ಚಂದ್ರಗುಪ್ತ ವಿಜಯ -ಕಾದಂಬರಿ -ಭಾಗ 5: ಕಾರ್ಯೋದ್ಯೋಗ

೫. ಕಾರ್ಯೋದ್ಯೋಗ

ಪಾಟಲೀಪುತ್ರನಗರಕ್ಕೆ ಸಮಿಾಪವಾದ ಕಾಡೊಂದರಲ್ಲಿ, ಚಾಣಕ್ಯನು ಚಂದ್ರಗುಪ್ತನೊಡನೆ ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದನು. ನಂದರ ನಿಗ್ರಹಕ್ಕೆ ಮುಂದೇನು ಮಾಡಬೇಕೆಂಬ ಯೋಚನೆಯೇ ಅವನ ಮನಸ್ಸನ್ನೆಲ್ಲಾ ಆವರಿಸಿತ್ತು. ತನ್ನ ಕಾಲನ್ನೊತ್ತುತ್ತಿದ್ದ ಚಂದ್ರಗುಪ್ತನನ್ನು ನೋಡಿ ಅವನು– ‘ಕುಮಾರ, ರಾಜರಲ್ಲಿ ನಂದರಿಗೆ ಮಿತ್ರರು ಯಾರು? ಶತ್ರುಗಳು ಯಾರು?’ ಎಂದನು.

ಚಂದ್ರಗುಪ್ತ– ಪೂಜ್ಯರೇ, ನಂದರನ್ನು ಕಂಡರೆ ಪರರಾಜರಿಗೆ ದ್ವೇಷವಿದ್ದರೂ, ರಾಕ್ಷಸನು ಮಾಡುವ ಉಪಾಯಗಳಿಗೆ ಅವರು ಹೆದರುತ್ತಾರೆ. ರಾಕ್ಷಸನು ಸಾಮಾನ್ಯನಲ್ಲ. ಮದಿಸಿದ ಅರಸರನ್ನು ದಂಡಿಸುತ್ತಾನೆ, ಅನುರಕ್ತರಾದವರನ್ನು ಆದರಿಸುತ್ತಾನೆ. ಕಾಲಕಾಲಕ್ಕೆ ತಪ್ಪದೆ ಧನಸಂಗ್ರಹ ಮಾಡುತ್ತಾನೆ. ಅವನ ಬಳಿ ಇತರ ಅಧಿಕಾರಿಗಳ ಆಟ ಸಾಗದು. ಅವರು ರಾಜರಲ್ಲಿ ಮರ್ಯಾದೆ ಮೀರದಂತೆ ನಡೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ರಾಕ್ಷಸನು ಅನ್ಯರ ಶ್ರೇಯಸ್ಸನ್ನು ಸಹಿಸನು.

ಚಾಣಕ್ಯ– ಕುಮಾರ, ರಾಕ್ಷಸನಲ್ಲಿ ಇದನ್ನು ದೋಷವೆಂದು ಭಾವಿಸಬೇಡ. ಅದು ಮಂತ್ರಿಯಲ್ಲಿರಬೇಕಾದ ಒಂದು ಮುಖ್ಯ ಗುಣ. ಜನರಲ್ಲಿ ಹೆಚ್ಚಾಗಿ ಹಣ ಸೇರಿದರೆ ಅವರಿಗೆ ನಿಗ್ರಹಾನುಗ್ರಹ ಶಕ್ತಿಯುಂಟಾಗುವುದು. ಕಾಲಕ್ರಮದಲ್ಲಿ ಅವರು ಅರಸುತನವನ್ನೇ ಬಯಸಬಹುದು. ಇದರಿಂದ ಸ್ವಾಮಿಭೃತ್ಯನ್ಯಾಯ ತಪ್ಪಿ ರಾಜತಂತ್ರಕೆಡುವುದು. ಜನರು ತನ್ನ ಕೈಮೀರಿ ಹೋಗದಂತೆ ರಾಜತಂತ್ರವನ್ನು ಮಾಡುವುದರಿಂದ ರಾಕ್ಷಸನು ಮಂತ್ರಿ ಪದವಿಗೆ ಯೋಗ್ಯ. ಅದಿರಲಿ. ನಂದರಿಗೆ ಆಪ್ತಮಿತ್ರರಾರು? ಉದಾಸೀನ ಪಕ್ಷದ ಅರಸುಗಳಾರು?

ಚಂದ್ರಗುಪ್ತ– ಸ್ವಾಮಿ, ಕಾಶೀರಾಜನೂ, ಮತ್ಸ್ಯರಾಜನೂ ನಂದರಿಗೆ ಆಪ್ತರು. ಪರ್ವತರಾಜನು ಉದಾಸೀನ ಪಕ್ಷದವನು. ಆದರೂ ಇವನು ರಾಕ್ಷಸನನ್ನು ಮಿತ್ರನನ್ನಾಗಿ ಭಾವಿಸುವನು. ಆದರೆ ಅದೇನು ಕಾರಣದಿಂದಲೋ ನಂದರನ್ನು ಅವಮಾಪಡಿಸಲು ಒಂದು ಕಪಟ ಶಿಲ್ಪವನ್ನು ರಚಿಸಿ, ಪಾಟಲೀಪುರಕ್ಕೆ ಕಳುಹಿಸಿದ್ದನು. ಅದರ ಪರೀಕ್ಷೆಯಿಂದಲೇ ನನಗೆ ಬಿಡುಗಡೆಯಾಯಿತು.

ಚಾಣಕ್ಯ– ಕುಮಾರ, ಸ್ವಜನರೆ ಮಾಡುವ ಅವಹೇಳನ ವಿನೋದಕ್ಕಾಗಿ. ಅದನ್ನೇ ಇತರರು ಮಾಡಿದರೆ ವೈರವುಂಟಾಗುತ್ತದೆ. ಅದಿರಲಿ. ಈ ಪಟ್ಟಣದಲ್ಲಿ ನಿಮ್ಮ ತಂದೆಗೆ ಆಪ್ತರಾಗಿದ್ದ ಅಧಿಕಾರಿಗಳಿರುವರೇ?

ಚಂದ್ರಗುಪ್ತ– ಸ್ವಾಮಿ, ನಮ್ಮ ತಂದೆ ಮಾಡಿದ ಆದರದಿಂದ ಭಾಗುರಾಯಣನೇ ಮೊದಲಾದ ಸೇನಾಪತಿಗಳು ಪ್ರಸಿದ್ದಿಗೆ ಬಂದರು. ಈಗ ಆ ಕೃತಜ್ಞತೆ ಅವರ ಮನಸ್ಸಿನಲ್ಲಿ ಉಂಟೋ ಇಲ್ಲವೋ ಹೇಗೆ ಹೇಳುವುದು? ಅಲ್ಲದೆ ಬುದ್ಧಿ ಪರಾಕ್ರಮಗಳಲ್ಲಿ ನಮ್ಮ ತಂದೆ ರಾಕ್ಷಸನಿಗೆ ಸಮಾನನಾದರೂ, ಆತನು ಮಾಡುವ ರಾಜ್ಯ ವಿಚಾರವನ್ನು ನೋಡಿ ರಾಕ್ಷಸನು ಯಾವಾಗಲೂ ತಟಸ್ಥ ನಾಗಿಯೇ ಇರುತ್ತಿದ್ದ.

ಚಾಣಕ್ಯ– ವತ್ಸ, ರಾಕ್ಷಸನಲ್ಲಿ ಶೌರ್ಯವುಂಟೇ?

ಚಂದ್ರಗುಪ್ತ– ಆರ್ಯರೆ, ಈ ಎಲ್ಲ ಸೇನಾಪತಿಗಳಿಗಿಂತ ಆತ ಶೂರ. ಯುದ್ಧದಲ್ಲಿ ಅವನನ್ನು ಯಾರೂ ಎದುರಿಸರು.

ಚಾಣಕ್ಯ– (ರಾಕ್ಷಸನ ಗುಣಗಳನ್ನು ಮನಸ್ಸಿನಲ್ಲೇ ಹೊಗಳುತ್ತ) ನಮ್ಮ ತಂತ್ರ ಕೃಗೂಡಿ ಯುದ್ಧ ಮೊದಲಾದಾಗ, ನಂದರನ್ನು ಹೊರಗು ಮಾಡಿ, ಸಂಹರಿಸಿ ರಾಕ್ಷಸನನ್ನು ಸಂಗ್ರಹಿಸಬೇಕು. (ಪ್ರಕಾಶವಾಗಿ) ಕುಮಾರ, ಈಗ ನೀನು ಮಾಡಬೇಕಾದ ಒಂದು ಗುಟ್ಟಾದ ರಾಜಕಾರ್ಯವುಂಟು. ಅದಕ್ಕೆ ಮೌರ್ಯುನಲ್ಲಿ ಅನುರಕ್ತರಾಗಿದ್ದ ಭಾಗುರಾಯಣಾದಿ ಸೇನಾಸತಿಗಳ ಸ್ವಹಸ್ತಾಕ್ಷರದ ಒಪ್ಪಿಗೆಯ ಕಾಗದವೊಂದು ಬೇಕಾಗಿದೆ, ಈಗ ನಾನು ನಿನಗೆ ಒಂದು ಕಾಗದವನ್ನು ಬರೆದು ಕೊಡುವೆನು. ಅದನ್ನು ಆ ಸೇನಾಪತಿಗಳಿಗೆ ತೋರಿಸಿ ಅವರನ್ನು ಒಡಂಬಡಿಸಿ, ನೀನು ಬರೆಯುವ ಕಾಗದಕ್ಕೆ ನಿನ್ನ ಒಪ್ಪಿಗೆಯ ಕೆಳಗೆ ಅವರ ಒಪ್ಪಿಗೆಯನ್ನು ಬರೆಸಿಕೊಂಡು ಬಾ. ನಾನು ನೈಮಿಶಾರಣ್ಯದಲ್ಲಿ ಗಂಗಾತೀರದ ಸೋಮೇರಾಲಯದ ಬಳಿಯಿರುವ ನನ್ನ ಸ್ನೇಹಿತನಾದ ಇಂದುಶರ್ಮನ ಮನೆಯಲ್ಲಿರುವೆನು. ನೀನು ಅಲ್ಲಿ ನನ್ನನ್ನು ಕಾಣು’ ಎಂದು ಹೇಳಿ, ಚಾಣಕ್ಯನು ತನ್ನ ಅಕ್ಷರದಿಂದ ಸಂದರ್ಭೋಚಿತವಾದ ಕಾಗದವನ್ನು ಬರೆದು, ಆದನ್ನು ಚಂದ್ರಗುಪ್ತನ ಕ್ಸೆಯಲ್ಲಿ ಕೊಟ್ಟು ಹೊರಟು ಹೋದನು.

ಇತ್ರ ಚಂದ್ರಗುಪ್ತನು ಗುಟ್ಟಾಗಿ ಭಾಗುರಾಯಣಾದಿ ಸೇನಾಪತಿಗಳನ್ನು ಕಾಣಿಸಿಕೊಂಡನು. ಅವರು ಚಂದ್ರಗುಪ್ತನಿಗೆ ಬಂದಿರುವ ದುರ್ಗತಿಯನ್ನು ಕಂಡು ಶೋಕಿಸಿ ಅವನನ್ನು ಆದರಿಸಿ ನಾಲ್ಕು ಒಳ್ಳೆಯ ಮಾತುಗಳನ್ನಾಡಿದರು. ಇದರಿಂದ ಧೈರ್ಯಗೊಂಡ ಚಂದ್ರಗುಪ್ತನು ಅವರಿಗೆ ‘ನಮ್ಮ ತಂದೆ ಕಾಶಿಯ ಗಂಗಾತೀರದಲ್ಲಿ ಒಂದು ಶಿವದೇವಾಲಯವನ್ನು ಕಟ್ಟಿಸಿದನು. ಅಲ್ಲಿ ಈಶ್ವರನನ್ನು ಪ್ರತಿಷ್ಠಿಸಿ, ದೇವರ ಸೇವೆಗೆ ತಗಲುವ ಹಣವನ್ನು ಕೇಶವದಾಸನೆಂಬ ವರ್ತಕನ ಬಳಿ ಬಿಟ್ಟಿದ್ದನು. ಈ ಕಾರ್ಯ ಕೈಗೂಡುವುದಕ್ಕೆ ಮುಂಚೆ ನಂದರು ಆತನನ್ನು ಮೋಸದಿಂದ ಕೊಂದರು. ಸಾಯುವಾಗಲೂ ನಮ್ಮ ತಂದೆಗೆ ಇದೇ ಚಿಂತೆ. ಈ ನಿಷಯವನ್ನರಿತ ನಾನು ಕೇಶವದಾಸನಿಗೆ ಒಂದು ಪತ್ರ ಬರೆದೆನು. ಅದಕ್ಕೆ ಉತ್ತರವಾಗಿ ಆತನು ‘ನೀನಿನ್ನೂ ಹುಡುಗ, ಯಾರಾದರೂ ಹಿರಿಯರ ಒಪ್ಪಿಗೆಯುಳ್ಳ ಕಾಗದವನ್ನು ತಂದರೆ ಈ ಕೆಲಸ ಆಗಬಹುದು ‘ ಎಂದು ಬರೆದಿದ್ದಾನೆ. ನೀವು ನನಗೆ ಹಿರಿಯರ ಸಮಾನರು. ಮೇಲಾಗಿ ನಮ್ಮ ತಂದೆಗೆ ಆಪ್ತರು. ಆದಕಾರಣ ನೀವು ನನ್ನಲ್ಲಿ ಮಮತೆಯಿಟ್ಟು, ಈ ಧರ್ಮ ಶಾಶ್ವತವಾಗಿ ನಡೆದು ಬರುವಂತೆ ಒಪ್ಪಬೇಕು? ಎಂದು ತಾನು ತಂದಿದ್ದ ಕಾಗದವನ್ನು ಅವರಿಗೆ ತೋರಿಸಿದನು. ಆದನ್ನು ಓದಿಕೊಂಡು, ಆ ಧರ್ಮಕಾರ್ಯಕ್ಕೆ ಸೇನಾಪತಿಗಳು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆಗಲೇ ಚಂದ್ರಗುಪ್ತನು ಸಂಧರ್ಬೋಚಿತವಾಗಿ ಕೇಶವದಾಸನಿಗೆ ಒಂದು ಅಖಂಡವಾದ ಕಾಗದವನ್ನು ಬರೆದು, ಅದಕ್ಕೆ ಮೇಲ್ಗಡೆ ತನ್ನ ಒಪ್ಪಿಗೆಯನ್ನು ಹಾಕಿ, ಅದನ್ನು ಸೇನಾಪತಿಗಳಿಗೆ ಕೊಟ್ಟನು. ಚಂದ್ರಗುಪ್ತನ ಒಪ್ಪಿಗೆಯ ಕೆಳೆಗೆ ಉಳಿದೆಂಟು ಜನ ಸೇನಾಸತಿಗಳೂ ತಮ್ಮ ಒಪ್ಪಿಗೆಯನ್ನು ಸೂಚಿಸಿ ಗಂಧ ತಾಂಬೂಲಾದಿಗಳಿಂದ ಚಂದ್ರಗುಪ್ತನನ್ನು ಆದರಿಸಿ ಬೀಳ್ಳೊಟ್ಟಿರು.

ಈ ಕಾರ್ಯ ಮುಗಿದಮೇಲೆ, ಚಂದ್ರಗುಪ್ತನು ತನ್ನ ತಾಯಿಯ ಹರಕೆಯನ್ನು ಪಡೆದು ಆಕೆಯನ್ನೂ ಮತ್ತು ತನ್ನ ಹೆಂಡತಿಯನ್ನೂ ಗೋಪ್ಯವಾಗಿರಿಸಿ, ಚಾಣಕ್ಯನನ್ನು ಇಂದುಶರ್ಮನ ಮನೆಯಲ್ಲಿ ಬಂದು ಕಂಡನು. ಚಾಣಕ್ಯನಿಗೆ ನಮಸ್ಕರಿಸಿ, ತಾನು ತಂದಿದ್ದ ಕಾಗದವನ್ನು ಅವನಿಗೆ ತೋರಿಸಿದನು. ಅದನ್ನು ನೋಡಿ ಚಾಣಕ್ಯನು ‘ಚಂದ್ರಗುಪ್ತನಿಗೆ ಅಭಿಮತವಾದ ಕಾರ್ಯ ನಮಗೂ ಅಭಿಮತ’ ಎಂಬ ಪಂಕ್ತಿಯನ್ನೂ ಮತ್ತು ಎಂಟು ಜನ ಸೇನಾಪತಿಗಳ ಸಮ್ಮತಿಯನ್ನೂ ಉಳಿಸಿಕೊಂಡು ಉಳಿದ ಭಾಗವನ್ನು ಕತ್ತರಿಸಿ ಹಾಕಿದನು. ಈ ಕಾಗದ ಮುಂದೆ ರಾಜಕಾರ್ಯಕ್ಕೆ ಸಹಾಯವಾಗಬಹುದಲ್ಲವೆ?

ಆಮೇಲೆ ಚಾಣಕ್ಯನು ತನ್ನ ಗೆಳೆಯನಾದ ಇಂದುಶರ್ಮನನ್ನು ನೋಡಿ” ಮಿತ್ರನೆ, ನಾನು ನಿನ್ನಲ್ಲಿ ವಂಚನೆ ಮಾಡಕೂಡದು. ಪಾಟಿಲೀಪುರದಲ್ಲಿರುವ ನಂದರು ತಮ್ಮ ದಾಯಾದಿಯಾದ ಮೌರ್ಯನನ್ನೂ, ಅವನ ಮಕ್ಕಳನ್ನೂ ನಿಷ್ಕಾರಣವಾಗಿ ಮೋಸದಿಂದ ಕೊಂದುಹಾಕಿದರು. ದೈವಯೋಗದಿಂದ ಬದುಕಿದ ಈ ಚಂದ್ರಗುಪ್ತನನ್ನು ಅನ್ನಸತ್ರಾಧಿಕಾರಕ್ಕೆ ನೇಮಿಸಿದ್ದರು. ಅಲ್ಲದೆ ಅನ್ನ ಸತ್ರದಲ್ಲಿ ಭೋಜನಾರ್ಥಿಯೂ, ನಿರಪರಾಧಿಯೂ ಆದ ನನ್ನ ಜುಟ್ಟನ್ನು ಹಿಡಿದೆಳೆಸಿದರು. ಆದ್ದರಿಂದ ಮರೆ ಹೊಕ್ಕೆರುವ ಈ ಚಂದ್ರಗುಪ್ತನನ್ನು ಕಾಪಾಡುವೆನೆಂದು ಅಭಯವನ್ನು ಕೊಟ್ಟಿರುವೆನಲ್ಲದೆ, ನಂದರನ್ನು ಸಂಹರಿಸಿ ಜುಟ್ಟನ್ನು ಕಟ್ಟುವೆನೆಂದು ಪ್ರತಿಜ್ಞೆ ಮಾಡಿರುವೆನು. ಈ ಕಾರ್ಯದಲ್ಲಿ ನಿನ್ನ ನೆರವು ನನಗೆ ಆವಶ್ಯಕ. ನೀನು ಬೌದ್ಧ ಸಂನ್ಯಾಸಿಯ ವೇಷವನ್ನು ಧರಿಸಿ, ಜೀವಸಿದ್ಧಿ ಎಂಬ ಹೆಸರಿನಿಂದ, ರಾಕ್ಷಸನ ಬಳಿ ಆಪ್ತನಂತಿದ್ದು ಅವನ ಹೃದಯವನ್ನು ಆಕ್ರಮಿಸು. ನಿನಗೆ ಆಪ್ತರಾದ ನಿನ್ನ ಶಿಷ್ಯರು ಸಮಯೋಚಿತವಾದ ವೇಷಗಳನ್ನು ಧರಿಸಿ, ಪಾಟಿಲೀಪುರದ ಅಧಿಕಾರಿಗಳ ಬಳಿಯಿದ್ದು ಜ್ಯೋತಿಷವೇ ಮೊದಲಾದ ವಿದ್ಯಾಕೌಶಲಗಳನ್ನು ಅವರಲ್ಲಿ ಮೆರೆಯಲಿ. ನೀನು ರಾಜಧಾನಿಯ ರಾಜಕಾರ್ಯಗಳನ್ನೂ ಅಲ್ಲಿನ ವಿಶೇಷ ವರ್ತಮಾನಗಳನ್ನೂ ನಿನ್ನ ಶಿಷ್ಯರ ಮುಖದಿಂದಲೇ ನನಗೆ ತಿಳಿಸು. ನಾನು ಈಗ ಚಂದ್ರಗುಪ್ತನೊಡನೆ ಪರ್ವತರಾಜನ ಬಳಿಗೆ ಹೋಗುವೆನು. ನೀನು ಪಾಟಲೀಪುರಕ್ಕೆ ತೆರಳು’ ಎಂದು ಹೇಳಿ ನಂದನಿಗ್ರಹದಿಂದ ರಾಕ್ಷಸನ ಸಂಗ್ರಹದವರೆಗೆ ಮಾಡಬೇಕಾದ ಉಪಾಯಗಳನ್ನು ಇಂದುಶರ್ಮನಿಗೆ ತಿಳಿಸಿ ‘ಈ ಉಪಾಯಗಳನ್ನು ಆಯಾ ಕಾಲದಲ್ಲಿ ಮಾತ್ರ ನಿನ್ನ ಶಿಷ್ಯರಿಗೆ ತಿಳಿಸಿ, ಅವರಿಂದ ಕೆಲಸ ಮಾಡಿಸು’ ಎಂದು ಅವನನ್ನು ಬೀಳ್ಳೊಟ್ಟು, ಚಂದ್ರಗುಪ್ತನೊಡನೆ ಪರ್ವತರಾಜ್ಯಕ್ಕೆ ಹೊರಟನು.

ಇತ್ತ ಇಂದುಶರ್ಮನು ಚಾಣಕ್ಯನ ಕಾರ್ಯಸಾಧನೆಗಾಗಿ, ಕ್ಷಪಣಕವೇಷವನ್ನು ಧರಿಸಿ ಅಮಾತ್ಯರಾಕ್ಷಸನನ್ನು ಆಶ್ರಯಿಸಿದನು. ಅವನ ಶಿಷ್ಯರು ಮಾಸೋಪವಾಸಿ, ಸಿದ್ಧಾರ್ಥಕ, ವೇಗಶರ್ಮ, ಸಮಿಧ್ದಾರ್ಥಕ, ಪಶುಲೋಮ ಎಂಬ ಹೆಸರನ್ನಿಟ್ಟುಕೊಂಡು, ವೈದ್ಯ ಮಂತ್ರಜ್ಞ ಮೊದಲಾದವರ ವೇಷವನ್ನು ಧೆರಿಸಿ ಭಾಗುರಾಯಣಾದಿಗಳಲ್ಲಿ ಆಪ್ತರಂತೆ ಆಶ್ರಯ ಪಡೆದರು. ಇವರೆಲ್ಲ ಪಾಟಲೀಪುರಕ್ಕೆ ಚಾಣಕ್ಯನು ಬರುವುದನ್ನೇ ಕಾದುಕೊಂಡಿದ್ದರು.


ಮುಂದಿನ ಅಧ್ಯಾಯ: ೬. ಸ್ನೇಹ ಸಂಪಾದನೆ


Leave a Reply

Your email address will not be published. Required fields are marked *