಲಿ ತಮ್ಮೊಡನೆ ಗೆಡ್ಡೆ ಗೆಣಸುಗಳನ್ನು ತಿಂದು ತಮ್ಮ ಸೇವೆ ಮಾಡಿಕೊಂಡಿರುವುದೇ ಮೇಲು. ಅಪ್ಪಣೆಯಾದರೆ ನಾನು ತಮ್ಮೊಡನೆ ಬರುವೆನು’ ಎಂದು ಕಣ್ಣೀರು ತುಂಬಿದನು.

ಚಂದ್ರಗುಪ್ತನಿಗೆ ಬಂದಿರುವ ಗತಿಯನ್ನು ಕಂಡು, ಚಾಣಕ್ಯನ ಮನಕರಗಿತು. ಅವನ ವಿನಯ, ಸೌಜನ್ಯ ಇವೇ ಮೊದಲಾದ ಗುಣಗಳು ಚಾಣಕ್ಯನ ಮನಸ್ಸನ್ನು ಸೆರೆಹಿಡಿದುವು. ಅವನು ಪ್ರಭು ವಾಗಲು ತಕ್ಕವನೆಂದರಿತು —

ಚಾಣಕ್ಯ–ಚಂದ್ರಗುಪ್ತನೇ, ಕ್ಷತ್ರಿಯನಿಗೆ ವನವಾಸ ತಕ್ಕುದಲ್ಲ. ಅದು ಬ್ರಾಹ್ಮಣನ ಜೀವನ. ಈಗ ನಿನ್ನಲ್ಲಿ ಧನವಿಲ್ಲ, ಕಷ್ಟ ಬಂದಿದೆ, ನಿಜ. ಆದರೆ ಈಗ ನೀನು ಅಧೀರನಾಗಬಾರದು. ನಿನಗೂ ಅಭ್ಯುದಯಕಾಲ ಬರುವುದು. ಆಗ ನಿನ್ನ ಬುದ್ಧಿ ಪೌರುಷಗಳಿಂದ ನಿನ್ನ ವೈರಿಗಳನ್ನು ಜಯಿಸಿ ಸುಖಿಯಾಗುವೆ. ಹಾಗಲ್ಲದೆ ಹೀನ ಜನರಂತೆ ನೀನು ಮಾತನಾಡುವುದು ಸರಿಯೆ?

ಚಂದ್ರಗುಪ್ತ– ಸ್ವಾಮಿ ಮಹಾನುಭಾವರ ಸಾಸಿವೆಯ ಕಾಳಿನಷ್ಟು ಕಿಡಿ ಗಾಳಿಯ ಸಹಾಯದಿಂದ ವನವನ್ನು ಸುಡುವಂತೆ ನಿಮ್ಮ ಕೃಪೆಯಿಂದ ನನ್ನ ವೈರಿಗಳು ನಾಶವಾಗಬೇಕು. ನಿಮ್ಮನ್ನು ಮರೆ ಹೊಕ್ಕಿದ್ದೇನೆ. ನಿಮ್ಮ ತೇಜೋಬಲದಿಂದ ನನ್ನ ಹೆಗೆಗಳನ್ನು ನಿಗ್ರಹಿಸಿ ನನ್ನನ್ನು ಉದ್ಧರಿಸಬೇಕು.

ಹೀಗೆಂದು ಕಂಬನಿದುಂಬಿ ಚಾಣಕ್ಯನ ಪಾದಗಳನ್ನು ಹಿಡಿದುಕೊಂಡಿದ್ದ ಚಂದ್ರಗುಪ್ತನ ಹೀನಸ್ಥಿತಿಯನ್ನು ಕಂಡು ಚಾಣಕ್ಯನಿಗೆ ಮನಕರಗಿ, ‘ಅಯ್ಯಾ ಚಂದ್ರಗುಪ್ತನೆ, ನಿನ್ನ ಹಗೆಗಳನ್ನು ನಿಗ್ರಹಿಸಿ, ನಿನಗೆ ರಾಜ್ಯಾಧಿಕಾರವನ್ನುಂಟುಮಾಡುವ ಶಕ್ತಿ ನನಗುಂಟು. ಆದರೆ ನನ್ನ ವಿಷಯದಲ್ಲಿ ನಂದರು ನಿರಪರಾಧಿಗಳು. ಅವರನ್ನು ಕೊಂದರೆ ನನಗೆ ಅಪಕೀರ್ತಿ ಬರುವುದು. ಈ ನಂದರಿಗೆ ನನ್ನಲ್ಲಿ ಕೋಪ ಬರುವಂತೆ ಧರ್ಮಕ್ಕೆ ವಿರುದ್ದವಲ್ಲದ ಒಂದು ಕುಚೇಷ್ಟೆಯನ್ನು ಆಚರಿಸುತ್ತೇನೆ. ಇದಕ್ಕೆ ನಂದರು ಕ್ಷಮಿಸದೆ, ನನಗೆ ಕೋಪ ಬರುವಂತೆ ಮಾಡಿದರೆ ಆಗ ನಿನಗೆ ಅಭಯ ಕೊಡುತ್ತೇನೆ’.

ಹೀಗೆಂದು ಹೇಳಿ ಸ್ನಾನಕ್ಕಾಗಿ ಚಾಣಕ್ಯನು ಗಂಗಾನದಿಗೆ ಹೊರಟನು. ಆ ಮಧ್ಯಾಹ್ನ ಸಮಯದಲ್ಲಿ ನಂದರು ದೈವಯೋಗದಿಂದ ಹೊಸದಾಗಿ ಕಟ್ಟಿದ ಉದ್ಯಾನವನಕ್ಕೆ ಬಂದರು. ಹತ್ತಿರದಲ್ಲಿದ್ದ ಅನ್ನಸತ್ರದಲ್ಲಿ ವೇದಘೋಷ ಕೇಳಿಸಿತು. ಬ್ರಾಹ್ಮಣರ ಭೋಜನ ಪಂಕ್ತಿಯನ್ನು ನೋಡುವ ಬಯಕೆ ಅವರಿಗುಂಟಾಯಿತು. ಇಂಪಾದ ವೇದ ಘೋಷವನ್ನು ಕೇಳಿ ಆಯಾಸ ಪರಿಹಾರ ಮಾಡಿಕೊಳ್ಳಲು, ನಂದರು ಕುದುರೆಗಳನ್ನಿಳಿದು ಅನ್ನ ಸತ್ರವನ್ನು ಹೊಕ್ಕರು. ಚಂದ್ರಗುಪ್ತನು ಅವರ ಬಳಿಗೆ ಬಂದು ವಿನಯದಿಂದ ಅವರನ್ನು ಒಳಗೆ ಕರೆದೊಯ್ದನು. ಚಾಣಕ್ಯನು ಇದೇ ಸಮಯವನ್ನು ನೋಡಿ, ಹರಕು ಪಂಚೆಯನ್ನುಟ್ಟುಕೊಂಡು ರಾಜಯೋಗ್ಯವಾದ ಬಂಗಾರದ ಪೀಠದ ಮೇಲೆ ಅಗ್ರಭಾಗದಲ್ಲಿ ಕುಳಿತುಕೊಂಡನು.

ನಂದರು ಬ್ರಾಹ್ಮಣರ ಭೋಜನಪಂಕ್ತಿಯನ್ನು ನೋಡುತ್ತ ಬಂದರು. ಚಾಣಕ್ಯನ ಮುಖ ನೋಡುತ್ತಲೇ ಅವರ ತಲೆ ತಿರುಗಿತು. ಬೆಂಕಿಯಲ್ಲಿ ಬೀಳುವ ಹುಳುಗಳಂತೆ, ಅಣ್ಣತಮ್ಮಂದಿರು ಒಬ್ಬರ ಮುಖವನ್ನು ಒಬ್ಬರು ನೋಡಿ ಕೋಪದಿಂದ ದೂತರನ್ನು ಕುರಿತು ಇವನಾರು ಈ ಬ್ರಾಹ್ಮಣಾಧಮನು? ತುಚ್ಛನು! ಅಗ್ರಸ್ಥಾನದಲ್ಲಿ ಕಾಲನ್ನು ಹಾಕಿಕೊಂಡು ಎಲ್ಲರಿಗಿಂತಲೂ ತಾನೇ ಅಧಿಕನೆಂಬಂತೆ ಕುಳಿತಿದ್ದಾನೆ! ನೀವೆಲ್ಲರೂ ಏಕೆ ಸುಮ್ಮನಿರುವಿರಿ?’ ಎಂದು ಗರ್ಜಿಸಿದರು. ನಂದರ ಮಾತನ್ನು ಕೇಳಿ ರಾಜಭಟರು ಚಾಣಕ್ಯನನ್ನು ‘ಏಳು, ಏಳು’ ಎಂದು ಗದರಿಸಿದರು. ಅವನು ಅವರ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೆ ಮೊದಲಿನಂತೆಯೇ ಕುಳಿತುಬಿಟ್ಟಿದ್ದನು. ಇದರಿಂದ ಕೋಪಗೊಂಡ ರಾಜಭಟರು ಚಾಣಕ್ಯನ ಕೈಯನ್ನು ಹಿಡಿದು ಈಚೆಗೆ ಎಳೆದರು. ಅವರು ಎಳೆದ ರಭಸಕ್ಕೆ ಅವನ ಜುಟ್ಟು ಬಿಚ್ಚಿ ಹೋಗಲು ಚಂದ್ರಗುಪ್ತನ ಅದೃಷ್ಟ ಒದಗಿಬಂದಿತೆಂದು ತಿಳಿದು, ಮಹಾಕೋಪದಿಂದೆದ್ದು, ಕಣ್ಣುಗಳನ್ನು ಕೆರಳಿಸಿ, ಹುಬ್ಬನ್ನು ಗಂಟಿಕ್ಕಿ ಪೀಠವನ್ನು ಕಾಲಿನಿಂದೊದೆದು ನಂದರನ್ನು ದುರದುರನೆ ನೋಡಿ–

“ಎಲ್ಲೆ ನಂದನಾಧಮರುಗಳಿರಾ, ನಾನು ನಿಮ್ಮ ಅತಿಥಿ, ಬ್ರಾಹ್ಮಣ. ಮೇಲಾಗಿ ನಿರಪರಾಧಿ. ಭೋಜನಪಂಕ್ತಿಯಲ್ಲಿ ಕುಳಿತಿದ್ದ ನನ್ನನ್ನು ಬ್ರಾಹ್ಮಣಾಧಮನೆಂದೂ, ತುಚ್ಛನೆಂದೂ ಎಳೆಸಿ ಅವಮಾನ ಮಾಡಿದರಲ್ಲವೆ? ಮುಂದೆ ನಿಮ್ಮ ಕಾಲುಗಳಿಗೆ ಹಗ್ಗವನ್ನು ಬೀರಿ, ಪ್ರಾಣವನ್ನು ತೆಗೆದು ನಿಮ್ಮ ಶರೀರಗಳನ್ನು ಹದ್ದು ನಾಯಿ ನರಿಗಳಿಗೆ ಆಹಾರವನ್ನಾಗಿ ಮಾಡಿ ಎಳಸಿ ಹಾಕುತ್ತೇನೆ. ಇಂದು ನನ್ನ ಅವಮಾನವನ್ನು ನೋಡಿಯಾರು. ದುಷ್ಟ ಕ್ಷತ್ರಿಯರನ್ನು ಕೊಂದು ಪರಶುರಾಮನು ವಿಶ್ರಮಿಸಿಕೊಂಡಂತೆ ನಂದರನ್ನು ಸಂಹರಿಸಿಯೇ ಈ ನನ್ನ ಜುಟ್ಟನ್ನು ಕಟ್ಟುವೆನು. ಈ ಪ್ರತಿಜ್ಞೆಯನ್ನು ನಾನು ನೆರವೇರಿಸಿಕೊಳ್ಳದಿದ್ದರೆ ಸ್ವಧರ್ಮವನ್ನು ಬಿಟ್ಟು ಅನ್ಯಧರ್ಮವನ್ನು ಆಚರಿಸುವವನ ಗತಿ ನನಗಾಗಲಿ” ಎಂದು ಕ್ರೂರಪ್ರತಿಜ್ಞೆಯನ್ನು ಮಾಡಿ, ಎಲ್ಲರೂ ನೋಡುತ್ತಿರುವಂತೆಯೇ ಅಲ್ಲಿಂದ ಹೊರಟು ಹೋದನು.

ಈ ಸಮಯದಲ್ಲಿ ರಾಕ್ಷಸನು ಅಲ್ಲಿರಲಿಲ್ಲ. ಹತ್ತಿರ ಇದ್ದ ಮಂತ್ರಿಗಳು, ಪ್ರತಿಜ್ಞೆ ಮಾಡಿಹೋದ ಬ್ರಾಹ್ಮಣನು ಮೂರ್ಖನೆಂದೂ, ಅವನ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳಕೂಡಡೆಂದೂ ನಂದರನ್ನು ಸಮಾಧಾನಪಡಿಸಿ ಅವರನ್ನು ಕರೆದುಕೊಂಡು ಹೋದರು, ಆಗ ಆಕಾಶದಲ್ಲಿ ಧೂಮಕೇತುಗಳು ಮೂಡಿದುವು; ಭೂಕಂಪವಾಯಿತು. ಎಲ್ಲೆಡೆಯಲ್ಲಿಯೂ ಅಪಶಕುನಗಳು ತಲೆದೋರಿದುವು. ಅನ್ನಸತ್ರದಲ್ಲಿ ನೆರೆದಿದ್ದ ಜನರು ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತ ಮನೆಗಳಿಗೆ ಹೋದರು.

ಈ ಘಟನೆ ನಡೆದ ಮೇಲೆ ಚಂದ್ರಗುಪ್ತನು ಚಾಣಕ್ಯನನ್ನು ಹಿಂಬಾಲಿಸಿದನು. ಚಾಣಕ್ಯನು ತನ್ನ ಮನಸ್ಸಿನಲ್ಲಿ ಈಗ ನಂದರನ್ನು ಸಂಹರಿಸಿದರೆ ಕ್ಷತ್ರಿಯರ ಸಂತತಿ ನಿಂತು ಹೋಗುವುದು. ಈ ಕೆಲಸವನ್ನು ಉಪೇಕ್ಷಿಸಿದರೆ ನನ್ನ ಪ್ರತಿಜ್ಞೆಗೆ ಭಂಗಬರುವುದು. ದುಷ್ಟನಾದ ವೇಣುರಾಯನಂತೆ ಈ ನಂದರಿಂದ ಲೋಕಕ್ಕೆ ಮಂಗಳವಾಗದು. ಹಿಂದೆ ವಿದುರನು ಶೂದ್ರಸ್ತ್ರೀಯ ಮಗನಾದರೂ, ಧೃತರಾಷ್ಟ್ರನ ರಾಜ್ಯಭಾರವನ್ನು ನಿರ್ವಹಿಸಿ ಕೀರ್ತಿ ಪಡೆಯಲಿಲ್ಲವೆ? ಹಾಗೆಯೇ ಚಂದ್ರಗುಪ್ತನಿಂದ ಲೋಕಕಲ್ಯಾಣವಾಗಬಹುದು’ ಎಂದು ಬಹುವಾಗಿ ಚಿಂತಿಸಿದನು. ಕಟ್ಟಕಡೆಗೆ ನಂದರನ್ನು ಸಂಹರಿಸಲೇಬೇಕೆಂದು ನಿರ್ಧರಿಸಿ ಚಂದ್ರಗುಪ್ತನನ್ನು ನೋಡಿ ‘ಅಯ್ಯಾ, ಚಂದ್ರಗುಪ್ತನೇ ಇನ್ನು ನೀನು ನಿನ್ನ ವೈರಿಗಳ ಭಯವನ್ನು ಬಿಡು. ಇನ್ನು ಸ್ವಲ್ಪ ಕಾಲದಲ್ಲೇ ಈ ನಂದರನ್ನು ನಿಗ್ರಹಿಸಿ ನಿನ್ನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿಸುವೆನು. ಈ ವೈಭವವನ್ನು ಕಣ್ಣಾರ ಕಂಡು ಧನ್ಯನಾಗಿ ತಪೋವನಕ್ಕೆ ತೆರಳುವೆನು. ಈ ನನ್ನ ಮಾತನ್ನು ನಂಬು. ಇದಕ್ಕೆ ನನ್ನ ಪುಣ್ಯವೇ ಸಾಕ್ಷಿ’ ಎಂದು ಅಭಯಪ್ರದಾನ ಮಾಡಿದನು. ಇದರಿಂದ ಸಂತೋಷವಾಗಿ ಚಂದ್ರಗುಪ್ತನ ಮುಖ ಅರಳಿತು.

ಈ ಘಟನೆಯಾದ ಮೇಲೆ ನಂದರು ಚಂದ್ರಗುಪ್ತನನ್ನು ಬಹುವಾಗಿ ಹುಡುಕಿಸಿದರು. ಆದರೆ ಅವನು ಸಿಕ್ಕಲಿಲ್ಲ.


ಮುಂದಿನ ಅಧ್ಯಾಯ: ೫. ಕಾರ್ಯೋದ್ಯೋಗ


Leave a Reply

Your email address will not be published. Required fields are marked *